Friday, June 2, 2017

ಹುಟ್ಟಿದ ಹಬ್ಬ

ಹುಟ್ಟಿದ ಹಬ್ಬ 

ಜನುಮದಿನ ಅಥವಾ ಹುಟ್ಟಿದ ಹಬ್ಬ ಎಲ್ಲರಿಗೂ ಪರಿಚಿತವೇ. ನಾವು ಚಿಕ್ಕವರಿದ್ದಾಗ ಅದು ಅಷ್ಟಿಲ್ಲವಾದರೂ ಈಗ ಮಕ್ಕಳೇ ಕೇಳಿ ಮಾಡಿಸಿಕೊಳ್ಳುತ್ತಾರೆ. ಇದಕ್ಕೆ ಮುಖ್ಯ ಕಾರಣ ಏನಾದರೂ ಉಡುಗೊರೆ ಬರುತ್ತದೆ, ಅಂದು ಸಿಹಿತಿಂದು, ಉಂಡು ಅರಾಮವಾಗಿರಬಹುದು ಎಂಬುದು. ಈ ಜನುಮದಿನದಲ್ಲೂ ವ್ಯತ್ಯಾಸಗಳುಂಟು. ಇಂಗ್ಲಿಷ್ ಕ್ಯಾಲೆಂಡರ್‍ದು, ಹಿಂದೂ ಪಂಚಾಂಗದ್ದು, ನಿಜವಾದ ಜನ್ಮದಿನ, ಶಾಲೆಗೆ ಸೇರಿಸುವಾಗ ಕೊಟ್ಟಿದ್ದು ಇತ್ಯಾದಿ. ಇದನ್ನು ಜನ್ಮದಿನ ಆಚರಿಸುವವರು ತಮ್ಮ ಅನುಕೂಲಕ್ಕೆ ತಕ್ಕಂತೆ ಹೇಳುತ್ತಾರೆ. ಇಲ್ಲಿ ನನ್ನ ಮಿತ್ರರೊಬ್ಬರಿದ್ದಾರೆ. ಅವರು, ಜನ್ಮದಿನ ಆಚರಿಸಿದರೆ ಇನ್ನೆಲ್ಲಿ ಖರ್ಚಾಗುವುದೋ ಎಂದು ಇಂಗ್ಲಿಷ್‍ದು ಬಂದರೆ ಹಿಂದೂ ಪಂಚಾಂಗ ಎಂದು, ಹಿಂದೂದು ಬಂದಾಗ ಇಂಗ್ಲಿಷ್‍ದು ಎಂದು ಯಾಮಾರಿಸಿಬಿಡುತ್ತಾರೆ. ಇನ್ನೊಬ್ಬರದಂತೂ ಏಕಮಾರ್ಗ. ಉಡುಗೊರೆಗೆ ಎರಡೂ ಇರುತ್ತದೆ. ಆಚರಣೆಗೆ ಯಾವುದಾದರೂ ಒಂದು ಮಾತ್ರ. ಒಮ್ಮೊಮ್ಮೆ ಅದೂ ಇಲ್ಲ. ಕೆಲವು ಸಿರಿವಂತರು ಅಥವಾ ಮೆರೆಯುವ ಸ್ವಭಾವ ವಿರುವವರು ಎಲ್ಲವನ್ನೂ ಆಚರಿಸುತ್ತಾರೆ. ಅವರಿಗೆ ದುಡ್ಡು ಖರ್ಚಾದರೂ ಚಿಂತಿಲ್ಲ, ತಾವು ಮಾತ್ರ ಅಲಂಕಾರ ಮಾಡಿಕೊಂಡು, ಆಡಂಬರದಿಂದ ಎಲ್ಲರ ಮುಂದೆ ಮೆರೆಯಬೇಕು.
ಹುಟ್ಟಿದ ಹಬ್ಬದ ಆಚರಣೆಯೂ ಒಬ್ಬೊಬ್ಬರದು ಒಂದೊಂದು ರೀತಿ. ಕೆಲವರು ಅಂದು ತಲೆಗೆ ಸ್ನಾನ ಮಾಡಿ ಎರೆದುಕೊಂಡು, ದೇವರಿಗೆ, ಮನೆಯ ಹಿರಿಯರಿಗೆ ನಮಸ್ಕರಿಸಿ ಆಶಿರ್ವಾದ ಪಡೆದು ನಂತರ ದೇವರಿಗೆ ಅರ್ಚನೆ ಮಾಡಿಸಿ ನಂತರ ಮನೆಯಲ್ಲಿ ಸಿಹಿ ಭಕ್ಷ್ಯಗಳನ್ನು ಮಾಡಿಸಿ ಎಲ್ಲರಿಗೂ ಬಡಿಸಿ, ತಾವೂ ತಿಂದು ತೃಪ್ತ ರಾಗುತ್ತಾರೆ. ಇನ್ನು ಕೆಲವರು ಜನ್ಮದಿನವೂ ಎಂದಿನಂತೆ ಇನ್ನೊಂದು ದಿನ ಎನ್ನುವಂತೆ ನಿರ್ಲಿಪ್ತರಾಗಿರುತ್ತಾರೆ. ನಾವು ಚಿಕ್ಕವರಿದ್ದಾಗ ನಮಗೆ ನಮ್ಮ ಹುಟ್ಟಿದ ಹಬ್ಬ ಬಂತು ಎಂದು ಗೊತ್ತಾಗುತ್ತಲೇ ಇರಲಿಲ್ಲ. ಮನೆಯಲ್ಲಿ ಅಮ್ಮ ಅಂದು ಸಿಹಿತಿಂಡಿಂiÀiನ್ನು ಮಾಡಿ ಹೇಳಿದಾಗಲೇ ಗೊತ್ತಾಗುತ್ತಿದ್ದುದು. ಉಳಿದವರಾರು ಇಂದಿನಂತೆ ಭರ್ಜರಿಯಾಗಿ ಆಚರಣೆ ಮಾಡಿಕೊಳ್ಳುತ್ತಿರಲಿಲ್ಲವಾದ್ದರಿಂದ ನಮ್ಮಿಂದ ಆಕ್ಷೇಪಣೆಗೆ ಅವಕಾಶವೇ ಇರುತ್ತಿರಲಿಲ್ಲ. ಇಂದಿನ ದಿನಗಳಲ್ಲಿ ಮಕ್ಕಳಿಗೆ ಒಂದು ವರ್ಷದಿಂದಲೇ ಅದ್ದೂರಿಯಾಗಿ ಹುಟ್ಟಿದ ಹಬ್ಬವನ್ನು ಆಚರಿಸುವ ಪರಿಪಾಠ ಬೆಳೆಸಿಬಿಡುತ್ತಾರೆ. ಮಕ್ಕಳಿಗೂ ಉಡುಗೊರೆಯ ಹುಚ್ಚು ಬೆಳೆದು, ನಂತರ ಆಡಂಬರ, ಮೆರೆದಾಟ ಎಲ್ಲವೂ ಸೇರಿ ಹುಟ್ಟಿದ ಹಬ್ಬವೆಂದರೆ ಹೀಗೆ ಇರಬೇಕು ಎಂದು ತಾವೇ ಒಂದು ಪರಿಧಿಯನ್ನು ನಿರ್ಮಿಸಿಕೊಂಡುಬಿಡುತ್ತಾರೆ. 
ಅಂದು ಕೆಲವು ಶಾಲೆಗಳಲ್ಲೂ ಹುಟ್ಟುಹಬ್ಬ ಆಚರಿಸುವವರಿಗೆ ಸಮವಸ್ತ್ರದಿಂದ ರಿಯಾಯಿತಿ. ಅವರು ಬಣ್ಣದ ಬಟ್ಟೆ ತೊಡಬಹುದು. ಹಾಗಿದ್ದಲ್ಲಿ ಮನೆಯಲ್ಲಿ ಇರುವ ಬಟ್ಟೆಯನ್ನೇ ತೊಡಲಾಗುತ್ತದೆಯೇ? ಇಲ್ಲ, ಅವರಿಗೆ ಅಂದು ಹೊಸಬಟ್ಟೆಯೇ ಆಗಬೇಕು. ಇದ್ದುದರಲ್ಲೇ ಹೊಸ ಬಟ್ಟೆ ಹಾಕಿದರೂ, ಗೆಳೆಯ ಗೆಳತಿಯರು ನಕ್ಕು ಬಿಟ್ಟರೆ? ಜನ್ಮದಿನಕ್ಕೂ ಹೊಸಬಟ್ಟೆ ತೆಗೆದುಕೊಳ್ಳುವುದಿಲ್ಲ ಎಂದು ಆಡಿಕೊಂಡು ಬಿಟ್ಟರೆ? ಹೀಗೆ ಏನೇನೋ ಕಾರಣದಿಂದ ಅಂದು ಹೊಸಬಟ್ಟೆಯೇ ಆಗಬೇಕು. ಇಲ್ಲವಾದಲ್ಲಿ ಮನೆಯಲ್ಲಿ ಹಟ, ರಾದ್ಧಾಂತ, ರಾಮಾಯಣ ಇದ್ದದ್ದೇ. ದೊಡ್ಡಹೆಸರು ಪಡೆದಿರುವ ಆಡಂಬರದ ಶಾಲೆಗೆ ಕಷ್ಟಪಟ್ಟು ಸೇರಿಸಿರುವ ಬಡತಂದೆ ತಾಯಿಗಳಿಗೆ ಇದರ ಪೆಟ್ಟು ಬೀಳುವುದು ಖಂಡಿತಾ. ಅಲ್ಲಿ ಓದುವ ಮಕ್ಕಳಿಗೆ ತಂದೆ ತಾಯಿಗಳ ಪರದಾಟ ಗೊತ್ತಾಗುವುದಿಲ್ಲ, ಕೆಲವರಿಗೆ ಗೊತ್ತಾದರೂ ಅವರ ಮಕ್ಕಳಾಗಿ ಹುಟ್ಟಿದ್ದಕ್ಕೆ ನಮಗಾಗಿ ಖರ್ಚುಮಾಡಲೀ ಎಂಬ ಧೋರಣೆಯೂ ಇರುತ್ತದೆ. ಹೀಗಾಗಿ ಮನೆಯಲ್ಲಿ ಜಗಳ, ಮನಸ್ತಾಪ, ಆಕ್ಷೇಪಣೆ, ಮಕ್ಕಳಿಗಾಗಿ ತಂದೆ ತಾಯಿಗಳಲ್ಲಿ ಜಗಳ ಹೀಗೆ ಏನೇನೋ ರೀತಿಯಲ್ಲಿ ರಾಮಾಯಣ, ಮಹಾಭಾರತಗಳು ನಡೆಯುತ್ತಿರುತ್ತವೆ. ಕೆಲವೊಮ್ಮೆ ಅದು ತಾತ್ಕಾಲಿಕವಾಗಿಯೂ ಇರಬಹುದು, ಕೆಲವೊಮ್ಮೆ ಅದು ಹಾಗೆಯೇ ಮುಂದುವರೆದು ಸಂಬಂಧಗಳು ಎಣ್ಣೆಸೀಗೆಕಾಯಿಯಾಗಿಯೇ ಉಳಿದಿರುವ ಉದಾಹರಣೆಗಳೂ ಇವೆ.
ಕಾಲೇಜಿನ ವಿದ್ಯಾರ್ಥಿಗಳು ಆಚರಿಸುವ ಹುಟ್ಟಿದ ಹಬ್ಬ ಮಕ್ಕಳದ್ದಕ್ಕಿಂತ ಭಿನ್ನ. ಅವರದು ಹೋಟೆಲ್, ಸಿನಿಮಾ ಇತ್ಯಾದಿ. ಇಲ್ಲಿ ಮತ್ತೆ ಬಡವರ ಮಕ್ಕಳಿಗೆ ಒಂದು ರೀತಿಯ ಪೀಕಲಾಟ. ನನಗೆ ಇವೆಲ್ಲ ಆಗುವುದಿಲ್ಲ ಎಂದೂ ಹೇಳಲಾರರು, ಮಾಡಬೇಕು ಎಂದರೆ ಕೈಲಾಗುವುದಿಲ್ಲ. ಈ ಸಂಧಿಗ್ಧದಿಂದ ಅವರ ಮಾನಸಿಕ ತೊಳಲಾಟ ಹೇಳಲಸಾಧ್ಯ. ನನಗೆ ಅನ್ನಿಸುವ ಮಟ್ಟಿಗೆ ಗೆಳೆಯರಿಗೆ ಇದ್ದುದನ್ನು ಹೇಳಿ, ತಮ್ಮ ಮನೆಯ ಸ್ಥಿತಿಯನ್ನು ಹೇಳಿಬಿಟ್ಟರೆ ನೆಮ್ಮದಿ, ನಿರಾಳ. ಅವರ ಮುಂದೆ ಇಲ್ಲದ ಸೋಗು ಹಾಕಿಕೊಂಡು ಒದ್ದಾಡುವ ಪ್ರಮೇಯ ಇರುವುದಿಲ್ಲ. ಒಂದು ಬಾರಿ ಹೇಳಿದ ನಂತರ ಮುಂದೆ ಯಾರೂ ಇಂತಹ ವಿಷಯಗಳಲ್ಲಿ ಬಲವಂತ ಮಾಡುವುದಿಲ್ಲ. ಆದರೆ ನಾವಿರುವುದೇ ಹೀಗೆ ಎಂಬ ಧೃಢಮನಸ್ಸು ಇರಬೇಕು. ಈ ಕಾಲೇಜು ಹುಡುಗರಲ್ಲಿ ಒಂದು ವಿಚಿತ್ರ ಪದ್ಧತಿ ಇದೆ. ಅದು ಜನ್ಮದಿನ ಆಚರಿಸುವ ಹುಡುಗನನ್ನು ನಾಲ್ಕು ಜನ ಕೈ ಕಾಲು ಹಿಡಿದು ಎತ್ತಿ ಉಳಿದ ಹುಡುಗರು ಕಾಲುಗಳಿಂದ ಒದೆಯುವುದು. (ಹುಟ್ಟಿದ ಹಬ್ಬದ ಒದೆಗಳು) ಈ ಅಮಾನುಷ ಪದ್ಧತಿಯನ್ನು ಅದ್ಯಾರು ತಂದರೋ, ಅದನ್ನು ಹಾಗೆಯೇ ಆಚರಿಸುವ ಈ ಹುಡುಗರಿಗೆ ಅದೆಂದು ಬುದ್ಧಿ ಬರುತ್ತದೋ ದೇವರೇ ಬಲ್ಲ. ನಾವು ಶುಭಕಾರ್ಯಗಳಿಗೆ ದೀಪ ಹಚ್ಚುವ ಕೆಲಸ ಮಾಡಿದರೆ ಈ ಪಾಶ್ಚಾತ್ಯ ರೀತಿಯಲ್ಲಿ ದೀಪ ಆರಿಸುವ ಹಾಗೂ ಹೀಗೆ ಕತ್ತೆಗಳಂತೆ ಒದೆಯುವ ಪದ್ಧತಿ. ಇದನ್ನು ಆಚರಿಸುವವವರಿಗೂ ಬುದ್ಧಿಬೇಡವೇ? 
ಬಲು ಚಿಕ್ಕ ಮಕ್ಕಳ ಜನ್ಮದಿನವೇ ಬೇರೆಯ ರೀತಿ. ಅವಕ್ಕೆ ಬುದ್ದಿಬಲಿತಿರುವುದಿಲ್ಲ. ನಿದ್ದೆ ಬಂದರೆ ನಿದ್ದೆ ಮಾಡಿಬಿಡುತ್ತವೆ. ದುಃಖವಾದರೆ ಜೋರಾಗಿ ಅತ್ತುಬಿಡುತ್ತವೆ. ಅದರ ಅಪ್ಪ ಅಮ್ಮಂದಿರೋ ಅನೇಕ ಜನರನ್ನು ಹಚ್ಚಿಕೊಂಡು ಅವರನ್ನು ಉಪಚರಿಸುವುದರಲ್ಲೇ ಮಗ್ನರಾಗಿ ಮಕ್ಕಳನ್ನೇ ಮರೆತುಬಿಟ್ಟಿರುತ್ತಾರೆ. ಆ ಮಕ್ಕಳಿಗೆ ಅಪ್ಪ ಅಮ್ಮಂದಿರ ಒಡನಾಟ ತಪ್ಪಿದ ದುಃಖ, ಬಂದವರೆಲ್ಲಾ ಮಾತಾಡಿಸುವಾಗ ಆಗುವ ಭಯ, ಮುಜುಗರ (ನಾವು ಕೆಲವರಂತೂ ಆ ಮಕ್ಕಳಿಗೆ ರಾಕ್ಷಸರಂತೆ ಕಾಣಿಸುತ್ತೀವೇನೋ) ಹೀಗಾಗಿ ಗೊಳೋ ಎಂದು ಸೂರು ಕಿತ್ತುಹೋಗುವಂತೆ ಕಿರುಚಿ ಅಳುತ್ತಿರುತ್ತವೆ. ಅದನ್ನು ಸಮಾಧಾನ ಪಡಿಸಲು ಅದರ ಚಿಕ್ಕ ಅಕ್ಕನೋ, ಅಣ್ಣನೋ ಏನೇನೋ ಕೋತಿ ಚೇಷ್ಟೆಗಳನ್ನು ಮಾಡಿ ಮತ್ತಷ್ಟು ಕಿರುಚಿರುತ್ತಿರುತ್ತವೆ. ಅವುಗಳನ್ನು ಸುಮ್ಮನಿರೋ ಎಂದು ಅದರ ಅಜ್ಜಿಯೋ, ದೊಡ್ಡಮ್ಮನೋ ಇನ್ನಷ್ಟು ಕಿರುಚಾಡುತ್ತಿರುತ್ತಾರೆ. ಹೀಗೆ ಅಲ್ಲಿ ನಡೆಯುವ ರಂಪ, ರಾದ್ಧಾಂತಗಳಿಂದ ಬಂದವರಿಗೆ, ಆ ಮಗುವಿಗೆ, ಅದರ ಅಪ್ಪ ಅಮ್ಮನಿಗೆ ತಲೆ ಚಿಟ್ಟು ಹಿಡಿದುಬಿಟ್ಟಿರುತ್ತದೆ. ಜೊತೆಗೆ ಇತರ ಮಕ್ಕಳ ಕಿರುಚಾಟ, ಅರಚಾಟ, ಆಟ, ಓಟ, ದೊಡ್ಡವರ ಸಡಗರ, ಸಂಭ್ರಮ, ಗಡಿಬಿಡಿ. ಒಟ್ಟಿನಲ್ಲಿ ಅದು ಹುಟ್ಟಿದ ಹಬ್ಬವೋ ಗದ್ದಲದ ಗೊಂದಲ ಕೂಟವೋ ಎಂದು ಅನುಮಾನ ಬಂದುಬಿಡುತ್ತದೆ. ಆದರೂ ಅದು ಅನೇಕರಿಗೆ ಬೇಕು. ಎಷ್ಟಾದರೂ ಅದು ತಮ್ಮ ದೌಲತ್ತನ್ನು ತೋರ್ಪಡಿಸಲು ಸಿಗುವ ಒಂದು ಅವಕಾಶವಲ್ಲವೇ. ಕೆಲವರಂತೂ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಮುಡಿಯುವ ಜಾತಿಯವರು. ತಮ್ಮ ಕುಟುಂಬದ ಇನ್ನಾರೋ ಮಾಡಿದರು, ನಾನೇನು ಕಡಿಮೆ ಎಂದು ಸ್ಪರ್ಧೆಗೆ ನಿಂತು ಹಣ ಸುರಿಯುತ್ತಾರೆ. ಉಳಿತಾಯ, ಸರಳತೆ ಎಂಬ ಪದಗಳಿಗೆ ಇಲ್ಲಿ ಜಾಗವೇ ಇಲ್ಲ. 
ನನಗಂತೂ ಹುಟ್ಟಿದ ಹಬ್ಬವನ್ನು ಆಚರಿಸಿಕೊಂಡದ್ದು ನೆನಪೆ ಇಲ್ಲ. ಹುಡುಗರೆಲ್ಲಾ ನಿಮ್ಮ ಹುಟ್ಟಿದ ಹಬ್ಬದ ದಿನಾಂಕವನ್ನು ಕೇಳಿದಾಗ ಮಾತು ಮರೆಸಿ ತಪ್ಪಿಸಿಕೊಂಡು ಬಿಡುತ್ತಿದ್ದೆ. ಆದರೆ ನನಗೆ ಸುಮಾರು 55 ವರ್ಷವಾದ ಮೇಲೆ, ನನ್ನ ಸಹೋದ್ಯೋಗಿಗಳು ನನ್ನ ಹುಟ್ಟಿದ ಹಬ್ಬದ ದಿನಾಂಕವನ್ನು ನೆನಪಿನಲ್ಲಿಟ್ಟುಕೊಂಡು ತಾವೇ ಕೇಕುತಂದು ಆಚರಿಸುತ್ತಿದ್ದರು. ನನಗೋ ಒಂದು ರೀತಿಯ ಮುಜುಗರ. ಇನ್ನು ಕೆಲವು ಬಾರಿ ಒಂದೇ ತಿಂಗಳಲ್ಲಿ ಹುಟ್ಟಿದ ಮೂರುನಾಕು ಜನರನ್ನು ಒಟ್ಟಿಗೆ ಕಲೆಹಾಕಿ ಅವರೆಲ್ಲರೂ ಸೇರಿ ಯಾವುದಾದರೂ ಭರ್ಜರಿ ಹೊಟೆಲ್ ನಲ್ಲಿ ಊಟ ಹಾಕಿಸಬೇಕು ಎಂದು ತಾಕೀತುಮಾಡಿದ್ದರು. ಅದೂ ಒಂದೆರಡುಬಾರಿ ನಡೆಯಿತು. ಅಂತೂ ಹುಟ್ಟಿದ ಹಬ್ಬದ ನೆಪದಲ್ಲಿ ಸಂಭ್ರಮವೋ ಸಂಭ್ರಮ. ನನ್ನ ಅರವತ್ತರ ಹುಟ್ಟುಹಬ್ಬವಂತೂ ಹುಡುಗರು, ಸಹೋದ್ಯೋಗಿಗಳು ಸೇರಿ ಭರ್ಜರಿಯಾಗಿಯೇ ಮಾಡಿಬಿಟ್ಟರು. ಒಂದು ದೊಡ್ಡ ಕೇಕು, 60 ಎಂದು ಬರೆದಿರುವ ಒಂದು ಮೇಣದ ಬತ್ತಿ, ಹುಡುಗರಿಗೆಲ್ಲಾ ತಿಂಡಿ, ಹೀಗೆ ಏನೇನೋ. ನಾವು ಉಳಿತಾಯ, ಸರಳತೆ ಎಂದು ವೇದಾಂತ ನುಡಿಯುತ್ತಿದ್ದರೆ ಅವರು ಹೌದು ಹೌದು ಎಂದು ಗೋಣಾಡಿಸುತ್ತಲೇ, ತಮಗೆ ಏನು ಬೇಕೋ ಅವೆಲ್ಲವನ್ನು ನನಗೆ ತಿಳಿಯದಂತೆ ಮಾಡಿ, ಮೆಲ್ಲಗೆ ನನ್ನನ್ನು ಅಲ್ಲಿಗೆ ಕರೆದು ಕೊಂಡು ಹೋಗಿ ನನಗೆ ಅಘಾತ, (ಅವರಿಗೆ ಅದು ಒಂದು ಆಶ್ರ್ಚಯವಂತೆ) ತಂದಿಟ್ಟುಬಿಟ್ಟರು. ಇನ್ನು ಕೆಲವು ಹುಡುಗರಂತೂ ಸರ್, ನಿಮ್ಮನ್ನು ಎತ್ತಿ ಹುಟ್ಟಿದ ಹಬ್ಬದ ಒದೆಗಳನ್ನು ಕೊಡಬಹುದೆ? ಎಂದು ಕೇಳಿದರು. ನಾನು, "ನನಗೆ 60 ವರ್ಷಕ್ಕೇ ಶಾಂತಿಮಾಡಿ, ಸ್ವರ್ಗಕ್ಕೋ ನರಕಕ್ಕೋ ಕಳುಹಿಸಬೇಕೆಂದಿದ್ದರೆ ಮಾಡಿ" ಎಂದೆ. ಸಧ್ಯ ಅವರು ಮನಸ್ಸು ಮಾಡಲಿಲ್ಲ. ಎಲ್ಲರೂ ಸೇರಿ ನಾವು ಮಾಡಿಯೇ ತೀರುತ್ತೇವೆ ಎಂದಿದ್ದರೆ ನನಗೇನೂ ಮಾಡಲಾಗುತ್ತಿರಲಿಲ್ಲ. ಒದೆಸಿಕೊಂಡು ಬಿದ್ದಿರಬೇಕಿತ್ತು ಅಥವಾ ಹುಟ್ಟಿದ ದಿನವೆ ಸ್ವರ್ಗಕ್ಕೆ (ನರಕಕ್ಕೂ ಇರಬಹುದು) ಹೋದ ಪ್ರೊಫೆಸರ್ ಮಹಾಶಯ ಎಂದು ಖ್ಯಾತನಾಗುತ್ತಿದ್ದೆನೋ ಏನೋ. ಆದರೆ ನಮ್ಮ ಹುಡುಗ, ಹುಡುಗಿಯರು ತುಂಬಾ ಒಳ್ಳೆಯವರು, ನಾನೆಂದರೆ ತುಂಬಾ ಗೌರವ. ಹಿಗಾಗಿ ತಪ್ಪಿಸಿಕೊಂಡೆ. ಜೊತೆಗೆ ಅವರು ನನಗೆ ತಿಳಿಯದ ಹಾಗೆ ಒಂದು ಪೋóಟೋ ಹಿಡಿದು ಅದನ್ನು ನೋಡಿಕೊಂಡು ಒಂದು ಸುಂದರವಾದ ಚಿತ್ರವನ್ನು ಪೆನ್ಸಿಲಿನಿಂದ ಬರೆದು ಅದಕ್ಕೆ ಕಟ್ಟು ಹಾಕಿಸಿ ನನಗೆ ಕೊಟ್ಟಿದ್ದಾರೆ. ಜೊತೆಗೆ ತಾವೇ ಮಾಡಿದ ಒಂದು ಸುಂದರ ಕಲಾಕೃತಿಯನ್ನು ನೀಡಿದ್ದಾರೆ. ಒಂದು ದೊಡ್ಡ ಶುಭಾಶಯ ಪತ್ರ ಬರೆದು ಅದರಲ್ಲಿ ಎಲ್ಲರೂ ತಮ್ಮ ಸುಂದರವಾದ ಬರವಣಿಗೆಯಲ್ಲಿ ನನ್ನನ್ನು ಹೊಗಳಿದ್ದಾರೆ. ಇದು ನಿಜವೇನ್ರೋ ಎಂದರೆ ನೂರಕ್ಕೆ ನೂರು ಸರ್ ಎನ್ನುತ್ತಾರೆ. ನಾನಂತು ಅವರಿಗೆ ಎಂದೂ ಕೆಟ್ಟದ್ದು ಮಾಡಿಲ್ಲ, ಕೇಡೂ ಬಯಸಿಲ್ಲ, ತಪ್ಪು ಮಾಡಿದಾಗ ಮಾತ್ರ ಒಂದಿಷ್ಟು ಬಯ್ದಿರಬಹುದು, ಅದ್ದರಿಂದ ಅದು ನಿಜವಿರಲೂ ಬಹುದು ಎಂದು ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತೇನೆ. 
ಇನ್ನು ಹುಟ್ಟಿದ ಹಬ್ಬ ಎಂದಾಗ ಈ ಒಂದು ನೀತಿಕತೆ ನೆನಪಾಗುತ್ತದೆ. ಒಬ್ಬ ಶ್ರೀಮಂತನಿರುತ್ತಾನೆ. ಅವನು ತನ್ನ ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಟ್ಟಿರುತ್ತಾನೆ. ಅವಳ ಹುಟ್ಟಿದ ಹಬ್ಬದಂದು ಒಂದು ಸುಂದರವಾದ ಹೂಗುಚ್ಛವನ್ನು ನೀಡಿದರೆ ತನ್ನ ಕರ್ತವ್ಯ ಮುಗಿಯಿತು ಎಂದುಕೊಂಡಿರುತ್ತಾನೆ. ತನ್ನ ತಾಯಿಯ ಭಾವನೆಗಳನ್ನು ಅವನು ಎಂದಿಗೂ ಅರ್ಥಮಾಡಿಕೊಂಡೇ ಇರುವುದಿಲ್ಲ. ಹೀಗೆ ಒಮ್ಮೆ ಅವನು ಹೂಗುಚ್ಛವನ್ನು ಕೊಳ್ಳುತ್ತಿರುವಾಗ ಬಡತನವೇ ಮೈವೆತ್ತಿದಂತಹ ಒಬ್ಬ ಪುಟ್ಟ ಬಾಲಕಿ ಬಂದು ತನಗೆ ಕೇವಲ ಒಂದು ಗುಲಾಬಿಯನ್ನು ಕೊಡಿಸಿ ಎಂದು ದುಂಬಾಲು ಬೀಳುತ್ತಾಳೆ. ಅವನು ಒಲ್ಲದ ಮನಸ್ಸಿನಿಂದ ಅದನ್ನು ಕೊಡಿಸಿ, ಅದನ್ನು ಏನು ಮಾಡುತ್ತಾಳೋ ಎಂದು ಕುತೂಹಲದಿಂದ ಅವಳನ್ನು ಹಿಂಬಾಲಿಸಿ ನೋಡಿದಾಗ, ಆ ಹುಡುಗಿ ಅದನ್ನು ತೆಗೆದುಕೊಂಡು ಹೋಗಿ ತನ್ನ ತಾಯಿಯ ಗೋರಿಯಮೇಲೆ ಇಟ್ಟು ತನ್ನ ಪ್ರೇಮವನ್ನು ತೋರಿಸುತ್ತಾಳೆ. ಆಗ ಇವನಿಗೆ ಬದುಕಿರುವ ತನ್ನ ತಾಯಿಯ ಹುಟ್ಟಿದ ಹಬ್ಬಕ್ಕೆ ತಾನು ಇದುವರೆಗೂ ಏನು ಮಾಡುತ್ತಿದ್ದೆನಲ್ಲಾ ಎಂದು ಪಶ್ಚಾತ್ತಾಪವಾಗಿ ತನ್ನ ತಾಯಿಯ ಬಳಿಗೆ ತಾನೇ ಹೋಗಿ ಶುಭಾಶಯವನ್ನು ಕೋರಿ ನಂತರ ಅವಳನ್ನು ಮನೆಯಲ್ಲಿಯೇ ಇರಿಸಿಕೊಳ್ಳುತ್ತಾನೆ. ಅಂತೂ ಒಂದು ಹುಟ್ಟಿದ ಹಬ್ಬ ಅವನ ಕಣ್ಣನ್ನು ತೆರೆಸುತ್ತದೆ. 
ಇನ್ನು ಕೆಲವರು ಹುಟ್ಟಿದ ಹಬ್ಬದ ನೆನಪಿಗೆ ಯಾವುದಾದರೂ ಅನಾಥಾಶ್ರಮಕ್ಕೆ ಅವರ ಹೆಸರಿನಲ್ಲಿ ಅನ್ನ ದಾನ ಮಾಡಲು ಹಣವನ್ನು ನೀಡಿರುತ್ತಾರೆ. ಕೆಲವರು ಬದುಕಿಲ್ಲದ ತಮ್ಮ ತಂದೆ ತಾಯಿಯರ ಹುಟ್ಟಿದ ಹಬ್ಬಕ್ಕೂ ಇಂತಹ ದಾನ ಮಾಡುತ್ತಾರೆ. ಇಂತಹವರು ಇರುವುದರಿಂದಲೇ ನಮ್ಮ ಭಾರತೀಯತೆ, ಸಂಸ್ಕøತಿ ಇವುಗಳು ಇಂದಿಗೂ ಉಳಿದುಕೊಂಡಿರುವುದು. 
ಸಿನಿಮಾಗಳಲ್ಲಿ ಹುಟ್ಟಿದ ಹಬ್ಬವನ್ನು ಆಚರಿಸುವುದೇ ಒಂದು ರೀತಿ. ಅಂದು ನಾಯಕ ಪಿಯಾನೋ ನುಡಿಸುತ್ತಾ ಒಂದು ವಿರಹ ಗೀತೆಯನ್ನು ಹೇಳುತ್ತಾನೆ. ನಾಯಕಿ ಯಾರಿಗೂ ಕಾಣದ ಹಾಗೆ ದುಃಖವನ್ನು ನುಂಗಿ ಒಳಗೊಳಗೆ ಅಳುತ್ತಾಳೆ. ಮಕ್ಕಳ ಹುಟ್ಟಿದ ಹಬ್ಬವಾದರೆ ಎಲ್ಲಾ ಮಕ್ಕಳನ್ನೂ ಸೇರಿಸಿ ಹಾಡಿಸಿ, ಕುಣಿಸಿ ಎಲ್ಲಾ ಮಕ್ಕಳು ಹುಟ್ಟಿದ ಹಬ್ಬವನ್ನು ಹಾಗೇಯೇ ಆಚರಿಸುವಂತೆ ಒಂದು ಪದ್ಧತಿಯನ್ನು ತಂದು ಬಿಡುತ್ತಾರೆ. ಒಟ್ಟಿನಲ್ಲಿ ಸಿನಿಮಾದಲ್ಲಿ ಹುಟ್ಟಿದ ಹಬ್ಬ ಎಂದರೆ, ಗೋಳು, ಆಡಂಬರ, ವೇದನೆ, ವಿರಹ, ಹುಡುಗಾಟ, ಕುಣಿದಾಟ ಎಲ್ಲವೂ ಮೇಳೈಸಿರುತ್ತದೆ.
ಹುಟ್ಟಿದ ಹಬ್ಬದ ದಿನ ಏಕೆ ಮೇಣದ ಬತ್ತಿ ಹಚ್ಚಿ ನಂತರ ಅದನ್ನು ಆರಿಸುತ್ತಾರೆ ಎಂದು ನಾನು ಅನೇಕರನ್ನು ಕೇಳಿದೆ. ಎಲ್ಲರೂ ಗೊತ್ತಿಲ್ಲ, ಏಲ್ಲರೂ ಹಾಗೇ ಮಾಡುತ್ತಾರೆ ನಾವೂ ಹಾಗೇ ಮಾಡುತ್ತೇವೆ ಎಂದರೇ ಹೊರತು ಒಬ್ಬರೂ ಸರಿಯಾದ ಉತ್ತರ ನೀಡಲಿಲ್ಲ. ಅಂತೂ ಅದರ ಕಾರಣವನ್ನು ನಾನೇ ಶೋಧಿಸಬೇಕಾಯಿತು. ನಿಮಗೇನಾದರೂ ಗೊತ್ತೇ? ಖಂಡಿತ ಗೊತ್ತಿರಲಿಕ್ಕಿಲ್ಲ. ನಾನೇ ಹೇಳಿಬಿಡುತ್ತೇನೆ, ಕೇಳಿ ನಕ್ಕುಬಿಡಿ. ದೀಪ ಹಚ್ಚಿದ ಕೂಡಲೇ ಏನಾದರೂ ಪ್ರಾರ್ಥಿಸಿ ನಂತರ ದೀಪ ಆರಿಸಿದಾಗ ಬರುವ ಹೊಗೆಯು ನಿಮ್ಮ ಪ್ರಾರ್ಥನೆಯನ್ನು ದೇವರಬಳಿಗೆ ತೆಗೆದುಕೊಂಡು ಹೋಗುತ್ತದೆಯಂತೆ. ಇದು ನಮ್ಮ ಭಾರತೀಯ ಪದ್ಧತಿಯಾಗಿದ್ದಿದ್ದರೆ ಇದೆಂಥ ಮೂಢನಂಬಿಕೆ ಎಂದು ಗೇಲಿಮಾಡಿ, ಅದಕ್ಕೆ ಒಂದಿಷ್ಟು ಕೊಂಕುನುಡಿದು ರಂಪ ಮಾಡಿರುತ್ತಿದ್ದರು, ನಮ್ಮ ಬುದ್ಧಿಜೀವಿಗಳು. ಆದರೆ ಅದೇಜನ ಈಗಲೂ ಇದನ್ನೇ ಕುರಿಗಳಂತೆ ಅನುಸರಿಸುತ್ತಿದ್ದಾರೆ. ಒಬ್ಬರಾದರೂ ಇದರ ಅರ್ಥ ತಿಳಿದುಕೊಳ್ಳಲು ಪ್ರಯತ್ನಿಸಿಲ್ಲ. ಇದಕ್ಕಿಂತಾ ದೀಪ ಹಚ್ಚುವುದು ಎಂದರೆ ಕತ್ತಲನ್ನು ದೂರಮಾಡುವುದು ಅಂದರೆ, ಕತ್ತಲೆಂಬ ನಮ್ಮ ಅಜ್ಞಾನವು ಬೆಳಕೆಂಬ ಜ್ಞಾನದಿಂದ ದೂರವಾಗಲಿ ಎಂಬ ಸಂಕೇತವೂ ಸರಿಯಲ್ಲವೇ. ಇದು ಯಾವ ಧರ್ಮದವರೂ ಒಪ್ಪಬಹುದು ಏಕೆಂದರೆ ದೀಪಕ್ಕೆ, ಅದು ನೀಡುವ ಬೆಳಕಿಗೆ ಯಾವುದೇ ಧರ್ಮದ ನಂಟಿಲ್ಲ. 
ಈ ಪ್ರಪಂಚದಲ್ಲಿ, ನಮ್ಮ ದೇಶದಲ್ಲಿ ಅನೇಕ ಪುಣ್ಯಾತ್ಮರು ಹುಟ್ಟಿ ತಮ್ಮ ಜೀವನ ಸಾರ್ಥಕ ಮಾಡಿಕೊಂಡಿದ್ದಾರೆ. ಅಂತಹವರ ಹುಟ್ಟಿದ ದಿನವನ್ನು ನೆನೆವುದು ನಮ್ಮ ಕರ್ತವ್ಯ. ನಾವು ಅಷ್ಟು ದೊಡ್ಡವರಾಗುತ್ತೇವೆಯೋ ಇಲ್ಲವೋ ಆದರೂ ಅವರ ಆದರ್ಶಗಳನ್ನು ನೆನೆದಾದರೂ ರವೆಯಷ್ಟು ಒಳ್ಳೆಯ ಕೆಲಸಮಾಡೋಣ ಅಲ್ಲವೆ. ಅದಕ್ಕಾಗಿಯೇ ಅಂತಹವರ ಹುಟ್ಟಿದ ಹಬ್ಬಗಳನ್ನು ಜಯಂತಿ ಎಂದು ಆಚರಿಸುತ್ತಾರೆ. ಶಂಕರ ಜಯಂತಿ, ಬುದ್ಧ ಜಯಂತಿ, ಬಸವ ಜಯಂತಿ, ಗುರುನಾನಕ್ ಜಯಂತಿ, ಗಾಂಧಿ ಜಯಂತಿ, ರಾಮಕೃಷ್ಣ ಜಯಂತಿ ಇತ್ಯಾದಿ. ದೇವರು ಹುಟ್ಟಿದ ದಿನವನ್ನು ಹಬ್ಬವಾಗಿ ಆಚರಿಸುತ್ತೇವೆ. ರಾಮನವಮಿ, ಕೃಷ್ಣ ಜನ್ಮಾಷ್ಟಮಿ ಇತ್ಯಾದಿ. ಇನ್ನು ಕೆಲವು ಗಣ್ಯರು ಹುಟ್ಟಿದ ದಿನವನ್ನು ಒಂದು ಒಳ್ಳೆಯ ಸಾಮಾಜಿಕ ಅಥವಾ ಇತರ ಯಾವುದಾದರೂ ಕಾರ್ಯಕ್ಕೆ ಹೊಂದಿಸಿ ಅಚರಿಸುತ್ತಾರೆ. ನಮ್ಮ ನೆಚ್ಚಿನ ರಾಷ್ಟ್ರಪತಿ ರಾಧಾಕೃಷ್ಣನ್ ಅವರ ಹುಟ್ಟಿದ ಹಬ್ಬವನ್ನು ಅದ್ಯಾಪಕರ ದಿನವನ್ನಾಗಿ, ಮಾಜಿ ಪ್ರಧಾನಿಗಳಾದ ನೆಹರುರವರದನ್ನು ಮಕ್ಕಳದಿನವನ್ನಾಗಿ, ಚರಣ್‍ಸಿಂಗ್ ಅವರದನ್ನು ರೈತದಿನವನ್ನಾಗಿ, ರಾಜೀವ್‍ಗಾಂಧಿ ಅವರದನ್ನು ಸದ್ಭಾವನಾ ದಿನವನ್ನಾಗಿ, ವಲ್ಲಭಭಾಯಿ ಪಟೇಲ್ ಅವರದನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ, ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಸಿ ವಿ ರಾಮನ್ ಅವರದನ್ನು ವಿಜ್ಞಾನದ ದಿನವನ್ನಾಗಿ, ಸರ್ ಎಂ ವಿಶ್ವೇಶ್ವರಯ್ಯ ಅವರದನ್ನು ಇಂಜಿನಿಂiÀiರ್ ದಿನವನ್ನಾಗಿ ಆಚರಿಸುತ್ತೇವೆ. ಅಂತೂ ಹುಟ್ಟಿದ ಹಬ್ಬಕ್ಕೆ ಎಷ್ಟು ಬೆಲೆ ಇದೆ ಅಲ್ಲವೇ? ಹೀಗೆಯೆ ಆಗಸ್ಟ್ 15 ಹಾಗೂ ನವೆಂಬರ್ 1 ಈ ದಿನಗಳನ್ನು ಸ್ವತಂತ್ರ ಭಾರತ ಹುಟ್ಟಿದ ಹಾಗೂ ಕರ್ನಾಟಕ ಹುಟ್ಟಿದ ದಿವವೆಂದೂ ಕರೆಯಬಹುದಲ್ಲವೇ.
ಅಮೆರಿಕಾದಲ್ಲಿ ವಾಷಿಂಗ್ಟನ್ ಅವರ ಹುಟ್ಟಿದ ಹಬ್ಬವನ್ನು ರಾಷ್ಟ್ರಾಧ್ಯಕ್ಷರ ದಿನವನ್ನಾಗಿ ಫೆಬ್ರುವರಿಯ ಮೂರನೇ ಸೋಮವಾರದಂದು ಅಚರಿಸುತ್ತಾರೆ. ಹಳೆಯ ಕ್ಯಾಲೆಂಡರ್, ಹೊಸ ಕ್ಯಾಲೆಂಡರ್ ಇವುಗಳಲ್ಲಿ ಅದು ಬೇರೆ ಬೇರೆ ದಿನಗಳಂದು ಬರುವುದರಿಂದ ಅವರು ಬಲು ಸುಲಭವಾಗಿ ಬಗೆಹರಿಸಿಬಿಟ್ಟಿದ್ದಾರೆ. ನಮ್ಮಲ್ಲಾದರೋ ಹೀಗಾದರೆ ಅದಕ್ಕಾಗಿ ಚರ್ಚೆ, ಕಾದಾಟ, ಕಿರಿಚಾಟ, ರಾಜಕಾರಣ, ರಾಮಾಯಣಗಳನ್ನು ಮಾಡಿ ರಾದ್ದಾಂತ ಮಾಡಿಬಿಟ್ಟಿರುತ್ತಿದ್ದರು. ಮಹಾತ್ಮ ಗಾಂಧಿಯವರ ಹುಟ್ಟಿದ ಹಬ್ಬದಂದು ಮದ್ಯದ ಅಂಗಡಿಗಳು ಮುಚ್ಚಿರಬೇಕು ಎಂದು ಸರಕಾರ ಆಜ್ಞೆ ಹೊರಡಿಸಿದೆ. ಈ ಒಂದು ದಿನ ಬಿಟ್ಟು ವರ್ಷದ ಉಳಿದ ದಿನದಂದು ಕುಡಿದುಕೊಂಡು ಬಿದ್ದಿರಿ, ಈ ಒಂದು ದಿನ ಹೇಗಾದರೂ ಮಾಡಿ ತಡೆದುಕೊಳ್ಳಿ ಸಾಕು ಎಂದು ನಮ್ಮ ರಾಜಕಾರಣಿಗಳ ಅನಿಸಿಕೆ. ಹೀಗೆ ಮಾಡಿಬಿಟ್ಟರೆ ಗಾಂಧಿಯವರ ಆತ್ಮಕ್ಕೆ ಶಾಂತಿ ಸಿಗುವುದು ಎಂದು ಅವರ ಅಂಬೋಣ.
ಇವೆಲ್ಲವುಗಳ ಅಂದರೆ ಜನ್ಮದಿನ ಆಚರಿಸುವುದರ ಉದ್ದೇಶವೇನೋ ಒಳ್ಳೆಯದೆ. ಆದರೆ ನಾವು ಅದನ್ನು ಎಷ್ಟರ ಮಟ್ಟಿಗೆ ಈಡೇರಿಸುತ್ತೇವೆ ಎಂದು ಎಲ್ಲರೂ ಮನನ ಮಾಡಿಕೊಂಡರೆ ಒಳ್ಳೆಯದು. ಗಾಂಧಿ ಜಯಂತಿ ಆಚರಿಸಿದ ಎಷ್ಟು ಜನ ಸತ್ಯಕ್ಕೆ, ಅಹಿಂಸೆಗೆ, ಕುಡಿತ ನಿರ್ಮೂಲನೆಗೆ ಬೆಲೆಕೊಡುತ್ತಾರೆ? ಬಸವ ಜಯಂತಿ ಆಚರಿಸಿದ ಎಷ್ಟುಜನ ಅಯ್ಯಾ ಎಂದರೆ ಸ್ವರ್ಗ, ಕಾಯಕವೇ ಕೈಲಾಸ, ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ತತ್ವಗಳಿಗೆ ಬೆಲೆ ನೀಡುತ್ತಾರೆ? ಸದ್ಭಾವನೆಯ ದಿನವನ್ನು ಆಚರಿಸಿ ಮನದಲ್ಲಿ ದುರ್ಭಾವನೆಗಳನ್ನೇ ತುಂಬಿ ಕೊಂಡಿರುವರು ಅದೆಷ್ಟೋ! ಅಂದ ಮೇಲೆ ಜನ್ಮದಿನವನ್ನು ಅಚರಿಸಿದ್ದಕ್ಕೆ ಬೆಲೆಯೇನು ಬಂತು? ಕೇವಲ ಕಾಟಾಚಾರಕ್ಕೆ ಅಥವಾ ಜನರ ಮುಂದೆ ಧರಿಸಿದ ಹುಸಿ ಮುಖವಾಡ ಅಲ್ಲವೇ?
ಈ ಹುಟ್ಟಿದ ಹಬ್ಬಕ್ಕೆ ರಜೆ ಕೊಡುವುದು ನನಗೇನೋ ಸರಿ ಎನ್ನಿಸುವುದಿಲ್ಲ. ಇದರಿಂದ ಜನ ಸುಮ್ಮನೆ ಕಾಲ ಕಳೆದು ಆ ರಜೆಯ ಮೂಲ ಉದ್ದೇಶವನ್ನೇ ಮರೆತುಬಿಡುತ್ತಾರೆ. ಅದೇನಾದರೂ ವರದ ಕೊನೆಯಲ್ಲಿ ಬಂದರೆ ಅದಕ್ಕೆ ಹಿಂದೊಂದು, ಮುಂದೊಂದು ಸೇರಿಸಿ ತಮ್ಮ ಸ್ವಂತದ ಕೆಲಸಗಳಿಗೆ ಉಪಯೋಗಿಸುತ್ತಾರೆ. ಹುಟ್ಟಿದ ಹಬ್ಬಕ್ಕೆ ರಾಜ ಕೊಡುವುದು ಇದಕ್ಕಾಗಿಯೇ? ಅದಕ್ಕೆ ಬದಲು ಅಂದು ಎಂದಿನಂತೆ ಪಾಠ ಮಾಡಿ ಅಥವಾ ಕಚೇರಿಯಲ್ಲಿ ಕೆಲಸ ಮಾಡಿ, ಅಂದಿನ ಒಂದು ಗಂಟೆಯ ಕಾಲ ಅಂದು ಹುಟ್ಟಿದವರ ಬಗ್ಗೆ ಒಂದು ಕಾರ್ಯಕ್ರಮ, ಅವರ ಬಗ್ಗೆ ಒಂದೆರೆಡು ಮಾತು, ಅವರಿಂದ ಕಲಿಯಬಹುದಾದ ನೀತಿ, ಇತ್ಯಾದಿಗಳನ್ನು ಅಳವಡಿಸಿಕೊಂಡರೆ ಒಳ್ಳೆಯದಲ್ಲವೇ. 
ಈ ಹುಟ್ಟಿದ ಹಬ್ಬದ ದಿನದ ಬಗ್ಗೆ ಮಾತನಾಡುವಾಗು ಈ ಒಂದು ವಿಚಿತ್ರವನ್ನೂ ಗಮನಿಸಬಹುದು. ಕೆಲವರ ಹುಟ್ಟಿದ ದಿನ ಮತ್ತು ಮರಣದ ದಿನ ಒಂದೇ ಆಗಿರುವುದು. ಇದು, ಅಶ್ಚರ್ಯ, ವಿಚಿತ್ರ, ದುಃಖ ಎಲ್ಲವನ್ನೂ ತರಿಸುತ್ತದೆ. ಹುಟ್ಟಿದ ದಿನಕ್ಕೆ ಸಂತೋಷ ಪಡುವುದೋ, ಸತ್ತದಿನ ಎಂದು ದುಃಖ ಪಡುವುದೋ ಗೊತ್ತಾಗುವುದಿಲ್ಲ. ವಿಲಿಯಂ ಶೇಕ್ಸ್‍ಪಿಯರ್ ಎಲ್ಲರಿಗೂ ಚಿರಪರಿಚಿತ. ಅವರ ಪುಸ್ತಕಗಳು ಇಂದಿಗೂ ಅತ್ಯಧಿಕವಾಗಿ ಮಾರಾಟವಾಗುತ್ತವೆ. ಈಗಾಗಲೇ ಸುಮಾರು 4 ಬಿಲಿಯನ್ ಪುಸ್ತಕಗಳು ಮಾರಾಟವಾಗಿವೆ. ಅವರ ಹುಟ್ಟಿದ ದಿನ, ಮರಣದ ದಿನ ಒಂದೇ, ಅದು ಏಪ್ರಿಲ್ 23. ಅವರ 52ನೆಯ ಹುಟ್ಟಿದ ಹಬ್ಬದ ದಿನದಂದೇ ಅವರು ಮರಣ ಹೊಂದಿದರು. ಅಮೆರಿಕಾದ ಅಧ್ಯಕ್ಷರಾಗಿದ್ದ ಫ್ರಾಂಕ್ಲಿನ್ ರೂಸ್‍ವೆಲ್ಟ್ ಅವರ 5ನೆಯ ಮಗ, ಅಮೆರಿಕಾದ ಪ್ರಸಿದ್ಧ ಲಾಯರ್ ಹಾಗೂ ರಾಜಕಾರಣಿಯಾಗಿದ್ದ ಫ್ರಾಂಕ್ಲಿನ್ ಡಿಲೆನೋ ರೂಸ್‍ವೆಲ್ಟ್ ಅವರೂ ಸಹ ಅವರ 74ನೆಯ ಹುಟ್ಟಿದ ಹಬ್ಬ ಆಗಸ್ಟ್ 17ರಂದು ನಿಧನರಾದರು. ಪ್ರಸಿದ್ಧ ಚಿತ್ರಕಲಾವಿದ, ರೆನೈಸಾನ್ಸ್ ಕಾಲದ ವಾಸ್ತುಕಲಾ ನಿಪುಣ ರಾಫೇಲ್ ಸಹ ಅವರ 37ನೆಯ ಹುಟ್ಟಿದ ಹಬ್ಬದಂದೆ ನಿದನರಾದರು. ಅವರು ಹುಟ್ಟಿದ ಹಾಗೂ ಮರಣಿಸಿದ ದಿನ ಏಪ್ರಿಲ್ 6. 
ನನ್ನ ಗೆಳೆಯರೊಬ್ಬರಿದ್ದಾರೆ. ಅವರಿಗೆ ಈ ಕೇಕು ಕತ್ತರಿಸುವ, ದೀಪ ಆರಿಸುವ, ಆಂಗ್ಲ ಭಾಷೆಯಲ್ಲಿ ಹಾಡುವ ಹುಟ್ಟಿದ ಹಬ್ಬವನ್ನು ಕಂಡರೆ ಉರಿದು ಬೀಳುತ್ತಾರೆ. ನಾವು ಕನ್ನಡಿಗರು, ಕನ್ನಡ ಭಾಷೆಯಲ್ಲಿ ಹಾಡೋಣ, ನಮ್ಮದೇ ಆದ ರೀತಿಯಲ್ಲಿ ಆಚರಿಸೋಣ ಎಂದು ತಮ್ಮ ಮಗನ ಹುಟ್ಟಿದ ಹಬ್ಬವನ್ನು ಹೊಸರೀತಿಯಲ್ಲಿ ಆಚರಿಸಿದ್ದರು. ಅಂದು ಸಿಹಿತಿಂಡಿಗಳನ್ನು ಮಾಡಿ ಅವನ್ನು ದೀಪದ ಮುಂದೆ ಇಟ್ಟು ದೀಪವನ್ನು ಬೆಳಗಿಸಿ, ಹತ್ತು ಹಣತೆಗಳನ್ನು (ಅವರ ಮಗನ 10ನೇ ವರ್ಷದ ಹುಟ್ಟಿದ ಹಬ್ಬ) ಹಚ್ಚಿ, ಕನ್ನಡದ ಪದ್ಯವೊಂದನ್ನು ಹಾಡಿಸಿ ಎಲ್ಲರ ಮನಗೆದ್ದರು. ಎಲ್ಲರೂ ಹೀಗೇ ಮಾಡಿದರೆ ನಮ್ಮತನವನ್ನು ಕಾಯ್ದುಕೊಳ್ಳಬಹುದು. ಅಂದು ಅವರು ಹಾಡಿಸಿದ ಪದ್ಯ ನೆನಪಿಲ್ಲವಾದರೂ, ಈ ಕೆಳಗಿನ ಪದ್ಯವನ್ನು ಒಂದು ಸುಲಭವಾದ ರಾಗದಲ್ಲಿ ಎಲ್ಲರೂ ಹೇಳಬಹುದು. 
ಪ್ರೀತಿಯ ಅಮ್ಮನಿಗೆ
ಹುಟ್ಟಿದ ಶುಭ ದಿನದಾ
ಶುಭಾಶಯ ಶುಭಾಶಯ 
ಶುಭಾಶಯ ಶುಭಾಶಯ //
ಇಂದಿನ ಶುಭದಿನವು
ನೆಮ್ಮದಿ ಸುಖವನ್ನೂ
ಶಾಂತಿ ಆರೋಗ್ಯವನೂ
ದೇವರು ಕೊಡಲೆಂದೂ //
ಬಯಸುವೆವೂ ನಾವೂ 
ಹರಸುವೆವೂ ನಾವೂ //
ಮೊದಲ ಸಾಲಿನ 'ಅಮ್ಮನಿಗೆ' ಎಂಬುದನ್ನು ಅಪ್ಪನಿಗೆ, ಅಣ್ಣನಿಗೆ, ಅಕ್ಕನಿಗೆ, ಸೋದರಿಗೆ, ತಮ್ಮನಿಗೆ, ಮಿತ್ರನಿಗೆ, ಗೆಳೆಯನಿಗೆ, ಬಂಧುವಿಗೆ, ಗುರುಗಳಿಗೆ ಎಂದು ಸಂದರ್ಭಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು. ಹಾಡನ್ನೂ ಪ್ರಾಸಬದ್ಧವಾಗಿ ಯಾವುದಾದರೂ ಮಕ್ಕಳ ಪದ್ಯದಂತೆ, ಮಧುರವಾದ ಚಿತ್ರಗೀತೆಯ ರಾಗದಂತೆ ಹೇಳಬಹುದು. ನಮ್ಮ ಕನ್ನಡಿಗರು ಮೊದಲು ಇಂತಹವನ್ನು ಅಳವಡಿಸಿಕೊಂಡು ಇಂಗ್ಲಿಷ್ ಮೋಹದಿಂದ ಹೊರಬಂದು ದುರಭಿಮಾನವಿಲ್ಲದೆ ಅಭಿಮಾನದಿಂದ ಹಾಡುವರೂ ಎಂದೇ ನನ್ನ ಬಲವಾದ ನಂಬಿಕೆ. 
ಹುಟ್ಟಿದ ಹಬ್ಬದ ದಿನದ ಕೆಲವು ನಂಬಿಕೆಗಳು ಆಚರಣೆಗಳು ವಿವಿಧ ದೇಶಗಳಲ್ಲಿ ಬೇರೆ ಬೇರೆ ರೀತಿ ಇವೆ. ಅಮೆರಿಕಾ ಮತ್ತು ಕೆನಡಾದಲ್ಲಿ ಹುಡುಗಿಗೆ ಹದಿನಾರು ತುಂಬಿದರೆ ಅದನ್ನು "ಸಿಹಿ ಹದಿನಾರು" ಎಂದು ಆಚರಿಸುತ್ತಾರೆ. ಸ್ಪೇನ್ ಮತ್ತು ಪೋರ್ಚುಗೀಸರಲ್ಲಿ ಹುಡುಗಿಗೆ 15 ತುಂಬಿದಾಗ ಭರ್ಜರಿಯಾಗಿ ಹುಟ್ಟಿದ ಹಬ್ಬವನ್ನು ಆಚರಿಸುತ್ತಾರೆ. ಹಿಂದೂಗಳಲ್ಲಿ ಮೊದಲನೆಯ ವರ್ಷ ಮಗುವಿಗೆ ಜುಟ್ಟುಬಿಡಿಸಿ ಹುಟ್ಟಿದ ಹಬ್ಬವನ್ನು ಆಚರಿಸುತ್ತಾರೆ. ಫಿಲಿಫಿನ್ನರಲ್ಲಿ ಹುಡುಗಿಗೆ 18 ತುಂಬಿದಾಗ, ಹುಡುಗನಿಗೆ 21 ತುಂಬಿದಾಗ ಹುಟ್ಟಿದ ಹಬ್ಬ ಆಚರಿಸುವುದು ಶ್ರೇಷ್ಠವಂತೆ. ಹೀಗೇ ಒಂದೊಂದು ಕಡೆ ಒಂದೊಂದು ತರಹ.

ಜಗದೀಶ ಚಂದ್ರ ಬಿ ಎಸ್
bsjchandra@gmail.com 7022237041, 9342009886, 7022237041

1 comment:

  1. ಜಿ ಪಿ ರಾಜರತ್ನಂ ಅವರನ್ನು ಯಾರೋ ಕೇಳಿದರಂತೆ – ನಾವು ಕೆಲವರ ಹುಟ್ಟಿದ ದಿನ ವನ್ನು ಸಂಭ್ರಮದಿಂದ ಆಚರಿಸುತ್ತೇವೆ; ಕೆಲವರು ಸತ್ತ ದಿನವನ್ನೂ ಆಚರಿಸುತ್ತೇವೆ – ಏಕೆ? ಅವರ ಉತ್ತರ ಅಸಂಪೂರ್ಣವಾಗಿತ್ತು – ಕೆಲವರು ಹುಟ್ಟಿದ್ದರಿಂದ ಲೋಕೋದ್ಧಾರವಾಯಿತು, ಅದಕ್ಕೇ.. . . . . .

    ReplyDelete