Tuesday, September 19, 2017

ಅಮ್ಮನ ಸೀರೆಯ ಸೆರಗು - ಜಗದೀಶ ಚಂದ್ರ ಬಿ ಎಸ್

ಅಮ್ಮನ ಸೀರೆಯ ಸೆರಗು -  ಜಗದೀಶ ಚಂದ್ರ ಬಿ ಎಸ್ 
ಇಂದಿನ ಮಕ್ಕಳಿಗೆ ಅಮ್ಮನ ಸೆರಗು ಎಂದರೇನು ಅಂತಲೇ ಗೊತ್ತಿಲ್ಲ, ಏಕೆಂದರೆ ಅಮ್ಮ ಸೀರೆ ಉಡುವುದೇ ಇಲ್ಲ . ಹಬ್ಬಕ್ಕೆ, ಸಮಾರಂಭಕ್ಕೆ ಉಡುವ ಸೀರೆಯ ಸೆರಗು ಇದಲ್ಲ. ಅದು ಬಲು ನಾಜೂಕು. ಇದರ ಮಹಿಮೆಯೇ ಬೇರೆ. ಉಪಯೋಗವಂತೂ ಒಂದಕ್ಕಿಂತ ಒಂದು. 
ಮಗು ಅತ್ತರೆ ಕಣ್ಣೊರೆಸಲು ಸೆರಗೇ ಟವೆಲ್. ಮಗುವಿನ ಸಿಂಬಳ, ಕಿವಿಯ ಕೊಳೆ ಒರೆಸಲು ಇದೇ ಕರವಸ್ತ್ರ.
ಮಗು ತೊಡೆಯ ಮೇಲೆ  ಮಲಗಿ ನಿದ್ದೆ ಮಾಡಿದರೆ ಈ ಸೆರಗೇ ಬೀಸಣಿಗೆ, ಚಳಿಯಾದರೆ ಹೊದಿಕೆ.
ಯಾರಾದರೂ ಹೊಸಬರು ಬಂದರೆ ನಾಚುವ ಮಗುವಿಗೆ ಅಮ್ಮನ ಸೆರಗೇ ಬಚ್ಚಿಟ್ಟು ಕೊಳ್ಳಲು ಆಸರೆ. ಜೊತೆಗೆ ಅದರ ಮರೆಯಿಂದಲೇ ಮೆಲ್ಲಗೆ ಕದ್ದು ನೋಡಲೂ ಬಹುದು. 
ಅಮ್ಮನ ಸೆರಗು ಹಿಡಿದು ಬಿಟ್ಟರೆ ಸಾಕು. ಮಗು ಅಮ್ಮನ ಹಿಂದೆ ಜಗವನ್ನೇ  ಸುತ್ತಬಹುದು.
ಮಳೆ ಬಂದು ನೆನೆಯುವ ಸ್ಥಿತಿ ಬಂದರೆ ತಾನು ನೆಂದರೂ ಪರವಾಗಿಲ್ಲ, ಮಗುವಿಗೆ ಸೆರಗಿನ ಆಸರೆ ಖಂಡಿತ. ಹಣೆಯ ಬೆವರು, ನೆಂದ ಒದ್ದೆ ತಲೆ ಇತ್ಯಾದಿಗಳನ್ನು ಒರೆಸಲು ಸೆರಗು ಸದಾ ಸಿದ್ದ.
ತರಕಾರಿ ಅಥವಾ ಯಾವುದಾದರು ಸಾಮಾನು ತರಲು ಚೀಲ ಮರೆತರೆ ಸೆರಗು ಇದ್ದೆ ಇರುತ್ತಿತ್ತು. ಗಿಡದಲ್ಲಿ ಬಿಡುವ ಹೂವ ತರಕಾರಿಗಳಿಗೆ ಸೆರಗೇ ಬುಟ್ಟಿ.
ಮನೆಗೆ ಯಾರಾದರೂ ಇದ್ದಕ್ಕಿದ್ದಹಾಗೆ ಬಂದು ಬಿಟ್ಟಾಗ ಕುರ್ಚಿಯ ಮೇಲೆ ಧೂಳು ಇದ್ದರೆ ಒರೆಸಲು ಸೆರಗೇ ಸಾಧನ.  
ಸಿಟ್ಟು ಬಂದರೆ ಅಥವಾ ಏನಾದರೂ ಮಾಡಲೇ ಬೇಕೆನ್ನುವ ಛಲ ಬಂತೆಂದರೆ ಅಮ್ಮ ಸೆರಗು ಕಟ್ಟಿದಳೆಂದರೆ ಆಯಿತು. ಕೆಲಸ ಆದಂತೆಯೇ. ಅಮ್ಮನೆನಾದರೂ ಸೆರಗು ಕಟ್ಟಿದಳೆಂದರೆ ಅಪ್ಪನೂ ಹೆದರುತ್ತಾನೆ.  ಹಾಗೆಯೇ ಪಂಡರೀಬಾಯಿ ಯಂತಹ  ಅಮ್ಮ ನೇನಾದರೂ ಸೆರಗೊಡ್ಡಿ ಬೇಡಿದಳೆಂದರೆ ಇಂತಹ ಕಲ್ಲು ಮನಸ್ಸೂ ಕರಗಿ ಬಿಡುತ್ತದೆ. 
ಇಂತಹ ಮಹಿಮೆಗಳುಳ್ಳ ಸೆರಗು ಈಗ ಎಲ್ಲಿ ಮಾಯವಾಯಿತು? ದುಪ್ಪಟ್ಟ ಅದನ್ನು ನಿವಾರಿಸಲು ಸ್ವಲ್ಪ ಮಟ್ಟಿಗೆ ಸಹಕಾರಿಯಾದರೂ ಸೆರಗು ಸೆರಗೇ, ದುಪ್ಪಟ್ಟ ದುಪ್ಪಟ್ಟವೇ. ಇಂದಿನವರು ದುಪ್ಪಟ್ಟಾವನ್ನು ಸಹ ಕಿತ್ತು ಎಸಿಡಿದ್ದಾರೆ. ದುಪ್ಪಟ್ಟ ಸಹ ಮೂಲೆ  ಸೇರುತ್ತಿದೆ.
ಅಲ್ಲದೆ ಹೆಂಡತಿಯ ಸೆರಗನ್ನು ಹಿಡಿದು ಸದಾ ಅವಳ ಹಿಂದೆಯೇ ತಿರುಗುವ ಗಂಡ ಎಲ್ಲಿ ಹೋದನೋ? ಸೆರಗೇ ಇಲ್ಲದಿದ್ದ ಮೇಲೆ ಇನ್ನು ಅದನ್ನು ಹಿಡಿವ ಗಂಡನೆಲ್ಲಿ? 

Sunday, September 17, 2017

ಬಿನ್ನಪವ ಸಲ್ಲಿಸುವೆನು/ ಎನ್ನೊಡೆಯ ನಿನಗಿನ್ನು /

ಇದೊಂದು ಹಳೆಯ ಭಕ್ತಿ ಗೀತೆ, ನಮ್ಮ ತಾಯಿಯವರು ಹೇಳುತ್ತಿದ್ದರು ಹಾಗೂ ನಮಗೂ ಹೇಳಿಕೊಟ್ಟಿದ್ದರು. ಇದು ಬಾಗೇಶ್ರೀ ರಾಗದಲ್ಲಿದೆ. ಬಹಳ ಸುಮಧುರವಾಗಿದ್ದು ಕೇಳಲು ಸುಶ್ರಾವ್ಯ ವಾಗಿದೆ.  ಹಾಡಿನ ಸಾಹಿತ್ಯ ಹೀಗಿದೆ.
ಬಿನ್ನಪವ ಸಲ್ಲಿಸುವೆನು/ ಎನ್ನೊಡೆಯ ನಿನಗಿನ್ನು /
ಭಿನ್ನತೆಯಲಡಗಿರ್ಪ/ ಭಿನ್ನತೆಯ ನಳಿಸೆಂದು /ಪ /

ನೀನೆ ಸೃಷ್ಟಿಸಿಹ ಜಗದಿ/ ನಾನೊಂದು ಕ್ರಿಮಿ ದೇವ/
ನೀನೆ ದಯದಿಂ ನೋಡಿ/ ಜ್ಞಾನವನು ನೀಡೆಂದು/೧/

ಅಂಧನಾಗುತೆ ಜಗದಿ/ ಬಂಧನದಿ ಸಿಲುಕಿರ್ಪೆ /
ತಂದೆಯೇ ದಯಗೈಯ್ದು / ಬಂಧನವ ಬಿಡಿಸೆಂದು /೨/

ನಶ್ವರದ ಭಿಕ್ಷೆಯದು / ವಿಶ್ವನಾಥನೆ ಬೇಡ /
ವಿಶ್ವ ಪ್ರೇಮಕೆ ಎನ್ನ / ಈಶ್ವರನ ಮಾಡೆಂದು/೩/

ಚಿನ್ಮಯನೇ ನಿನ್ನಾಮ / ದುನ್ಮಾರ್ಗ ದಿಂದೆನ್ನ/
ದುನ್ಮನೋ ವಾಕ್ಕಾಯ/ ತನ್ಮಯವ ಮಾಡೆಂದು /೪/