Tuesday, September 19, 2017

ಅಮ್ಮನ ಸೀರೆಯ ಸೆರಗು

ಅಮ್ಮನ ಸೀರೆಯ ಸೆರಗು -  ಜಗದೀಶ್  whatsapp ಸಂದೇಶದಿಂದ ಪ್ರೇರಿತ 
ಇಂದಿನ ಮಕ್ಕಳಿಗೆ ಅಮ್ಮನ ಸೆರಗು ಎಂದರೇನು ಅಂತಲೇ ಗೊತ್ತಿಲ್ಲ, ಏಕೆಂದರೆ ಅಮ್ಮ ಸೀರೆ ಉಡುವುದೇ ಇಲ್ಲ . ಹಬ್ಬಕ್ಕೆ, ಸಮಾರಂಭಕ್ಕೆ ಉಡುವ ಸೀರೆಯ ಸೆರಗು ಇದಲ್ಲ. ಅದು ಬಲು ನಾಜೂಕು. ಇದರ ಮಹಿಮೆಯೇ ಬೇರೆ. ಉಪಯೋಗವಂತೂ ಒಂದಕ್ಕಿಂತ ಒಂದು. 
ಮಗು ಅತ್ತರೆ ಕಣ್ಣೊರೆಸಲು ಸೆರಗೇ ಟವೆಲ್. ಮಗುವಿನ ಸಿಂಬಳ, ಕಿವಿಯ ಕೊಳೆ ಒರೆಸಲು ಇದೇ ಕರವಸ್ತ್ರ.
ಮಗು ತೊಡೆಯ ಮೇಲೆ  ಮಲಗಿ ನಿದ್ದೆ ಮಾಡಿದರೆ ಈ ಸೆರಗೇ ಬೀಸಣಿಗೆ, ಚಳಿಯಾದರೆ ಹೊದಿಕೆ.
ಯಾರಾದರೂ ಹೊಸಬರು ಬಂದರೆ ನಾಚುವ ಮಗುವಿಗೆ ಅಮ್ಮನ ಸೆರಗೇ ಬಚ್ಚಿಟ್ಟು ಕೊಳ್ಳಲು ಆಸರೆ. ಜೊತೆಗೆ ಅದರ ಮರೆಯಿಂದಲೇ ಮೆಲ್ಲಗೆ ಕದ್ದು ನೋಡಲೂ ಬಹುದು. 
ಅಮ್ಮನ ಸೆರಗು ಹಿಡಿದು ಬಿಟ್ಟರೆ ಸಾಕು. ಮಗು ಅಮ್ಮನ ಹಿಂದೆ ಜಗವನ್ನೇ  ಸುತ್ತಬಹುದು.
ಮಳೆ ಬಂದು ನೆನೆಯುವ ಸ್ಥಿತಿ ಬಂದರೆ ತಾನು ನೆಂದರೂ ಪರವಾಗಿಲ್ಲ, ಮಗುವಿಗೆ ಸೆರಗಿನ ಆಸರೆ ಖಂಡಿತ. ಹಣೆಯ ಬೆವರು, ನೆಂದ ಒದ್ದೆ ತಲೆ ಇತ್ಯಾದಿಗಳನ್ನು ಒರೆಸಲು ಸೆರಗು ಸದಾ ಸಿದ್ದ.
ತರಕಾರಿ ಅಥವಾ ಯಾವುದಾದರು ಸಾಮಾನು ತರಲು ಚೀಲ ಮರೆತರೆ ಸೆರಗು ಇದ್ದೆ ಇರುತ್ತಿತ್ತು. ಗಿಡದಲ್ಲಿ ಬಿಡುವ ಹೂವ ತರಕಾರಿಗಳಿಗೆ ಸೆರಗೇ ಬುಟ್ಟಿ.
ಮನೆಗೆ ಯಾರಾದರೂ ಇದ್ದಕ್ಕಿದ್ದಹಾಗೆ ಬಂದು ಬಿಟ್ಟಾಗ ಕುರ್ಚಿಯ ಮೇಲೆ ಧೂಳು ಇದ್ದರೆ ಒರೆಸಲು ಸೆರಗೇ ಸಾಧನ.  
ಸಿಟ್ಟು ಬಂದರೆ ಅಥವಾ ಏನಾದರೂ ಮಾಡಲೇ ಬೇಕೆನ್ನುವ ಛಲ ಬಂತೆಂದರೆ ಅಮ್ಮ ಸೆರಗು ಕಟ್ಟಿದಳೆಂದರೆ ಆಯಿತು. ಕೆಲಸ ಆದಂತೆಯೇ. ಅಮ್ಮನೆನಾದರೂ ಸೆರಗು ಕಟ್ಟಿದಳೆಂದರೆ ಅಪ್ಪನೂ ಹೆದರುತ್ತಾನೆ.  ಹಾಗೆಯೇ ಪಂಡರೀಬಾಯಿ ಯಂತಹ  ಅಮ್ಮ ನೇನಾದರೂ ಸೆರಗೊಡ್ಡಿ ಬೇಡಿದಳೆಂದರೆ ಇಂತಹ ಕಲ್ಲು ಮನಸ್ಸೂ ಕರಗಿ ಬಿಡುತ್ತದೆ. 
ಇಂತಹ ಮಹಿಮೆಗಳುಳ್ಳ ಸೆರಗು ಈಗ ಎಲ್ಲಿ ಮಾಯವಾಯಿತು? ದುಪ್ಪಟ್ಟ ಅದನ್ನು ನಿವಾರಿಸಲು ಸ್ವಲ್ಪ ಮಟ್ಟಿಗೆ ಸಹಕಾರಿಯಾದರೂ ಸೆರಗು ಸೆರಗೇ, ದುಪ್ಪಟ್ಟ ದುಪ್ಪಟ್ಟವೇ. ಇಂದಿನವರು ದುಪ್ಪಟ್ಟಾವನ್ನು ಸಹ ಕಿತ್ತು ಎಸಿಡಿದ್ದಾರೆ. ದುಪ್ಪಟ್ಟ ಸಹ ಮೂಲೆ  ಸೇರುತ್ತಿದೆ.
ಅಲ್ಲದೆ ಹೆಂಡತಿಯ ಸೆರಗನ್ನು ಹಿಡಿದು ಸದಾ ಅವಳ ಹಿಂದೆಯೇ ತಿರುಗುವ ಗಂಡ ಎಲ್ಲಿ ಹೋದನೋ? ಸೆರಗೇ ಇಲ್ಲದಿದ್ದ ಮೇಲೆ ಇನ್ನು ಅದನ್ನು ಹಿಡಿವ ಗಂಡನೆಲ್ಲಿ? 

Sunday, September 17, 2017

ಬಿನ್ನಪವ ಸಲ್ಲಿಸುವೆನು/ ಎನ್ನೊಡೆಯ ನಿನಗಿನ್ನು /

ಇದೊಂದು ಹಳೆಯ ಭಕ್ತಿ ಗೀತೆ, ನಮ್ಮ ತಾಯಿಯವರು ಹೇಳುತ್ತಿದ್ದರು ಹಾಗೂ ನಮಗೂ ಹೇಳಿಕೊಟ್ಟಿದ್ದರು. ಇದು ಬಾಗೇಶ್ರೀ ರಾಗದಲ್ಲಿದೆ. ಬಹಳ ಸುಮಧುರವಾಗಿದ್ದು ಕೇಳಲು ಸುಶ್ರಾವ್ಯ ವಾಗಿದೆ.  ಹಾಡಿನ ಸಾಹಿತ್ಯ ಹೀಗಿದೆ.
ಬಿನ್ನಪವ ಸಲ್ಲಿಸುವೆನು/ ಎನ್ನೊಡೆಯ ನಿನಗಿನ್ನು /
ಭಿನ್ನತೆಯಲಡಗಿರ್ಪ/ ಭಿನ್ನತೆಯ ನಳಿಸೆಂದು /ಪ /

ನೀನೆ ಸೃಷ್ಟಿಸಿಹ ಜಗದಿ/ ನಾನೊಂದು ಕ್ರಿಮಿ ದೇವ/
ನೀನೆ ದಯದಿಂ ನೋಡಿ/ ಜ್ಞಾನವನು ನೀಡೆಂದು/೧/

ಅಂಧನಾಗುತೆ ಜಗದಿ/ ಬಂಧನದಿ ಸಿಲುಕಿರ್ಪೆ /
ತಂದೆಯೇ ದಯಗೈಯ್ದು / ಬಂಧನವ ಬಿಡಿಸೆಂದು /೨/

ನಶ್ವರದ ಭಿಕ್ಷೆಯದು / ವಿಶ್ವನಾಥನೆ ಬೇಡ /
ವಿಶ್ವ ಪ್ರೇಮಕೆ ಎನ್ನ / ಈಶ್ವರನ ಮಾಡೆಂದು/೩/

ಚಿನ್ಮಯನೇ ನಿನ್ನಾಮ / ದುನ್ಮಾರ್ಗ ದಿಂದೆನ್ನ/
ದುನ್ಮನೋ ವಾಕ್ಕಾಯ/ ತನ್ಮಯವ ಮಾಡೆಂದು /೪/
Friday, June 2, 2017

ಹುಟ್ಟಿದ ಹಬ್ಬ

ಹುಟ್ಟಿದ ಹಬ್ಬ 

ಜನುಮದಿನ ಅಥವಾ ಹುಟ್ಟಿದ ಹಬ್ಬ ಎಲ್ಲರಿಗೂ ಪರಿಚಿತವೇ. ನಾವು ಚಿಕ್ಕವರಿದ್ದಾಗ ಅದು ಅಷ್ಟಿಲ್ಲವಾದರೂ ಈಗ ಮಕ್ಕಳೇ ಕೇಳಿ ಮಾಡಿಸಿಕೊಳ್ಳುತ್ತಾರೆ. ಇದಕ್ಕೆ ಮುಖ್ಯ ಕಾರಣ ಏನಾದರೂ ಉಡುಗೊರೆ ಬರುತ್ತದೆ, ಅಂದು ಸಿಹಿತಿಂದು, ಉಂಡು ಅರಾಮವಾಗಿರಬಹುದು ಎಂಬುದು. ಈ ಜನುಮದಿನದಲ್ಲೂ ವ್ಯತ್ಯಾಸಗಳುಂಟು. ಇಂಗ್ಲಿಷ್ ಕ್ಯಾಲೆಂಡರ್‍ದು, ಹಿಂದೂ ಪಂಚಾಂಗದ್ದು, ನಿಜವಾದ ಜನ್ಮದಿನ, ಶಾಲೆಗೆ ಸೇರಿಸುವಾಗ ಕೊಟ್ಟಿದ್ದು ಇತ್ಯಾದಿ. ಇದನ್ನು ಜನ್ಮದಿನ ಆಚರಿಸುವವರು ತಮ್ಮ ಅನುಕೂಲಕ್ಕೆ ತಕ್ಕಂತೆ ಹೇಳುತ್ತಾರೆ. ಇಲ್ಲಿ ನನ್ನ ಮಿತ್ರರೊಬ್ಬರಿದ್ದಾರೆ. ಅವರು, ಜನ್ಮದಿನ ಆಚರಿಸಿದರೆ ಇನ್ನೆಲ್ಲಿ ಖರ್ಚಾಗುವುದೋ ಎಂದು ಇಂಗ್ಲಿಷ್‍ದು ಬಂದರೆ ಹಿಂದೂ ಪಂಚಾಂಗ ಎಂದು, ಹಿಂದೂದು ಬಂದಾಗ ಇಂಗ್ಲಿಷ್‍ದು ಎಂದು ಯಾಮಾರಿಸಿಬಿಡುತ್ತಾರೆ. ಇನ್ನೊಬ್ಬರದಂತೂ ಏಕಮಾರ್ಗ. ಉಡುಗೊರೆಗೆ ಎರಡೂ ಇರುತ್ತದೆ. ಆಚರಣೆಗೆ ಯಾವುದಾದರೂ ಒಂದು ಮಾತ್ರ. ಒಮ್ಮೊಮ್ಮೆ ಅದೂ ಇಲ್ಲ. ಕೆಲವು ಸಿರಿವಂತರು ಅಥವಾ ಮೆರೆಯುವ ಸ್ವಭಾವ ವಿರುವವರು ಎಲ್ಲವನ್ನೂ ಆಚರಿಸುತ್ತಾರೆ. ಅವರಿಗೆ ದುಡ್ಡು ಖರ್ಚಾದರೂ ಚಿಂತಿಲ್ಲ, ತಾವು ಮಾತ್ರ ಅಲಂಕಾರ ಮಾಡಿಕೊಂಡು, ಆಡಂಬರದಿಂದ ಎಲ್ಲರ ಮುಂದೆ ಮೆರೆಯಬೇಕು.
ಹುಟ್ಟಿದ ಹಬ್ಬದ ಆಚರಣೆಯೂ ಒಬ್ಬೊಬ್ಬರದು ಒಂದೊಂದು ರೀತಿ. ಕೆಲವರು ಅಂದು ತಲೆಗೆ ಸ್ನಾನ ಮಾಡಿ ಎರೆದುಕೊಂಡು, ದೇವರಿಗೆ, ಮನೆಯ ಹಿರಿಯರಿಗೆ ನಮಸ್ಕರಿಸಿ ಆಶಿರ್ವಾದ ಪಡೆದು ನಂತರ ದೇವರಿಗೆ ಅರ್ಚನೆ ಮಾಡಿಸಿ ನಂತರ ಮನೆಯಲ್ಲಿ ಸಿಹಿ ಭಕ್ಷ್ಯಗಳನ್ನು ಮಾಡಿಸಿ ಎಲ್ಲರಿಗೂ ಬಡಿಸಿ, ತಾವೂ ತಿಂದು ತೃಪ್ತ ರಾಗುತ್ತಾರೆ. ಇನ್ನು ಕೆಲವರು ಜನ್ಮದಿನವೂ ಎಂದಿನಂತೆ ಇನ್ನೊಂದು ದಿನ ಎನ್ನುವಂತೆ ನಿರ್ಲಿಪ್ತರಾಗಿರುತ್ತಾರೆ. ನಾವು ಚಿಕ್ಕವರಿದ್ದಾಗ ನಮಗೆ ನಮ್ಮ ಹುಟ್ಟಿದ ಹಬ್ಬ ಬಂತು ಎಂದು ಗೊತ್ತಾಗುತ್ತಲೇ ಇರಲಿಲ್ಲ. ಮನೆಯಲ್ಲಿ ಅಮ್ಮ ಅಂದು ಸಿಹಿತಿಂಡಿಂiÀiನ್ನು ಮಾಡಿ ಹೇಳಿದಾಗಲೇ ಗೊತ್ತಾಗುತ್ತಿದ್ದುದು. ಉಳಿದವರಾರು ಇಂದಿನಂತೆ ಭರ್ಜರಿಯಾಗಿ ಆಚರಣೆ ಮಾಡಿಕೊಳ್ಳುತ್ತಿರಲಿಲ್ಲವಾದ್ದರಿಂದ ನಮ್ಮಿಂದ ಆಕ್ಷೇಪಣೆಗೆ ಅವಕಾಶವೇ ಇರುತ್ತಿರಲಿಲ್ಲ. ಇಂದಿನ ದಿನಗಳಲ್ಲಿ ಮಕ್ಕಳಿಗೆ ಒಂದು ವರ್ಷದಿಂದಲೇ ಅದ್ದೂರಿಯಾಗಿ ಹುಟ್ಟಿದ ಹಬ್ಬವನ್ನು ಆಚರಿಸುವ ಪರಿಪಾಠ ಬೆಳೆಸಿಬಿಡುತ್ತಾರೆ. ಮಕ್ಕಳಿಗೂ ಉಡುಗೊರೆಯ ಹುಚ್ಚು ಬೆಳೆದು, ನಂತರ ಆಡಂಬರ, ಮೆರೆದಾಟ ಎಲ್ಲವೂ ಸೇರಿ ಹುಟ್ಟಿದ ಹಬ್ಬವೆಂದರೆ ಹೀಗೆ ಇರಬೇಕು ಎಂದು ತಾವೇ ಒಂದು ಪರಿಧಿಯನ್ನು ನಿರ್ಮಿಸಿಕೊಂಡುಬಿಡುತ್ತಾರೆ. 
ಅಂದು ಕೆಲವು ಶಾಲೆಗಳಲ್ಲೂ ಹುಟ್ಟುಹಬ್ಬ ಆಚರಿಸುವವರಿಗೆ ಸಮವಸ್ತ್ರದಿಂದ ರಿಯಾಯಿತಿ. ಅವರು ಬಣ್ಣದ ಬಟ್ಟೆ ತೊಡಬಹುದು. ಹಾಗಿದ್ದಲ್ಲಿ ಮನೆಯಲ್ಲಿ ಇರುವ ಬಟ್ಟೆಯನ್ನೇ ತೊಡಲಾಗುತ್ತದೆಯೇ? ಇಲ್ಲ, ಅವರಿಗೆ ಅಂದು ಹೊಸಬಟ್ಟೆಯೇ ಆಗಬೇಕು. ಇದ್ದುದರಲ್ಲೇ ಹೊಸ ಬಟ್ಟೆ ಹಾಕಿದರೂ, ಗೆಳೆಯ ಗೆಳತಿಯರು ನಕ್ಕು ಬಿಟ್ಟರೆ? ಜನ್ಮದಿನಕ್ಕೂ ಹೊಸಬಟ್ಟೆ ತೆಗೆದುಕೊಳ್ಳುವುದಿಲ್ಲ ಎಂದು ಆಡಿಕೊಂಡು ಬಿಟ್ಟರೆ? ಹೀಗೆ ಏನೇನೋ ಕಾರಣದಿಂದ ಅಂದು ಹೊಸಬಟ್ಟೆಯೇ ಆಗಬೇಕು. ಇಲ್ಲವಾದಲ್ಲಿ ಮನೆಯಲ್ಲಿ ಹಟ, ರಾದ್ಧಾಂತ, ರಾಮಾಯಣ ಇದ್ದದ್ದೇ. ದೊಡ್ಡಹೆಸರು ಪಡೆದಿರುವ ಆಡಂಬರದ ಶಾಲೆಗೆ ಕಷ್ಟಪಟ್ಟು ಸೇರಿಸಿರುವ ಬಡತಂದೆ ತಾಯಿಗಳಿಗೆ ಇದರ ಪೆಟ್ಟು ಬೀಳುವುದು ಖಂಡಿತಾ. ಅಲ್ಲಿ ಓದುವ ಮಕ್ಕಳಿಗೆ ತಂದೆ ತಾಯಿಗಳ ಪರದಾಟ ಗೊತ್ತಾಗುವುದಿಲ್ಲ, ಕೆಲವರಿಗೆ ಗೊತ್ತಾದರೂ ಅವರ ಮಕ್ಕಳಾಗಿ ಹುಟ್ಟಿದ್ದಕ್ಕೆ ನಮಗಾಗಿ ಖರ್ಚುಮಾಡಲೀ ಎಂಬ ಧೋರಣೆಯೂ ಇರುತ್ತದೆ. ಹೀಗಾಗಿ ಮನೆಯಲ್ಲಿ ಜಗಳ, ಮನಸ್ತಾಪ, ಆಕ್ಷೇಪಣೆ, ಮಕ್ಕಳಿಗಾಗಿ ತಂದೆ ತಾಯಿಗಳಲ್ಲಿ ಜಗಳ ಹೀಗೆ ಏನೇನೋ ರೀತಿಯಲ್ಲಿ ರಾಮಾಯಣ, ಮಹಾಭಾರತಗಳು ನಡೆಯುತ್ತಿರುತ್ತವೆ. ಕೆಲವೊಮ್ಮೆ ಅದು ತಾತ್ಕಾಲಿಕವಾಗಿಯೂ ಇರಬಹುದು, ಕೆಲವೊಮ್ಮೆ ಅದು ಹಾಗೆಯೇ ಮುಂದುವರೆದು ಸಂಬಂಧಗಳು ಎಣ್ಣೆಸೀಗೆಕಾಯಿಯಾಗಿಯೇ ಉಳಿದಿರುವ ಉದಾಹರಣೆಗಳೂ ಇವೆ.
ಕಾಲೇಜಿನ ವಿದ್ಯಾರ್ಥಿಗಳು ಆಚರಿಸುವ ಹುಟ್ಟಿದ ಹಬ್ಬ ಮಕ್ಕಳದ್ದಕ್ಕಿಂತ ಭಿನ್ನ. ಅವರದು ಹೋಟೆಲ್, ಸಿನಿಮಾ ಇತ್ಯಾದಿ. ಇಲ್ಲಿ ಮತ್ತೆ ಬಡವರ ಮಕ್ಕಳಿಗೆ ಒಂದು ರೀತಿಯ ಪೀಕಲಾಟ. ನನಗೆ ಇವೆಲ್ಲ ಆಗುವುದಿಲ್ಲ ಎಂದೂ ಹೇಳಲಾರರು, ಮಾಡಬೇಕು ಎಂದರೆ ಕೈಲಾಗುವುದಿಲ್ಲ. ಈ ಸಂಧಿಗ್ಧದಿಂದ ಅವರ ಮಾನಸಿಕ ತೊಳಲಾಟ ಹೇಳಲಸಾಧ್ಯ. ನನಗೆ ಅನ್ನಿಸುವ ಮಟ್ಟಿಗೆ ಗೆಳೆಯರಿಗೆ ಇದ್ದುದನ್ನು ಹೇಳಿ, ತಮ್ಮ ಮನೆಯ ಸ್ಥಿತಿಯನ್ನು ಹೇಳಿಬಿಟ್ಟರೆ ನೆಮ್ಮದಿ, ನಿರಾಳ. ಅವರ ಮುಂದೆ ಇಲ್ಲದ ಸೋಗು ಹಾಕಿಕೊಂಡು ಒದ್ದಾಡುವ ಪ್ರಮೇಯ ಇರುವುದಿಲ್ಲ. ಒಂದು ಬಾರಿ ಹೇಳಿದ ನಂತರ ಮುಂದೆ ಯಾರೂ ಇಂತಹ ವಿಷಯಗಳಲ್ಲಿ ಬಲವಂತ ಮಾಡುವುದಿಲ್ಲ. ಆದರೆ ನಾವಿರುವುದೇ ಹೀಗೆ ಎಂಬ ಧೃಢಮನಸ್ಸು ಇರಬೇಕು. ಈ ಕಾಲೇಜು ಹುಡುಗರಲ್ಲಿ ಒಂದು ವಿಚಿತ್ರ ಪದ್ಧತಿ ಇದೆ. ಅದು ಜನ್ಮದಿನ ಆಚರಿಸುವ ಹುಡುಗನನ್ನು ನಾಲ್ಕು ಜನ ಕೈ ಕಾಲು ಹಿಡಿದು ಎತ್ತಿ ಉಳಿದ ಹುಡುಗರು ಕಾಲುಗಳಿಂದ ಒದೆಯುವುದು. (ಹುಟ್ಟಿದ ಹಬ್ಬದ ಒದೆಗಳು) ಈ ಅಮಾನುಷ ಪದ್ಧತಿಯನ್ನು ಅದ್ಯಾರು ತಂದರೋ, ಅದನ್ನು ಹಾಗೆಯೇ ಆಚರಿಸುವ ಈ ಹುಡುಗರಿಗೆ ಅದೆಂದು ಬುದ್ಧಿ ಬರುತ್ತದೋ ದೇವರೇ ಬಲ್ಲ. ನಾವು ಶುಭಕಾರ್ಯಗಳಿಗೆ ದೀಪ ಹಚ್ಚುವ ಕೆಲಸ ಮಾಡಿದರೆ ಈ ಪಾಶ್ಚಾತ್ಯ ರೀತಿಯಲ್ಲಿ ದೀಪ ಆರಿಸುವ ಹಾಗೂ ಹೀಗೆ ಕತ್ತೆಗಳಂತೆ ಒದೆಯುವ ಪದ್ಧತಿ. ಇದನ್ನು ಆಚರಿಸುವವವರಿಗೂ ಬುದ್ಧಿಬೇಡವೇ? 
ಬಲು ಚಿಕ್ಕ ಮಕ್ಕಳ ಜನ್ಮದಿನವೇ ಬೇರೆಯ ರೀತಿ. ಅವಕ್ಕೆ ಬುದ್ದಿಬಲಿತಿರುವುದಿಲ್ಲ. ನಿದ್ದೆ ಬಂದರೆ ನಿದ್ದೆ ಮಾಡಿಬಿಡುತ್ತವೆ. ದುಃಖವಾದರೆ ಜೋರಾಗಿ ಅತ್ತುಬಿಡುತ್ತವೆ. ಅದರ ಅಪ್ಪ ಅಮ್ಮಂದಿರೋ ಅನೇಕ ಜನರನ್ನು ಹಚ್ಚಿಕೊಂಡು ಅವರನ್ನು ಉಪಚರಿಸುವುದರಲ್ಲೇ ಮಗ್ನರಾಗಿ ಮಕ್ಕಳನ್ನೇ ಮರೆತುಬಿಟ್ಟಿರುತ್ತಾರೆ. ಆ ಮಕ್ಕಳಿಗೆ ಅಪ್ಪ ಅಮ್ಮಂದಿರ ಒಡನಾಟ ತಪ್ಪಿದ ದುಃಖ, ಬಂದವರೆಲ್ಲಾ ಮಾತಾಡಿಸುವಾಗ ಆಗುವ ಭಯ, ಮುಜುಗರ (ನಾವು ಕೆಲವರಂತೂ ಆ ಮಕ್ಕಳಿಗೆ ರಾಕ್ಷಸರಂತೆ ಕಾಣಿಸುತ್ತೀವೇನೋ) ಹೀಗಾಗಿ ಗೊಳೋ ಎಂದು ಸೂರು ಕಿತ್ತುಹೋಗುವಂತೆ ಕಿರುಚಿ ಅಳುತ್ತಿರುತ್ತವೆ. ಅದನ್ನು ಸಮಾಧಾನ ಪಡಿಸಲು ಅದರ ಚಿಕ್ಕ ಅಕ್ಕನೋ, ಅಣ್ಣನೋ ಏನೇನೋ ಕೋತಿ ಚೇಷ್ಟೆಗಳನ್ನು ಮಾಡಿ ಮತ್ತಷ್ಟು ಕಿರುಚಿರುತ್ತಿರುತ್ತವೆ. ಅವುಗಳನ್ನು ಸುಮ್ಮನಿರೋ ಎಂದು ಅದರ ಅಜ್ಜಿಯೋ, ದೊಡ್ಡಮ್ಮನೋ ಇನ್ನಷ್ಟು ಕಿರುಚಾಡುತ್ತಿರುತ್ತಾರೆ. ಹೀಗೆ ಅಲ್ಲಿ ನಡೆಯುವ ರಂಪ, ರಾದ್ಧಾಂತಗಳಿಂದ ಬಂದವರಿಗೆ, ಆ ಮಗುವಿಗೆ, ಅದರ ಅಪ್ಪ ಅಮ್ಮನಿಗೆ ತಲೆ ಚಿಟ್ಟು ಹಿಡಿದುಬಿಟ್ಟಿರುತ್ತದೆ. ಜೊತೆಗೆ ಇತರ ಮಕ್ಕಳ ಕಿರುಚಾಟ, ಅರಚಾಟ, ಆಟ, ಓಟ, ದೊಡ್ಡವರ ಸಡಗರ, ಸಂಭ್ರಮ, ಗಡಿಬಿಡಿ. ಒಟ್ಟಿನಲ್ಲಿ ಅದು ಹುಟ್ಟಿದ ಹಬ್ಬವೋ ಗದ್ದಲದ ಗೊಂದಲ ಕೂಟವೋ ಎಂದು ಅನುಮಾನ ಬಂದುಬಿಡುತ್ತದೆ. ಆದರೂ ಅದು ಅನೇಕರಿಗೆ ಬೇಕು. ಎಷ್ಟಾದರೂ ಅದು ತಮ್ಮ ದೌಲತ್ತನ್ನು ತೋರ್ಪಡಿಸಲು ಸಿಗುವ ಒಂದು ಅವಕಾಶವಲ್ಲವೇ. ಕೆಲವರಂತೂ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಮುಡಿಯುವ ಜಾತಿಯವರು. ತಮ್ಮ ಕುಟುಂಬದ ಇನ್ನಾರೋ ಮಾಡಿದರು, ನಾನೇನು ಕಡಿಮೆ ಎಂದು ಸ್ಪರ್ಧೆಗೆ ನಿಂತು ಹಣ ಸುರಿಯುತ್ತಾರೆ. ಉಳಿತಾಯ, ಸರಳತೆ ಎಂಬ ಪದಗಳಿಗೆ ಇಲ್ಲಿ ಜಾಗವೇ ಇಲ್ಲ. 
ನನಗಂತೂ ಹುಟ್ಟಿದ ಹಬ್ಬವನ್ನು ಆಚರಿಸಿಕೊಂಡದ್ದು ನೆನಪೆ ಇಲ್ಲ. ಹುಡುಗರೆಲ್ಲಾ ನಿಮ್ಮ ಹುಟ್ಟಿದ ಹಬ್ಬದ ದಿನಾಂಕವನ್ನು ಕೇಳಿದಾಗ ಮಾತು ಮರೆಸಿ ತಪ್ಪಿಸಿಕೊಂಡು ಬಿಡುತ್ತಿದ್ದೆ. ಆದರೆ ನನಗೆ ಸುಮಾರು 55 ವರ್ಷವಾದ ಮೇಲೆ, ನನ್ನ ಸಹೋದ್ಯೋಗಿಗಳು ನನ್ನ ಹುಟ್ಟಿದ ಹಬ್ಬದ ದಿನಾಂಕವನ್ನು ನೆನಪಿನಲ್ಲಿಟ್ಟುಕೊಂಡು ತಾವೇ ಕೇಕುತಂದು ಆಚರಿಸುತ್ತಿದ್ದರು. ನನಗೋ ಒಂದು ರೀತಿಯ ಮುಜುಗರ. ಇನ್ನು ಕೆಲವು ಬಾರಿ ಒಂದೇ ತಿಂಗಳಲ್ಲಿ ಹುಟ್ಟಿದ ಮೂರುನಾಕು ಜನರನ್ನು ಒಟ್ಟಿಗೆ ಕಲೆಹಾಕಿ ಅವರೆಲ್ಲರೂ ಸೇರಿ ಯಾವುದಾದರೂ ಭರ್ಜರಿ ಹೊಟೆಲ್ ನಲ್ಲಿ ಊಟ ಹಾಕಿಸಬೇಕು ಎಂದು ತಾಕೀತುಮಾಡಿದ್ದರು. ಅದೂ ಒಂದೆರಡುಬಾರಿ ನಡೆಯಿತು. ಅಂತೂ ಹುಟ್ಟಿದ ಹಬ್ಬದ ನೆಪದಲ್ಲಿ ಸಂಭ್ರಮವೋ ಸಂಭ್ರಮ. ನನ್ನ ಅರವತ್ತರ ಹುಟ್ಟುಹಬ್ಬವಂತೂ ಹುಡುಗರು, ಸಹೋದ್ಯೋಗಿಗಳು ಸೇರಿ ಭರ್ಜರಿಯಾಗಿಯೇ ಮಾಡಿಬಿಟ್ಟರು. ಒಂದು ದೊಡ್ಡ ಕೇಕು, 60 ಎಂದು ಬರೆದಿರುವ ಒಂದು ಮೇಣದ ಬತ್ತಿ, ಹುಡುಗರಿಗೆಲ್ಲಾ ತಿಂಡಿ, ಹೀಗೆ ಏನೇನೋ. ನಾವು ಉಳಿತಾಯ, ಸರಳತೆ ಎಂದು ವೇದಾಂತ ನುಡಿಯುತ್ತಿದ್ದರೆ ಅವರು ಹೌದು ಹೌದು ಎಂದು ಗೋಣಾಡಿಸುತ್ತಲೇ, ತಮಗೆ ಏನು ಬೇಕೋ ಅವೆಲ್ಲವನ್ನು ನನಗೆ ತಿಳಿಯದಂತೆ ಮಾಡಿ, ಮೆಲ್ಲಗೆ ನನ್ನನ್ನು ಅಲ್ಲಿಗೆ ಕರೆದು ಕೊಂಡು ಹೋಗಿ ನನಗೆ ಅಘಾತ, (ಅವರಿಗೆ ಅದು ಒಂದು ಆಶ್ರ್ಚಯವಂತೆ) ತಂದಿಟ್ಟುಬಿಟ್ಟರು. ಇನ್ನು ಕೆಲವು ಹುಡುಗರಂತೂ ಸರ್, ನಿಮ್ಮನ್ನು ಎತ್ತಿ ಹುಟ್ಟಿದ ಹಬ್ಬದ ಒದೆಗಳನ್ನು ಕೊಡಬಹುದೆ? ಎಂದು ಕೇಳಿದರು. ನಾನು, "ನನಗೆ 60 ವರ್ಷಕ್ಕೇ ಶಾಂತಿಮಾಡಿ, ಸ್ವರ್ಗಕ್ಕೋ ನರಕಕ್ಕೋ ಕಳುಹಿಸಬೇಕೆಂದಿದ್ದರೆ ಮಾಡಿ" ಎಂದೆ. ಸಧ್ಯ ಅವರು ಮನಸ್ಸು ಮಾಡಲಿಲ್ಲ. ಎಲ್ಲರೂ ಸೇರಿ ನಾವು ಮಾಡಿಯೇ ತೀರುತ್ತೇವೆ ಎಂದಿದ್ದರೆ ನನಗೇನೂ ಮಾಡಲಾಗುತ್ತಿರಲಿಲ್ಲ. ಒದೆಸಿಕೊಂಡು ಬಿದ್ದಿರಬೇಕಿತ್ತು ಅಥವಾ ಹುಟ್ಟಿದ ದಿನವೆ ಸ್ವರ್ಗಕ್ಕೆ (ನರಕಕ್ಕೂ ಇರಬಹುದು) ಹೋದ ಪ್ರೊಫೆಸರ್ ಮಹಾಶಯ ಎಂದು ಖ್ಯಾತನಾಗುತ್ತಿದ್ದೆನೋ ಏನೋ. ಆದರೆ ನಮ್ಮ ಹುಡುಗ, ಹುಡುಗಿಯರು ತುಂಬಾ ಒಳ್ಳೆಯವರು, ನಾನೆಂದರೆ ತುಂಬಾ ಗೌರವ. ಹಿಗಾಗಿ ತಪ್ಪಿಸಿಕೊಂಡೆ. ಜೊತೆಗೆ ಅವರು ನನಗೆ ತಿಳಿಯದ ಹಾಗೆ ಒಂದು ಪೋóಟೋ ಹಿಡಿದು ಅದನ್ನು ನೋಡಿಕೊಂಡು ಒಂದು ಸುಂದರವಾದ ಚಿತ್ರವನ್ನು ಪೆನ್ಸಿಲಿನಿಂದ ಬರೆದು ಅದಕ್ಕೆ ಕಟ್ಟು ಹಾಕಿಸಿ ನನಗೆ ಕೊಟ್ಟಿದ್ದಾರೆ. ಜೊತೆಗೆ ತಾವೇ ಮಾಡಿದ ಒಂದು ಸುಂದರ ಕಲಾಕೃತಿಯನ್ನು ನೀಡಿದ್ದಾರೆ. ಒಂದು ದೊಡ್ಡ ಶುಭಾಶಯ ಪತ್ರ ಬರೆದು ಅದರಲ್ಲಿ ಎಲ್ಲರೂ ತಮ್ಮ ಸುಂದರವಾದ ಬರವಣಿಗೆಯಲ್ಲಿ ನನ್ನನ್ನು ಹೊಗಳಿದ್ದಾರೆ. ಇದು ನಿಜವೇನ್ರೋ ಎಂದರೆ ನೂರಕ್ಕೆ ನೂರು ಸರ್ ಎನ್ನುತ್ತಾರೆ. ನಾನಂತು ಅವರಿಗೆ ಎಂದೂ ಕೆಟ್ಟದ್ದು ಮಾಡಿಲ್ಲ, ಕೇಡೂ ಬಯಸಿಲ್ಲ, ತಪ್ಪು ಮಾಡಿದಾಗ ಮಾತ್ರ ಒಂದಿಷ್ಟು ಬಯ್ದಿರಬಹುದು, ಅದ್ದರಿಂದ ಅದು ನಿಜವಿರಲೂ ಬಹುದು ಎಂದು ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತೇನೆ. 
ಇನ್ನು ಹುಟ್ಟಿದ ಹಬ್ಬ ಎಂದಾಗ ಈ ಒಂದು ನೀತಿಕತೆ ನೆನಪಾಗುತ್ತದೆ. ಒಬ್ಬ ಶ್ರೀಮಂತನಿರುತ್ತಾನೆ. ಅವನು ತನ್ನ ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಟ್ಟಿರುತ್ತಾನೆ. ಅವಳ ಹುಟ್ಟಿದ ಹಬ್ಬದಂದು ಒಂದು ಸುಂದರವಾದ ಹೂಗುಚ್ಛವನ್ನು ನೀಡಿದರೆ ತನ್ನ ಕರ್ತವ್ಯ ಮುಗಿಯಿತು ಎಂದುಕೊಂಡಿರುತ್ತಾನೆ. ತನ್ನ ತಾಯಿಯ ಭಾವನೆಗಳನ್ನು ಅವನು ಎಂದಿಗೂ ಅರ್ಥಮಾಡಿಕೊಂಡೇ ಇರುವುದಿಲ್ಲ. ಹೀಗೆ ಒಮ್ಮೆ ಅವನು ಹೂಗುಚ್ಛವನ್ನು ಕೊಳ್ಳುತ್ತಿರುವಾಗ ಬಡತನವೇ ಮೈವೆತ್ತಿದಂತಹ ಒಬ್ಬ ಪುಟ್ಟ ಬಾಲಕಿ ಬಂದು ತನಗೆ ಕೇವಲ ಒಂದು ಗುಲಾಬಿಯನ್ನು ಕೊಡಿಸಿ ಎಂದು ದುಂಬಾಲು ಬೀಳುತ್ತಾಳೆ. ಅವನು ಒಲ್ಲದ ಮನಸ್ಸಿನಿಂದ ಅದನ್ನು ಕೊಡಿಸಿ, ಅದನ್ನು ಏನು ಮಾಡುತ್ತಾಳೋ ಎಂದು ಕುತೂಹಲದಿಂದ ಅವಳನ್ನು ಹಿಂಬಾಲಿಸಿ ನೋಡಿದಾಗ, ಆ ಹುಡುಗಿ ಅದನ್ನು ತೆಗೆದುಕೊಂಡು ಹೋಗಿ ತನ್ನ ತಾಯಿಯ ಗೋರಿಯಮೇಲೆ ಇಟ್ಟು ತನ್ನ ಪ್ರೇಮವನ್ನು ತೋರಿಸುತ್ತಾಳೆ. ಆಗ ಇವನಿಗೆ ಬದುಕಿರುವ ತನ್ನ ತಾಯಿಯ ಹುಟ್ಟಿದ ಹಬ್ಬಕ್ಕೆ ತಾನು ಇದುವರೆಗೂ ಏನು ಮಾಡುತ್ತಿದ್ದೆನಲ್ಲಾ ಎಂದು ಪಶ್ಚಾತ್ತಾಪವಾಗಿ ತನ್ನ ತಾಯಿಯ ಬಳಿಗೆ ತಾನೇ ಹೋಗಿ ಶುಭಾಶಯವನ್ನು ಕೋರಿ ನಂತರ ಅವಳನ್ನು ಮನೆಯಲ್ಲಿಯೇ ಇರಿಸಿಕೊಳ್ಳುತ್ತಾನೆ. ಅಂತೂ ಒಂದು ಹುಟ್ಟಿದ ಹಬ್ಬ ಅವನ ಕಣ್ಣನ್ನು ತೆರೆಸುತ್ತದೆ. 
ಇನ್ನು ಕೆಲವರು ಹುಟ್ಟಿದ ಹಬ್ಬದ ನೆನಪಿಗೆ ಯಾವುದಾದರೂ ಅನಾಥಾಶ್ರಮಕ್ಕೆ ಅವರ ಹೆಸರಿನಲ್ಲಿ ಅನ್ನ ದಾನ ಮಾಡಲು ಹಣವನ್ನು ನೀಡಿರುತ್ತಾರೆ. ಕೆಲವರು ಬದುಕಿಲ್ಲದ ತಮ್ಮ ತಂದೆ ತಾಯಿಯರ ಹುಟ್ಟಿದ ಹಬ್ಬಕ್ಕೂ ಇಂತಹ ದಾನ ಮಾಡುತ್ತಾರೆ. ಇಂತಹವರು ಇರುವುದರಿಂದಲೇ ನಮ್ಮ ಭಾರತೀಯತೆ, ಸಂಸ್ಕøತಿ ಇವುಗಳು ಇಂದಿಗೂ ಉಳಿದುಕೊಂಡಿರುವುದು. 
ಸಿನಿಮಾಗಳಲ್ಲಿ ಹುಟ್ಟಿದ ಹಬ್ಬವನ್ನು ಆಚರಿಸುವುದೇ ಒಂದು ರೀತಿ. ಅಂದು ನಾಯಕ ಪಿಯಾನೋ ನುಡಿಸುತ್ತಾ ಒಂದು ವಿರಹ ಗೀತೆಯನ್ನು ಹೇಳುತ್ತಾನೆ. ನಾಯಕಿ ಯಾರಿಗೂ ಕಾಣದ ಹಾಗೆ ದುಃಖವನ್ನು ನುಂಗಿ ಒಳಗೊಳಗೆ ಅಳುತ್ತಾಳೆ. ಮಕ್ಕಳ ಹುಟ್ಟಿದ ಹಬ್ಬವಾದರೆ ಎಲ್ಲಾ ಮಕ್ಕಳನ್ನೂ ಸೇರಿಸಿ ಹಾಡಿಸಿ, ಕುಣಿಸಿ ಎಲ್ಲಾ ಮಕ್ಕಳು ಹುಟ್ಟಿದ ಹಬ್ಬವನ್ನು ಹಾಗೇಯೇ ಆಚರಿಸುವಂತೆ ಒಂದು ಪದ್ಧತಿಯನ್ನು ತಂದು ಬಿಡುತ್ತಾರೆ. ಒಟ್ಟಿನಲ್ಲಿ ಸಿನಿಮಾದಲ್ಲಿ ಹುಟ್ಟಿದ ಹಬ್ಬ ಎಂದರೆ, ಗೋಳು, ಆಡಂಬರ, ವೇದನೆ, ವಿರಹ, ಹುಡುಗಾಟ, ಕುಣಿದಾಟ ಎಲ್ಲವೂ ಮೇಳೈಸಿರುತ್ತದೆ.
ಹುಟ್ಟಿದ ಹಬ್ಬದ ದಿನ ಏಕೆ ಮೇಣದ ಬತ್ತಿ ಹಚ್ಚಿ ನಂತರ ಅದನ್ನು ಆರಿಸುತ್ತಾರೆ ಎಂದು ನಾನು ಅನೇಕರನ್ನು ಕೇಳಿದೆ. ಎಲ್ಲರೂ ಗೊತ್ತಿಲ್ಲ, ಏಲ್ಲರೂ ಹಾಗೇ ಮಾಡುತ್ತಾರೆ ನಾವೂ ಹಾಗೇ ಮಾಡುತ್ತೇವೆ ಎಂದರೇ ಹೊರತು ಒಬ್ಬರೂ ಸರಿಯಾದ ಉತ್ತರ ನೀಡಲಿಲ್ಲ. ಅಂತೂ ಅದರ ಕಾರಣವನ್ನು ನಾನೇ ಶೋಧಿಸಬೇಕಾಯಿತು. ನಿಮಗೇನಾದರೂ ಗೊತ್ತೇ? ಖಂಡಿತ ಗೊತ್ತಿರಲಿಕ್ಕಿಲ್ಲ. ನಾನೇ ಹೇಳಿಬಿಡುತ್ತೇನೆ, ಕೇಳಿ ನಕ್ಕುಬಿಡಿ. ದೀಪ ಹಚ್ಚಿದ ಕೂಡಲೇ ಏನಾದರೂ ಪ್ರಾರ್ಥಿಸಿ ನಂತರ ದೀಪ ಆರಿಸಿದಾಗ ಬರುವ ಹೊಗೆಯು ನಿಮ್ಮ ಪ್ರಾರ್ಥನೆಯನ್ನು ದೇವರಬಳಿಗೆ ತೆಗೆದುಕೊಂಡು ಹೋಗುತ್ತದೆಯಂತೆ. ಇದು ನಮ್ಮ ಭಾರತೀಯ ಪದ್ಧತಿಯಾಗಿದ್ದಿದ್ದರೆ ಇದೆಂಥ ಮೂಢನಂಬಿಕೆ ಎಂದು ಗೇಲಿಮಾಡಿ, ಅದಕ್ಕೆ ಒಂದಿಷ್ಟು ಕೊಂಕುನುಡಿದು ರಂಪ ಮಾಡಿರುತ್ತಿದ್ದರು, ನಮ್ಮ ಬುದ್ಧಿಜೀವಿಗಳು. ಆದರೆ ಅದೇಜನ ಈಗಲೂ ಇದನ್ನೇ ಕುರಿಗಳಂತೆ ಅನುಸರಿಸುತ್ತಿದ್ದಾರೆ. ಒಬ್ಬರಾದರೂ ಇದರ ಅರ್ಥ ತಿಳಿದುಕೊಳ್ಳಲು ಪ್ರಯತ್ನಿಸಿಲ್ಲ. ಇದಕ್ಕಿಂತಾ ದೀಪ ಹಚ್ಚುವುದು ಎಂದರೆ ಕತ್ತಲನ್ನು ದೂರಮಾಡುವುದು ಅಂದರೆ, ಕತ್ತಲೆಂಬ ನಮ್ಮ ಅಜ್ಞಾನವು ಬೆಳಕೆಂಬ ಜ್ಞಾನದಿಂದ ದೂರವಾಗಲಿ ಎಂಬ ಸಂಕೇತವೂ ಸರಿಯಲ್ಲವೇ. ಇದು ಯಾವ ಧರ್ಮದವರೂ ಒಪ್ಪಬಹುದು ಏಕೆಂದರೆ ದೀಪಕ್ಕೆ, ಅದು ನೀಡುವ ಬೆಳಕಿಗೆ ಯಾವುದೇ ಧರ್ಮದ ನಂಟಿಲ್ಲ. 
ಈ ಪ್ರಪಂಚದಲ್ಲಿ, ನಮ್ಮ ದೇಶದಲ್ಲಿ ಅನೇಕ ಪುಣ್ಯಾತ್ಮರು ಹುಟ್ಟಿ ತಮ್ಮ ಜೀವನ ಸಾರ್ಥಕ ಮಾಡಿಕೊಂಡಿದ್ದಾರೆ. ಅಂತಹವರ ಹುಟ್ಟಿದ ದಿನವನ್ನು ನೆನೆವುದು ನಮ್ಮ ಕರ್ತವ್ಯ. ನಾವು ಅಷ್ಟು ದೊಡ್ಡವರಾಗುತ್ತೇವೆಯೋ ಇಲ್ಲವೋ ಆದರೂ ಅವರ ಆದರ್ಶಗಳನ್ನು ನೆನೆದಾದರೂ ರವೆಯಷ್ಟು ಒಳ್ಳೆಯ ಕೆಲಸಮಾಡೋಣ ಅಲ್ಲವೆ. ಅದಕ್ಕಾಗಿಯೇ ಅಂತಹವರ ಹುಟ್ಟಿದ ಹಬ್ಬಗಳನ್ನು ಜಯಂತಿ ಎಂದು ಆಚರಿಸುತ್ತಾರೆ. ಶಂಕರ ಜಯಂತಿ, ಬುದ್ಧ ಜಯಂತಿ, ಬಸವ ಜಯಂತಿ, ಗುರುನಾನಕ್ ಜಯಂತಿ, ಗಾಂಧಿ ಜಯಂತಿ, ರಾಮಕೃಷ್ಣ ಜಯಂತಿ ಇತ್ಯಾದಿ. ದೇವರು ಹುಟ್ಟಿದ ದಿನವನ್ನು ಹಬ್ಬವಾಗಿ ಆಚರಿಸುತ್ತೇವೆ. ರಾಮನವಮಿ, ಕೃಷ್ಣ ಜನ್ಮಾಷ್ಟಮಿ ಇತ್ಯಾದಿ. ಇನ್ನು ಕೆಲವು ಗಣ್ಯರು ಹುಟ್ಟಿದ ದಿನವನ್ನು ಒಂದು ಒಳ್ಳೆಯ ಸಾಮಾಜಿಕ ಅಥವಾ ಇತರ ಯಾವುದಾದರೂ ಕಾರ್ಯಕ್ಕೆ ಹೊಂದಿಸಿ ಅಚರಿಸುತ್ತಾರೆ. ನಮ್ಮ ನೆಚ್ಚಿನ ರಾಷ್ಟ್ರಪತಿ ರಾಧಾಕೃಷ್ಣನ್ ಅವರ ಹುಟ್ಟಿದ ಹಬ್ಬವನ್ನು ಅದ್ಯಾಪಕರ ದಿನವನ್ನಾಗಿ, ಮಾಜಿ ಪ್ರಧಾನಿಗಳಾದ ನೆಹರುರವರದನ್ನು ಮಕ್ಕಳದಿನವನ್ನಾಗಿ, ಚರಣ್‍ಸಿಂಗ್ ಅವರದನ್ನು ರೈತದಿನವನ್ನಾಗಿ, ರಾಜೀವ್‍ಗಾಂಧಿ ಅವರದನ್ನು ಸದ್ಭಾವನಾ ದಿನವನ್ನಾಗಿ, ವಲ್ಲಭಭಾಯಿ ಪಟೇಲ್ ಅವರದನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ, ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಸಿ ವಿ ರಾಮನ್ ಅವರದನ್ನು ವಿಜ್ಞಾನದ ದಿನವನ್ನಾಗಿ, ಸರ್ ಎಂ ವಿಶ್ವೇಶ್ವರಯ್ಯ ಅವರದನ್ನು ಇಂಜಿನಿಂiÀiರ್ ದಿನವನ್ನಾಗಿ ಆಚರಿಸುತ್ತೇವೆ. ಅಂತೂ ಹುಟ್ಟಿದ ಹಬ್ಬಕ್ಕೆ ಎಷ್ಟು ಬೆಲೆ ಇದೆ ಅಲ್ಲವೇ? ಹೀಗೆಯೆ ಆಗಸ್ಟ್ 15 ಹಾಗೂ ನವೆಂಬರ್ 1 ಈ ದಿನಗಳನ್ನು ಸ್ವತಂತ್ರ ಭಾರತ ಹುಟ್ಟಿದ ಹಾಗೂ ಕರ್ನಾಟಕ ಹುಟ್ಟಿದ ದಿವವೆಂದೂ ಕರೆಯಬಹುದಲ್ಲವೇ.
ಅಮೆರಿಕಾದಲ್ಲಿ ವಾಷಿಂಗ್ಟನ್ ಅವರ ಹುಟ್ಟಿದ ಹಬ್ಬವನ್ನು ರಾಷ್ಟ್ರಾಧ್ಯಕ್ಷರ ದಿನವನ್ನಾಗಿ ಫೆಬ್ರುವರಿಯ ಮೂರನೇ ಸೋಮವಾರದಂದು ಅಚರಿಸುತ್ತಾರೆ. ಹಳೆಯ ಕ್ಯಾಲೆಂಡರ್, ಹೊಸ ಕ್ಯಾಲೆಂಡರ್ ಇವುಗಳಲ್ಲಿ ಅದು ಬೇರೆ ಬೇರೆ ದಿನಗಳಂದು ಬರುವುದರಿಂದ ಅವರು ಬಲು ಸುಲಭವಾಗಿ ಬಗೆಹರಿಸಿಬಿಟ್ಟಿದ್ದಾರೆ. ನಮ್ಮಲ್ಲಾದರೋ ಹೀಗಾದರೆ ಅದಕ್ಕಾಗಿ ಚರ್ಚೆ, ಕಾದಾಟ, ಕಿರಿಚಾಟ, ರಾಜಕಾರಣ, ರಾಮಾಯಣಗಳನ್ನು ಮಾಡಿ ರಾದ್ದಾಂತ ಮಾಡಿಬಿಟ್ಟಿರುತ್ತಿದ್ದರು. ಮಹಾತ್ಮ ಗಾಂಧಿಯವರ ಹುಟ್ಟಿದ ಹಬ್ಬದಂದು ಮದ್ಯದ ಅಂಗಡಿಗಳು ಮುಚ್ಚಿರಬೇಕು ಎಂದು ಸರಕಾರ ಆಜ್ಞೆ ಹೊರಡಿಸಿದೆ. ಈ ಒಂದು ದಿನ ಬಿಟ್ಟು ವರ್ಷದ ಉಳಿದ ದಿನದಂದು ಕುಡಿದುಕೊಂಡು ಬಿದ್ದಿರಿ, ಈ ಒಂದು ದಿನ ಹೇಗಾದರೂ ಮಾಡಿ ತಡೆದುಕೊಳ್ಳಿ ಸಾಕು ಎಂದು ನಮ್ಮ ರಾಜಕಾರಣಿಗಳ ಅನಿಸಿಕೆ. ಹೀಗೆ ಮಾಡಿಬಿಟ್ಟರೆ ಗಾಂಧಿಯವರ ಆತ್ಮಕ್ಕೆ ಶಾಂತಿ ಸಿಗುವುದು ಎಂದು ಅವರ ಅಂಬೋಣ.
ಇವೆಲ್ಲವುಗಳ ಅಂದರೆ ಜನ್ಮದಿನ ಆಚರಿಸುವುದರ ಉದ್ದೇಶವೇನೋ ಒಳ್ಳೆಯದೆ. ಆದರೆ ನಾವು ಅದನ್ನು ಎಷ್ಟರ ಮಟ್ಟಿಗೆ ಈಡೇರಿಸುತ್ತೇವೆ ಎಂದು ಎಲ್ಲರೂ ಮನನ ಮಾಡಿಕೊಂಡರೆ ಒಳ್ಳೆಯದು. ಗಾಂಧಿ ಜಯಂತಿ ಆಚರಿಸಿದ ಎಷ್ಟು ಜನ ಸತ್ಯಕ್ಕೆ, ಅಹಿಂಸೆಗೆ, ಕುಡಿತ ನಿರ್ಮೂಲನೆಗೆ ಬೆಲೆಕೊಡುತ್ತಾರೆ? ಬಸವ ಜಯಂತಿ ಆಚರಿಸಿದ ಎಷ್ಟುಜನ ಅಯ್ಯಾ ಎಂದರೆ ಸ್ವರ್ಗ, ಕಾಯಕವೇ ಕೈಲಾಸ, ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ತತ್ವಗಳಿಗೆ ಬೆಲೆ ನೀಡುತ್ತಾರೆ? ಸದ್ಭಾವನೆಯ ದಿನವನ್ನು ಆಚರಿಸಿ ಮನದಲ್ಲಿ ದುರ್ಭಾವನೆಗಳನ್ನೇ ತುಂಬಿ ಕೊಂಡಿರುವರು ಅದೆಷ್ಟೋ! ಅಂದ ಮೇಲೆ ಜನ್ಮದಿನವನ್ನು ಅಚರಿಸಿದ್ದಕ್ಕೆ ಬೆಲೆಯೇನು ಬಂತು? ಕೇವಲ ಕಾಟಾಚಾರಕ್ಕೆ ಅಥವಾ ಜನರ ಮುಂದೆ ಧರಿಸಿದ ಹುಸಿ ಮುಖವಾಡ ಅಲ್ಲವೇ?
ಈ ಹುಟ್ಟಿದ ಹಬ್ಬಕ್ಕೆ ರಜೆ ಕೊಡುವುದು ನನಗೇನೋ ಸರಿ ಎನ್ನಿಸುವುದಿಲ್ಲ. ಇದರಿಂದ ಜನ ಸುಮ್ಮನೆ ಕಾಲ ಕಳೆದು ಆ ರಜೆಯ ಮೂಲ ಉದ್ದೇಶವನ್ನೇ ಮರೆತುಬಿಡುತ್ತಾರೆ. ಅದೇನಾದರೂ ವರದ ಕೊನೆಯಲ್ಲಿ ಬಂದರೆ ಅದಕ್ಕೆ ಹಿಂದೊಂದು, ಮುಂದೊಂದು ಸೇರಿಸಿ ತಮ್ಮ ಸ್ವಂತದ ಕೆಲಸಗಳಿಗೆ ಉಪಯೋಗಿಸುತ್ತಾರೆ. ಹುಟ್ಟಿದ ಹಬ್ಬಕ್ಕೆ ರಾಜ ಕೊಡುವುದು ಇದಕ್ಕಾಗಿಯೇ? ಅದಕ್ಕೆ ಬದಲು ಅಂದು ಎಂದಿನಂತೆ ಪಾಠ ಮಾಡಿ ಅಥವಾ ಕಚೇರಿಯಲ್ಲಿ ಕೆಲಸ ಮಾಡಿ, ಅಂದಿನ ಒಂದು ಗಂಟೆಯ ಕಾಲ ಅಂದು ಹುಟ್ಟಿದವರ ಬಗ್ಗೆ ಒಂದು ಕಾರ್ಯಕ್ರಮ, ಅವರ ಬಗ್ಗೆ ಒಂದೆರೆಡು ಮಾತು, ಅವರಿಂದ ಕಲಿಯಬಹುದಾದ ನೀತಿ, ಇತ್ಯಾದಿಗಳನ್ನು ಅಳವಡಿಸಿಕೊಂಡರೆ ಒಳ್ಳೆಯದಲ್ಲವೇ. 
ಈ ಹುಟ್ಟಿದ ಹಬ್ಬದ ದಿನದ ಬಗ್ಗೆ ಮಾತನಾಡುವಾಗು ಈ ಒಂದು ವಿಚಿತ್ರವನ್ನೂ ಗಮನಿಸಬಹುದು. ಕೆಲವರ ಹುಟ್ಟಿದ ದಿನ ಮತ್ತು ಮರಣದ ದಿನ ಒಂದೇ ಆಗಿರುವುದು. ಇದು, ಅಶ್ಚರ್ಯ, ವಿಚಿತ್ರ, ದುಃಖ ಎಲ್ಲವನ್ನೂ ತರಿಸುತ್ತದೆ. ಹುಟ್ಟಿದ ದಿನಕ್ಕೆ ಸಂತೋಷ ಪಡುವುದೋ, ಸತ್ತದಿನ ಎಂದು ದುಃಖ ಪಡುವುದೋ ಗೊತ್ತಾಗುವುದಿಲ್ಲ. ವಿಲಿಯಂ ಶೇಕ್ಸ್‍ಪಿಯರ್ ಎಲ್ಲರಿಗೂ ಚಿರಪರಿಚಿತ. ಅವರ ಪುಸ್ತಕಗಳು ಇಂದಿಗೂ ಅತ್ಯಧಿಕವಾಗಿ ಮಾರಾಟವಾಗುತ್ತವೆ. ಈಗಾಗಲೇ ಸುಮಾರು 4 ಬಿಲಿಯನ್ ಪುಸ್ತಕಗಳು ಮಾರಾಟವಾಗಿವೆ. ಅವರ ಹುಟ್ಟಿದ ದಿನ, ಮರಣದ ದಿನ ಒಂದೇ, ಅದು ಏಪ್ರಿಲ್ 23. ಅವರ 52ನೆಯ ಹುಟ್ಟಿದ ಹಬ್ಬದ ದಿನದಂದೇ ಅವರು ಮರಣ ಹೊಂದಿದರು. ಅಮೆರಿಕಾದ ಅಧ್ಯಕ್ಷರಾಗಿದ್ದ ಫ್ರಾಂಕ್ಲಿನ್ ರೂಸ್‍ವೆಲ್ಟ್ ಅವರ 5ನೆಯ ಮಗ, ಅಮೆರಿಕಾದ ಪ್ರಸಿದ್ಧ ಲಾಯರ್ ಹಾಗೂ ರಾಜಕಾರಣಿಯಾಗಿದ್ದ ಫ್ರಾಂಕ್ಲಿನ್ ಡಿಲೆನೋ ರೂಸ್‍ವೆಲ್ಟ್ ಅವರೂ ಸಹ ಅವರ 74ನೆಯ ಹುಟ್ಟಿದ ಹಬ್ಬ ಆಗಸ್ಟ್ 17ರಂದು ನಿಧನರಾದರು. ಪ್ರಸಿದ್ಧ ಚಿತ್ರಕಲಾವಿದ, ರೆನೈಸಾನ್ಸ್ ಕಾಲದ ವಾಸ್ತುಕಲಾ ನಿಪುಣ ರಾಫೇಲ್ ಸಹ ಅವರ 37ನೆಯ ಹುಟ್ಟಿದ ಹಬ್ಬದಂದೆ ನಿದನರಾದರು. ಅವರು ಹುಟ್ಟಿದ ಹಾಗೂ ಮರಣಿಸಿದ ದಿನ ಏಪ್ರಿಲ್ 6. 
ನನ್ನ ಗೆಳೆಯರೊಬ್ಬರಿದ್ದಾರೆ. ಅವರಿಗೆ ಈ ಕೇಕು ಕತ್ತರಿಸುವ, ದೀಪ ಆರಿಸುವ, ಆಂಗ್ಲ ಭಾಷೆಯಲ್ಲಿ ಹಾಡುವ ಹುಟ್ಟಿದ ಹಬ್ಬವನ್ನು ಕಂಡರೆ ಉರಿದು ಬೀಳುತ್ತಾರೆ. ನಾವು ಕನ್ನಡಿಗರು, ಕನ್ನಡ ಭಾಷೆಯಲ್ಲಿ ಹಾಡೋಣ, ನಮ್ಮದೇ ಆದ ರೀತಿಯಲ್ಲಿ ಆಚರಿಸೋಣ ಎಂದು ತಮ್ಮ ಮಗನ ಹುಟ್ಟಿದ ಹಬ್ಬವನ್ನು ಹೊಸರೀತಿಯಲ್ಲಿ ಆಚರಿಸಿದ್ದರು. ಅಂದು ಸಿಹಿತಿಂಡಿಗಳನ್ನು ಮಾಡಿ ಅವನ್ನು ದೀಪದ ಮುಂದೆ ಇಟ್ಟು ದೀಪವನ್ನು ಬೆಳಗಿಸಿ, ಹತ್ತು ಹಣತೆಗಳನ್ನು (ಅವರ ಮಗನ 10ನೇ ವರ್ಷದ ಹುಟ್ಟಿದ ಹಬ್ಬ) ಹಚ್ಚಿ, ಕನ್ನಡದ ಪದ್ಯವೊಂದನ್ನು ಹಾಡಿಸಿ ಎಲ್ಲರ ಮನಗೆದ್ದರು. ಎಲ್ಲರೂ ಹೀಗೇ ಮಾಡಿದರೆ ನಮ್ಮತನವನ್ನು ಕಾಯ್ದುಕೊಳ್ಳಬಹುದು. ಅಂದು ಅವರು ಹಾಡಿಸಿದ ಪದ್ಯ ನೆನಪಿಲ್ಲವಾದರೂ, ಈ ಕೆಳಗಿನ ಪದ್ಯವನ್ನು ಒಂದು ಸುಲಭವಾದ ರಾಗದಲ್ಲಿ ಎಲ್ಲರೂ ಹೇಳಬಹುದು. 
ಪ್ರೀತಿಯ ಅಮ್ಮನಿಗೆ
ಹುಟ್ಟಿದ ಶುಭ ದಿನದಾ
ಶುಭಾಶಯ ಶುಭಾಶಯ 
ಶುಭಾಶಯ ಶುಭಾಶಯ //
ಇಂದಿನ ಶುಭದಿನವು
ನೆಮ್ಮದಿ ಸುಖವನ್ನೂ
ಶಾಂತಿ ಆರೋಗ್ಯವನೂ
ದೇವರು ಕೊಡಲೆಂದೂ //
ಬಯಸುವೆವೂ ನಾವೂ 
ಹರಸುವೆವೂ ನಾವೂ //
ಮೊದಲ ಸಾಲಿನ 'ಅಮ್ಮನಿಗೆ' ಎಂಬುದನ್ನು ಅಪ್ಪನಿಗೆ, ಅಣ್ಣನಿಗೆ, ಅಕ್ಕನಿಗೆ, ಸೋದರಿಗೆ, ತಮ್ಮನಿಗೆ, ಮಿತ್ರನಿಗೆ, ಗೆಳೆಯನಿಗೆ, ಬಂಧುವಿಗೆ, ಗುರುಗಳಿಗೆ ಎಂದು ಸಂದರ್ಭಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು. ಹಾಡನ್ನೂ ಪ್ರಾಸಬದ್ಧವಾಗಿ ಯಾವುದಾದರೂ ಮಕ್ಕಳ ಪದ್ಯದಂತೆ, ಮಧುರವಾದ ಚಿತ್ರಗೀತೆಯ ರಾಗದಂತೆ ಹೇಳಬಹುದು. ನಮ್ಮ ಕನ್ನಡಿಗರು ಮೊದಲು ಇಂತಹವನ್ನು ಅಳವಡಿಸಿಕೊಂಡು ಇಂಗ್ಲಿಷ್ ಮೋಹದಿಂದ ಹೊರಬಂದು ದುರಭಿಮಾನವಿಲ್ಲದೆ ಅಭಿಮಾನದಿಂದ ಹಾಡುವರೂ ಎಂದೇ ನನ್ನ ಬಲವಾದ ನಂಬಿಕೆ. 
ಹುಟ್ಟಿದ ಹಬ್ಬದ ದಿನದ ಕೆಲವು ನಂಬಿಕೆಗಳು ಆಚರಣೆಗಳು ವಿವಿಧ ದೇಶಗಳಲ್ಲಿ ಬೇರೆ ಬೇರೆ ರೀತಿ ಇವೆ. ಅಮೆರಿಕಾ ಮತ್ತು ಕೆನಡಾದಲ್ಲಿ ಹುಡುಗಿಗೆ ಹದಿನಾರು ತುಂಬಿದರೆ ಅದನ್ನು "ಸಿಹಿ ಹದಿನಾರು" ಎಂದು ಆಚರಿಸುತ್ತಾರೆ. ಸ್ಪೇನ್ ಮತ್ತು ಪೋರ್ಚುಗೀಸರಲ್ಲಿ ಹುಡುಗಿಗೆ 15 ತುಂಬಿದಾಗ ಭರ್ಜರಿಯಾಗಿ ಹುಟ್ಟಿದ ಹಬ್ಬವನ್ನು ಆಚರಿಸುತ್ತಾರೆ. ಹಿಂದೂಗಳಲ್ಲಿ ಮೊದಲನೆಯ ವರ್ಷ ಮಗುವಿಗೆ ಜುಟ್ಟುಬಿಡಿಸಿ ಹುಟ್ಟಿದ ಹಬ್ಬವನ್ನು ಆಚರಿಸುತ್ತಾರೆ. ಫಿಲಿಫಿನ್ನರಲ್ಲಿ ಹುಡುಗಿಗೆ 18 ತುಂಬಿದಾಗ, ಹುಡುಗನಿಗೆ 21 ತುಂಬಿದಾಗ ಹುಟ್ಟಿದ ಹಬ್ಬ ಆಚರಿಸುವುದು ಶ್ರೇಷ್ಠವಂತೆ. ಹೀಗೇ ಒಂದೊಂದು ಕಡೆ ಒಂದೊಂದು ತರಹ.

ಜಗದೀಶ ಚಂದ್ರ ಬಿ ಎಸ್
bsjchandra@gmail.com 7022237041, 9342009886, 7022237041

Wednesday, May 31, 2017

ಗುಬ್ಬಿಯ ಕಥೆ ವ್ಯಥೆ

ಗುಬ್ಬಿಯ ಕಥೆ ವ್ಯಥೆ 

ಹೊಸಮನೆಯ ಸಂಭ್ರಮ
ನಾವು ಚಿಕ್ಕವರಿದ್ದಾಗ ಹೊಸದಾಗಿ ಕಟ್ಟಿದ ಮನೆಯೊಂದನ್ನು ಕಟ್ಟಿದರು. ನಾವೆಲ್ಲರೂ ಸಂಭ್ರಮದಿಂದ ಆ ಹೊಸಮನೆಗೆ ಬಂದೆವು. ಆದರೆ ಆ ಮನೆಯಲ್ಲಿ ಗುಬ್ಬಚ್ಚಿಯೇ ಇರಲಿಲ್ಲ. ಅಯ್ಯೋ ಈ ಮನೆಯಲ್ಲಿ ಗುಬ್ಬಚ್ಚಿಯೇ ಇಲ್ಲ ಎಂದು ಬೇಸರಿಸಿದಾಗ ನಮ್ಮ ಅಪ್ಪ 'ಸ್ವಲ್ಪ ತಾಳು, ಖಾಲಿ ಮನೆಗೆ ಗುಬ್ಬಚ್ಚಿ ಬರುವುದಿಲ್ಲ, ನಾವು ಎಲ್ಲಾ ಸಾಮಾನುಗಳನ್ನು ಜೋಡಿಸಿಕೊಂಡು ಒಂದೆರಡು ದಿನಗಳಾದ ಮೇಲೆ ಬರುತ್ತದೆ, ಅವಕ್ಕೂ ನಿಮ್ಮಂತಹ ಮಕ್ಕಳ ಗಲಾಟೆ ಇರಬೇಕು ಆಗಲೇ ಬರುವುದು' ಎಂದರು. ಅವರೆಂದಂತೆಯೇ ಒಂದೊಂದಾಗಿ ಗುಬ್ಬಚ್ಚಿಗಳು ಮನೆಯೊಳಗೆ ದಾಳಿಯಿಡಲು ಆರಂಭಿಸಿದವು. ಪುರ್ ಪುರ್ ಎಂಬ ಅದರ ರೆಕ್ಕೆಯ ಬಡಿತ, ಕಿಚಿಕಿಚಿ ಎಂಬ ಅದರ ಚಿಲಿಪಿಲಿ ನಮ್ಮ ಮನೆಯ ಪಾರ್ಟ್ ಅಂಡ್ ಪಾರ್ಸೆಲ್ ಎಂಬಂತಾದವು.
ಗುಬ್ಬಿ ಸಂಸಾರ
ದಿನ ನಿತ್ಯವೂ ಎರಡೆರಡೇ ಹುಲ್ಲಿನ ಕಡ್ಡಿಗಳನ್ನು ಕೊಕ್ಕಿನಲ್ಲಿ ಹಿಡಿದು ಹಾರಿ ಅಟ್ಟವನ್ನು ಸೇರುತ್ತಿದ್ದವು. ಅಲ್ಲಿ ಯಾವುದೋ ಸಾಮಾನಿನ ಸಂದಿಯಲ್ಲಿ ಅವನ್ನು ಜೋಡಿಸಿ ತಾವೂ ನಮ್ಮ ಹೊಸಮನೆಯೊಳಗೆ ತಮ್ಮದೊಂದು ಹೊಸಮನೆಯನ್ನು ಕಟ್ಟಿಕೊಳ್ಳಲು ಆರಂಬಿಸಿದವು. ಆಗ ನಮಗೆ ಅದರ ಕಾಯಕ ಅಂತಹ ಮಹತ್ವದ್ದಲ್ಲವೆನ್ನಿಸಿದರೂ ಈಗ ದೊಡ್ಡವರಾದ ಮೇಲೆ ಅದರ ಅವಿರತ ಪ್ರಯತ್ನದ, ಶ್ರದ್ಧೆಯ ಅರಿವಾಗುತ್ತಿದೆ. ಗೂಡು ಕಟ್ಟುವಾಗ ಏನೇ ಅಡ್ಡಿ  ಆತಂಕ ಬಂದರೂ ಅದು ಮತ್ತೆ ಮತ್ತೆ ಬಂದು ಹೇಗೋ ತನ್ನ ಗೂಡನ್ನು ಕಟ್ಟಿಬಿಟ್ಟಿರುತ್ತಿತ್ತು. ಈ ಗೂಡನ್ನು ಕಟ್ಟಿಯಾದ ಸ್ವಲ್ಪ ದಿನಗಳ ನಂತರ ಅದರಲ್ಲಿ ಮೊಟ್ಟೆ ಇಟ್ಟು ಮತ್ತೆ ಅದಕ್ಕೆ ಕಾವು ಕೊಡಲು ಮತ್ತೆ ಹಾರಾಟ. ಕಿಟಕಿ ಬಾಗಿಲು ಅಕಸ್ಮಾತ್ ಮುಚ್ಚಿದ್ದರೆ ಹೇಗೋ ಸಂದಿಯಲ್ಲಿ ತೂರಿ ಬಂದು ಬಿಡುತ್ತಿತ್ತು. ನಾವೇನಾದರೂ ಬಲವಂತವಾಗಿ ಅವಕ್ಕೆ ಅಡ್ಡಿಪಡಿಸಿದರೆ ಅಪ್ಪ ಅಮ್ಮಂದಿರು ನಮ್ಮನ್ನು ಗದರುತ್ತಿದ್ದರು.
ನಂತರ ಕೆಲವೇ ದಿನಗಳಲ್ಲಿ ಆ ಮೊಟ್ಟೆಗಳು ಒಡೆದು ಮರಿಯಾಗುತ್ತಿದ್ದವು. ಆಗ ಈ ಗುಬ್ಬಿಗಳ ಸಂಭ್ರಮವೋ ಸಂಭ್ರಮ. ಸ್ವಲ್ಪದಿನಗಳಲ್ಲಿಯೇ ಆ ಮರಿಗಳ ಕೀರಲು ಸದ್ದು ಕೇಳುತ್ತಿತ್ತು. ಅದಂತೂ ಸಣ್ಣಗೆಜ್ಜೆಯ ದನಿಯನ್ನು ಹೋಲುತ್ತಿತ್ತು. ಈಗ ಈ ಗುಬ್ಬಿಗಳು ಏನೇನೋ ಸಾಹಸ ಮಾಡಿ ಕೀಟಗಳು, ಚೆಲ್ಲಿದ ಅಗುಳು ಮೊದಲಾದುವನ್ನು ತಂದು ಮರಿಗಳಿಗೆ ಗುಟುಕು ಕೊಡುತ್ತಿದ್ದವು. ನಾವೇನಾದರೂ ತಮಾಷೆಗೆ ಅಡ್ಡಿ ಪಡಿಸಿದರೂ ಇನ್ನೆಲ್ಲೋ ಹಾರಿ, ಮತ್ತೆಲ್ಲೋ ಕಾದು ಕುಳಿತು, ನಮ್ಮ ಕಣ್ಣು ತಪ್ಪಿಸಿ ಹಾರಿಹೋಗಿ ಮರಿಗಳಿಗೆ ಗುಟುಕು ಕೊಡುತ್ತಿದ್ದವು. ಆ ಮರಿಗಳಿಗೋ ಅಸಾಧ್ಯ ಹಸಿವೋ ಏನೋ, ಯಾವಾಗಲೂ ಕೀ ಕೀ ಎಂದು ಕಿರುಚುತ್ತಲೆ ಇರುತ್ತಿದ್ದವು. ಆ ಗುಬ್ಬಿಗಳಿಗೂ ನಮ್ಮನ್ನು ಕಂಡರೆ ಎಷ್ಟು ಧೈರ್ಯ ಎಂದರೆ ನಾವು ಊಟಮಾಡುವಾಗ ಚೆಲ್ಲಿದ ಅಗುಳನ್ನು ಮಿಂಚಿನಂತೆ ಬಂದು ಕಚ್ಚಿಕೊಂಡು ಹಾರಿ ಮರಿಗಳ ಬಳಿಗೆ ಧಾವಿಸುತ್ತಿದ್ದವು. ಮಾತೃಹೃದಯದ ಬಗ್ಗೆ ಆಗ ನಮಗೆ ಅರಿವಿರಲಿಲ್ಲ. ಆದರೆ ಈಗ ಅದರ ಕಷ್ಟ, ಧಾವಂತ ಮೊದಲಾದುವನ್ನು ನೆನಸಿಕೊಂಡರೆ ಪಾಪ ಎನ್ನಿಸುತ್ತದೆ.
ಗುಬ್ಬಿಯ ಪ್ರತಿಬಿಂಬ
ಈ ಗುಬ್ಬಿಗಳು ಮನೆಯೊಳಗೆ ಬರುವಾಗ ಯಾವಾಗಲೋ ಕನ್ನಡಿಯಲ್ಲಿ ತಮ್ಮ ಬಿಂಬವನ್ನು ನೋಡಿಕೊಂಡುಬಿಟ್ಟಿದ್ದವು. ಅಲ್ಲಿ ಇನ್ನೊಂದು ಗುಬ್ಬಿ ಇದೆ ಎಂದು ಆ ಕನ್ನಡಿಯನ್ನು ಸುಮ್ಮನೆ ಕುಕ್ಕುತ್ತಿದ್ದವು. ಇದರಿಂದ ಅವುಗಳ ಕೊಕ್ಕಿಗೆ ಗಾಯವಾಗಿದ್ದೂ ಉಂಟು. ಇದನ್ನು ನೋಡಲಾಗದೆ ನಮ್ಮ ಮನೆಯಲ್ಲಿ ಕನ್ನಡಿಗಳನ್ನೆಲ್ಲಾ ಬಟ್ಟೆಯಿಂದ ಮುಚ್ಚಿ ಬೇಕಾದಾಗ ಮಾತ್ರ ತೆರೆÉದುಕೊಳ್ಳುತ್ತಿದ್ದೆವು. ಅದನ್ನು ಮತ್ತೆ ಮುಚ್ಚಲು ಮರೆತರೆ ಅವುಗಳ ಕುಕ್ಕುವ ಕಾಯಕ ಮುಂದುವರೆಯುತ್ತಿತ್ತು, ಅಮ್ಮನಿಂದ ನಮಗೂ ಬಯ್ಗುಳಗಳಾಗುತ್ತಿತ್ತು.
ಗುಬ್ಬಿಯ ವೀಕ್ಷಣೆ
ಇತ್ತೀಚೆಗೆ ಆನೇಕಲ್ಲಿನ ನೊಂದಾವಣಿ ಕಛೇರಿಗೆ ನನ್ನ ಗೆಳೆಯನೊಡನೆ ಹೋಗಿದ್ದೆ. ಅಲ್ಲಂತೂ ಗಂಟೆಗಟ್ಟಲೆ ಕಾಯಬೇಕಾಗಿತ್ತು. ಜನಗಳ ಗಿಜಿಬಿಜಿ ಬೇರೆ. ಕಡೆಗೆ ಅಲ್ಲೆ ಕಛೇರಿಯ ನಡುವೆ ಇರುವ ಮರದ ಬುಡದಲ್ಲಿ ಮಾತಾಡುತ್ತಾ ಕಾಲ ಕಳೆಯುತ್ತಿದ್ದೆವು. ಹೊತ್ತು ಕಳೆಯುವುದೇ ಕಷ್ಟವಾಗಿತ್ತು. ಆಗ ಅಲ್ಲೇ ಕಾರಿಡಾರ್‍ನಲ್ಲಿರುವ ಬೋರ್ಡಿನ ಸಂದಿಯಲ್ಲಿ ಗುಬ್ಬಚ್ಚಿ ದಂಪತಿಗಳನ್ನು ಕಂಡೆ. ಅವು ನಮ್ಮ ಬಳಿಯೆ ಬಂದು ಹುಲ್ಲನ್ನು ಕಿತ್ತು ಗೂಡು ಕಟ್ಟಲು ಹಾರುತ್ತಿದ್ದವು. ನನಗಂತೂ ಯಾರಿಗಾದರೂ ಡಿಕ್ಕಿ ಹೊಡೆದುಬಿಡುತ್ತವೇನೋ ಎಂದು ಹೆದರಿಕೆಯಾಗುತ್ತಿತ್ತು. ಆದರೆ ಒಮ್ಮೆಯೂ ಡಿಕ್ಕಿಹೊಡೆಯದೇ ಸೀದಾ ಗೂಡಿನ ಬಳಿ ಹೋಗಿ ಎರಡೆರಡೇ ಹುಲ್ಲಿನಿಂದ ಮನೆಯನ್ನು ಕಟ್ಟುವ ಕೆಲಸ ಪ್ರಾರಂಭಿಸಿದ್ದವು. ನಂತರ ನಮ್ಮ ಬಳಿಯೆ ಬಂದು ಅಲ್ಲಿನ ಹುಲ್ಲಿನಲ್ಲಿ ಓಣಗಿರುವುದನ್ನು ಮಾತ್ರಾ ಆರಿಸಿ ತಮ್ಮ ಪುಟ್ಟ ಕೊಕ್ಕಿನಲ್ಲಿ ಎಳೆದು, ಬರದಿದ್ದರೆ ಮೈಯನ್ನೆಲ್ಲಾ ಅಲ್ಲಾಡಿಸಿ ಬಲವಾಗಿ ಎಳೆದು ಕೀಳುತ್ತಿದ್ದವು. ನನಗಂತೂ ಅದರ ಕೆಲಸವನ್ನು ನೋಡುವುದೇ ಒಂದು ಕಾಯಕವಾಯಿತು. ಈ ವೀಕ್ಷಣೆಯಲ್ಲಿ ಹೊತ್ತು ಕರಗಿದುದೆ ತಿಳಿಯಲಿಲ್ಲ. ನಾವು ಸುಮಾರು ಮೂರುನಾಲ್ಕು ಗಂಟೆ ಕಾದಿರಬಹುದು. ಆದರೆ ಸಮಯ ಬೇಜಾರಿಲ್ಲದೆ ಕಳೆಸಿದುದಕ್ಕೆ ಆ ಗುಬ್ಬಿ ದಂಪತಿಗಳಿಗೆ ನಾವು ಚಿರಋಣಿ.
ಮರಿಗಳ ಹಾರಾಟ, ಚೀರಾಟ
ಅಮ್ಮನ ಗುಟುಕು ಕುಡಿದ ಮರಿಗಳು ಸ್ವಲ್ಪದಿನಗಳಲ್ಲೇ ದೊಡ್ಡದಾಗುತ್ತಿದ್ದವು. ಅವುಗಳ ಗೆಜ್ಜೆಯಂತಹ ದನಿಯೂ ಈಗ ಕಿಚಿಕಿಚಿ ಎಂದು ಅದರ ಅಮ್ಮನ ದನಿಯನ್ನು ಹೋಲುತ್ತಿತ್ತು. ಅವುಗಳ ಗಲಾಟೆಯೂ ಈಗ ಹೆಚ್ಚು ಕೇಳಿಸುತ್ತಿತ್ತು. ಅದರ ಅಮ್ಮನೋ ಅಪ್ಪನೋ ಎಲ್ಲಿಂದಲೋ ಕಿರುಚಿದರೆ ಇವು ಇಲ್ಲಿಂದಲೇ ಕಿಚಿಕಿಚಿ ಎಂದು ಮಾರುತ್ತರ ನೀಡುತ್ತಿದ್ದವು. ಬಹುಷಃ 'ಅಮ್ಮ ಬೇಗ ಬಾ ಹಸಿವು' ಎಂದು ಮರಿಗಳು, 'ಸ್ವಲ್ಪ ತಾಳು ಅನ್ನ ಹುಡುಕುತ್ತಿದ್ದೇನೆ' ಎಂದೋ ಅಥವಾ 'ಸ್ವಲ್ಪ ಇರು ಇಲ್ಲೊಂದು ಹುಡುಗ ನನಗೆ ಬರದ ಹಾಗೆ ತರಲೆ ಮಾಡುತ್ತಿದೆ, ತಪ್ಪಿಸಿಕೊಂಡು ಬರಬೇಕು, ಬರುವವರೆಗೂ ಕಿರುಚಬೇಡ' ಎಂತಲೋ ಸಂಭಾಷಣೆ ನಡೆಯುತ್ತಿದ್ದಿರಬಹುದು. ನಂತರ ಆ ಅಟ್ಟದ ಚಿಕ್ಕ ಜಾಗದಲ್ಲೇ ಆ ಮರಿಗಳು ಸ್ವಲ್ಪವೇ ಹೊರಬಂದು ರೆಕ್ಕೆಯನ್ನು ಪಟಪಟ ಬಡಿದು ಹಾರುವ ಅಭ್ಯಾಸವನ್ನು ಮಾಡುತ್ತಿದ್ದವು.
ಹೀಗೆ ಹಾರಾಡಲು ಕಲಿತ ಸ್ವಲ್ಪ ದಿನಗಳಲ್ಲೇ ಅವು ಅಟ್ಟದಲ್ಲೆ ಸ್ವಲ್ಪ ದೂರ ಹಾರುತ್ತಿದ್ದವು. ಒಂದೆರಡಂತೂ ನಾನೇನು ಅಪ್ಪ ಅಮ್ಮನಿಗೆ ಕಮ್ಮಿ ಎಂದು ಕೆಳಗಡೆಗೂ ಬಂದು ಬಿಡುತ್ತಿದ್ದವು. ಅವಕ್ಕೋ ಕೈಲಾಗದು, ಅದರ ಅಪ್ಪ ಅಮ್ಮನ ಪ್ರಾಣ ಸಂಕಟ ಹೇಳತೀರದು. ಅಲ್ಲಿಂದಲೇ ಬಹಷಃ 'ನಾನು ಬಡಕೊಂಡೆ ದೂರ ಹಾರಬೇಡ ಎಂದು, ಈಗ ಒದ್ದಾಡು' ಎಂದು ಕಿಚಗುಟ್ಟುತ್ತಿದ್ದವೋ ಏನೋ. ನಾವು ಆ ಮರಿಗಳನ್ನು ಎಲ್ಲಿ ಹಿಡಿದು ಬಿಡುತ್ತೇವೆಯೋ ಎಂಬ ಹೆದರಿಕೆಯಿಂದ ನಮ್ಮ ಹಿರಿಯರು 'ಆ ಮರಿಗಳನ್ನು ಮುಟ್ಟಬೇಡಿ, ಮನುಷ್ಯರು ಮುಟ್ಟಿದ ಮರಿಗಳನ್ನು ಅದರ ಅಮ್ಮ ಕುಕ್ಕಿ ಕುಕ್ಕಿ ಸಾಯಿಸಿಬಿಡುತ್ತದೆ' ಎಂದು ನಮ್ಮನ್ನು ಮುಟ್ಟಗೊಡುತ್ತಿರಲಿಲ್ಲ. ನಾವು ಅದನ್ನು ಮುಟ್ಟದಿರಲಿ ಎಂಬುದಕ್ಕೆ ಹೀಗೆ ಹೇಳುತ್ತಿದ್ದರೇನೋ ಎಂದು ಈಗ ಅನ್ನಿಸುತ್ತದೆ.
ಇಂತಹ ತಪ್ಪಿಸಿಕೊಂಡ ಮರಿಗಳು ಹಾಗೂ ಹೀಗೂ ಯಾವುದೋ ಸಂದಿಯನ್ನು ಸೇರಿಕೊಂಡುಬಿಡುತ್ತಿದ್ದವು. ನಾವ್ಯಾರೂ ಇಲ್ಲದಾಗ ಮೆಲ್ಲಗೆ ಈಚೆ ಬಂದು ಹಾರಾಟದ ಅಭ್ಯಾಸ ನಡೆಸುತ್ತಿದ್ದವು. ನಾವು ಇದನ್ನು ಬಾಗಿಲಸಂದಿಯಿಂದ ಮೆಲ್ಲಗೆ ಗಮನಿಸುತ್ತಿದ್ದವು. ನಾವ್ಯಾರಾದರೂ ಒಳಗೆ ಬಂದರೆ ಮತ್ತೆ ಯಾವುದಾದರೂ ಸಂದಿಗೆ ಹಾರಿಬಿಡುತ್ತಿದ್ದವು. ಅವು ಹೇಗೇಗೋ ಪಟಪಟ ಎಂದು ಹಾರುತ್ತಿದ್ದರೆ ನಮಗೂ ಹೆದರಿಕೆ. ಅವುಗಳ ಕಿಚಿಕಿಚಿ, ನಮ್ಮ ಗಲಾಟೆ, ಇವುಗಳ ನಡುವೆ ಹಿರಿಯರ ಬೈಗುಳ ಬೇರೆ, ಒಟ್ಟಿನಲ್ಲಿ ಮನೆಯಲ್ಲಿ ಒಂದು ಗದ್ದಲವೇ ನಿರ್ಮಾಣವಾಗಿ ಬಿಟ್ಟಿರುತ್ತಿತ್ತು. 
ಸಾಮಾನ್ಯವಾಗಿ ಈ ಗುಬ್ಬಿಗಳ ಆಶ್ರಯ ತಾಣ ದೇವರ ಗೂಡಿನ ಮಂಟಪದ ಕೆಳಭಾಗವಾಗಿರುತ್ತಿತ್ತು. ಅವು ಅಲ್ಲಿ ನಿಜವಾಗಿಯೂ ನಿರ್ಭಯವಾಗಿರುತ್ತಿದ್ದವು ಏಕೆಂದರೆ ನಾವು ಅದರಬಳಿ ಹೋಗಲಾಗುತ್ತಿರಲಿಲ್ಲ. ಕಾಕತಾಳೀಯವೆಂಬಂತೆ ಅಲ್ಲಿ ಸೇರಿಕೊಂಡ ಗುಬ್ಬಿಗಳು ಪೂರ್ಣವಾಗಿ ಹಾರುವುದನ್ನು ಕಲಿತು ನಂತರವೇ ಹೊರಹೋಗುತ್ತಿದ್ದವು. ಇತರೆಡೆ ಸೇರಿಕೊಂಡ ಗುಬ್ಬಿಮರಿಗಳು ಬೇಗನೆ ಹೊರಗೆ ಹಾರಿ ಅಲ್ಲಿ ಹಾರುವುದನ್ನು ಕಲಿಯುವಾಗ ಕಾಗೆಗಳಿಗೆ ಆಹಾರವಾಗುವುದನ್ನು ಕಂಡು ನಾವೇ ಅನೇಕ ಬಾರಿ ಮರುಗಿದ್ದುಂಟು.
ಹೀಗೆ ಹೊಸಮನೆಯೊಳಗೊಂದು ಹೊಸಗುಬ್ಬಿ ಸಂಸಾರ ನಡೆಯುತ್ತಿತ್ತು. ನಂತರ ಮತ್ತೊಂದು ಸಂಸಾರ ಹೊಸಮನೆಯ ಕಾಯಕ ಆರಂಭಿಸುತ್ತಿತ್ತು. ದೊಡ್ಡವರಾಗುವವರೆಗೂ ನಾವು ಇಂತಹ ಅನೇಕ ಸಂಸಾರಗಳನ್ನು ಕಂಡೆವು. ಇಂದೂ ಅವು ನಮಗೆ ಕಣ್ಣಿಗ ಕಟ್ಟಿದಂತಿದೆ.
ತಲೆಯಿಲ್ಲದ ಗುಬ್ಬಿ
ಈ ಗುಬ್ಬಿಗಳು ರಾತ್ರಿಯ ಹೊತ್ತು ಹೊರಗೆ ಇರುತ್ತಿರಲಿಲ್ಲ. ಸಂಜೆಯಾದೊಡನೆ ಯಾವುದೋ ಮಾಯದಲ್ಲಿ ಮನೆಯೊಳಗೆ ಬಂದುಬಿಡುತ್ತಿದ್ದವು. ಅವು ಗೂಡಿನೊಳಗೆ ಮಲಗುತ್ತಿರಲಿಲ್ಲ, ಯಾವುದಾದರೂ ಗೂಟದ ಮೇಲೆ ಕುಳಿತು ನಿದ್ದೆ ಹೊಡೆಯುತ್ತಿದ್ದವು. ಅವು ಎಲ್ಲಿ ಕುಳಿತು ನಿದ್ದೆ ಹೊಡೆಯತ್ತಿದ್ದವು ಎಂಬುದನ್ನು ನೆಲ ನೋಡಿಯೇ ತಿಳಿಯಬಹುದಿತ್ತು. ಹೇಗೆ, ಗೊತ್ತಾಯಿತೇ? ಅವು ಹಾಕಿದ ಪಿಚಿಕೆಗಳಿಂದ. ಆ ಜಾಗದಲ್ಲಿ ನೆಲವೆಲ್ಲಾ ಕರೆ. ನಮ್ಮ ಅಮ್ಮನಂತೂ ಗೊಣಗುತ್ತಲೇ ಅವನ್ನು ಶುಚಿಮಾಡುತ್ತಿದ್ದರು. ಇವುಗಳ ಕಾಟ ತಡೆಯಲಾಗದು ಎಂದು ಸದಾ ಅವನ್ನು ಬೈಯುತ್ತಿದ್ದರೂ ನಾವೇನಾದರೂ ಅವುಗಳ ತಂಟೆಗೆ ಹೋದರೆ ಸುಮ್ಮನಿರುತ್ತಿರಲಿಲ್ಲ. ಆಗ ಮಾತ್ರ ಅಮ್ಮನದು ಗುಬ್ಬಿಯ ಪಕ್ಷವೇ. ನಮಗೆ ಹೀಗೇಕೆ? ಎಂದು ಆಶ್ಚರ್ಯವಾಗುತ್ತಿತ್ತು.
ನಮ್ಮ ಮನೆಯಲ್ಲಿ ತೊಟ್ಟಿಲು ಕಟ್ಟಲು ಗೂಟವನ್ನು ಹಾಕಿದ್ದರು. ಆ ಗೂಟಗಳೇ ಈ ಗುಬ್ಬಿಗಳಿಗೆ ಮಲಗುವ ತಾಣ. ನಾವು ಬೆಳಿಗ್ಗೆ ಏಳುವಷ್ಟರಲ್ಲಿ ಅವು ಹೊರಗೆ ಹಾರಿಹೋಗಿರುತ್ತಿದ್ದವು. ಅವು ರಾತ್ರಿ ಮಲಗುವ ಚಂದವೇ ಚೆನ್ನ. ಅದರ ಬಗ್ಗೆ ಒಂದು ಘಟನೆ ಹೇಳಿದರೆ ನಿಮಗೂ ನಗೆ ಬರಬಹುದು. ಒಮ್ಮೆ ನಮ್ಮ ಮನೆಗೆ ನಮ್ಮ ಚಿಕ್ಕಮ್ಮನ ಮಗಳು ಬಂದಿದ್ದಳು. ಗುಬ್ಬಿಮಲಗುವ ಜಾಗದ ನೆಲವನ್ನು ನೋಡಿ 'ಇದೇಕೇ ಇಲ್ಲಿ ಯಾರೋ ಕೆಟ್ಟದಾಗಿ ರಂಗೋಲಿ ಹಾಕಿದ್ದಾರೆ ಎಂದಳು. ನಾವು ತಮಾಷೆಗೆ ಯಾರೋ ನಿನ್ನಂತಹ ಒಡ್ಡಿ ಎಂದಾಗ ಅಳುತ್ತಾ ಅಮ್ಮನ ಬಳಿ ಓಡಿ ಚಾಡಿ ಹೇಳಿದಳು. ನಂತರ ಅವರಿಂದ ನಿಜವಾದ ವಿಷಯ ತಿಳಿದು 'ನನಗೂ ಎಲ್ಲಾ ಗೊತ್ತು' ಎಂದು ಘಳಿಗೆ ಘಳಿಗೆಗೂ  'ಗುಬ್ಬಿ ಮಲಗಲು ಬಂತಾ' ಎಂದು ಬೆಳಗಿನಿಂದಲೇ ಕಾಯುತ್ತಿದ್ದಳು. ಅಂತೂ ಸಂಜೆಯವರೆಗೂ ಅವಳು ಹದ್ದಿನಂತೆ ಕಾಯುತ್ತಿದ್ದರೂ ಯಾವುದೋ ಮಾಯದಲ್ಲಿ ಆ ಗುಬ್ಬಿಗಳು ಬಂದು ಕೂತಿದ್ದವು. 'ಅಯ್ಯೋ ಆಗಲೇ ಬಂದು ಕುಳಿತಿವೆ' ಎಂದು ಅವಳು ಕಿರುಚಿದಾಗ ನಾವು 'ಅಯ್ಯೋ ನಿನಗೆ ಕಣ್ಣು ಸರಿಯಾಗಿಲ್ಲ, ಅದು ಬೆಳಗಿನಿಂದಲೇ ಕುಳಿತಿದೆ' ಎಂದಾಗ ಮತ್ತೆ ರಾದ್ದಾಂತ.
ಅವಳಿಗಂತೂ ಆ ಗುಬ್ಬಿಗಳು ಹೇಗೆ ಮಲಗುತ್ತವೇ ಎಂಬುದರ ಮೇಲೆಯೇ ಗಮನ. ಅದು ಮಲಗೇ ಇಲ್ಲ, ಕೂತುಬಿಟ್ಟಿದೆ, ಹೇಗೆ ನಿದ್ದೆ ಮಾಡುತ್ತದೆ ಎಂಬುದೇ ಅವಳ ಕುತೂಹಲ. ಅಂತೂ ಇನ್ಯಾವಗಲೋ ಬಂದು ನೋಡಿ ಗಟ್ಟಿಯಾಗಿ ಚೀರಿದಳು. ಏನಾಯಿತೇ ಎಂದಾಗ 'ಅಯ್ಯೋ ಅಲ್ಲಿರುವ ಗುಬ್ಬಿಗಳಿಗೆ ತಲೆಯೇ ಇಲ್ಲಾ' ಎಂದು ಅಳಲು ಪ್ರಾರಂಬಿಸಿದಳು. ಆ ಗುಬ್ಬಿಗಳು ಮಲಗುವಾಗ ಬೆಚ್ಚಗಿರಲು ತಲೆಯನ್ನು ಒಳಕ್ಕೆಳೆದುಕೊಂಡು ಹೆಗಲಮೇಲಿನ ಪುಕ್ಕಗಳೊಳಗೆ ಹುದುಗಿಸಿಕೊಂಡಿರುತ್ತದೆ. ಆಗ ಅವುಗಳ ತಲೆ ಕಾಣುವುದೇ ಇಲ್ಲ. ಇದನ್ನು ನೋಡಿ ಅವಳು ಹೆದರಿಬಿಟ್ಟಿದ್ದಳು. ನಂತರ ಅದನ್ನು ವಿವರಿಸಿ ಹೇಳಿ, ಮರುದಿನ ಅವು ಬಂದಕೂಡಲೇ ತೋರಿಸಿದಾಗಲೇ ಅವಳಿಗೆ  ಸಮಾಧಾನ.
ಗುಬ್ಬಿಗಳ ಕಣ್ಮರೆ
ಇಂದು ನಗರದಲ್ಲಿ ಗುಬ್ಬಚ್ಚಿಗಳು ಕಣ್ಮರೆಯಾಗುತ್ತಿವೆ. ಮನೆಗಳಲ್ಲಿ ಅದರ ಕಿಚಿಕಿಚಿ ಸದ್ದು ಸಹ ಕೇಳುವುದಿಲ್ಲ. ಇಂದಿನ ಮಕ್ಕಳಿಗಂತೂ ಅದರ ಬಗ್ಗೆ ಅರಿವೇ ಇಲ್ಲ. ಇದಕ್ಕೆ ಮುಖ್ಯ ಕಾರಣ ಮನೆಗಳ ಕಿಟಕಿಗೆ ಹಾಕಿರುವ ಮೆಶ್‍ಗಳು ಎಂದು ನನ್ನ ಅನಿಸಿಕೆ. ಇದರಿಂದ ಗುಬ್ಬಿಗಳು ಒಳಬರಲಾಗುವುದಿಲ್ಲ. ಹೊರಗೇ ಅವು ಇರಲೂ ಆಗುವುದಿಲ್ಲ. ಜೊತೆಗೆ ಅವುಗಳಿಗೆ ಆಹಾರವೂ ಮನೆಯಲ್ಲಿ ಸಿಗುವುದಿಲ್ಲ. ಫ್ರಿಜ್ಜು, ಶುಚಿಮಾಡಿದ ಅಕ್ಕಿ, ಬೇಳೆ, ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ಪ್ಯಾಕ್ ಮಾಡಿದ ಸಾಮಾನು ಮೊದಲಾದುವುಗಳು ಬಂದು ಅವಕ್ಕೆ ಆಹಾರಕ್ಕೂ ಪರದಾಡುವಂತ ಪರಿಸ್ಥಿತಿ ಒದಗಿದೆ. ರಾತ್ರಿಯ ವೇಳೆ ಹೊರಗೇ ಇದ್ದರೆ ಅವೇ ಇತರ ದೊಡ್ಡ ಪಕ್ಷಿಗಳಿಗೆ ಆಹಾರವೂ ಆಗಿರಬಹುದು. 
ನಮ್ಮ ಮನೆಯ ಹತ್ತಿ ಮರದಲ್ಲಿ ಅವುಗಳ ಚಿಲಿಪಿಲಿ ಸದ್ದನ್ನು ನೆನೆಸಿಕೊಂಡರೆ ನರ್ಸರಿ ಮಕ್ಕಳ ಗಲಾಟೆಯ ನೆನಪಾಗುತ್ತಿತ್ತು. ಅವು ಅದರಲ್ಲಿ ಬಿಡುವ ಹತ್ತಿಯನ್ನು ತಮ್ಮ ಗೂಡಿಗೆ ಬಳಸುತ್ತಿದ್ದವು. ಹತ್ತಿ ಬಿಡಿಸುವುದೇನಾದರೂ ತಡವಾದರೇ ನಮಗೆ ಒಂದು ಚೂರು ಹತ್ತಿಯೂ ಸಿಗುತ್ತಿರಲಿಲ್ಲ. ಇಂದು ಇದಕ್ಕೆ ಮೂಕ ಸಾಕ್ಷಿಯಾಗಿ ಬೇರೊಂದು ಹತ್ತಿ ಮರವಿದೆ ಆದರೆ ಅದರಲ್ಲಿ ಗುಬ್ಬಿಗಳ ಚಿಲಿಪಿಲಿ ಸದ್ದು ಮಾತ್ರಾ ಕಾಣೆಯಾಗಿದೆ. ಇದು ನಿಜವಾಗಿಯೂ ಬೇಸರದ ಸಂಗತಿಯೇ.
ಇಂದಿನ ಮಕ್ಕಳು ಮತ್ತು ಗುಬ್ಬಚ್ಚಿ 
ನಾವು ನಮ್ಮ ಮನೆಯ ಗುಬ್ಬಿಯ ಕತೆ ಹೇಳಿದರೆ ಮಗನಿಗೆ ಆಶ್ಚರ್ಯವೋ ಆಶ್ಚರ್ಯ. ಅವನಂತೂ ಗುಬ್ಬಿಯನ್ನೇ ಕಂಡಿಲ್ಲ. ಒಮ್ಮೆ ಎಲ್ಲೋ ಅದು ಹಾರುವುದನ್ನು ನೋಡಿ ಅಯ್ಯೋ ಒಂದು ದೊಡ್ಡ ಚಿಟ್ಟೆ ಹಾರಿ ಹೋಯಿತು ಎಂದುಕೊಂಡು ಬಿಟ್ಟ. ಯಾವುದೋ ಊರಿಗೆ ಹೋಗಿದ್ದಾಗ ಅಲ್ಲಿನ ಸ್ನಾನದ ಮನೆಯಲ್ಲೆ ಅದು ಗೂಡು ಕಟ್ಟಲು ಬಂದುದನ್ನು ನೋಡಿ ಅದೇನು ಎಂದು ಕಣ್ಣು ಕಣ್ಣು ಬಿಟ್ಟ. ಅದೇನೇಕಣೋ ಗುಬ್ಬಚ್ಚಿ ಎಂದಾಗ ಅವನಿಗೆ ಖುಷಿಯೋ ಖುಷಿ. ದಿನವೆಲ್ಲಾ ಅದು ಗೂಡು ಕಟ್ಟುವುದು, ಮರಿಗಳಿಗೆ ಆಹಾರ ತರುವುದು ಮೊದಲಾದುವನ್ನು ನೋಡಿ ಆಶ್ಚರ್ಯ ಪಟ್ಟ. ಹಳ್ಳಿಯ ಅಂಗಡಿಗಳ ಮುಂದೆ ಅಕ್ಕಿಯಲ್ಲಿ ಬತ್ತವನ್ನು ಅವು ಹುಡುಕಿ ತಿನ್ನುವುದು, ಅವರೆಕಾಯಿಯಲ್ಲಿರುವ ಹುಳವನ್ನು ಕೊಕ್ಕಿನಿಂದ ಕಚ್ಚಿ ಹಾರುವುದು ಇವೆಲ್ಲವೂ ಅವನಿಗೆ ಯಾವುದೋ ಹೊಸ ಕೇಳರಿಯದ ಸಂಗತಿಗಳಾಗಿದ್ದವು. ಅಕ್ಕಿ ಮಾಡುವವರ ಬಳಿಯೇ ಅವು ಗುಂಪಾಗಿ ಕುಳಿತು ಧೈರ್ಯವಾಗಿ ಭತ್ತ, ಅಕ್ಕಿ ಕದಿಯುವುದನ್ನು ಕಂಡು ಅವನಿಗೇನೋ ಸೋಜಿಗ. ಇದನ್ನೆಲ್ಲಾ ನೋಡಿದಾಗ ನಾವೇ ಪುಣ್ಯವಂತರು ಅನ್ನಿಸಿತು. ಇಂದಿನ ಮಕ್ಕಳಿಗೆ ಏನೇನೋ ಸವಲತ್ತು, ಸೌಕರ್ಯಗಳಿರಬಹುದು ಆದರೆ ಇಂತಹ ಸರಳವಾದ ಪ್ರಕೃತಿಸಹಜ ಜ್ಞಾನವನ್ನೇ ಅವರು ಕಳೆದುಕೊಳ್ಳುತ್ತಿದ್ದಾರಲ್ಲಾ ಅನ್ನಿಸಿತು.
ಇದು ಒಂದು ಸಣ್ಣ ಗುಬ್ಬಿಯ ಕತೆಇರಬಹುದು ಆದರೆ ಅದರಿಂದ ಕಲಿತ ಪಾಠ, ಅದರ ನೆನಪು ಎಂದೆಂದಿಗೂ ಮರೆಯಲಾಗದು. ಆ ಬಾಲ್ಯದ ದಿನಗಳು ಮತ್ತೆ ಬಂದೀತೇ, ಬರಬಾರದೇ ಎಂದು ಈಗಲೂ ಅನ್ನಿಸುತ್ತಿರುತ್ತದೆ. 

ಬರೆದವರು - ಪ್ರೊ. ಬಿ. ಎಸ್. ಜಗದೀಶ ಚಂದ್ರ, ನಂ 442, 38ನೇ ಕ್ರಾಸ್, 5ನೇ ಬ್ಲಾಕ್, ಜಯನಗರ, ಬೆಂಗಳೂರು 560 041, bsjchandra@gmail.com, 7022237041. 9342009886

ಹಳ್ಳಿಯೊಂದರ ಸ್ನಾನದ ಮನೆಯಲ್ಲಿ ಗುಬ್ಬಿಯನ್ನು ಮೊದಲಬಾರಿ ಕಂಡದ್ದು 

ದೇವರ ಗೂಡಿನಲ್ಲಿ ಗುಬ್ಬಿ ಮರಿ - ಮಗುವಿಗೊಂದು ಆಟಿಗೆ 

ಅಟ್ಟದ ಮೇಲಿನ ಸಾಮಾನುಗಳ ಸಂದುಗಳಲ್ಲಿ ಗುಬ್ಬಿಯ ಗೂಡು, ಸಂಸಾರ, ಸಾಮಾನು ತೆಗೆಯುವಾಗ ನಮಗೆ ಧರ್ಮ ಸಂಕಟ  

ಬಟ್ಟೆ ಹರವಲು ಕಟ್ಟುವ ಕಂಬಿಯ ಗೂಟವೇ ಗುಬ್ಬಿಯ ಮಲಗುವ ಮನೆ, ರಾತ್ರಿ ಮಲಗಿದಾಗ ತಲೆಯೇ ಕಾಣುವುದಿಲ್ಲ ಒಂದೊಂದೇ ಗರಿ ಕಿತ್ತು ಗೂಡು ಕಟ್ಟುವ ಸಂಭ್ರಮ, ಅದನ್ನು ನೋಡುತ್ತಾ ಕುಳಿತರೆ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ  

ದೇವರ ಗೂಡಿನಬಳಿ ಮಗುವಿನ ಕೈಗೆ ಸಿಕ್ಕಲಿದ್ದ  ಗುಬ್ಬಿಮರಿ 
Saturday, May 27, 2017

ನೆನಪಿನ ಸೈಕಲ್ಲುಗಳಲ್ಲಿ ತಿರುಗಿದಾಗ

ನೆನಪಿನ ಸೈಕಲ್ಲುಗಳಲ್ಲಿ ತಿರುಗಿದಾಗ
ಸೈಕಲ್ಲು ಎಂದರೆ ಸಾಕು ಬಾಲ್ಯ ಜೀವನದ ನೆನಪುಗಳು ಕಾಡುತ್ತದೆ. ಮೊನ್ನೆ ಹರಿಯಾಣಾದ ಹಿಸ್ಸಾರ್ ಎಂಬಲ್ಲಿ ವಿದ್ಯಾರ್ಥಿಗಳು 2008ನೆಯ ಇಸವಿಯನ್ನು ‘ಸೈಕಲ್ಲಿನ ವರ್ಷ’ ಎಂದು ಆಚರಿಸಿ ಜಾತಾ ಹೊರಟ ಸುದ್ದಿಯನ್ನು ಓದಿದಾಗ ಮನಸ್ಸಿಗೆ ಏನೋ ಒಂದು ರೀತಿಯ ಖುಷಿಯಾಯಿತು. ಇದು ಕೇವಲ ಸೈಕಲ್ಲಿನ ಜಾತಾ ಆಗಿರದೇ ಪರಿಸರ ಮಾಲಿನ್ಯ, ಕುಡಿತದ ಕೆಟ್ಟ ಪರಿಣಾಮಗಳು ಮೊದಲಾದುವುಗಳ ದುಶ್ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದೂ ಅವರ ಉದ್ದೇಶವಾಗಿತ್ತು. ಈ ಸಂದರ್ಭದಲ್ಲಿ ಅಲ್ಲಿನ ಮುಖ್ಯ ಮಂತ್ರಿಗಳು ಅಲ್ಲಿನ ಕಾಲೇಜಿಗೆ ಒಂದು ಲಕ್ಷ ರೂಗಳನ್ನು ದಾನ ನೀಡಿ ಅದರಲ್ಲಿ ಸೈಕಲ್ಲುಗಳನ್ನು ಕೊಂಡು ಅದರಲ್ಲಿ ಹಳ್ಳಿಗಳಿಗೆ ಹೋಗಿ ಇಂತಹ ಜನಸೇವೆಯನ್ನು ಮಾಡಿ ಎಂದು ಹಾರೈಸಿದರಂತೆ. ಇದನ್ನು ಓದಿದಾಗ ನಮ್ಮ ಕರ್ನಾಟಕದಲ್ಲೂ ಶಾಲಾ ಬಾಲಕಿಯರಿಗೆ ಉಚಿತ ಸೈಕಲ್ಲುಗಳನ್ನು ವಿತರಿಸಿದ್ದು ನೆನಪಿಗೆ ಬಂತು. ಇಲ್ಲಿನ ಇತರೆ ವಾಹನಗಳ ಭರಾಟೆಯನ್ನು ನೋಡಿದರೆ ಅವು ಈ ಬಡಪಾಯಿ ಸೈಕಲ್ಲುಗಳನ್ನು ಎಲ್ಲಿ ತುಳಿದು ತೊಪ್ಪೆ ಮಾಡಿಬಿಡುವವೋ ಎಂದು ಭಯವಾಗಿತ್ತು. ಆದರೆ ಇಂತಹ ಸಿಹಿ ಸುದ್ದಿಗಳು ನಿಜಕ್ಕೂ ಸಂತೋಷ ತರುವಂತಹ ವಿಷಯವೇ.
ಕಾರಿಲ್ಲದ ಜೀವನ
ಇದೇ ಸಮಯದಲ್ಲಿ ಅಮೇರಿಕಾದ ಇನ್ನೊಂದು ಸುದ್ದಿ ಓದಿದೆ. ನಮಗೆ ಅದು ಒಂದು ರೀತಿಯ ವಿಚಿತ್ರ ಸುದ್ದಿಯೇ. ಅಮೆರಿಕಾದ ಬಾಸ್ಟನ್ನಿನಲ್ಲಿರುವ ಒಬ್ಬಾತ ಹೀಗೆ ಸೈಕಲ್ಲಿನ ಅಭ್ಯಾಸ ಮಾಡಿಕೊಂಡು ದಿನವೂ 10 ಮೈಲಿ ದೂರದಲ್ಲಿರುವ ಕಛೇರಿಗೆ ದಿನವೂ ಹೋಗುತ್ತಾನಂತೆ. ಅಂದರೆ ದಿನಕ್ಕೆ 20 ಮೈಲಿ. ಅಂದರೆ ವಾರಕ್ಕೆ (5 ದಿನದಂತೆ) 100 ಮೈಲಿ. ಅವನಿಗೆ ಸೈಕಲ್ಲಿನ ಸರಳತೆ ಹಾಗೂ ಅದರ ಮೇಲಿನ ಪ್ರಯಾಣ ಎಷ್ಟು ಮುದ ನೀಡಿದೆಯೆಂದರೆ ತನ್ನ ಮನೆ ಮಂದಿಗೂ ಈ ಸೈಕಲ್ಲಿನ ಗುಂಗು ಹಿಡಿಸಿ ಈಗ ತನ್ನ ಕಾರನ್ನು ಮಾರಿಬಿಟಿದ್ದಾನಂತೆ.
ಅಲ್ಲಿಯ ಇನ್ನೊಬ್ಬಾತನಿಗೆ ಕಾರಿನಲ್ಲಿ ಓಡಾಡಿ, ಅಲ್ಲಿಯ ವಾಹನಗಳ ನಡುವೆ ಸಿಕ್ಕಿ ಹಾಕಿಕೊಂಡು ಕೆಲಸಕ್ಕೆ ಗಂಟೆಗಟ್ಟಲೆ ತಡವಾಗಿ ತಲುಪುವುದು ಸಾಮಾನ್ಯವಾಗಿತ್ತು. ಆದ್ದರಿಂದ ಒಂದು ದಿನ ಸೈಕಲ್ಲಿನಲ್ಲಿ ಏಕೆ ಓಡಾಡಬಾರದು? ಎಂದು ಅದನ್ನು ಉಪಯೋಗಿಸಿದನಂತೆ. ಈ ಸೈಕಲ್‍ಯಾನ ಅವನಿಗೆ ಒಂದು ನವೀನ ಅನುಭವ ಸಂತಸ ನೀಡಿತಂತೆ. ವಿಚಿತ್ರವೆಂದರೆ ಈ ಭೂಪನೂ ಸೈಕಲ್ ನೀಡುವ ಸಂತೋಷಕ್ಕಾಗಿ ತನ್ನ ಕಾರನ್ನೇ ಮಾರಿಬಿಟ್ಟನಂತೆ. ಈಗ ಬೇಕೇ ಬೇಕೆಂದಾಗ ಬಾಡಿಗೆ ಕಾರನ್ನು ಉಪಯೋಗಿಸುತ್ತಾನಂತೆ. ಇದಕ್ಕಿಂತ ಮುಖ್ಯವಾಗಿ ಅವನ ಈ ನಿರ್ಧಾರಕ್ಕೆ ಅವನ ಹೆಂಡತಿಯ ಸಹಮತವೂ ಸಿಕ್ಕಿದ್ದು. ಎಂತಹ ಅದೃಷ್ಟವಂತ ನೋಡಿ! ನಮ್ಮಲ್ಲಾದರೆ, ಮೊದಲು ಆ ಸ್ಕೂಟರ್ ಬಿಸಾಕಿ ಒಂದು ಒಳ್ಳೆಯ ಕಾರನ್ನು, ಅದರಲ್ಲೂ, ತನ್ನ ಸೋದರಿಯ ಅಥವಾ ವಾರಗಿತ್ತಿಯ ಮನೆಯಲ್ಲಿರುವ ಕಾರಿಗಿಂತ ಹೆಚ್ಚಿನ ಬೆಲೆಯದನ್ನು ತರಲೇ ಬೇಕೆಂಬ ಆಜ್ಞೆ ಮಾಡುವ ಹೆಂಡತಿಯರೇ ಹೆಚ್ಚು. ಅಲ್ಲಿ ಆತ ತನ್ನ ಹೆಂಡತಿಯನ್ನು ಕೂಡಿಸಿಕೊಳ್ಳಲೂ ಒಂದು ಕ್ಯಾಬ್ ಸಹಾ ಮಾಡಿಸಿದ್ದಾನಂತೆ. ಅವಳ ಅಂತಹ ದೊಡ್ಡ ಸಹಕಾರಕ್ಕೆ ಅಷ್ಟೂ ಬೇಡವೇ? ಆ ಕ್ಯಾಬಿನಲ್ಲಿ ಮನೆಗೆ ಬೇಕಾಗುವ ವಸ್ತುಗಳನ್ನೂ ತರಬಹುದಂತೆ. ಸಂಸಾರ ಸಮೇತ ಇಂತಹ ಸೈಕಲ್ಲಿನಲ್ಲಿ ಅವರು ಮಜವಾಗಿ ಓಡಾಡಿಕೊಂಡಿದ್ದಾರಂತೆ. ಇಂತಹ ಸಂಗತಿಯನ್ನು ಭಾರತದಲ್ಲಿ ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಅಲ್ಲವೇ? ಇದನ್ನು ಓದಿದಾಗ ನಮಗೆ ತಕ್ಷಣಕ್ಕೆ ಜ್ಞಾಪಕಕ್ಕೆ ಬರುವುದು ಹೆಂಡತಿಯನ್ನು ಕೂಡಿಸಿಕೊಂಡು ಡಬ್ಬಲ್ ರೈಡ್ ಮಾಡುವ ಹಳ್ಳಿಯ ಜನ ಅಥವಾ ಕೂಲಿಗೆ ಹೋಗುವ ಜನ. ಇದನ್ನು ನೋಡಿ ನಮ್ಮಲ್ಲಿ ನಗುವವರೇ ಹೆಚ್ಚು. ಆದರೆ ಅವರವರ ಕಷ್ಟ ಅವರಿಗೆ ಅಲ್ಲವೇ? ಯಾರಿಗೆ ಗೊತ್ತು, ಅವಶ್ಯಕತೆಯೊಂದಿಗೆ ಅದರಲ್ಲಿ ಅವರಿಗೂ ಒಂದು ರೀತಿಯ ಸುಖ, ತೃಪ್ತಿಯೂ ಇತ್ತೇನೋ. ಇತ್ತೀಚೆಗೆ ಇಂತಹ ಪ್ರಸಂಗಗಳೂ ಕಡಿಮೆಯಾಗಿ, ಈ ಡಬ್ಬಲ್ ರೈಡ್ ಮಾಡುವವರೂ ಪಾಸನ್ನು ಮಾಡಿಸಿಕೊಂಡು ಬಸ್ಸಿನಲ್ಲಿ ಓಡಾಡಲು ಆರಂಭಿಸಿದ್ದಾರೆ.
ಈಗ ವಾಹನಗಳ ದಟ್ಟಣೆಯಿಂದ ಆಮೆಯ ವೇಗದಲ್ಲಿ ಚಲಿಸುವ ವಾಹನಗಳಿಗೆ ಹೋಲಿಸಿದರೆ ನಗರಗಳಲ್ಲಿ 5ರಿಂದ 10 ಮೈಲಿ ದೂರ ಇರುವ ಜಾಗಗಳಿಗೆ ಹೋಗಬೇಕೆಂದರೆ ಸೈಕಲ್ಲೇ ಅತ್ಯುತ್ತಮ. ಅಲ್ಲಿ ಇಲ್ಲಿ ತೂರಿಸಿಕೊಂಡು, ಬೇಕೆಂದರೆ ತಳ್ಳಿಕೊಂಡು ಅತ್ಯಂತ ವೇಗವಾಗಿ ತಲುಪಿಬಿಡಬಹುದು. ಇದು ಪರಿಸರವನ್ನು ಮಾಲಿನ್ಯಮಾಡುವುದೂ ಇಲ್ಲ ಎಂಬುದು ಇದರ ಹೆಗ್ಗಳಿಕೆ. ನಿಲ್ಲಿಸಲು ಸಣ್ಣ ಜಾಗವಿದ್ದರೆ ಸಾಕು, ಶಬ್ದವೆಂಬುದು ಇಲ್ಲವೇ ಇಲ್ಲ, ಪೆಟ್ರೋಲ್ ಖರ್ಚಿಲ್ಲ, ಜಿಮ್‍ಗೆ ಹೋಗಬೇಕಾಗಿಲ್ಲ, ಹೋಗುವಾಗ ಪ್ರಕೃತಿಯ ಸೊಬಗನ್ನು ಸವಿಯುತ್ತಾ ಬೇಕೆಂದಲ್ಲಿ ನಿಲ್ಲಿಸಿ ಅದನ್ನು ಆಸ್ವಾದಿಸಬಹುದು. ಇಂತಹ ಸೌಕರ್ಯ ನಿಮಗೆ ಕಾರಿನಲ್ಲಿ ಸಿಗುವುದೇ ಎಂಬುದು ಅಮೆರಿಕಾ ವಾಸಿಯ ಅಂಬೋಣ. ಬೆಂಗಳೂರಿನಂತಹ ಕಾಂಕ್ರೀಟ್ ಕಾಡಿನಲ್ಲಿ ಎಂತಹ ಪ್ರಕೃತಿ ಎಂದು ಮೂಗು ಮುರಿಯಬೇಡಿ. ಇದು ಉದ್ಯಾನಗಳ ನಗರ ಅಲ್ಲವೇ, ಅದನ್ನು ನಿಜಮಾಡಿದರಾಯಿತು.
ಸೈಕಲ್ಲು ಬಳಸಿದಾಗ ಅದರಲ್ಲಿ ನಮ್ಮ ಸ್ವಪ್ರಯತ್ನವೂ ಉಂಟು, ತಾಂತ್ರಿಕತೆಯೂ ಉಂಟು, ಜೊತೆಗೆ ನಮಗೆ ಚಾಲನೆ ಮಾಡಿದ ಸಂತೋಷ, ತೃಪ್ತಿ, ದಾರಿಯಲ್ಲಿನ ಪ್ರಕೃತಿಯ ಒಡನಾಟ, ಮುನಿಸು ಎಲ್ಲದರ ಅನುಭವವೂ ಸಿಗುತ್ತದೆ. ಇದು ಸೈಕಲ್ಲಿನೊಂದಿಗೆ ಒಂದು ರೀತಿಯ ಆತ್ಮೀಯತೆಯನ್ನು ಬೆಳೆಸುತ್ತದೆ. ಎಲ್ಲದರಲ್ಲೂ ನಾನು ನಿನ್ನೊಂದಿಗೆ ಒಡನಾಡಿ ಎಂಬ ಒಂದು ಅನ್ಯೋನ್ಯ ಸಂಬಂಧ ಬೆಳೆದುಬಿಡುತ್ತದೆ. ಇದರಿಂದಲೇ ಅದು ಅಷ್ಟೊಂದು ಜನಪ್ರಿಯವಾಗುತ್ತಿರುವುದು.
ಅನುಕೂಲಗಳು
ದಾರಿಯಲ್ಲಿ ಯಾರಾದರೂ ಗೆಳೆಯರು ಸಿಕ್ಕಿದರೆನ್ನಿ, ಅವರ ಹೆಗಲ ಮೇಲೆ ಕೈ ಹಾಕಿಕೊಂಡು ಅವರೊಂದಿಗೆ ನೀವೂ ಸೈಕಲ್ಲು ತುಳಿಯುತ್ತಾ ಹೋಗಬಹುದಲ್ಲವೇ. ಇಲ್ಲವಾದರೆ ಸೈಕಲ್ಲನ್ನು ತಳ್ಳಿಕೊಂಡು ಅವರೊಂದಿಗೆ ನಡೆದೇ ಹೆಜ್ಜೆ ಹಾಕಬಹುದು. ಗೆಳೆಯನ ಕೈಯಲ್ಲಿ ಭಾರವಾದ ಸಾಮಾನಿದ್ದರೆ ಅದನ್ನು ಸೈಕಲ್ಲಿನ ಬೆನ್ನ ಮೇಲೋ ಅಥವಾ ಅದರ ಹ್ಯಾಂಡಲಿಗೋ ತಗುಲುಹಾಕಿ ಆರಾಮವಾಗಿ ಮಾತಾಡುತ್ತಾ ಸಾಗಬಹುದು. ತಾಕತ್ತಿದ್ದರೆ ಅವರನ್ನು ಕೂಡಿಸಿಕೊಂಡು ಡಬ್ಬಲ್ ರೈಡನ್ನೂ ಮಾಡಬಹುದು. ಇಂದಿನವರಿಗೆ ಈ ತಾಕತ್ತು ಇರುವುದು ಸಂದೇಹ. ನಮ್ಮ ಹಿರಿಯಾರಾರಾದರೂ ಇದ್ದಿದ್ದರೆ ಅವರಿಗೆ ಈ ಕೆಲಸ ನೀರು ಕುಡಿದಂತೆ. 
ನಿಮಗೆ ಮಗುವೊಂದಿದ್ದರೆ ಅದನ್ನು ಸೈಕಲ್ಲಿನ ಮುಂದೆ ಒಂದು ಚಿಕ್ಕ ಸೀಟನ್ನು ಹಾಕಿಸಿ ಅದರ ಮೇಲೆ ಕೂಡಿಸಿಕೊಂಡು ಓಡಾಡಿದರೆ ಅದರಿಂದ ಸಿಗುವ ಆನಂದ ನಿಮಗೆ ಕಾರಿನಲ್ಲಿ ಕೂಡಿಸಿಕೊಂಡು ಹೋದರೆ ಖಂಡಿತಾ ಸಿಗುವುದಿಲ್ಲ. ಮಕ್ಕಳನ್ನು, ಹೆಂಡತಿಯನ್ನು, ಗೆಳತಿಯನ್ನು ಹೀಗೆ ಮುಂದೆ ಸೀಟಿನ ಮೇಲೋ ಇಲ್ಲವೇ ಬಾರ್ ಕಂಬಿಯ ಮೇಲೆ ಕೂಡಿಸಿಕೊಂಡು ಸಾಗುವ ದೃಶ್ಯವನ್ನು ನಮ್ಮ ಹಳೆಯ ಸಿನಿಮಾಗಳಲ್ಲಿ ಮಾತ್ರ ಇಂದು ನಾವು ನೋಡಿ ಆನಂದಿಸಬಹುದು.
ನೀವು ಸೈಕಲ್ಲಿನ ಮೇಲೆ ಕುಳಿತು ಓಡಾಡುವುದನ್ನು ಅಭ್ಯಾಸ ಮಾಡಿಕೊಂಡುಬಿಟ್ಟರೆ ನಿಮಗೆ ತಿಂದದ್ದೆಲ್ಲವೂ ಜೀರ್ಣವಾಗಿ ಹಸಿವೋ ಹಸಿವಾಗಿ ಹಪಹಪಿಸುವಂತಾಗುತ್ತದೆ. ಇದರಿಂದ ಬೇರ್ಯಾವ ಜಿಮ್ಮುಗಳಿಗೆ ಅಲೆಯ ಬೇಕಾಗಿಲ್ಲ. ಇದರಿಂದ ಖರ್ಚಿಲ್ಲದೇ ವ್ಯಾಯಾಮವಾಗಿ ಆರೋಗ್ಯವೂ ಸುಧಾರಿಸುತ್ತದೆ. ಅಲ್ಲದೇ ನಿಮ್ಮ ಸೈಕಲ್ಲಿನ ಪ್ರಯಾಣದ ದಾರಿಯೇನಾದರೂ ಆಹ್ಲಾದಕರವಾಗಿದ್ದರೆ ನಿಮಗೆ ಮಾಡುವ ಕೆಲಸದಲ್ಲೂ ಹುರುಪು ಬರುವುದಂತೂ ಗ್ಯಾರಂಟಿ. 
ನಗರದಲ್ಲಿ ಯಾವ ವಾಹನ ಮೊದಲು?
ಒಮ್ಮೆ ನಾನು ಕಾರಿನಲ್ಲಿ ಜಯನಗರದಿಂದ ಕೆಂಪೇಗೌಡ ನಿಲ್ದಾಣಕ್ಕೆ ನೆಂಟರನ್ನು ಬೀಳ್ಕೊಡಲು ಹೊರಟಿದ್ದೆ. ಅದೇ ಸಮಯಕ್ಕೆ ನನ್ನ ಮೈದುನನೂ ಫೋನ್ ಮಾಡಿ ತಾನೂ ಸ್ಕೂಟರಿನಲ್ಲಿ ಅಲ್ಲಿಗೆ ಬರುವೆ ಎಂದ ಹೇಳಿದ. ಅವನೂ ಜಯನಗರದಲ್ಲೇ ಒಂಭತ್ತನೆಯ ಬ್ಲಾಕಿನಿಂದ ಹೊರಟಿದ್ದ. ಬಂದವರ ಸಾಮಾನುಗಳನ್ನು ಇಳಿಸಿಕೊಳ್ಳಲು ಸಹಾಯಕ್ಕೆಂದು ನಮ್ಮ ತಿಮ್ಮನೂ ಹೊರಟಿದ್ದ. ಆದರೆ ಕಾರಿನಲ್ಲಿ ಜಾಗ ಸಾಕಾಗುತ್ತಿರಲಿಲ್ಲ. ಅವನು ನಾನು ಸೈಕಲ್ಲಿನ ಮೇಲೆ ಬರುತ್ತೇನೆ ಎಂದ. ಸರಿ ಎಂದು ಎಲ್ಲರೂ ಹೊರಟೆವು. ಆಶ್ಚರ್ಯವೆಂದರೆ ನಮ್ಮಲ್ಲಿ ಮೊದಲು ನಿಲ್ದಾಣವನ್ನು ತಲುಪಿದ್ದು ತಿಮ್ಮ. ನಂತರ ಬಂದದ್ದು ನನ್ನ ಗೆಳೆಯ ಸ್ಕೂಟರಿನ ಮೇಲೆ. ಕಡೆಯಲ್ಲಿ ತಲುಪಿದ್ದು ನಾನು, ಕಾರಿನಲ್ಲಿ. ಈಗ ತಿಳಿಯಿತಲ್ಲವೇ ನಗರದೊಳಗಿನ ಸೈಕಲ್ಲಿನ ಮಹಿಮೆ.
ಉಪಯೋಗ ಹೇಗೆ?
ನಮ್ಮ ನಗರದ ಈ ವಾಹನ ದಟ್ಟಣೆಯ ನಡುವೆ ಸೈಕಲ್ಲಿನಲ್ಲಿ ಹೋಗುವುದಾದರೂ ಹೇಗೆ ಎಂದು ಯೋಚನೆಯೇ? ಚಿಂತಿಸ ಬೇಡಿ. ನಿಮ್ಮ ಮಾರ್ಗಕ್ಕೆ ಯಾವುದಾದರೂ ಸಣ್ಣ ಸಣ್ಣ ಗಲ್ಲಿಗಳನ್ನು ಆಯ್ದು ಕೊಳ್ಳಿ. ಇದರಿಂದ ನಿಮಗೆ ಆ ಗಲ್ಲಿಗಳ ಪರಿಚಯವೂ ಆಗುವುದು, ವಾಹನಗಳ ತೊಂದರೆಯೂ ಇರುವುದಿಲ್ಲ. ನಿಮಗೆ ಸೈಕಲ್ಲಿನ ಪ್ರಯಾಣ ಅತಿ ದೂರ ಎನ್ನಿಸಿದರೆ ವಾರದಲ್ಲಿ ಒಂದೆರಡು ದಿನವಾದರೂ ಸೈಕಲ್ಲನ್ನು ಉಪಯೋಗಿಸಿ. ಅಥವಾ ಅರ್ಧದೂರ ಸೈಕಲ್ಲಿನಲ್ಲಿ ಹೋಗಿ ನಂತರ ಅದನ್ನು ಅಲ್ಲಿಯೇ ಎಲ್ಲಾದರೂ ನಿಲ್ಲಿಸಿ ಮುಂದೆ ಬೇರೆ ವಾಹನದಲ್ಲಿ ಓಡಾಡಬಹುದು.
ನೀವು ಕೆಲಸ ಮಾಡುವ ಜಾಗವು ಒಂದು ಕ್ಯಾಂಪಸ್ಸಿನಂತಿದ್ದರೆ, ಅಲ್ಲಿ ನಿಮಗೆ ಓಡಾಟಗಳು ಹೆಚ್ಚಿದ್ದರೆ ಆಗ ನೀವು ನಿಮ್ಮ ಕಛೇರಿಯಲ್ಲೇ ಒಂದು ಸೈಕಲ್ಲನ್ನು ಇಟ್ಟು ಬಿಟ್ಟಿದ್ದರೆ ನಿಮಗೆ ಓಡಾಟವೂ ಸರಾಗ. ನಮ್ಮ ಬೆಂಗಳೂರಿನ ಕ್ಯಾಂಪಸ್ ಒಂದರಲ್ಲಿ ಕಂಪನಿಯವರೇ ಹೀಗೆ ಸೈಕಲ್ಲುಗಳನ್ನು ಇಟ್ಟುಬಿಟ್ಟಿದ್ದಾರಂತೆ. ಬೇಕಾದವರು ಅದನ್ನು ತೆಗೆದುಕೊಂಡು  ಎಲ್ಲಿಯಾದರೂ ಓಡಾಡಬಹುದು. ನಂತರ ನಿಮ್ಮ ಕೆಲಸ ಮುಗಿಸಿ ಹೊರಬಂದಾಗ ನಿಮ್ಮ ಸೈಕಲ್ಲು ಅಲ್ಲಿಲ್ಲದಿದ್ದರೆ ಗಾಬರಿಯಾಗಬೇಡಿ. ಅಲ್ಲೇ ಇರುವ ಇನ್ಯಾವುದಾದರೂ ಸೈಕಲ್ಲನ್ನು ತೆಗೆದುಕೊಂಡು ಬೇಕಾದಲ್ಲಿಗೆ ಹೋಗಿ. ಹಾಗೆಂದು ಅದನ್ನು ತೆಗೆದುಕೊಂಡು ಕ್ಯಾಂಪಸ್ಸಿನಿಂದ ಹೊರಗೆ ಹೋಗಲು ನೋಡಬೇಡಿ. ಈ ಅನುಕೂಲ ಕ್ಯಾಂಪಸ್ಸಿನೊಳಗೆ ಮಾತ್ರಾ. ಎಷ್ಟು ಸುಂದರವಾದ ಪರಿಕಲ್ಪನೆಯಲ್ಲವೇ?
ಹಳೆಯ ನೆನಪು
ಸೈಕಲ್ಲು ಎಂದರೆ ನನಗೆ ನೆನಪು ಬರುವುದು ನಾನು ಹೈಸ್ಕೂಲಿನಲ್ಲಿ ಶಾಲೆಗೆ ಹೋಗುತ್ತಿದ್ದುದು. ಜಯನಗರದಿಂದ ದಿನವೂ ಗಾಂದಿಬಜಾóರ್‍ಗೆ ನನ್ನ ಪ್ರಯಾಣ. ಎಂಟನೆಯ ತರಗತಿಯಲ್ಲಿ ಬಸ್ಸಿನಲ್ಲಿ ಆಗುತ್ತಿದ್ದ ಕಿರಿಕಿರಿಯಿಂದ ನನಗೆ ಈ ಸೈಕಲ್ ಮುಕ್ತಿ ನೀಡಿತ್ತು. ನನಗೆ ಬೇಕಾದಂತೆ ನಾನು ಆಗ ಸ್ವತಂತ್ರವಾಗಿ ಓಡಾಡಿಕೊಂಡಿದ್ದೆ. ದಿನವು ಒಂದೊಂದು ದಾರಿಯಲ್ಲಿ ಓಡಾಡಿ ನನಗೆ ಅಲ್ಲಿ ಎಲ್ಲ ದಾರಿಗಳು ಪರಿಚಿತವಾಗಿದ್ದವು. ಹೊತ್ತಾದರಂತೂ ನಮ್ಮ ಸೈಕಲ್ಲು ಯಾವ ಶತಾಬ್ಧಿಗೂ ಕಡಿಮೆ ಇರಲಿಲ್ಲ. ಬೆಟ್ಟದಂತಿರುವ ರಸ್ತೆಯಲ್ಲಿ ನಾವು ಸೀಟಿನೆಂದೆದ್ದು ಬಾರ್ ತುಳಿಯುತ್ತಿದ್ದ ಪರಿಯನ್ನು ನೆನಪಿಸಿಕೊಂಡರೆ, ಈಗ ಹಾಗೆ ಬಿಡಲು ಸಾಧ್ಯವೇ ಎಂದು ಅನುಮಾನ ಬರುತ್ತದೆ. ಆದರೆ ವಾಪಸ್ಸು ಬರುವಾಗ ಗೆಳೆಯರೊಂದಿಗೆ ನಿಧಾನವಾಗಿ ಮಾತಾಡಿಕೊಂಡು ಬರುತ್ತಿದ್ದ ಮಜವೇ ಬೇರೆ. ನ್ಯಾಶನಲ್ ಕಾಲೇಜಿನಲ್ಲಿದ್ದಾಗ ಅಲ್ಲಿ ಕೆ. ಆರ್. ಎಂಬುವವರು ಸೈಕಲ್ಲಿನ ಮೇಲೆ ಕುಳಿತೇ ಪೇಪರ್ ಓದಿಕೊಂಡು ಹೋಗುವ ಪ್ರದರ್ಶನ ಮಾಡಿದ್ದರು. ಅದನ್ನು ನೋಡಿ ಅದೆಷ್ಟು ಮರುಳಾದವೆಂದರೆ, ನಾವೂ ಮಾಡಬೇಕೆಂದು ಅನೇಕ ಬಾರಿ ಪ್ರಯತ್ನಿಸಿ ಬಿದ್ದು ಮನೆಯಲ್ಲಿ ಬೈಸಿಕೊಂಡಿದ್ದು ಅದೆಷ್ಟುಬಾರಿಯೋ. ಇದೇ ರೀತಿ ಕಾಲೇಜಿನ ಕ್ರೀಡೆಗಳಲ್ಲಿ ನಡೆಯುತ್ತಿದ್ದ ಸ್ಲೋ ಸೈಕಲ್ ರೇಸ್ ಸಹಾ ಒಂದು. ಇದನ್ನಂತೂ ಇರುವ ಸಣ್ಣ ಜಾಗದಲ್ಲೇ ಅದೆಷ್ಟು ಬಾರಿ ಬಿದ್ದು ಎದ್ದು ಮಾಡುತ್ತಿದ್ದೇವೋ, ಸೈಕಲ್ ಚಕ್ರ ಹಾಳಾಗುತ್ತದೆ ಎಂದು ಮನೆಯಲ್ಲಿ ಬೈಗುಳಗಳೂ ಆಗುತ್ತಿದ್ದವು.
ಇದಾದ ನಂತರ ಕೆ. ಆರ್. ಸರ್ಕಲ್ಲಿನಲ್ಲಿದ್ದ ಯೂವಿಸಿಯಿಗೂ (ಇಂಜಿನಿಯರಿಂಗ್ ಕಾಲೇಜು) ನನ್ನ ಪ್ರಯಾಣ ಸೈಕಲ್ಲಿನಲ್ಲೇ ಮುಂದುವರೆದಿತ್ತು. ಈ ಪ್ರಯಾಣವು ದೂರವಾಗಿದ್ದರೂ ಬಸ್ಸಿಗಿಂತ ಇದೇ ಅನುಕೂಲವೆನ್ನಿಸಿತ್ತು. ಸೈಕಲ್ಲಿಗೆ ಒಂದು ಟಿ ಸ್ಕ್ವೇರನ್ನು ಸಿಕ್ಕಿಸಿಕೊಂಡು, ಹ್ಯಾಂಡಲಿಗೆ ಡ್ರಾಯಿಂಗ್ ಶೀಟನ್ನು ಕಟ್ಟಿಕೊಂಡರೆ ನನ್ನ ಪ್ರಯಾಣದ ಎಲ್ಲಾ ಸಿದ್ಧತೆಯೂ ಮುಗಿದಂತೆ. ಈ ಪ್ರಯಾಣದಲ್ಲಿ ದಾರಿಯಲ್ಲಿ ಕೂಡಿಕೊಳ್ಳುವ ಗೆಳೆಯರು. ಇತರ ಗೆಳೆಯರೇನಾದರೂ ಮುಂದೆ ಹೋಗುತ್ತಿದ್ದುದು ಕಂಡರೆ ವೇಗದಿಂದ ಹೋಗಿ ಅವರನ್ನು ಕೂಡಿಕೊಳ್ಳುತ್ತಿದ್ದೆವು. 
ಬೆಳಗಿನ ಛಳಿಯಲ್ಲಿ ನಾವು ಏಳೂವರೆಯ ತರಗತಿಗಳಿಗೆ ಹೋಗಬೇಕಿತ್ತು. ಆಗ ಹೋದ ಕೂಡಲೆ ಮರಗಟ್ಟಿದ ಕೈಗಳನ್ನು ಉಜ್ಜಿಕೊಂಡು ಪಾಠಗಳನ್ನು ಬರೆದುಕೊಳ್ಳಲಾಗದೇ ಒದ್ದಾಡುತ್ತಿದ್ದುದು ಇಂದಿಗೂ ನೆನಪಿದೆ. ಇಂದು ದ್ವಿಚಕ್ರ ವಾಹನಗಳಲ್ಲಿ ಝುಮ್ ಎಂದು ಬರುವ ಹುಡುಗರಿಗೆ ಇಂತಹ ಅನುಭವ ಖಂಡಿತ ಇಲ್ಲ. ಅವರಿಗೆ ಬೆಳಿಗ್ಗೆ ಒಂಭತ್ತು ಗಂಟೆಗೆ ತರಗತಿಯಿದ್ದರೂ ತಡವಾಗಿ ಬಂದು, ಟ್ರಾಫಿಕ್ ಜ್ಯಾಮ್ ಎಂದೋ, ಬಸ್ ಸಿಗಲಿಲ್ಲವೆಂದೋ, ವಾಹನ ಪಂಕ್ಚರ್ ಆಯಿತೆಂದೋ ನೆಪ ಹೇಳುವವರೇ ಹೆಚ್ಚು.
ಕಾಲೇಜಿನಲ್ಲಿ ಸೈಕಲ್ ಸ್ಟಾಂಡಿನ ನಾಗಪ್ಪ ನಮಗೆಲ್ಲಾ ಚಿರಪರಿಚಿತನಾಗಿದ್ದ. ಮುಂದೆ ನಾನು ಕಾಲೇಜು ಮುಗಿಸಿ ಹಲವು ವರ್ಷಗಳ ನಂತರ ಅದೇ ಯೂವಿಸಿಯಿಗೆ ಅತಿಥಿ ಪ್ರಾಧ್ಯಾಪಕನಾಗಿ ಪಾಠಮಾಡಲು ಹೋದಾಗ, ಆ ನಾಗಪ್ಪ ಇನ್ನೂ ಅಲ್ಲೇ ಇದ್ದ. ನಾನು ಅವನನ್ನು, ಅವನು ನನ್ನನ್ನು ಗುರುತು ಹಿಡಿದು ಮಾತನಾಡಿಕೊಂಡಾಗ ಹಳೆಯ ನೆನಪುಗಳೆಲ್ಲವೂ ಮರುಕಳಿಸಿದ್ದವು. ಈ ಕಾಲೇಜಿಗೆ ಹೋಗುತ್ತಿದ್ದಾಗ ನಮ್ಮ ಪ್ರಾಧ್ಯಾಪಕರಾದ ಕೆ.ಎನ್.ಅಯ್ಯಂಗಾರ್ ಎಂಬುವವರೂ ಒಮ್ಮೊಮ್ಮೆ ಸೈಕಲ್ಲಿನಲ್ಲಿ ನಮಗೆ ಜೊತೆಯಾಗುತ್ತಿದ್ದರು. ನೀವು ಬೇಗ ಹೋಗಿ ಎಂದು ಅವರು ನಮ್ಮನ್ನು ಓಡಿಸಿ ತಾವು ಹಿಂದೆ ನಿಧಾನವಾಗಿ ಬರುತ್ತಿದ್ದರು. ಅವರೊಬ್ಬ ಸರಳ ಜೀವಿ, ನಿಗರ್ವಿ. ಸೈಕಲ್ಲಿನಲ್ಲಿ ಓಡಾಡುವುದಕ್ಕೆ ಅವರೆಂದೂ ಮುಜುಗರ ಪಟ್ಟುಕೊಳ್ಳುತ್ತಿರಲಿಲ್ಲ. ವಾರದಲ್ಲಿ ಒಂದೆರಡು ದಿನ ಅವರು ಕಾರನ್ನೂ ತರುತ್ತಿದ್ದರು. ಅದರಲ್ಲಿಯೂ ಒಮ್ಮೊಮ್ಮೆ ಹುಡುಗರಿಗೆ ಡ್ರಾಪ್ ಸಿಗುತ್ತಿತ್ತು. 
ಈ ಸೈಕಲ್ಲಿನಿಂದ ನನಗೆ  ಹಳೆಯ ಬೆಂಗಳೂರಿನ ವಿವಿಧ ಪೇಟೆಗಳು, ಕಬ್ಬನ್ ಪಾರ್ಕು, ಲಾಲ್‍ಬಾಗಿನ ಮೂಲೆಮೂಲೆಗಳು ಪರಿಚಯವಾದವು. ಆಗ ಲಾಲ್‍ಬಾಗಿನೊಳಗೆ ವಾಹನಗಳನ್ನು ಬಿಡುತ್ತಿದ್ದರು. ಇಂದು ನನಗೆ ಬೆಂಗಳೂರಿನ ಮೂಲೆಮೂಲೆಗಳೂ ಪರಿಚಯವಿದೆಯೆಂದರೆ ಅದಕ್ಕೆ ಮುಖ್ಯ ಕಾರಣ ನನ್ನ ಸೈಕಲ್ಲೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಇದಕ್ಕೆ ಸರಿಯಾಗಿ ಮನೆಯಲ್ಲೂ ನಮ್ಮ ತಂದೆ ತಮ್ಮ ಅನೇಕ ಕೆಲಸಗಳನ್ನು ಹೇಳಿದಾಗ ದಾರಿ ತೋರಿಸಿದ್ದು ಈ ಸೈಕಲ್ಲೇ. ಮನೆಯಲ್ಲಿ ಬೇರೆ ಯಾರಾದರೂ ಅವನಿನ್ನೂ ಚಿಕ್ಕವನು, ಜಾಗ ತಿಳಿಯುವುದಿಲ್ಲ ಎಂದರೆ ಅವನಿಗೇನು ಬಾಯಿಲ್ಲವೇ, ಓಡಾಡಲು ಸೈಕಲ್ಲಿಲ್ಲವೇ ಎಂದು ಹೇಳಿ, ಜಾಗದ ಗುರುತನ್ನು ಹೇಳಿ ಗೊತ್ತಾಗದಿದ್ದರೆ ಯಾರನ್ನಾದರೂ ಕೇಳು, ಹೋದ ದಾರಿಯನ್ನು ಗುರುತಿಟ್ಟುಕೊಂಡು ಮನೆಗೆ ಸರಿಯಾಗಿ ಬಾ ಎಂದು ಧೈರ್ಯ ತುಂಬುತ್ತಿದ್ದರು. ಹೀಗಾಗಿ ಸೈಕಲ್ಲಿನಲ್ಲಿ ಕುಳಿತು ಬಿಟ್ಟೆನೆಂದರೆ ಈ ರಸ್ತೆ ಎಲ್ಲಿಗೆ ಹೋಗುತ್ತದೆ? ಆ ರಸ್ತೆ ಎಲ್ಲಿಗೆ ಹೋಗುತ್ತದೆ? ಯಾವ ರಸ್ತೆ ಅತಿ ಹತ್ತಿರದ ದಾರಿ? ಎಂದು ಹುಡುಕಾಟ ನಡೆಸುವುದೇ ಒಂದು ಕಾಯಕವಾಗಿತ್ತು.
ನಮ್ಮ ತಂದೆ ಉಪಯೋಗಿಸುತ್ತಿದ್ದ ಸೈಕಲ್ಲಿನ ಹೆಸರು ಹಿಲ್ಮನ್ ಎಂದು. ಅದು ನಮ್ಮ ತಾತನ ಕಾಲದ್ದು. ಎತ್ತರವಾಗಿತ್ತು. ನಾವು ಅದರಲ್ಲಿ ತುಳಿಯುತ್ತಿದ್ದುದೆಲ್ಲಾ ಕೇವಲ ಕತ್ತರಿ ಮೂಲಕ (ಅಂದರೆ ಬಾರ್‍ನ ಕೆಳಗೆ ಕಾಲು ತೂರಿಸಿ ತುಳಿಯುವುದು). ನಮ್ಮ ತಂದೆ ಪ್ಯಾಂಟಿಗೆ ತೊಡರದಂತೆ ಒಂದು ತಂತಿಯನ್ನು ಬಿಗಿದು ತಲೆಗೆ ಹ್ಯಾಟೊಂದನ್ನು ಇಟ್ಟುಕೊಂಡು ಸೈಕಲ್ಲಿನ ಮೇಲೆ ಓಡಾಡುತ್ತಿದ್ದುದು ನನಗೆ ಇಂದಿಗೂ ನೆನಪಿದೆ. ಬಹುಶಃ ಆ ಕಾಲಕ್ಕೆ ಅದು ಇಂದಿನ ಒಂದು ದ್ವಿಚಕ್ರ ವಾಹನಕ್ಕೆ ಸಮವಾಗಿತ್ತೇನೋ. ನಮ್ಮನ್ನು ಅದರ ಮೇಲೆ ಕೂಡಿಸಿ ನಿಧಾನವಾಗಿ ಓಡಾಡಿಸುತ್ತಾ ಒಂದೊಂದು ಜಾಗವನ್ನು ವಿವರಿಸುತ್ತಿದ್ದರು. ಅದರಿಂದ ನನಗೆ ಇಂದಿಗೂ ಅನೇಕ ಜಾಗಗಳನ್ನು ನೋಡಿದಾಗ ನಮ್ಮ ತಂದೆಯೊಂದಿಗೆ ಅವರ ಸೈಕಲ್ಲಿನ ಮೇಲೆ ಕುಳಿತ ನೆನಪೂ ಕಾಡುತ್ತದೆ. ‘ಬೆಂಗಳೂರಿನ ಇತಿಹಾಸ’ ಎಂಬ ಬೃಹತ್ಗ್ರಂಥವನ್ನು ಬರೆದ ಅವರು (ಬ.ನ.ಸುಂದರರಾವ್) ಅದರಲ್ಲಿ ಬರುವ ಅನೇಕ ವಿಷಯಗಳನ್ನು ನಮಗೆ ಪ್ರತ್ಯಕ್ಷವಾಗಿಯೂ ತೋರಿಸಿದ್ದರು.
ಸೈಕಲ್ ಯಾತ್ರೆ
ನಾವೆಲ್ಲಾ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ ಮೊದಲನೇ ವರ್ಷದ ರಜೆಯಲ್ಲಿ ಬನ್ನೇರುಘಟ್ಟಕ್ಕೆ ಸೈಕಲ್ಲಿನ ಮೇಲೆ ಹೋಗಿ ವಿಹಾರ ಮಾಡಿಬಂದದ್ದು ಇಂದಿಗೂ ನನ್ನ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಹಾಗೆಯೇ ಸ್ಕೌಟ್ ಕ್ಯಾಂಪಿಗೆಂದು ಹೆಸರುಘಟ್ಟದ ಕೆರೆಯ ಬಳಿಗೆ ಸೈಕಲ್ಲಿನಲ್ಲೆ ಹೋಗಿ ಅಲ್ಲಿಯೇ ಟೆಂಟುಗಳನ್ನು ಹಾಕಿ ನಾವೇ ಅಡುಗೆ ಮಾಡಿ ತಿಂದು ತೇಗಿಬಂದದ್ದೂ ಇನ್ನೂ ನೆನಪಿದೆ. ಆಗ ನಮಗೆ ಇವೆಲ್ಲಾ ಎಷ್ಟು ದೂರದ ಜಾಗಗಳು ಎನ್ನಿಸುತ್ತಿತ್ತು. ಆದರೆ ಇಂದಿನ ಬೆಂಗಳೂರಿನ ಬೆಳವಣಿಗೆಯನ್ನು ಕಂಡಾಗ ಅವೆಲ್ಲಾ ನಗರಕ್ಕೇ ಸೇರಿಬಿಟ್ಟಿವೆಯೇನೋ ಅನ್ನಿಸುತ್ತದೆ.
ಸೈಕಲ್ಲನ್ನು ತಳ್ಳಿಕೊಂಡು ಹೋದದ್ದು
ಸೈಕಲ್ಲು ಮತ್ತು ನಮ್ಮ ತಂದೆಯ ವಿಷಯಕ್ಕೆ ಬಂದಾಗ ಒಂದು ಸಣ್ಣ ಸಂಗತಿ ನೆನಪಿಗೆ ಬರುತ್ತದೆ. ಒಮ್ಮೆ ಯಾವುದೋ ಒಂದು ತುರ್ತಾದ ಕೆಲಸವಿತ್ತು. ಮನೆಯಲ್ಲಿ ನಾವುಗಳೆಲ್ಲಾ ಇನ್ನೂ ಚಿಕ್ಕವರು. ಆಗ ಅಲ್ಲೆ ಇದ್ದ ನಮ್ಮ ದೂರದ ನೆಂಟರ ಹುಡುಗನನ್ನು ನಮ್ಮ ತಂದೆ ನೀನು ಬೇಗ ಹೋಗಿ ಆ ಕೆಲಸ ಮುಗಿಸಿಕೊಂಡು ಬಾ ಎಂದರು. ಆ ಹುಡುಗನಿಗೋ ಸಂಕೋಚ ಅಲ್ಲದೇ ನಮ್ಮ ತಂದೆಯವರನ್ನು ಕಂಡರೆ ಭಯ. ಸಾಲದ್ದಕ್ಕೆ ನಮ್ಮ ತಂದೆ ತಮ್ಮ ಸೈಕಲ್ಲನ್ನು ಕೊಟ್ಟು ಬೇಗ ಇದರಲ್ಲಿ ಹೋಗಿ ಕೆಲಸ ಮುಗಿಸಿಕೊಂಡು ಬಾ ಎಂದು ಆದೇಶ ನೀಡಿಯೇ ಬಿಟ್ಟರು. ಆ ಹುಡುಗ ಬೇರೇನೂ ತೋಚದೆ ಆ ಸೈಕಲ್ಲನ್ನು ತಳ್ಳಿಕೊಂಡು ಹೊರಟ. ಹತ್ತಿಕೊಂಡು ಬೇಗ ಹೋಗಬಾರದೇನೋ ಎಂದು ನಮ್ಮ ತಂದೆ ಗದರಿದರು. ಆಗ ಆ ಹುಡುಗ ಹೆದರುತ್ತಾ ನನಗೆ ಸೈಕಲ್ಲು ತುಳಿಯಲು ಬರುವುದಿಲ್ಲ ಎಂದು ಬೆದರಿ ಹೇಳಿದಾಗ ಅವರಿಗೆ ಸಿಟ್ಟು, ಕೋಪ ನಗು ಎಲ್ಲವೂ ಒಟ್ಟಿಗೆ ಬಂದಿತ್ತು. ನಂತರ ಆ ಕೆಲಸ ಹೇಗೋ ಆಯಿತು. ಆದರೆ ನಮ್ಮ ತಂದೆ ಆ ಹುಡುಗನಿಗೆ ಮೊದಲು ಸೈಕಲ್ ತುಳಿಯುವುದನ್ನು ಕಲಿ, ಗಂಡು ಹುಡುಗರಿಗೆ ಇದು ತುಂಬಾ ಮುಖ್ಯ ಎಂದು ಉಪದೇಶ ನೀಡಿ ಅವನು ಕಲಿಯುವಂತೆ ಮಾಡಿದರು. ಅದೇ ಸಮಯದಲ್ಲಿ ನಾವೂ ಅವನೊಂದಿಗೆ ಸೈಕಲ್ಲನ್ನು ಕಲಿತು ಬಿಟ್ಟೆವು.
ಒಂದು ಕಾಲಿನ ಮೇಲೆ ತಗ್ಗಾದ ರಸ್ತೆಯಲ್ಲಿ ಬ್ಯಾಲೆನ್ಸ್ ಮಾಡಿ ಸಾಗುವುದು, ನಂತರ ಕತ್ತರಿ, ಬಾರ್ ನಂತರ ಸೀಟು, ಇದು ಕಲಿಯುವಾಗಿನ ವಿವಿಧ ಹಂತಗಳು. ಅಂದು ಚಿಕ್ಕ ಸೈಕಲ್‍ಗಳು ಇರಲಿಲ್ಲವಾದ್ದರಿಂದ ಎಲ್ಲರೂ ದೊಡ್ಡ ಸೈಕಲ್ಲಿನ ಮೇಲೆ ಈ ಹಂತಗಳನ್ನು ದಾಟಿಯೇ ಮುಂದುವರೆಯಬೇಕಿತ್ತು. ನನಗೆ ಸೈಕಲ್ ತುಳಿಯಲು ಬಂದರೂ ಸೀಟಿನಲ್ಲಿ ಕುಳಿತಾಗ ಕಾಲು ಎಟುಕುತ್ತಿರಲಿಲ್ಲವಾದ್ದರಿಂದ ಸುಮಾರು ದಿನ ನಮ್ಮ ತಂದೆಯ ದೊಡ್ಡ ಸೈಕಲ್ಲಿನಲ್ಲಿ ಕತ್ತರಿ ತುಳಿದುಕೊಂಡೇ ಓಡಾಡುತ್ತಿದ್ದೆ. 
ಅಂದು ಇಂದು
ಮುಂದೆ ಕೆಲಸಕ್ಕೆ ಸೇರಿದಾಗ ಕಛೇರಿಯದೇ ಬಸ್ಸುಗಳ ಅನುಕೂಲವಿದ್ದುದರಿಂದ ಈ ಸೈಕಲ್ಲಿನ ನಂಟು ತಪ್ಪಿತು. ನನಗೆ ಕೊಡಿಸಿದ್ದ ಹಸಿರು ಬಣ್ಣದ ಬಿ.ಎಸ್.ಎ. ಸೈಕಲ್ಲನ್ನು ಅನೇಕ ದಿನ ನೆನಪಿಗೆಂದು ಹಾಗೆಯೇ ಇಟ್ಟುಕೊಂಡಿದ್ದೆ. ಆದರೆ ಅದನ್ನು ಉಪಯೋಗಿಸದೆ ಸುಮ್ಮನೆ ಇಟ್ಟು ಇಟ್ಟು ಇಟ್ಠಾಳನಾಗುತ್ತೇನೆ ಎಂದು ಒಲ್ಲದ/ಒಳ್ಳೆಯ ಮನಸ್ಸಿನಿಂದ ಸೈಕಲ್ಲಿನ ಉಪಯೋಗವಿರುವ ಬಡವರೊಬ್ಬರಿಗೆ ಅದನ್ನು ದಾನ ಮಾಡಿದೆ. ಈಗಲೂ ನನ್ನ ಆ ಸೈಕಲ್ಲು ಎಲ್ಲೋ ಉಪಯೋಗವಾಗುತ್ತಿದೆ ಹಾಗೂ ನನ್ನ ಮನಸ್ಸಿನಲ್ಲಿ ಅದರ ನೆನಪು ಅಚ್ಚಳಿಯದೇ ಉಳಿದಿದೆ ಎಂಬುದೇ ಒಂದು ಸಮಾಧಾನ.
ನಾನು ನನ್ನ ಮಗನಿಗೆ ಸೈಕಲ್ ಕಲಿಸಿದ ನೆನಪು ಇನ್ನೂ ಮಾಸಿಲ್ಲ. ಅವನೊಂದಿಗೆ ನಾನೂ ಓಡುತ್ತಿದ್ದುದು, ಎದುರಿಗೆ ಕಲ್ಲಿದೆ ಹೋಗ ಬೇಡ ಎಂದರೆ ಅವನು ಸೀದಾ ಅದಕ್ಕೇ ಡಿಕ್ಕಿ ಹೊಡೆಯುತ್ತಿದ್ದುದು ಇವೆಲ್ಲಾ ಮರೆಯಲಾರದ ಸೈಕಲ್ ನೆನಪುಗಳು. ಇಂದು ಅವನಿಗೆ ಒಂದು ಗೇರ್ ಸೈಕಲ್ ಇದೆ. ಆದರೂ ಹಿಂದಿನ ಸಾಮಾನ್ಯ ಸೈಕಲ್ಲಿನಲ್ಲಿ ಸಿಗುತ್ತಿದ್ದ ಮಜ ಇದರಲ್ಲಿ ಬರುವುದಿಲ್ಲ. ಆದರೆ ಇಂದಿನವರೆಗೆ ಸೈಕಲ್ ಎಂದರೆ ಅದೇನೋ ತಾತ್ಸಾರ, ಬೈಕುಗಳಿಗೆ ಎಲ್ಲಿಲ್ಲದ ಪ್ರಾಶಸ್ತ್ಯ, ಜೊತೆಗೆ ಇಂದಿನ ಜೀವನವೂ ಮೊದಲಿಗಿಂತಾ ವೇಗ ಹೆಚ್ಚು. ಎಲ್ಲವೂ ಸೂಪರ್ ಫಾಸ್ಟ್. ಹೀಗಾಗಿ ಈಗಿನವರು ಹಿಂದಿನಂತೆ ನಿಧಾನಸ್ಥರಲ್ಲ, ಹೀಗಾಗಿ ಸೈಕಲ್, ಗಾಡಿಗಳು ಎಲ್ಲವೂ ಹಿಂದೆ ಸರಿದಿದೆ. 
ವಿದೇಶಗಳಲ್ಲಿ ಸೈಕಲ್ಲನ್ನು ಮರೆತು ಉಳಿದ ವಾಹನಗಳ ರುಚಿಕಂಡು ಈಗ ಮತ್ತೆ ಸೈಕಲ್ಲೆ ವಾಸಿ ಎಂದು ಮತ್ತೆ ಅದಕ್ಕೇ ಮುಗಿಬಿದ್ದಿದ್ದಾರೆ. ಇದರಿಂದಾಗಿ ಅನೇಕ ಸೈಕಲ್ ಕ್ಲಬ್‍ಗಳು ಹುಟ್ಟಿಕೊಂಡಿವೆ. ಯೂರೋಪ್ ಮೊದಲಾದಕಡೆ ಸೈಕಲ್‍ಸವಾರರಿಗಾಗಿಯೇ ರಸ್ತೆಯ ಒಂದು ಬದಿಯನ್ನು ಮೀಸಲಾಗಿಡಲಾಗಿದೆ. ಈ ಸೈಕಲ್ ಸವಾರಿಯಲ್ಲೂ ಚೀನಾ ನಮಗಿಂತಾ ಮುಂದಿದೆ. ಮನಸ್ಸು ಮಾಡಿದರೆ ನಾವು ಅವರನ್ನೂ ಮೀರಿಸಬಹುದು. ಕಾರು, ದ್ವಿಚಕ್ರವಾಹನಗಳಿಂದ ನಗರಗಳನ್ನು ಹಾಳು ಮಾಡಿ ನಂತರ ಮತ್ತೆ ಸೈಕಲ್ಲಿಗೆ ಬರುವುದಕ್ಕಿಂತಾ ಈಗಲೇ ಸೈಕಲ್ಲಿಗೆ ಪ್ರಾಶಸ್ತ್ಯ ಕೊಟ್ಟರೆ ಒಳ್ಳೆಯದಲ್ಲವೇ? ಮುಂದುವರೆದ ದೇಶಗಳ ಅನುಭವದಿಂದ ಇದನ್ನು ಈಗಲೇ ಅಳವಡಿಸಿಕೊಂಡರೆ ಒಳ್ಳೆಯದು. 
ಇತ್ತೀಚೆಗೆ ಪ್ರವಾಹ ಪೀಡಿತ ನಗರವೊಂದರ ಸೈಕಲ್ ಪ್ರೇಮಿಗಳ ಚಿತ್ರ ನೋಡಿದಾಗ ಸಂತೋಷವಾಯಿತು. ಅದರಲ್ಲಿ ಒಬ್ಬಾತ ತನ್ನ ಸೈಕಲ್ಲನ್ನು ದೋಣಿಯಲ್ಲಿಟ್ಟುಕೊಂಡು ಸಾಗಿಸುತ್ತಿದ್ದ ದೃಶ್ಯವಿತ್ತು. ಇನ್ನೊಂದರಲ್ಲಿ ಆ ನೆರೆಯಲ್ಲೂ ತನ್ನ ಸೈಕಲ್ಲನ್ನು ಎರಡೂ ಕೈಗಳಿಂದ ಮೇಲೆತ್ತಿ ಹಿಡಿದು ಆತ ನದಿಯನ್ನು ದಾಟುತ್ತಿದ್ದ ಚಿತ್ರವಿತ್ತು. ಅವರಿಗೆ ಸೈಕಲ್ಲಿನ ಮೇಲಿನ ಪ್ರೇಮ ಹಾಗು ಅದರ ಅವಶ್ಯಕತೆ ಇನ್ನೆಷ್ಟಿರಬಹುದು ಅಲ್ಲವೆ. ಬಡವರ ಪಾಲಿಗಂತೂ ಇದು ಕುಳಿತರೆ ಕುದುರೆ, ತಳ್ಳಿಕೊಂಡು ನಡೆದರೆ ಗೆಳೆಯ, ಭಾರ ಹೇರಿದರೆ ಕತ್ತೆ, ಹೀಗಾಗಿ ಅದಿಲ್ಲದೇ ಅವರ ಜೀವನವೇ ಸಾಗುವುದಿಲ್ಲ. ಆದರೆ ಇಂದು ಉಳ್ಳವರು, ಸೈಕಲ್ ಎಂಬುದು ಬಡವರ ವಾಹನ ಎಂದು ಹೀನಾಯ ಮಾಡದೇ ನಾವೂ ಈ ವಿಷಯದಲ್ಲಿಯಾದರೂ ನಿಮ್ಮೊಂದಿಗಿದ್ದೇವೆ ಎಂದು ಸಾಂತ್ವನ ಹೇಳಬಹುದು.
ಬೆಂಗಳೂರಿನಲ್ಲಿ ಏರು ತಗ್ಗುಗಳು ಹೆಚ್ಚಿರುವುದರಿಂದ ಸೈಕಲ್ ಉಪಯೋಗಿಸುವವರ ಸಂಖ್ಯೆ ಕಡಿಮೆ ಎಂದು ಒಮ್ಮೆ ನನ್ನ ಗೆಳೆಯ ಹೇಳಿದ. ಅಭ್ಯಾಸವಿದ್ದವರಿಗೆ ಇವೆಲ್ಲ ಲೆಕ್ಕಕ್ಕೇ ಇರುವುದಿಲ್ಲ. ಉಪಯೋಗಿಸಲು ಮನಸಿಲ್ಲ, ತಮ್ಮ ಪ್ರತಿಷ್ಠೆಗೆ ಎಲ್ಲಿ ಕುಂದು ಬರುತ್ತದೋ ಎಂಬ ಭಯ ಮೊದಲಾದುವುಗಳೇ ಕಾರಣ ಎಂದು ನನ್ನ ಅನಿಸಿಕೆ. ಚಕ್ರ ಸುತ್ತುತ್ತಲೇ ಇರುತ್ತದೆ ಅನ್ನುತ್ತಾರಲ್ಲಾ ಹಾಗೆ (ಈಗ ರೇಡಿಯೋ ಮತ್ತೆ ಬಂದಹಾಗೆ) ಸೈಕಲ್ ಸಹಾ ಫೀನಿಕ್ಸ್ ಪಕ್ಷಿಯಂತೆ ಮತ್ತೆ ಬರುತ್ತದೆ, ಅಮೆರಿಕಾ ಮೊದಲಾದ ಕಡೆಯ ಈಗಿನ ಟ್ರೆಂಡ್ ನೋಡಿದರೆ ಇದು ಸುಳ್ಳಲ್ಲ. ಹಾಗಾದರೂ ಸೈಕಲ್ಲುಗಳು ಬರಲಿ, ಜನ ಮೊದಲಿನಂತೆ ಸ್ವಲ್ಪ ನಿಧಾನಸ್ಥರಾಗಲಿ, ವಾತಾವರಣದ ಮಾಲಿನ್ಯ ಕಡಿಮೆಯಾಗಲಿ. ಸೈಕಲ್ ಎಂದು ತಾತ್ಸಾರಮಾಡದೆ, ಹಂಗಿಸದೇ ಎಲ್ಲರೂ ಅದನ್ನು ಸರಿಯಾಗಿ ಉಪಯೋಗಿಸಿದರೆ ಜನಗಳ ಆರೋಗ್ಯವೊಂದೇ ಅಲ್ಲ ನಗರದ ಆರೋಗ್ಯವೂ, ಪೆಟ್ರೋಲಿನ ಅಭಾವವೂ ಸುಧಾರಿಸಬಹದು. ಎಲ್ಲರೂ ಹೆಚ್ಚಾಗಿ ಸೈಕಲ್, ಸಾರ್ವಜನಿಕ ವಾಹನಗಳನ್ನು ಬಳಸಿದರೆ ಆಗ ವಾತಾವರಣವೂ ಹಿತವಾಗಿ ಓಡಾಡಲು ತೊಂದರೆಯಾಗುವುದಿಲ್ಲ. ಕೇವಲ 2008 ಮಾತ್ರಾ ಏಕೆ ಎಲ್ಲ ವರ್ಷಗಳನ್ನೂ ಸೈಕಲ್ಲಿನ ವರ್ಷಗಳನ್ನಾಗಿ ಮಾಡಿಬಿಟ್ಟರೆ ಒಳ್ಳೆಯದಲ್ಲವೇ?
ಬರೆದವರು - ಬಿ.ಎಸ್.ಜಗದೀಶಚಂದ್ರ, bsjchandra@gmail.com 
ಸೈಕಲ್ ನಲ್ಲಿ ಹಳ್ಳಿಯ ಕಡೆ ಹೋಗುವುದು ಎಂದರೆ ಒಂದು ರೀತಿಯ ಸಂತೋಷ 

ಒಂದು ಕಾಲದಲ್ಲಿ ನಾವೂ ಹೀಗೇ ಕಾಲೇಜಿಗೆ ಹೋಗುತ್ತಿದ್ದೆವು 

ಸೈಕಲ್ ಕೆಲವರಿಗೆ ಜೀವನಾಧಾರ ಕೆಲವರಿಗೆ ಹವ್ಯಾಸ 
ಅಪ್ಪನ ಜೊತೆ ಸೈಕಲ್ ಕಲಿಯುವ ಸಂಭ್ರಮ 

ಈಗ ನೀನೊಬ್ಬನೇ ಹೋಗಬೇಕು, ನಾನು ಕೈ ಬಿಡುತ್ತೇನೆ 


ಹೆಲ್ಮೆಟ್ ಪ್ಯಾಡು ಇವೆಲ್ಲವನ್ನೂ ನಾವು ಕೇಳೇ ಇರಲಿಲ್ಲ 

ಅಪ್ಪನೊಂದಿಗೆ ಹೀಗೆ ಹೋಗಲು ಪುಣ್ಯ ಮಾಡಿರಬೇಕು 

ಒಂದೇ ಸೈಕಲ್ - ಇಡೀ ಪರಿವಾರಕ್ಕೆ 

ನಾನು, ನನ್ನ ಹೆಂಡತಿ, ಮುದ್ದಿನ ಮಕ್ಕಳು ನೆಚ್ಚಿನ ಸೈಕಲ್ ಜೊತೆ 

ಸಂಸಾರದೊಂದಿಗೆ ಸೈಕಲ್ ಸವಾರಿ 

ಸೈಕಲ್ ಇಳಿಯುವಾಗ, ಹತ್ತುವಾಗ ಪಡುತ್ತಿದ್ದ ಕಷ್ಟ 

ಬಡವರ ಚಲಿಸುವ ಅಂಗಡಿ 

ಇದು ಸಿನೆಮಾದಲ್ಲಿರಬಹುದು ಆದರೆ ಹಳ್ಳಿಗಳಲ್ಲಿ ನಿಜ ಜೀವನದಲ್ಲೂ ಇತ್ತು, ಈಗಲೂ ಕೆಲೆವೆಡೆ ಇದೆ 

ಪಡೋಸನ್ ಚಿತ್ರದಲ್ಲಿನ ಮೈ ಚಲಿ ಎಂಬ ಹಾಡು ಸೈಕಲ್ ಮೇಲೆ, ಮೈಸೂರಿನ ಬೃಂದಾವನದ ದಾರಿಯಲ್ಲಿ 

ಹೆಂಗಸರ ಸೈಕಲ್ ನಲ್ಲಿ ಮೂವರ ಸವಾರಿ 

ಸೈಕಲ್ ನಲ್ಲಿ  ನಿಧಾನವಾಗಿ ಮಾತನಾಡಿಕೊಂಡು ಹೋಗಬಹುದು 

ಸೀರೆ ಉಟ್ಟುಕೊಂಡು ಸೈಕಲ್ ಸವಾರಿ - ಈಗ ಅಪರೂಪ 

ಒಂದೇ ಕೈ ನಲ್ಲಿ ಸವಾರಿ 
#442, 38ನೇ ಅಡ್ಡರಸ್ತೆ, 5ನೇ ಬ್ಲಾಕ್, ಜಯನಗರ, ಬೆಂಗಳೂರು 560041, ಫೋ. 9342009886, 7022237041

Thursday, May 25, 2017

A TEMPLATE FOR QUICK LETTERING OF YOUR OWN STYLE

A TEMPLATE FOR QUICK LETTERING OF YOUR OWN STYLE
When I was a student of Architecture, I find difficult to complete my drawings in the examination with good lettering. Using stencil is time consuming and require rotring pens, lettering with guide lines is still more time consuming. We were unheard of 0.5 pen pencil or clutch pencils at that time. Only few affordable students were using Made in Japan, imported pencils. Poor lettering spoils all the efforts taken for good drafting.  I was wondering how to tackle this problem. Later I found my own solution for this. It is very easy and anybody can make it. You just require a thick transparent OHP sheet, a steel scale and a cutter.

In all drawings there will be hierarchy of lettering like titles, subtitles, descriptions etc. Hence we need lettering guide lines of different height. Decide the various heights, draw then over transparent sheet and cut them. Now your hand made lettering stencil is ready. Keep it on the drawing sheet, match with any horizontal line of your drawing with the guide lines (Cuts) and write in pen, pencil, rotring pens, ball pen, gel pen etc. You can develop your own lettering style. You can carry the same for your examination and quickly complete your drawing with good lettering.Transparent sheet is cut along guide lines of different heights. 

Another sample with cut guide lines

Even big circles can be cut which is not available in circle template to show trees in plan in 1:100. 1:200 scale

This is how you can use the template for lettering

If you remove the lettering will look like this. The stiff the template, lettering will be good. 

You can have your own lettering style.

This is a sample done in my college days using the template (1976) for an asignment


Another sample with hierarchy of lettering


Another sample


Another sample for Climatalogy assignment