Sunday, March 22, 2020

ಪುಟ್ಟಕೆರೆ - ಮನಸಿದ್ದರೆ ಮಾರ್ಗ ಎಂಬ ಮಾತನ್ನು ಎಲ್ಲರು ಕೇಳಿದ್ದೇವೆ. ಅದನ್ನು ಅಳವಡಿಸಿಕೊಂಡರೆ ನಮ್ಮ ಭಾರತವನ್ನು ಎಷ್ಟು ಸುಂದರವಾಗಿ ಮಾರ್ಪಡಿಸಬಹುದು. ಅಮೇರಿಕ, ಯೂರೋಪ್ ಇವುಗಳಿಗಿಂತ ಹಲವಾರು ಪಟ್ಟು ಸುಂದರವಾದ ತಾಣಗಳು ನಮ್ಮಲ್ಲಿವೆ, ಹಳ್ಳಿಗಳು, ನಗರಗಳು ಸುಂದರವಾಗಿವೆ. ಆದರೆ .. ಅದನ್ನು ನಾವು ಇಟ್ಟುಕೊಂಡಿರುವ ರೀತಿ ದೇವರಿಗೆ ಪ್ರೀತಿ. ಎಲ್ಲ ಹಳ್ಳಿಗಳೂ, ನಗರಗಳೂ ಹೀಗೆ ಸುಂದರವಾಗಿ ಮಾರ್ಪಾಟಾಗಬೇಕು ಎಂದು ಕನಸು. ಅದು ಇಂದಿಗೆ ನನಸಾಗುತ್ತದೋ? ನೀವಾದರೂ ಹೇಳಿ.
ಪುಟ್ಟಕೆರೆ-  ಬಿ ಎಸ್ ಜಗದೀಶ ಚಂದ್ರ 
ಬೆಂಗಳೂರು ನಗರದ ಕನಕಪುರ ರಸ್ತೆಯಲ್ಲಿ ಹೋಗಿ ನೈಸ್ ರಸ್ತೆ ಆದ ನಂತರ ಅಲ್ಲಿ ಎಡಕ್ಕೆ ತಿರುಗಿ ಒಳಕ್ಕೆ ಹೋದರೆ ಅಲ್ಲಿ ಒಂದು ಪುಟ್ಟ ಕೆರೆ ಇದೆ. ಅದರ ಸುತ್ತಲೂ ಗದ್ದೆಗಳು, ಸ್ವಲ್ಪ ಆಚೆಗೆ ಹೊಲಗಳು ಹಸಿರಿನಿಂದ ನಳನಳಿಸುತ್ತಿವೆ. ಅದರ ಆಚೆಗೆ ಕಲ್ಲು ಬಂಡೆಗಳ ಬಂಜರು ಭೂಮಿ ನೀರಿಲ್ಲದೆ ಸೊರಗುತ್ತಿದೆ. ಈ ಹೊಲಗಳ ಬದಿಯಲ್ಲೇ “ಪುಟ್ಟ ಕೆರೆ” ಗ್ರಾಮ ಇದೆ. ನಮ್ಮ ಇತರ ಹಳ್ಳಿಗಳಂತೆ ಇದೂ ಒಂದು ಕುಗ್ರಾಮ, ಕೊಚ್ಚೆ, ಗಲೀಜು, ಇವೆಲ್ಲ ಕಣ್ಣಿಗೆ ಕುಕ್ಕುತ್ತವೆ. ಹಳ್ಳಿಯ ಹೊರಬದಿಗೆ ಸ್ವಲ್ಪ ಎತ್ತರದ ಜಾಗವಿದ್ದು ಬರಡು ಭೂಮಿಯಾಗಿ ಕೇವಲ ಕುರುಚಲು ಗಿಡಗಳು, ಅಲ್ಲಲ್ಲಿ ಕೆಲವು ಬಂಡೆಗಳು ಕಾಣುತ್ತವೆ. ಹಳ್ಳಿಯ ಕುರಿ ಮೇಕೆ, ದನಗಳು ಅಲ್ಲಿ ಬೆಳೆಯುವ ಕೆಲವೇ ಗಿಡಗಳನ್ನೂ ತಿಂದು ಹಾಕಿವೆ. ಅಲ್ಲಿನ ಜನರಿಗೆ ಬೆಳೆ ಚೆನ್ನಾಗಿರಬೇಕು, ದನಗಳು ಚೆನ್ನಾಗಿ ಹಾಲು ಕೊಡಬೇಕು ಇಷ್ಟೇ ಬೇಕಾಗಿರುವುದು. ಪರಿಸರ, ಸ್ವಚ್ಛತೆ, ಪಶುಗಳ ಅರೋಗ್ಯ, ಇವು ಯಾವುದೂ ಬೇಡ.
ಈ ಎತ್ತರದ ಪ್ರದೇಶದಾಚೆಗೆ ಅಲ್ಲಲ್ಲೇ ಕೆಲವು ಗುಡ್ಡಗಳು ಇವೆ. ಅಲ್ಲಿ ಯಾರೂ ಏನೂ ಬೆಳೆಯುವುದಿಲ್ಲ, ಅವರಿಗೆ ಅದು ಬೇಕಾಗಿಯೂ ಇಲ್ಲ. ಈ ಪುಟ್ಟಕೆರೆ ಗ್ರಾಮವೇ ನಮ್ಮ ಕನ್ನಡ ಚಿತ್ರರಂಗದ ಪ್ರಖ್ಯಾತ ಅಭಿನೇತ್ರಿ ಪುನ್ನಾಗಿನಿ ಅವರ ಊರು. ಇದು ಇಲ್ಲಿನ ಜನರಿಗೆ ಗೊತ್ತೇ ಹೊರತು ಇತರ ಕನ್ನಡಿಗರಿಗೆ ಗೊತ್ತಿಲ್ಲ. ಆಕೆಯ ಹೆಸರು ನಾಗಿಣಿ, ಅದರ ಹಿಂದಿರುವ ಪು ಎಂಬುದು ಪುಟ್ಟಕೆರೆ ಗ್ರಾಮ ಎಂದು ಈ ಹಳ್ಳಿಯವರಿಗೆ ಹಾಗೂ ಪುನ್ನಾಗಿನಿ ಅವರಿಗೆ ಮಾತ್ರ ಗೊತ್ತು ಅನ್ನಿಸುತ್ತದೆ. ಈ ಹಳ್ಳಿಯಲ್ಲಿ ಪುನ್ನಾಗಿನಿ ಅವರ ಒಂದು ದೊಡ್ಡ ಮನೆ ಈಗಲೂ ಇದೆ. ಅದರಲ್ಲಿ ಯಾರೂ ಇಲ್ಲ, ಆದರೂ ಆಗಾಗ್ಗೆ ಯಾರೋ ಒಬ್ಬರು ಬಂದು ಮನೆಯನ್ನೆಲ್ಲ ಶುಚಿ ಮಾಡಿ ಹೋಗುತ್ತಾರೆ. ಅಲ್ಲಿಗೆ ಪುನ್ನಾಗಿನಿ ಬಂದುದನ್ನು ಇದುವರೆಗೂ ಯಾರೂ ಕಂಡಿಲ್ಲ.
ಈ ಪುಟ್ಟಕೆರೆಯ ಯಶೋಗಾಥೆಯನ್ನು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ನನಗೆ ಅಲ್ಲಿಯ ರೈತ ಮಿತ್ರನೊಬ್ಬ ಹೇಳಿದ. ಅದನ್ನು ಕೇಳಿದ ನನಗೆ ಹೀಗೂ ಸಾಧ್ಯವೇ ಎಂದು ಆಶ್ಚರ್ಯವಾಯಿತು.
ಇತ್ತೀಚಿಗೆ ಕನಕಪುರ ರಸ್ತೆಯನ್ನು ಹೆದ್ದಾರಿಯಾಗಿ ಮಾಡಿ ಅದನ್ನು ಅಗಲಗೊಳಿಸುತ್ತಿರುವ ನಾಡಿನ ಪ್ರಖ್ಯಾತ ಉದ್ಯಮಿ ಪ್ರಕಾಶ ಪಟ್ನಮ್ ಅವರ ಕಣ್ಣಿಗೆ ಈ ಪುಟ್ಟ ಕೆರೆ ಗ್ರಾಮ ಬಿದ್ದಿತು. ಅವರ ಕಣ್ಣಿಗೆ ಬಿದ್ದಿತು ಎಂದರೆ ಅದೃಷ್ಟ ಲಕ್ಷ್ಮಿ ಒಲಿದಂತೆಯೇ. ಮೊದಲೇ ಭಾರಿ ಉದ್ಯಮಿ, ದಾರ್ಶನಿಕರು, ಕನಸುಗಾರರು. ದುಡ್ಡಿಗೇನೂ ಕೊರತೆ ಇಲ್ಲ. ಒಂದು ದೊಡ್ಡ ಕನಸನ್ನೇ ಕಂಡು ಅದನ್ನು ನನಸು ಮಾಡಲು ಸಿದ್ಧರಾದರೆಂದರೆ ಯಾರೂ ತಡೆಯಲು ಸಾಧ್ಯವಿಲ್ಲ. ಹಾಗೆಂದು ಅವರು ದುಡ್ಡಿಗಾಗಿ ಮಾಡುವವರಲ್ಲ. ನಿಸ್ವಾರ್ಥವಾಗಿ ದೇವರ ಸೇವೆ ಎಂದೇ ಮಾಡುತ್ತಾರೆ. ಮೋಸ, ತಟವಟ, ಲಂಚ ಎಂಬುದು ಅವರಿಂದ ನೂರು ಗಾವುದ ದೂರ. ಅಂತಹ ಜನ ಇನ್ನೂ ಇದ್ದಾರಲ್ಲ ಎಂದು ನಾವು ಸಂತೋಷ ಪಡಬೇಕು.
ದಾರ್ಶನಿಕರಾದ ಪ್ರಕಾಶ ಪಟ್ನಮ್ ಅವರ ಕಣ್ಣಿಗೆ ಬಿದ್ದ ಈ ಕುಗ್ರಾಮ ‘ಪುಟ್ಟಕೆರೆ’ ಅವರಿಗೆ ಹಲವಾರು ಕನಸನ್ನು ಕಾಣಿಸಿತು. ಅಲ್ಲಿನ ಕೆರೆ, ಕೊಳಕಾಗಿದ್ದರೂ, ಸ್ವಚ್ಛ ಮಾಡಿದರೆ ಸುಂದರವಾಗಿ ಕಾಣುತ್ತದೆ, ಜೊತೆಗೆ ಪುಟ್ಟಕೆರೆ ಹಳ್ಳಿ, ಸುತ್ತಲಿನ ಹೊಲ ಗದ್ದೆಗಳು, ಅದರಾಚೆಗಿನ ಬಂಡೆಗಲ್ಲಿನ ಎತ್ತರದ ಪ್ರದೇಶ, ಅದರಾಚೆಗಿನ ಗುಡ್ಡಗಳು ಅವರಿಗೆ ಕಲಾವಿದನಿಗೆ ಚಿತ್ರ ಬರೆಯಲು ಕೊಟ್ಟ ಬಿಳಿಯ ಹಾಳೆಯಂತೆ ಕಂಡಿತು. ಈಗ ಅವರ ಕೆಲಸ ಅದನ್ನು ಸುಂದರವಾಗಿ ಚಿತ್ರಿಸುವುದು. ಕೂಡಲೇ ತಮ್ಮ ಬಳಿ ಯಾವಾಗಲೂ ಇರುತ್ತಿದ್ದ ಪುಟ್ಟ ಪುಸ್ತಕದಲ್ಲಿ - “ಶುದ್ಧವಾದ ನೀರು, ಸದಾ ಹಸಿರಿನ ಪರಿಸರ, ಬರಡು ಭೂಮಿಯಲ್ಲಿ ಕಾಡು, ಕಾಡಿನ ಗುಡ್ಡಗಳೇ ಹಳ್ಳಿಯ ಮಿತಿ” ಎಂದು ಬರೆದುಕೊಂಡರು.
ಇವನ್ನು ಈಡೇರಿಸುವುದು ಹೇಗೆ ಎಂದು ಅವರು ಯೋಚಿಸಲಾರಂಭಿಸಿದರು. ಮೊದಲು ಹಳ್ಳಿಗೆ ಹೋಗಿ ಅಲ್ಲಿನ ಜನರನ್ನು ಒಳ್ಳೆಯ ಮಾತುಗಳಿಂದ ಒಲಿಸಿ ನಂತರ ಅದನ್ನು ಹೇಗೆ ನಂದನವನವನ್ನಾಗಿ ಮಾಡ ಬಹುದು ಎಂದು ಮನದಟ್ಟು ಮಾಡಿಕೊಡುವುದು, ನಂತರ ಅವರಿಗೆ ಶುಚಿ, ಸ್ವಚ್ಛತೆಯ ಮಹತ್ವದ ಅರಿವುಂಟುಮಾಡುವುದು, ಇದಾದ ಮೇಲೆ ಪರಿಸರ ಸಂರಕ್ಷಣೆಯ ಬಗ್ಗೆ ಹೇಳುವುದು ಇತ್ಯಾದಿ. ಜೊತೆಗೆ ಪುನ್ನಾಗಿನಿ ಅವರನ್ನು ಸಂಪರ್ಕಿಸಿ ಅವರನ್ನೂ ಇದರಲ್ಲಿ ತೊಡಗಿಸಿ ಜನರಲ್ಲಿ ಹುರುಪು ಉಂಟುಮಾಡುವುದು ಎಂದು ಯೋಚಿಸಿದರು.
ತಮ್ಮದೇ ಆದ “ಪರಿಸರ ಮಕ್ಕಳ ಬಳಗ”ವನ್ನು ಇದರಲ್ಲಿ ಸಕ್ರಿಯಾಗಿ ತೊಡಗಿಸಬೇಕು ಎಂದುಕೊಂಡು, ಕೂಡಲೇ ಅದರ ಮುಖ್ಯಸ್ಥರಾದ ರಾಜು ಅವರಿಗೆ ಕರೆ ಮಾಡಿ, “ನೋಡಿ, ಮುಂದಿನ ವಾರ ಪುಟ್ಟಕೆರೆ ಗ್ರಾಮಕ್ಕೆ ನಿಮ್ಮ ಯಾತ್ರೆ, ನಾನೂ ಬರುತ್ತೇನೆ, ಅಲ್ಲಿನ ಜನರಿಗೆ ಪರಿಸರ ಸಂರಕ್ಷಣೆ, ಶುಚಿತ್ವ, ಕಾಡಿನ ಮಹತ್ವ, ಗೋವುಗಳ ರಕ್ಷಣೆ, ಗೊಬ್ಬರ ಅನಿಲ, ಇವುಗಳ ಬಗ್ಗೆ ಅರಿವನ್ನು ಉಂಟು ಮಾಡಬೇಕು. ಎಲ್ಲ ಕಾರ್ಯಕರ್ತರು, ಮಕ್ಕಳು ಈಗಲೇ ಒಂದು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮಾಡಬೇಕು. ಅದರಲ್ಲಿ ಹೆಚ್ಚು ಚಿತ್ರಗಳನ್ನು ಅಳವಡಿಸಿ ಹಳ್ಳಿಗರಿಗೆ ಅರ್ಥವಾಗುವಂತೆ ಉದಾಹರಣೆಗಳ ಸಮೇತ ಶುದ್ಧವಾದ ಕನ್ನಡದಲ್ಲಿ ವಿವರ ನೀಡಬೇಕು” ಎಂದು ತಿಳಿಸಿದರು.
ಮೇಲಧಿಕಾರಿ ಹೇಳಿದಮೇಲೆ ಇನ್ನೇನು, ಎಲ್ಲವೂ ಭರದಿಂದ ಸಿದ್ಧವಾಯಿತು. ಒಂದು ರಜೆಯ ದಿನ ಮಕ್ಕಳ ಪಡೆಯೇ ಪುಟ್ಟಕೆರೆಗೆ ಯಾತ್ರೆ ಹೊರಟಿತು. ಮಕ್ಕಳ ಬಾಯಿಂದ ಚಿತ್ರ ಸಮೇತ ವಿವರಗಳನ್ನು ನೋಡಿದ ಹಳ್ಳಿಗರಿಗೆ ಆಶ್ಚರ್ಯವೋ ಆಶ್ಚರ್ಯ. ಮೂಗಿನ ಮೇಲೆ ಬೆರಳಿಟ್ಟುಕೊಂಡು, ಕಣ್ಣು ಬಾಯಿ ಬಿಟ್ಟುಕೊಂಡು ಎಲ್ಲವನ್ನು ಕೇಳಿದರು, ತಮಗೆ ತೋಚಿದ ಪ್ರಶ್ನೆಗಳನ್ನೂ ಕೇಳಿ ತಿಳಿದುಕೊಂಡು ಬೆರಗಾದರು. ಪ್ರಕಾಶ್ ಪಟ್ನಮ್ ಅಂಥವರೇ ತಮ್ಮ ಬಳಿ ಬಂದು ಖುದ್ದಾಗಿ ಇಷ್ಟೆಲ್ಲವನ್ನೂ ಮಾಡುತ್ತಿದ್ದಾರಲ್ಲಾ ಎಂದು ಹೆಮ್ಮೆ ಪಟ್ಟುಕೊಂಡರು. “ನೀವು ನಮಗೆ ಹೇಳಿಕೊಟ್ಟರೆ ಎಲ್ಲವನ್ನು ಮಾಡುತ್ತೇವೆ” ಎಂದು ಮಾತುಕೊಟ್ಟರು. ಪ್ರಕಾಶ್ ಪಟ್ನಮ್ ಅವರೂ “ತಾವು ಪುನ್ನಾಗಿನಿ ಅವರನ್ನು ಕರೆದು ಕೊಂಡು ಬರುತ್ತೇವೆ” ಎಂದಾಗ ಆ ಹಳ್ಳಿಗರ ಸಂತೋಷಕ್ಕೆ ಪಾರವೇ ಇರಲಿಲ್ಲ.
ತಾವು ಹೇಳಿದಂತೆ ಪ್ರಕಾಶ್ ಪಟ್ನಮ್ ಅವರು ಪುನ್ನಾಗಿನಿ ಅವರನ್ನು ಸಂಪರ್ಕಿಸಿದರು. ಅವರ ಪುಟ್ಟಕೆರೆ ಗ್ರಾಮದ ಬಗ್ಗೆ ಹೇಳಿದಾಗ, “ನಾನು ಇಂದು ಚಾಲ್ತಿ ಇಲ್ಲದ ನಟಿ, ಹೇಳಿಕೊಳ್ಳಲು ಅದು ನನ್ನ ಊರು, ಈಗ ಅಲ್ಲಿ ಇರುವ ಮನೆ, ಸ್ವಲ್ಪ ಬಂಜರು ಭೂಮಿಯನ್ನು ಬಿಟ್ಟರೆ ಅದಕ್ಕೂ ನನಗೂ ಇನ್ಯಾವ ಸಂಬಂಧವೂ ಇಲ್ಲ” ಎಂದರು. ಆದರೆ ಪ್ರಕಾಶ್ ಪಟ್ನಮ್ ಅವರು ತಮ್ಮ ಕನಸನ್ನು ಅವರಿಗೆ ವಿವರಿಸಿ ಆ ಹಳ್ಳಿಯನ್ನು ಹೇಗೆ ಒಂದು ಮಾದರಿ ಗ್ರಾಮವನ್ನಾಗಿ ಮಾಡಬಹುದು ಎಂದು ವಿವರಿಸಿದಾಗ ಪುನ್ನಾಗಿನಿ ಅವರಿಗೂ “ಯಾಕಾಗಬಾರದು” ಅನ್ನಿಸಿತು. “ತಾವು ಹೇಗೆ ಇದರಲ್ಲಿ ತೊಡಗಿಸಿಕೊಳ್ಳ ಬಹುದು?” ಎಂದಾಗ, “ನೀವು ಸುಮ್ಮನೆ ಅಲ್ಲಿ ಮೊದಲು ನಿಮ್ಮ ಮನೆಯಲ್ಲಿ ಉಳಿದುಕೊಳ್ಳಿ, ನಂತರ ನಿಧಾನವಾಗಿ ಜನರೊಂದಿಗೆ ಬೆರೆತು ನಮ್ಮ ಮಕ್ಕಳ ಬಳಗದ ಜೊತೆಗೂಡಿ ನೀವೂ ಸೇವೆ ಮಾಡಿ ಸಾಕು. ಹಳ್ಳಿಯ ಜನರಿಗೆ ನಿಮ್ಮ ಒಡನಾಟ ಹುರುಪು ತಂದು ಗ್ರಾಮೋದ್ಧಾರಕ್ಕೆ ಉತ್ತೇಜಿಸಿದಂತಾಗುತ್ತದೆ” ಎಂದರು.
ಈಗ ಪುಟ್ಟಕೆರೆ ಹಳ್ಳಿಗೆ ‘ಪುಟ್ಟಕೆರೆ ನಾಗಿಣಿ” ಅವರ ಪ್ರವೇಶವೂ ಆಯಿತು. ಜನರಿಗಂತೂ ಇದು ನಿಜವೇ ಎಂದು ಮೈ ಚಿವುಟಿ ಕೊಳ್ಳುವಂತಾಯಿತು. ಮಕ್ಕಳು ಹಳ್ಳಿಯ ಉದ್ಧಾರದ ಬಗ್ಗೆ ವಿವರಿಸುತ್ತಿದ್ದುದನ್ನು ಕೇಳಿದ ಪುನ್ನಾಗಿನಿ ಅವರಿಗೆ “ತಾವು ಇಷ್ಟೊಂದು ಹಣ ಸಂಪಾದಿಸಿದ್ದು, ಜನ ಮನ್ನಣೆ ಗಳಿಸಿದ್ದು, ಯಾವ ಪುರಷಾರ್ಥಕ್ಕೆ” ಎನ್ನಿಸಿಬಿಟ್ಟಿತು. “ತಾನು ಎಷ್ಟೊಂದು ಸ್ವಾರ್ಥಿ” ಎಂದು ತಮ್ಮ ಮೇಲೆ ತಮಗೇ ಬೇಸರವಾಯಿತು. ತಮ್ಮ ಬಿಂಕ, ಬಿನ್ನಾಣಗಳನ್ನು ಕೂಡಲೇ ಬದಿಗಿಟ್ಟು ತಾವೂ ಅಲ್ಲಿಯ ಒಬ್ಬ ಜನರಂತೆ ಗ್ರಾಮ ಸೇವೆಗೆ ಟೊಂಕ ಕಟ್ಟಿ ನಿಂತರು. ತಮ್ಮ ಅಸ್ತಿಯಾದ ಬಂಜರು ಭೂಮಿಯನ್ನು ನಂದನವನವನ್ನಾಗಿ ಮಾಡುತ್ತೇನೆ ಎಂದು ಪಣ ತೊಟ್ಟರು.
ಇದೆ ಸಮಯವನ್ನು ಕಾಯುತ್ತಿದ್ದ ಪ್ರಕಾಶ್ ಪಟ್ನಮ್ ಅವರು ಈಗ ರಂಗಕ್ಕಿಳಿದರು. ಮೊದಲು ಹಳ್ಳಿಯನ್ನು ಶುಚಿ ಯಾಗಿರಿಸಿಕೊಳ್ಳಲು ಏನೇನು ಬೇಕೋ ಅವೆಲ್ಲವನ್ನೂ ಪಟ್ಟಿಮಾಡಿ ಒಂದೊಂದಾಗಿ ಜಾರಿಗೆ ತಂದರು. ಶೌಚ ಗೃಹ, ನೀರಿನ ಮರು ಬಳಕೆ, ಮನೆಯಲ್ಲೇ ಗೊಬ್ಬರ, ಗೊಬ್ಬರದ ಅನಿಲ ಇತ್ಯಾದಿಗಳನ್ನು ಸಾಧ್ಯವಿದ್ದ ಕಡೆಗೆಲ್ಲ ಅಳವಡಿಸಿ ಕೊಟ್ಟರು. ರಸ ಗೊಬ್ಬರಕ್ಕಿಂತ ಕೊಟ್ಟಿಗೆ ಗೊಬ್ಬರದ ಮಹತ್ವವನ್ನು ವಿವರಿಸಿ ಎಲ್ಲರೂ ಅದನ್ನೇ ಬಳಸಲು ಆರಂಭಿಸಿದರು. ರಸ್ತೆಗಳೆನ್ನೆಲ್ಲ ಚೊಕ್ಕ ಮಾಡಿ ಸಾಧ್ಯವಿರುವ ಕಡೆಯಲ್ಲಿ ಗಿಡ ಮರಗಳನ್ನು ನೆಟ್ಟರು. ಸಾಮಾಜಿಕ ಅರಣ್ಯವೂ, ಗೋಮಾಳವೂ ಸಿದ್ಧವಾದುವು. ಕೆರೆಯ ನೀರು ಶುದ್ಧವಾಗಿರಲು ಅದರಲ್ಲಿ ಮೀನುಗಳು, ಆಮೆಗಳು ಮೊದಲಾದುವನ್ನು ಬಿಟ್ಟರು. ಕೆರೆಗೆ ಸೇರುವ ನಾಲೆಯ ನೀರಿಗೆ ಒಂದು ತಡೆ ಒಡ್ಡಿ ಅದನ್ನು ಶುದ್ಧೀಕರಿಸಿ ನಂತರ ಕೆರೆಗೆ ನೀರನ್ನು ಬಿಟ್ಟರು. ಶುದ್ಧೀಕರಿಸಿದಾಗ ಬಂದ ಕೊಳಚೆಯನ್ನು ಗೊಬ್ಬರವನ್ನಾಗಿ ಪರಿವರ್ತಿಸಿ ಅದನ್ನು ಜನರಿಗೇ ಹಂಚಿದರು. ಮನೆಯ ಸುತ್ತಲಿನ ಜಾಗಗಳಲ್ಲೂ ಗಿಡ ಮರ ನೆಟ್ಟು ಬಿಸಿಲಿನ ಝಳ ನಿವಾರಿಸಿದರು.
ಈಗ ಹಳ್ಳಿಯ ರೂಪವೇ ಬದಲಾಗಿತ್ತು. ಕೊಳೆತು ನಾರುತ್ತಿದ್ದ ಕುಗ್ರಾಮ ಪುಟ್ಟಕೆರೆ ಈಗ ಒಂದು ನಂದನ ವನ ವಾಗಿ ಪರಿವರ್ತಿತವಾಗಿತ್ತು. ಹಳ್ಳಿಯ ಸುತ್ತಲಿನ ಬಂಜರು ಭೂಮಿಗೆ, ಪುನ್ನಾಗಿನಿ ಅವರ ಬಂಜರು ಭೂಮಿಯ ಆಸ್ತಿಗೆ ಈಗ ಕಾಯಕಲ್ಪ ಆಗಬೇಕಿತ್ತು. ಇದಕ್ಕೆ ಪುನ್ನಾಗಿನಿ ಅವರೂ ಒಂದು ಹೊಸರೀತಿಯ ಯೋಜನೆ ಹಾಕಿದರು. “ಪರಿಸರ ಮಕ್ಕಳ ಬಳಗ”ದೊಂದಿಗೆ ಬೆರೆತು ಅವರೂ ಈಗ ಒಬ್ಬ ಪ್ರೌಢ ಪರಿಸರವಾದಿಯಾಗಿ ಬಿಟ್ಟಿದ್ದರು. ಆ ಹಳ್ಳಿಯ ಸುತ್ತಲಿನ ಬಂಜರು ಭೂಮಿಯಲ್ಲಿ ತಾವು ಮರಗಳನ್ನು ನೆಟ್ಟು ಕಾಡನ್ನಾಗಿ ಪರಿವರ್ತಿಸುತ್ತೇನೆ ಎಂದು ಪಣ ತೊಟ್ಟರು. ಸಾಲು ಮರದ ತಿಮ್ಮಕ್ಕ ಅವರಿಗೆ ಸ್ಫೂರ್ತಿಯಾದರು. ಸುಮ್ಮನೆ ಸಸಿ ನೀಡಿ ಎಂದರೆ ಯಾರು ಮುಂದೆ ಬರುತ್ತಾರೆ ಎಂದು ಮನಗಂಡ ಅವರು ಮೊದಲು ತಮ್ಮ ಪತಿ, ಜನಪ್ರಿಯ ನಟ ದಿವಂಗತ ರಾಜಕೇಸರಿ ಅವರ ಹೆಸರಿನಲ್ಲಿ ೧೦೦ ಸಸಿಗಳನ್ನು ತಂದು ಹಳ್ಳಿಯ ಹೆಂಗಸರನ್ನು ಕರೆದುಕೊಂಡು ಹೋಗಿ ತಾವೂ ಅವರೊಂದಿಗೆ ಬೆರೆತು ಬಂಜರು ಭೂಮಿಯಲ್ಲಿ ನೆಟ್ಟರು. ನಂತರ ಅಲ್ಲಿಯೇ ಒಂದು ಕೊಳವೆ ಭಾವಿಯೊಂದನ್ನು ತೆಗೆಸಿ ಅದರ ನೀರನ್ನು ಅವುಗಳಿಗೆ ಉಣಿಸಿದರು. ಹೆಂಗಸರಿಗೂ ಸಂಭ್ರಮವೋ ಸಂಭ್ರಮ. “ನೀವೂ ಸಹ ತಮ್ಮ ಪ್ರೀತಿಯ ಬಂಧುಗಳ ನೆನಪಿನಲ್ಲಿ ಹೀಗೆಯೇ ಸಸಿಗಳನ್ನು ನೆಡಬಹುದು” ಎಂದು ಪುನ್ನಾಗಿನಿ ಅವರು ಸಲಹೆ ನೀಡಿದಾಗ ಎಲ್ಲರೂ ಉತ್ಸಾಹದಿಂದ ಮುಂದೆ ಬಂದರು. ಈಗ ನೂರು ಸಸಿ ಸಾವಿರವಾಗಿ ಅದಕ್ಕೆ ಎಲ್ಲರೂ ಶ್ರದ್ಧೆ ಯಿಂದ ನೀರನ್ನು ಹಾಕಿ ಉಪಚಾರ ಮಾಡಿ ಅದು ಬೆಳೆಯುವುದನ್ನು ನೋಡಿ ಆನಂದ ಪಡುತ್ತಿದ್ದರು. ಸತ್ತವರ ವರುಷದ ದಿನ ಬಂದರೆ ಅಂದು ಹಳ್ಳಿಗರೆಲ್ಲ ಹಾಗೂ ಆ ಕುಟುಂಬದ ಮನೆಯವರೆಲ್ಲ ಮರದ ಬಳಿ ಸೇರಿ ಅದಕ್ಕೆ ನೀರು ಹಾಕಿ, ಅದರ ಒಣಗಿದ ರೆಂಬೆ,ಕೊಂಬೆಗಳನ್ನು ಸವರಿ ಅದಕ್ಕೆ ನಮಸ್ಕರಿಸಿ ಎಲ್ಲರೂ ಮನೆಯಿಂದಲೇ ತಂದ ತಿಂಡಿಯನ್ನು ಪ್ರಸಾದವೆಂದು ತಿನ್ನುತ್ತಿದ್ದರು.
ಪುನ್ನಾಗಿನಿ ಅವರಂತೂ ಈಗ ಈ ಬಂಜರು ಭೂಮಿಯಲ್ಲಿಯೇ ತಮ್ಮ ಹೆಚ್ಚಿನ ಕಾಲ ಕಳೆಯುತ್ತಾ ಆ ಹಳ್ಳಿಯ ಹೆಂಗಸರಿಗೆ ಹಾಡು, ಹಸೆ, ನೀತಿ ಪಾಠ ಇತ್ಯಾದಿ ಗಳನ್ನೂ ಹೇಳಿಕೊಡಲು ಆರಂಭಿಸಿದರು. ತಮ್ಮ ಇಳಿ ವಯಸ್ಸಿನಲ್ಲಿ ಇಷ್ಟೊಂದು ಸಂತೋಷವಾಗಿ ಕಾಲ ಕಳೆಯಬಹುದಾ ಎಂದು ಅವರಿಗೇ ಆಶ್ಚರ್ಯವಾಗಿತ್ತು. ಇದಿಲ್ಲವಾದಲ್ಲಿ ಅವರು ತಮ್ಮ ಮಗಳೊಂದಿಗೆ ದೂರದ ಅಮೆರಿಕದಲ್ಲಿ ಇರಬೇಕೆಂದಿದ್ದರು ಅಥವಾ ಯಾವುದಾದರೂ ವೃದ್ಧಾಶ್ರಮದಲ್ಲಿ ಇರಬೇಕು ಎಂದುಕೊಂಡಿದ್ದರು. ದೇವರೇ ಪಟ್ನಮ್ ಪ್ರಕಾಶ್ ಅವರ ರೂಪದಲ್ಲಿ ಬಂದು ತಮ್ಮನ್ನು ಹೀಗೆ ಸಂತೋಷವಾಗಿ ಇರಲು ಪ್ರೇರೇಪಿಸಿದ ಎಂದು ಎಲ್ಲರಿಗೂ ಹೇಳುತ್ತಿದ್ದರು. ಹೀಗೆ ಹಳ್ಳಿಯಲ್ಲಿ ಹಳ್ಳಿಯಲ್ಲಿ ಯಾರಾದರೂ ಮರಣ ಹೊಂದಿದರೆ ಅವರ ಗುಣಗಾನ ಮಾಡಿ ಅವರ ಹೆಸರಿನಲ್ಲಿ ಒಂದು ಮರ ನೆಡುವ ಸಂಪ್ರದಾಯ ಹುಟ್ಟಿಕೊಂಡಿತು. ಹಾಗೆಯೇ ಯಾವುದಾದರೂ ಮಗು ಹುಟ್ಟಿದರೂ ಅದರ ಹೆಸರಿನಲ್ಲಿ ಒಂದು ಮರ ನೆಡುವ ಸಂಪ್ರದಾಯವಾಗಿ ಹುಟ್ಟಿಕೊಂಡಿತು. ಹೀಗಾಗಿ ಆ ಬಂಜರು ಭೂಮಿಯಲ್ಲಿ ಈಗ ಹಲವಾರು ಸಸಿಗಳು ಬೆಳೆದು ನಳನಳಿಸುತ್ತಿದ್ದವು. ಮಳೆಯ ನೀರು, ಜನರು ಆ ಸಸಿಯನ್ನು ತಮ್ಮ ಮನೆಯ ಸದಸ್ಯನಂತೆ ಕಂಡು, ಪ್ರೀತಿಯಿಂದ ಉಣಿಸುವ ಕೊಳವೆ ಭಾವಿಯ ನೀರು ಕುಡಿದು ಆ ಸಸಿಗಳು ಬೇಗನೆ ಬೆಳೆದವು. ಈಗ ಅವಕ್ಕೆ ನೀರಿನ ಅವಶ್ಯಕತೆ ಇರಲಿಲ್ಲ. ಹೀಗಾಗಿ ಪುನ್ನಾಗಿನಿ ಅವರ ಕಾರ್ಯ ಕ್ಷೇತ್ರ ಇನ್ನೂ ಮುಂದಕ್ಕೆ ಹೋಗಿ ಗುಡ್ಡಗಳ ಬುಡದಲ್ಲಿ ವನಮಹೋತ್ಸವ ಪ್ರಾರಂಭವಾಯಿತು. ಈಗ ಪ್ರಕಾಶ್ ಪಟ್ನಮ್ ಅವರಿಗಿಂತ ಪುನ್ನಾಗಿನಿ ಅವರೇ ಹಳ್ಳಿಯ ಉದ್ಧಾರದ ಕೆಲಸವನ್ನು ಪಟ್ನಮ್ ಅವರ ಸಲಹೆಯಂತೆ ಕಾರ್ಯಗತಗೊಳಿಸಲು ಆರಂಭಿಸಿದರು. ಅದರಲ್ಲಿ ಸೇರಿಕೊಳ್ಳಲು ಎಲ್ಲ ಹಳ್ಳಿಗರನ್ನು ಸ್ವತಃ ಕರೆದು ಕೆಲಸ ಮಾಡುವಂತೆ ಪ್ರೇರೇಪಿಸಿದರು. ಈಗ ಅವರ ಹೆಸರು ಪುಟ್ಟಕೆರೆ ನಾಗಿಣಿ ಎಂದು ಬದಲಾಗಿದೆ. ಇವೆಲ್ಲ ಆಗಿ ಈಗ ಸುಮಾರು ಹದಿನೈದು ವರ್ಷಗಳು ಕಳೆದಿವೆ. ಪು. ನಾಗಿಣಿ ಅವರು ದಿನಗಳೆದಂತೆ ಇನ್ನೂ ಚಿಕ್ಕವರಾಗಿ ಕಾಣುತ್ತಿದ್ದಾರೆ. ಹಳ್ಳಿಯ ಸ್ವಚ್ಛ ಪರಿಸರದಲ್ಲಿ, ಜನಸೇವೆಯಲ್ಲಿ ಮೈಮರೆತಿರುವುದರಿಂದ ಅವರ ಅರೋಗ್ಯ ಬಹಳವೇ ಸುಧಾರಿಸಿದೆ.
ಇಂದು ಪುಟ್ಟಕೆರೆ ಭಾರತದ ಒಂದು ಪ್ರಸಿದ್ಧ ಮಾದರಿ ಗ್ರಾಮವಾಗಿದೆ. ಅದಕ್ಕೆ ಅತ್ಯಂತ ಸ್ವಚ್ಛ ವಾದ ಹಳ್ಳಿ ಎಂಬ ಬಿರುದೂ ಬಂದಿದೆ. ಪು. ನಾಗಿಣಿ ಅವರು ಬೆಳೆಸಿರುವ ಕಾಡು ಅವರ “ಪ್ರಸಿದ್ಧ ನಟಿ” ಎಂಬ ಹೆಸರನ್ನು ಅಳಿಸಿ “ವನ ಪುನ್ನಾಗಿನಿ” ಎಂದು ಪುನರ್ನಾಮಕರಣ ಮಾಡಿದೆ. ಆಕೆಯೂ ಇದರಲ್ಲಿಯೇ ಹೆಚ್ಚು ಸಂತೋಷ ಕಂಡುಕೊಂಡಿದ್ದಾರೆ.
ಪಟ್ನಮ್ ಪ್ರಕಾಶ್ ಅವರೂ ಈಗ ಬಂಧುಗಳನ್ನು ಕಳೆದುಕೊಂಡು ಒಬ್ಬಂಟಿಯಾಗಿದ್ದಾರೆ. ತಮ್ಮ ಕೆಲಸಗಳನ್ನು ಕಡಿಮೆ ಮಾಡಿಕೊಂಡು ಇಲ್ಲಿಯೇ ಒಂದು ಸಣ್ಣ ಮನೆಯಲ್ಲಿ ನೆಲಸಿ, ಮರಣಿಸಿದ ತಮ್ಮ ಬಂಧುಗಳನ್ನೆಲ್ಲ ವೃಕ್ಷಗಳ ರೂಪದಲ್ಲಿ ನೋಡುತ್ತಾ ಸನ್ಯಾಸಿಯಂತೆ ಕಾಲ ಕಳೆಯುತ್ತಿದ್ದಾರೆ. ವಿಶ್ವ ಮಾನವ ಸಿದ್ದಾಂತವನ್ನು ಜನರಿಗೆ ಬೋಧಿಸಿ ಎಲ್ಲ ಧರ್ಮವೂ ಒಂದೇ, ಇರುವುದು ಒಂದೇ ಅದು ಮಾನವ ಜಾತಿ ಅಥವಾ ಧರ್ಮ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈಗ ಅಲ್ಲಿ ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಎಂಬ ಧರ್ಮ ಬೇಧ ಇಲ್ಲ. ಎಲ್ಲರೂ ವಿಶ್ವಮಾನವರಾಗಿ ಬಿಟ್ಟಿದ್ದಾರೆ. ಬಂಜರು ಭೂಮಿಯ ಕಾಡಿನಲ್ಲಿ ಒಂದು ವನದೇವತೆಯನ್ನು ಬಿಂಬಿಸುವ ಒಂದು ಕಲಾತ್ಮಕವಾದ ಕಲ್ಲನ್ನು ಹಳ್ಳಿಯ ಕಲ್ಲುಕುಟಿಗರ ಕೈಲೇ ಮಾಡಿಸಿ ಅದಕ್ಕೊಂದು ಗುಡಿ ಕಟ್ಟಿಸಿ ಎಲ್ಲರೂ ಅದಕ್ಕೆ ನಮಸ್ಕಾರ ಮಾಡುತ್ತಾರೆ. ಅಲ್ಲಿ ನಿಮಗೆ ಸಿಗುವುದು ಸಿಹಿಯಾದ ಹಣ್ಣುಗಳ ಪ್ರಸಾದ ಹಾಗೂ, ಗಿಡಗಳ ಬೀಜಗಳ ಪ್ರಸಾದ. ಅದನ್ನು ಸಾಧ್ಯವಾದ ಕಡೆಯಲ್ಲೆಲ್ಲಾ ಚೆಲ್ಲಿ ಗಿಡ ಬೆಳೆಸಿ ಎಂಬುದೇ ಅವರ ಸಿದ್ದಾಂತ. ಪಟ್ನಮ್ ಅವರು ಕಾವಿ ಬಟ್ಟೆ ಧರಿಸಿಬಿಟ್ಟರೆ ನಿಜವಾಗಿಯೂ ವಿವೇಕಾನಂದರಂತೆ ಕಂಗೊಳಿಸುತ್ತಾರೆ, ಅಂತಹ ವರ್ಚಸ್ಸು ಅವರಿಗಿದೆ. ಎಲ್ಲ ಜನರೂ ಅವರನ್ನು ಗೌರವಿಸುತ್ತಾರೆ. ಪು. ನಾಗಿಣಿ ಅವರಂತೂ ಅವರನ್ನು ಗುರುಗಳೆಂದೇ ಸ್ವೀಕರಿಸಿದ್ದಾರೆ.
ಪಟ್ನಮ್ ಅವರು ಹಸು ಹಾಗೂ ಇತರ ಪ್ರಾಣಿಗಳ ಬಗ್ಗೆ ಜನರಿಗೆ ಅನೇಕ ತಿಳುವಳಿಕೆ ನೀಡಿ, ಇಂತಹ ಪಶುಗಳಿಂದ ಜನರಿಗೆ ಎಷ್ಟು ಲಾಭ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ಪಶು ಎಂದರೆ ಅಸ್ತಿ, ಹಿಂದೆ ಜನರ ಸಿರಿತನವನ್ನು, ಹಿರಿತನವನ್ನು ಅವರಲ್ಲಿರುವ ಗೋವುಗಳಿಂದೆ ಅಳೆಯುತ್ತಿದ್ದರು ಎಂದು ಕಥೆಗಳಿಂದ ಉದಾಹರಿಸಿದ್ದಾರೆ. “ನೀನಾರಿಗಾದೆಯೋ ಎಲೆ ಮಾನವಾ ಹರಿ ಹರಿಯೇ ಗೋವೂ ನಾನು “ ಎಂಬ ಹಾಡನ್ನು ಮಕ್ಕಳ ಕೈಲಿ ಹಾಡಿಸಿ ಎಲ್ಲರಿಗೂ ಅದರ ಅರ್ಥವನ್ನು ವಿವರಿಸಿದ್ದಾರೆ. ಹೀಗಾಗಿ ಬರಡಾಗಿದ್ದ ಗೋಮಾಳವೂ ಈಗ ಪಶುಗಳಿಗೆ ಸ್ವರ್ಗವಾಗಿದೆ. ಅವುಗಳ ಗೊಬ್ಬರ, ಗೊಬ್ಬರದ ಅನಿಲ, ಸಮೃದ್ಧಿಯಾದ ಹಾಲು ಇವು ಜನರಿಗೆ ಅನೇಕ ರೀತಿಯಲ್ಲಿ ಲಾಭ ತಂದುಕೊಟ್ಟಿವೆ. ಹಸುವನ್ನು ಹಿಂದೆ ಏಕೆ ಪೂಜಿಸುತ್ತಿದ್ದರು ಎಂದು ಜನರಿಗೆ ಈಗ ಅರ್ಥವಾಗಿದೆ. ಪೂಜೆ ಎಂದರೆ ಸುಮ್ಮನೆ ಕುಂಕುಮ ಇಟ್ಟು ಹಾರ ಹಾಕಿ ನಮಸ್ಕಾರ ಹಾಕುವುದಲ್ಲ, ಅವನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಮನೆಯ ಒಬ್ಬ ಸದಸ್ಯನಂತೆ ಕಾಣಬೇಕು ಎಂದು ಜನರಿಗೆ ಅರಿವಾಗಿದೆ. ಪರಿವಾರದ ಒಬ್ಬ ಸದಸ್ಯನನ್ನೇ ಮಾಂಸಕ್ಕೆ ಮಾರಲಾಗುತ್ತದೆಯೇ, ಚೆನ್ನಾಗಿದ್ದಾಗ ಅದರ ಲಾಭ ಪಡೆದು ವಯಸ್ಸಾದಮೇಲೆ ಅದನ್ನು ಅಟ್ಟಿಬಿಡಲಾಗುತ್ತದೆಯೇ, ಅಪ್ಪ ಅಮ್ಮ ಮುದುಕರಾದರಂದು ಅವರನ್ನು ಆಚೆಗೆ ಅಟ್ಟಲಾಗುತ್ತದೆಯೇ, ಅಥವಾ ಕೊಂದು ಬಿಡಲಾಗುತ್ತದೆಯೇ ಎಂದು ಜನ ಯೋಚಿಸುವ ಹಾಗೆ ಪಟ್ನಮ್ ಅವರು ಪಶುಗಳ ಬಗ್ಗೆ ತಿಳುವಳಿಕೆ ನೀಡಿದ್ದಾರೆ.
ಈಗ ನೀವು ಈ ಮಾದರಿ ಪುಟ್ಟಕೆರೆಗೆ ಹೋದರೆ ನಿಮಗೆ ಕಾಣಿಸುವುದು ಸುಂದರವಾದ ಪುಟ್ಟ ಕೆರೆ, ಅದರ ಸುತ್ತಲೂ ಇರುವ ಹಸಿರುಮಯ ಗದ್ದೆ, ಹೊಲಗಳು, ಇವುಗಳ ಮಧ್ಯೆ ಹಸಿರು ಮರಗಳ ನಡುವೆ ರಾರಾಜಿಸುತ್ತಿರುವ ಪುಟ್ಟಕೆರೆ ಗ್ರಾಮ, ಅಲ್ಲಿನ ಸ್ವಚ್ಛ ಪರಿಸರ, ಸುಸಂಸ್ಕೃತರಾದ ಹಳ್ಳಿಯ ಜನಗಳು, ಹಳ್ಳಿಯ ಸುತ್ತಲೂ ಇದ್ದ ಬಂಜರು ಭೂಮಿಯಲ್ಲಿ ಪು. ನಾಗಿಣಿ ಅವರು ಬೆಳೆಸಿರುವ ಕಾಡು, ಅದರ ಹಿಂದೆ ಗುಡ್ಡವೂ ಈಗ ಹಸಿರುಮಯವಾಗಿ ಕಣ್ಣಿಗೆ ಹಬ್ಬ ಉಂಟು ಮಾಡುತ್ತಿದೆ. ಪು. ನಾಗಿಣಿ ಅವರೂ ಈಗ ಒಂದು ಸಣ್ಣ ಕೊಠಡಿಗೆ ತಮ್ಮನ್ನು ವರ್ಗಾಯಿಸಿಕೊಂಡು ಅವರ ಮನೆಯನ್ನು ಅಲ್ಲಿಗೆ ಬರುವ ಜನರಿಗೆ ವಸತಿಗೃಹವನ್ನಾಗಿ ಮಾಡಿ ಅದರಿಂದ ಬರುವ ಹಣವನ್ನು ಗ್ರಾಮೋದ್ಧಾರಕ್ಕೆ ಮೀಸಲಿಟ್ಟಿದ್ದಾರೆ.
ಅಂತೂ ದಾರ್ಶನಿಕ ಪಟ್ನಮ್ ಪ್ರಕಾಶ್ ಅವರ ಕನಸು, ಪು. ನಾಗಿಣಿ ಅವರ ಮುಡಿಪಿನ ಜೀವನ ಎರಡೂ ಮಿಲನಗೊಂಡು ಪುಟ್ಟಕೆರೆ ಗ್ರಾಮವನ್ನು ಭಾರತದ ನಕ್ಷೆಯಲ್ಲಿ ಪ್ರಕಾಶಿಸುವಂತೆ ಮಾಡಿದೆ. ಜನ ಇಂದು ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ಇಲ್ಲಿ ಅವರು ಬೆಳೆದ ಬೆಳೆ, ಹಾಲು, ಗೊಬ್ಬರ, ಅವರು ಮಾಡಿದ ವಸ್ತು, ಇತ್ಯಾದಿಗಳು ಒಬ್ಬರಿಂದ ಒಬ್ಬರಿಗೆ ವಿನಿಮಯವಾಗಿ ಜನಕ್ಕೆ ಯಾವುದಕ್ಕೂ ಹಳ್ಳಿಯಿಂದ ಆಚೆಗೆ ಹೋಗುವ ಪ್ರಮೇಯ ಬರುತ್ತಿಲ್ಲ. ಇನ್ನು ಹಳ್ಳಿಯಿಂದ ಅನೇಕ ಅರೋಗ್ಯ ಭರಿತ ಬೆಳೆಗಳು, ತರಕಾರಿಗಳು, ಹೂವುಗಳು ನಗರಗಳಿಗೆ ಮಾರಾಟವಾಗುತ್ತಿವೆ. ಪುಟ್ಟಕೆರೆಯಲ್ಲಿ ಬೆಳೆದ ಬೆಳೆ ಎಂದರೆ ಅಲ್ಲಿನ ಜನ ಮುಗಿಬಿದ್ದು ಕೊಳ್ಳುತ್ತಾರೆ. ಹೀಗಾಗಿ, ಏನೆ ಆದರೂ ಕೆರೆ ಮತ್ತು ಅದರ ಸುತ್ತಲೂ ಇರುವ ಹಸಿರು ಕೃಷಿ ಭೂಮಿಯನ್ನು ಹಾಗೆಯೆ ಉಳಿಸಿಕೊಳ್ಳಬೇಕು ಎಂಬುದು ಎಲ್ಲರ ಕನಸಾಗಿದೆ. ಹಳ್ಳಿಯ ಜನರಿಗೂ ಅದು ಮನವರಿಕೆಯಾಗಿದೆ. ಜೊತೆಗೆ ಹಳ್ಳಿಯಲ್ಲೇ ಸಿಗುವ ಗೊಬ್ಬರ, ಸುತ್ತಲಿನ ವನದಿಂದ ಆಗಿರುವ ಅನುಕೂಲ ಇವೆಲ್ಲವೂ ನಮ್ಮ ಕರ್ನಾಟಕದಲ್ಲಿ ಇನ್ನಷ್ಟು ಮಾದರಿ ಗ್ರಾಮಗಳು ಉದಯವಾಗಲು ಪ್ರೇರೇಪಿಸುತ್ತಿವೆ. ಒಟ್ಟಿನಲ್ಲಿ ಕೆರೆ, ಕಾಡು, ಸ್ವಚ್ಛತೆ, ಸಹಜೀವನ, ಸಾಮಾಜಿಕ ಅರಣ್ಯ, ಪಶು ಸಂಪತ್ತು, ಗೋಮಾಳ, ಇವು ಗ್ರಾಮೋದ್ಧಾರಕ್ಕೆ ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ಮನವರಿಕೆಯಾಗಿದೆ.
ಹೀಗೆ ಕಥೆ ಮುಗಿಸಿದ ನನ್ನ ರೈತ ಮಿತ್ರ, “ಬೆಂಗಳೂರಿಗೆ ಬಂದರೆ ಪುಟ್ಟಕೆರೆ ಗ್ರಾಮವನ್ನು ನೋಡಲು ಮರೆಯಬೇಡಿ, ಹಾಗೆಯೇ ಪಟ್ನಮ್ ಪ್ರಕಾಶ್ ಅವರನ್ನೂ, ಪು. ನಾಗಿಣಿ ಅವರನ್ನೂ ಭೇಟಿ ಮಾಡಿ ಅವರಿಂದಲೇ ಗ್ರಾಮೋದ್ಧಾರದ ಬಗ್ಗೆ ವಿವರಗಳನ್ನು ಕೇಳಿ ತಿಳಿದುಕೊಂಡು ನೀವೂ ಅಳವಡಿಸಿಕೊಳ್ಳಿ. ನಿಮ್ಮ ಹಳ್ಳಿಯನ್ನೂ ಒಂದು ಮಾದರಿ ಗ್ರಾಮವನ್ನು ಮಾಡುವ ಕನಸು ಕಂಡು ಅದನ್ನು ಸಾಕಾರ ಗೊಳಿಸಿ” ಎಂದು ಹೇಳಿದ.
ಈ ಬಾರಿ ಏನಾದರೂ ಸರಿ, ಆ ಗ್ರಾಮವನ್ನು ನೋಡಲೇಬೇಕೆಂದು ತೀರ್ಮಾನಿಸಿದೆ, ಅದನ್ನು ಕಣ್ಣಾರೆ ಕಂಡೆ. ಅದರಲ್ಲಿ ಏನೂ ಉತ್ಪ್ರೇಕ್ಷೆ ಇಲ್ಲ, ನಿಜವಾಗಿಯೂ ಅದೊಂದು ಮಾದರಿ ಗ್ರಾಮ ಎಂದು ಮನವರಿಕೆಯಾಯಿತು. ಅಲ್ಲಿಯೇ ಇದ್ದು ಬಿಡೋಣವೆಂದು ಮನಸಾಯಿತು. ಆದರೆ ಪಟ್ನಮ್ ಪ್ರಕಾಶ್ ಅವರು “ಇಲ್ಲಿ ಇದ್ದುಬಿಡುವುದು ಬಲು ಸುಲಭ, ನೀವೂ ಸಹ ನಿಮ್ಮ ಹಳ್ಳಿಯನ್ನು ಇದಕ್ಕಿಂತ ಚೆನ್ನಾಗಿ ಉದ್ಧಾರ ಮಾಡುತ್ತೇನೆ ಎಂದು ಶಪಥ ಮಾಡಿ, ನಂತರ ಅಲ್ಲಿಯೇ ಇದ್ದುಬಿಡಿ” ಎಂದು ನಯವಾಗಿಯೇ ಚಾಟಿ ಬಿಸಿದರು. ಅದೂ ನಿಜವೇ ಅನ್ನಿಸಿ ನನ್ನ ಹಳ್ಳಿಯನ್ನೂ ಚೆನ್ನಾಗಿ ಉದ್ಧಾರ ಮಾಡಬೇಕೆಂದು ಮನಸಿನಲ್ಲೇ ಶಪಥ ಮಾಡಿ, ಅಲ್ಲಿನ ಪರಿಸರದ ಚಿತ್ರೀಕರಣ ಮಾಡಿಕೊಂಡೆ. ಈಗ ನನ್ನ ಹಳ್ಳಿಯ ಜನರಿಗೆ ಇದರ ಬಗ್ಗೆ ಮನವರಿಕೆ ಮಾಡಿಕೊಡುವ ಭಾರ ನನ್ನ ಹೆಗಲ ಮೇಲೆ ಬಿದ್ದಿದೆ. ಮಾಡುತ್ತೇನೆ ಎಂಬ ಭರವಸೆಯೂ ನನಗಿದೆ. ಪುಟ್ಟಕೆರೆ ಗ್ರಾಮಕ್ಕೆ ಪೈಪೋಟಿ ನೀಡುವ ಗ್ರಾಮವನ್ನು ಇನ್ನೊಂದು ಸ್ವಲ್ಪ ದಿನದಲ್ಲೇ ನೀವು ಖಂಡಿತ ಕಾಣುತ್ತೀರಿ.
ಹಿನ್ನುಡಿ - ಇದು ಕೇವಲ ಕಥೆಯಷ್ಟೇ. ಆದರೆ ಇದನ್ನು ಕಾರ್ಯರೂಪಕ್ಕೆ ತರಬಹುದಲ್ಲವೇ? ಎಲ್ಲರೂ ಮನಸ್ಸು ಮಾಡಿದರೆ ಯಾಕೆ ತಾನೇ ಸಾಧ್ಯವಿಲ್ಲ? ಎಲ್ಲರೂ ಕೈ ಜೋಡಿಸೋಣ.

ಹುಟ್ಟಿದ ಹಬ್ಬದಂದು ದೀಪ ಹಚ್ಚಬೇಕೋ ಆರಿಸಬೇಕೋ?
ಹುಟ್ಟಿದ ಹಬ್ಬದ ದಿನ ಏಕೆ ಮೇಣದ ಬತ್ತಿ ಹಚ್ಚಿ ನಂತರ ಅದನ್ನು ಆರಿಸುತ್ತಾರೆ ಎಂದು ನಾನು ಅನೇಕರನ್ನು ಕೇಳಿದೆ. ಎಲ್ಲರೂ ನಮಗೆ ಗೊತ್ತಿಲ್ಲ, ಏಲ್ಲರೂ ಹಾಗೇ ಮಾಡುತ್ತಾರೆ ನಾವೂ ಹಾಗೇ ಮಾಡುತ್ತೇವೆ ಎಂದರೇ ಹೊರತು ಒಬ್ಬರೂ ಸರಿಯಾದ ಉತ್ತರ ನೀಡಲಿಲ್ಲ. ಅಂತೂ ಅದರ ಕಾರಣವನ್ನು ನಾನೇ ಶೋಧಿಸಬೇಕಾಯಿತು. ನಿಮಗೇನಾದರೂ ಗೊತ್ತೇ? ನಾನೇ ಹೇಳಿಬಿಡುತ್ತೇನೆ, ಕೇಳಿ ನಕ್ಕುಬಿಡಿ. ದೀಪ ಹಚ್ಚಿದ ಕೂಡಲೇ ಏನಾದರೂ ಪ್ರಾರ್ಥಿಸಿ ನಂತರ ದೀಪ ಆರಿಸಿದಾಗ ಬರುವ ಹೊಗೆಯು ನಿಮ್ಮ ಪ್ರಾರ್ಥನೆಯನ್ನು ದೇವರಬಳಿಗೆ ತೆಗೆದುಕೊಂಡು ಹೋಗುತ್ತದೆಯಂತೆ. ಇದು ನಮ್ಮ ಭಾರತೀಯ ಪದ್ಧತಿಯಾಗಿದ್ದಿದ್ದರೆ ನಮ್ಮ ಬುದ್ಧಿಜೀವಿಗಳು ಇದೆಂಥ ಮೂಢನಂಬಿಕೆ ಎಂದು ಗೇಲಿಮಾಡಿ, ಅದಕ್ಕೆ ಒಂದಿಷ್ಟು ಕೊಂಕುನುಡಿದು ರಂಪ ಮಾಡಿರುತ್ತಿದ್ದರು. ಆದರೆ ಅದೇಜನ ಈಗಲೂ ಇದನ್ನೇ ಕುರಿಗಳಂತೆ ಅನುಸರಿಸುತ್ತಿದ್ದಾರೆ. ಒಬ್ಬರಾದರೂ ಇದರ ಅರ್ಥ ತಿಳಿದುಕೊಳ್ಳಲು ಪ್ರಯತ್ನಿಸಿಲ್ಲ. ಇದಕ್ಕಿಂತಾ ದೀಪ ಹಚ್ಚುವುದು ಎಂದರೆ ಕತ್ತಲನ್ನು ದೂರಮಾಡುವುದು ಅಂದರೆ, ಕತ್ತಲೆಂಬ ನಮ್ಮ ಅಜ್ಞಾನವು ಬೆಳಕೆಂಬ ಜ್ಞಾನದಿಂದ ದೂರವಾಗಲಿ ಎಂಬ ಸಂಕೇತವೂ ಸರಿಯಲ್ಲವೇ. ಇದನ್ನು ಎಲ್ಲಾ ಧರ್ಮದವರೂ ಒಪ್ಪಬಹುದು ಏಕೆಂದರೆ ದೀಪಕ್ಕೆ, ಅದು ನೀಡುವ ಬೆಳಕಿಗೆ ಯಾವುದೇ ಧರ್ಮದ ನಂಟಿಲ್ಲ. 

ನನ್ನ ಗೆಳೆಯರೊಬ್ಬರಿದ್ದಾರೆ. ಅವರಿಗೆ ಈ ಕೇಕು ಕತ್ತರಿಸುವ, ದೀಪ ಆರಿಸುವ, ಆಂಗ್ಲ ಭಾಷೆಯಲ್ಲಿ ಹಾಡುವ ಹುಟ್ಟಿದ ಹಬ್ಬವನ್ನು ಕಂಡರೆ ಉರಿದು ಬೀಳುತ್ತಾರೆ. ನಾವು ಕನ್ನಡಿಗರು, ಕನ್ನಡ ಭಾಷೆಯಲ್ಲಿ ಹಾಡೋಣ, ನಮ್ಮದೇ ಆದ ರೀತಿಯಲ್ಲಿ ಆಚರಿಸೋಣ ಎಂದು ತಮ್ಮ ಮಗನ ಹುಟ್ಟಿದ ಹಬ್ಬವನ್ನು ಹೊಸರೀತಿಯಲ್ಲಿ ಆಚರಿಸಿದ್ದರು.
ಅಂದು ಸಿಹಿತಿಂಡಿಗಳನ್ನು ಮಾಡಿ ಅವನ್ನು ದೀಪದ ಮುಂದೆ ಇಟ್ಟು ದೀಪವನ್ನು ಬೆಳಗಿಸಿ, ಹತ್ತು ಹಣತೆಗಳನ್ನು (ಅವರ ಮಗನ 10ನೇ ವರ್ಷದ ಹುಟ್ಟಿದ ಹಬ್ಬ) ಹಚ್ಚಿ, ಕನ್ನಡದ ಪದ್ಯವೊಂದನ್ನು ಹಾಡಿಸಿ ಎಲ್ಲರ ಮನಗೆದ್ದರು. ಎಲ್ಲರೂ ಹೀಗೇ ಮಾಡಿದರೆ ನಮ್ಮತನವನ್ನು ಕಾಯ್ದುಕೊಳ್ಳಬಹುದು. ಅಂದು ಅವರು ಹಾಡಿಸಿದ ಪದ್ಯ ನೆನಪಿಲ್ಲವಾದರೂ, ನಾನು ಬರೆದಿರುವ ಈ ಕೆಳಗಿನ ಪದ್ಯವನ್ನು ಒಂದು ಸುಲಭವಾದ ರಾಗದಲ್ಲಿ ಎಲ್ಲರೂ ಹೇಳಬಹುದು. 
ಪ್ರೀತಿಯ (ಅಮ್ಮನಿಗೆ)
ಹುಟ್ಟಿದ ಶುಭ ದಿನದಾ
ಶುಭಾಶಯ ಶುಭಾಶಯ 
ಶುಭಾಶಯ ಶುಭಾಶಯ //
ಇಂದಿನ ಶುಭದಿನವು
ನೆಮ್ಮದಿ ಸುಖವನ್ನೂ
ಶಾಂತಿ ಆರೋಗ್ಯವನೂ
ದೇವರು ಕೊಡಲೆಂದೂ //
ಬಯಸುವೆವೂ ನಾವೂ 
ಹರಸುವೆವೂ ನಾವೂ //
ಮೊದಲ ಸಾಲಿನ 'ಅಮ್ಮನಿಗೆ' ಎಂಬುದನ್ನು ಅಪ್ಪನಿಗೆ, ಅಣ್ಣನಿಗೆ, ಅಕ್ಕನಿಗೆ, ಸೋದರಿಗೆ, ತಮ್ಮನಿಗೆ, ಮಿತ್ರನಿಗೆ, ಗೆಳೆಯನಿಗೆ, ಬಂಧುವಿಗೆ, ಗುರುಗಳಿಗೆ ಎಂದು ಸಂದರ್ಭಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು. ಹಾಡನ್ನೂ ಪ್ರಾಸಬದ್ಧವಾಗಿ ಯಾವುದಾದರೂ ಮಕ್ಕಳ ಪದ್ಯದಂತೆ, ಮಧುರವಾದ ಚಿತ್ರಗೀತೆಯ ರಾಗದಂತೆ ಹೇಳಬಹುದು. ನಮ್ಮ ಕಥಾ/ಸಂಗೀತ ಅರಮನೆಯ ಮಿತ್ರರು ಮೊದಲು ಇಂತಹವನ್ನು ಅಳವಡಿಸಿಕೊಂಡು ಇಂಗ್ಲಿಷ್ ಮೋಹದಿಂದ ಹೊರಬಂದು ದುರಭಿಮಾನವಿಲ್ಲದೆ ಅಭಿಮಾನದಿಂದ ಹಾಡುವರೂ ಎಂದೇ ನನ್ನ ಬಲವಾದ ನಂಬಿಕೆ.

ಮಕ್ಕಳೆ ನಡೆಸಿದ ಬೇಸಿಗೆ ಶಿಬಿರ

ಮಕ್ಕಳೆ ನಡೆಸಿದ ಬೇಸಿಗೆ ಶಿಬಿರ - ಬಿ ಎಸ್ ಜಗದೀಶ ಚಂದ್ರ 
ಘಟನೆ ಒಂದು
ಮಕ್ಕಳೇ ಸೇರಿಕೊಂಡು ನಡೆಸುತ್ತಿದ್ದ ಶಿಬಿರದಲ್ಲಿ ಸೀತ ಕಲ್ಯಾಣ ಎಂಬ ನಾಟಕವನ್ನು ಆರಿಸಿಕೊಂಡಿದ್ದರು. ಮಕ್ಕಳು ಎಲ್ಲಾ ತಯಾರಿ ನಡೆಸಿದ್ದರು. ಬಟ್ಟೆ, ಆಭರಣ, ಅಲಂಕಾರ, ಬಿಲ್ಲು, ಬಾಣ ಎಲ್ಲವೂ ಮಕ್ಕಳದೇ. ನಾಟಕ ಶುರುವಾಯಿತು. ಅದರಲ್ಲಿ ರಾವಣನ ಪಾತ್ರಧಾರಿ ಸ್ಟೇಜಿಗೆ ಬರಬೇಕಿತ್ತು. ಎಷ್ಟೊತ್ತು ಆದರೂ ಪತ್ತೆ ಇಲ್ಲ. ಒಳಗೆ ಹೋಗಿ ನೋಡಿದರೆ ರಾವಣನ ಹತ್ತು ತಲೆಯೊಂದಿಗೆ ರಾವಣನ ಪಾತ್ರಧಾರಿಯ ತಲೆಯೂ ಸೇರಿ ಹನ್ನೊಂದು ತಲೆಯಾಗಿದೆ. ಏನು ಮಾಡಲು ತೋಚದೆ ಮಕ್ಕಳು ಕಂಗಾಲಾಗಿದ್ದಾರೆ. ಆಗ ಅವರ ಮಾರ್ಗದರ್ಶಿ ಒಂದು ತಲೆಯನ್ನು ಕಿತ್ತು ಉಳಿದ ತಲೆಗಳನ್ನು ಹುಡುಗನಿಗೆ ಅಂಟಿಸಿ, ಹಾಗೆ ಹೋಗು ಪರವಾಗಿಲ್ಲ ಎಂದು ಹುರಿದುಂಬಿಸಿ ಕಳಿಸಿದರು. ಸಭೆಗೆ ಬಂದ ರಾವಣನ ತಲೆಗಳು (ನಾಲ್ಕು + ಐದು) ಅಸಮವಾಗಿ ಒಂದು ಪಕ್ಕಕ್ಕೆ ವಾಲಿಬಿಟ್ಟಿತ್ತು. ಅವನು ಹಾಗೆಯೆ ಸೊಟ್ಟ ತಲೆಗಳೊಂದಿಗೆ ನಟಿಸಿದ. ಜನರಿಗೋ ವಾಲಿದ ತಲೆಯ ರಾವಣನನ್ನು ನೋಡಿ ನಗುವೋ ನಗು. ಜನರು ಚಪ್ಪಾಳೆ ತಟ್ಟುತ್ತ ಹುರಿದುಂಬಿಸಿದ್ದನ್ನು ಕೇಳಿ ಇನ್ನೂ ಪ್ರೇರಿತನಾಗಿ ಅದೇ ಹುಮ್ಮಸ್ಸಿನಲ್ಲಿ ಸೀತೆಯ ಪರಿಣಯಕ್ಕೆ ಪಣವಾಗಿ ಇಟ್ಟಿದ್ದ ರೊಟ್ಟಿನಲ್ಲಿ ಮಾಡಿದ್ದ ಬಿಲ್ಲನ್ನು ಮುರಿದು ಬಿಟ್ಟ. ಜನರಿಗಂತೂ ಇನ್ನೂ ನಗು. ನಂತರ ಸ್ಟೇಜಿನ ಮೇಲೆಯೇ ಅದಕ್ಕೆ ತೇಪೆ ಹಾಕಿ ರಾಮನ ಪಾತ್ರಧಾರಿ ಬರುವವರೆಗೂ ಇಡಲಾಯಿತು. ಈ ನಾಟಕ ಸರಿಯಾಗಿ ನಡೆದಿದ್ದರೆ ನೋಡಿದವರ ಮನದಲ್ಲಿ ನಿಲ್ಲುತಿತ್ತೋ ಇಲ್ಲವೋ. ಆದರೆ ಈ ಆಕಸ್ಮಿಕಗಳಿಂದ ಅದು ಇಂದಿಗೂ ನೆನಪಿನಲ್ಲಿದೆ. ಇದರಿಂದ ಆ ಮಕ್ಕಳೂ ಮುಂದೆ ಅಂತಹ ತಪ್ಪನ್ನು ಮಾಡದಂತೆ ಪಾಠವನ್ನು ಕಲಿತರು ಎಂಬುದು ಮುಖ್ಯ. ತಾವೇ ತಯಾರಿಸಿದ ಬಟ್ಟೆಗಳು, ಅಲಂಕಾರಗಳು, ಇವುಗಳನ್ನು ಮಾಡುವಾಗ ಮಾಡಿದ ಉಪಾಯಗಳು, ಎದುರಿಸಿದ ಸಮಸ್ಯೆಗಳು, ಅದನ್ನು ಬಗೆಹರಿಸಿದ್ದು, ಸಂದರ್ಭಕ್ಕೆ ತಕ್ಕಂತೆ ತುರ್ತಾಗಿ ನಿರ್ಧಾರ ತೆಗೆದುಕೊಂಡಿದ್ದು, ಇವೆಲ್ಲವೂ ಅವರಿಗೆ ನಿಜವಾದ ಪಾಠವನ್ನು ಕಲಿಸಿದ್ದವು. ಇವೆಲ್ಲವನ್ನೂ ಹೇಳಿಕೊಟ್ಟರೆ ಖಂಡಿತಾ ಬರುವುದಿಲ್ಲ.
ಈ ರಾವಣನ ತಲೆಯ ಘಟನೆ ಆದಮೇಲೆ ನನಗೂ ಒಂದು ಸಂದೇಹ ಬಂದು ಬಿಟ್ಟಿದೆ, ಅದೇನೆಂದರೆ ರಾವಣನಿಗೆ ನಿಜಯಾಗಿಯೂ ೧೦ ತಲೆ (ಸಮ ಸಂಖ್ಯೆ) ಇದ್ದಿದ್ದರೆ ಆ ತಲೆಗಳು ಹೇಗೆ ಸಮವಾಗಿ ಇತ್ತು ಎಂದು. ನಿಮಗೇನಾದರೂ ಹೊಳೆದರೆ ತಿಳಿಸಿ.
ಘಟನೆ ಎರಡು 
ನನ್ನ  ಗೆಳೆಯನ ಮನೆಗೆ ಹೋಗಿದ್ದೆ. ಕುಚ್ಚುಮೊಟ್ಟೆ ಹಿಡಿದು ಧೂಳು ತೆಗೆಯುತ್ತಿದ್ದ. ಆ ಕುಚ್ಚುಮೊಟ್ಟೆಯನ್ನು ನೋಡಿದಾಗ ನನಗೆ ಆಶ್ಚರ್ಯವಾಯಿತು. ಇದೇನೋ, ನಿನ್ನ ಕುಚ್ಚುಮೊಟ್ಟೆ ಅಷ್ಟು ಅಲಂಕಾರ ಮಾಡಿಕೊಂಡಿದೆ, ಧೂಳು ತೆಗೆಯುವುದಕ್ಕೂ ಅಷ್ಟೊಂದು ಪಳ ಪಳ ಅಲಂಕಾರನಾ? ಎಂದು ಕೇಳಿದೆ. ಅದರ ಕಥೆ ಹೇಳುತ್ತೀನಿ ತಾಳು ಎಂದು ಧೂಳು ಹೊಡೆಯುತ್ತಲೇ ಹೇಳಿದ. ಬೇಸಿಗೆ ಶಿಬಿರದಲ್ಲಿ ಅವನ ಮಗನೂ ಭಾಗಿಯಾಗಿದ್ದ. ಅದರಲ್ಲಿ ರಾಜನಿಗೆ ಚಾಮರ ಬೀಸಲು ಚಾಮರ ಬೇಕಿತ್ತು. ಅದನ್ನೆಲ್ಲಾ ಕೊಂಡು ತರಲು ಯಾರೂ ದುಡ್ಡು ಕೊಡುತ್ತಿರಲಿಲ್ಲ. ಆಗ ನನ್ನ ಮಗನೇ ಈ ಉಪಾಯ ಸೂಚಿಸಿದಾಗ ಶಿಬಿರದಲ್ಲಿದ್ದ ಮಕ್ಕಳು ಮನೆಯಿಂದಲೇ ಅದನ್ನು ತಂದು ಅಲಂಕಾರ ಮಾಡಿದರು. ಶಿಬಿರ ಮುಗಿಯಿತು. ಈಗ ನನ್ನ ಮನೆಯ ಧೂಳಿಗೆ ಚಾಮರ ಬಿಸುತ್ತಿದ್ದೇನೆ ಎಂದು ನಕ್ಕ. ಮಕ್ಕಳು ಎಷ್ಟು ಚುರುಕಾಗಿ ಯೋಚಿಸುತ್ತಾರೆ, ನಮ್ಮ ಅವಶ್ಯಕತೆಗಳೇ ಹೊಸ ಶೋಧನೆಗಳಿಗೆ ಮೂಲ ಎಂಬುದು ನಿಜ ಅನ್ನಿಸಿತು. ನೀವೇನನ್ನುತ್ತೀರಿ?

ಬೇಸಿಗೆ ರಜ

ಬೇಸಿಗೆ ರಜ - ಬಿ ಎಸ್ ಜಗದೀಶ ಚಂದ್ರ
ಬೇಸಿಗೆ ರಜಾ ಎಂದರೆ ಏನೋ ಒಂದು ಸವಿನೆನಪು. ಹಿಂದೆ ಆ ರಜೆಗಾಗಿ ನಾವು ಹೇಗೆ ಪರಿತಪಿಸುತ್ತಿದ್ದೆವು ಎಂದರೆ ವರ್ಣಿಸಲಾಗದು.
ಅಂತೂ ಇಂತೂ ಬೇಸಿಗೆ ಬಂದೇ ಬಿಟ್ಟಿತು. ಜೊತಗೇ ಭಯಂಕರವಾದ ಬಿಸಿಲನ್ನೂ ತಂದಿದೆ. ಆದರೂ ಮಕ್ಕಳಿಗೆ ಇದ್ಯಾವ ಚಿಂತೆಯೂ ಇಲ್ಲ. ಅವರಿಗೆ ಖುಷಿಯೋ ಖುಷಿ. ರಜೆಯಲ್ಲಿ ಮಜಾ ಮಾಡಬಹುದು ಎಂದು. ಆದರೆ ನಿಜವಾಗಿಯೂ ಇಂದಿನ ಮಕ್ಕಳು ಮಜ ಮಾಡುತ್ತಿದ್ದಾರೆಯೇ? ಅವರಿಗೆ ಶಾಲೆ ಇಲ್ಲ, ಮನೆ ಕೆಲಸಗಳಿಲ್ಲ, ಮನೆ ಪಾಠಗಳಿಲ್ಲ, ಪರಿಕ್ಷೆ ಎಂಬ ಭೂತದಿಂದ ಬಿಡುಗಡೆಯಾಯಿತಲ್ಲಾ ಎಂದು ಖುಷಿಯೇ ಹೊರತು ರಜೆಯಲ್ಲಿ ಏನು ಮಾಡುವುದು ಎಂಬುದು ಒಂದು ಸಮಸ್ಯೆಯೇ. ಅನೇಕ ಮಕ್ಕಳಿಗೆ ರಜೆ ಎಂದರೆ ಹರಟು, ಟೀವಿ ಮುಂದೆ ಕೂಡು, ಕಂಪ್ಯೂಟರ್ ಮುಂದೆ ಕುಕ್ಕರಿಸು, ಮೊಬೈಲ್ ಹಿಡಿದುಕೊ,  ಇದೇ ಆಗಿದೆ. ಹೊರಗೆ ಕೆಲಸ ಮಾಡುವ ದಂಪತಿಗಳಿದ್ದರಂತೂ ಅವರಿಗೆ ಮಕ್ಕಳ ರಜೆ ಎಂದರೆ ಒಂದು ದೊಡ್ಡ ಸಮಸ್ಯೆಯೇ. ಎದ್ದ ಕೂಡಲೇ ಬಾಲಬಿಚ್ಚಿಕೊಂಡು ಹೊರಗಿನ ಆಟಕ್ಕೆ ಹೋಗುವ  ಬದಲು ಟಿವಿ, ಮೊಬೈಲ್, ಕಂಪ್ಯೂಟರ್ ಗೇಮ್ ಮುಂದೆ ಕೂಡುವ ಇಂದಿನ ಈ ಬಾಲಕ/ಕಿ ಯರನ್ನು ಹೇಗೆ ದಿನ ಪೂರ್ತಿ ನಿಭಾಯಿಸುವುದು ಎಂದು ಅವರ ಸಂಕಟ.
ಹಿಂದಿನಂತೆ  ಇಂದು ಅವಿಭಕ್ತ ಕುಟುಂಬಗಳಿಲ್ಲ. ಮನೆಗೊಂದೇ ಮಗು. ನೋಡಿಕೊಳ್ಳಲು ಯಾರೂ ಇರುವುದಿಲ್ಲ. ಮಕ್ಕಳಿಗೂ ಯಾವುದೇ ಸಹಜವಾದ ಜೊತೆಗಾರರು ಇರುವುದಿಲ್ಲ. ಹಿಂದಾದರೆ ಅಕ್ಕ, ತಮ್ಮ, ಅಣ್ಣ, ತಂಗಿ, ಕಸಿನ್‌ಗಳು, ಪಕ್ಕದ ಮನೆಯ ಮಕ್ಕಳು ಹೀಗೆ ಒಂದು ದೊಡ್ಡ ದಂಡೇ ಇರುತ್ತಿತ್ತು. ಆಗ ಅವರು ಗುಂಪು ಗುಂಪಾಗಿ ಏನು ಮಾಡಿದರೂ ಒಂದು ಮನರಂಜನೆಯೇ. ಅವರಿಗಂತೂ ಆಟ, ಜಗಳ ಮೊದಲಾದುವುಗಳಲ್ಲಿ ಹೇಗೆ ಕಾಲ ಕಳೆಯುತ್ತಿದ್ದರೆಂದರೆ ಊಟ, ನಿದ್ದೆ, ಮನೆಯನ್ನೇ ಮರೆತುಬಿಡುತ್ತಿದ್ದರು. ಅಪ್ಪ ಅಮ್ಮ ಅವರನ್ನು ಮನೆಗೆ ಎಳೆದು ತರಬೇಕಿತ್ತು. ಆದರೆ ಇಂದು?! ಮನರಂಜನೆ ಎಂದರೆ ಟೀವಿ, ಕಂಪ್ಯೂಟರ್‌ಗಳೇ. ಮನೆಯಿಂದಾಚೆ ಮುಕ್ತವಾದ ವಾತಾವರಣದಲ್ಲಿಯ ಆಟದಲ್ಲಿನ ಜಗಳ, ಕದನ, ಕುತೂಹಲ, ಹುಮ್ಮಸ್ಸು ಇವೆಲ್ಲವನ್ನೂ ಇಂದಿನ ಮಕ್ಕಳು ಕಳೆದುಕೊಂಡು ಬಿಟ್ಟಿದ್ದಾರೆ. ಕ್ರಿಕೆಟ್ ಮೊದಲಾದ ಆಟಗಳು ನಮ್ಮ ದೇಸೀ ಆಟಗಳನ್ನು ನುಂಗಿಹಾಕಿವೆ. ಹೋಗಲಿ ಕ್ರಿಕೆಟ್ ಆಡಲೂ ಒಟ್ಟಿಗೆ ಹುಡುಗರು ಸಿಗದ ಅಥವಾ ಸಿಕ್ಕರೂ ಮಕ್ಕಳ ಸ್ವಾರ್ಥ ಮನೋಭಾವದಿಂದ ಆಟ ಮುಂದುವರಿಯುವುದೇ ಕಷ್ಟ ಎನ್ನುವ ಪರಿಸ್ಥಿತಿ ಉಂಟಾಗಿದೆ. ಇಂತಹ ಸ್ವಾರ್ಥತನಕ್ಕೆ ಮಕ್ಕಳನ್ನು ಮುದ್ದಿನಿಂದ ಬೆಳೆಸಿರುವುದೇ ಕಾರಣ ಎಂದರೆ ತಪ್ಪಾಗಲಾರದು.  ಇದನ್ನು ಹೋಗಲಾಡಿಸಲು ಕ್ರಿಕೆಟ್ ಕೊಚಿಂಗ್ ಬಂದಿದೆ. ಮಕ್ಕಳಿಗೆ ಹೇಳಿಕೊಡಲು ಕೋಚ್ ಇರುತ್ತಾರೆ. ಹಾಗೆಯೇ ಈ ಕೋಚ್ ಇರುವುದರಿಂದ 'ನಾನೇ ಎಲ್ಲಾ' ಎಂದು ಜಗಳವಾಗುವುದೂ ತಪ್ಪುತ್ತದೆ. ಅಂತೂ ಆಟವಾಡಿಸುವುದಕ್ಕೂ ಒಬ್ಬರು ಮೇಷ್ಟ್ರು ಹೇಗಿದೆ ನೋಡಿ ಕಾಲ.
ಹೀಗೆ ನಾನಾಕಾರಣಗಳಿಂದ ಇಂದು ಬೇಸಿಗೆ ಶಿಬಿರಗಳು ಬೇಕಾದಷ್ಟು ತಲೆ ಎತ್ತಿವೆ. ಕೆಲವು ಶಿಬಿರಗಳು ಕೇವಲ ದುಡ್ಡಿಗಾಗಿ ಮಾಡುವುದುಂಟು. ಇನ್ನು ಕೆಲವು ಕಡೆ ಪ್ರತಿಬಾರಿಯೂ ಒಂದೇ ಕತೆ. ಒಮ್ಮೆ ಹೋಗಿ ಬಂದರಾಯಿತು, ಇನ್ನೊಮ್ಮೆ ಹೋದರೆ ಬೇಸರ ಉಂಟಾಗುತ್ತದೆ. ಆದ್ದರಿಂದ ಬೇಸಿಗೆ ಶಿಬಿರಕ್ಕೆ ಸೇರಿಸುವ ಮುನ್ನ ಕೊಂಚ ಯೋಚಿಸುವುದು ಒಳ್ಳೆಯದು.
ಬೇಸಿಗೆ ಶಿಬಿರಗಳ ಅನುಕೂಲಗಳು
ಮನೆಯಲ್ಲಿಯೆ ಜೊತೆಗಾರರಿಲ್ಲದಿರುವುದರಿಂದ ಈ ಶಿಬಿರಗಳಲ್ಲಿ ಬರುವ ಇತರರೇ ಅವರಿಗೆ ಜೊತೆಗಾರರಾಗುತ್ತಾರೆ. ಅವರೇ ಅಣ್ಣ, ತಂಗಿ, ಅಕ್ಕ, ತಮ್ಮ, ಕಸಿನ್ ಎಲ್ಲರೂ ಆಗುತ್ತಾರೆ. ಶಿಬಿರವನ್ನು ನಡೆಸುವವರು ಅಮ್ಮ, ಅಜ್ಜಿ, ಮಾವ, ಅತ್ತೆ, ಚಿಕ್ಕಪ್ಪ, ಚಿಕ್ಕಮ್ಮ ಎಲ್ಲರೂ ಆಗಿರುತ್ತಾರೆ. ಅದು ನಡೆದಷ್ಟು ದಿನ ಅದು ಒಂದು ಅವಿಭಕ್ತ ಕುಟುಂಬದ ಮನೆಯಂತೆಯೇ ಆಗಿರುತ್ತದೆ.
ಶಾಲೆ, ಮನೆ ಕೆಲಸ, ಮನೆ ಪಾಠ ಇವುಗಳಿಂದ ಮಕ್ಕಳಿಗೆ ಮುಕ್ತಿದೊರೆಯುತ್ತದೆ. ತಮಗೆ ಇಷ್ಟವಾದುದನ್ನು ಮಾಡುವ ಭಾಗ್ಯ ಅವರದಾಗುತ್ತದೆ.
ಇಲ್ಲಿ ಇರುವಷ್ಟು ದಿನವಾದರೂ ಅವರಿಗೆ ಅಪ್ಪ ಅಮ್ಮಂದಿರ "ಅದು ಮಾಡಬೇಡ, ಇದು ಮಾಡಬೇಡ, ಹೀಗೇ ಮಾಡು, ಅಲ್ಲಿ ಹೋಗಬೇಡ' ಇತ್ಯಾದಿಗಳಿಂದ ಮುಕ್ತಿ ದೊರೆಯುತ್ತದೆ.
ಆಟ, ಪಾಠ, ಕೂಟ, ಮನರಂಜನೆ, ಸಹಬಾಳ್ವೆ, ಗುಂಪು ಚಟುವಟಿಕೆ ಇವೆಲ್ಲವೂ ಒಂದೇ ಜಾಗದಲ್ಲಿ ದೊರೆಯುತ್ತದೆ.
ಅದು ಮಕ್ಕಳ ಚಟುವಟಿಕೆಗಳನ್ನು ಚುರುಕುಗೊಳಿಸುತ್ತದೆ. ಅವರಿಗೆ ಹೊಸ ಹೊಸ ವಿಷಯವನ್ನು ತಿಳಿಸುವ, ಕಲಿಸುವ ಕೇಂದ್ರವಾಗಿರುತ್ತದೆ.
ಶಿಬಿರಕ್ಕೆ ಸೇರಿಸುವ ಮುನ್ನ
ನಿಮ್ಮ ಮಗುವಿಗೆ ಬೇಕಾದ ವಿಷಯಗಳು ಅಲ್ಲಿ ಸೇರಿವೆಯೋ ಇಲ್ಲವೋ ನೋಡಿಕೊಳ್ಳಿ. ನಿಮ್ಮ ಮಗುವಿಗೆ ಯಾವ ವಿಷಯಗಳಲ್ಲಿ ಆಸಕ್ತಿ ಎಂಬುದನ್ನು ತಿಳಿದುಕೊಳ್ಳಿ. ಹಾಗೆಯೇ ನಿಮ್ಮ ಮಗು ಯಾವ ವಿಷಯಗಳಲ್ಲಿ ಹಿಂದಿದೆ ಎಂಬುದನ್ನೂ ಗಮನದಲ್ಲಿಟ್ಟುಕೊಳ್ಳಿ. ಇದು ತುಂಬಾ ಮುಖ್ಯ. ಕೆಲವು ಮಕ್ಕಳು ಬುದ್ದಿವಂತರಾಗಿರಬಹದು ಆದರೆ ನಡವಳಿಕೆ ಗೊತ್ತಿಲ್ಲದಿರಬಹುದು. ಕೆಲವುಬಾರಿ ಸಂಕೊಚ ಪ್ರವೃತ್ತಿಯವರಾಗಿರಬಹುದು, ಕೆಲವರಿಗೆ ಸಭಾಕಂಪನವಿರಬಹುದು, ಹಿಂಜರಿತವಿರಬಹುದು, ಅತೀ ಆತ್ಮವಿಶ್ವಾಸವಿರಬಹುದು. ಕೆಲವೊಮ್ಮೆ ಅತೀ ಮುದ್ದಿನಿಂದಾಗಿ ತಮ್ಮ ಕೆಲಸಮಾಡಿಕೊಳ್ಳುವುದನ್ನೇ ಕಲಿಯದಿರಬಹುದು, ಮನೆಯಲ್ಲಿ ಇತರ ಜೊತೆಗಾರರು ಇಲ್ಲದಿರುವುದರಿಂದ ಜೊತೆಯವರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನೇ ತಿಳಿಯದಿರಬಹುದು. ಆದ್ದರಿಂದ ಕೇವಲ ಓದು ಬರಹದ ವಿಷಯಗಳಿಗೇ ಒತ್ತು ಕೊಡಬೇಡಿ. ಸಾಹಸ, ದೈಹಿಕ ಬೆಳವಣಿಗೆ, ಗುಂಪು ಚಟುವಟಿಕೆ, ಹವ್ಯಾಸ, ನಡವಳಿಕೆ, ಭಾಷಣಕಲೆ, ಮನೆಯಲ್ಲಿಯೇ ಮಾಡಬಹುದಾದ ಕೆಲಸಗಳು, ಹವ್ಯಾಸಗಳು ಮೊದಲಾದ ವಿಷಯಗಳೂ ಇದ್ದರೆ ಒಳ್ಳೆಯದು. ಇದರಿಂದ ಮಕ್ಕಳು ಮುಂದೆಬರಲು ಅನುಕೂಲವಾಗುವುದು.
ಒಂದೇ ಶಿಬಿರದಲ್ಲಿ ತುಂಬಾ ವಿಷಯಗಳನ್ನು ತುರುಕಿದ್ದರೆ ಯಾವುದನ್ನೂ ಸರಿಯಾಗಿ ಕಲಿಯಲಾಗುವುದಿಲ್ಲ. ಆದ್ದರಿಂದ ನಿಮ್ಮ ಮಕ್ಕಳಿಗೆ ಏನು ಬೇಕೋ ಅಂತಹ ವಿಷಯಗಳು ಇರುವ ಕಡೆ ಕಳಿಸಿದರೆ ಒಳ್ಳೆಯದು.
ಹೀಗೂ ಮಾಡಬಹುದು
ಅನುಕೂಲಗಳಿದ್ದರೆ ನೀವೇ ಒಂದು ಶಿಬಿರವನ್ನು ಏರ್ಪಡಿಸಬಹುದು. ಅದನ್ನು ಹುಡುಗರಿಗೇ ಬಿಟ್ಟರೆ ಅದೇ ಒಂದು ಚಟುವಟಿಕೆಯಾಗಬಹುದು. ಆಗ ನೀವು ಒಬ್ಬ ಉತ್ತಮ ಮಾರ್ಗದರ್ಶಿಯಾಗಿದ್ದರೆ ಸಾಕು. ದೊಡ್ಡ ಮಕ್ಕಳು ಚಿಕ್ಕವರಿಗೆ ಹಲವಾರು ವಿಷಯಗಳನ್ನು ಹೇಳಿಕೊಡಬಹುದು. ಹೀಗೆ ಹೇಳಿಕೊಡುವುದರಿಂದ ಕಲಿಸುವವರೂ ಸಹ ಇನ್ನೂ ಚೆನ್ನಾಗಿ ಕಲಿಯಬಹುದು. ಇಂತಹ ಶಿಬಿರಗಳಲ್ಲಿ ಮಕ್ಕಳೇ ನಾಟಕ, ನೃತ್ಯ, ಸಂಗೀತ ನಿರ್ದೇಶನ ಮೊದಲಾದುವನ್ನು ಮಾಡಬಹುದು. ಇದರಿಂದ ಮನಸ್ಸಿಗೆ ಸಿಗುವ ಆನಂದ, ತೃಪ್ತಿ ಅಪಾರ, ಗಳಿಸುವ ಆತ್ಮವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಇದನ್ನು ನಡೆಸುವ ಮಕ್ಕಳಲ್ಲಿರುವ ಕಲೆ ಆಸಕ್ತಿ ಇವುಗಳನ್ನು ಪಟ್ಟಿಮಾಡಿಕೊಳ್ಳಬೇಕು. ನಂತರ ಅಂತಹ ಮಕ್ಕಳು ಅದನ್ನು ಇತರರಿಗೆ ಹೇಳಿಕೊಡುವಂತೆ ಹೇಳಬೇಕು. ಇದರಿಂದ ಹಂಚಿಕೊಳ್ಳುವ, ಇತರರೊಂದಿಗೆ ಬೆರೆಯುವ ಮನೋಭಾವ ಬೆಳೆಯುತ್ತದೆ. ಉದಾಹರಣೆಗೆ ಕವನಬರೆಯುವವನು ಇತರರಿಗೆ ಅದರ ಹಿನ್ನೆಲೆಯನ್ನು ತಿಳಿಸಿಕೊಡಬಹುದು, ಹಾಗೆಯೇ ಚಿತ್ರಕಲೆ, ಸಂಗೀತ, ರಂಗೋಲಿ, ಕಥೆ ಹೇಳುವುದು, ಒಳ್ಳೆಯ ಜೋಕುಗಳು, ಕೇವಲ ಎರಡು ನಿಮಿಷದಲ್ಲಿಯೇ ತುಂಬಾ ಚುರುಕುತನದಿಂದ ಮಾಡುವ ಚಟುವಟಿಕೆಗಳು, ಹೊಸಭಾಷೆ ಕಲಿಯುವುದು, ಅಡಿಗೆ ಮಾಡುವುದು, ತೋಟಗಾರಿಕೆ, ಮನೆಯಲ್ಲಿಯೇ ಗೊಬ್ಬರ ಮಾಡುವುದು ಹೀಗೇ ಅನೇಕ. ಇನ್ನೊಬ್ಬರಿಗೆ ಹೇಳಿಕೊಡುವುದೂ ಒಂದು ಕಲೆ. ಚೆನ್ನಾಗಿ ವಿಷಯ ತಿಳಿದಿದ್ದರೂ ಒಮ್ಮೊಮ್ಮೆ ಹೇಳಿಕೊಡಲು ಬರುವುದಿಲ್ಲ. ಇದನ್ನು ಮಕ್ಕಳೇ ಸ್ವತಃ ಮಾಡಿದಾಗ ಆಗುವ ಅನುಭವ ತುಂಬಾ ಮುಖ್ಯ ಹಾಗೂ ಉಪಯೋಗಕರ.
ಮಕ್ಕಳೇ ಯೋಜಿಸಿದ ಕೆಲವು ಪ್ರಾಜೆಕ್ಟ್ಗಳನ್ನೂ ಕಾರ್ಯರೂಪಕ್ಕೆ ತರಬಹುದು. ಇದು ಅವರ ಬಡಾವಣೆಯ ಮರಗಳ ಸಂಖ್ಯೆಯನ್ನು ಎಣಿಸುವುದು, ಜನರ ಕುಂದು ಕೊರತೆಗಳ ಪಟ್ಟಿ, ಕಸ ಸಂಗ್ರಹಿಸಿ ಅದರಿಂದ ಗೊಬ್ಬರದ ಉತ್ಪಾದನೆ, ಅನಕ್ಷರಸ್ತರಿಗೆ ಅಕ್ಷರ ಕಲಿಸುವುದು, ಇತ್ಯಾದಿ ಇತ್ಯಾದಿಗಳೂ ಸೇರಬಹುದು. ಕಾಮರ್ಸ ಓದುತ್ತಿರುವ ವಿದ್ಯಾರ್ಥಿಗಳಿದ್ದರೆ ಇಂತಹ ಶಿಬಿರದ ಖರ್ಚು, ವೆಚ್ಛ, ಲಾಭ ಮೊದಲಾದುವನ್ನು ಲೆಕ್ಕಾಚಾರ ಮಾಡಬಹುದು. ಇದು ಅವರಿಗೆ ಒಂದು ಪ್ರತ್ಯಕ್ಷವಾದ ಅನುಭವವೂ ಆಗುವುದರಲ್ಲಿ ಸಂದೇಹವೇ ಇಲ್ಲ. ಒಟ್ಟಿನಲ್ಲಿ ಇಂತಹ ಚಟುವಟಿಕೆಗಳಂತೂ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ತುಂಬಾ ಸಹಕಾರಿ. ಇಂತಹ ಮಕ್ಕಳೇ ನಾಳೆಯ ಉತ್ತಮ ಪ್ರಜೆಗಳಾಗಲು ಅರ್ಹರು.
ಎಲ್ಲಕ್ಕಿಂತಾ ಮಕ್ಕಳೇ ನಡೆಸಿದ ಶಿಬಿರ ಚೆನ್ನಾಗಿ ನಡೆದು ಯಶಸ್ವಿಯಾಯಿತೆಂದರೆ ಆಗುವ ತೃಪ್ತಿಯೇ ಬೇರೆ. ಇದು ಇನ್ನೂ ಹೆಚ್ಚು ಇಂತಹ ಶಿಬಿರಗಳನ್ನು ನಡೆಸಲು, ಕಳೆದ ಶಿಬಿರದಲ್ಲಿ ನಡೆದ ತಪ್ಪುಗಳನ್ನು ತಿದ್ದಿಕೊಳ್ಳಲು ಸಹಕಾರಿಯಾಗುತ್ತದೆ. ಮಕ್ಕಳೊಂದಿಗೆ ಹಿರಿಯರೂ, ಗೃಹಿಣಿಯರೂ, ನಿರುದ್ಯೋಗಿಗಳೂ ಬೇಕಾದರೆ ಸೇರಿಕೊಳ್ಳಬಹುದು. ಇದೇ ಅವರಿಗೆ ಒಂದು ಹವ್ಯಾಸವಾಗಬಹುದು. ಆದರೆ ಒಂದು ಮಾತು. ಇಂತಹ ಶಿಬಿರವನ್ನು ಹಣಗಳಿಕೆಗಾಗಿ ಮಾಡದೇ ಮಕ್ಕಳನ್ನು ಒಂದುಗೂಡಿಸುವ, ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತೆಗೆಯುವ ಒಂದು ಒಳ್ಳೆಯ ಕಾರ್ಯವೆಂದು ಮಾಡಿದರೆ ನಿಮ್ಮ ಬಡಾವಣೆಗೇ ಏಕೆ, ನಾಡಿಗೂ ದೇಶಕ್ಕೂ ನಿಮ್ಮಿಂದ ಒಂದು ಅಳಿಲು ಸೇವೆಯಾಗುವುದು.
ನಿಮ್ಮ ಶಿಬಿರದಲ್ಲಿ ನಡೆದ ಕಾರ್ಯಕ್ರಮಗಳು ಚೆನ್ನಾಗಿ ಬಂತೋ ಇಲ್ಲವೋ ಅದು ಮುಖ್ಯವಲ್ಲ. ಪರಿಪೂರ್ಣತೆ (ಪರ್ಫೆಕ್ಷನ್)ಗೆ ಒತ್ತು ಕೊಡಬೇಡಿ. ಮಕ್ಕಳು ಮಾಡಿದ್ದೂ ಹೇಗೆ ಬಂದರೂ ಚೆನ್ನ.  ಅದರಲ್ಲಿ ಭಾಗಿಯಾದ ಮಕ್ಕಳು ತಮ್ಮ ಚಟುವಟಿಕೆಗಳಿಂದ ಕಲಿತ ಪಾಠ ಮುಖ್ಯ.
ಹೀಗೆ ನೀವೂ ಈ ಬಾರಿ ಒಂದು ಬೇಸಿಗೆ ಶಿಬಿರ ನಡೆಸಿ ಅದಕ್ಕೆ ನಿಮ್ಮದೇ ಆದ ಒಂದು ಛಾಪು ಕೊಡಿ. ಎಲ್ಲರಿಂದ ಭಲೇ ಎನ್ನಿಸಿಕೊಳ್ಳಿ. ಇಷ್ಟೇ ಸಾಲದು, ನಿಮ್ಮ ಅನುಭವಗಳನ್ನು, ಅನಿಸಿಕೆಗಳನ್ನು ಬರೆದು ಇತರರೊಂದಿಗೆ ಹಂಚಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಈ ಬಾರಿಯ ಬೇಸಿಗೆ ಸುಡು ಬೇಸಿಗೆಯಾಗದೇ ತಂಪು ಬೇಸಿಗೆಯಾಗಲೀ ಎಂಬುದೇ ನನ್ನ ಅಸೆ. ಈ ಗುಂಪಿನಲ್ಲಿಯೇ ಯಾರಾದರೂ ಇದರಿಂದ ಪ್ರೇರಿತರಾಗಿ ಮಕ್ಕಳ ಮೂಲಕವೇ ಶಿಬಿರ ನಡೆಸಿದಿರೆಂದರೆ ಇದನ್ನು ಬರೆದದ್ದು ಸಾರ್ಥಕ ಎಂದು ಭಾವಿಸುತ್ತೇನೆ.
ಜಗದೀಶ ಚಂದ್ರ




ಒಂದು ಹಾಸ್ಯ ಬರಹ 
ಪುಸ್ತಕದ ಹುಳ - ಬಿ ಎಸ್ ಜಗದೀಶ ಚಂದ್ರ
ಪುಟ್ಟಿ ಚಿಕ್ಕವಳಿದ್ದಾಗ ತುಂಬಾ ಓದುವ ಹುಚ್ಚು. ಮನೆಗೆ ಎಷ್ಟು ಪುಸ್ತಕಗಳನ್ನು ತಂದರೂ ಸಾಲದು, ಇನ್ನೂ ಬೇಕು, ಎಂದು ಹಠಮಾಡಿ ತರಿಸಿಕೊಳ್ಳುತ್ತಿದ್ದಳು. ಮಗಳು ಚೆನ್ನಾಗಿ ಓದಲಿ ಎಂದು ಅವಳ ಅಪ್ಪ ಇನ್ನಷ್ಟು, ಮತ್ತಷ್ಟು ಎಂದು ಮನೆಯ ತುಂಬಾ ಪುಸ್ತಕದ ರಾಶಿಯನ್ನೇ ಹಾಕಿಬಿಟ್ಟಿದ್ದರು. ಸಾಲದೆಂದು ಮನೆಯ ಹತ್ತಿರ ಇದ್ದಬದ್ದ ಎಲ್ಲಾ ಗ್ರಂಥಾಲಯಕ್ಕೂ ಅವಳನ್ನು ಮೆಂಬರ್ ಮಾಡಿಸಿ ಅದರಿಂದಲೂ ಅವಳಿಗೆ ಪುಸ್ತಕಗಳು ಸಿಗುತ್ತಿದ್ದವು. ಅವಳ ಈ ಪುಸ್ತಕದ ಹುಚ್ಚು ಯಾವ ಮಟ್ಟಕ್ಕೆ ಏರಿತೆಂದರೆ ಊಟಮಾಡುವಾಗಲೂ ಪುಸ್ತಕ, ಟಾಯ್ಲೆಟ್‌ಗೆ ಹೋದಾಗಲೂ ಪುಸ್ತಕ. ಇದನ್ನು ನೋಡಿ ಅವಳಿಗೆ ನೀನು ಹೀಗೇ ಓದುತ್ತಿದ್ದರೆ ಒಂದು ಪುಸ್ತಕದ ಹುಳುವಾಗಿಬಿಡುವೆ ಎಂದು ಎಲ್ಲರೂ ರೇಗಿಸುತ್ತಿದ್ದರು. ಅವರಮ್ಮನಿಗಂತೂ ಇವಳ ಈ ಪರಿ ಹುಚ್ಚನ್ನು ನೋಡಿ ಎಲ್ಲಿಲ್ಲದ ಸಿಟ್ಟು. ಉಳಿದವರು, ‘ಹೋಗಲಿ ಬಿಡು, ಓದು ಓದು ಎಂದರೂ ಪುಸ್ತಕವನ್ನು ಹಿಡಿಯದ ಮಕ್ಕಳಿರುವಾಗ ನೀನು ಓದಿದರೆ ಹೀಗೇಕೆ ಸಿಟ್ಟು ಮಾಡಿಕೊಳ್ಳುತ್ತೀಯಾ?’ ಎಂದು ಸಮಾಧಾನ ಹೇಳಿದರೂ ಅವಳ ಅಮ್ಮ ಬಿಡಲೊಲ್ಲಳು. ಅವಳು ಬೈದಷ್ಟೂ ಇವಳ ಹುಚ್ಚು ಹೆಚ್ಚಾಗುತ್ತಿತ್ತು.
ಕಡೆಗೆ ಯಾರಿಂದಲೂ ಅವಳ ಈ ಪುಸ್ತಕದ ಹುಚ್ಚನ್ನು ಬಿಡಿಸಲಾಗದೇ ಅವಳ ಅಜ್ಜಿ ‘ಹೋಗಲಿ ಪುಟ್ಟಿ, ನೀನು ಎಷ್ಟಾದರೂ ಪುಸ್ತಕ ಓದಿಕೊ, ಆದರೆ ಊಟಮಾಡುವಾಗ ಮಾತ್ರ ಓದುವುದನ್ನು ನಿಲ್ಲಿಸು, ಇಲ್ಲವಾದರೆ ತಿಂದ ಅನ್ನ ಮೈಗೆ ಹತ್ತುವುದಿಲ್ಲ’ ಎಂದು ಗೋಗರೆಯುತ್ತಿದ್ದರು. ಇದು ಕೆಲವೇ ದಿನ ನಡೆಯಿತು. ಆದರೆ ನಂತರ ಂiÀiಥಾಪ್ರಕಾರ ‘ನಾಯಿಬಾಲ ಡೊಂಕು ಅನ್ನುತ್ತಾರಲ್ಲ’ ಹಾಗೆ ಅವಳ ಹಳೆಯ ಚಾಳಿ ಮುಂದುವರೆಯಿತು. ಇದನ್ನು ತಡೆಯಲು ಅವಳು ಊಟ ಮಾಡುವಾಗ ಹತ್ತಿರ ಯಾವ ಪುಸ್ತಕವೂ ಕಾಣದಂತೆ ಬಚ್ಚಿಡುತ್ತಿದ್ದರು. ಆದರೂ ಅವಳಿಗೆ ಏನಾದರೂ ಓದುವ ಚಪಲ. ಏನೂ ಮುಚ್ಚಿಟ್ಟರೂ ಅಂದಿನ ದಿನಪತ್ರಿಕೆ ಅಲ್ಲೇ ಎಲ್ಲಾದರೂ ಬಿದ್ದಿರುತ್ತಿತ್ತು, ಅದನ್ನೇ ಹಿಡಿದು ಕೂತುಬಿಡುತ್ತಿದ್ದಳು. ಒಮ್ಮೆ ಹೀಗೇ ಹೊರಗಿನಿಂದ ತಂದ ತಿಂಡಿಯನ್ನು ತಿನ್ನಬೇಕಾಯಿತು. ಅವಳಿಗೆ ಯಥಾಪ್ರಕಾರ ಓದಲು ಏನೂ ಸಿಗಲಿಲ್ಲ, ಅಂದಿನ ಪತ್ರಿಕೆಯೂ ಅವಳ ತಾತನ ಬಳಿ ಇತ್ತು, ಕಡೆಗೆ ಅವಳು ಆ ತಿಂಡಿಯನ್ನು ಕಟ್ಟಿದ್ದ ಕಾಗದವನ್ನೇ ಹಿಡಿದು ಓದಿಕೊಂಡು ತಿನ್ನ ತೊಡಗಿದಳು. ಇದನ್ನು ನೋಡಿಯಂತೂ ಉಳಿದವರಿಗೆ ತಲೆಯನ್ನು ಚಚ್ಚಿಕೊಳ್ಳುವುದೊಂದು ಬಾಕಿ.
ಈ ಪುಟ್ಟಿಗೆ ಇನ್ನೊಂದು ಕೆಟ್ಟ ಅಭ್ಯಾಸವಿತ್ತು. ಅದೇನೆಂದರೆ ಈ ತರಕಾರಿ ಬೇಡ, ಆ ತರಕಾರಿ ಬೇಡ ಎಂದು ಕ್ಯಾತೆ ತೆಗೆಯುವುದು. ಕಡೆಗೆ ಅವಳ ಅಜ್ಜಿ ಇದಕ್ಕೆ ಒಂದು ಉಪಾಯ ಮಾಡಿದರು. ಅವಳಿಗೆ ಇಷ್ಟವಾದ ಪುಸ್ತಕಗಳನ್ನು ಕೈಗೆ ಸಿಗುವಂತೆಯೇ ಇಟ್ಟು ಅವಳು ಅದರಲ್ಲಿ ಮಗ್ನಳಾಗಿರುವಾಗ ಮೆಲ್ಲಗೆ ಅವಳಿಗಿಷ್ಟವಿಲ್ಲದ ಕೆಲವು ತರಕಾರಿಯ ಅಡುಗೆಗಳನ್ನು ಮಾಡಿ ಬಡಿಸಿಬಿಡುತ್ತಿದ್ದರು. ಆ ಪುಟ್ಟಿ ಎಂತಹ ಪುಸ್ತಕದ ಹುಳ ಎಂದರೆ ಅದನ್ನು ಗಮನಿಸದೇ ಎಲ್ಲವನ್ನೂ ತಿಂದು ಬಿಟ್ಟಿರುತ್ತಿದ್ದಳು. ಅಜ್ಜಿಗಂತೂ ಸಂತೋಷವೋ ಸಂತೋಷ. ಹೀಗೆ ಅವಳಿಗೆ ಪರೋಕ್ಷವಾಗಿ ಇಷ್ಟ ಪಡದ ಆದರೆ ಆರೋಗ್ಯವಾದ ಒಳ್ಳೆಯ ತರಕಾರಿಗಳೆಲ್ಲವೂ ಅವಳ ಹೊಟ್ಟೆ ಸೇರುತ್ತಿದ್ದವು. ಋಣಾತ್ಮಕವಾದುದನ್ನೇ ಧನಾತ್ಮಕವಾಗಿ ಪರಿವರ್ತಿಸಿದ ಅವಳ ಅಜ್ಜಿಯನ್ನು ಎಲ್ಲರೂ ಹೊಗಳಿದ್ದೇ ಹೊಗಳಿದ್ದು.
ಈಗ ಪುಟ್ಟಿ ದೊಡ್ಡವಳಾಗಿದ್ದಾಳೆ. ಅವಳ ಅಜ್ಜಿ ಈಗ ಇಲ್ಲ. ಆದರೆ ಅಜ್ಜಿಯು ಮಾಡಿದ ಉಪಾಯ ಪುಟ್ಟಿಗೆ ಗೊತ್ತಾಗಿ ಹೋಗಿದೆ. ಅವಳು ಈಗಲೂ ಮೊದಲಿನಂತೆಯೇ ಪುಸ್ತಕದ ಹುಳವಾದರೂ ಊಟಮಾಡುವಾಗ ಉಳಿದವರೊಂದಿಗೆ ಹರಟುತ್ತಾಳೆ, ಎಲ್ಲಾ ತರಕಾರಿಗಳನ್ನೂ ತಕರಾರಿಲ್ಲದೇ ತಿನ್ನುತ್ತಾಳೆ. ಎಲ್ಲಾ ಅವಳ ಅಜ್ಜಿಯ ಕೃಪೆ ಎಂದೇ ಎಲ್ಲರ ಭಾವನೆ.
ಜಗದೀಶ ಚಂದ್ರ