Sunday, April 26, 2020

ಗುಲಾಬಿ ಹೂ, ನೋಡಿದ್ದು ಸುಳ್ಳಾಗಬಹುದು, ಆತುರದ ತೀರ್ಮಾನ

ಗುಲಾಬಿ ಹೂ  

ಮನೆಯಲ್ಲಿ ಎಲ್ಲರೂ ಹೊರಟ ನಂತರ ಉಸ್ಸಪ್ಪ ಎಂದು ಶಾರದಾ ಸೋಫಾ ಮೇಲೆ ಉರುಳಿದರು. ಅಷ್ಟರಲ್ಲೇ ಶಾರದಾ ಎಂದು ಪಕ್ಕದ ಮನೆಯ ಪಂಕಜ ಕರೆದರೂ. ಶಾರದಾ, ಅಯ್ಯೋ ರಾಮ ಇನ್ನು ಇವರು ಹರಟೆ ಶುರುಮಾಡುತ್ತಾರೆ ಎಂದು ಗೊಣಗುತ್ತಾ ಬಾಗಿಲು ತೆರೆದರು. ಪಂಕಜ ಬಂದವರೇ ಎದುರು ಮನೆಗೆ ಹೊಸದಾಗಿ ಬಂದ ಸೊಸೆ ಕಮಲಾಳ ಮೇಲೆ ದೂರು ಹೇಳಿದರು. ನೋಡ್ರಿ ಪ್ರತಿದಿನ ನಮ್ಮ ಮನೆಯ ಗುಲಾಬಿ ಹೂವನ್ನು ಕಿತ್ತುಕೊಂಡು ಕಾಲೇಜಿಗೆ ಹೋಗುತ್ತಲೇ. ಅದ್ಯಾರಿಗೆ ಕೊಡುತ್ತಾಳೋ, ಈ ಮದುವೆಯಾಗಿರುವ ಹುಡುಗಿ ಎಂದು ವಿಷ ಕಾರಿದರು. ಅಂತೂ ವಿಷವನ್ನು ಕಕ್ಕಿ ಇನ್ನೂ ಏನನ್ನೋ ಹೇಳಲು ಹೊರಟಿದ್ದರು, ಆ ಸಮಯಕ್ಕೆ ಸರಿಯಾಗಿ ಶಾರದಾಳ ಅಣ್ಣ ಬಂದುದರಿಂದ ಅಲ್ಲಿಂದ ಜಾಗ ಖಾಲಿ ಮಾಡಿದರು. 
ಮರುದಿನ ಶಾರದಾ ಕಮಲಾಳನ್ನು ಗಮನಿಸಿದರು. ಅವಳು ಪಂಕಜ ಅವರ ಮನೆಯ ಹೂವನ್ನು ಕಿತ್ತುಕೊಂಡುದನ್ನು ಕಣ್ಣಾರೆ ಕಂಡರು. ಮೂರು ನಾಲ್ಕು ದಿನವೂ ಇದನ್ನು ಗಮನಿಸಿದರು. ಯಾಕೋ ಅವರಿಗೆ ಪಂಕಜ ಹೇಳಿದ್ದು ನಿಜ ಅನ್ನಿಸಲಾರಂಭಿಸಿತು. ಇದು ಕಮಲಾಳ ಪ್ರತಿದಿನದ ದಿನಚರಿ ಎಂದು ಗೊತ್ತಾದಮೇಲೆ ಅವರಿಗೆ ಕಮಲಾಳ ಮೇಲೆ ಅನುಮಾನ, ಸಿಟ್ಟು ಎಲ್ಲವೂ ಬಂತು. ಕಮಲಾ ಒಮ್ಮೆ ಅವರ ಮನೆಗೆ ಬಂದು ಹಬ್ಬದ ಪೂಜೆಗೆ ಕರೆದಾಗ, ಶಾರದಾ ಮೇಲೆ ಉಪಚಾರಕ್ಕೆ ಮಾತನಾಡಿಸಿದರೂ ಅವರ ಧಾಟಿಯಲ್ಲಿ ಕಮಲಾಳ ಮೇಲಿನ ಸಿಟ್ಟು ಇಣುಕುತ್ತಿತ್ತು. ಇದ್ಯಾವುದರ ಪರಿವೆಯೇ ಇಲ್ಲದೆ ಕಮಲಾ ನಗುನಗುತ್ತಲೇ ಮಾತನಾಡುತ್ತಿದ್ದಳು. ಅವಳು ಹೋದಮೇಲೆ ಶಾರದಾ. ಅದೇನು ಹುಡುಗಿಯೋ, ಹೊರಗೆ ಮಾಡುವುದು ಅಂತಹ ಕೆಲಸ, ಮನೆಯಲ್ಲಿ ಪೂಜೆಯಂತೆ ಎಂದು ಗೊಣಗಿದರು. 
ಶಾರದಾ, ಕಮಲಾಳ ಮನೆಗೆ ಪೂಜೆಗೆ ಹೋಗಿದ್ದಾಗ ಅಲ್ಲಿಗೆ ಬಂದಿದ್ದ ಕಮಲಾಳ ಹಿರಿಯ ಸಹೋದ್ಯೋಗಿ ಗೆಳತಿ ವಿಮಲಾ ತಮ್ಮ ಜೊತೆಗೆ ಇನ್ನೊಬ್ಬಾಕೆ ಸಂಗೀತಾ ಅವರನ್ನು ಕರೆದು ತಂದಿದ್ದರು. ಸಂಗೀತಾ, ಕಮಲಳಿಗೆ ಒಂದು ದೊಡ್ಡ ಸಿಹಿ ಪೆಟ್ಟಿಗೆ ನೀಡುತ್ತಾ, ಕಮಲಾ, ನಿಮ್ಮ ಮನಸ್ಸು ಎಷ್ಟು ದೊಡ್ಡದು, ನಿಮ್ಮಿಂದಾಗೆ ನಮ್ಮ ನಿಮ್ಮಿ ಇಂದು ಖುಷಿಯಾಗಿದ್ದಾಳೆ, ಅವಳ ಖಾಯಿಲೆ ಈಗ ಪೂರ್ತಿ ವಾಸಿಯಾಗಿದೆ ಎಂದರು. ಆಗ ಕಮಲಾ, ಅಯ್ಯೋ, ನಾನೇನು ಅಂತ ದೊಡ್ಡ ಕೆಲಸ ಮಾಡಿದೆ ಎಂದಾಗ, ನೀನು ಪ್ರತಿದಿನವೂ ಹೂವನ್ನು ಕೊಟ್ಟು ಅವಳ ಕೈಲಿ ದೇವರಿಗೆ ಹಾಕಿಸುತ್ತಿದ್ದುದು ನಿಮ್ಮಿಯ ಮೇಲೆ ಬಹಳ ಪರಿಣಾಮ ಬೀರಿತು. ಮಾನಸಿಕ ಧೈರ್ಯ ತಂದಿತು. ಒಟ್ಟಿನಲ್ಲಿ ಗಂಡಾಂತರದಿಂದ ಪಾರಾದಳು. ಅವಳು ಇಂದಿಗೂ ಅದು ಸಾಧ್ಯವಾದದ್ದು ನಿಮ್ಮಿಂದಲೇ ಅಂತ ಹೇಳುತ್ತಾಳೆ, ಎಂದರು. ಅದಕ್ಕೆ ಕಮಲಾ, ಹಾಗಾದರೆ ಅದಕ್ಕೆ ಸಲ್ಲಬೇಕಾದ ಕ್ರೆಡಿಟ್ ನಮ್ಮ ಎದುರು ಮನೆಯ ಪಂಕಜಾ ಅವರಿಗೆ ಸಲ್ಲಬೇಕು. ನಾನು ಅವರ ಮನೆಯ ಗಿಡದಲ್ಲಿ ಸೊಂಪಾಗಿ ಬಿಡುತ್ತಿದ್ದ ಗುಲಾಬಿ ಗಿಡದಲ್ಲಿ ಒಂದು ಹೂವನ್ನು ದಿನವೂ ಬಿಡಿಸಿಕೊಳ್ಳಲೇ ಎಂದು ಕೇಳಿದ್ದಾಗ ಆಕೆ ಧಾರಾಳವಾಗಿ ತೊಗೊಳ್ಳಿ ಎಂದು ಅನುಮತಿ ನೀಡಿದ್ದರು. ಆ ಗಿಡವೂ ಇಲ್ಲಿಯ ತನಕ ನಿತ್ಯ ಹೂವು ಕೊಟ್ಟಿತು ಎಂದಾಗ, ಶಾರದಾ ಅವರ ಎದೆ ಝಲ್ಲೆಂದಿತು. ಪಂಕಜಾ ಏಕೆ ತಮಗೆ ಅರ್ಧ ವಿಷಯ ತಿಳಿಸಿ ಇಂಥ ಹುಳಿಹಿಂಡುವ ಕೆಲಸ ಮಾಡಿದರು ಎಂದು ಮನದಲ್ಲೇ ಅಂದುಕೊಂಡರು. ನಾನೂ ಹಿಂದು ಮುಂದು ಯೋಚಿಸದೆ ಹೀಗೆ ನಂಬಿ ಬಿಟ್ಟೆನಲ್ಲಾ ಎಂದು ಪೇಚಾಡಿಕೊಂಡರು. ಕೂಡಲೇ ಹೃತ್ಪೂರ್ವಕವಾಗಿ ಕಮಲಳಿಗೆ ಅಭಿನಂದನೆ ಸಲ್ಲಿಸಿದರು. ಕಮಲಾ ಅವರಿಗೂ ಸ್ವಲ್ಪ ಸಿಹಿ ಕೊಟ್ಟು, ಇದನ್ನು ಮುಖ್ಯವಾಗಿ ಪಂಕಜಾ ಅವರಿಗೆ ಕೊಡಬೇಕು ಎಂದು ಹೇಳಿದಾಗ ಶಾರದಾ ಅವರ ಹೃದಯ ತುಂಬಿ ಬಂತು. ಇಂತಹ ಸ್ವಭಾವದಿಂದಲೇ ಇರಬೇಕು, ಪಂಕಜ ಅವರು ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ, ನಿಂತ ನೀರಿನಂತೆ ರಾಡಿಯಾಗಿದ್ದಾರೆ ಎಂದು ಅನ್ನಿಸಿತು. 


ನೋಡಿದ್ದು ಸುಳ್ಳಾಗಬಹುದು 
ಚಿನ್ನೂರಿನ ರಾಧಾ, ಕೇಶವ ದಂಪತಿಗೆ ಮಾಧವ, ಹಾಗು ಮೋಹನ ಇಬ್ಬರು ಮಕ್ಕಳು. ಒಳ್ಳೆ ಸುಸಂಸ್ಕೃತ ಮನೆತನ. ಮಗ ಚೆನ್ನಾಗಿ ಓದಿದ. ಆದರೆ ಒಂದು ದಿನ ಇದ್ದಕ್ಕಿದ್ದಂತೆ ನಾಪತ್ತೆಯಾದ. ಎಲ್ಲಿ ಹುಡುಕಿದರೂ ಸಿಗಲಿಲ್ಲ. ಪೊಲೀಸ್ ಗೆ ದೂರೂ ಹೋಯಿತು. ಏನೂ ಆಗಲಿಲ್ಲ. ಹೀಗೆ ಒಂದು ವರ್ಷ ಕಳೆಯಿತು. ಆಗ ಇದ್ದಕ್ಕಿದ್ದಂತೆ ಒಂದು ದಿನ ಮನೆಗೆ ಒಂದು ಪತ್ರ ಬಂತು. ಅದು ಮಾಧವನದ್ದು. ಅಪ್ಪಅಮ್ಮಂದಿರ ಕ್ಷಮೆ ಕೇಳಿ ತಾನು ಈಗ ಹಿಮಾಲಯದ ಬಳಿ ಒಂದು ಆಶ್ರಮದಲ್ಲಿ ಸನ್ಯಾಸಿಯಾಗಿದ್ದೇನೆ ಎಂದು ಬರೆದಿದ್ದ. ತನ್ನ ಬಗ್ಗೆ ಯೋಚನೆ ಮಾಡಬೇಡಿ, ನಾನು ಚೆನ್ನಾಗಿ ಇದ್ದೇನೆ, ಮೋಹನ ಈಗ ಚೆನ್ನಾಗಿ ಓದುತ್ತಿರಬಹುದು, ಅವನಾದರೂ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಿ, ನನ್ನನ್ನು ಕ್ಷಮಿಸಿ ಎಂದು ಬರೆದಿದ್ದ. ಸಾಧ್ಯವಾದರೆ ಒಮ್ಮೆ ಬಂದು ನೋಡುತ್ತೇನೆ, ಆದರೆ ನಿರೀಕ್ಷೆ ಇಟ್ಟುಕೊಳ್ಳಬೇಡಿ ಎಂದು ಬರೆದಿದ್ದ. 
ಈ ಘಟನೆ ಆಗಿ ಹಲವಾರು ವರ್ಷಗಳು ಕಳೆದಿವೆ. ರಾಧಾ, ಕೇಶವ ದಂಪತಿಗಳು ಮೋಹನನೊಂದಿಗೆ ಸುಖವಾಗಿ ಬದುಕಿದ್ದಾರೆ. ಮೋಹನನಿಗೂ ಮದುವೆಯಾಗಿ ಈಗ ಎರಡು ಮಕ್ಕಳಾಗಿವೆ. ಇವರೆಲ್ಲರ ಒಡನಾಟದಿಂದ ರಾಧಾ, ಕೇಶವ ದಂಪತಿಗೆ ಈಗ ಮಾಧವನ ವಿಷಯ ಮರೆತೇ ಹೋದಂತಾಗಿದೆ. 
ಈಗ ಊರಿನಲ್ಲಿ ಇದ್ದಕ್ಕಿದ್ದಹಾಗೆ ಯಾವುದೊ ಮಗು ನಾಪತ್ತೆಯಾಯಿತು. ಇದು ಮಕ್ಕಳ ಕಳ್ಳರ ಕಾಟ. ಅವರು ಹೀಗೆ ಮಕ್ಕಳನ್ನು ಮೋಡಿಮಾಡಿ ಕದ್ದುಕೊಂಡು ಹೋಗುತ್ತಾರೆ ಎಂದು ಊರೆಲ್ಲಾ ಗುಲ್ಲಾಯಿತು. ರಾಧಾ ಮಾಧವ ಅವರಿಗೆ ಈಗ ಮಾಧವನ ನೆನಪಾಗಿ, ಮೋಹನನಿಗೆ ಮಕ್ಕಳ ಬಗ್ಗೆ ಹುಷಾರಾಗಿರು, ಎಲ್ಲಿಯೂ ಒಬ್ಬೊಬ್ಬರನ್ನೇ ಕಳಿಸಬೇಡ ಎಂದು ಹಿತವಚನ ನೀಡಿದರು. ಇದಾದ ಕೆಲವು ದಿನಗಳ ನಂತರ ಒಂದು ದಿನ ಮೋಹನ ಬಂದು ಅಕ್ಕ ಪಕ್ಕದ ಮನೆಯವರಿಗೆ ತಾನು ಇಂದು ಬರುತ್ತಿದ್ದಾಗ ಪಕ್ಕದ ಊರಿನಲ್ಲಿ ಯಾರೋ ಒಬ್ಬ ಕಾವಿಧಾರಿ ಒಂದಿಬ್ಬರು ಮಕ್ಕಳನ್ನು ಮಾತನಾಡಿಸುತ್ತಾ ಏನೇನನ್ನೋ ಕೇಳುತ್ತಿದ್ದ, ನನಗೇಕೋ ಅನುಮಾನ ಬಂತು ಎಂದ. ಆಗ ಅವರೆಲ್ಲರೂ ಹೌದು, ಈಗ ಯಾರನ್ನೂ ನಂಬಲು ಆಗುವುದಿಲ್ಲ, ಯಾವ ಹುತ್ತದಲ್ಲಿ ಯಾವ ಹಾವೊ ಎಂದು ಮಾತನಾಡಿಕೊಂಡರು. ಇದು ಹೀಗೆ ಊರಿಗೂ ಹಬ್ಬಿತು. 
ಇದಾದ ಒಂದೆರೆಡು ದಿನದಲ್ಲಿ ಊರಿನಲ್ಲಿ ಮತ್ತೆ ಸುದ್ದಿ. ಯಾರೋ ಮಕ್ಕಳನ್ನು ಕದ್ದುಕೊಂಡು ಹೋಗುವ ಕಳ್ಳ ಸ್ವಾಮಿಯನ್ನು ಊರಿನ ಜನರೇ ಹೊಡೆದು ಸಾಯಿಸಿದ್ದಾರೆ ಎಂದು. ಆಗ ಮೋಹನ, ರಾಧಾ, ಮಾಧವ ಸಧ್ಯ ಆ ಕಳ್ಳ ಸಿಕ್ಕಿದನಲ್ಲ ಎಂದು ಸಂತೋಷ ಪಟ್ಟರು. ಅಷ್ಟರಲ್ಲೇ ಯಾರೋ ಪೋಲಿಸಿನವರು ಬಂದು ಕೇಶವ, ರಾಧಾ ಅನ್ನುವರ ಮನೆ ಇದೆಯೇ ಎಂದು ಕೇಳಿದ. ಬೆಚ್ಚಿದ ಕೇಶವ ಅವರು, ಹೌದು ಇದೇನೇ, ನಾನೆ ಕೇಶವ ಎಂದರು. ಈಗಲೇ ನಮ್ಮೊಂದಿಗೆ ಬನ್ನಿ, ಯಾರೋ ಕೊಲೆಯಾದವರ ಬಳಿ ನಿಮ್ಮ ಹೆಸರಿನ ಒಂದು ಕವರ್ ಇದೆ ಎಂದರು. ಕೇಶವ ಅವರ ಎಧೆ ಝಲ್ ಎಂದಿತು. ಅವರು ಮೋಹನನೊಂದಿಗೆ ಹೊರಟರು. ಅವರು ತಲುಪಿದ್ದು ಕೊಲೆಯಾದ ಸ್ವಾಮೀಜಿಯ ಕಾರಿನ ಬಳಿಗೆ. ಕೇಶವ ಅವರ ಎದೆ ಢವ ಢವ ಎನ್ನುತ್ತಿತ್ತು. ದೇವರೇ ಇದೆಂಥ ಗಂಡಾಂತರ ತಂದೆಯಪ್ಪಾ ಎಂದುಕೊಂಡರು. ಹತ್ತಿರ ಹೋದಾಗ ಹೆಣದ ಮುಖ ಮುಚ್ಚಿದ್ದರು. ಆ ಕವರನ್ನು ನೋಡಿದಾಗ ಅದರ ಮೇಲೆ ರಾಧಾ, ಕೇಶವ ಅವರಿಗೆ ನಮಸ್ಕಾರಪೂರ್ವಕವಾಗಿ ಎಂದು ಬರೆದಿತ್ತು. ಅದರೊಂದಿಗೆ ಒಂದು ಪ್ಯಾಕೆಟ್ನಲ್ಲಿ ಒಂದು ರೇಷ್ಮೆ ಸೀರೆ, ಪಂಚೆ, ಶಲ್ಯ ಇತ್ತು. ಇದೇನು ಎಂದು ಆಶರ್ಯವಾಗಿ ಹೆಣದ ಮುಖಕ್ಕೆ ಮುಚ್ಚಿದ ಬಟ್ಟೆಯನ್ನು ಸರಿಸಿದಾಗ ಮಾಧವಾ ಎನ್ನುತ್ತಾ ಕೇಶವ ಅವರು ಮೂರ್ಛೆ ಹೋದರು. 




ಆತುರದ ತೀರ್ಮಾನ 
ಗುಲಾಬಿಯನ್ನು ಬಿಡಿಸಿಕೊಂಡ ಆಕೆಯನ್ನು ಕದಿಯುತ್ತಾಳೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದು. ನಿಜವೇನೆಂದರೆ ಆಕೆ ಅದನ್ನು ರೋಗಿ ಮಗುವೊಂದರ ಕೈಲಿ ದೇವರ ಪೂಜೆಗೆ ತೆಗೆದುಕೊಂಡು ಹೋಗುತ್ತಿರುತ್ತಾಳೆ. 
ಕಳೆದು ಕೊಂಡ ಮಗ ಸನ್ಯಾಸಿ ಆಗಿರುತ್ತಾನೆ. ಅವನು ಬಹಳ ವರ್ಷಗಳ ನಂತರ ತಂದೆ ತಾಯಿಯನ್ನು ನೋಡಲು ಬಂದಾಗ, ಮಗುವೊಂದನ್ನು ಮಾತನಾಡಿಸುತ್ತಿದ್ದುದನ್ನು ಕಂಡು ಮಕ್ಕಳ ಕಳ್ಳ ಎಂದು ಆತುರದ ತೀರ್ಮಾನ ತೆಗೆದುಕೊಂಡು ಜನ ಹೊಡೆದು ಕೊಂದೇಬಿಡುತ್ತಾರೆ. 
ಮೇಲಿನ ಎರಡು ಘಟನೆಯನ್ನು ಕೇಳಿದರಲ್ಲ, ಇದರಿಂದ ನಿಮಗೇನು ತಿಳಿದು ಬಂದು ಎಂದು ಶ್ರೀಗುರೂಜಿ ಅವರು ನೆರೆದಿದ್ದ ಸಭಿಕರನ್ನು ಕೇಳಿದರು. ಎಲ್ಲರೂ ತಮಗೆ ತೋಚಿದಂತೆ ಹೇಲಾರಂಭಿಸಿದರು. ಕಡೆಗೆ ಶ್ರೀಗುರೂಜಿ ಅವರೇ ಹೀಗೆ ಅರ್ಥೈಸಿದರು. 
ಜೀವನದಲ್ಲಿ  ವಿಧ ವಿಧವಾದ ಸಂಧರ್ಭಗಳು, ಘಟನೆಗಳು ಬರುತ್ತವೆ. ನಮ್ಮ ಗ್ರಹಿಕೆಗೆ ತಕ್ಕಂತೆ ಅವನ್ನು ನಾವು ವ್ಯಾಖ್ಯಾನಿಸುತ್ತೇವೆ. ಇದಕ್ಕೆ ನಮ್ಮ ಆಕಾಂಕ್ಷೆ ಹಾಗೂ ನಮ್ಮ ಹಿಂದಿನ ಅನುಭವವೇ ಪ್ರೇರಕವಾಗಿರುತ್ತದೆ. ಹೀಗಾಗಿ ಘಟನೆ ಒಂದೇ ಆದರೂ ವ್ಯಾಖ್ಯಾನಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಯಾವುದೇ ಘಟನೆಗೆ ಆತುರದಿಂದ ತೀರ್ಮಾನಕ್ಕೆ ಬರ ಬಾರದು  ನಮ್ಮ ಅನುಭವ ಹಾಗೂ  ಇತರರ ವ್ಯಾಖ್ಯಾನದ ತುಲನೆ ಇವನ್ನು ಸಮಾಧಾನದಿಂದ. ಸಾವಕಾಶವಾಗಿ ನೋಡಿ ತೀರ್ಮಾನಕ್ಕೆ ಬರಬೇಕು. ಇದರ ಕೊರತೆಯಿಂದಲೇ ಅನೇಕರು ಸರಿಯಾದ ತೀರ್ಮಾನಕ್ಕೆ ಬರದೇ ಸುಖದಿಂದ ವಂಚಿತರಾಗುತ್ತಿದ್ದಾರೆ. 
ಇಂದು ನಡೆಯುವ ಹಲವಾರು ಘಟನೆಗಳಿಗೆ ಸಮಯಸಾಧಕರು ಜನರ ಮುಗ್ಧತೆಯನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ.  ಅಚಾತುರ್ಯದ ಘಟನೆ ನಡೆಯುತ್ತದೆ ಆದರೆ ಅದಕ್ಕೆ ನಾವೇ ಕಾರಣರೇ, ಇತರರು ಕಾರಣರೇ ಎಂದು ಯೋಚಿಸಿ ತಪ್ಪು ನಮ್ಮದೇ ಆದರೆ ಒಪ್ಪಿಕೊಂಡು ಬಿಡುವುದು ಒಳ್ಳೆಯದು. ತಪ್ಪು ಮಾಡಿದವರಿಗೆ ಜಾತಿ, ಧರ್ಮ ಎಂಬ ಹಣೆಪಟ್ಟಿ ನೀಡಬಾರದು. ತಪ್ಪು ಮಾಡಿದವನ ಧರ್ಮದ ಅಥವಾ ಜಾತಿಯವರು, ಅದನ್ನು ಎಲ್ಲರೆದುರು ಖಂಡಿಸಬೇಕು. ಮುಚ್ಚಿಟ್ಟುಕೊಳ್ಳುವುದಾಗಲಿ, ಸುಮ್ಮನಿದ್ದುಬಿಡುವುದಾಗಲಿ ಮಾಡಬಾರದು. ಇದು ಸಮಾಜಕ್ಕೂ ಒಳ್ಳೆಯದು. 
ಹಾಗೆಯೆ ತಿಳಿದು ತಿಳಿದೂ ತಪ್ಪು ಮಾಡಬಾರದು. ಉದಾಹರಣೆಗೆ ಲಂಚ, ಅಸೆ ಆಮಿಷಗಳಿಗೆ ಬಲಿಯಾಗುವುದು ಇತ್ಯಾದಿ.  ಇಷ್ಟನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಿರಾಳರಾಗಿರಬಹುದು, ಸಮಾಜವೂ ಸ್ವಾಸ್ಥ್ಯದಿಂದಿರುತ್ತದೆ. ಘಟನೆಗಳಿಗೆ ನ್ಯಾಯಯುತವಾದ ತೀರ್ಮಾನ ಮುಖ್ಯ, ಇದಕ್ಕೆ ಅನುಭವ, ಉತ್ತಮ ಮಾರ್ಗದರ್ಶನ ಮುಖ್ಯ ಎಂದು ಮಾತು ಮುಗಿಸಿದರು. - ಜಗದೀಶ ಚಂದ್ರ 


ಸದುದ್ದೇಶದ ವ್ಯಕ್ತಿತ್ವ

ಸದುದ್ದೇಶದ ವ್ಯಕ್ತಿತ್ವ

ಅಧಿಕಾರಿಯ ಕೊಠಡಿಯಿಂದ ಹೊರಬಂದ ರಾಮಣ್ಣ ಕುದಿಯುತ್ತಿದ್ದರು. ಯಥಾಪ್ರಕಾರ ಒಳಗೆ ರಾಮಣ್ಣನಿಗೆ ಬೈಗುಳಗಳಾಗಿದ್ದವು. ಕೆಲಸ ಸರಿಯಾಗಿ ಮಾಡುವುದಿಲ್ಲ ಎಂದು ಅಧಿಕಾರಿ ಬೈಯ್ಯುತ್ತಾರೋ, ಅಧಿಕಾರಿ ಸರಿ ಇಲ್ಲ ಎಂದು ರಾಮಣ್ಣ ಕೆಲಸ ಮಾಡುವುದಿಲ್ಲವೋ ಎಂದು ಒಂದು ಗೊಂದಲವೇ ಆಗಿತ್ತು. ಇದು ಯಾವ ಮಟ್ಟಕ್ಕೆ ಹೋಗಿತ್ತೆಂದರೆ ರಾಮಣ್ಣ ಈಗ ಯಾವ ಕೆಲಸವನ್ನೂ ಸರಿಯಾಗಿ ಮಾಡುತ್ತಿರಲಿಲ್ಲ. ಸದಾ ಕಚೇರಿ, ಅಧಿಕಾರಿಗಳನ್ನು ಬೈಯುವುದೇ ಅವರ ಕಾಯಕವಾಗಿತ್ತು.
ರಾಮಣ್ಣ ಒಳ್ಳೆಯವರೇ. ಯಾವುದೊ ಕೆಟ್ಟ ಘಳಿಗೆಯಲ್ಲಿ ಅವರು ಕೆಲಸ ಮಾಡಲಿಲ್ಲ ಎಂದು ಆಪಾದನೆ ಬಂದಾಗ ಅದನ್ನೇ ತಲೆಗೆ ಹಚ್ಚಿಕೊಂಡು ತಪ್ಪುಗಳನ್ನೇ ಮಾಡುತ್ತಿದ್ದರು. ಹೀಗೆಯೇ ಅದು ಹೆಮ್ಮರವಾಗಿ ರಾಮಣ್ಣನಿಗೆ ಈಗ ಭಡ್ತಿಯೂ ಇಲ್ಲ, ಇಂಕ್ರಿಮೆಂಟು ಇಲ್ಲ. ಇದು ಅವರನ್ನು ಇನ್ನೂ ಘಾಸಿಗೊಳಿಸಿ ಈಗ ಕೆಲಸಕ್ಕೆಬಾರದವನು ಎಂಬ ಮಟ್ಟಕ್ಕೆ ತಳ್ಳಿತ್ತು . ಜೊತೆಗೆ ರಾಮಣ್ಣನಿಗೆ ಮಾಡುತ್ತಿದ್ದ ಕೆಲಸದಲ್ಲಿ ನೆಮ್ಮದಿ ಸಿಗುತ್ತಿರಲಿಲ್ಲ. ಅವರಿಗೆ ಅಕೌಂಟ್ಸ್ ವಿಭಾಗದಲ್ಲಿ ಕೆಲಸ ಕೊಟ್ಟಿದ್ದರು. ಅವರಿಗೋ ಲೆಕ್ಕ ಪತ್ರಗಳು ಎಂದರೆ ಒಂದು ರೀತಿಯ ಅಲರ್ಜಿ. ಇವೆಲ್ಲವೂ ಸೇರಿ ಈಗ ರಾಮಣ್ಣನನ್ನು ಹುಚ್ಚನನ್ನಾಗಿ ಮಾಡಿಬಿಟ್ಟಿತ್ತು. ಅಲ್ಲಿದ್ದ ಅಧಿಕಾರಿಗಳಿಗೆ ರಾಮಣ್ಣನ ಹಿಂದಿನ ಆಗುಹೋಗುಗಳನ್ನು ತಿಳಿದುಕೊಂಡು ಅದಕ್ಕೆ ಸ್ಪಂದಿಸುವಷ್ಟು ಸಹನೆ ಇರಲಿಲ್ಲ.
ಈಗ ಕಚೇರಿಗೆ ನಾಗರಾಜ್ ಅವರು ಹೊಸದಾಗಿ ಮ್ಯಾನೇಜರ್ ಆಗಿ ಬಂದಿದ್ದರು. ಬಹಳ ಸಾಧು ಮನುಷ್ಯ. ಸಾಧು ಎಂದರೆ ಪುಕ್ಕಲು ಮನುಷ್ಯನಲ್ಲ, ಬಹಳ ಕಟ್ಟುನಿಟ್ಟಿನವರೇ. ಆದರೆ ಅಧಿಕಾರ ಚಲಾಯಿಸದೆ ಜವಾನನಿಂದ ಹಿಡಿದು ಅಸಿಸ್ಟಂಟ್ ಮ್ಯಾನೇಜರ್ ವರೆಗೆ  ಎಲ್ಲರನ್ನೂ  ಚೆನ್ನಾಗಿ ನೋಡಿಕೊಂಡು ಕೆಲಸತೆಗೆಸುವ ಕಲೆ ಅವರಿಗೆ ಚೆನ್ನಾಗಿ ಸಿದ್ಧಿಸಿತ್ತು.
ನಾಗರಾಜ್ ಅವರದು ಪರೋಪಕಾರದ ವ್ಯಕ್ತಿತ್ವ. ಸದಾ ಇತರರನ್ನು ತಾವೇ ಅವರ ಜಾಗದಲ್ಲಿದ್ದರೆ ಹೇಗೋ ಹಾಗೆ ಯೋಚಿಸಿ ಅವರಿಗೆ ಸಾಧ್ಯವಾದಷ್ಟೂ ಸಹಾಯ ಮಾಡುತ್ತಿದ್ದರು. ಹಾಗೆಂದು ಯಾರೂ ಅವರನ್ನು ಹಗುರವಾಗಿ ತೆಗೆದುಕೊಳ್ಳುವಂತಿರಲಿಲ್ಲ. ಕೆಲಸ ಎಂದಮೇಲೆ ಕೆಲಸ, ಸರಿಯಾಗಿ ಮಾಡಬೇಕು. ಆಗದಿದ್ದರೆ ಸರಿಯಾದ ಕಾರಣ ಕೊಡಬೇಕು. ಅವರದು ಒಂದು ರೀತಿಯ ಸದುದ್ದೇಶ ವ್ಯಕ್ತಿತ್ವ, ಅಂದರೆ ಎಲ್ಲರೂ ಸಂತೋಷದಿಂದ ಇರಬೇಕು, ಕೆಲಸವನ್ನು ತಮ್ಮ ಮನೆಯದೇ ಎಂಬಂತೆ ಮಾಡಬೇಕು ಇತ್ಯಾದಿ ಅವರ ಮನಸಿನಲ್ಲಿದ್ದವು. ಕೆಲಸ ಚೆನ್ನಾಗಿ ಮಾಡಿ, ನೀವೂ ಹೆಸರು, ಭಡ್ತಿ ತೆಗೆದುಕೊಳ್ಳಿ, ನಮಗೂ, ಕಚೇರಿಗೂ ಒಳ್ಳೆ ಹೆಸರು ತನ್ನಿ, ಇದು ಅವರ ಧ್ಯೇಯ ವಾಕ್ಯ. ಹೀಗಾಗಿ ಕಚೇರಿಯಲ್ಲಿ ಅವರು ಬಹಳ ಜನಪ್ರಿಯ ವ್ಯಕ್ತಿಯಾಗಿದ್ದರು. ಬಾಸ್ ಆದರೂ ಎಲ್ಲರಿಗೂ ಹಿರಿಯಣ್ಣನೂ ಆಗಿದ್ದರು. ಅವರ ಸದುದ್ದೇಶದ ವ್ಯಕ್ತಿತ್ವ, ಪರೋಪಕಾರ ಗುಣ ಅವರನ್ನು ಒಬ್ಬ ಶ್ರೇಷ್ಠ ವ್ಯಕ್ತಿಯನ್ನಾಗಿ ಮಾಡಿದ್ದವು.
ಈ ನಾಗರಾಜ್ ಅವರಿಗೆ ನಮ್ಮ ರಾಮಣ್ಣನ ಕೆಲಸದ ಮೇಲೆ ಕಣ್ಣುಬಿತ್ತು. ರಾಮಣ್ಣನ ಕಾರ್ಯವೈಖರಿಯನ್ನು ನೋಡಿ ಇತರರನ್ನು ಕರೆಸಿ ಎಲ್ಲ ವಿಷಯಗಳನ್ನು ಕಲೆಹಾಕಿದರು. ರಾಮಣ್ಣನನ್ನು ಒಂದು ದಿನ ಕರೆದರು. ರಾಮಣ್ಣ, ಈ ಯಪ್ಪನಕೈಲೂ ಬೈಸಿಕೊಳ್ಳಬೇಕು ಅಂತ ಅನ್ನಿಸುತ್ತೆ ಎನ್ನುತ್ತಾ ಎದ್ದು ಹೋದ. ನಾಗರಾಜ್ ಅವರು ರಾಮಣ್ಣನಿಗಿಂತ ಚಿಕ್ಕವರು. ಹೀಗಾಗಿ ಅವನಿಗೆ ಗೌರವಕೊಟ್ಟು ಚೆನ್ನಾಗಿ ಮಾತನಾಡಿಸಿದರು. ರಾಮಣ್ಣನಿಗೆ ಆಶರ್ಯವಾಯಿತು. ಇದುವರಿಗೂ ಬೈಸಿಕೊಂಡಿದ್ದೇ ಆಗಿತ್ತು, ಇದು ನಿಜವಾ ಕನಸಾ ಎಂದು ಮೈ ಚಿವುಟಿಕೊಂಡ. ನಿಜವೆಂದು ಗೊತ್ತಾದಮೇಲೆ ಅವನಿಗೆ ನಾಗರಾಜ್ ಅವರ ಮೇಲೆ ತುಂಬಾ ಒಳ್ಳೆಯ ಅಭಿಪ್ರಾಯ ಬಂದಿತು. ಅವರ ಬಳಿ ತನ್ನ ಇಲ್ಲಿಯವರೆಗಿನ ಕತೆಯನ್ನೆಲ್ಲ ಹೇಳಿಕೊಂಡು ಮನಸು ಹಗುರ ಮಾಡಿಕೊಂಡ. ಆಗ ನಾಗರಾಜ್ ಅವರು ನಿಮಗೆ ಇಷ್ಟವಾದ ವಿಭಾಗ ಯಾವುದು? ಅಲ್ಲಿ ನಿಮ್ಮನ್ನು ವರ್ಗಾವಣೆ ಮಾಡಲು ಸಾಧ್ಯವಾದರೆ ನೋಡುತ್ತೇನೆ, ಆಗದಿದ್ದರೆ ಬೇಜಾರು ಮಾಡಿಕೊಳ್ಳಬೇಡಿ ಎಂದರು. ನಾಗರಾಜ್ ಅವರ ಸವಿಮಾತುಗಳೇ ರಾಮಣ್ಣನಿಗೆ ಹಿತವಾಗಿದ್ದವು. ಪ್ರಯತ್ನಿಸಿ ನೋಡಿ ಎಂದು ಹೇಳಿ ಬಂದನು. ರಾಮಣ್ಣ ಹೀಗೆ ಖುಷಿಯಾಗಿದ್ದುದು ಅವನ ಸಹೋದ್ಯೋಗಿಗಳಿಗೆ ಮರೆತೇ ಹೋಗಿತ್ತು.
ರಾಮಣ್ಣನಿಗೆ ಸಮಾಜಸೇವೆ ಇಷ್ಟವಾದ ವಿಭಾಗವಾಗಿತ್ತು. ಅವನು ಅದನ್ನು ನಾಗರಾಜ್ ಅವರಿಗೆ ಹೇಳಿದ್ದ. ಈಗ ಮತ್ತೆ ನಾಗರಾಜ್ ಅವರು ರಾಮಣ್ಣನ್ನು ಕರೆದು, ನೋಡಿ ಸಮಾಜಸೇವೆ ವಿಭಾಗದಲ್ಲಿ ಒಂದು ಪೋಸ್ಟ್ ಗೆ ನಿಮ್ಮನ್ನು ಹಾಕುತ್ತೇನೆ, ನೀವು ಅಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡು ಕೆಲಸಮಾಡಿ ವರ್ಗಮಾಡಿದ ನನಗೆ, ನಿಮಗೂ ಒಳ್ಳೆಯ ಹೆಸರನ್ನು ತರಬೇಕು ಎಂದರು. ರಾಮಣ್ಣನಿಗೆ ಬಹಳ ಸಂತೋಷವಾಗಿತ್ತು. ಸಧ್ಯ ಜೀವನದ ಕೊನೆ ಘಳಿಗೆಯಲ್ಲಾದರೂ ಒಳ್ಳೆಯದಾಗುತ್ತಿದೆಯಲ್ಲ ಎಂದುಕೊಂಡು, ಖುಷಿಯಿಂದ, ಖಂಡಿತಾ ನನ್ನ ಕೈಲಾದ್ದನ್ನು ಮಾಡುತ್ತೇನೆ ಎಂದು ಹೇಳಿದ.
ಆಗ ನಾಗರಾಜ್ ಅವರು, ನಮ್ಮ ಜೀವನವನ್ನು ಒಂದು ಸದುದ್ದೇಶದಿಂದ ಅನುಭವಿಸಬೇಕು. ಆ ಸದುದ್ದೇಶವನ್ನು ನೆರವೇರಿಸಲು ನಾವು ಸಾಧ್ಯವಾದಷ್ಟೂ ಪ್ರಯತ್ನಿಸಬೇಕು. ನಮ್ಮೊಳಗಿನ ವ್ಯಕ್ತಿತ್ವವು ಈ ಸದುದ್ದೇಶಕ್ಕೆ ಪೂರಕವಾಗಿರಬೇಕು. ನಮ್ಮೊಳಗಿನ ವ್ಯಕ್ತಿತ್ವ ಯಾವುದು ಎಂಬುದನ್ನು ಅರಿತು ಅದಕ್ಕೆ ತಕ್ಕಂತೆ ಜೀವನ ನಡೆಸಿದರೆ ಅದರಿಂದ ಸಿಗುವ ಉಪಶಮನಕ್ಕೆ ಸಾಟಿಯೇ ಇಲ್ಲ. ಜಾತಿ, ಪಂಥ, ಧರ್ಮಗಳ ಸಂಕುಚಿತ ಮನೋಭಾವದಿಂದ ಹೊರಬಂದು ನಮ್ಮದೇ ವ್ಯಕ್ತಿತ್ವ ಬೆಳೆಸಿ ಅದನ್ನು ಸಾಧಿಸಲು ಪ್ರಯತ್ನಿಸಿದರೆ ಜೀವನ ಸಾರ್ಥಕವಾಗುತ್ತದೆ. ಪರೋಪಕಾರ, ಸಮಾಜ ಸೇವೆ ಇವು ನಿಮ್ಮಲ್ಲಿನ ವ್ಯಕ್ತಿತ್ವಗಳು. ಇಲ್ಲಿ ಜಾತಿ ಬೇಧವೆಣಿಸದೆ ಉದಾರ ಮನಸ್ಸಿಂದ ಸೇವೆ ಮಾಡಿದರೆ ಅದರಿಂದ ಸುಖವೇ ನಿಜವಾದ ಸುಖ. ನಿಮಗಿಂತ ನಾನು ಕಿರಿಯನಾಗಿರುವುದರಿಂದ ನಿಮಗೆ ಒಳ್ಳೆಯದಾಗಲಿ ಎಂದು ಆ ದೇವರನ್ನು ಬೇಡಿಕೊಳ್ಳುತ್ತೇನೆ ಎಂದರು. ರಾಮಣ್ಣನಿಗೆ ಕಂಠ ಬಿಗಿದು ಬಂತು. ಅವನು ನಾಗರಾಜ್ ಅವರಿಗೆ ನಿಮ್ಮನ್ನು ದೇವರು ಚೆನ್ನಾಗಿಟ್ಟಿರಲಿ ಎಂದು ಹರಸುತ್ತೇನೆ ಎಂದು ಹೇಳಿ ಹೊರಬಂದ.
ರಾಮಣ್ಣ ಸಂತೋಷದಿಂದ ಹೊಸ ವಿಭಾಗಕ್ಕೆ ಹೊರಟ.  ರಾಮಣ್ಣನ ಜಾಗಕ್ಕೆ ಮಾದಪ್ಪ ಬಂದರು. ಮಾದಪ್ಪ ಕೆಲಸದಲ್ಲಿ ನಿಷ್ಣಾತರು. ಆದರೆ ಪರೋಪಕಾರ, ಮೃದು ಮಾತುಗಳು, ಇತರರೊಂದಿಗೆ ಹೊಂದುಕೊಂಡು ಬಾಳುವುದು ಇವೆಲ್ಲವೂ ಮಾದಪ್ಪ ಕಂಡರಿಯದ ವಿಚಾರಗಳಾಗಿದ್ದವು. ಸದಾ ಸಿಡಿಮಿಡಿ, ಅವನಿಗೇನಾದರೂ ಕೆಲಸ ಒಪ್ಪಿಸಿದರೆ, ಯಾಕಾದರೂ ಕೊಟ್ಟೆವಪ್ಪಾ ಎಂದು ಅಂದುಕೊಳ್ಳುವಂತೆ ಮಾಡುತ್ತಿದ್ದ. ನಾಗರಾಜ್ ಅವರಿಗೆ ರಾಮಣ್ಣನೇ ಇವನಿಗಿಂತ ವಾಸಿಯೇನೋ ಅನ್ನಿಸಿತು. ಆದರೂ ಅವರ ಪರೋಪಕಾರ ಗುಣ, ಅನುಭೂತಿ (ಎಂಪತಿ), ಮಾದಪ್ಪನನ್ನು ಬದಲಾಯಿಸಬಹುದು ಎಂದು ಹೇಳಿತು.
ಅವರು ಮಾದಪ್ಪನಿಗೂ ಒಂದು ನೀತಿಪಾಠ ಹೇಳಿದರು. ಹೇಳುವ ಮೊದಲು ತಮ್ಮ ಮಾತಿನಿಂದ ಅವನನ್ನು ಮೋಡಿಮಾಡಿದರು.
ಅವರು, ಮಾದಪ್ಪ, ಎಲ್ಲರ ಮುಖದ ಸುತ್ತಲೂ ಒಂದು ಪ್ರಭಾವಳಿ ಇರುತ್ತದೆ. ನಾವು ಹೆಚ್ಚು ಸಂತೋಷದಿಂದ್ದರೆ, ಪರೋಪಕಾರ ಗುಣ ಹೊಂದಿದ್ದರೆ ಅದು ಜನರನ್ನು ಆಕರ್ಷಿಸುತ್ತದೆ. ಇಲ್ಲವಾದರೆ ಅದು ನೆಗೆಟಿವ್ ಆಗಿ ಯಾರನ್ನೂ ಹತ್ತಿರ ಸೇರಿಸುವುದಿಲ್ಲ. ನೀವು ಇಲ್ಲಿ ಕೆಲಸಮಾಡುವ ಕೆಲವೇ ಸಮಯವನ್ನು ಜನರ ಒಳಿತಿಗೆ ಮೀಸಲಿಟ್ಟು ನೋಡಿ, ನಿಮಗೆ ವ್ಯತ್ಯಾಸ ಗೊತ್ತಾಗುತ್ತದೆ ಎಂದರು. ಒಂದು ವಾರ ಮಾಡು, ನಂತರ ನಿನ್ನ ಅನಿಸಿಕೆಯನ್ನು ನನ್ನ ಬಳಿ ಹೇಳು ಎಂದರು.  ಮಾದಪ್ಪ ಒಂದು ವಾರದ ಮಟ್ಟಿಗೆ ಪೂರ್ತಿ ಪಾಸಿಟಿವ್ ಆಗಿದ್ದು ಎಲ್ಲರನ್ನೂ ನಗುನಗುತ್ತಾ ಮಾತನಾಡಿಸಿದ, ಬಂದವರ ಕಷ್ಟ ಸುಖ ವಿಚಾರಿಸಿ ಜಾತಿ ಬೇಧವಿಲ್ಲದೆ ಅವರಿಗೆ ಸಹಾಯ ಮಾಡಿದ. ಇದರಿಂದ ದೊರೆತಂತಹ ಸುಖ ಅವನಿಗೆ ಇದುವರೆಗೂ ಸಿಕ್ಕಿರಲಿಲ್ಲ. ಅವನಿಗೆ ಒಂದು ತರಹ ರೋಮಾಂಚನವಾಯಿತು. ಅಂದೇ ಅವನು ಬದಲಾಗಿ ಹೋದ. ಅವನು ಹಿಂದಿನ ಮಾದಪ್ಪ ಆಗಿರಲಿಲ್ಲ. ಮಾದಪ್ಪನಲ್ಲದ ಈ ಮಾರ್ಪಾಡು ಎಲ್ಲರಿಗೂ ಆಶರ್ಯ ತರಿಸಿತ್ತು. ನಾಗರಾಜ್ ಅವರಿಗಂತೂ ಬಹಳ ಖುಷಿಯಾಗಿತ್ತು.
ಇದೆ ಸಮಯದಲ್ಲೇ ಸಮಾಜ ಸೇವೆ ವಿಭಾಗದಿಂದ ರಾಮಣ್ಣ ಅವರ ಉತ್ತಮ ನಡವಳಿಕೆ, ಕೆಲಸಗಳಿಂದ ಅವರಿಗೆ ಭಡ್ತಿ ನೀಡಲಾಗಿದೆ ಎಂದು ಸಮಾಚಾರ ಬಂತು.
ಇದಾದ ಸ್ವಲ್ಪ ಹೊತ್ತಿನಲ್ಲೇ ರಾಮಣ್ಣ ಒಂದು ಸಿಹಿ ಪೊಟ್ಟಣ ಇಟ್ಟುಕೊಂಡು ನಾಗರಾಜ್ ಅವರ ಬಳಿ ಬಂದ. ನಮಸ್ಕರಿಸುತ್ತಾ, ನೀವು ನನಗಿಂತ ವಯಸಿನಲ್ಲಿ ಕಿರಿಯರಿರಬಹುದು ಆದರೆ ಗುಣದಲ್ಲಿ ಬಹಳ ಹಿರಿಯರು, ನಿಮ್ಮಿಂದ ನನ್ನ ಬಾಳಿಗೆ ನೆಮ್ಮದಿ ಸಿಕ್ಕಿತು. ಇಷ್ಟು ವರ್ಷ ಹೀಗೆ ಇದ್ದಿದ್ದರೆ ನಾನು ಅದೆಲ್ಲೋ ಇರುತ್ತಿದ್ದೆನಲ್ಲ ಎಂದು ಖೇದವಾಗುತ್ತಿದೆ ಎಂದ. ಅಲ್ಲಿಯೇ ಇದ್ದ ಮಾದಪ್ಪನೂ ಹೌದು ಎಂದು ತಲೆದೂಗಿದ. ಆಗ ನಾಗರಾಜ್, ಏನೇನೊ ಅಂದುಕೊಂಡು ಖೇದ ಪಡಬೇಡಿ, ನೋಡಿ ನೀವು ಹೊಗಳಲಿ ಎಂದು ನಾನು ಈ ಕೆಲಸ ಮಾಡಲಿಲ್ಲ. ಒಳ್ಳೆಯದು ಅನ್ನಿಸಿದ್ದನ್ನು ಮಾಡಿದೆ, ಅದೇ ನಿಜವಾದ ಧರ್ಮವಲ್ಲವೇ? ಇನ್ನುಮುಂದೆ ನೀವು ಇತರರಿಗೆ ಮಾದರಿಯಾಗಿ ಬಾಳಿ ಅಷ್ಟೇ ಸಾಕು, ನಾವು ಹೇಗಿದ್ದರೆ ಹಾಗೆ ಇತರರು ಅಲ್ಲವೇ? ಎಂದು ಹೇಳಿ, ಮಾದಪ್ಪನನ್ನು ನೋಡುತ್ತಾ ಇದು ನಿಮಗೂ ಈ ಸಂತಸದ ಬದುಕಿನ ಸೂತ್ರ ಅನ್ವಯಿಸುತ್ತದೆ ಎಂದು ನಕ್ಕರು.
ನಾಗರಾಜ್ ಅವರು ಇನ್ನಷ್ಟು ಸಿಹಿ, ಖಾರ, ಕಾಫಿ, ಆರ್ಡರ್ ಮಾಡಿ ಅದನ್ನು ಕಚೇರಿಗೆ ತರಿಸಿ ರಾಮಣ್ಣ ತಂದ ಸಿಹಿಯನ್ನು ಅದಕ್ಕೆ ಸೇರಿಸಿ ಕಚೇರಿಯ ಇತರರೊಂದಿಗೆ ಸಂತೋಷದಿಂದ ಸವಿದರು. ಇಡೀ ಕಚೇರಿಯೇ ಸಂತಸದಿಂದ ಉಲ್ಲಾಸಭರಿತವಾಗಿತ್ತು. ನಾಗರಾಜ್ ಅವರ ಮುಖದ ಸುತ್ತಲೂ ಪ್ರಭಾವಳಿ ಕಂಗೊಳಿಸುತ್ತಿತ್ತು. - ಜಗದೀಶ ಚಂದ್ರ 

Sunday, April 19, 2020

ಉದ್ಯಾನವನ


ಉದ್ಯಾನವನ
ಅದೊಂದು ಉದ್ಯಾನವನ, ದಿನಬೆಳಗಾದರೆ ಎಲ್ಲರೂ ಅದರೊಳಗೆ ಬಂದು, ನಡೆದೂನಡೆದೂ, ಅದಕ್ಕೆ ಹಾಸಿದ ನೆಲಹಾಸನ್ನು ಸವೆಸುತ್ತಾರೆ, ಹಾಗೆಯೆ ತಮ್ಮ ಚಪ್ಪಲಿಯನ್ನೂ ಸವೆಸಿಕೊಳ್ಳುತ್ತಾರೆ. ಅದರಲ್ಲಿ ಓಡಾಡಿದಮೇಲೆ ಸ್ವಲ್ಪ ಸುಸ್ತಾದರೆ ಕೂಡಲು ಬೆಂಚುಬೇಡವೇ? ಅಲ್ಲಿ ಒಂದೂ ಬೆಂಚು ಇರಲಿಲ್ಲ. ರೆಡ್ಡಿ ಅವರು ಅದರ ಬಗ್ಗೆಯೇ ಮಾತನಾಡುತ್ತಿದ್ದಾಗ ಅಲ್ಲಿಯೇ ನಡೆಯುತ್ತಿದ್ದ ಜುಬ್ಬಾಧಾರಿ ವ್ಯಕ್ತಿಯೊಬ್ಬ, “ನೀವು ಹೇಳುತ್ತಿರುವುದು ನಿಜ, ಕೂಡಲು ಒಂದೂ ಬೆಂಚು ಇಲ್ಲದಿದ್ದರೆ ಇದೆಂಥ ಉದ್ಯಾನವನ, ನೀವೆಲ್ಲರೂ ಸೇರಿ ಒಂದು ಪತ್ರ ಬರೆದುಕೊಡಿ, ನಾನು ಅದನ್ನು ನನಗೆ ಗೊತ್ತಿರುವವರಿಗೆ ಕೊಟ್ಟು ಅವರಿಂದ ಕೆಲಸಮಾಡಿಸುತ್ತೇನೆಎಂದ. ರೆಡ್ಡಿ ಅವರುಸರಿಯಪ್ಪಾ, ಧನ್ಯವಾದಗಳುಎಂದರು. “ನಾನು ನಾಡಿದ್ದು ಇದೇ ವೇಳೆಗೆ ನಿಮ್ಮನ್ನು ಇಲ್ಲೇ ಕಾಣುತ್ತೇನೆ, ಆಗ ಪತ್ರವನ್ನು ಕೊಡಿಎಂದು ಹೇಳಿ ಮುಂದೆ ನಡೆದ. ರೆಡ್ಡಿ ಅವರು ಅದನ್ನು ಇತರರಿಗೆ ಹೇಳಿ, “ನೋಡಿ ಎಂಥ ಪುಣ್ಯಾತ್ಮಎಂದು ಹೊಗಳಿ ಪತ್ರಕ್ಕೆ ಎಲ್ಲರಕೈಲೂ ಸಹಿಹಾಕಿಸಿ ಆತನಿಗೆ ಕೊಟ್ಟರು. ಇದಾದ ಒಂದೆರೆಡುತಿಂಗಳಲ್ಲೇ ಅಲ್ಲಿ ಚಪ್ಪಡಿ ಕಲ್ಲುಗಳು ಬಂದವು, ನಂತರ ಒಂದಷ್ಟು ಬೆಂಚುಗಳೂ ಸಿದ್ದವಾದವು. ಎಲ್ಲರೂ ರೆಡ್ಡಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಇದಾದ ಕೆಲವೇ ದಿನಗಳಲ್ಲಿ ಅಲ್ಲಿದ್ದ ನೆಲಹಾಸಿನ ಮೇಲೆ ಯಾರೋ ಜಾರಿಬಿದ್ದರು. ಕೂಡಲೇ ಎಲ್ಲರೂ ಬೇರೆ ನೆಲಹಾಸನ್ನು ಹಾಕಿಸಬೇಕೆಂದು ಕೋರಿ, ತಾವೇ ಒಂದು ಪತ್ರಬರೆದು, ಅದಕ್ಕೆ ಸಹಿಹಾಕಿಸಿ ರೆಡ್ಡಿ ಅವರಿಗೆ ಕೊಟ್ಟರು. ರೆಡ್ಡಿ ಅವರು ಅದನ್ನು ಜುಬ್ಬಾಧಾರಿ ವ್ಯಕ್ತಿಗೆ ಕೊಟ್ಟರು. ಇದಾದ ಕೆಲವೇ ತಿಂಗಳಲ್ಲಿ ಒಂದಷ್ಟು ನೆಲಹಾಸಿನ ಕಲ್ಲುಗಳು ಅಲ್ಲಿ ಬಂದುಬಿದ್ದವು. ಅದನ್ನು ಹಾಕುವಾಗ ಕೂಡಲು ಹಾಕಿಸಿದ್ದ ಕೆಲವು ಬೆಂಚುಗಳು ಸೊಟ್ಟಗಾದವು. ಕೆಲವಂತೂ ಕೂತರೆ ಅಲ್ಲಾಡತೊಡಗಿದವು. ಅಂತೂ ನೆಲಹಾಸು ಸಿದ್ಧವಾಯಿತು, ಆದರೆ ಬೆಂಚು ಶಿಥಿಲವಾಯಿತು.
ಈಗ ಜುಬ್ಬಾಧಾರಿ ವ್ಯಕ್ತಿ, ಬೆಂಚುಗಳನ್ನು ಬೇಗನೆ ಸರಿಪಡಿಸಬೇಕೆಂದು ತಾನೇ ಒಂದು ಪತ್ರಬರೆದು ಎಲ್ಲರಕೈಲಿ ಸಹಿಹಾಕಿಸಿಕೊಂಡನು. ಸ್ವಲ್ಪ ದಿನಗಳಲ್ಲೇ ಹಳೆಯಬೆಂಚಿನಕಲ್ಲುಗಳು ಚೆನ್ನಾಗಿದ್ದರೂ ಎಲ್ಲಿಯೋ ಮಾಯವಾದವು, ಹೊಸದಾಗಿ ಪಾಲಿಶ್ ಮಾಡಿದ ಗ್ರಾನೈಟ್ ಕಲ್ಲುಗಳು ಬಂದುಬಿದ್ದವು. ಎಲ್ಲರೂ, "ವಾಹ್, ಎಂಥಚೆಂದಎಂದು ಹೊಗಳಿದರು. ಅದರ ಮುಂದೆ ಈಹಿಂದೆ ಹಾಕಿದ್ದ ನೆಲಹಾಸು ಬಲುಸಪ್ಪೆ ಎನ್ನಿಸಿತು. ಜೊತೆಗೆ ಕೆಲವು ನೆಲಹಾಸುಗಳು ಈ ಹೊಸಬೆಂಚುಗಳನ್ನು ಹಾಕುವಾಗ ಕಿತ್ತುಬಂದವು. ಆಗ ಮತ್ತೆ ಆ ಜುಬ್ಬಾಧಾರಿವ್ಯಕ್ತಿ ಬಂದು, ಎಲ್ಲರಿಗೂ, “ಈ ನೆಲಹಾಸುಗಳು ಹೊಸಗ್ರಾನೈಟ್ಬೆಂಚಿಗೆ ಸ್ವಲ್ಪವೂ ಹೊಂದುವುದಿಲ್ಲ, ಬೇರೆ ಹಾಕಿಸಿಬಿಡೋಣಎಂದು ಎಲ್ಲರಿಗೂ ಮನವರಿಕೆ ಮಾಡಿದ. ಸರಿ ಮತ್ತೆ ಪತ್ರ, ಸಹಿ, ಮೊದಲು ನಡೆದಾಡುವ ಜಾಗಕ್ಕೆಹಾಕಿದ್ದ ನೆಲಹಾಸುಗಳು ಮಾಯ.  
ಈಗ ನೆಲಹಾಸಿನ ಜೊತೆಗೆ ಅದರಪಕ್ಕದಲ್ಲಿ ಕ್ಲೇಬ್ಲಾಕಿನ ಎರಡು ಮೋಟುಗೋಡೆಗಳನ್ನು ಹಾಕಿಸಿ, ಜೊತೆಗೆ ಹೊಸ ನೆಲಹಾಸು ಹಾಕಿಸಲಾಯಿತು. ಜೊತೆಗೆ ಉದ್ಯಾನದಬೇಲಿಯಾಗಿದ್ದ ಕರವೀರಪುಷ್ಪಗಿಡದ ಹೆಡ್ಜನ್ನು ಕಿತ್ತು ಅದಕ್ಕೆ ಕಲ್ಲಿನಗೋಡೆಯನ್ನು ಕಟ್ಟಲಾಯಿತು. ಜನ ಈಗ ಮೋರಿಯಂತೆ ಕಾಣುವ ಎರಡು ಮೋಟುಗೋಡೆಗಳ ನಡುವೆ ಸರದಿಯಸಾಲಿನಲ್ಲಿ ನಡೆದವರಂತೆ ನಡೆಯುತ್ತಾರೆ. ಮಳೆ ಬಂದರೆ ಪಕ್ಕಕ್ಕೆ ನೀರುಹರಿಯಲಾಗದೆ ನೀರು ಅಲ್ಲಲ್ಲೇ ನಿಂತುಬಿಡುತ್ತದೆ. ಯಾರಾದರೂ ಬೇಗಹೋಗಬೇಕೆಂದರೆ ಪಕ್ಕಕ್ಕೆಸರಿದು ದಾಟಲಾಗುವುದಿಲ್ಲ, ಏಕೆಂದರೆ ಮೋಟುಗೋಡೆಗಳು ಅಡ್ಡ. ಮುಂದೆ ಏನಾಗುತ್ತದೆ ಎಂದು ಈಗ ನಿಮಗೆ ಅರ್ಥವಾಗಿರಬೇಕು. 
ಈಗ ಜುಬ್ಬಾಧಾರಿ ವ್ಯಕ್ತಿ ಉದ್ಯಾನವನವೆಂಬ ಅಕ್ಷಯಪಾತ್ರೆಯಿಂದ ದ್ವಿಚಕ್ರವಾಹನದಿಂದ ದೊಡ್ಡಕಾರಿಗೆ ಬಡ್ತಿಹೊಂದಿ, ತನ್ನ ಕಚೇರಿಯಲ್ಲಿ ಕುಳಿತು "ಯಾರದೋ ದುಡ್ಡು, ಎಲ್ಲಮ್ಮನ ಜಾತ್ರೆ" ಎಂದು ಪಡ್ಡೆ ಹುಡುಗರು ಪಾಪ್ ಶೈಲಿಯಲ್ಲಿ ಕಿರುಚುತ್ತಿದ್ದ ಹಾಡೊಂದಕ್ಕೆ ಗುನುಗುನಿಸುತ್ತಾ  ಜನರಿಂದ ಬರಬೇಕಾಗಿರುವ ಇನ್ನೊಂದು ಪತ್ರಕ್ಕೆ ಕಾಯುತ್ತಿದ್ದಾನೆ. - ಜಗದೀಶ ಚಂದ್ರ 

ಮಕ್ಕಳ ಸಮಸ್ಯೆ

ಮಕ್ಕಳ ಸಮಸ್ಯೆ 

ಶಂಕರನ ತಂದೆಗೆ ಅಂದು ಕಾಲೇಜಿಗೆ ಬರಲು ಜಿ ಹಾ ಜಿ ಹೇಳಿದ್ದರು. ಅಂದು ಜಿ ಹಾ ಜಿ ಶಾಲೆಗೆ ಬರುತ್ತಿರುವಾಗೆ ಯಾರೋ ಒಬ್ಬರು ಕಾಲೇಜಿನ ಬಗ್ಗೆ ವಿಚಾರಿಸುತ್ತಿದ್ದರು. ಅದನ್ನು ಕೇಳಿಸಿಕೊಂಡ ಅವರು,  ಆ ಮನುಷ್ಯನ್ನು ಮಾತನಾಡಿಸಿದರು. ಅವರು ಸ್ವಲ್ಪ ಒರಟಾಗಿ ಮಾತನಾಡಿದಾಗ,ಯಾಕೋ ಜಿ ಹಾ ಜಿ ಅವರಿಗೆ, ಆ ಭಾಷೆ, ರೀತಿ ಹಿಡಿಸಲಿಲ್ಲ. ಆದರೂ ಏನೋ ಸಹಾಯ ಮಾಡೋಣ ಎಂದಷ್ಟೇ ಮಾತನಾಡಿಸಿದ್ದರು. ಅವರ ಮಾತಿನಿಂದ ನೊಂದು ಜಿ ಹಾ ಜಿ ಅವರೂ ಹೆಚ್ಚು ಮಾತನಾಡದೆ ಕಾಲೇಜಿಗೆ ಬಂದುಬಿಟ್ಟರು.
ಅಂದು ತರಗತಿಯಲ್ಲಿ ಶಂಕರ ಬಂದಿದ್ದ. ಜಿ ಹಾ ಜಿ ಅವನನ್ನು, 'ನಿಮ್ಮ ತಂದೆಯನ್ನು ಕರೆದುಕೊಂಡು ಬರದೇ ಇದ್ದಾರೆ ತರಗತಿಗೆ ಸೇರಿಸಲ್ಲ ಎಂದು ಹೇಳಿದ್ದರೂ ಮತ್ತೆ ಏಕೆ ಬಂದೆ?' ಎಂದು ಗದರಿದರು. ಅವರು ಇನ್ನು ಕೆಲವೇ ನಿಮಿಷಗಳಲ್ಲಿ ಬರುತ್ತಾರೆ, ಅದಕ್ಕೆ ಬಂದಿರುವುದು ಎಂದು ಕುಳಿತೇ ಉತ್ತರಿಸಿದ.
ಇಂದಿನ ಕಾಲದ ಹುಡುಗರು. ನಾವು ಹೆಚ್ಚು ಬೈಯುವ ಹಾಗೂ ಇಲ್ಲ, ಬುದ್ದಿ ಹೇಳುವ ಹಾಗೂ ಇಲ್ಲ. ಹೇಳಿದರೆ ಕೇಳುವುದೂ ಇಲ್ಲ ಎಂದು ಜಿ ಹಾ ಜಿ ಮನದಲ್ಲೇ ಗೊಣಗಿಕೊಂಡು ಸುಮ್ಮನಾದರು. ಇವನಂತೆಯೇ ಇನ್ನಷ್ಟು ಮೊಂಡು ಹುಡುಗರು ಕಾಲೇಜಿನಲ್ಲಿದ್ದರು. ಅವರೆಲ್ಲರ ಧೋರಣೆಯೇ ವಿಚಿತ್ರ. ನಾವೇನೂ ಕಾಲೇಜಿಗೆ ಬಿಟ್ಟಿ ಬಂದಿಲ್ಲ, ದುಡ್ಡು ಕೊಟ್ಟೆ ಬಂದಿರುವುದು, ಅವರ ಕೆಲಸ ಪಾಠ ಮಾಡುವುದು ಅಷ್ಟೇ, ನಾವೆಲ್ಲ ಕಾಲೇಜಿನ ಆಡಳಿತ ಮಂಡಳಿಗೆ ಅವರ ಬಗ್ಗೆ ದೂರು ನೀಡಿ ಅವರನ್ನು ಮನೆಗೆ ಕಳಿಸಬಹುದು ಎಂದು ಉಳಿದವರಿಗೂ ಹೇಳಿಕೊಡುತ್ತಿದ್ದರು.
ಇಂತಹ ಒಂದು ದಂಡೇ ಕಾಲೇಜಿನಲ್ಲಿತ್ತು. ಅವರು ಹಣತೆತ್ತು ಸೀಟನ್ನು ಗಿಟ್ಟಿಸಿದ್ದರಿಂದ, ಕಾಲೇಜಿನ ಆಡಳಿತ ಮಂಡಳಿಗೆ ಅವರ ಮೇಲೆ ಸ್ವಲ್ಪ ಮೃದು ದೋರಣೆ. ಅಧ್ಯಾಪಕರು ಹೆಚ್ಚು ಮಾತನಾಡಿದರೆ, ಅವರಿಂದಲೇ ನಿಮಗೆ ಸಂಬಳ ಬರುತ್ತಿರುವುದು, ಅಂಥವರು ಇಲ್ಲದ್ದಿದ್ದರೆ ನಾವು ಕಾಲೇಜು ಮುಚ್ಚಿ ಮನೆಗೆ ಹೋಗಬೇಕು ಎಂದು ಕಾರಣ ನೀಡುತ್ತಿದ್ದರು. ಇದನ್ನು ಈ ದಂಡು ದುರುಪಯೋಗ ಪಡಿಸಿಕೊಳ್ಳುತ್ತಿತ್ತು. ಅಧ್ಯಾಪಕರಿಗೆ ಅಗೌರವ, ತರಗತಿಯಲ್ಲಿ ತೊಂದರೆ ಕೊಡುವುದು, ಅಂಕ ಕಡಿಮೆ ಬಂದರೆ ಅಧ್ಯಾಪಕರೇ ಸರಿಯಾಗಿ ಪಾಠ ಮಾಡಲಿಲ್ಲ ಎಂದು ದೂರುವುದು ಇವೆಲ್ಲಾ ಸರ್ವೇ ಸಾಮಾನ್ಯವಾಗಿತ್ತು. ನಡತೆ ಎಂಬುದಂತೂ ಕಿಂಚಿತ್ತೂ ಇರಲಿಲ್ಲ.
ತರಗತಿ ಪ್ರಾರಂಭವಾದ ಸ್ವಲ್ಪ ಹೊತ್ತಿನಲ್ಲೇ ಜಿ ಹಾ ಜಿ ಅವರಿಗೆ ಪ್ರಾಂಶುಪಾಲರಿಂದ ಕರೆ ಬಂತು. ತರಗತಿಯನ್ನು ಮುಗಿಸಿ ಅವರ ಬಳಿಗೆ ಹೋದರು. ಆಗ ಅವರು ಅಲ್ಲಿಗೆ ಬಂದಿದ್ದ ಅತಿಥಿಗಳ ಸಂಗಡ ಮಾತನಾಡುತ್ತಿದ್ದರು. ಅವರು ಅಧ್ಯಾಪಕರ ಬಗ್ಗೆ ಏಕ ವಚನದಲ್ಲಿ 'ಯಾವನು ಆ ಮೇಷ್ಟ್ರು, ಸುಮ್ಮನೆ ಪಾಠ ಮಾಡಿ ಅಂಕ ಕೊಡಲು ಹೇಳಿ' ಎಂದು ಹೇಳುತ್ತಿದ್ದರು. ಜಿ ಹಾ ಜಿ ಅವರು ಹತ್ತಿರ ಹೋಗಿ ನೋಡಿದರೆ, ಅವರಿಗೆ ಬೆಳಿಗ್ಗೆ ಸಿಕ್ಕಿದ ಆಸಾಮಿ. ಆಹಾ, ತಂದೆಯಂತೆಯೇ ಮಗ, ಇಬ್ಬರೂ ಸರಿಯಾಗಿದ್ದಾರೆ, ಇಂತಹವರ ಬಗ್ಗೆ ದೂರು ಹೇಳಿದ್ದು ನನ್ನದೇ ತಪ್ಪು ಎಂದುಕೊಂಡರು. ಆ ಮನುಷ್ಯ ಜಿ ಹಾ ಜಿ ಅಲ್ಲಿಗೆ ಹೋದಾಗ, ಅವರನ್ನು  ಕಂಡು, 'ಇವನಾ, ಬೆಳಿಗ್ಗೆಯೇ ನಾನು ಭೇಟಿ ಮಾಡಿದ್ದೆ' ಎಂದು ಹೇಳಿ, 'ಏನಯ್ಯಾ ನಮ್ಮ ಹುಡುಗ ನಿನಗೆ ಅಷ್ಟೊಂದು ತೊಂದರೆ ಕೊಡುತ್ತಾನಾ? ನಿನಗೆ ಅಂತವರನ್ನು ನೋಡಿಕೊಳ್ಳಲು ಆಗದಿದ್ದರೆ ಮೇಷ್ಟ್ರು ಏಕಾದೆ? ನಿನ್ನ ಕೆಲಸನೇ ಅದಲ್ಲವಾ? ಎಂದು ಜಿ ಹಾ ಜಿ ಅವರಿಗೇ ಬುದ್ಧಿ ಹೇಳಿದ.
ಜಿ ಹಾ ಜಿ ಅವರು, 'ನೋಡಿ ಮಕ್ಕಳಿಗೆ ಸ್ವಲ್ಪ ನಡತೆ ಇರಬೇಕು, ತರಗತಿಗೆ ಸರಿಯಾಗಿ ಬರಬೇಕು, ಕೊಡುವ ಚಟುವಟಿಕೆಗಳನ್ನು ಸಮಯಕ್ಕೆ ಸರಿಯಾಗಿ ಕೊಡಬೇಕು' ಇವೆಲ್ಲವನ್ನೂ ಮಾಡದಿದ್ದರೆ, ನಾವೇನು ಮಾಡಲಾಗುತ್ತದೆ ಎಂದರು. 'ಸುಮ್ಮನಿರಯ್ಯ, ನನ್ನ ಮಗ ಎಲ್ಲಾ ಹೇಳಿದ್ದಾನೆ' ಎಂದು ಮಗನೇ ಸರಿ ಎಂದು ವಾದಿಸಿದ. ಒಂದಷ್ಟು ಮಾತುಕತೆ ನಡೆಯಿತು. ಆದರೆ ಅಲ್ಲಿ ಜಿ ಹಾ ಜಿ ಅವರಿಗೆ ಸ್ವಲ್ಪವೂ ಸಹಕಾರವಿರಲಿಲ್ಲ. ಸುಮ್ಮನೆ ಮಾತನಾಡದೆ ಎದ್ದು ಬಂದು ಬಿಟ್ಟರು.
ಹೀಗೆಯೇ ಇನ್ನೊಬ್ಬ ಹುಡುಗನ ತಂದೆಯೂ ಬಂದಿದ್ದರು. ಅವರಂತೂ 'ಸ್ವಾಮಿ, ನಾವು ಹುಡುಗನನ್ನು ಕಾಲೇಜಿಗೆ ಹಾಕಿದ್ದೇವೆ, ಅವನನ್ನು ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ, ಸರಿಯಾಗಿ ನಡೆದುಕೊಳ್ಳದಿದ್ದರೆ ಬೂಟು ಕಾಲಲ್ಲಿ ಒದ್ದು ಬಿಡಿ' ಎಂದು ಬುದ್ಧಿವಾದ ಹೇಳಿದರು
ಹೀಗೆಯೇ ಒಬ್ಬ ಹುಡುಗನ ತಾಯಿಯಂತೂ, ನನ್ನ ಮಗನಿಗೆ ನಾನು ಸಾಕಷ್ಟು ಹೇಳಿದ್ದೇನೆ, ನಾನು ಹೆಚ್ಚು ಮಾತನಾಡಿದರೆ 'ಹುಟ್ಟಿಸಿದ್ದು ನೀವು, ನೋಡಿಕೊಳ್ಳುವುದು ನಿಮ್ಮ ಕರ್ತವ್ಯ" ಎನ್ನುತ್ತಾನೆ. ನೀವೇ ಅವನನ್ನು ಸರಿದಾರಿಗೆ ತರಬೇಕು ಎಂದು ಅಳಲು ಶುರು ಮಾಡಿದರು.
ಇನ್ನೊಂದು ಹುಡುಗಿಯ ಬಗ್ಗೆ ದೂರಿದ್ದುದು ಅವಳ ಉಡುಗೆ ತೊಡುಗೆಯ ಬಗ್ಗೆ. ಸಿನಿಮಾ ನಟಿಯರನ್ನು ಮೀರಿಸುವಂತೆ ಬಟ್ಟೆ ಧರಿಸುತ್ತಾಳೆ, ಎಲ್ಲರ ಗಮನ ಸೆಳೆಯುವುದೇ ಅವಳ ಗುರಿ. ಇದನ್ನು ಅವಳ ತಂದೆ ತಾಯಿಯರಿಗೆ ಹೇಳಿದರೆ, ಅವಳ ತಾಯಿ 'ನಮಗಂತೂ ನಮಗೆ ಬೇಕಾದಂತೆ ಇರಲು ನಮ್ಮ ಅಪ್ಪ ಅಮ್ಮ ಬಿಡಲಿಲ್ಲ, ನಿಮಗೇಕೆ ಅವಳ ಬಗ್ಗೆ ಹೊಟ್ಟೆಕಿಚ್ಚು ' ಎಂದಳು. 'ಹೆಣ್ಣು ಮಕ್ಕಳು, ಬಟ್ಟೆ ಸರಿಯಾಗಿ ಧರಿಸಬೇಕಲ್ಲವೇ' ಎಂದರೆ 'ಬಟ್ಟೆ ಹೇಗೆ ಧರಿಸಬೇಕು ಎಂದು ಎಲ್ಲಿ ಹೇಳಿದೆ, ನನಗೆ ಆ ಪಟ್ಟಿ ಕೊಡಿ' ಎಂದಳು. ಆಗ ಅವಳ ತಂದೆ, 'ಮೊದಲು ಈ ನನ್ನ ಹೆಂಡತಿಗೆ ಬುದ್ಧಿ ಹೇಳಿ, ನಾನು ಎಷ್ಟು ಹೇಳಿದರೂ ಮಗಳಿಗೆ ಆ ರೀತಿಯ ಬಟ್ಟೆ ತೊದಲು ಇವಳೆ ಪ್ರಚೋದಿಸುತ್ತಾಳೆ' ಎಂದು ದೂರಿದರು. ಜಿ ಹಾ ಜಿ ಅವರ ಎದುರಿಗೆ ಗಂಡ ಹೆಂಡತಿಯ ಜಗಳ ಪ್ರಾರಂಭವಾಯಿತು.
ಅಂತೂ ಅಂದುಜಿ ಹಾ ಜಿ ಅವರಿಗೆ ಇಂತಹ ಮಕ್ಕಳ, ಅವರ ತಂದೆ ತಾಯಿಯರ ವಾದಗಳನ್ನು ಕೇಳುವುದರಲ್ಲೇ ಸಮಯ ಕಳೆದು ಹೋಯಿತು. ಅವರಿಗೆ ಮುಖ್ಯವಾಗಿ ಅನ್ನಿಸಿದ್ದು, ಮನೆಯಲ್ಲಿ ಒಂದೇ ಮಕ್ಕಳನ್ನು ಹೆತ್ತು ಅವರನ್ನು ಅತಿ ಮುದ್ದಿನಿಂದ ಬೆಳೆಸಿ ಹಾಳು ಮಾಡಿರುವುದು ಅವರ ತಂದೆ ತಾಯಿಗಳೇ  ಅನ್ನಿಸಿತು. ಅವರಿಗೆ ನಡತೆಯನ್ನೂ ಕಲಿಸದೇ, ಕೇಳಿದ್ದನ್ನೆಲ್ಲಾ ಕೊಡಿಸಿ ಹಾಳು ಮಾಡಿದ್ದರು. ಅವರನ್ನು ತಿದ್ದುವ ಕೆಲಸ ಅಧ್ಯಾಪಕರದೇ ಎನ್ನುವಂತೆ ಮಾತನಾಡುತ್ತಿದ್ದರು. ಇನ್ನು ಕೆಲವರು ತಮ್ಮ ಅಸಹಾಯಕತೆಯನ್ನು ತೋಡಿಕೊಂಡು ಅಧ್ಯಾಪಕರಿಗೇ ಜವಾಬ್ದಾರಿ ವಹಿಸಿಕೊಳ್ಳಲು ಹೇಳುತ್ತಿದ್ದರು.
ಇಂದಿನ ಈ ಮಕ್ಕಳು, ಅವರ ತಂದೆ ತಾಯಿಗಳು, ಅಧ್ಯಾಪಕರು ಅಬ್ಬಬ್ಬಾ ಒಬ್ಬರದು ಒಂದೊಂದು ರೀತಿ. ಒಟ್ಟಿನಲ್ಲಿ ನಡತೆ ಎಂಬುದು ಬರುಬರುತ್ತಾ ಕಾಣೆಯಾಗುತ್ತಿದೆ ಎಂದು ಜಿ ಹಾ ಜಿ ಅವರಿಗೆ ಅನ್ನಿಸಿತು. ಕೆಲವು ಬಾರಿ ಅಧ್ಯಾಪಕರದೂ ತಪ್ಪಿರುವ ಸಾಧ್ಯತೆ ಇರುತ್ತಿತ್ತು. ಏನೇ ಆಗಲಿ ಇದೊಂದು ಸೂಕ್ಷ್ಮವಾದ ಸಮಸ್ಯೆ, ಬಗೆಹರಿಸಲು ತಂದೆ, ತಾಯಿ, ಅಧ್ಯಾಪಕರೂ ಸೇರಿ ಮಾತನಾಡಿ ಒಮ್ಮತಕ್ಕೆ ಬರಬೇಕು ಇಲ್ಲದಿದ್ದಲ್ಲಿ ಇದು ಬಗೆಹರಿಯದ ಸಮಸ್ಯೆ ಆಗುತ್ತದೆ ಎಂದು ಜಿ ಹಾ ಜಿ ಅಂದುಕೊಂಡರು. ಮುಖ್ಯವಾಗಿ ಇದನ್ನು ಮನೆಯಲ್ಲಿಯೇ ಕಲಿಸಬೇಕು, ಮನೆಯೇ ಮೊದಲ ಪಾಠಶಾಲೆ, ದೊಡ್ಡವರಾದ ಮೇಲೆ ಹೇಳಿದರೆ ತೊಂದರೆಗಳು ಹೆಚ್ಚುತ್ತವೆಯೇ ಹೊರತು ಬಗೆಹರಿಯುವುದಿಲ್ಲ. ಜೊತೆಗೆ ಹದಿವಯಸ್ಸಿನ ಸಮಸ್ಯೆಗಳೂ ಸೇರಿ ಬಿಟ್ಟರೆ ಇನ್ನೂ ಗೋಜಲು ಗೋಜಲು ಆಗಿಬಿಡುತ್ತದೆ ಅಲ್ಲವೇ ಎಂದು ನೊಂದುಕೊಂಡರು.
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ಎಂಬ ಗಾದೆ ಜಿ ಹಾ ಜಿ ಅವರಿಗೆ  ನೆನಪಿಗೆ ಬಂದು, ಅಧ್ಯಾಪಕನಾಗಿ ನನ್ನ ಮೇಲೆ ಎಷ್ಟೊಂದು ಜವಾಬ್ದಾರಿಗಳು, ಏನಾದರೂ ನನ್ನಿಂದ ಸಾಧ್ಯವಾದಷ್ಟು ಕೆಲಸವನ್ನು ಮಾಡಬೇಕು ಎಂದುಕೊಂಡು ತಮ್ಮ ಕೋಣೆಯ ಕಡೆಗೆ ಚಿಂತಿಸುತ್ತಾ ಹೊರಟರು. - ಜಗದೀಶ ಚಂದ್ರ



Saturday, April 18, 2020

ಮದರ್ಟಂಗೋ, ತಾಯಿನುಡಿಯೊ - ಘಟನೆ

ಮದರ್ಟಂಗೋ, ತಾಯಿನುಡಿಯೊ 
ಗೆಳೆಯ ಹೇಳಿದ್ದು - ಪಕ್ಕದ ಮನೆಗೆ ಯಾರೋ ಹೊಸಬರು ಬಂದಿದ್ದರು. ಆ ಮನೆಯಲ್ಲಿ ಒಂದು ಪುಟ್ಟ ಹುಡುಗ ಓಡಾಡುತ್ತಿದ್ದ. ನಮ್ಮ ಪುಟ್ಟನಿಗೆ ಒಬ್ಬ ಗೆಳೆಯ ಸಿಗುತ್ತಾನೆ ಎಂದು ಸಂತೋಷ. ನನ್ನ ಅಮ್ಮ, 'ಯಾರೋ ಹೊಸಬರು ಬಂದಿರುವುದು, ಎಲ್ಲಿಯವರೋ' ಎಂದು ನನ್ನನ್ನು ಕೇಳಿದರು. ನನಗೇನು ಗೊತ್ತಿರಲಿಲ್ಲ. ಉತ್ತರ ಹೇಳುವ ಮೊದಲೇ ನಮ್ಮ ಪುಟ್ಟ, 'ಅವರು ಕನ್ನಡ ಮಾತನಾಡುತ್ತಾರೆ, ಅವರ ಮನೆಯಲ್ಲಿ ಒಬ್ಬ ಹುಡುಗ ಇದ್ದಾನೆ' ಎಂದ. 'ಅವರು ಕನ್ನಡ ಮಾತನಾಡುತ್ತಾರೆ ಎಂದು ನಿನಗೆ ಹೇಗೆ ಗೊತ್ತು' ಎಂದರೆ, 'ಅವರು ಮನೆಯಲ್ಲಿ ಇಂಗ್ಲಿಷ್ ಭಾಷೆಯನ್ನೇ ಮಾತನಾಡುತ್ತಾರೆ ಅದರಿಂದ ಅವರು ಕನ್ನಡಿಗರು' ಎಂದ. ಇಂಗ್ಲಿಷ್ ಮಾತನಾಡಿದರೆ ಕನ್ನಡಿಗರು ಹೇಗಾಗುತ್ತಾರೆ? ಎಂದೆ. 'ಕನ್ನಡ ಮದರ್ ಟಂಗ್ ಇರುವವರೇ ಹಾಗೆ ಇಂಗ್ಲಿಷ್ನಲ್ಲಿ ಮಾತನಾಡುವುವುದು, ನನ್ನ ಗೆಳೆಯರ ಅನೇಕ ಮನೆಯಲ್ಲಿ ಅವರೆಲ್ಲ ಕನ್ನಡ ಗೊತ್ತಿದ್ದರೂ ಮನೆಯಲ್ಲಿ ಇಂಗ್ಲಿಷ್ ಭಾಷೆಯನ್ನೇ ಮಾತನಾಡುವುದು' ಎಂದ. ನನಗೆ ನಾಚಿಕೆಯಿಂದ ತಲೆ ತಗ್ಗಿಸುವಂತಾಯಿತು. ನನ್ನ ಅಮ್ಮ ನನ್ನನ್ನು ನೋಡಿ ನಕ್ಕಳು, ಆ ನಗುವಿನಲ್ಲಿ ವ್ಯಂಗ್ಯ ಇಣುಕುತ್ತಿತ್ತು, ಮಾತೃಭಾಷೆಯನ್ನು ಮರೆತೆಯಾ ಎಂಬ ಪ್ರಶ್ನೆ ಆ ನಗುವಿನಲ್ಲಿತ್ತು. ನನ್ನ ಹೆಂಡತಿಯ ಇಂಗ್ಲಿಷ್ ಅಭಿಮಾನದಿಂದ ನಾನೂ ಸಹಾ ಮಗನೊಂದಿಗೆ ಇಂಗ್ಲಿಷ್ನಲ್ಲೇ ಸಂವಹಿಸುತ್ತಿದ್ದೆ. 'ಈಗ ಮಗನೊಂದಿಗೆ ನಾನು ಕನ್ನಡದಲ್ಲೇ, ನನ್ನ ಇಂಗ್ಲಿಷ್ ಅಭಿಮಾನಿ ಪತ್ನಿ ಇಂಗ್ಲಿಷ್ನಲ್ಲೇ ಸಂವಹಿಸುತ್ತಿದ್ದೇವೆ, ಪುಟ್ಟ ಈಗ ನನಗೆ ಹೆಚ್ಚು ಆತ್ಮೀಯನಾಗಿದ್ದಾನೆ' ಎಂದ ನನ್ನ ಗೆಳೆಯ.
ಜಗದೀಶ ಚಂದ್ರ 

ವಿಶಾಲ ಮನೋಭಾವ

ವಿಶಾಲ ಮನೋಭಾವ 

ರಾಜಮ್ಮ ಸೊಸೆಯ ಜೊತೆ ಸ್ವಲ್ಪ ಮಾತನಾಡುತ್ತಿದ್ದಂತೆ ಅವರ ರಕ್ತದೊತ್ತಡ ಏರಿತು. ಸುಮ್ಮನೆ ನನ್ನನ್ನು ಕರೆಯ ಬೇಡ, ನಾನು ಎಲ್ಲಿಗೂ ಬರುವುದಿಲ್ಲ ಎಂದು ಫೋನ್ ಕುಕ್ಕಿದರು. ಇದನ್ನು ಗಮನಿಸಿದ ನಾಣಯ್ಯ 'ಶುರು ಆಯ್ತಾ ಅತ್ತೆ ಸೊಸೆ ಜಗಳ' ಎಂದರು. ಅದಕ್ಕೆ ಕೋಪದಿಂದ ಧುಮುಗುಡುತ್ತ ರಾಜಮ್ಮ, 'ನಿಮಗೇನು ಗೊತ್ತು ನಮ್ಮ ಕಷ್ಟ' ಎಂದು ಬುಸುಗುಡುತ್ತ ಅಡುಗೆ ಮನೆಗೆ ನಡೆದು ತಮ್ಮ ಸಿಟ್ಟನ್ನು ಅಲ್ಲಿದ್ದ ಪಾತ್ರೆಗಳ ಮೇಲೆ ತೋರಿಸಿಕೊಂಡರು. 
ರಾಜಮ್ಮನ ಸೊಸೆ ರಾಧಾ ಒಳ್ಳೆಯ ಹುಡುಗಿಯೇ. ರಾಜಮ್ಮನೂ ಒಳ್ಳೆಯವಳೇ. ಆದರೆ ಸೊಸೆ ತಾನು ಮಾಡಿದ್ದು ಸರಿ ಎಂದುಕೊಂಡರೆ ಅತ್ತೆ ತಾನು ಮಾಡಿದ್ದು ಸರಿ ಎಂದು ವಾದಿಸುತ್ತಾಳೆ. ಅವರವರ ಮೂಗಿನ ನೇರಕ್ಕೆ ಇಬ್ಬರೂ ಸರಿಯೇ, ಹೊಂದಾಣಿಕೆ ಇರಲಿಲ್ಲ ಅಷ್ಟೇ.
ಈ ಜಗಳವೇ ಬೇಡ ಎಂದು ಸೊಸೆ ಬೇರೆ ಮನೆ ಮಾಡಿ ಅಲ್ಲಿ ಸುಖವಾಗಿದ್ದು ಆಗಾಗ್ಗೆ ರಾಜಮ್ಮನಿಗೆ ಇಷ್ಟ ಇಲ್ಲದಿದ್ದರೂ ಮನೆಯಿಂದ ಏನಾದರು ತಂದು ಅವರಿಗೆ ಕೊಟ್ಟು ಸಮಾಧಾನದಿಂದ ಅತ್ತೆಯನ್ನು ಮಾತನಾಡಿಸುತ್ತಾಳೆ. ಆದರೆ ರಾಜಮ್ಮನಿಗೆ ಈ ಸೊಸೆ, ಮಗನಿಂದ ಬೇರ್ಪಡಿಸಿದ ರಾಕ್ಷಸಿಯಾಗಿ ಕಾಣುತ್ತಾಳೆ. ಆದರೂ ರಾಧಾ ನೇರವಾಗಿಯೇ ಅತ್ತೆ 'ನಿಮಗೆ ನಿಮ್ಮದೇ ಆದ ಕೆಲವು ಅನಿಸಿಕೆಗಳಿವೆ, ಹಾಗೆಯೆ ನನ್ನದೂ. ಸುಮ್ಮನೆ ಜಗಳವೇಕೆ ಹೊಂದುಕೊಂಡು ಇರೋಣ' ಎಂದರೂ ರಾಜಮ್ಮ ಒಪ್ಪುವುದಿಲ್ಲ. ಆಗ ರಾಧಾ, 'ನೀವು ತಾಯಿ ಇದ್ದ ಹಾಗೆ, ನಿಮ್ಮಿಂದ ಕಲಿಯುವುದು ಬೇಕಾದಷ್ಟಿದೆ, ಆದರೆ ನನಗೆ ನನ್ನದೇ ಆದ ಕೆಲವು ತೊಂದರೆಗಳಿವೆ, ಹೀಗಾಗಿ ನೀವು ಹೇಳಿದಂತೆ ಕೇಳಲಾಗುವುದಿಲ್ಲ. ಉದಾಹರಣೆಗೆ ಮನೆ ಮಂದಿ ಎಲ್ಲರೂ ಒಂದು ಬಾರಿ ಮಾಡಿದ  ಅಡಿಗೆ ತಿನ್ನಬೇಕೆದು ಎಂದು ನನ್ನ ಅನಿಸಿಕೆ, ನೀವು ಒಬ್ಬರಿಗೂ ಅವರು ಬಂದಾಗ ಬಿಸಿ ಬಿಸಿ ಅಡುಗೆ ಮಾಡು, ಫ್ರಿಜ್ ನಲ್ಲಿ ಅಡುಗೆ ಇಡಬಾರದು ಎಂದೆಲ್ಲ ಹೇಳಿದರೆ ಅದು ನನಗೆ ಸರಿಹೋಗುವುದಿಲ್ಲ. ನಿಮ್ಮನ್ನು ಕಂಡರೆ ನನಗೆ ಖಂಡಿತ ದ್ವೇಷ ಇಲ್ಲ, ಆದರೆ ಈ ಕೆಲವು ವಿಷಯಗಳಲ್ಲಿ ನೀವು ಹೇಳಿದ್ದನ್ನು ಒಪ್ಪಲಾಗುವುದಿಲ್ಲ, ಅದನ್ನೇ ದೊಡ್ಡದು ಮಾಡಬೇಡಿ', ಹೊಂದಿಕೊಂಡು ಹೋಗೋಣ ಎನ್ನುತ್ತಾಳೆ.
ಆಗ ನಾಣಯ್ಯ, ಹೌದು, ರಾಧಾ ಹೇಳುವುದೂ ಸರಿಯೇ, ಎಲ್ಲರೂ ಕುಳಿತು ನಾವು ಏನೆಲ್ಲಾ ಮಾಡಬಹುದು ಎಂದು ಲೆಕ್ಕ ಹಾಕೋಣ ಎಲ್ಲವೂ ಸರಿ ಹೋಗುತ್ತದೆ ಎನ್ನುತ್ತಾರೆ. ಅವರವರನ್ನು ಅವರವರ ಪಾಡಿಗೆ ಬಿಟ್ಟು ಬಿಟ್ಟರೆ ಎಲ್ಲವೂ ಸರಿಹೋಗುತ್ತದೆ, ವಿಶಾಲ ಮನೋಭಾವ ಇರಬೇಕು, ಸಂಕುಚಿತ ಬುದ್ಧಿಯೇ ಈ ಜಗಳಗಳಿಗೆ ಮೂಲ ಕಾರಣ ಎನ್ನುತ್ತಾರೆ. ರಾಜಮ್ಮ ಗಂಡನನ್ನು ನೀವು ಸೊಸೆಯ ಪರವಾಗಿ ವಹಿಸಿಕೊಂಡು ಬರಬೇಡಿ ಎಂದು ಮೂದಲಿಸುತ್ತಾರೆ. ಆಗ ನಾಣಯ್ಯ 'ನಿನ್ನ ಮಗಳು ಇಂತಹ ತಪ್ಪುಗಳನ್ನು ಮಾಡಿದಾಗ ಅವಳು ಮಾಡಿದ್ದೂ ಸರಿ, ಅದೇ ಕೆಲಸ ಸೊಸೆ ಮಾಡಿದರೆ ಅದೇಕೆ ಈ ಪರಿ ಸಿಟ್ಟು' ಎಂದರೆ ಕಲಹ ತಾರಕಕ್ಕೇರುತ್ತದೆ.
ಈಗ ನಾಣಯ್ಯನವರು ಒಬ್ಬರು ಹಿರಿಯ ಸಲಹೆಕಾರರನ್ನು ಹಿಡಿದು ಅವರಬಳಿ ಎಲ್ಲವನ್ನೂ ಹೇಳಿದ್ದಾರೆ. ಅದಕ್ಕೆ ಅವರು 'ನಿಮ್ಮ ಪತ್ನಿಯನ್ನು ನನ್ನ ಬಳಿ ಕಳಿಸಿ, ನಾನು ಅವರಿಗೆ ತಿಳಿ ಹೇಳುತ್ತೇನೆ' ಎಂದಿದ್ದಾರೆ. ರಾಜಮ್ಮ ಆ ಸಲಹೆಕಾರರ ಬಳಿ ಹೋದಾಗ 'ನೋಡಿ ಅಮ್ಮ ನೀವಂದುಕೊಂಡಂತೆ ನಿಮ್ಮ ಸೊಸೆ ಸರಿಹೋಗಬೇಕು ಎಂದರೆ ನಾನು ಹೇಳಿದಂತೆ ನೀವು ಅವಳನ್ನು ನಿಮ್ಮ ಮಗಳು ಎಂಬಂತೆ ಒಂದು ತಿಂಗಳು ನಾಟಕ ಮಾಡಿ, ಅವಳು ಏನು ಮಾಡಿದರೂ ಸಿಡುಕದೆ ಒಂದೆರೆಡು ಒಳ್ಳೆಯ ಮಾತುಗಳನ್ನು ಅಡಿ. ನಂತರ ಅವಳೇ ನಿಮ್ಮ ಅಡಿಯಾಳಾಗಿ ಬಿದ್ದಿರುತ್ತಾಳೆ' ಎಂದರು. ರಾಜಮ್ಮ 'ಒಂದು ತಿಂಗಳು ತಾನೇ, ಅದರ ಮೇಲೆ ಒಂದು ನಿಮಿಷವೂ ಹೆಚ್ಚಾಗಬಾರದು' ಎಂದು ಹೇಳಿ ಮನೆಗೆ ಬಂದಳು.
ಆ ಒಂದು ತಿಂಗಳು ಸೊಸೆಯನ್ನು ಮನೆಗೆ ಕರೆದದ್ದೇನು, ತಾನು ಅವಳ ಮನೆಗೆ ಹೋದದ್ದೇನು, ಅವಳ ನುಡಿ ನಡೆಗಳನ್ನು ಹೊಗಳಿದ್ದೇನು ಇದೆಲ್ಲವನ್ನೂ ಕಂಡ ರಾಧಾಗೆ ಈ ಅತ್ತೆಗೆ ಏನೋ ಆಗಿರಬೇಕು ಎಂದು ಅನುಮಾನ ಬಂತು. ಮಾವನನ್ನು ಕೇಳಿದಾಗ ಅವರು, ಸುಮ್ಮನೆ ಪ್ರಶ್ನಿಸಬೇಡ, ಅವಳು ನಿನ್ನನ್ನು ಮಗಳಂತೆ ನೋಡುತ್ತಿದ್ದಾಳೆ, ನೀನು ಅವಳನ್ನು ಈ ಒಂದು ತಿಂಗಳು ತಾಯಿಯಂತೆ ನೋಡಿಬಿಡು. ಎಲ್ಲವೂ ಸರಿಹೋಗುತ್ತದೆ ಎಂದರು. ರಾಧೆಯು ಸಕಾರಾತ್ಮಕವಾಗಿ ಸ್ಪಂದಿಸಿದಳು. ಅಂತೂ ಒಂದು ತಿಂಗಳು ಅತ್ತೆ ಸೊಸೆ ತಾಯಿ ಮಗಳಂತೆ ಬಾಳಿದರು. ಒಂದು ತಿಂಗಳು ಮುಗಿಯಿತು. ಅವರು ಮತ್ತೆ ಅತ್ತೆ ಸೊಸೆಯಾಗಿ ಬಾಳಲಿಲ್ಲ ತಾಯಿ ಮಗಳಾಗಿಯೇ ಶಾಶ್ವತವಾಗಿ ಬಾಳಿದರು.
ನಾಣಯ್ಯ ಆ ಸಲಹೆಕಾರರ ಬಳಿ ಹೋಗಿ 'ನನ್ನ ಪತ್ನಿ ನಿಮ್ಮ ಬಳಿ ಬರುವುದಿಲ್ಲ, ಈಗ ಅವರಿಬ್ಬರೂ ತಾಯಿ ಮಗಳೇ ಆಗಿಬಿಟ್ಟಿದ್ದಾರೆ, ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು' ಎಂದರು. ಅದಕ್ಕೆ ಅವರು ನಾವೆಲ್ಲರೂ ಜೀವನ ನಡೆಸುತ್ತೇವೆ. ಆದರೆ ಒಬ್ಬೊಬ್ಬರದು ಒಂದೊಂದು ರೀತಿ. ಅವರವರಿಗೆ ಉತ್ತಮ ಅನ್ನಿಸಿದ ನೀತಿಗಳನ್ನು, ತತ್ವಗಳನ್ನು ಅಳವಡಿಸಿಕೊಂಡು ಜೀವನ ನಡೆಸುತ್ತಿರುತ್ತೇವೆ. ನಾವು ಅಂದುಕೊಂಡದ್ದೇ ಉತ್ತಮ ಎನ್ನುವುದು ತಪ್ಪು. ಇದಕ್ಕೆ ನಾವು ವಿಶಾಲವಾದ ಮನೋಭಾವದಿಂದ ನಡೆದುಕೊಂಡರೆ ಅದು ಉತ್ತಮ ಬಾಳು ಎನ್ನಿಸಿಕೊಳ್ಳುತ್ತದೆ. ಬೇರೆಯವರು ಸಹ ಅವರಿಗೆ ತಿಳಿದ ಮಟ್ಟಿಗೆ ಉತ್ತಮ ಅನ್ನಿಸಿಕೊಂಡಂಥ ಬಾಳನ್ನು ನಡೆಸಲು ಬಿಡಬೇಕು. ನಾನು ನಡೆಸುತ್ತಿರುವ ಜೀವನವೇ ಉತ್ತಮ ಎಂಬ ಅಹಂಭಾವದಿಂದ ದೂರವಿರಬೇಕು. ನಮ್ಮದು ನಿಜವಾಗಿಯೂ ಉತ್ತಮ ಜೀವನವಾದರೆ ಇತರರೇ ನಮ್ಮನ್ನು ಅನುಕರಿಸುತ್ತಾರೆ ಎಂಬ ಮನೋಭಾವ ಹೊಂದಿರಬೇಕು. ನಾನು ನಿಮ್ಮ ಪತ್ನಿಯ ಕೈಲಿ ಮಾಡಿಸಿದ್ದು ಇಷ್ಟೇ ಎಂದರು. 
ಜಗದೀಶ ಚಂದ್ರ 

ಜೀವನಕ್ಕೊಂದು ಉದ್ದೇಶ

ಜೀವನಕ್ಕೊಂದು ಉದ್ದೇಶ 

ಶ್ಯಾಮಲಾ ಪ್ರಖ್ಯಾತವಾದ ನಟಿ. ಚಂದನ ಅವಳ ಆಪ್ತ ಗೆಳತಿ, ಇಬ್ಬರ ಜೀವನ ಶೈಲಿಗಳು ಅಜಗಜಾಂತರ. ಶ್ಯಾಮಲಾ ಅತಿ ಶ್ರೀಮಂತಿಕೆಯ ಜೀವನ ನಡೆಸುತ್ತಿದ್ದಾರೆ, ಚಂದನ ಬಹಳ ಸರಳ ಜೀವಿ. ಆದರೂ ಇಬ್ಬರಿಗೂ ಅದೇನೋ ಸೆಳೆತ. ಶಾಲಾದಿನಗಳಿಂದಲೂ ಗೆಳತಿಯರು. ಅದು ಹಾಗೆಯೆ ಮುಂದುವರೆದಿದೆ. ತಪ್ಪು ಒಪ್ಪುಗಳನ್ನು ಯಾವುದೇ ಮುಜುಗರಗಳಿಲ್ಲದೆ ಹೇಳುತ್ತಾರೆ, ಹಂಚಿಕೊಳ್ಳುತ್ತಾರೆ, ಏನೇ ಆದರೂ ಬೇಸರ ಮಾಡಿಕೊಳ್ಳುವುದಿಲ್ಲ. 
ಶ್ಯಾಮಲಾ ಯಾವಾಗಲೂ ದುಡ್ಡು ದುಡ್ಡು ಎಂದು ಹಲುಬಿದರೆ ಚಂದನ 'ಅದೇಕೆ ಹಾಗೆ ಧನ ಪಿಶಾಚಿ ಹಿಡಿದವರಂತೆ ಆಡುತ್ತೀಯೆ?' ಎಂದು ಬಯ್ಯುತ್ತಾಳೆ. ಅದಕ್ಕೆ ಶ್ಯಾಮಲಾ, 'ಮತ್ತೆ ನಿನ್ನಂತೆ ಭಿಕಾರಿಯಾ ತರಹ ಇರಬೇಕಾ? ಒಂದಷ್ಟು ಜೊತೆ ಬಟ್ಟೆ ಬರೆ ಇಟ್ಟುಕೊಂಡು ಅದೇನು ಜೀವನ ನಡೆಸುತ್ತೀಯೋ' ಎಂದು ಹಂಗಿಸುತ್ತಾಳೆ. ಚಂದನ ಆಗ, 'ಹಾಗೆಯೆ ಇರಬೇಕೆ' ಎಂದು ಅಬ್ದುಲ್ ಕಲಾಂ, ಲಾಲ್ ಬಹದ್ದೂರ್ ಶಾಸ್ತ್ರೀ ಅವರನ್ನು ಕೋಟ್ ಮಾಡಿದರೆ ಶ್ಯಾಮಲಾ ಆಗ, ಮುಖೇಶ್ ಅಂಬಾನಿ, ಜಯಲಲಿತಾ, ಬಾಲಿವುಡ್ ಸಿನಿಮಾ ನಟ ನಟಿಯರನ್ನು ಹೆಸರಿಸುತ್ತಾಳೆ. ಕಡೆಗೆ ಶ್ಯಾಮಲಾ ಶ್ಯಾಮಲೆಯೇ, ಚಂದನ ಚಂದನಾನೆ. 
ಚಂದನ, ಮದುವೆ ಬೇಡ ಎಂದು ನಿರ್ಧರಿಸಿ ಒಬ್ಬಳೇ ಒಂದು ಸಣ್ಣ ಮನೆಯಲ್ಲಿದ್ದಾಳೆ. ಅದು ಶ್ಯಾಮಲಾಳ ಭವ್ಯವಾದ ಅರಮನೆಯ ಕಾಂಪೌಂಡ್ನಲ್ಲೆ ಇದೆ. ಶ್ಯಾಮಲಾಳ ಪರಿಚಿತರೊಬ್ಬರ ಕಂಪೆನಿಯಲ್ಲಿ ಸಣ್ಣ ಕೆಲಸದಲ್ಲಿದ್ದಾಳೆ. ಸಾಧ್ಯವಾದಾಗಲೆಲ್ಲ ರಾಮಕೃಷ್ಣಆಶ್ರಮಕ್ಕೆ ಹೋಗಿಬರುತ್ತಾಳೆ. ಬಿಡುವಿನವೇಳೆಯಲ್ಲಿ ಶ್ಯಾಮಲಾಳೇ ಇವಳ ಮನೆಗೆ ಬಂದು ಕುಳಿತು ಹರಟುತ್ತಾಳೆ. 
ಶ್ಯಾಮಲಾ ನೋಡಲು ಶ್ಯಾಮಲೆಯೇ ಆಗಿದ್ದರೂ ಸುಂದರಿ. ಹೀಗಾಗಿ ಇಂದು ಪ್ರಸಿದ್ಧ ನಟಿ ಆಗಿದ್ದಾಳೆ. ಹೆಸರು, ದುಡ್ಡು ಅಧಿಕಾರ ಇವೆಲ್ಲವೂ ಅವಳಿಗೆ ಬೇಕು. ಅದಕ್ಕಾಗಿ ಏನು ಮಾಡಲೂ ತಯಾರಿ. ಮದುವೆ ಮಾಡಿಕೊಳ್ಳಲು ಇಷ್ಟವಿದ್ದರೂ ಅವಳಿಗೆ ಬೇಕಾದಂತಹ ಹುಡುಗ ಇನ್ನೂ ಸಿಕ್ಕಿಲ್ಲ. ಇನ್ನೂ ಹುಟ್ಟಿಲ್ಲ ಎಂದು ಚಂದನಾಳ ಅನಿಸಿಕೆ. ಜೊತೆಗೆ ಸೌಂದರ್ಯವಿದ್ದಾಗ ಚೆನ್ನಾಗಿ ಸಂಪಾದಿಸಿಬಿಡಬೇಕು, ನಂತರ ಹೇಗೋ ಏನೋ ಎಂದು ದುಡಿಯುತ್ತಾಳೆ. ಒಳಗೊಳಗೇ ಅವಳಿಗೆ ಏನೋ ಭಯ, ಅದನ್ನು ತೋರಿಸಿಕೊಳ್ಳುವುದಿಲ್ಲವಾದರೂ ಅದು ಚಂದನಾಳಿಗೆ ಗೊತ್ತಾಗುತ್ತದೆ. ಚಂದನ ಅದಕ್ಕೆ ಬೈದರೂ, ಇವಳು ತಲೆಗೆ ಹಾಕಿಕೊಳ್ಳುವುದಿಲ್ಲ. ದುಡ್ಡಿದ್ದವನೇ ದೊಡ್ಡಪ್ಪ ಕಣೇ ಎಂದು ಚಂದನಳನ್ನೇ ಮೂದಲಿಸುತ್ತಾಳೆ. ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಾಳೆ. ಬೇರೆಯವರ ಎದುರಿಗೆ ತೋರ್ಪಡಿಸಿಕೊಳ್ಳಲು ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಾಳೆ. ಜೀವನ ಕೃತಕವಾಗಿದೆ, ಮಾನಸಿಕವಾಗಿ ಸುಖವಾಗಿಲ್ಲ. ಜೊತೆಗೆ ಮದುವೆಯ ವಿಷಯದಲ್ಲೂ ಅವಳಿಗೆ ಒಂದು ರೀತಿಯ ಭಯ ಮನೆಮಾಡಿದೆ. ಸೆಲೆಬ್ರಿಟಿ ಆಗಿರುವುದರಿಂದ ಅವಳು ಪ್ರಕೃತಿದತ್ತವಾದ ಜೀವನದಿಂದ ದೂರವಾಗಿದ್ದಾಳೆ. ಹೀಗಾಗಿಯೇ ಅವಳು ಚಂದನಾಳ ಮನೆಗೆ ತಾನೇ ಹೋಗುವುದು. ಅಲ್ಲಿ ಹೋದಾಗ ಮಾತ್ರ ಅವಳು ಶ್ರೀ ಸಾಮಾನ್ಯಳಂತಿರುತ್ತಾಳೆ. ಬೇರೆ ಎಲ್ಲೇ ಹೋದರೂ ಎಲ್ಲವೂ ಕೃತಕ. ಅವಳ ಬಟ್ಟೆ, ಬರೆ ಚಪ್ಪಲಿ ಆಭರಣಗಳು ಇವೆಲ್ಲವನ್ನೂ ಒಂದು ಅಂಗಡಿ ಮಾಡಬಹುದು ಎಂದು ಚಂದನ ಹೇಳುತ್ತಿರುತ್ತಾಳೆ. ಒಟ್ಟಿನಲ್ಲಿ ಶ್ಯಾಮಲಾಳಿಗೆ ಯಾರಮೇಲೂ ನಂಬಿಕೆ ಇಲ್ಲ, ಪುರುಷರೆಲ್ಲರೂ ಕೆಟ್ಟವರು ಎಂಬ ದ್ವೇಷ, ಇವುಗಳಿಂದ ಅವಳಿಗೆ ಉತ್ಸಾಹ, ನೆಮ್ಮದಿ ಯಾವುದೂ ಇಲ್ಲ. ನೋಡಿದವರಿಗೆ ಆಹಾ ಎಂತಹ ಶ್ರೀಮಂತೆ, ಎಲ್ಲಕ್ಕೂ ಆಳುಕಾಳು, ಎಂದು ಹೊಟ್ಟೆಕಿಚ್ಚು ಪಡುವಂತೆ ತೋರ್ಪಡಿಸಿಕೊಳ್ಳುತ್ತಾಳೆ. ಆದರೆ ಅದರ ಒಳಗುಟ್ಟು ಅವಳಿಗೆ, ಚಂದನಾಳಿಗೆ ಮಾತ್ರ ಗೊತ್ತು. ಇದಕ್ಕೆಂದು ಯಾರ್ಯಾರೋ ಸ್ವಾಮಿಗಳ ಬಳಿ ಹೊಂದಳಾದರೂ ಅವರು ಇವಳ ದುಡ್ಡನ್ನು ಕಬಳಿಸಿದರೆ ಹೊರತು ಇವಳಿಗೆ ಕಿಂಚಿತ್ತಾದರೂ ಒಳಿತಾಗಲಿಲ್ಲ. 

ಚಂದನ ಒಬ್ಬ ಸ್ವಾಮಿಜಿಗಿಂತ ಹೆಚ್ಚು ತಿಳಿದುಕೊಂಡವಳಾದರೂ ಅವಳು ಎಂದು ತಾನೊಬ್ಬ ಸನ್ಯಾಸಿನಿ ಎಂದು ಹೇಳಿಕೊಳ್ಳಲಿಲ್ಲ, ಶ್ಯಾಮಲಳೂ ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಹೀಗಾಗಿ ಚಂದನ ಅನೇಕ ಬಾರಿ ಬುದ್ಧಿವಾದ ಹೇಳಿದರೂ ಅದು ಶ್ಯಾಮಲಳಿಗೆ ತಟ್ಟುತ್ತಲೇ ಇರಲಿಲ್ಲ. 
ಜೀವನದಲ್ಲಿ ಎಲ್ಲವೂ ಸುಖವಾಗಿಯೇ ನಡೆದುಬಿಟ್ಟರೆ ಹೇಗೆ? ಹಾಗೆಯೇ ಶ್ಯಾಮಲಾಳ ಜೀವನದಲ್ಲೂ ಕೆಲವು ದುಃಖದ ಕ್ಷಣಗಳು ಮೂಡಲಾರಂಭಿಸಿದವು. ಹೊಸನಟಿಯರು ಬಂದು ಇವಳ ಪಟ್ಟಕ್ಕೆ ಚ್ಯುತಿ ಬಂತು. ಬರು ಬರುತ್ತಾ ಹಣದ ಆದಾಯವೂ ನಿಂತು ಹೋಯಿತು. ನಂಬಿದ ಅವಳ ಕೆಲಸಗಾರರು ಅವಳಿಗೆ ಕೈಕೊಟ್ಟರು. ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಅವಳಿಗೆ ಕೊಂಚ ದುಃಖವನ್ನೂ ಸಹಿಸುವ ಶಕ್ತಿ ಇರಲಿಲ್ಲ. ಮಾನಸಿಕವಾಗಿ ಕುಗ್ಗಿದಳು, ಆತ್ಮಹತ್ಯೆಗೆ ಯತ್ನಿಸಿದಳು. ಚಂದನ ಇದ್ದುದರಿಂದ ಬಚಾವಾದಳು. ಆದರೆ ಅದಕ್ಕೂ ಚಂದನಳನ್ನೇ ಬಯ್ಯತೊಡಗಿದಳು. ಕಡೆಗೆ ಚಂದನಾಳೇ ಆಶ್ರಮದ ಸನ್ಯಾಸಿನಿಯೊಬ್ಬರಿಂದ ಹಿತವಚನ ಹೇಳಿಸಿ ಆತ್ಮಸ್ಥೈರ್ಯ ತುಂಬಿಸಿದಳು. ಸುಖ, ದುಃಖ ಎಲ್ಲವನ್ನು ಭರಿಸುವ ಶಕ್ತಿ ಬರುವಂತೆ ಮಾಡಿಸಿದಳು. ಜೀವನ ಪ್ರೀತಿ, ನಂಬಿಕೆ, ಭರವಸೆ, ಒಳನೋಟ ಇವುಗಳ ಮಹತ್ವವನ್ನು ಅರಿತ ಶ್ಯಾಮಲಾ ಈಗ ಸುಧಾರಿಸಿ ಒಳ್ಳೆಯ ಪಾತ್ರಗಳನ್ನು ಆಯ್ಕೆಮಾಡಿಕೊಂಡು ಅಭಿನಯಿಸಿ ಮತ್ತೆ ಪ್ರಸಿದ್ಧಳಾಗಿದ್ದಾಳೆ. ನಾಯಕಿ ಎಂದಲ್ಲವಾದರೂ ಅವಳು ಮಾಡಿದ ಚಿತ್ರಗಳೆಲ್ಲವೂ ಚೆನ್ನಾಗಿ ಓಡುತ್ತವೆ. ತಾನು ಗಳಿಸಿದ ಹಣವನ್ನು ಚಂದನಾಳ ಸಹಾಯದಿಂದ ಸದ್ವಿನಿಯೋಗ ಮಾಡುತ್ತಾ ಸುಖವಾಗಿದ್ದಾಳೆ. ಮೊದಲಿನ ಕೃತಕ ಜೀವನದಿಂದ ಹೊರಬಂದಿದ್ದಾಳೆ. ಸರಳ ಜೀವನ ನಡೆಸುತ್ತ ಚಂದನಳಿಗೆ ನಿಜವಾದ ಗೆಳತಿಯಾಗಿ ಬದುಕುತ್ತಿದ್ದಾಳೆ. ಅವಳ ಮನೆ ಇದ್ದ ಜಾಗದಲ್ಲಿ ಇಂದು ಒಂದು ಶಾಲೆ ಆರಂಭವಾಗಿದೆ. ಹಾಗೆಯೇ ಅನೇಕ ಕಡೆ ಶಾಲೆಗಳು, ಬಡವರ ವಸತಿಕೇಂದ್ರ ಇತ್ಯಾದಿಗಳೂ ಆರಂಭವಾಗಿದೆ. ಅವಳ ಜೀವನಕ್ಕೊಂದು ಉದ್ದೇಶ ಇರುವುದರಿಂದ ಉತ್ಸಾಹದಿಂದ ಪುಟಿಯುತ್ತಿದ್ದಾಳೆ. - ಜಗದೀಶ ಚಂದ್ರ 

ಸುಖಜೀವನಕ್ಕೆ ದುಃಖವೂ ಇರಬೇಕು

ಸುಖಜೀವನಕ್ಕೆ ದುಃಖವೂ ಇರಬೇಕು 

ರಾಜಲಕ್ಷ್ಮಿಗೆ ಅಂದು ಆಘಾತವಾಗಿತ್ತು. ಅಮೆರಿಕದಲ್ಲಿದ್ದ ಮಗಳು ಸಂದೇಶ ಕಳಿಸಿದ್ದಳು. ಅಳಿಯ ಆಸ್ಪತ್ರೆಯಲ್ಲಿ ದಿನ ಎಣಿಸುತ್ತಿದ್ದಾರೆ, ಮಗುವನ್ನೂ ಬೇರೆ ಇಟ್ಟುಬಿಟ್ಟಿದ್ದಾರೆ, ತಾನು ಕರೋನ ಪರೀಕ್ಷೆಯಲ್ಲಿ ಗೆದ್ದು ಈಗ ಸೋತುಬಿಟ್ಟಿದ್ದೇನೆ, ಏನೂ ಮಾಡಲು ತೋಚುತ್ತಿಲ್ಲ ಎಂದು ಬರೆದಿದ್ದಳು. ರಾಜಲಕ್ಷ್ಮಿ ಅದನ್ನು ಓದಿ ಮಗಳಿಗೆ ಧೈರ್ಯವಾಗಿರು, ಎಲ್ಲಾ ಸರಿ ಹೋಗುತ್ತದೆ ಎಂದು ಸಮಾಧಾನ ಹೇಳಿದ್ದರು.
ರಾಜಲಕ್ಷ್ಮಿಯ ಮಗಳು ಅಂಬಿಕಾ ಅಶೋಕನನ್ನು ಮದುವೆಯಾಗಿ ಅಮೇರಿಕಾದಲ್ಲಿ ನೆಲೆಸಿದ್ದಳು. ಅಶೋಕ ದೊಡ್ಡ ಕೆಲಸದಲ್ಲಿದ್ದನು. ಆಗಾಗ್ಗೆ ಹೊರಗಡೆ ಹೋಗಿಬರಬೇಕಾಗಿತ್ತು. ಹಾಗೆಯೇ ಈ ಬಾರಿ ಹಾಂಕಾಂಗಿಗೆ ಹೋಗಿ ಬಂದದ್ದೇ ಒಂದು ಪ್ರಮಾದವಾಯಿತು. ಅವನಿಗೆ ಕರೋನ ಸೋಂಕು ತಗುಲಿಬಿಟ್ಟಿತ್ತು. ಅದು ಮಗುವಿಗೂ ಅಂಟಿತ್ತು. ಅಂಬಿಕಾ ಹೇಗೋ ಬಚಾವಾಗಿದ್ದಳು. ಆದರೆ ಗಂಡ, ಪುಟ್ಟ ಮಗು ಇಬ್ಬರಿಗೂ ಅದು ತಗುಲಿದ್ದುದು ಅವಳನ್ನು ಅಧೀರಳನ್ನಾಗಿ ಮಾಡಿತ್ತು. ಸುಖದ ಸುಪ್ಪತ್ತಿಗೆಯಲ್ಲಿಯೇ ಬೆಳೆದ ಅವಳಿಗೆ ಇದು ನಿಜವಾದ ಆಘಾತವೇ ಆಗಿತ್ತು. 
ಅಂಬಿಕಾ ಇಂಜಿನೀರಿಂಗ್ ಓದಿ ಮುಂದೆ ಓದಬೇಕೆಂದಿದ್ದಳು. ಅಷ್ಟರಲ್ಲಿ ಮದುವೆ ಗೊತ್ತಾಗಿ ಅಶೋಕನನ್ನು ಮದುವೆಯಾಗಿ ಅಮೆರಿಕಕ್ಕೆ ಬಂದು ಬಿಟ್ಟಿದ್ದಳು. ನಂತರ ಮಗುವಾಗಿ ಸಂಸಾರ ಬಂಧನದಲ್ಲಿ ಸಿಲುಕಿದ್ದಳು. ಗಂಡನ ಸಂಪಾದನೆ ಚೆನ್ನಾಗಿದ್ದುದರಿಂದ ಅವಳಿಗೆ ಎಲ್ಲೂ ಹೋಗುವ ಪ್ರಮೇಯ ಬರಲಿಲ್ಲ. ಈಗ ಕರೋನ ಅವಳನ್ನು ನಿಜವಾಗಿ ಮಾರಿಯಾಗಿ ಕಾಡಲಾರಂಭಿಸಿತ್ತು. ಹತ್ತಿರದವರು ಯಾರೂ ಇಲ್ಲದುದರಿಂದ ಏನು ಮಾಡಲೂ ತೋಚದಾಗಿತ್ತು. ಅಪ್ಪ ಬೇರೆ ಇಲ್ಲ, ಅಮ್ಮನ ಬಳಿ ತನ್ನ ದುಃಖವನ್ನು ತೋಡಿಕೊಂಡಿದ್ದಳು. ಅಮ್ಮ ರಾಜಲಕ್ಷ್ಮಿಗೆ ಧೈರ್ಯವಾಗಿರು ಎಂದು ಹೇಳುವುದಷ್ಟೇ ಇದ್ದ ದಾರಿ. ಅವರು ತಮ್ಮ ಕತೆಯನ್ನೇ ಅವಳಿಗೆ ಹೇಳಿ ಈಗ ನೋಡು ನಾನು ಧೈರ್ಯವಾಗಿ ಬದುಕಿ ಬಾಳುತ್ತಿಲ್ಲವೇ ಎಂದು ಅವಳಿಗೆ ಮಾನಸಿಕ ಧೈರ್ಯ ತುಂಬಿದ್ದರು. 
ಅಂಬಿಕಾಗೆ ಎರಡು ವರ್ಷ ಆಗಿದ್ದಾಗ ತನ್ನ ತಂದೆಯನ್ನು ಕಳೆದುಕೊಂಡ ನತದೃಷ್ಠೆಯಾದಳು. ಅವಳಿಗೆ ಅಪ್ಪನ ನೆನಪೇ ಇಲ್ಲ. ಅಮ್ಮನೇ ಅಪ್ಪನೂ ಆಗಿದ್ದಳು. ಅವಳನ್ನು ಬೆಳೆಸಿ ದೊಡ್ಡವಳನ್ನಾಗಿ ಮಾಡಲು ಪಟ್ಟ ಕಷ್ಟ ರಾಜಲಕ್ಷ್ಮಿಗೆ ಮಾತ್ರ ಗೊತ್ತು. ಇದ್ದಕ್ಕಿದ್ದ ಹಾಗೆ ಅಪಘಾತದಲ್ಲಿ ಮೃತರಾದರು ಹರೀಶ್. ಅವರು ಏನು ಸಂಪಾದಿಸಿದ್ದರು, ಏನು ಕೂಡಿಟ್ಟಿದ್ದರು ಒಂದು ರಾಜಲಕ್ಷ್ಮಿಗೆ ಗೊತ್ತಿರಲಿಲ್ಲ. ಅವಳಿಗೆ ಮೋಸಮಾಡಿ, ಅಪ್ತರೆನಿಸಿಕೊಂಡವರು ಶ್ರೀಮಂತರಾದರು. ಬಿಡುಗಾಸಿಲ್ಲದ ಪರಿಸ್ಥಿತಿಯಿಂದ ಈ ಮಟ್ಟಕ್ಕೆ  ಬೆಳೆದರು ಎಂದರೆ, ಊಹೆ ಮಾಡಿ ಅವರೆಷ್ಟು ಕಷ್ಟ ಪಟ್ಟರೆಂಬುದನ್ನು. 
ಅಂಬಿಕಾ ಒಂದು ಸಮಯದಲ್ಲಿ, ಗಂಡ ಮಗುವಿಗೆ ಏನಾದರೂ ಹೆಚ್ಚು ಕಮ್ಮಿಯಾದರೆ ತಾನು ಜೀವ ಸಹಿತ ಇರುವುದಿಲ್ಲ ಎಂದಿದ್ದಾಗ, ರಾಜಲಕ್ಷ್ಮಿ, ನಾನು ಇದಕ್ಕಾಗಿಯೇ ನಿನ್ನನ್ನು ಇಷ್ಟು ದೊಡ್ಡವಳಾಗಿ ಮಾಡಿದ್ದು ಎಂದು ಕೇಳಿ ತಮ್ಮ ಕತೆಯೆಲ್ಲವನ್ನು ವಿಸ್ತಾರವಾಗಿ ಹೇಳಿಕೊಂಡಿದ್ದರು. ಆಗಲೇ ಅಂಬಿಕಾಗೆ ತನ್ನ ಅಮ್ಮನ ನಿಜವಾದ ಕಥೆ ಗೊತ್ತಾದದ್ದು. 
ನಂತರ ರಾಜಲಕ್ಷ್ಮಿ, ಸುಖ ಸಂತೋಷವನ್ನು ದುಃಖಗಳನ್ನು ಅಳೆಯುವುದು ಕಷ್ಟ. ಅದು ಅವರವರ ಮನೋಸ್ಥಿತಿಯ ಮೇಲೆ ಅವಲಂಬಿಸಿರುತ್ತದೆ. ಸುಖ, ದುಃಖ ವೆಂಬುದು ಒಂದೇ ನಾಣ್ಯದ ಎರಡು ಮುಖದಂತೆ ಅಥವಾ ಹಗಲು ರಾತ್ರಿಯಂತೆ. ಕೇವಲ ಸುಖವೊಂದೇ ಇರಲು ಸಾಧ್ಯವೇ ಇಲ್ಲ. ಜೀವನದಲ್ಲಿ ದುಃಖವಿರಬೇಕು, ಅದರಿಂದ ಕಲಿಯುವುದು ಬಹಳ. ಈ ದುಃಖದಿಂದ ಹೊರಬಂದರೆ ಆಗ ಅದರಿಂದಲೇ ಸುಖದ ಅನುಭವವಾಗುವುದು. ಅತೀ ಸುಖವಿದ್ದರೆ ಸ್ವಲ್ಪ ದುಃಖವಾದರೂ ಸಹಿಸಲು ಅಸಾಧ್ಯ ಎನ್ನಿಸುವುದು. ಹೀಗಾಗಿಯೇ ಇಂದು ಆತ್ಮಹತ್ಯೆಗಳು ಹೆಚ್ಚುತ್ತಿರುವುದು. ದುಃಖವಿದ್ದವರು ಗೋಳಾಡಿದರೂ ಸ್ವಲ್ಪ ಸುಖ ಸಿಕ್ಕರೂ ಅದನ್ನು ಸಂತೋಷದಿಂದ ಅನುಭವಿಸುತ್ತಾರೆ ಎಂದು ವೇದಾಂತಿಯಂತೆ ನುಡಿದು ಮಗಳಿಗೆ ಸಾಂತ್ವನ ಹೇಳಿದ್ದರು. 
ಅಂಬಿಕಾ ತನ್ನ ಗಂಡ, ಮಗು ಇಬ್ಬರನ್ನೂ ಕಳೆದುಕೊಂಡಳು. ಈಗ ಅಮ್ಮನ ಮನೆಗೆ ಹಿಂತಿರುಗಿ ಬಂದಿದ್ದಾಳೆ. ಆ ದುಃಖದಿಂದ ಪಾರಾಗಿ ಅದನ್ನು ಕೆಟ್ಟ ಕನಸಿನಂತೆ ಮರೆತು ಈ ಹೊಸಜೀವನದಲ್ಲಿ ಸುಖವನ್ನು ಅನುಭವಿಸುತ್ತಿದ್ದಾಳೆ. ಗಂಡು ಮಗನಂತೆ ಅಮ್ಮನನ್ನು ನೋಡಿಕೊಳ್ಳುತ್ತಿದ್ದಾಳೆ. ಅಮ್ಮ ಮರುಮದುವೆ ಆಗು ಎಂದು ಹೇಳುತ್ತಿದ್ದಾಳೆ. ಅಂಬಿಕಾ, ನೋಡೋಣ, ನನ್ನ ಹಣೆಯಲ್ಲಿ  ಇನ್ನೊಂದು ಮದುವೆ ಎಂದು ಬರೆದಿದ್ದರೆ ಆಗುತ್ತದೆ, ಇಲ್ಲವಾದಲ್ಲಿ ನನ್ನದೇ ಆದ ಜೀವನವಿದೆ, ಅದರಲ್ಲಿಯೇ ಸುಖ, ದುಃಖ ಎಲ್ಲವನ್ನೂ ಅನುಭವಿಸಿ ಆರಾಮವಾಗಿರುತ್ತೇನೆ ಎಂದು ಅಮ್ಮನಿಗೆ ಸಮಾಧಾನ ಮಾಡುತ್ತಾಳೆ. 
ಈಗ ಸಧ್ಯಕ್ಕಂತೂ ದುಃಖ, ಸುಖಗಳನ್ನು ಅನುಭವಿಸಿ ಅದಕ್ಕೆ ಹೆಚ್ಚು ಬೆಲೆಕೊಡದೆ, ಇಬ್ಬರೂ ತಮಗೆ ಬೇಕಾದಂತೆ ಜೀವನ ನಡೆಸಿ ಆರಾಮವಾಗಿ ಇದ್ದಾರೆ. ದುಃಖದಿಂದ ಕುಗ್ಗಿಲ್ಲ, ಸುಖದಿಂದ ಹಿಗ್ಗಿಲ್ಲ. - ಜಗದೀಶ ಚಂದ್ರ 

Monday, April 6, 2020

ಇಂದಿನ ಅಡುಗೆ -

ಕರೋನ ಲಾಕ್ ಡೌನ್ ಸಮಯದಲ್ಲಿ ಮೊದಲನೇ ಮನೆಯೊಂದರಲ್ಲಿ ನಡೆದ ಗಂಡ ಹೆಂಡತಿಯರ ಸಲ್ಲಾಪ

ಗಂಡ - ಲೇ, ಇವತ್ತು ಏನು ಅಡಿಗೆ ಮಾಡ್ತಾ ಇದಿಯೇ?
ಹೆಂಡತಿ - ನೀವು ಹೇಗೆ ಹೇಳಿದರೆ ಹಾಗೆ
ಗಂ – ಅನ್ನ, ಹುಳಿ?
ಹೆಂ - ದೀನಾ ಇನ್ನೇನು ಮಾಡೋದು, ತಿಂದು ತಿಂದು ಬೇಜಾರು
ಗಂ – ರೊಟ್ಟಿ, ಪಲ್ಯ?
ಹೆಂ – ರೀ ಅದನ್ನು ಮಕ್ಕಳು ಎಲ್ಲಿ ತಿಂತಾರೆ?
ಗA - ಪೂರಿ, ಸಾಗು?
ಹೆಂ – ಅಬ್ಬಬ್ಬಾ, ಅದು ಹೊಟ್ಟೆ ಭಾರ ಆಗುತ್ತೆ ರೀ, ಕರಿಯಕ್ಕೆ ಎಣ್ಣೆ ಬೇರೆ ಇಲ್ಲ.
ಗಂ – ಈರುಳ್ಳಿ ಗೊಜ್ಜು, ಚಪಾತಿ?
ಹೆಂ – ಈರುಳ್ಳಿ ಬೆಲೆ ಗೊತ್ತಾ? ಜೊತೆಗೆ ಈವತ್ತು ಗುರುವಾರ, ಮರೆತು ಹೋಯ್ತಾ?
ಗಂ - ಸರಿ, ಹೋಗಲಿ ಪರಾಟಾ ಮಾಡು
ಹೆಂ – ಅಯ್ಯೋ, ರಾತ್ರಿ ಅದನ್ನ ಯಾರು ತಿಂತಾರೆ ರೀ, ಜೊತೆಗೆ ಪಲ್ಯ ಬೇರೆ
ಗಂ - ಹೋಗಲಿ, ಹೋಟೆಲಿನಿಂದ ತಂದು ಬಿಡೋಣ್ವಾ??
ಹೆಂ - ಹೋಟೆಲಿನ ತಿಂಡಿ ತಿನ್ನೋದು ಒಳ್ಳೇದಲ್ಲಾರೀ, ಈಗ ಹೋಟೆಲ್ ಎಲ್ಲಿ ತೆಗೆದಿರುತ್ತೆ?
ಗಂ – ಮಜ್ಜಿಗೆ ಹುಳಿ, ಅನ್ನ?
ಹೆಂ – ಮನೇಲಿ ಜಾಸ್ತಿ ಮೊಸರಿಲ್ಲಾರೀ
ಗಂ – ಇಡ್ಲಿ ಸಾಂಬಾರ್
ಹೆಂ – ಅದೇನು ಅಂದ್ಕೊಡ ತಕ್ಷಣ ಆಗಿಬಿಡತ್ತಾ? ಸಮಯ ತೊಗೊಳ್ಳತ್ತೆ
ಗಂ – ಮ್ಯಾಗಿ ನೂಡಲ್ಸ್ ಮಾಡಿ ಬಿಡೆ, ಬೇಗ ಆಗುತ್ತೆ
ಹೆಂ – ಅಯ್ಯೋ ಹೋಗ್ರೀ, ಆ ದಾರ ದಾರನ ಎಳೆದುಕೊಂಡು ಯಾರು ತಿಂತಾರೆ, ಹೊಟ್ಟೇನು ತುಂಬಲ್ಲ
ಗಂ – ಅಯ್ಯೋ ನನಗೆ ತಲೆ ಕೆಟ್ಟುಹೋಗ್ತಾ ಇದೆ, ಈಗ ಏನು ಮಾಡ್ತೀ??
ಹೆಂ - ನೀವು ಹೇಳಿದ ಹಾಗೆ
ಗಂ (ಉಗ್ರ ನರಸಿಂಹನ ಅವತಾರ ತಾಳಿ) - ಹೀ .... ನಾನು ಹೇಳಿದ ಹಾಗೆ ಮಾಡುತ್ತೀಯಾ ತಾನೇ?
ಹೆಂ (ಹೆದರಿ) - ಹೂ (ಗಂಡ ಅವಳನ್ನು ಅಡುಗೆ ಮನೆಗೆ ಎಳೆದುಕೊಂಡು ಹೋಗುತ್ತಾನೆ)
ಗಂ - ಇವೆಲ್ಲಾ ಏನು?
ಹೆಂ - ಗೋದಿ ಹಿಟ್ಟು, ತರಕಾರಿ, ಲಟ್ಟಣಿಗೆ.
ಗಂ - ಲಾಕ್ ಡೌನ್ ಸಮಯದಲ್ಲಿ ಈ ಲಟ್ಟಣಿಗೆ ನನ್ನದು. ತೆಪ್ಪಗೆ ಚಪಾತಿ, ಪಲ್ಯ ಮಾಡು, ಹೆಚ್ಚು ಮಾತನಾಡಿದರೆ ನನ್ನ ಕೈಲಿ ಏನಿದೆ ಗೊತ್ತಲ್ಲ
ಹೆಂ (ಹೆದರಿದ ಹರಿಣಿಯಂತೆ) - ಹೂ ರೀ
ಗಂ (ಮಧುರವಾಗಿ) - ಬೇಗ ಹಿಟ್ಟು ಮಾಡಿಕೊಡು, ಲಟ್ಟಿಸಿಕೊಡುತ್ತೇನೆ




Sunday, April 5, 2020

ಇಂದಿನ ಅಡುಗೆ - ಜಗದೀಶ ಚಂದ್ರ ಬಿ ಎಸ್

ಕರೋನ ರಜೆಯಲ್ಲಿ ಎರಡನೇ ಮನೆಯಲ್ಲಿನ ಸಲ್ಲಾಪ

ಇಂದಿನ ಅಡುಗೆ

ಗಂಡ - ಲೇ, ಇವತ್ತು ಏನು ಅಡಿಗೆ ಮಾಡ್ತಾ ಇದಿಯೇ?
ಹೆಂಡತಿ - ನೀವು ಹೇಗೆ ಹೇಳಿದರೆ ಹಾಗೆ
ಗಂಅನ್ನ, ಹುಳಿ?
ಹೆಂ - ದೀನಾ ಇನ್ನೇನು ಮಾಡೋದು, ತಿಂದು ತಿಂದು ಬೇಜಾರು
ಗಂರೊಟ್ಟಿ, ಪಲ್ಯ?
ಹೆಂ ರೀ ಅದನ್ನು ಮಕ್ಕಳು ಎಲ್ಲಿ ತಿಂತಾರೆ?
A - ಪೂರಿ, ಸಾಗು?
ಹೆಂ ಅಬ್ಬಬ್ಬಾ, ಅದು ಹೊಟ್ಟೆ ಭಾರ ಆಗುತ್ತೆ ರೀ, ಕರಿಯಕ್ಕೆ ಎಣ್ಣೆ ಬೇರೆ ಇಲ್ಲ.
ಗಂ ಈರುಳ್ಳಿ ಗೊಜ್ಜು, ಚಪಾತಿ?
ಹೆಂ ಈರುಳ್ಳಿ ಬೆಲೆ ಗೊತ್ತಾ? ಜೊತೆಗೆ ಈವತ್ತು ಗುರುವಾರ, ಮರೆತು ಹೋಯ್ತಾ?
ಗಂ - ಸರಿ, ಹೋಗಲಿ ಪರಾಟಾ ಮಾಡು
ಹೆಂ ಅಯ್ಯೋ, ರಾತ್ರಿ ಅದನ್ನ ಯಾರು ತಿಂತಾರೆ ರೀ, ಜೊತೆಗೆ ಪಲ್ಯ ಬೇರೆ ಮಾಡಬೇಕು
ಗಂ - ಹೋಗಲಿ, ಹೋಟೆಲಿನಿಂದ ತಂದು ಬಿಡೋಣ್ವಾ??
ಹೆಂ - ಹೋಟೆಲಿನ ತಿಂಡಿ ತಿನ್ನೋದು ಒಳ್ಳೇದಲ್ಲಾರೀ
ಗಂ ಮಜ್ಜಿಗೆ ಹುಳಿ, ಅನ್ನ?
ಹೆಂ ಮನೇಲಿ ಜಾಸ್ತಿ ಮೊಸರಿಲ್ಲಾರೀ
ಗಂ ಇಡ್ಲಿ ಸಾಂಬಾರ್
ಹೆಂ ಅದೇನು ಅಂದ್ಕೊಡ ತಕ್ಷಣ ಆಗಿಬಿಡತ್ತಾ? ಸಮಯ ತೊಗೊಳ್ಳತ್ತೆ
ಗಂ ಮ್ಯಾಗಿ ನೂಡಲ್ಸ್ ಮಾಡಿ ಬಿಡೆ, ಬೇಗ ಆಗುತ್ತೆ
ಹೆಂಅಯ್ಯೋ ಹೋಗ್ರೀ, ದಾರ ದಾರನ ಎಳೆದುಕೊಂಡು ಯಾರು ತಿಂತಾರೆ, ಹೊಟ್ಟೇನು ತುಂಬಲ್ಲ
ಗಂ ಅಯ್ಯೋ ನನಗೆ ತಲೆ ಕೆಟ್ಟುಹೋಗ್ತಾ ಇದೆ, ಈಗ ಏನು ಮಾಡ್ತೀ??
ಹೆಂ - ನೀವು ಹೇಳಿದ ಹಾಗೆ
ಗಂ ಅಯ್ಯೋ ನನಗೆ ಯಾಕೋ ತಲೆ ಜೊತೆ ಹೊಟ್ಟೆನೂ ಕೆಟ್ಟು ಹೋದಹಾಗಿದೆ, ಉಪವಾಸ ಮಾಡಿದರೆ ಸರಿ ಹೋಗಬಹುದು, ನೀನೂ ಉಪವಾಸ ಮಾಡಿಬಿಡು.