Tuesday, May 29, 2018

ಪ್ರೇಮ ಪುರಾಣ

ಪ್ರೇಮ ಪುರಾಣ 

ಇಂದು ನನ್ನ ಗೆಳೆಯ ಸೀನಿಯ ಮದುವೆಯಾಗಿ 25 ವರ್ಷಗಳು ಕಳೆದ ದಿನ. ಅದಕ್ಕಾಗಿ ಅವನಿಗೆ ಒಂದಷ್ಟು ಹೂವು, ಹಣ್ಣು, ಉಡುಗೊರೆಗಳನ್ನು ಕೊಡಲು ಎಲ್ಲವನ್ನೂ ಸಿದ್ಧಮಾಡಿದೆ. ನನ್ನವಳು ಕಾರ್ಯನಿಮಿತ್ತವಾಗಿ ಬೇರೆ ಊರಿಗೆ ಹೋಗಿದ್ದುದರಿಂದ ನಾನೊಬ್ಬನೇ ಹೋಗಬೇಕಾಗಿ ಬಂತು. ಮನೆಯಲ್ಲಿಯೇ ಬಿಟ್ಟಿದ್ದ ಗುಲಾಬಿ, ಮಲ್ಲಿಗೆ ಹೂಗಳನ್ನು ನಾನೇ ಸ್ವತಃ ಬಿಡಿಸಿ ಒಂದು ಬುಟ್ಟಿಯಲ್ಲಿ ಹಾಕಿಟ್ಟುಕೊಂಡೆ. ನಾನು ಸೀನಿಯ ಮನೆಗೆ ಹೋದಾಗ ಮನೆಯಲ್ಲಿ ಬಿಟ್ಟಿದ್ದು ಎಂದು ಹೇಳಿ ಹೂಬುಟ್ಟಿಯನ್ನು ಕೊಟ್ಟೆ. ಉಳಿದ ಉಡುಗೊರೆಗಳನ್ನು ಅಷ್ಟಾಗಿ ಗಮನಿಸದೇ ಮನೆಚಿiÀುಲ್ಲಿ ಬಿಟ್ಟಿದ್ದ ಹೂಗಳನ್ನು ಕಂಡು ನಿಮ್ಮ ಮನೆಯಲ್ಲಿ ಬಿಟ್ಟಿದ್ದಾ? ತುಂಬಾ ಚೆನ್ನಾಗಿದೆ ಎಂದು ಆ ವಾಸನೆಯನ್ನು ಅಘ್ರಾಣಿಸಿ ಯಾವುದೋ ಲೋಕಕ್ಕೆ ಹೋದ ಸೀನಿ, ಸ್ವಲ್ಪ ಹೊತ್ತಿನಲ್ಲೇ ‘ಲೇ ಸುಮ ಇಲ್ಲಿ ನೋಡು ಬಾರೇ’ ಎಂದು ಕಿರುಚಿದಾಗ ನಾನು ಬೆಚ್ಚಿಬಿದ್ದಿದ್ದೆ. ‘ಏನೂ’ ಎಂದು ಓಡಿ ಬಂದ ಸುಮ ಆ ಹೂಗಳನ್ನು ನೋಡುತ್ತಾ ಅಲ್ಲಿಯೇ ನಾಚಿ ನಿಂತು ಬಿಟ್ಟಳು. ಸೀನಿ ನಗುತ್ತಾ ‘ನೋಡು ಈ ಮಲ್ಲಿಗೆ, ಗುಲಾಬಿ ಎರಡೂ ಇವರ ಮನೆಯಲ್ಲಿ ಬಿಟ್ಟಿದುದಂತೆ’ ಎಂದಾಗ ಅವಳು ನಾಚಿದಂತಾಗಿ ‘ಬಂದೆ ತಾಳಿ’ ಒಳಗೆ ಓಡಿಬಿಟ್ಟಳು. ನಂತರ ನನ್ನ ಮುಂದೆ ತಟ್ಟೆಯಲ್ಲಿ ರಸದೌತಣವೇ ತುಂಬಿತ್ತು.
ಏನೋ ಇದೆಲ್ಲಾ? ಎಂದು ಆಶ್ಚರ್ಯದಿಂದ ಕೇಳಿದಾಗ, ಇದು  ‘ಔತಣ’, ಅದು ‘ಒಂದು ಕತೆ’ ಎಂದು ಹೇಳಿದ. 
‘ಅದ್ಯಾವುದು ನನಗೇ ಗೊತ್ತಿಲ್ಲದಿರುವುದು’ ಎಂದಾಗ, ‘ಹೌದು ಅದು ನನ್ನ ಸ್ವಂತ ಅನುಭವದ ಕತೆ’ ಎಂದ. ‘ನಿನಗೆ ಅಷ್ಟೊಂದು ಸ್ವಂತ  ವಿಷಯವಾದರೆ ಪರವಾಗಿಲ್ಲ ಹೇಳಬೇಡ ಬಿಡು’ ಎಂದು ಮಾತು ಬದಲಿಸಲು ನೋಡಿದೆ. ಆದರೆ ಸೀನಿ, ‘ಇಲ್ಲ ಇದುವರೆಗೂ ನಿನಗೆ ಹೇಳಿರಲಿಲ್ಲ, ಅದು ಒಂದು ಪ್ರೇಮ ಪುರಾಣ, ನಿನಗೂ ಹೇಳಿ ಬಿಡುವೆ’ ಎಂದು ಮಾತು ಮುಂದುವರೆಸಿದ.
ನಾವು ಶಾಲೆಗೆ ಹೋಗುವಾಗ ಮೊದಲು ಹರಿನಗರದ ಮೂಲೆಯಲ್ಲಿದ್ದುವೆಂದು ಹೇಳಿದ್ದುದು ನಿನಗೆ ಗೊತ್ತು ಅಲ್ಲವೇ. ಅದು ಬಾಡಿಗೆ ಮನೆ, ಅದರೆ ತುಂಬಾ ವಿಶಾಲವಾಗಿತ್ತು. ಮನೆಯ ಸುತ್ತ ದೊಡ್ಡ ಅಂಗಳ. ನನ್ನ ಅಪ್ಪ ಹೂವಿನಗಿಡಗಳು, ತರಕಾರಿ ಗಿಡಗಳು ಎಲ್ಲವನ್ನೂ ಹಾಕಿ ತುಂಬಾ ಚೆನ್ನಾಗಿ ಆರೈಕೆ ಮಾಡಿ ನೋಡಿಕೊಳ್ಳುತ್ತಿದ್ದರು. ನಮ್ಮ ಮನೆಯ ಪಕ್ಕ ಖಾಲಿ ನಿವೇಶನವೊಂದಿತ್ತು. ಅದರಿಂದಾಗಿ ಕೆಲವರು ಅಲ್ಲಿ ಓಡಾಡುವಾಗ ನಮ್ಮ ಹೂಗಳನ್ನು, ತರಕಾರಿಗಳನ್ನು ಕದಿಯುತ್ತಿದ್ದುದು ಉಂಟು. ಆ ಕಾಂಪೌಂಡ್ ಬಳಿಯೇ ಒಂದು ಗುಲಾಬಿ ಗಿಡವಿತ್ತು. ಅದರ ತುಂಬಾ ಚೆನ್ನಾಗಿ ಹೂ ಬಿಡುತ್ತಿದ್ದವು. ಯಾರಿಗಾದರೂ ನೋಡಿದ ಕೂಡಲೆ ಕಿತ್ತುಬಿಡುವಷ್ಟು ಸುಂದರವಾಗಿದ್ದವು.
ಅಲ್ಲಿಯೇ ಒಂದು ಮಲ್ಲಿಗೆಯ ಚಪ್ಪರವಿತ್ತು. ಅದರ ಕೆಳಗೆ ಕುಳಿತು ಓದುವುದೋ, ಇನ್ನೇನಾದರೂ ಮಾಡುವುದೆಂದರೆ ನನಗೆ ತುಂಬಾ ಆನಂದ. ನಾನು ಅಲ್ಲಿ ಕುಳಿತರೆ ಖಾಲಿ ನಿವೇಶನದಲ್ಲಿ ಓಡಾಡುವವರಿಗೆ ಕಾಣಿಸುತ್ತಿದುದರಿಂದ ಯಾರೂ ಹೂ ಕೀಳಲು ಮುಂದೆ ಬರುತ್ತಿರಲಿಲ್ಲ. ಆದರೆ ನಿತ್ಯವೂ ಅಲ್ಲಿ ಒಂದು ಚಿಕ್ಕ ಹುಡುಗಿ ಓಡಾಡುತ್ತಿದ್ದಳು. ಎತ್ತರ ಕಡಿಮೆ ಇದ್ದುದರಿಂದ ಅವಳಿಗೆ ನಾನು ಕುಳಿತಿರುವುದು ಕಾಣಿಸುತ್ತಿರಲಿಲ್ಲ. ಹೀಗಾಗಿ ಯಾರೂ ಇಲ್ಲ ಎಂದುಕೊಂಡು ಮೆಲ್ಲಗೆ ಕಾಂಪೌಂಡ್ ಹತ್ತಿ ಗುಲಾಬಿ ಹೂವನ್ನು ಕಿಳಲು ನೋಡುತ್ತಿದ್ದಳು. ನಾನು ‘ಯಾರದು?’ ಎಂದು ಗದರಿದಾಗ ಹೆದರಿ ಓಡಿಬಿಡುತ್ತಿದ್ದಳು. ಆದರೂ ಏನಾದರೂ ಮಾಡಿ ಒಂದೆರಡು ಹೂವನ್ನು ಕಿತ್ತುಕೊಳ್ಳಬೇಕು ಎಂಬುದು ಅವಳ ಆಸೆ. ನಾನು ಇದನ್ನು ಅಮ್ಮನ ಬಳಿ ಹೇಳಿದಾಗ ಅಮ್ಮ ನಕ್ಕು, ‘ಪಾಪ, ಚಿಕ್ಕ ಹುಡುಗಿ ಆಸೆ ಪಡುತ್ತದೆ, ನೀನೇ ಕಿತ್ತುಕೊಟ್ಟುಬಿಡು, ಅಷ್ಟೊಂದು ಬಿಡುತ್ತದಲ್ಲ’ ಎಂದು ಹೇಳಿದ್ದಳು. ಆದರೂ ನಾನು ಆ ಹುಡುಗಿಯನ್ನು ಇನ್ನೇನು ಕೀಳಬೇಕು ಎನ್ನುವಷ್ಟರಲ್ಲಿ ಹೆದರಿಸಿ ಓಡಿಸಿಬಿಡುತ್ತಿದ್ದೆ. ಹೀಗೆಯೇ ಒಮ್ಮೆ ಹೆದರಿಸಿದಾಗ ಅವಳ ಕೈಗೆ ಗುಲಾಬಿಯ ಮುಳ್ಳು ತರಚಿ ರಕ್ತ ಬಂದುಬಿಟ್ಟಿತ್ತು. ಇನ್ನೊಮ್ಮೆ ಅವಳು ಓಡುವಾಗ ಬಿದ್ದುಬಿಟ್ಟಿದ್ದಳು. ಇದರಿಂದ ನನಗೆ ಅಯ್ಯೋ ಪಾಪ ಎನ್ನಿಸಿಬಿಟ್ಟಿತ್ತು. 
ಹೀಗೆಯೆ ಒಂದು ದಿನ ನಾನು ಆ ಚಪ್ಪರದ ಬಳಿ ಕುಳಿತು ಓದುವುದರಲ್ಲಿ ಮಗ್ನನಾಗಿದ್ದೆ. ಏನೋ ಶಬ್ಧವಾಯಿತೆಂದು ನೋಡಿದಾಗ ಆ ಹುಡುಗಿ ಹೂವನ್ನು ಕದ್ದು ಓಡುತ್ತಿದ್ದಳು. ನಾನು ‘ನಾಳೆ ಬಾ ನಿನಗೆ ಮಾಡ್ತೀನಿ’ ಎಂದು ಹೆದರಿಸಿದ್ದೆ.
ಹೀಗೆಯೇ ಒಂದೆರಡು ದಿನವಾದರೂ ಆ ಹುಡುಗಿ ಬರಲೇ ಇಲ್ಲ. ಆ ಹುಡುಗಿ ನಿಜವಾಗಿಯೂ ಹೆದರಿ ಬಿಟ್ಟಳೇನೋ, ನನ್ನ ಮೇಲೆ ಇನ್ನೇನಾದರೂ ಅವಳ ಮನೆಯಲ್ಲಿ ಹೇಳಿ ಬಿಟ್ಟಿದ್ದಾಳೇಯೋ ಎಂದು ಏನೇನೋ ಹೆದರಿಕೆ, ಕಾತುರ ಎಲ್ಲವೂ ತುಂಬಿತ್ತು. ಕಡೆಗೆ ಈ ಹುಡುಗಿ ಹೀಗೇಕೆ ಸತಾಯಿಸುತ್ತಾಳೆ, ಯಾಕೆ ಬರುವುದಿಲ್ಲ, ನಾನು ಅವಳನ್ನು ಹಾಗೆ ಹೆದರಿಸಬಾರದಿತ್ತು, ಅವಳು ಬಿದ್ದಾಗ, ಮುಳ್ಳಿನಿಂದ ರಕ್ತ ಬರಿಸಿಕೊಂಡಾಗ ಸಮಾಧಾನ ಮಾಡಬೇಕಿತ್ತು, ಅಮ್ಮ ಹೇಳಿದಹಾಗೆ ಕೇಳಬೇಕಿತ್ತು, ಅವಳ ಮನೆ ಎಲ್ಲಿ ಇದೆ ಎಂದು ಪತ್ತ ಹಚ್ಚಿ ಅವಳಮನೆಗೇ ಹೋಗಿ ಒಂದಷ್ಟು ಹೂವನ್ನು ಕೊಟ್ಟುಬರಲೇ, ಹೀಗೆ ಏನೇನೋ ಅಂದು ಕೊಳ್ಳುತ್ತಿದ್ದೆ. ಅದು ಪ್ರೀತಿಯೋ, ಪ್ರೇಮವೋ, ಸಹಾನುಭೂತಿಯೋ ಒಂದೂ ಅರಿಯದ ವಯಸ್ಸು ನನ್ನದಾಗಿತ್ತು. 
ಕಡೆಗೆ ಒಂದು ದಿನ ಶಾಲೆಯಿಂದ ಬರುವಾಗ ಹರಿನಗರದ ಕೆಳಭಾಗದಲ್ಲೆಲ್ಲಾ ಸುತ್ತಾಡಿಬಂದೆ. ನನಗೆ ಆ ಹುಡುಗಿ ಕಾಣಲೇ ಇಲ್ಲ. ಅವಳ ವಯಸ್ಸು, ಶಾಲೆ, ತರಗತಿ ಯಾವುದೂ ನನಗೆ ಗೊತ್ತಿರಲಿಲ್ಲ. ಒಂದೆರಡು ದಿನ ಹೀಗೆ ಅಲ್ಲೆಲ್ಲಾ ಸುತ್ತಾಡುತ್ತಿದ್ದೆ. ಒಂದು ದಿನ ಹೀಗೆಯೇ ಹೋಗುತ್ತಿದ್ದಾಗ ಅಲ್ಲಿ ಅತಿ ಸಣ್ಣ ಸಣ್ಣ ಮನೆಗಳಿದ್ದ ರಸ್ತಯೊಂದರಲ್ಲಿ ಆ ಹುಡುಗಿಯನ್ನು ನೋಡಿದೆ. ಕೂಡಲೇ ಆ ಹುಡುಗಿಯ ಹಿಂದೆಯೆ ಹೋದೆ. ಅವಳು ನನ್ನನ್ನು ನೋಡಿ ಹೆದರಿದಳೆಂದು ಕಾಣುತ್ತದೆ, ಕೂಡಲೇ ಓಡಿಹೋಗಿ ಅಲ್ಲೆಲ್ಲೋ ಮಾಯವಾಗಿ ಬಿಟ್ಟಳು. ನಾನು ದಿಕ್ಕು ತೋಚದೇ ಅಲ್ಲೇ ಮರೆಯಲ್ಲಿ ನಿಂತು ಸ್ವಲ್ಪ ಕಾಲ ನೋಡಿದೆ. ಸುಮಾರು ಸಮಯದನಂತರ ಅವಳು ಮೆಲ್ಲಗೆ ಬೆಕ್ಕಿನಂತೆ ಬಂದು ಆಕಡೆ ಈಕಡೆ ನೋಡಿ ಮುಂದೆ ಸ್ವಲ್ಪದೂರ ಹೋಗಿ ಮತ್ತೆ ಮಾಯವಾಗಿ ಬಿಟ್ಟಳು. ನನಗೆ ಅವಳ ಮನೆ ಅಲ್ಲೆಲ್ಲೋ ಸಂದಿಯಲ್ಲಿ ಇದೆಯೆಂದು ಖಚಿತವಾದರೂ ಸರಿಯಾಗಿ ಯಾವುದೆಂದು ಗೊತ್ತಾಗಲಿಲ್ಲ. ಹೀಗೆಲ್ಲಾ ಮಾಡಿದರೆ ಜನ ಏನೆಂದುಕೊಳ್ಳುತ್ತಾರೆ ಎಂಬ ಕಲ್ಪನೆಯೂ ಆಗ ನನಗಿರಲಿಲ್ಲ. ಮುಂದೆ ಒಂದೆರಡು ದಿನ ನಾನು ಮತ್ತೆ ಆ ಹುಡುಗಿಯ ಮನೆಯನ್ನು ಹುಡುಕಲು ಹೋದುದನ್ನು ಗಮನಿಸಿದ ಆ ಹುಡುಗಿ ಮತ್ತೆ ಎಲ್ಲೂ ಕಾಣಿಸಲೇ ಇಲ್ಲ. 
ಕಡೆಗೆ ಅಮ್ಮನಿಗೆ ಈ ವಿಷಯವನ್ನು ಹೇಳಿದಾಗ, ಅಮ್ಮ ನಕ್ಕರೂ ಸ್ವಲ್ಪ ಬಿಗುವಾಗಿಯೇ ಹಾಗೆಲ್ಲಾ ಒಬ್ಬನೇ ಹೋಗಬಾರದು, ಹಾಗೆ ಹೂಗಳನ್ನೂ ಕೊಡಬಾರದು ಎಂದು ತಾಕೀತು ಮಾಡಿದಳು. ಮುಂದೆ ಎಂದಾದರೂ ಇಲ್ಲಿ ಬಂದರೆ ನೀನೇ ಮನೆಯೊಳಗೆ ಕರಿ, ನಾನು ಹೂಗಳನ್ನು ಕೊಡುತ್ತೇನೆ ಎಂದಳು. ಆದರೆ ಆ ಹುಡುಗಿ ಬರಲೇ ಇಲ್ಲ.
ಕಡೆಗೆ ನನಗೆ ನನ್ನ ಇತರ ಕೆಲಸಗಳಿಂದ, ಈ ವಿಷಯ ಮರೆತೇ ಹೋಯಿತು. ಒಮ್ಮೆ ಮಲ್ಲಿಗೆಯ ಚಪ್ಪರದ ಕೆಳಗೆ ಕುಳಿತಿದ್ದಾಗ, ನನಗೆ ಅಲ್ಲಿ ಬಿಟ್ಟಿದ್ದ ತೊಂಡೆಕಾಯಿ, ಹೀರೇಕಾಯಿ, ಪಡುವಲಕಾಯಿ, ಸೀಮೆಬದನೇಕಾಯಿಗಳು ಕಂಡವು. ಅವನ್ನು ಬಿಡಿಸಬೇಕು ಎಂದು ಎದ್ದಾಗ ಇದ್ದಕ್ಕಿದ್ದಂತೆ ಗುಲಾಬಿಯ ಗಿಡದ ಬಳಿ ಚರಪರ ಎಂದು ಸದ್ದಾಯಿತು. ನೋಡಿದರೆ ಆ ಹುಡುಗಿ. ನನ್ನನ್ನು ಕಂಡಕೂಡಲೆ ಹೆದರಿ ತನ್ನ ಪುಟ್ಟ ಕೈಗಳಲ್ಲಿ ಇದ್ದ ಮಲ್ಲಿಗೆಯ ಹೂಗಳನ್ನೆಲ್ಲಾ ನನ್ನ ಮೇಲೆ ಎರಚಿ ಓಡಿಹೋದಳು. ನಾನು ನನ್ನ ಕೈಲಿದ್ದ ತೊಂಡೆಕಾಯಿಯನ್ನು ಅವಳ ಮೇಲೆ ಎಸೆದೆ. ಅದು ಅವಳ ಕಾಲಬಳಿ ಬಿತ್ತು, ಆದರೆ ತಗಲಲಿಲ್ಲ. ಅವಳು ತಿರುಗಿಯೂ ನೋಡದೇ ಕಾಲುಕಿತ್ತಳು.
ಈಗ ಮತ್ತೆ ನನಗೆ ಅವಳ ಬಗ್ಗೆಯೇ ಯೋಚನೆ ಶುರುವಾಯಿತು. ಅವಳು ಮತ್ತೆ ಮೊದಲಿನಂತೆ ನನ್ನನ್ನು ಸತಾಯಿಸಿದಳು.  ಬರಲೇ ಇಲ್ಲ. ನಾನು ಒಳ್ಳೆ ಹುಡುಗಿ ಎಂದುಕೊಂಡರೆ ನನ್ನ ಮೇಲೆ ಮಲ್ಲಿಗೆ ಎಸೆದಿದ್ದಾಳೆ ಎಂದು ನನಗೆ ವಿಪರೀತ ಕೋಪ ಬಂದಿತ್ತು. ಆ ಮಲ್ಲಿಗೆಯನ್ನೆಲ್ಲಾ ಆಯ್ದು ಅಮ್ಮನ ಬಳಿ ಹಾಕಿ, ‘ನೀನು ಅಯ್ಯೋ ಪಾಪ ಅಂದೆಯಲ್ಲ ಆ ಹುಡುಗಿ ನೋಡು ನನ್ನ ಮೇಲೆ ಈ ಮಲ್ಲಿಗೆ ಹೂವನ್ನು ಎಸೆದಿದ್ದಾಳೆ’ ಎಂದು ಕೋಪದಿಂದ ಹೇಳಿದೆ. ಅಮ್ಮನಿಗೆ ನಗುವೋ ನಗು, ‘ಅಯ್ಯೋ ಮಲ್ಲಿಗೆ ಹೂವು ತಗುಲಿ ನಿನಗೆ ಎಲ್ಲಿ ಗಾಯವಾಯಿತೋ ತೋರಿಸು’ ಎಂದು ಕೇಳಿದಾಗ ನನಗೆ ಇನ್ನೂ ಕೋಪ ಬಂದಿತ್ತು. ಧುಮು ಧುಮು ಎಂದು ಅಲ್ಲಿಂದ ಮನೆಯೊಳಗೆ ನಡೆದಿದ್ದೆ. ಅಮ್ಮ ಅದನ್ನು ಅಪ್ಪನ ಬಳಿಯೂ ಹೇಳಿದ್ದಳೆಂದು ಕಾಣುತ್ತದೆ. ಅಪ್ಪನೂ ನಗುನಗುತ್ತಾ ಅದರ ಬಗ್ಗೆ ನನ್ನನ್ನು ಕೇಳಿದಾಗ ನಾನು ಸಿಟ್ಟಿನಿಂದ ಎರಡು ದಿನ ಸರಿಯಾಗಿ ಮಾತನಾಡೇ ಇರಲಿಲ್ಲ. ಎಲ್ಲಾ ಈ ಹುಡುಗಿಯಿಂದ ಎಂದು ಆ ಹುಡುಗಿಯ ಮೇಲೆ ಇನ್ನು ಮುನಿಸಿಕೊಂಡಿದ್ದೆ.
ಮತ್ತೆ ಅನೇಕ ದಿನಗಳ ಕಾಲ ಸತಾಯಿಸಿದ ಆ ಹುಡುಗಿ ಮತ್ತೆ ಒಂದು ದಿನ ಪ್ರತ್ಯಕ್ಷವಾದಳು. ಮತ್ತೆ ಕದಿಯಲು ಬಂದಿರಬೇಕು ಎಂದ ಮೆಲ್ಲಗೆ ಅಲ್ಲಿಯೇ ಮರೆಯಲ್ಲಿ ನಿಂತು ಕಾಯುತ್ತಿದ್ದೆ. ಅಷ್ಟು ಹತ್ತಿರ ನನ್ನನ್ನು ನೋಡಿ ಬೆದರಿಬಿಟ್ಟಳು. ‘ನಿನ್ನ ಮನೆ ನನಗೆ ಗೊತ್ತು, ನಿನ್ನ ಅಪ್ಪ ಅಮ್ಮನಿಗೆ ಹೇಳಿ ಮಾಡಿಸುತ್ತೇನೆ ತಾಳು’ ಎಂದು ಗದರಿದಾಗ, ತನ್ನ ಪುಟ್ಟ ಕೈಗಳಲ್ಲಿದ್ದ ಮಲ್ಲಿಗೆ ಹೂಗಳನ್ನು ಅಲ್ಲಿಯೆ ಚೆಲ್ಲಿ ಅಳುತ್ತಾ ಓಡಿಹೋದಳು. ಅವಳ ಮುಖದಲ್ಲಿ ಅಳು ಕಂಡಾಗ ನನಗೆ ಏನೂ ಮಾಡಲು ತೋಚಲಿಲ್ಲ. ಅವಳ ಅಳು ಮುಖವೆ ನನ್ನ ಕಣ್ಣುಮುಂದೆ ಬಂದಂತಾಗಿ ನನಗೆ ಒಂದು ರೀತಿಯ ಹೆದರಿಕೆ ಶುರುವಾಗಿತ್ತು. ಇದಾದ ಮೇಲೆ ನನಗೆ ನನ್ನ ಮೇಲೇ ಸಿಟ್ಟುಬಂತು. ಸುಮ್ಮನೆ ಅಮ್ಮ ಹೇಳಿದ ಹಾಗೆ ಒಂದೆರಡು ಹೂವನ್ನು ಕೊಟ್ಟಿದ್ದರೆ ಇಷ್ಟಲ್ಲಾ ಆಗುತ್ತಲೇ ಇರಲಿಲ್ಲ. ಪಾಪ ಅ ಚಿಕ್ಕ ಹುಡುಗಿಯನ್ನು ಅಳಿಸಿಬಿಟ್ಟೆ ಎಂದೆಲ್ಲಾ ಅಂದುಕೊಂಡು ಸಪ್ಪಗಾಗಿ ಬಿಟ್ಟೆ. ಅಪ್ಪ ಅಮ್ಮ ನನ್ನನ್ನು ಯಾಕೋ ಸಪ್ಪಗಿದೀಯಾ ಎಂದು ಕೇಳಿದರು. ಅಮ್ಮನಂತೂ ನನ್ನ ಹಣೆಯ ಮೇಲೆ ಕೈ ಇಟ್ಟು ಜ್ವರ ಬಂದಿದಿಯೇನೋ ಎಂದು ಸಹ ನೋಡಿದರು. ಅದು ಒಂದು ರೀತಿಯ ಪ್ರೀತಿಯ, ಪ್ರೇಮದ, ಅಂತಃಕರಣದ ಜ್ವರ ಎಂದು ನನಗೆ ಈಗ ಅನ್ನಿಸುತ್ತಿದೆ. ನನಗಂತೂ ಸುಮಾರು ದಿನ ಆ ಹುಡುಗಿಯ ಕಣ್ಣೀರಿನ ಮುಖವೆ ಕಾಣುತ್ತಿತ್ತು. ಅದನ್ನು ನೆನೆಸಿಕೊಂಡಾಗ, ಆ ಹುಡುಗಿ ನನ್ನ ಮೇಲೆ ಏನಾದರೂ ಚಾಡಿ ಹೇಳಿ ರಾದ್ಧಾಂತ ಮಾಡಿದರೆ ಎಂದು ಹೆದರಿಕೆಯಾಗಿ ಬಿಟ್ಟಿತ್ತು.
ಇದಾದ ಒಂದೆರಡು ದಿನಗಳ ನಂತರ ಒಂದು ದಿನ ಸಂಜೆ ನಮ್ಮ ಮನೆಗೆ ಒಬ್ಬ ಹೆಂಗಸರೊಬ್ಬರು ಬಂದರು. ನಾನು ಅವರನ್ನು ಅದೇ ಮೊದಲಬಾರಿ ನೋಡಿದ್ದು. ಅವರು ನನ್ನನ್ನು ನೋಡಿ ‘ನಿಮ್ಮ ತಾಯಿ ಇದ್ದಾರೇನೋ?’ ಎಂದರು. ‘ಹೂ’ ಎಂದು ಅಮ್ಮನನ್ನು ಕರೆದೆ. ಅಮ್ಮ ‘ಅವರನ್ನು ವಿಚಾರಿಸಿಕೊಂಡು ಒಳಗೆ ಕೂಡುವಂತೆ ಹೇಳು’ ಎಂದು ಹೇಳಿದಳು. ನಂತರ ಬಂದು ಅವರ ಪರಿಚಯ ಮಾಡಿಕೊಂಡು ತುಂಬಾ ಹೊತ್ತು ಏನೇನೋ ಮಾತನಾಡುತ್ತಿದ್ದರು. ಅವರು ಒಂದು ಬುಟ್ಟಿಯ ತುಂಬಾ ಮಲ್ಲಿಗೆಯ ಹೂವನ್ನು ಕೊಟ್ಟು ‘ನಮ್ಮ ಮನೆಯಲ್ಲಿ ಬಿಟ್ಟಿದ್ದು’ ಎಂದು ಅಮ್ಮನ ಕೈಗಿತ್ತರು. ಅದರ ವಾಸನೆಯು ಅದೇಕೋ ನನಗೆ ಆ ಚಿಕ್ಕ ಹುಡುಗಿಯನ್ನು ನೆನಪಿಸಿತು. ಆಮೇಲೆ ಅಮ್ಮ, ಅಪ್ಪನನ್ನೂ ಕರೆದು ಅವರ ಪರಿಚಯ ಮಾಡಿಸಿದಳು. ನಂತರ ಅವರನ್ನು ಕರೆದು ಕೊಂಡು ಮನೆಯ ಹಿತ್ತಲಿನ ನಮ್ಮ ತೋಟವನ್ನೂ ತೋರಿಸಿದರು. ತೊಂಡೆಬಳ್ಳಿಯಲ್ಲಿ ಬಿಟ್ಟಿದ್ದ ಒಂದಷ್ಟು ಕಾಯಿಗಳನ್ನು ಬಿಡಿಸಿ, ಅಮ್ಮ ಅವರ ಕೈಗಿಡುತ್ತಾ ‘ಇದೇ ನೋಡಿ ನಿಮ್ಮ ಹುಡುಗಿಯ ಕಾಲಿಗೆ ತಗುಲಿದ ಕಲ್ಲು’ ಎಂದು ನಕ್ಕಾಗ ಅವರೂ ಜೋರಾಗಿ ನಕ್ಕರು. ನಂತರ ಅಲ್ಲಿ ಗುಲಾಬಿಯ ಗಿಡದ ಬಳಿ ಬಂದಾಗ, ಅಮ್ಮ ಒಂದಷ್ಟು ಹೂಗಳನ್ನು ಬೊಗಸೆ ತುಂಬಾ ಬಿಡಿಸಿ ಒಂದು ಕವರಿಗೆ ಹಾಕಿ, ‘ಇದೇ ಹೂವು ನೋಡಿ ಇಷ್ಟಲ್ಲಾ ರಾದ್ದಾಂತ ಮಾಡಿದ್ದು’ ಎಂದು ನಕ್ಕಳು. ಅಲ್ಲೆ ಚಪ್ಪರದ ಅಡಿಯಲ್ಲಿ ಕುಳಿತಿದ್ದ ನನಗೆ ಏನೂ ಅರ್ಥವಾಗಿರಲಿಲ್ಲ. ಮುಂದೆ ಅರ್ಥವಾದಾಗ ನನಗೂ ನಗು ಬಂದಿತ್ತು. ನಂತರ ಆಕೆ ‘ಸರಿ ನಾನಿನ್ನು ಹೊರಡುತ್ತೇನೆ’ ಎಂದು ನಮ್ಮ ಮನೆಯ ಹೂ, ತರಕಾರಿಗಳನ್ನು ಬುಟ್ಟಿಯ ತುಂಬಾ ತುಂಬಿಕೊಂಡು ಹೊರಟರು. ಹೊರಡುವಾಗ ನನ್ನನ್ನೂ ಕರೆದು ಏನು ಓದುತ್ತಿದ್ದೀಯ, ಯಾವ ಶಾಲೆ ಎಂದೆಲ್ಲಾ ವಿಚಾರಿಸಿ, ‘ದೇವರು ನಿನಗೆ ಒಳ್ಳೆಯದನ್ನು ಮಾಡಲಿ’ ಎಂದು ಹರಸಿದರು.
ಇದಾದ ಒಂದೆರಡು ದಿನಗಳ ನಂತರ ಆ ಚಿಕ್ಕ ಹುಡುಗಿ ಒಂದು ದಿನ ಧೈರ್ಯವಾಗಿ ಮನೆಯೊಳಗೇ ಬಂದು ಅಮ್ಮನಿಗೆ ಒಂದು ಬುಟ್ಟಿ ಮಲ್ಲಿಗೆಯ ಹೂವನ್ನು ಕೊಟ್ಟಳು. ಅಮ್ಮ ನನಗೆ ಒಂದಿಷ್ಟು ಗುಲಾಬಿ ಹೂಗಳನ್ನು ಬಿಡಿಸಲು ಹೇಳಿ ಅದನ್ನ ಅವಳು ಮಲ್ಲಿಗೆ ಹೂ ಕೊಟ್ಟ ಬುಟ್ಟಿಯೊಳಗೆ ತುಂಬಿ ವಾಪಸ್ಸು ಕೊಟ್ಟು ಕಳುಹಿಸಿದಳು. ಆ ಹುಡುಗಿ ವಾಪಸ್ಸು ಹೋಗುವಾಗ ಜಂಬದಿಂದ ಹೋದಂತೆ ನನಗೆ ಅನ್ನಿಸಿತು. ನಂತರ ಅಮ್ಮ ನನಗೆ ‘ಆದಿನ ಬಂದಾಕೆ ಆ ಹುಡುಗಿಯ ಅಮ್ಮ’ ಎಂದು ಹೇಳಿ ಅವರು ನಮ್ಮ ದೂರದ ಸಂಬಂದಿಕರೇ, ‘ಇನ್ನು ಮುಂದೆ ಆ ಹುಡುಗಿಯನ್ನು ಹೆದರಿಸಬೇಡ, ಒಂದಷ್ಟು ಹೂ ತರಕಾರಿಗಳನ್ನು ಕೊಡು’ ಎಂದು ಹೇಳಿದಳು. ‘ಅವರ ಮನೆಯಲ್ಲಿ ಇರುವುದು ಮಲ್ಲಿಗೆಯಬಳ್ಳಿಯೊಂದೇ ಅಂತೆ. ನೋಡು ಎಷ್ಟು ಘಮಘಮ ಎನ್ನುತ್ತಿದೆ’ ಎಂದು ನನಗೆ ತೋರಿಸಿದಳು. ಆ ಮಲ್ಲಿಗೆಯ ವಾಸನೆ ನನ್ನನ್ನು ಈ ಹಿಂದೆ ನಡೆದ ಎಲ್ಲಾ ಘಟನೆಗಳನ್ನು ನೆನೆಯುವಂತೆ ಮಾಡಿತು. ‘ಆ ಹುಡುಗಿ ಅಂದು ನನಗೆ ಮಲ್ಲಿಗೆಯ ಹೂಗಳನ್ನು ಕೊಟ್ಟು ಅದಕ್ಕೆ ಬದಲಾಗಿ ಗುಲಾಬಿಯನ್ನು ಕೊಡಲು ಬಂದಿದ್ದಳಂತೆ. ಆದರೆ ನಾನು ಗದರಿದುದನ್ನು ನೋಡಿ ಹೆದರಿ ಮಲ್ಲಿಗೆಯನ್ನು ಅಲ್ಲಿಯೇ ಚಲ್ಲಿ ಅಳುತ್ತಾ ಹೆದರಿ ಓಡಿ ಹೋಗಿ, ಆ ಹುಡುಗ ನನ್ನನ್ನು ಹಿಡಿದು ಹೊಡೆದು ಬಿಡುತ್ತಾನೆ ಎಂದು ಹೇಳಿ ಅತ್ತಳಂತೆ, ಏನಾದರೂ ಕೊಡುವುದಿದ್ದರೆ ಮನೆಯೊಳಗೆ ಬಂದು ಕೊಡಬೇಕು ಎಂಬ ಪರಿಜ್ಞಾನವೂ ಇಲ್ಲದ ಮುಗ್ಧ ಹುಡುಗಿ’ ಎಂದು ಅಮ್ಮ ನನಗೆ ಹೇಳಿದಾಗ, ನನಗೂ ಅಳು ಬರುವಂತಾಗಿ ಆ ಹುಡುಗಿಯ ಬಗ್ಗೆ ಅನುಕಂಪ ಮೂಡಿತ್ತು.
ಹೀಗೆಯೇ ಮುಂದೆ ನಮಗೂ ಆ ಹುಡುಗಿಯ ಮನೆಯವರಿಗೂ ಪರಿಚಯವಾಗಿ ಆ ಹುಡುಗಿಯೂ ಧೈರ್ಯವಾಗಿ ಬಂದು ತಾನೇ ಗುಲಾಬಿಹೂಗಳನ್ನು ಬಿಡಿಸಿಕೊಂಡು ಹೋಗುತ್ತಿದ್ದಳು. ಅಲ್ಲಿಯೆ ಚಪ್ಪರದ ಕೆಳಗೆ ಕುಳಿತಿದ್ದ ನಾನು ಅವಳನ್ನು ‘ಮಲ್ಲಿಗೆ ಹೂವನ್ನು ಕೊಟ್ಟಿದ್ದೀಯಾ ಆಥವಾ ಹಾಗೇ ಗುಲಾಬಿ ಬಿಡಿಸಿಕೊಳ್ತಾ ಇದ್ದೀಯಾ’ ಎಂದು ರೇಗಿಸಿದರೆ ಆ ಹುಡುಗಿ ‘ಇದಕ್ಕಿಂತಾ ಜಾಸ್ತಿ ಕೊಟ್ಟಿದ್ದೀನಿ, ಬೇಕಾದರೆ ಹೋಗಿ ನೋಡು’ ಎಂದು ಮಾರುತ್ತರ ಕೊಡುತ್ತಿದ್ದಳು.
ನಂತರ ಒಂದು ದಿನ ಅಮ್ಮ ನನ್ನನ್ನು ಆ ಹುಡುಗಿಯ ಮನೆಗೆ ಕರೆದುಕೊಂಡು ಹೋದಳು. ಸಣ್ಣ ರಸ್ತೆಯಲ್ಲಿದ್ದ ಅವಳ ಮನೆ ನಮ್ಮ ಮನೆಗೆ ತದ್ವಿರುದ್ಧವಾಗಿತ್ತು. ಆದರೆ ಮನೆಯೊಳಗೆ ಹೋದ ಕೂಡಲೆ ನನಗೆ ಗರಬಡಿದಂತಾಯಿತು. ಇವರ ಮನೆ ನೊಡಿದರೆ ‘ನಮ್ಮ ಮನೆ ಎಷ್ಟು ಗಲೀಜಾಗಿರುತ್ತೆ’ ಎಂದು ನನಗೇ  ಬೇಜಾರಾಯಿತು. ಅಮ್ಮ ‘ಮನೆಯನ್ನು ನನ್ನ ಕೋಣೆಯನ್ನು ಒಪ್ಪವಾಗಿ ಇಟ್ಟುಕೊ’ ಎಂದು ನನ್ನನ್ನು ಬೈಯುತ್ತಿದ್ದುದರಲ್ಲಿ ತಪ್ಪಿಲ್ಲ ಎಂದು ಮನದಟ್ಟಾಯಿತು. ಅವಳ ಮನೆ ಚಿಕ್ಕದಾಗಿದ್ದರೂ ನೋಡಲು ತುಂಬಾ ಚೆನ್ನಾಗಿತ್ತು. ಮನೆಯೊಳಗೆ ಮೂಲೆಯಲ್ಲಿ ಇದ್ದ ಒಂದು ಪುಟ್ಟ ಅಂಗಳದಲ್ಲಿ  ಚಿಕ್ಕ ಚಿಕ್ಕ ಗಿಡಗಳು, ಬುದ್ದನ ದೊಡ್ಡ ಬೊಂಬೆ, ಜೊತೆಗೆ ಮನೆಯ ಮೇಲಕ್ಕೆ ಹೋಗಿದ್ದ ಒಂದು ಮಲ್ಲಿಗೆಯ ಬಳ್ಳಿ ಇವುಗಳು ನನ್ನ ಕಣ್ಸೆಳೆದವು. ಮಲ್ಲಿಗೆ ವಾಸನೆ ಮನೆ ತುಂಬಾ ಹರಡಿತ್ತು. ಮನೆಯ ಚಿಕ್ಕದಾದರೂ ತುಂಬಾ ಅಂದವಾಗಿತ್ತು, ಎಲ್ಲವನ್ನು ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದರು. ನಂತರ ಅಮ್ಮ ಮಾತನಾಡುವಾಗ ‘ನಾವು ಮುಂದೆ ಬೇರೆ ಮನೆಗೆ ಹೋದಮೇಲೆ ಅಲ್ಲಿಗೆ ಖಂಡಿತಾ ಬನ್ನಿ’ ಎಂದು ಆಹ್ವಾನವಿತ್ತಾಗಲೇ ನನಗೆ ನಾವು ಮನೆ ಬದಲಾಯಿಸುತ್ತಿದ್ದೇವೆ ಎಂದು ಗೊತ್ತಾಗಿದ್ದು. ವಾಪಸ್ಸು ಬರುವಾಗ ಅವರ ಚಿಕ್ಕ ಚೊಕ್ಕ ಮನೆ, ಮಲ್ಲಿಗೆಯ ಘಮಘಮ ವಾಸನೆ, ನಮ್ಮ ಮನೆ ಬಿಡುವುದು, ಹೊಸಮನೆ, ತರಕಾರಿ, ಹೂ ತೋಟ ಇವುಗಳೇ ನಮ್ಮ ಮಾತುಗಳಾಗಿದ್ದವು. ನನಗೆ ಯಾಕೋ ಒಂದು ರೀತಿಯಲ್ಲಿ ಬೇಸರವಾಗಿಬಿಟ್ಟಿತ್ತು. ಯಾವ ವಿಷಯಕ್ಕೆ ಎಂಬುದು ನನಗಂತೂ ಗೊತ್ತಾಗಲಿಲ್ಲ. ಆದರೆ ನಾನಂತೂ ಸಪ್ಪಗಾಗಿ ಬಿಟ್ಟಿದ್ದೆ. ನಮ್ಮ ಹೊಸಮನೆಯಲ್ಲಿ ಮಲ್ಲಿಗೆ ಚಪ್ಪರ, ಗುಲಾಬಿಯ ಗಿಡ ಹಾಕಲು ಜಾಗವಿದೆಯೇ ಎಂದು ಅಮ್ಮನನ್ನು ಕೇಳಿದಾಗ, ಅಮ್ಮ ನಕ್ಕು ಅದು ಅಪಾರ್ಟಮೆಂಟ್ ಕಣೋ ಅಲ್ಲಿ ಇವಕ್ಕೆಲ್ಲಾ ಜಾಗವಿರುವುದಿಲ್ಲ ಎಂದಾಗ ನನಗಂತೂ ಅಳುವೇ ಬಂದು ಬಿಟ್ಟಿತ್ತು. ಅಲ್ಲಿಗೆ ಹೋಗುವುದು ಬೇಡ, ಅದನ್ನು ಬಾಡಿಗೆಗೆ ಕೊಟ್ಟು ನಾವು ಇಲ್ಲಿಯೆ ಇರೋಣ ಎಂದು ಹಠಮಾಡಿದಾಗ ಅಮ್ಮ, ಅಪ್ಪ ನನ್ನನ್ನು ಸಮಾಧಾನ ಮಾಡುವಷ್ಟರಲ್ಲಿ ಸುಸ್ತಾಗಿದ್ದರು. ಮಲ್ಲಿಗೆ ಚಪ್ಪರಕ್ಕೆ, ಗುಲಾಬಿ ಗಿಡಕ್ಕೆ ಬದಲು ಆ ಹೊಸ ಮನೆಯಲ್ಲಿ ಮಕ್ಕಳಿಗೆ ಜಿಮ್, ಚಿಕ್ಕ ಈಜುಕೊಳ, ಆಡಲು ಅನೇಕ ಗೆಳೆಯ ಗೆಳತಿಯರು ಇರುತ್ತಾರಂತೆ ಎಂದಾಗ ನನಗೂ ಏನೋ ಹೊಸದು ಸಿಗುತ್ತದೆ ಎಂಬ ಆಸೆಯುಂಟಾದರೂ ಅಲ್ಲಿ ಹೋದಮೇಲೆ ನನ್ನ ಮಲ್ಲಿಗೆಯ ಚಪ್ಪರ, ಹೂದೋಟ, ತರಕಾರಿ ಇವುಗಳ ಮುಂದೆ ಇವೇನೂ ಅಲ್ಲ ಅನ್ನಿಸಿಬಿಟ್ಟಿತ್ತು. ಆದರೆ ಗೆಳೆಯ ಗೆಳತಿಯರ ಒಡನಾಟದಲ್ಲಿ ಕ್ರಮೇಣ ನನಗೆ ಹಳೆಯದೆಲ್ಲವೂ ಮರೆತೇ ಹೋದಂತಾಯಿತು.
ಮುಂದೆ ನಾನೂ ದೊಡ್ಡವನಾದೆ, ಓದಿ ಕೆಲಸ ಸೇರಿದಮೇಲೆ ‘ಮದುವೆ’ ಎಂದು ಅಮ್ಮ ಜ್ಞಾಪಸಿದಾಗ, ನೀನೇ ಯಾವುದಾದರೂ ಒಳ್ಳೆ ಹುಡುಗಿಯನ್ನು ನೋಡಿಬಿಡಮ್ಮಾ ಎಂದಿದ್ದೆ. ‘ಸದ್ಯ ನೀನೇ ಯಾರನ್ನೋ ನೋಡಿಕೊಂಡಿಲ್ಲವಲ್ಲ’ ಎಂದು ಅಮ್ಮ ನಿಟ್ಟುಸಿರು ಬಿಟ್ಟು ನಾನೇ ಹುಡುಕಿ ಒಳ್ಳೆಯ ಹುಡುಗಿಯನ್ನು ತೋರಿಸುತ್ತೇನೆ ಎಂದಳು. 
ಕೆಲವುದಿನಗಳಾದ ನಂತರ ಒಂದು ದಿನ ನಾನು ಮನೆಗೆ ಬಂದಾಗ ಒಬ್ಬಾತ, ಅವರೊಂದಿಗೆ ಒಬ್ಬ ಹುಡುಗಿ ಕುಳಿತು ಅಪ್ಪ, ಅಮ್ಮ ನೊಂದಿಗೆ ಮಾತನಾಡುತ್ತಿದ್ದರು. ಮಲ್ಲಿಗೆಯ ಘಮಘಮ ವಾಸನೆ ನನ್ನ ಮೂಗಿಗೆ ಬಡಿಯಿತು. ಯಾಕೋ ನನಗೆ ಹಳೆಯ ನೆನಪುಗಳು  ಬಂದರೂ, ‘ಯಾರೋ ಬಂದಿದ್ದಾರೆ’ ಎಂದುಕೊಂಡು ಸೀದಾ ಒಳಗೆ ಹೋದೆ. ಅಮ್ಮ ಒಳಗಿನಿಂದಲೇ, ‘ಅವರು ಯಾರು ಗೊತ್ತಾಯಿತೇನೋ’ ಎಂದು ಕೇಳಿದಳು. ನಾನು ‘ಇಲ್ಲ’ ಎಂದು ಒಳಗಿನಿಂದಲೇ ಉತ್ತರಿಸಿದೆ. ‘ಹೊರಗೆ ಬಾ  ಪರಿಚಯಿಸುತ್ತೇನೆ’ ಎಂದು ಅಮ್ಮ ಹೇಳಿದಾಗ ಹೊರಬಂದೆ. ಅವರ ಬಳಿಯಿದ್ದ ಬುಟ್ಟಿಯಲ್ಲಿದ್ದ ಮಲ್ಲಿಗೆಯ ಹೂವಿನ ವಾಸನೆ ಮತ್ತೆ ನನ್ನನ್ನು ಕೆದಕಿತು. ‘ಇವರು ನಮಗೆ, ನಿನಗೂ ಪರಿಚಯದವರೇ, ನಾನೇ ಅವರ ಮನೆಗೆ ಹೋಗಿ ಮಾತನಾಡಿ ಇಲ್ಲಿ ಕರೆಸಿದ್ದೇನೆ’ ಎಂದು ಅಮ್ಮ ಹೇಳಿದಾಗ ಆ ಹುಡುಗಿ ಮೆಲ್ಲಗೆ ನನ್ನನ್ನೇ ಓರೆಗಣ್ಣಿನಿಂದ ನೋಡಿದಳು. ಅಪ್ಪ ಅವರೊಂದಿಗೆ ಮಾತನಾಡುತ್ತಾ ಕುಳಿತಿದ್ದಾಗ, ಅಮ್ಮ ನನ್ನನ್ನು ಒಳಗೆ ಕರೆದು, ‘ಅವರು ನಿನ್ನ ಮದುವೆಯ ಬಗ್ಗೆ ಮಾತನಾಡಲು ಬಂದಿದ್ದಾರೆ. ನೀನು ಹುಡುಗಿಯನ್ನು ನೋಡಿ ಒಪ್ಪಿಗೆಯನ್ನು ಕೊಟ್ಟರೆ ನಿಧಾನವಾಗಿ ಅವರು ಕುಟುಂಬಸಮೇತರಾಗಿ ಬರುತ್ತಾರೆ’ ಎಂದಳು. ‘ಎಲ್ಲವನ್ನೂ ನಿನಗೇ ಬಿಟ್ಟಿದ್ದೇನಲ್ಲಾ, ಹುಡುಗಿ ಪರವಾಗಿಲ್ಲ ಎನ್ನಿಸುತ್ತದೆ, ನೀನೇ ಎಲ್ಲಾ ಮಾತನಾಡಿಬಿಡು’ ಎಂದೆ. ಅಮ್ಮ ನಗುತ್ತಾ, ‘ಆ ಹುಡುಗಿ ಯಾರು ಎಂದು ಗೊತ್ತಾಯಿತೇನೋ’ ಎಂದಳು. ‘ಇಲ್ಲ’ ಎಂದಾಗ, ‘ನೀನು ಚಿಕ್ಕವನಾಗಿದ್ದಾಗ ಮಲ್ಲಿಗೆಯ ಹೂವಿನಿಂದ ಹೊಡೆದು ಗಾಯ ಮಾಡಿದ್ದಳಲ್ಲಾ ಅವಳೇ’ ಎಂದಾಗ ಮತ್ತೆ ಮಲ್ಲಿಗೆಯ ವಾಸನೆ ನನ್ನನ್ನು ಯಾವುದೋ ಲೋಕಕ್ಕೆ ಕರೆದೊಯ್ದಿತು.
ಇಷ್ಟು ಹೇಳಿದ ಸೀನಿ ‘ ಆ ಹೂಕಳ್ಳಿಯೇ ಈ ಹುಡುಗಿ’ ಎಂದು ಸುಮಾಳನ್ನು ತೋರಿಸಿ ನಕ್ಕನು. ಆಗ ಸುಮಾ ನಗುತ್ತಾ ‘ಚಿಕ್ಕದಾಗಿ ನಡೆದ ಒಂದು ಘಟನೆಯನ್ನೇ ಪುರಾಣ ಮಾಡಿಬಿಟ್ಟಿದ್ದಾರೆ, ಈ ಹೂ(ಸುಮಾ)ಕಳ್ಳನನ್ನು ನಂಬಬೇಡಿ’ ಎಂದಳು. ನಾನು ‘ಹೋಗಲಿ ಬಿಡಿ, ನಿಮ್ಮ ಪ್ರೇಮ ಪುರಾಣ ಕೇಳಲು ತುಂಬಾ ಚೆನ್ನಾಗಿದೆ’ ಎಂದು ‘ಮಲ್ಲಿಗೆಯ ವಾಸನೆಯಂತೆ, ಗುಲಾಬಿಯ ಸೌಂದರ್ಯದಂತೆ ನಿಮ್ಮ ಪ್ರೇಮ ಪುರಾಣವೂ ಅಮರವಾಗಿರಲಿ, ಅದನ್ನು ನನ್ನ ಹೆಂಡತಿಗೂ ಹೇಳಲು ಹೊರಡುತ್ತೇನೆ ಅಪ್ಪಣೆ ಕೊಡಿ’ ಎಂದು ಎದ್ದು ನಿಂತೆ. ‘ಈಗಾಗಲೇ ಸಣ್ಣ ಘಟನೆ ಪುರಾಣವಾಗಿದೆ, ನೀವು ಅದಕ್ಕೆ ಇನ್ನಷ್ಟು ರಂಗು ಸೇರಿಸಿ ಮಹಾ ಪುರಾಣ ಮಾಡಬೇಡಿ’ ಎಂದು ಸುಮಾ ನಗುತ್ತಾ ಬೀಳ್ಕೊಟ್ಟಳು. ಸೀನಿ ನಾನು ತಂದ ಗುಲಾಬಿಯನ್ನೇ ನೋಡುತ್ತಾ, ಮಲ್ಲಿಗೆಯ ವಾಸನೆಯನ್ನು ಅಘ್ರಾಣಿಸುತ್ತ  ಯಾವುದೋ ಲೋಕದಲ್ಲಿದ್ದ. ನಾನು ಒಂದೆರಡು ಮಲ್ಲಿಗೆಯನ್ನು ಅವನ ಮೇಲೆ ಎರಚಿದಾಗ ಬೆಚ್ಚಿ, ಎದ್ದು ಕಣ್ಣುಕಣ್ಣು ಬಿಟ್ಟಾಗ ‘ಗಾಯವಾಯಿತೇನೋ, ಸುಮಾಗೆ ಹೇಳು ನೋಡಿಕೊಳ್ಳುತ್ತಾಳೆ’ ಎಂದು ಹೊರಬಂದೆ.  
ಇದಾದ ಒಂದೆರಡು ದಿನದ ನಂತರ ಸೀನಿ ‘ನೀನು ಕೊಟ್ಟ ಹೂಗಳ ಉಡುಗೊರೆ ನಮ್ಮ ಹಳೆಯ ನೆನಪನ್ನು ಕೆದಕಿ ಇನ್ನೂ 25 ವರ್ಷಇರುವಂತೆ ಮಾಡಿತು’ ಎಂದಾಗ ಪ್ರಕೃತಿ ನಿರ್ಮಿತವಾದ ಈ ಹೂವು, ವಾಸನೆ ಇವುಗಳಿಗೆ ಬೆಲೆಕಟ್ಟಲಾಗುತ್ತದೆಯೆ ಅನ್ನಿಸಿ, ‘ನೀನು ಅಂದು ಕೊಂಡಂತೆಯೇ ಆಗಲಿ ತುಂಬಾ ಸಂತೋಷ, ಇನ್ನು ಮುಂದೆ ತಿಂಗಳಿಗೊಮ್ಮೆ ನಿಮ್ಮ ಹಳೆಯ ಪುರಾಣವನ್ನು ನೆನಪಿಸಲು ನಮ್ಮ ಮನೆಯ ಹೂಗಳನ್ನು ಕೊಡುತ್ತೇನೆ’ ಎಂದಾಗ ಆ ಮುಖದಲ್ಲಿ ಕಂಡ ಸಂತೋಷವನ್ನು ವರ್ಣಿಸಲು ಸಾಧ್ಯವಿಲ್ಲ.  ‘ನಾವೇ ಯಾವಾಗಲಾದರೂ ಬಂದು ಬಿಡಿಸಿಕೊಂಡರೆ ನಿನ್ನದೇನು ಅಭ್ಯಂತರವಿಲ್ಲ ತಾನೇ?’ ಎಂದಾಗ ‘ಗೆಳೆಯನಾಗಿ ಅಷ್ಟೂ ಮಾಡಲಾರೆನೇ’ ಎಂದೆ. ‘ಈ ಕಾಂಕ್ರೀಟ್ ಕಾಡಿನಲ್ಲೂ ಹಳೆಯತನವನ್ನು ಉಳಿಸಿಕೊಂಡಿದ್ದೀರಲ್ಲಾ ಅದನ್ನು ಮೆಚ್ಚಬೇಕು’ ಎಂದ. - ಜಗದೀಶ ಚಂದ್ರ ಬಿ ಎಸ್

No comments:

Post a Comment