Friday, March 31, 2017

ಟುವಿಟುವಿ ಮತ್ತು ಪಾರಿವಾಳ - ಬಿ ಎಸ್ ಜಗದೀಶ ಚಂದ್ರ




ಟುವಿಟುವಿ ಮತ್ತು ಪಾರಿವಾಳ - ಬಿ ಎಸ್ ಜಗದೀಶ ಚಂದ್ರ
ಏನೋ ಟುವಿಚಿಕ್ಕ ಮನೆ ಕಟ್ಟುತ್ತಾ ಇದ್ದಿಯೇನೋ ಎಂದು ಪಾರಿವಾಳ ಕೇಳಿತು. ಹೌದು ಕಣೋ ಪಾರಿ, ನಮ್ಮ ಮನೆಗೊಂದು ಪುಟ್ಟ ಮರಿಗಳು ಬೇಡವೇ ಎಂದಿತು ಟುವಿಟುವಿ.
ನಿನಗಂತೂ ಬುದ್ದಿ ಇಲ್ಲ, ಸುಮ್ಮನೆ ಕೂತಲ್ಲಿ ಆರಾಮವಾಗಿ ಕೂಡದೇ ಅಂಡುಸುಟ್ಟವರಂತೆ ಅಲ್ಲಿ, ಇಲ್ಲಿ ಹಾರಾಡುತ್ತಿರುತ್ತಿ ಎಂದು ಪಾರಿವಾಳ ಮೂದಲಿಸಿತು. 
ನೀನು ಬಿಡು, ಸೋಮಾರಿ ಪಾರಿ, ನಿನ್ನ ಗೂಡಿಗೋ ಒಂದು ನಯವಿಲ್ಲ, ನಾಜೂಕಿಲ್ಲ, ನಿನಗೋ ಮನೆಯೂ ಬೇಕಿಲ್ಲ, ಆ ಮನುಷ್ಯರು ಇರೋ ಕಡೆಗೆಲ್ಲಾ ಹೋಗಿ, ಅವರು ಎಸೆಯುವ ಕಾಳುಗಳಿಗೆ ನಾಚಿಕೆ ಇಲ್ಲದೇ ಬಾಯೊಡ್ಡಿಕೊಂಡು ಹೋಗುತ್ತಿ ಎಂದು, ತನ್ನ ಕೆಲಸಮಾಡಿಕೊಂಡೇ ಪುರ್ ಪುರ್ ಎಂದು ಹಾರಾಡಿಸುತ್ತಾ ಮೂದಲಿಸಿತು.
ಆ ಜೇಡರ ಬಲೆ ಹುಡುಕು, ಅದನ್ನು ಅಂಟು ದಾರ ಮಾಡು, ಅದನ್ನು ತಂದು ಒದ್ದಾಡಿಕೊಂಡು, ಕುಳಿತು ಕೊಳ್ಳಲೂ ಆಗದೇ, ರೆಕ್ಕೆ ಬಡಿಯುತ್ತಾ ಎಲೆಗಳನ್ನು ಸೇರಿಸಿ, ಹೊಲಿದು, ಅದಕ್ಕೊಂದು ಗಂಟುಹಾಕಿ, ಅಬ್ಬಬ್ಬಾ ಯಾರಿಗೆ ಬೇಕು ಈ ತಾಪತ್ರಯ ಎಂದು ಪಾರಿವಾಳ ಕೊಂಕು ನುಡಿಯಿತು.
ಬಾಯಲ್ಲಿ ಕಚ್ಚಿಕೊಂಡು ಬಂದ ದಾರವನ್ನು ಎಲೆಗಳಿಗೆ ಸೇರಿಸಿ ಹೊಲೆಯುತ್ತಿದ್ದ ಟುವಿಟುವಿಗೆ ಈಗ ಬಲು ಸಿಟ್ಟು ಬಂತು. ಮತ್ತೆ ನಿನ್ನ ತರಹ ಒಂದೆರಡು ಕಡ್ಡಿಗಳನ್ನು ಇಟ್ಟು ಎಲ್ಲ ಮೊಟ್ಟೆಗಳೂ ಕಾಣುವಂತೆ ಗೂಡು ಕಟ್ಟಬೇಕಾ? ಎಷ್ಟು ಬಾರಿ ನೀನು ನಿನ್ನ ಮರಿಗಳನ್ನು ಕಳೆದು ಕೊಂಡಿರುವುದು, ನೆನಪಿಲ್ಲವೇ ಎಂದು ಜ್ಞಾಪಿಸಿತು.
ಅಯ್ಯೋ ಅದನ್ನೆಲ್ಲಾ ಯಾರು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ, ಇಟ್ಟುಕೊಂಡರೆ ಬದುಕಲು ಸಾದ್ಯವೇ, ಏನು ಆಗಬೇಕೋ ಅದು ಆಗುತ್ತದೆ ಎಂದು ವೇದಾಂತಿಯಂತೆ ಪಾರಿವಾಳ ನುಡಿಯಿತು.
ನಿನ್ನನ್ನು ನೋಡಿದರೆ ನನಗೆ ನಗು ಬರುತ್ತದೆ. ಒಂದು ಮನೆ, ಮರಿ, ಸಂಸಾರ ಇವೆಲ್ಲಾ ಮರಿಗಳು ದೊಡ್ಡವಾಗುವ ತನಕ ಇರಬೇಕು. ಅದು ಬಿಟ್ಟು ಯಾರದೋ ಮನೆಯೊಳಗೆ ಹೆಸರಿಗೊಂದು ಕಡ್ಡಿಗಳನ್ನಿಟ್ಟು, ಅದನ್ನು ಗೂಡು ಎಂದು ಕರೆದು ಅದರಲ್ಲಿ ಮೊಟ್ಟೆ ಇಟ್ಟುಬಿಟ್ಟರೆ ಆಗುವುದೇ. ಆ ಮನುಷ್ಯರೂ ಸಹ, ನಿನ್ನ ಕಾಟ ತಡೆಯಲಾದೇ ಒಮ್ಮೊಮ್ಮೆ ಕಿಟಕಿ ಹಾಕಿ ಬಿಟ್ಟರೆ ಆಗ ನಿನ್ನ ಪರದಾಟ ನೆನಪಿಲ್ಲವೇ. ನಿನಗಂತೂ ಈ ಜನ್ಮದಲ್ಲಿ ಬುದ್ದಿ ಬರುವುದಿಲ್ಲ ಎಂದು ಟುವಿಟುವಿ ತನ್ನ ಮೂರನೆಯ ಎಲೆಯನ್ನು ಹೊಲೆದು ಸೇರಿಸಿ ಕಡೆಯ ಗಂಟನ್ನು ಹಾಕಿತು. ಇಲ್ಲಿ ಹತ್ತಿರ ಹತ್ತಿ ಗಿಡ ಎಲ್ಲಿದೆ ಎಂದು ಪಾರಿವಾಳವನ್ನು ಕೇಳಿತು.
ಅಯ್ಯೋ ಹತ್ತಿ ಗಿತ್ತಿ ಎಲ್ಲ ಏಕೆ, ಸುಮ್ಮನೆ ಒಂದೆರಡು ಎಲೆಗಳನ್ನೇ ಹಾಕು, ನಿನ್ನ ಆ ಪುಟ್ಟಗೂಡಿಗೆ ಅದು ಬೇರೆ ಎಂದು ಪಾರಿವಾಳ ಉತ್ತರ ನೀಡಿತು.
ಎಲ್ಲ ಬಿಟ್ಟು ನಿನ್ನನ್ನು ಕೇಳಿದೆನಲ್ಲ, ನನಗೆ ಬುದ್ದಿ ಇಲ್ಲ ಎಂದು ಟುವಿಟುವಿ ಪುರ್ ಎಂದು ಹತ್ತಿ ತರಲು ಹಾರಿಹೋಯಿತು. ಆ ಹತ್ತಿಯನ್ನು ಪುಟ್ಟ ಕೊಕ್ಕಿನೊಳಗೆ ಸಿಕ್ಕಿಸಿಕೊಂಡು ತಂದು, ತನ್ನ ಪುಟ್ಟ ಗೂಡೊಳಗೆ ಇಟ್ಟು ಮೆತ್ತನೆಯ ಹಾಸಿಗೆ ಸಿದ್ದಪಡಿಸಲು ಹೆಣಗಾಡುತ್ತಿದ್ದುದನ್ನು ನೋಡಿ ಪಾರಿವಾಳ ಕಿಸಿಕಿಸಿ ಎಂದು ನಗುತ್ತಿತ್ತು. ನೋಡು ನೀನು ಆ ಪುಟ್ಟ ಗೂಡು ಕಟ್ಟುವಷ್ಟರಲ್ಲಿ ನನ್ನ ಗೂಡು ಆಗಲೆ ಸಿದ್ದ ಎಂದು ಜಂಬ ಕೊಚ್ಚಿತು. ಪಾರಿವಾಳ ಅಲ್ಲಿಯೆ ಇದ್ದ ಮನೆಯ ಬಾಲ್ಕನಿಯಲ್ಲಿ ತನ್ನ ಗೂಡನ್ನು ಕಟ್ಟಿತ್ತು. ನೋಡು ನೀನು ಹೇಳಿದಂತೆ ಮನೆಯೊಳಗೆ ಈಗ ಗೂಡು ಕಟ್ಟಿಲ್ಲ ಎಂದು ಜ್ಞಾಪಿಸಿ, ಏನೇ ಆಗಲಿ ನಿನ್ನಗೂಡು ತುಂಬಾ ಚೆನ್ನಾಗಿದೆಯೊ, ನಿನ್ನ ನಾಜೂಕು ನನಗೆ ಬರುವುದಿಲ್ಲ, ಗೆಳೆಯ ಎಂಬ ಸಲಿಗೆಯಿಂದ ಏನೇನೋ ಅಂದೆ, ಮನಸ್ಸಿಗೆ ತೊಗೊಳ್ಳಬೇಡ ಎಂದಿತು.
ಈಗ ಪಾರಿವಾಳ, ಟುವಿಟುವಿ ಇಬ್ಬರಿಗೂ ಜಗಳವಾಡಲು ಸಮಯವಿರಲಿಲ್ಲ. ಇಬ್ಬರೂ ತಮ್ಮ ಸಂಗಾತಿಗಳೊಂದಿಗೆ ನಲಿದಾಡುವ ಸಮಯ ಬಂದಿತ್ತು. ತಮ್ಮದೇ ಆದ ಪ್ರೇಮಲೋಕದಲ್ಲಿ ವಿಹರಿಸುತ್ತಿದ್ದರು. ಆ ಟುವಿಹಕ್ಕಿಯ ಗೂಡು ಜನ ಓಡಾಡುವ ಜಾಗದಲ್ಲೇ ಇದ್ದರೂ ಯಾರಿಗೂ ಅದು ಕಾಣಿಸುತ್ತಿರಲಿಲ್ಲ. ಅವರು ಹುಡುಕಿದರೂ ಅಲ್ಲಿ ಒಂದು ಗೂಡಿದೆಯೆಂದು ಗೊತ್ತಾಗುತ್ತಿರಲಿಲ್ಲ. ಟುವಿಹಕ್ಕಿಯೂ ಪುಟ್ಟದಾಗಿದ್ದುದರಿಂದ ಅದರ ಇರವು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಏನೋ ಅದು, ಬರುತ್ತೆ, ಹೋಗುತ್ತೆ ಎಂದು ಉದಾಸೀನದಿಂದಿರುತ್ತಿದ್ದರು.
ಈ ಪಾರಿವಾಳದ ಕತೆ ಹೀಗಲ್ಲ. ಅದು ಟಪಟಪ ಎಂದು ರೆಕ್ಕೆ ಬಡಿದು ಹಾರಿದರೆ, ಗೊಕ್ ಗೊಕ್ ಎಂದು ಕೂಗಿದರೆ ಎಲ್ಲರಿಗೂ ಅದರ ಇರವು ಗೊತ್ತಾಗುತ್ತಿತ್ತು. ಬೆಳಿಗ್ಗೆ ಕಾಳು ಹಾಕುವಾಗ ಮಾತ್ರ ಅದಕ್ಕೆ ಗೌರವ. ಉಳಿದ ವೇಳೆ ಅದು ಮನೆಯ ಹತ್ತಿರ ಬಂದರೆ ಹುಷ್ ಎಂದು ಓಡಿಸುತ್ತಿದ್ದರು. ಮನೆಯ ಹೆಂಗಸರಿಗಂತೂ ಅದು ಮನೆಯ ಬಳಿ ಬಂದರೆ ಸಾಕು, ಕೋಲೋ, ಪರಕೆಯನ್ನೋ ಹಿಡಿದು ಓಡಿಸುತ್ತಿದ್ದರು. ಇದೊಂದು, ಎಷ್ಟು ಓಡಿಸಿದರೂ ಮತ್ತೆ ವಕ್ಕರಿಸುತ್ತದೆ, ಇದು ಮಾಡುವ ಗಲೀಜನ್ನು ತೆಗೆದು ತೆಗೆದು ನಮ್ಮ ಮೈ ಬಿದ್ದು ಹೋಗಿದೆ ಎಂದು ಶಪಿಸುತ್ತಿದ್ದರು.
ಅಂತೂ ಮೊಟ್ಟೆ ಇಡುವ ಸಮಯ ಬಂದೇ ಬಿಟ್ಟಿತು. ಟುವಿ ಚಿಕ್ಕಿ ಬಂದು ಗೂಡನ್ನು ನೋಡಿ, ಹೊಗಳಿ ಅನಂದದಿಂದ ತನ್ನ ಮನೆಯೊಳಗೆ ಹೋಗಿ ಮೊಟ್ಟೆಗಳನ್ನು ಇಟ್ಟಿತು. ಟುವಿ ಜೋಡಿ ಯಾವಾಗ ಬೇಕೆಂದರೂ ತಮ್ಮ ಮನೆಗೆ ಸ್ವಚ್ಛಂದವಾಗಿ ಹೋಗಿಬರಬಹುದಿತ್ತು. ಆದರೆ ಪಾರಿವಾಳ, ಮನೆಯ ಬಳಿ ಯಾರೂ ಇರದ ಸಮಯದಲ್ಲಿ ಮಾತ್ರಾ ಹೋಗಿಬರಬಹುದಿತ್ತು. ಅವರ ಕಣ್ಣು ತಪ್ಪಿಸಿ ಹೋಗುವುದೆ ಅದಕ್ಕೊಂದು ಸವಾಲಾಗಿತ್ತು. ಹೀಗೇ ಕಣ್ಣುತಪ್ಪಿಸಿ ಮೆಲ್ಲಗೆ ಒಳಗೆ ಹೋಗಿ ಮೊಟ್ಟೆಯನ್ನೂ ಇಟ್ಟುಬಿಟ್ಟಿತು. ಕಾವುಕೊಡಲೂ ಅದಕ್ಕೆ ಸ್ವತಂತ್ರವಿರಲಿಲ್ಲ. ಇದೇ ಸಮಯದಲ್ಲಿ ಆ ಮನೆಯವರು ಇದು ಮೊಟ್ಟೆ ಇಟ್ಟಿರುವುದನ್ನು ಗಮನಿಸದೇ ಇಡೀ ಬಾಲ್ಕನಿಗೆ ಒಂದು ಮೆಶ್‍ಅನ್ನು ಕಟ್ಟಿಬಿಟ್ಟರು. 
ಈಗ ನಗುವ ಸರದಿ ಟುವಿಟುವಿಯದಾದರೂ ಅದು ದುಃಖದಿಂದ ಪಾರಿವಾಳಕ್ಕೆ, ನಾನು ಎಷ್ಟುಬಾರಿ ಹೇಳಿದೆ, ನೀನು ಕೇಳಲಿಲ್ಲ. ಈಗ ನೋಡು ಎಂದು ಅನುತಾಪ ತೋರಿಸಿತು. ಪಾರಿವಾಳಕ್ಕೆ ಏನೂ ಮಾಡಲೂ ತೋಚದೆ, ಅ ಮೆಶ್‍ಅನ್ನು ಕುಕ್ಕಿ ತೂತು ಮಾಡಲು ಹೋಗಿ ಆ ಮನೆಯವರಿಂದ ಮತ್ತಷ್ಟು ಶಾಪ ಹಾಕಿಸಿಕೊಂಡಿತು. ಅದರ ಈ ಒದ್ದಾಟವನ್ನು ನೋಡಿದ ಮನೆಯವರು, ಅದರ ಗೂಡು, ಮೊಟ್ಟೆ ಇವೆಲ್ಲವನ್ನು ನೋಡಿ, ಅಯ್ಯೋ ಇದೊಂದು ಶನಿ, ಮೊಟ್ಟೆ ಇಟ್ಟುಬಿಟ್ಟಿದೆ ಎಂದು ಇಡೀ ಗೂಡನ್ನೆ ತೆಗೆದು ಮನೆಯಾಚೆ, ಮಾಡಿನ ಸಂದಿಯಲ್ಲಿಟ್ಟುಬಿಟ್ಟರು. ಸಧ್ಯ, ಆ ಮೊಟ್ಟೆಗಳನ್ನು ಗೂಡು ಸಮೇತ ಎಸೆದು ಬಿಡಲಿಲ್ಲ.
ಈ ಮನುಷ್ಯರು ಎಂತಹ ನೀಚರು, ಹಿಂದೆ ಇದೇ ಜನ ನಮಗಾಗಿಯೇ ಒಂದು ಕಟ್ಟಡ ಕಟ್ಟಿ ಅದರಲ್ಲಿ ತೂತುಗಳನ್ನು ಮಾಡಿ, ನಮಗೆ ಗೂಡು ಕಟ್ಟಿಕೊಳ್ಳಲು ಅನುವು ಮಾಡಿಕೊಡುತ್ತಿದ್ದರೆ. ಈಗ? ಕೆಲವೂ ಕಟ್ಟಡಗಳಲ್ಲೂ ನಮಗೆ ಗೂಡಿಗೆಂದೇ ಜಾಗ ಬಿಡುತ್ತಿದ್ದರು. ಈಗ ನಮಗೆ ಒಂದಷ್ಟು ಕಾಳುಗಳನ್ನು ಹಾಕಿದರೆ ತಮ್ಮ ಕರ್ತವ್ಯವಾಯಿತು ಎಂದುಕೊಂಡುಬಿಟ್ಟಿದ್ದಾರೆ ಎಂದು ಪಾರಿವಾಳ ನಿಟ್ಟುಸಿರು ಬಿಟ್ಟಿತು. ಈ ಸುಖದಿಂದಲೆ ಈಗ ಸರಿಯಾಗಿ ಗೂಡು ಕಟ್ಟುವುದೂ ಮರೆತು ಹೋಗಿದೆ ಎಂದು ಪಾರಿವಾಳ ತನ್ನ ಮೊಟ್ಟೆಗಳನ್ನು ನೆನೆಸಿಕೊಂಡು ಕಣ್ಣೀರಿಟ್ಟಿತು. 
ಟುವಿಟುವಿ ಆರಾಮವಾಗಿ ತನ್ನ ಮರಿಗಳಿಗೆ ಕಾವು ಕೊಟ್ಟು, ಗುಟುಕು ಕೊಟ್ಟು ಸಲಹುತ್ತಿರಬೇಕಾದರೆ, ಪಾರಿವಾಳ ತನ್ನ ಗೂಡನ್ನು ಇನ್ನೆಲ್ಲಿಗೋ ಸ್ಥಳಾಂತರಿಸಿಕೊಂಡು ಪರಿತಾಪ ಪಡುತ್ತಿತ್ತು. ಅಲ್ಲಿಯೆ ಕಷ್ಟ ಪಟ್ಟು ಹೋಗಿ ಮರಿಗಳಿಗೆ ಕಾವು, ಗುಟುಕು ಕೊಡುತ್ತಿತ್ತು. ಈ ಮದ್ಯೆ ಇದರ ಗೂಡನ್ನು ನೋಡಿಕೊಂಡ ಬೆಕ್ಕಣ್ಣ. ಅದನ್ನು ನೋಡಿದ ಪಾರಿವಾಳಕ್ಕೆ ಎದೆ ಒಡೆದಂತಾಯಿತು. ಇರುವ ಧೈರ್ಯವೆಲ್ಲಾ ಸೇರಿಸಿ ಆ ಬೆಕ್ಕಿಗೆ ತೋರಿಸಿದರೂ ಅದು ಕ್ಯಾರೇ ಎನ್ನದೇ ಹೊಂಚು ಹಾಕುತ್ತಲೇ ಇತ್ತು. ಅಂತೂ ಪಾರಿವಾಳಕ್ಕೆ ಒಂದೊಂದು ಘಳಿಗೆಯೂ ಒಂದೊಂದು ಯುಗದಂತೆ ಕಾಣುತ್ತಿತ್ತು.
ಅಂತೂ ಆ ದಿನ ಬಂದೇ ಬಿಟ್ಟಿತು. ಟುವಿಟುವಿಗೆ ಮೂರು ಮುದ್ದಾದ ಮರಿಗಳಾಗಿದ್ದವು. ಟೀ, ಟೀ ಎನ್ನುತ್ತ ಕೀರಲು ಧ್ವನಿಯಲ್ಲಿ ಅವು ಕಿರುಚುತ್ತಿದ್ದರೂ ಅದು ಟುವಿಟುವಿಗೆ ಮಾತ್ರ ಕೇಳಿಸುತ್ತಿತ್ತು. ಟುವಿಟುವಿ ಜೋಡಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಇತ್ತ ಪಾರಿವಾಳವೂ ಹಾಗೂ ಹೀಗೂ ಮಾಡಿ 4 ಮರಿಗಳನ್ನು ಮಾಡಿಕೊಂಡಿತು. ಆದರೆ ಆ ಪಾರಿವಾಳದ ಜೋಡಿಗೆ, ಮರಿಗಳಾದ ಸಂತೋಷಕ್ಕಿಂತ ಆ ಬೆಕ್ಕಣ್ಣನಿಂದ ಅವನ್ನು ಹೇಗೆ ರಕ್ಷಿಸುವುದು ಎಂಬ ಆತಂಕವೇ ಹೆಚ್ಚಾಗಿತ್ತು. ಅದಕ್ಕೆ ತಕ್ಕಂತೆ ಒಂದು ದಿನ ಆ ದುರ್ದಿನ ಬಂದೇ ಬಿಟ್ಟಿತು. ಪಾರಿವಾಳದ ಕಣ್ಣು ತಪ್ಪಿಸಿ ಆ ಬೆಕ್ಕು ಆ ಎಲ್ಲಾ ಮರಿಗಳನ್ನೂ ನುಂಗಿಹಾಕಿತ್ತು. ಆ ದುಃಖವನ್ನು ತಾಳಲಾರದೆ ಆ ಜೋಡಿಯು ಇನ್ನೆಲ್ಲಿಗೋ ಹಾರಿಹೋಗಿದ್ದವು. ಟುವಿಟುವಿಗೆ ಮಾತ್ರಾ ತುಂಬಾ ದುಃಖವಾಯಿತು. ಹಟಮಾರಿ ಪಾರಿವಾಳಕ್ಕೆ ತಕ್ಕ ಶಾಸ್ತಿಯಾಯಿತು ಎಂದೆನ್ನಿಸಿದರೂ, ಹೀಗಾಗಬಾರದಿತ್ತು, ಆ ಪಾರಿವಾಳಕ್ಕಾದರೂ ಬುದ್ದಿಬೇಡವೇ ಎಂದು ಮರುಕ ಪಟ್ಟಿತು.
ಈಗ ಟುವಿಟುವಿ ಹಕ್ಕಿಯ ಮರಿಗಳು ಹಾರುವುದನ್ನು ಕಲಿತಿದ್ದವು. ಅವಕ್ಕೆ ಚಿಕ್ಕ ಹುಳಗಳನ್ನು ತಿನ್ನುವುದನ್ನೂ ಹೇಳಿಕೊಟ್ಟವು. ಅವಕ್ಕೆ ರೆಕ್ಕೆ ಬಲಿಯತೊಡಗಿತು. ಒಂದು ದಿನ ಟುವಿಟುವಿ ಜೋಡಿ ನೊಡು ನೋಡುತ್ತಿದ್ದಂತೆಯೇ ಅವು ರೆಕ್ಕೆ ಬಿಚ್ಚಿ ಹೊರಗೆ ಹಾರಿಹೋದವು. ಅವು ಹೋದವಲ್ಲಾ ಎಂದು ಈ ಜೋಡಿ ದುಃಖ ಪಡಲಿಲ್ಲ, ಅದಕ್ಕೆ ಬದಲು ತಮ್ಮ ಕರ್ತವ್ಯ ಯಾವುದೆ ತೊಂದರೆ ಇಲ್ಲದೇ ಮುಗಿಯಿತಲ್ಲ ಎಂದು ಧನ್ಯತೆಯಿಂದ ಆನಂದ ಪಟ್ಟವು. ಮತ್ತೆ ಮುಂದಿನ ಬಾರಿ ನೋಡೋಣ ಎಂದು ತಮ್ಮ ದಾರಿ ಹಿಡಿದವು. ಟುವಿ ಟುವಿ ಹಕ್ಕಿಯ ಪುರ್ ಪುರ್ ಹಾರಾಟ ಮತ್ತೆ ಮುಂದುವರೆಯಿತು. ಅದರ ಗೂಡಿನ ಎಲೆಯೂ ಒಂದು ದಿನ ಹಣ್ಣೆಲೆಯಾಗಿ ಇತರ ಹಣ್ಣೆಲೆಗಳೊಂದಿಗೆ ಬೆರೆತು ಮಣ್ಣೊಳಗೆ ಲೀನವಾಯಿತು. 
ಈಗ ನಮ್ಮ ಮನೆಯ ನಂದಬಟ್ಟಲು ಗಿಡದಲ್ಲಿ ಇಡೀ ಎಲೆಗಳೇ ಕಣ್ಮರೆಯಾಗುವಷ್ಟು ಹುಳಗಳ ಕಾಟವೋ ಕಾಟ. ಕಾರಣ ಟುವಿಟುವಿ ಮತ್ತು ಗುಬ್ಬಚ್ಚಿಗಳ ಕಣ್ಮರೆ. ಅದೇ ಹಳ್ಳಿಗೆ ಹೋದಾಗ ನಂದಬಟ್ಟಲಿನ ಗಿಡ ಹೂಗಳಿಂದ ಕಂಗೊಳಿಸುತ್ತಿತ್ತು. ಅದರಲ್ಲಿ ಗುಬ್ಬಚ್ಚಿಗಳು, ಟುವಿಟುವಿಗಳು ಸಂತೋಷದಿಂದ ಹುಳಗಳನ್ನು ಹುಡುಕಿಹುಡುಕಿ ತಿನ್ನುತ್ತಾ ನಲಿಯುತ್ತಿದ್ದವು. ಈ ಟುವಿಟುವಿಗಳಲ್ಲಿ ಟುವಿಚಿಕ್ಕ, ಅದರ ಮರಿಗಳೂ ಸೇರಿವೆಯೇನೋ ಎಂದು ರೋಮಾಂಚನವಾಯಿತು. ಅಂತೂ ಈ ಪುಟ್ಟ ಹಕ್ಕಿಯ ಪುಟ್ಟ ಗೂಡು, ಅದರ ನಾಜೂಕಿನ ಹೊಲಿಗೆ, ಕೇವಲ ಮೂರು ಎಲೆಗಳನ್ನೆ ಸೇರಿಸಿ, ಎದುರಿಗೆ ಇದ್ದರೂ ಯಾರಿಗೂ ಕಾಣದಂತೆ ಯಾಮಾರಿಸಿದ್ದು, ಅದರಲ್ಲಿ ಮರಿಗಳನ್ನು ಬೆಳೆಸಿದ್ದು ಎಲ್ಲವೂ ನೆನಪಿನಲ್ಲಿ ಅಚ್ಚಳಿಯದೇ ಉಳಿಯಿತು.
ಎಲೆಯ ಗೂಡಲ್ಲಿ ಟೂವಿ ಟೂವಿ ಹಕ್ಕಿಯ ಮರಿಗಳು 

ಗುಬ್ಬಚ್ಚಿಗಿಂತಲೂ ಚಿಕ್ಕದಾದ ಟೂವಿ ಟೂವಿ ಹಕ್ಕಿ, ಪಾದರಸದಂತೆ ಸದಾ ಚುರುಕಾಗಿರುವ ಇದು ಕುಳಿತಿದ್ದನ್ನು  ನೋಡುವುದೇ ಕಷ್ಟ 

ಎಲೆಯ ಗೂಡಿನಲ್ಲಿರುವ  ಮರಿಗೆ ಅಮ್ಮನ ಪ್ರೀತಿಯ ಗುಟುಕು 

ನನ್ನ ಎಲೆಯ ಮನೆ ಸಿದ್ದ ವಾಗುತ್ತಿದೆ, ಗೃಹ ಪ್ರವೇಶವೊಂದೇ ಬಾಕಿ 

ಇದು ಎಲೆಯೋ ಅಥವಾ ಎಲೆಯ ಪೊಟ್ಟಣವೋ!! ಟುವಿ ಟುವಿ ಹೊಲಿದ ಹೊಲಿಗೆ ಹೇಗಿದೆ? 

ನಗಬೇಡಿ, ಇದು ಸೋಮಾರಿ ಪಾರಿವಾಳದ ಗೂಡು 

ಗೂಡು ಕಟ್ಟುವುದಕ್ಕೇಕೆ ಕಷ್ಟ ಪಡಬೇಕು, ಜನರೇ ಕಡ್ಡಿ ತುಂಬಿ ಇಟ್ಟಿದ್ದಾರೆ ಅದರಲ್ಲೇ ಮೊಟ್ಟೆ ಇಟ್ಟರಾಯಿತು 

ಇಂತಹ ಕಡೆ ಮೊಟ್ಟೆ ಇಟ್ಟು ಅದಕ್ಕೆ ಕಾವು ಕೊಟ್ಟು ಮರಿ ಮಾಡಿದರೇನು ಪ್ರಯೋಜನ, ಕಳ್ಳ ಬೆಕ್ಕು ಸುಮ್ಮನಿರುತ್ತದೆಯೇ?

ಕಳ್ಳ ಬೆಕ್ಕು ಈ ಪಾರಿವಾಳ ಎಲ್ಲಿ ಗೂಡು ಇಟ್ಟಿದಿಯೋ ನೋಡಬೇಕು ಎಂದು ಹೊಂಚು ಹಾಕುತ್ತಿದೆ 















1 comment: