Friday, March 31, 2017

ಕನ್ನಡದ ಕನಸು - ಬಿ ಎಸ್ ಜಗದೀಶ ಚಂದ್ರ


ಕನ್ನಡದ ಕನಸು - ಬಿ ಎಸ್ ಜಗದೀಶ ಚಂದ್ರ
ಒಂದು ಘಟನೆ
ನಾನು ಅಂದು ಜಯನಗರದ ನಮ್ಮ ಮನೆಗೆ ಬಂದೆ. ಸುಮಾರು ವರ್ಷಗಳ ನಂತರ ಬರುತ್ತಿದ್ದುದರಿಂದ ನನಗೆ ಅಲ್ಲಿ ಎಲ್ಲವೂ ಹೊಸದಾಗಿ ಕಾಣಿಸುತ್ತಿದ್ದವು. ಎದುರು ಮನೆಯಾತ ಮುದುಕರಾಗಿದ್ದಂತೆ ಕಂಡಿತು. ಪಕ್ಕದ ಮನೆಯ ಮಗು ಇದ್ದಕ್ಕಿದ್ದಂತೆ ದೊಡ್ಡ ಹುಡುಗನಂತೆ ಕಾಣಿಸಿದ. ದೂರದಿಂದ ಬಂದ ನನಗೆ ಬಹಳ ದಣಿವಾಗಿತ್ತು. ಮನೆಗೆ ಹೋಗಿ ಸ್ವಲ್ಪ ನಿದ್ದೆಮಾಡಿದೆ. ನಂತರ ನನಗೆ, ಅಲ್ಲಿನ ಎಲ್ಲಾ ಜಾಗಗಳಲ್ಲೂ ತಿರುಗಬೇಕೆಂಬ ಆಸೆ ಪ್ರಬಲವಾಯಿತು. ನನಗೆ ಓಡಾಡಲು ಇದ್ದುದು ನಟರಾಜ ಸರ್ವಿಸ್ ಅಥವಾ ಬೆಂಗಳೂರಿನ ಬಸ್ಸು. 
ಬೇರೆ ಯಾರಿಗೋ ಕಾರಿನಲ್ಲೋ ಸ್ಕೂಟರಿನಲ್ಲೋ ಕರೆದು ಕೊಂಡು ಹೋಗು ಎಂದು ದುಂಬಾಲು ಬೀಳದೆ ನನಗೆ ಬೇಕಾದ ಕಡೆ ಹೋಗಬಹುದು, ಜೊತೆಗೆ ಅಂತಹ ಕಡೆ ಸಿಗುವ ಅನುಭವವೆ ಹೊಸದು ಎಂದು ಅಲ್ಲಿಗೆ ಬಂದ ಒಂದು ಬಸ್ ಹತ್ತಿದೆ. ಅದು 4ನೇ ಬ್ಲಾಕಿನ ಹತ್ತಿರ ಬಂದಾಗ “ಜಯಬನಿ” ಯಾರ್ರೀ, ಮುಂದೆ ಬನ್ನಿ ಎಂದು ನಿರ್ವಾಹಕ ಕೂಗುತ್ತಿದ್ದ. ಸ್ವಲ್ಪ ಸಮಯದ ನಂತರ ನನಗೆ, ಅದು ಜಯನಗರ ಬಸ್‍ನಿಲ್ದಾಣ ಎಂದು ಜ್ಞಾನೋದಯ ವಾಯಿತು. ಬಸ್ಸಿನಲ್ಲಿ ಎಲ್ಲರೂ ಬನಿ, ಬನಿ ಎನ್ನುತ್ತಿದ್ದರು. ನಿರ್ವಾಹಕ ನನ್ನ ಬಳಿ ಬಂದು ಯಾವ ಬನಿಗೆ ಎಂದ. ನಾನು ಅರ್ಥವಾಗದವನಂತೆ ಕೆಂಪೆಗೌಡ ಬಸ್ ಸ್ಟಾಂಡ್ ಎಂದೆ. ಅವನು ನನ್ನನ್ನೇ ಮಿಕ ಮಿಕ ನೋಡಿ ನಾನು ಏನೋ ಪ್ರಮಾದ ಮಾಡಿದ್ದನೇನೋ ಎಂಬಂತೆ ಮುಖಮಾಡಿ “ಕೆಂಬನಿಗಾ” ಎಂದ. ಈಗ ಅವನನ್ನು ಮುಖ ಮುಖ ನೋಡುವ ಸರದಿ ನನ್ನದಾಗಿತ್ತು. ಒಳಗೋಳಗೆ ನನಗೆ ಖುಷಿಯಾಗಿತ್ತು ಆದರೂ ಏನೂ ತಿಳಿಯದವನ ಹಾಗೆ “ಏನು ಹಾಗೆಂದರೆ?” ಎಂದೆ. ಅವನು ನನ್ನನ್ನೆ ಕೆಕ್ಕರಿಸಿ ನೋಡಿ ಬೆಂಗಳೂರಿನಲ್ಲಿದ್ದು ಅಷ್ಟೂ ಗೊತ್ತಿಲ್ಲವಾ “ಕೆಂಪೆಗೌಡ ಬಸ್ ನಿಲ್ದಾಣ” ಎಂದು ಹೇಳಿ, ಚೀಟಿ ಹರಿದುಕೊಟ್ಟ. ಆಗ ನನ್ನ ಪಕ್ಕದಲ್ಲಿದ್ದವ ನನಗೆ ಪಕೆಂವೃಗೆ ಒಂದು ಚೀಟಿ ಕೊಡಿ ಎಂದ. ಅದೇನು ಎಂದೆ. ಅವನು ಸಧ್ಯ ಎನೂ ಮಾತನಾಡದೇ ‘ಪಟೇಲ್ ಕೆಂಪಯ್ಯ ವೃತ್ತ’ ಎಂದ. ಅದು ಮಿನರ್ವಾ ಸರ್ಕಲ್‍ನ ಹಳೆಯ ಹೆಸರಲ್ಲವೆ, ಇದ್ದಕ್ಕಿದ್ದಹಾಗೆ ಮರುಹುಟ್ಟು ಪಡೆದಿದೆಯಲ್ಲಾ ಎಂದು ಅಶ್ಚರ್ಯವಾಯಿತು. ಈ ಕನ್ನಡ ಕಿರುಸ್ವರೂಪಗಳನ್ನು ನಾನೆ ಹಿಂದೆ “ನನ್ನ ಅನಿಸಿಕೆ” ಎಂದು ಬರೆದಿದ್ದಿದನ್ನು ತದ್ವತ್ತಾಗಿ ಅನುಷ್ಠಾನಕ್ಕೆ ತಂದಿದ್ದಾರಲ್ಲಾ ಎಂದು ಮಹದಾನಂದವಾಯಿತು.  ಹೀಗೆ ಇನ್ನು ಏನೇನು ಆಗಿದೆಯೋ ನೋಡೋಣ ಎಂದು ಖಾಲಿ ಇದ್ದ ಒಂದು ಸೀಟಿನಲ್ಲಿ ಕುಳಿತೆ.  ಆಗ ಮುಂದಿನ ಬನಿ ತಿನಂಶ್ರಿ ಎಂದು ಉದ್ಘೋಷವಾಯಿತು. ಇಂಗ್ಲಿಷಿನಲ್ಲೂ ‘ನೆಕ್ಸ್ಟ್ ಸ್ಟಾಪ್ ಈಸ್ ತೀನಂಶ್ರೀ’ ಎಂದಿತು ಅ ಕಂಚಿನ ಧ್ವನಿ. ಓಹೋ ಸೌತ್ ಎಂಡ್ ಸರ್ಕಲ್ ನ ಹೊಸ ಹೆಸರು ಅಲ್ಲಲ್ಲಾ ನಿಜವಾದ ಹೆಸರು ಎಂದು ಮನದಟ್ಟಾಯಿತು. ಪರವಾಗಿಲ್ಲ, ಟಿ ಎನ್ ಎಸ್ ಸರ್ಕಲ್ ಎಂದು ಹೇಳಲಿಲ್ಲ ಎಂದು ಸಂತೋಷವಾಯಿತು. ಹೀಗೆಯೇ ಮುಂದೆ ರಾವಿಶಿಕಾ (ರಾಷ್ಟ್ರೀಯ ವಿದ್ಯಾಲಯ ಶಿಕ್ಷಕರ ಕಾಲೇಜು), ಲಾಪದ್ವಾ (ಲಾಲ್‍ಬಾಗ್ ಪಶ್ಚಿಮ ದ್ವಾರ), ಪಕೆಂವೃ (ಪಟೇಲ್ ಕೆಂಪಯ್ಯ ವೃತ್ತ), ಪುಭ ಬನಿ (ಪುರಭವನ ಬನಿ), ಮನಪಾ ಬನಿ (ಮಹಾ ನಗರ ಪಾಲಿಕೆ ಬನಿ), ಕಾಭ ಬನಿ (ಕಾವೇರಿ ಭವನ ಬನಿ), ಕೆಂಬನಿಗಳು ಬಂದವು. ರಸ್ತೆಯ ಎಲ್ಲಾಕಡೆಯ ಬನಿ ಗಳಲೂ,್ಲ ಕನ್ನಡದಲ್ಲಿ ಅ ನಿಲ್ದಾಣದ ಹೆಸರು, ಪಕ್ಕದಲ್ಲೆ ಅದರ ಕನ್ನಡದಲ್ಲಿ ಅದರ ಕಿರುಸ್ವರೂಪ, ಕನ್ನಡದಲ್ಲಿ ಬರೆದಂತೆಯೆ ಇಂಗ್ಲಿಷ್‍ನಲ್ಲಿಯೂ ಅದರ ಕಿರುಸ್ವರೂಪವನ್ನು ಬರೆದಿದ್ದರು. ಈಗ ನನಗಂತೂ ಇಡೀ ಬೆಂಗಳೂರನ್ನು ಸುತ್ತಿ ಏನೇನು ಬದಲಾವಣೆಗಳಾಗಿದೆಯೋ ಈಗಲೆ ನೋಡಿಬಿಡಬೇಕೆಂಬ ಆಸೆಯುಂಟಾಯಿತು. ದಾರಿಯಲ್ಲಿ ಎಲ್ಲಾಕಡೆಗಳಲ್ಲೂ ಕನ್ನಡದ ಹಲಗೆಗಳು, ಕನ್ನಡದಲ್ಲಿ ಅದರ ಕಿರುಸ್ವರೂಪಗಳು, ಕನ್ನಡದಲ್ಲಿ ಬರೆದಂತೆಯೇ ಇಂಗ್ಲಿಷ್‍ನಲ್ಲಿಯೂ ಅದರ ಕಿರುಸ್ವರೂಪಗಳು ಇವನ್ನು ನೋಡಿ ಆಶ್ಚರ್ಯವಾಯಿತು. 
ಈಗ ಮತ್ತಿಕೆರೆ ಮೂಲಕ ಯಲಹಂಕಕ್ಕೆ ಹೋಗುವ ಬಸ್ ಹತ್ತಿದೆ. ಮೊದಲನೆಯ ಬನಿ, ರಾಗಾಂ ಬನಿ (ರಾಜೀವ್‍ಗಾಂದಿ ಬನಿ). ಇಲ್ಲಿ ಸೆಂಟ್ರಲ್ ಅಥವಾ ನಟರಾಜ್ ಎಂಬ ಹೆಸರು ಮಾಯವಾಗಿತ್ತು. ನಂತರ ಮಲ್ ಅರ 5 ಅಂದರೆ ಮಲ್ಲೇಶ್ವರ 5ನೇ ಅಡ್ಡರಸ್ತೆ, ನಂತರ ಮಲ್ ಅರ 8 ಅಂದರೆ ಮಲ್ಲೇಶ್ವರ 8ನೇ ಅಡ್ಡರಸ್ತೆ, ಕಾಮಲ್ ಬನಿ (ಕಾಡು ಮಲ್ಲೆಶ್ವರ ಬನಿ) ಅದರ ನಂತರ  ಪಪೂಮಂ (ಪದವಿ ಪೂರ್ವ ಮಂಡಲಿ) (ಅಥವಾ ಮಲ್ ಅರ 18 ಅಂದರೆ ಮಲ್ಲೇಶ್ವರ 18ನೇ ಅಡ್ಡರಸ್ತೆ), ಯಶ್‍ಬನಿ, ಸುಂಬಾಬನಿ (ಸುಂಕದ ಬಾಗಿಲು ಬನಿ), ಅಯ್‍ದೇಬನಿ (ಅಯ್ಯಪ್ಪ ದೇವಸ್ಥಾನ ಬನಿ) ದಿಪಾ ಬನಿ (ದಿವಾನರ ಪಾಳ್ಯ ಬನಿ) ರಾತಾಂವಿ ಬನಿ (ರಾಮಯ್ಯ ತಾಂತ್ರಿಕ ವಿದ್ಯಾಲಯ ಬನಿ), ಮತ್ತಿಬನಿ (ಮತ್ತಿಕೆರೆ ಬನಿ), ಗೋಬನಿ (ಗೋಕುಲ ಬನಿ), ಭಾಎನಿ ವೃತ್ತ (ಭಾರತ್ ಎಲಕ್ಟ್ರಾನಿಕ್ಸ್ ನಿಗಮ ವೃತ್ತ), ಭಾಎನಿಆಸ್ (ಭಾರತ್ ಎಲಕ್ಟ್ರಾನಿಕ್ಸ್ ನಿಗಮ ಆಸ್ಪತ್ರೆ), ನಾಗಾವೃ (ನಾಗಾಲ್ಯಾಂಡ್ ವೃತ್ತ) ದೊಡ್‍ಬೊಂಬನಿ (ದೊಡ್ಡ ಬೊಮ್ಮಸಂದ್ರ ಬನಿ). ನಂಬಬನಿ (ನಂಜಪ್ಪ ಬಡಾವಣೆ ಬನಿ), ಮೈರಾಬ್ಯಾನ್ (ಮೈಸೂರು ರಾಜ್ಯ ಬ್ಯಾಂಕ್ ಬನಿ), ವಿದ್ಯಾಪು ಬನಿ (ವಿದ್ಯಾರಣ್ಯಪುರ ಬನಿ), ದೊಡ್‍ಬೆ ಬನಿ (ದೊಡ್ಡ ಬೆಟ್ಟಹಳ್ಳಿ ಬನಿ), ಚಿಕ್‍ಬೆ ಬನಿ (ಚಿಕ್ಕ ಬೆಟ್ಟಹಳ್ಳಿ ಬನಿ), ತಿರುಬ ಬನಿ (ತಿರುಮಲ ಬಡಾವಣೆ ಬನಿ), ಅಟ್ಟೂರ್‍ಬ ಬನಿ (ಅಟ್ಟೂರು ಬಡಾವಣೆ ಬನಿ), ಯಡೈ ಬನಿ (ಯಲಹಂಕ ಡೈರಿ ಬನಿ), ಯಲ್‍ಉನ ಬನಿ (ಯಲಹಂಕ ಉಪನಗರ ಬನಿ), ಚಿಕ್‍ಬೊಂಬನಿ (ಚಿಕ್ಕ ಬೊಮ್ಮಸಂದ್ರ ಬನಿ), ಶಬನಿ (ಶರಾವತಿ ಬನಿ), ಶೇಕಾಬನಿ (ಶೇಷಾದ್ರಿಪುರಂ ಕಾಲೆಜು ಬನಿ), ಎನ್‍ಇಎಸ್ – ಯಲ್‍ದೊರ ಬನಿ (ಯಲಹಂಕ ದೊಡ್ಡಬಳ್ಳಾಪುರ ರಸ್ತೆ ಬನಿ), ಯಲ್‍ಮಾಗು ಬನಿ (ಯಲಹಂಕ ಮಾರುತಿ ಗುಡಿ ಬನಿ), ಯಲ್‍ರೈನಿ (ಯಲಹಂಕ ರೈಲು ನಿಲ್ದಾಣ). ಹೀಗೆ ದಾರಿಯುದ್ದಕ್ಕೂ ಅನೆಕ ಬನಿಗಳು ಬಂದವು. ಇಂಗ್ಲಿಷ್‍ನಲ್ಲೂ ಬನಿ ಎಂದೇ ಬರೆದಿದ್ದುದರಿಂದ ನನಗೂ ಈಗ ಬಸ್‍ಸ್ಟಾಂಡ್ ಅನ್ನುವ ಹೆಸರು ಮರೆತೇ ಹೋದಂತಾಗಿ, ನನ್ನ ಬಾಯಲ್ಲೂ ಬನಿ ಎಂದೇ ಬರುತ್ತಿತ್ತು.  
ಆಟೋದವರು, ಪ್ರಯಾಣಿಕರು, ರೇಡಿಯೋಗಳಲ್ಲಿ ಎಲ್ಲರೂ ಈಗ ಕನ್ನಡದಲ್ಲೆ ನಿಲ್ದಾಣಗಳ ಹೆಸರನ್ನು ಹೇಳುತ್ತಿದ್ದರು. ಕನ್ನಡ ಬರದವರೂ ಸಹ ಕೆಂಬನಿ, ಯಲ್‍ಮಾಗು ಬನಿ, ಭಾಎನಿ ಬನಿ ಎಂದೇ ಹೇಳುತ್ತಿದ್ದರು. ಯಾರೋ ಒಬ್ಬರು ಕನ್ನಡ ಬರದವರು ಚಿಕ್‍ಬೊಂ ಬನಿ ಎಂದರೆ, ಚಿಕ್ಕ ಬೊಮ್ಮಸಂದ್ರ ಬಸ್ ನಿಲ್ದಾಣ, ಅಂದರೆ ಛೋಟಾ ಬೊಮ್ಮಸಂದ್ರ ಬಸ್ ಅಡ್ಡಾ ಎಂದು ವಿವರಿಸುತ್ತಿದ್ದರು. ಅದಕ್ಕೆ ಇನ್ನೊಬ್ಬರು ಚಿಕ್ಕ ಮತಲಬ್ ಛೋಟಾ, ಅಡ್ಡಾ ಮತ್‍ಲಬ್ ನಿಲ್ದಾಣ ಹೈ ಕ್ಯಾ, ಎಂದು ಕೇಳುತ್ತಿದ್ದರು.  ಹೀಗೆ ಕನ್ನಡ ತನ್ನ ಕಂಪನ್ನು ಎಲ್ಲೆಡೆ ಪಸರಿಸುತ್ತಿತ್ತು. ನಾನು ಬೆಂಗಳೂರಿನಿಂದ ಹೊರಡುವ ಮುನ್ನ ಕನ್ನಡ ಬೆಳವಣಿಗೆಗೆ ಜನಸಾಮಾನ್ಯರ ಕಿರುಕಾಣಿಕೆ ಎಂದು ನನ್ನ ಅನಿಸಿಕೆಯನ್ನು ಪತ್ರಿಕೆಗೆ ಕಳುಹಿಸಿ ಅದನ್ನು ಮರೆತೆ ಬಿಟ್ಟಿದ್ದೆ. ಆದರೆ ಅದು ಹೀಗೆ ನಿಜವಾಗಿಯೂ ಸಾಕಾರವಾಗಿಬಿಟ್ಟಿದೆಯಲ್ಲಾ ಎಂದು ನನಗಂತೂ ಬಹಳ ಖುಷಿಯಾಯಿತು. ಮುಖ್ಯವಾಗಿ ಬಸ್ಸುಗಳಲ್ಲಿ ನಿಲ್ದಾಣಗಳು ಬರುವ ಮುಂಚೆ, ಬಂದಾಗ ಬರುವ ಮುದ್ರಿತ ಧ್ವನಿಯಲ್ಲೂ ಕನ್ನಡವನ್ನು ಅಳವಡಿಸಿಕೊಂಡಿದ್ದುದು, ಕನ್ನಡದ ಕಿರುಸ್ವರೂಪವನ್ನೆ ಇಂಗ್ಲಿಷ್‍ನಲ್ಲೂ ಹೇಳುತ್ತಿದ್ದುದು – ಕನ್ನಡದ ಒಂದು ಘೋಷಣೆಯಂತಿತ್ತು. ಅಲ್ಲಿಯೆ ಆಗ ಒಂದು ವಜ್ರ ಬಸ್ ಬಂದಿತು. ಅದು ಕೆಂಅನ್‍ವಿನಿ (ಕೆಂಅಂವಿನಿ) ಅಂದರೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಕಿರುಸ್ವರೂಪವನ್ನು ಕನ್ನಡ ಹಾಗೂ ಇಂಗ್ಲೀಷ್‍ನಲ್ಲಿ ಬರೆದುಕೊಂಡು ಬಂದುದು ನನಗಂತೂ ವಿಶೇಷವೆನಿಸಿತ್ತು. ಯಾರೋ ಕನ್ನಡ ಬರದವರು “ಕೆಂಅನ್‍ವಿನಿ ಬಸ್ ಇಲ್ಲಿ ಬರುತ್ತದೆಯೆ?” ಎಂದು ಇಂಗ್ಲಿಷ್‍ನಲ್ಲಿ ಕೇಳಿದಾಗ ನನಗಂತೂ ಕುಣಿದಾಡುವಂತಾಯಿತು. ಕೇವಲ ಕೆ ಎಂದು ಇಂಗ್ಲಿಷ್‍ನಲ್ಲಿ ಬರೆದರೆ ಅದು ಕೆಂಪೆಗೌಡನೂ ಆಗಬಹುದು, ಕರ್ನಾಟಕವೂ ಆಗಬಹುದು ಅಥವಾ ಕಾಗುಣಿತದ ಕ ಯಿಂದ ಹಿಡಿದು ಕಂ ತನಕ ಯಾವ ಪದವಾದರೂ ಆಗಬಹುದು. ಆದರೆ ಕೆಂ ಅಂದರೆ ಗ್ರಹಿಸುವುದು ಸುಲಭ. ಅದೆ ರೀತಿ ಬೆಂ ಅಥವಾ ಬೆನ್ ಎಂದರೆ ಅದು ಬೆಂಗಳೂರು ಎಂದು ಬೇಗ ಗ್ರಹಿಸಬಹುದು. ಅದೆ ಇಂಗ್ಲಿಷ್‍ನ ಬಿ ಎಂದಾದರೆ ಅದು ಭಾರತವೂ ಆಗಬಹುದು, ಬೊಂಬಾಯಿ, ಬಿಹಾರ, ಬೆಳಗಾವಿ, ಬೆಲ್ಜಿಯಂ, ಭೂತಾನ್ ಯಾವುದಾದರೂ ಆಗಬಹುದು. ಬೆಂ ಅಂದಾಗ ಅದರ ಪರಿಧಿ ಕಡಿಮೆಯಾಗಿ ಬೇಗ ಅದರ ವಿಸ್ತøತ ಆವೃತ್ತಿಯನ್ನು ಊಹಿಸಬಹುದು. ಯಾರಾದರೂ ಬರೆಯುವುದು ತುಂಬಾ ಉದ್ದವಾಗುತ್ತದೆ ಎನ್ನಬಹುದು. ಆದರೆ ಈಗ ಇಂಗ್ಲಿಷಿನ ಒಂದು ಅಕ್ಷರವನ್ನು ಕನ್ನಡದಲ್ಲಿ ಅಂದರೆ ಎನ್, ಕ್ಯೂ, ಆರ್, ಎಚ್, ಎಸ್, ಡಬ್ಬಲ್‍ಯೂ ಎಂದು ಉದ್ದವಾಗಿ ಬರೆಯುವುದಿಲ್ಲವೇ ಹಾಗೆಯೆ ಇದು ಎಂದುಕೊಂಡರಾಯಿತು. ಉದಾಹರಣೆಗೆ ಇಂಗ್ಲಿಷ್‍ನ BWSSB ಯನ್ನು ಕನ್ನಡದಲ್ಲಿ ಬರೆದು ನೋಡಿ. ಅದನ್ನು ಬೆನ್ ನೀ ಸ ಒ ಮಂ (BEN NI SA O MAN) ಎಂದು ಕರೆಯಬಹುದು. ಅಂದರೆ ಬೆಂಗಳೂರು ನೀರು ಸರಬರಾಜು ಒಳಚರಂಡಿ ಮಂಡಲಿ. ನಮ್ಮ ಕುವೆಂಪು, ಪೂಚಂತೇ, ಗೊರುಚ, ವಿಕೃಗೋ, ಪುತಿನ ಇನ್ನೂ ಮೊದಲಾದವರ ಹೆಸರುಗಳನ್ನು ಹೇಳಿದಾಗ ನಮಗೆ ಎನೂ ಅನ್ನಿಸುವುದಿಲ್ಲ. ಕೇವಲ ಅಭ್ಯಾಸಬಲ. ಮೊದಮೊಲು ಸ್ವಲ್ಪ ಕಿರಿಕಿರಿ ಎನಿಸಿದರೂ ನಂತರ ಅದಕ್ಕೆ ಒಗ್ಗಿಕೊಂಡು ಬಿಟ್ಟರೆ ಏನೂ ಅನಿಸುವುದೇ ಇಲ್ಲ. ಮುಖ್ಯವಾಗಿ ಕನ್ನಡಕ್ಕೆ ಪ್ರಾಮುಖ್ಯತೆ ಸಿಗುವುದರಿಂದ ನಾವು ಇದನ್ನು ಮುಂದುವರೆಸಿಕೊಂಡು ಹೋಗುವುದು ಒಳ್ಳೆಯದು ಎಂದು ನನ್ನ ಮನಸ್ಸು ಯೋಚಿಸುತ್ತಿತ್ತು. 
ನನ್ನ ಯೋಚನಾಲಹರಿಯಂತೆಯೇ ಸರ್ಕಾರಿ ಕಛೇರಿಗಳ ಹೆಸರು (ಕಸಾಕಾಇ – ಕರ್ನಾಟಕ ಸಾರ್ವಜನಿಕ ಕಾಮಗಾರಿ ಇಲಾಖೆ, ಕವಿಮನ್ – ಕರ್ನಾಟಕ ವಿದ್ಯುಚ್ಛಕ್ತಿ ಮಂಡಲಿ, ಬೆಂಜಮನ್ - ಬೆಂಗಳೂರು ಜಲ ಮಂಡಲಿ), ಬ್ಯಾಂಕ್‍ಗಳ ಹೆಸರು (ಕೆಬ್ಯಾನ್, ಸಿನ್‍ಬ್ಯಾನ್, ಮೈಬ್ಯಾನ್, ಕಬ್ಯಾನ್, ವಿಬ್ಯಾನ್ ಇತ್ಯಾದಿ), ಶಾಲಾಕಾಲೇಜುಗಳ ಹೆಸರು, ರಸ್ತೆಗಳ ಹೆಸರು (ಬಗು ರಸ್ತೆ ಅಂದರೆ ಬಸವನಗುಡಿ ರಸ್ತೆ ಅಂದರೆ ಹಿಂದಿನ ಬುಲ್ ಟೆಂಪಲ್ ರೋಡ್, ಕೆನ್‍ಹ ಜೋ ರಸ್ತೆ ಎಂದರೆ ಕೆಂಗಲ್ ಹನುಮಂತಯ್ಯ ಜೋಡಿ ರಸ್ತೆ, ರಾವಿ ರಸ್ತೆ – ರಾಷ್ಟ್ರೀಯ ವಿದ್ಯಾಲಯ ರಸ್ತೆ, ಜಚಾ ರಸ್ತೆ – ಜಯ ಚಾಮರಾಜೇಂದ್ರ ರಸ್ತೆ, ಕೃರಾ ರಸ್ತೆ, ಕೃರಾ ಮಾರುಕಟ್ಟೆ, ಕೃರಾ ವೃತ್ತ ಮೊದಲಾದುವು) ಮತ್ತು  ಅನೇಕ ಪ್ರಮುಖ ಕಟ್ಟಡಗಳ ಹೆಸರುಗಳನ್ನು (ರಕಕ್ಷೇ – ರವೀಂದ್ರ ಕಲಾ ಕ್ಷೇತ್ರ, ನಕೇನ್‍ಗ್ರ - ನಗರ ಕೇಂದ್ರ ಗ್ರಂಥಾಲಯ, ಇಸ್‍ರೋ ಎನ್ನುವುದು ಭಾಬಾಸಂಸಂ ಅಂದರೆ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ) ಕನ್ನಡೀಕರಣಗೊಳಿಸಲಾಗಿತ್ತು. ಬನಿಗಳಲ್ಲಿ ಆ ನಿಲ್ದಾಣದ ಅಧಿಕೃತ ಹೆಸರನ್ನು ಕಡ್ಢಾಯವಾಗಿ ಕನ್ನಡದಲ್ಲಿ ಪೂರ್ಣವಾಗಿ, ಕನ್ನಡದ ಹೆಸರನ್ನೇ ಇಂಗ್ಲಿಷ್‍ನಲ್ಲಿ ಪೂರ್ಣವಾಗಿ ಹಾಗೂ ಅದರ ಕಿರುಸ್ವರೂಪವನ್ನು ಕನ್ನಡದಲ್ಲಿ ಹಾಗೂ ಕನ್ನಡದ ಕಿರುಸ್ವರೂಪವನ್ನೇ ಇಂಗ್ಲಿಷ್‍ನಲ್ಲಿ ಬರೆಯಲಾಗಿತ್ತು. ನನಗಂತೂ ನಾನು ಎಲ್ಲಿ ಬಂದಿದ್ದೇನೆ ಎಂದು ಅನುಮಾನವಾಯಿತು. ನನ್ನ ಕಣ್ಣುಗಳನ್ನು ನಾನೆ ನಂಬದಾದೆ. 
ಆದರೆ ಮನೆಯ ಕರೆಗಂಟೆ ಠಣ್ ಎಂದು ಕೂಗಿದಾಗ ಎಚ್ಚರವಾಗಿ, ಅಯ್ಯೋ ಇದು ಕನಸಾ, ನನಸಾಗಬಾರದಿತ್ತಾ ಎಂದು ಬೇಸರವಾಯಿತು. ನನ್ನ ಮೈಲ್ ನಲ್ಲಿ ಹುಡುಕಿ, ನಾನು ಕಳೆದ ಬಾರಿ ಕಳುಹಿಸಿದ್ದ ನನ್ನ ಅನಿಸಿಕೆಯನ್ನು ಹುಡುಕಿದೆ. ಅದರ ನಕಲು ಹೀಗಿದೆ.
ನನ್ನ ಅನಿಸಿಕೆ 
ನಾನು ಇಂದು ಭಾಎನಿಗೆ ಹೋಗಿದ್ದೆ ಎಂದು ನನ್ನ ಮಿತ್ರ ಹೇಳಿದಾಗ, ನನಗೆ ಕೊಂಚ ತಬ್ಬಿಬ್ಬಾಯಿತು. ಏನೋ ಹಾಗೆಂದರೆ ಎಂದೆ. ಕೆವಿಪಿ ಗೊತ್ತಾ ಎಂದ. ಮತ್ತೆ ತಬ್ಬಿಬಾದೆ. ಆಗ ಕುವೆಂಪು ಗೊತ್ತಾ? ಎಂದ. ಕುವೆಂಪು ಯಾರಿಗೆ ಗೊತ್ತಿಲ್ಲ, ಕುವೆಂಪುಗೂ, ಕೆವಿಪಿಗೂ, ಅದೇನೋ ಭಾಎನಿಗೂ ಏನು ಸಂಬಂದ ಎಂದು ದಬಾಯಿಸಿದರೆ. ಸಂಬಂದ ಇದೆ ಕೇಳು ಎಂದು ವಿವರಿಸಿದ. ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಎಂಬುದರ ಕಿರು ಸ್ವರೂಪವೇ ಕುವೆಂಪು. ಅದನ್ನು ಕೆವಿಪಿ ಎಂದರೆ ಯಾರಿಗೂ ಗೊತ್ತಾಗುವುದಿಲ್ಲ. ಹಾಗೆಯೆ ಬಿಇಎಲ್ ಎಂದರೆ ಎಲ್ಲರಿಗೂ ಗೊತ್ತು, ಆದರೆ ಭಾಎನಿ ಎಂದಾಗ? ನಾವು ನಿಜವಾಗಿಯೂ ಕನ್ನಡವನ್ನು ಮುನ್ನಡೆಸಬೇಕೆಂದಿದ್ದರೆ ಹೀಗೆ ಕನ್ನಡದ ಚಿಕ್ಕ ಸ್ವರೂಪಗಳನ್ನು ಪ್ರಚಲಿತಗೊಳಿಸಿದರೆ ಕನ್ನಡ ಬರದವರಿಗೂ ಕನ್ನಡದ ಪರಿಚಯ ಸ್ವಲ್ಪ ಮಟ್ಟಿಗಾದರೂ ಆಗುತ್ತದೆ. ಮೊದಲಿಗೆ ಒಂದು ರೀತಿ ಅನ್ನಿಸಿದರೂ ನಂತರ ಅದಕ್ಕೆ ಒಗ್ಗಿಕೊಳ್ಳುತ್ತೇವೆ. ಇದನ್ನು ಮೊದಲು ಬಸ್ ಕಂಡಕ್ಟರ್‍ಗಳಿಗೆ, ಬಸ್ಸಿನಲ್ಲಿ ಬರುವ ರೆಕಾರ್ಡೆಡ್ ಮಾಹಿತಿಗೆ, ಆಟೋ ಡ್ರೈವರ್‍ಗಳಿಗೆ, ಕನ್ನಡ ಸಂಘಸಂಸ್ಥೆಗಳಿಗೆ, ಕನ್ನಡ ಹೋರಾಟಗಾರರಿಗೆ, ಗೈಡ್‍ಗಳಿಗೆ, ಮ್ಯಾಪ್ ಮುದ್ರಿಸುವವರಿಗೆ, ಇತ್ಯಾದಿಗಳಿಗೆ ಹೇಳಿಕೊಟ್ಟು ಇದನ್ನು ಕಡ್ಡಾಯವಾಗಿ ಅನೂರ್ಜಿತಗೊಳಿಸಬೇಕು ಎಂದು ಹುರಿದುಂಬಿಸಿದರೆ ಅರ್ಧಕೆಲಸ ಆದಂತೆಯೇ.      
ಉದಾಹರಣೆಗೆ, ಕೆಂಪೆಗೌಡ ಬಸ್ ನಿಲ್ದಾಣಕ್ಕೆ ಕೆಂಬನಿ ಎಂದೂ ಕಡ್ಡಾಯಗೊಳಿಸಬೇಕು. ಇಂಗ್ಲಿಷ್‍ನಲ್ಲಿಯೂ ಅದನ್ನು KEM BA NI ಅಥವಾ  KBN ಎಂತಲೇ ಬರೆಯಬೇಕು. ಬೆಂಮಸಾಸಂ ಅನ್ನು BMTC ಎಂದು ಬರೆಯದೇ  BEM MA SA SAM  ಎಂದೇ ಬರೆಯಬೇಕು. ಇಲ್ಲವಾದರೆ ಅದನ್ನು BMSS  ಎಂದು ಇಂಗ್ಲಿಷ್‍ನಲ್ಲಿ ಬರೆದು ಅದು ಕನ್ನಡದ ಹೆಸರಿನ ಇಂಗ್ಲಿಷ್ ಕಿರುಸ್ವರೂಪವಾಗಬೇಕು. ಹೀಗಾದರೆ ಕನ್ನಡಕ್ಕೆ ಪ್ರಾಮುಖ್ಯತೆ ದೊರೆತಂತಾಗಿ ಕನ್ನಡದ ಧ್ವನಿ ಹೊರಹೊಮ್ಮುತ್ತದೆ. ಆಗ ಸಾರಿಗೆ, ಮಹಾನಗರ, ಸಂಸ್ಥೆ ಮೊದಲಾದ ಪದಗಳು ಬಳಕೆಗೆ ಬರುತ್ತವೆ. ಖಂಡಿತಾ ಕೆಲವರು ಏನಾದರೂ ಕ್ಯಾತೆ ತೆಗೆದು ಹೀಗೆ ಮಾಡಬಾರದು, ಇಂಗ್ಲಿಷ್‍ಅನ್ನು ಹಾಗೆಯೆ ಉಳಿಸಿಕೊಳ್ಳಬೇಕು ಎಂದು ವಾದ ಹೂಡಬಹುದು. ಆದರೆ ಸರ್ಕಾರ ಗಟ್ಟಿ ಮನಸ್ಸಿನಿಂದ ಇಂತಹ ನಿರ್ಧಾರ ತಳೆದರೆ ಕನ್ನಡದ ಉದ್ಧಾರಕ್ಕೆ ನಾಂದಿ ಹಾಡಿದಂತಾಗುತ್ತದೆ. ಇಂಗ್ಲಿಷ್‍ನ ಕಿರುಸ್ವರೂಪವನ್ನು ಎಂದಿಗೂ ಉಪಯೋಗಿಸದೆ ಅದನ್ನು ಹೊರದಬ್ಬಬೇಕು. BT ರಸ್ತೆ ಬಗು (BG) (ಬಸವನಗುಡಿ) ರಸ್ತೆ ಆಗಬೇಕು, SP ರಸ್ತೆ ಸಾಪ (ಸಾದರ ಪತ್ರಪ್ಪ) ರಸ್ತೆ, BH  ರಸ್ತೆ ಬೆನ್‍ಹೊ (ಬೆಂಗಳೂರು ಹೊನ್ನಾವರ) ರಸ್ತೆ, BM ರಸ್ತೆ ಬೆನ್‍ಮನ್ ರಸ್ತೆ,  MG ರಸ್ತೆ ಮಗಾಂ ರಸ್ತೆ,  SJP ರಸ್ತೆ ರಮಉ (ರಜತ ಮಹೋತ್ಸವ ಉದ್ಯಾನ) ರಸ್ತೆ,  NR ರಸ್ತೆ ನರಾ (ನರಸಿಂಹ ರಾಜ) ರಸ್ತೆ, OUTER RING  ರಸ್ತೆ, ಹೊರವ (ಹೊರವರ್ತುಲ) ರಸ್ತೆ, INNER RING ರಸ್ತೆ ಒಳವ (ಒಳ ವರ್ತುಲ) ರಸ್ತೆ, TANK BUND  ರಸ್ತೆ, ಕೆಂಏ (ಕೆಂಪಾಂಭುದಿಕೆರೆ ಏರಿ) ರಸ್ತೆ, RT ನಗರ, ರನಾಟಾ (ರವೀಂದ್ರ ನಾಥ ಟಾೀಗೋರ್) ನಗರ, HSR ಬಡಾವಣೆ, ಹೊರಸರ (ಹೊಸೂರು ರಸ್ತೆ ಸರ್ಜಾಪುರ ರಸ್ತೆ) ಬಡಾವಣೆ ಆಗಬೇಕು. ಎಲ್ಲಾ ಅಡ್ಡ ರಸ್ತೆಗಳಿಗೂ 'ಅರ' ಎಂಬ ಕಿರುಸ್ವರೂಪ, ಮುಖ್ಯರಸ್ತೆಗಳಿಗೂ 'ಮುರ' ಎಂಬ ಕಿರುಸ್ವರೂಪ, ರಾಜ್ಯ ಹೆದ್ದಾರಿಗಳಿಗೆ 'ರಾಹೆ' ಎಂಬ ಕಿರುಸ್ವರೂಪ, ದೇಶದ ಹೆದ್ದಾರಿಗಳಿಗೆ 'ದೇಹೆ' ಎಂಬ ಕಿರುಸ್ವರೂಪಗಳನ್ನು ಕಡ್ಡಾಯ ಮಾಡಬೇಕು. ಈ ಎಲ್ಲವನ್ನೂ ಮುದ್ರಿಸಿಕೊಂಡು ಬಸ್ಸುಗಳಲ್ಲಿ ಘೋಷಿಸಿದರೆ, ಜನಕ್ಕೆ ತಲುಪಿಸುವುದು ಸುಲಭವಾಗುತ್ತದೆ.    
ಹೀಗಾಗಿ ಹೆಸರುಗಳು ಕಿರುಸ್ವರೂಪದಲ್ಲಿದ್ದರೂ ಕನ್ನಡದಲ್ಲಿಯೇ ಇರುತ್ತದೆ. ಇದು ಕನ್ನಡನಾಡಿನ ಒಂದು ಹೊಸ ವೈಶಿಶ್ಟ್ಯವಾಗಿ ಇತರರೂ ಅದನ್ನು ಅನುಸರಿಸುವಂತಾದರೆ ಎಷ್ಟು ಚೆನ್ನ ಅಲ್ಲವೇ. 
ಹಾಗೆಯೆ ಕನ್ನಡದ ಪದಗಳ ಇಂಗ್ಲಿಷ್ ಕಿರುಸ್ವರೂಪ ಬಳಸಿದಾಗ ಜನ ಆ ಕಿರುಸ್ವರೂಪದ ವಿಸ್ತøತ ಸ್ವರೂಪವನ್ನು ತಿಳಿದುಕೊಳ್ಳಲು ಪ್ರಯತ್ನಿಸಿ, ಕನ್ನಡದ ಪದವನ್ನು ತಿಳಿದುಕೊಂಡು, ಅದನ್ನು ಬಳಸಿದಾಗ ಕನ್ನಡದ ಪದಗಳು ತಾನಾಗಿತಾನೇ ವಿಜೃಂಭಿಸುತ್ತವೆ. ಕಿರುಸ್ವರೂಪಗಳನ್ನು ಮಾಡಿದಾಗ, ಬೇಕೆಂದರೆ, ಉಚ್ಛರಿಸಲು ಅನುಕೂಲವಗುವಂತೆ ಮಾರ್ಪಾಡು ಮಾಡಿಕೊಳ್ಳಬಹುದು. ಉದಾಹರಣೆಗೆ ಲಾಲ್‍ಬಾಗ್ ಪಶ್ಚಿಮ ದ್ವಾರ ಅಥವಾ ಬಾಗಿಲು, ಇಲ್ಲಿ ಲಾಪದ್ವಾ ಎಂದು ಹೇಳುವುದು ಲಾಪಬಾ ಎನ್ನುವುದಕ್ಕಿಂತ ಸುಲಭ. ದೊಡ್ಡ ಬೊಮ್ಮಸಂದ್ರಕ್ಕೆ ‘ದೊಬೊ’ ಎಂದು ಹೇಳುವುದಕ್ಕಿಂತ ‘ದೊಡ್‍ಬೊಂ’ ಎಂದು ಹೇಳುವುದು ಸುಲಭ.
ಇಲ್ಲಿ ನಾವು ಗಮನಿಸಬೇಕಾದ ಒಂದು ಮುಖ್ಯ ಅಂಶವೆಂದರೆ, ಇವನ್ನು ಅಳವಡಿಸಬೇಕಾದಾಗ, ಅನೇಕ ಅಪಸ್ವರಗಳು ಏಳಬಹುದು. ಆದರೆ, ಅವನ್ನೆಲ್ಲಾ ಮೆಟ್ಟಿನಿಂತು ನಮ್ಮ ಭಾಷೆ, ನಮ್ಮ ಕನ್ನಡ, ಹೊರಗಿನವರಿಗೂ ಕನ್ನಡದ ಕಿರುಸ್ವರೂಪಗಳ ಪರಿಚಯ, ಕನ್ನಡ ನಮ್ಮ ಆಡಳಿತ ಭಾಷೆ ಎಂಬ ಅಭಿಮಾನ ಇದ್ದರೆ ಎಲ್ಲವೂ ಸುಲ¨ ಸಾದ್ಯ. 
ಈಗ ಬಳಕೆಯಲ್ಲಿರುವ ಕೆಲವು ಹೆಸರುಗಳನ್ನು ಇಲ್ಲಿ ಉದಾಹರಣೆಗಳಾಗಿ ಕೊಟ್ಟಿದೆ. ಜೊತೆಗೆ ಅದರ ಬಗ್ಗೆ ಕಿರುವಿವರಣೆಯನ್ನೂ ನೀಡಲಾಗಿದೆ. 
KV PUTTAPPA - KU VEN PU = ಕುವೆಂಪು ಅಥವಾ ಕುವೆನ್‍ಪು, ಇಲ್ಲಿ ವೆಂ ಎಂದಾಗ ವೆನ್ ಎಂದು ಉಚ್ಛರಿಸಬೇಕು.
PT NARASIMHACHAR - PU TI NA =  ಪುತಿನ - ನಾವು ಇವರ ಹೆಸರನ್ನು ಬರೆದಾಗ ಪುತಿನ ಎಂದೇ ಇಂಗ್ಲಿಷ್‍ನಲ್ಲೂ ಬರೆಯುತ್ತೇವೆಯೇ ಹೊರತು P T N ಎಂದು ಬರೆಯುವುದಿಲ್ಲ. ಇದು ಬಹಳ ಮುಖ್ಯ. 
HAL - HIN Y NI (=HYN) =  ಹಿನ್‍ವೈನಿ = ಹಿಂದೂಸ್ಥಾನ್ ವೈಮಾನಿಕ ನಿಗಮ – ಇದನ್ನು ಅಳವಡಿಸಿಕೊಂಡರೆ ಕನ್ನಡದ ಪದಗಳು ಬಳಕೆಗೆ ಬರುತ್ತದೆ. HIN Y NI ಎಂದು ಬರೆಯುವುದು ಬಹಳ ಕಷ್ಟ ಎಂದಾದರೆ HYN ಎಂದು ಬರೆಯಬಹುದು. ಇದು ಕನ್ನಡದ ಪದದ ಇಂಗ್ಲಿಷ್ ಕಿರುಸ್ವರೂಪ ಎಂಬುದು ಮುಖ್ಯ. ಹೀಗಾದಾಗ ಹಿಂದೂಸ್ಥಾನ್, ವೈಮಾನಿಕ, ನಿಗಮ ಎಂಬ ಕನ್ನಡದ ಪದಗಳು ಹೆಚ್ಚು ಬಳಕೆಗೆ ಬಂದು ಎಲ್ಲರೂ ಅದನ್ನು ಬಳಸಲು ಆರಂಭಿಸುತ್ತಾರೆ. ಈಗ ನಮ್ಮಲ್ಲಿ ಏನಾಗಿದೆ ಎಂದರೆ, ಇಂಗ್ಲಿಷ್ ಮೂಲವಿದ್ದು ಅದನ್ನು ಕನ್ನಡದಲ್ಲಿ, ಕೇವಲ ಹಲಗೆಗಳಲ್ಲಿ ಬಳಸಿದ್ದಾರೆ. ಕಛೇರಿಯ ಕಡತಗಳಲ್ಲಿ, ವ್ಯವಹಾರಗಳಲ್ಲಿ ಇಂಗ್ಲಿಷ್ ಮೂಲ ಹಾಗೇ ಉಳಿದಿದೆ. ನಮ್ಮ ಕನ್ನಡದ ಹೋರಾಟಗಾರರು ಕೇವಲ ಹಲಗೆಗಳ ಮೇಲಿರುವ ಇಂಗ್ಲಿಷ್ ಭಾಷೆಗೆ ಕಪ್ಪು ಮಸಿ ಬಳಿದರೇನಂತೆ, ಕನ್ನಡದಲ್ಲಿ ದೊಡ್ಡದಾಗಿ ಹಲಗೆಯ ಮೇಲೆ ಬರೆದರೇನಂತೆ, ಒಳಗೆ ಇಂಗ್ಲಿಷ್ ನಿರಾತಂಕವಾಗಿ, ಭದ್ರವಾಗಿ ಕುಳಿತಿರುತ್ತದೆ, ಬಳಕೆಯಲ್ಲೂ ಅದೇ ಇರುತ್ತದೆ. ಕನ್ನಡದ ಅಕ್ಷರ ಹಲಗೆಯ ಮೇಲಷ್ಟೇ ಇರದೆ ಬಳಕೆಗೆ ಬರಬೇಕು. ಆಗ ಕನ್ನಡದ ಉದ್ಧಾರ ಸಾಧ್ಯ. ನಮ್ಮ ಕನ್ನಡ ಅಭಿಮಾನ ಕೇವಲ ನವೆಂಬರ್ ತಿಂಗಳಿಗೇ ಸೀಮಿತ.
KBS - KEM BA NI ( = KBN) = ಕೆಂಪೆಗೌಡ ಬಸ್ ನಿಲ್ದಾಣ – ಕೆಂಬನಿ, ಇಲ್ಲಿ ಬಸ್ ನಿಲ್ದಾಣದ ಕನ್ನಡದ ಕಿರುಸ್ವರೂಪ ಬನಿ ಎಂದಾಗಿ ಬಿಟ್ಟರೆ, ಅದನ್ನೇ ಇಂಗ್ಲಿಷ್‍ನಲ್ಲೂ ಬಳಸಿದರೆ, ಎಲ್ಲಾ ಬಸ್ ನಿಲ್ದಾಣದ ಹೆಸರುಗಳಿಗೆ ಕನ್ನಡದ ನಾಮಕರಣ ಸುಲಭವಾಗುತ್ತದೆ.
KIA - KEM AN VI NI (= KAVN) =  ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ನಾವು ಫ್ರಾನ್ಸ್, ಸ್ಪೈನ್, ರಶ್ಯಾ ಮೊದಲಾದ ಕಡೆಗೆ ಹೋದಾಗ ಅಲ್ಲಿ ಎಲ್ಲೂ  International Airport ಎಂದು ಇಂಗ್ಲಿಷ್‍ನಲ್ಲಿ ಬರೆದಿರುವುದಿಲ್ಲ. ಎಲ್ಲವೂ ಅವರ ಭಾಷೆಯಲ್ಲಿ ಇರುತ್ತದೆ. ಅಲ್ಲಿಗೆ ಹೋದವರು ಅದನ್ನು ತಿಳಿದುಕೊಳ್ಳಬೇಕೇ ಹೊರತು, ಇಲ್ಲಿ ಬಂದವರಿಗೆ ಭಾಷೆ ಬರುವುದಿಲ್ಲ, ಅದಕ್ಕಾಗಿ ಇಂಗ್ಲಿಷ್‍ನಲ್ಲೂ ಇರಬೇಕು ಎಂದು ಅಲ್ಲಿನವರು ಯೋಚಿಸುವುದಿಲ್ಲ. ಮತ್ತೆ ನಮಗೇಕೆ ಇನ್ನೂ ಆಂಗ್ಲ ಗುಲಾಮಗಿರಿಯ ನಂಟು? ಇಲ್ಲಿಗೆ ಬಂದವರಿಗೂ ವಿಮಾನ ಎಂದರೆ ಏರೋಪ್ಲೇನ್, ನಿಲ್ದಾಣ ಎಂದರೆ ಏರೋಡ್ರಂ, ಕೆಂಪೇಗೌಡ ಎಂಬುವವನು ಬೆಂಗಳೂರಿನ ಅರಸ ಎಂದು ಪರಿಚಯವಾದರೆ ತಪ್ಪೇನು? ಕೆನಡಾದಲ್ಲಿ ಇಂಗ್ಲಿಷ್ ಹಾಗೂ ಫ್ರೆಂಚ್ ಎರಡೂ ಭಾಷೆಗಳೂ ಆಡಳಿತ ಭಾಷೆ. ಆದರೆ ಅಲ್ಲಿನ ಫ್ರೆಂಚ್ ಭಾಗದ ಪ್ರದೇಶಕ್ಕೆ ಹೋದರೆ ಅಲ್ಲಿ ಇಂಗ್ಲಿಷ್‍ನ ಸುಳಿವೇ ಇಲ್ಲ. ಎಲ್ಲವೂ ಫ್ರೆಂಚ್‍ಮಯ. ನಮಗೆ ಬೇಕಿದ್ದರೆ ನಾವು ಫ್ರೆಂಚ್ ಕಲಿಯಬೇಕೇ ಹೊರತು ಅವರು ಅಯ್ಯೋ ಇಲ್ಲಿನ ಹೊಸಬರಿಗೆ ತೊಂದರೆ ಯಾಗುತ್ತದೆ ಎಂದು ತೊಂದರೆ ತೆಗೆದುಕೊಳ್ಳುವುದಿಲ್ಲ. 
ನಮಗೂ ಇಂತಹ ಸ್ವಾಭಿಮಾನವಿರಬೇಕಲ್ಲವೇ? ಯೂರೋಪಿನ ಸಣ್ಣ ದೇಶಗಳೇ, ಅಷ್ಟು ಕಡಿಮೆ ಜನಸಂಖ್ಯೆ ಇದ್ದು ತಮ್ಮ ಭಾಷೆಯನ್ನು ಬೆಳೆಸಿರುವಾಗ, ಇಷ್ಟೊಂದು ಜನಸಂಖ್ಯೆ ಇದ್ದು, ಇಷ್ಟುದೊಡ್ಡದಾದ ನಮ್ಮ ರಾಜ್ಯವೂ ಕನ್ನಡವನ್ನೇಕೆ ಮುನ್ನಡೆಸಬಾರದು? 
SRRTB - SAN RA RAI NI BEN (= SRRNB) = ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಬೆಂಗಳೂರು – ಇದು ಕನ್ನಡದ ಕಿರುಸ್ವರೂಪದಲ್ಲಿ ಸಂರಾರೈನಿಬೆನ್ ಎಂದಾಗುತ್ತದೆ. ಇಲ್ಲಿ ಬೆನ್ ಎಂಬುದು ಇಲ್ಲದಿದ್ದರೆ ಉಚ್ಚರಿಸುವುದು ಸುಲಭ. ಆದರೆ ಬೆಂಗಳೂರಿನ ಹೆಸರೇ ಇಲ್ಲದಿದ್ದರೆ, ಕೇವಲ ಸಂರಾರೈನಿ ಎಂದು ಹೇಳಿದರೆ ಅದು ಭಾರತದಲ್ಲಿ ಎಲ್ಲಿದೆ ಎಂದು ಗೊತ್ತಾಗುವುದಿಲ್ಲ. ಆದ್ದರಿಂದ ಸಂರಾರೈನಿಬೆನ್ ಎಂದು ಹೇಳಲೇಬೇಕಾಗುತ್ತದೆ. ಅಭ್ಯಾಸವಾದ ಮೇಲೆ ಅಷ್ಟು ಕಷ್ಟ ಎನ್ನಿಸುವುದಿಲ್ಲ.   
KSRTC - KA RA RA SA NI (= KRRSN) =  ಕರ್ನಾಟಕ ರಾಜ್ಯ ರಸ್ತೆ ಸಂಚಾರ ನಿಗಮ – ಕರಾರಸಂನಿ ಎಂದು ಇದನ್ನು ಮೊದಲು ಪ್ರಚಾರಗೊಳಿಸಿದರೆ, ಬಸ್ಸುಗಳ ಮೆಲೆಲ್ಲಾ ಇರುವುದರಿಂದ ಕನ್ನಡದ ಪದಗಳ ಪ್ರಚಾರ ಆರಂಭವಾದಂತೆಯೇ. KSRTC  ಎಂಬ ಪದವನ್ನು ಮೊದಲು ನಿರ್ಮೂಲನ ಮಾಡಿ ಅದನ್ನು KA RA RA SA NI (= KRRSN)  ಎಂದು ಬದಲಾಯಿಸಿದರೆ ಕನ್ನಡ ಭಾಷೆಗೆ ದೊಡ್ಡ ಗೌರವ ಸಲ್ಲಿಸಿದಂತಾಗುತ್ತದೆ.
LWG - LALBAGH WEST GATE = LA PA DWA (= LPD) = ಲಾಲ್‍ಬಾಗ್ ಪಶ್ಚಿಮ ದ್ವಾರ
LALBAGH MAIN GATE = LA MU DWA (= LMD) = ಲಾಲ್‍ಬಾಗ್ ಮುಖ್ಯ ದ್ವಾರ
LALBAGH SIDDAPURA GATE = LA SI DWA (= LSD) = ಲಾಲ್‍ಬಾಗ್ ಸಿದ್ದಾಪುರ ದ್ವಾರ 
ಲಾಪದ್ವಾ ಬನಿ, ಲಾಮುದ್ವಾ ಬನಿ, ಲಾಸಿದ್ವಾ ಬನಿ ಎಂದು ಹೇಳುವುದು ಸುಲಭ. ಜನ ಅದರ ವಿಸ್ತøತ ರೂಪ ಗುರುತಿಸಿದಾಗ ಕನ್ನಡದ ಪದಗಳ ಬಳಕೆ ಹೆಚ್ಚಾಗುವುದು. ಗೇಟ್, ಡೋರ್ ಪದಗಳಿಗೆ ಪರ್ಯಾಯವಾಗಿ ಇದನ್ನು ಬಳಸಬಹುದು ಎಂದು ಗೊತ್ತಾಗುತ್ತದೆ.
 BWSSB - BEN NI SA O MAN (= BNSOM) =  ಬೆಂಗಳೂರು ನೀರು ಸರಬರಾಜು, ಒಳಚರಂಡಿ ಮಂಡಲಿ - ಬೆನ್ ನೀ ಸ ಒ ಮನ್ ಎಂಬ ಕಿರುಸ್ವರೂಪ ಮೊದಮೊದಲು ಸ್ವಲ್ಪ ವಿಚಿತ್ರ ಎನಿಸಿದರೂ ಬಳಕೆಗೆ ತಂದ ಮೇಲೆ ಏನೂ ಅನ್ನಿಸುವುದಿಲ್ಲ. ಬೆನ್ ಎಂದು ಇದ್ದಕಡೆಯೆಲ್ಲ ಅದು ಬೆಂಗಳೂರಿನ ಕಿರುಸ್ವರೂಪ, ಮನ್ ಎಂದು ಇರುವುದೆಲ್ಲ ಮಂಡಲಿಯ ಕಿರುಸ್ವರೂಪ ಎಂದು ಜನಕ್ಕೆ ಗೊತ್ತಾಗಿರುವುದರಿಂದ ಇದನ್ನು ಸುಲಭವಾಗಿ ಅಳವಡಿಸಿಕೊಳ್ಳಬಹದು. ನೀರು, ಒಳಚರಂಡಿ, ಸರಬರಾಜು ಮೊದಲಾದ ಕನ್ನಡ ಪದಗಳೂ ನಿತ್ಯದ ಬಳಕೆಗೆ ಬರುತ್ತದೆ.  
KEB - KA VI MAN (=KVM) = ಕರ್ನಾಟಕ ವಿದ್ಯುತ್‍ಶಕ್ತಿ ಮಂಡಲಿ - ಕವಿಮನ್, 
ಕವಿಮಂ ಎಂದು ಹೇಳುವುದಕ್ಕಿಂತ ಕವಿಮನ್ ಎಂದು ಹೇಳುವುದು ಬಲು ಸುಲಭ, ಹಾಗೂ ಇದು ವಿಸ್ತøತ ಸ್ವರೂಪಕ್ಕೆ ಹೆಚ್ಚು ಹತ್ತಿರ.  
ANENUE ROAD - ಅವೆನ್ಯೂ ರಸ್ತೆಗೆ ಹೊಸದಾಗಿ ನಾಮಕರಣ ಮಾಡುವಾಗ ಕೆಲವು ತೊಂದರೆ ಬರುತ್ತಿದೆ. ಇದುವರೆಗೂ ಅವೆನ್ಯೂ ರಸ್ತೆ ಎಂದರೆ ಯಾರೂ ಚಕಾರವೆತ್ತಿರಲಿಲ್ಲ. ಈಗ ಅದನ್ನು ಸಾಲುಮರದ ರಸ್ತೆ ಎಂದು ಕರೆದರೆ ಎಲ್ಲರೂ ಇದೇನು ಎಂದು ಮೂಗುಮುರಿಯುತ್ತಾರೆ. ಅವೆನ್ಯೂ ಎಂದರೆ ಸಾಲು ಎಂದರ್ಥ. ಸಾಮಾನ್ಯವಾಗಿ ಅವೆನ್ಯೂ ಎಂದರೆ ಸಾಲುಮರದ ರಸ್ತೆ ಎಂದೇ ಹೇಳಬಹುದು. ಅದು ಇಂಗ್ಲಿಷ್‍ನಲ್ಲಿದ್ದಾಗ ಯಾರೂ ಅದರ ಹೆಸರಿಗೆ ತಲೆ ಕೆಡಿಸಿಕೊಂಡಿರಲಿಲ್ಲ. ಈಗ ಅದನ್ನು ಸಾಲು ಮರದ ರಸ್ತೆ ಎಂದರೆ ನಗುತ್ತಾರೆ. ಇದು ಕನ್ನಡ ಭಾಷೆಯ ಮಹತ್ವ. ಆಡು ಭಾಷೆಯಲ್ಲಿ ಹೇಳಿದಾಗ ಎಷ್ಟುಬೇಗ ಮನಸ್ಸಿಗೆ ನಾಟುತ್ತದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಈಗ ಸಾಲುಮರದ (ಸಾಮ) ರಸ್ತೆ ಎಂದು ಹೆಸರಿಡುವುದೋ ಅಥವಾ ಸಾಲುಅಂಗಡಿ (ಸಾಲನ್) ರಸ್ತೆ ಎಂದು ಬದಲಿಸುವುದೋ ಸರ್ಕಾರಕ್ಕೆ ಬಿಟ್ಟಿದ್ದು. ಒಟ್ಟಿನಲ್ಲಿ ಯಾವುದೇ  ಹೆಸರನ್ನು ಬದಲಾಯಿಸಿ ಅದನ್ನು ಚಲಾವಣೆಗೆ ತಂದರೆ ಅದು ಕನ್ನಡ ಭಾಷೆಗೆ ಸಿಕ್ಕ ಗೆಲುವು ಎಂದು ಹೆಮ್ಮೆ ಪಡಬಹುದು.  

ಇದು ನಾನು ಹಿಂದೆ ಬರೆದ ಅನಿಸಿಕೆ. ಈಗಲಾದರೂ ಯಾರಾದರೂ ಪುಣ್ಯಾತ್ಮರು ನನ್ನ ಈ ಅನಿಸಿಕೆಯನ್ನು, ಕನಸನ್ನು ನನಸಾಗಿಸುತ್ತಾರೆಯೇ? ಛಲಬಿಡದ ತ್ರಿವಿಕ್ರಮನಂತೆ ಪ್ರಯತ್ನಿಸುತ್ತಲೇ ಇದ್ದರೆ ಒಮ್ಮೆಯಾದರೂ ಈ ಕನಸು ನನಸಾಗಬಹುದು ಎಂಬ ನಂಬಿಕೆ ನನಗಿದೆ. ಈಗಿನಿಂದಲೆ ಇದನ್ನು ಪ್ರಾಯೋಗಿಕವಾಗಿ ಅಳವಡಿಸಿದರೆ, ಧ್ವನಿ ಮುದ್ರಿಸಿ ಬಸ್ಸುಗಳಲ್ಲಿ ಘೋಷಿಸಿದರೆ, ಮುಂದಿನ ರಾಜ್ಯೋತ್ಸವದ ವೇಳೆಗೆ ಕನ್ನಡದ ಬಳಕೆ ಹೆಚ್ಚಾಗುವುದು ಎಂದು ನನ್ನ ಅನಿಸಿಕೆ. ಮನಸಿದ್ದರೆ ಮಾರ್ಗ. ಬೇಗ ಮನಸುಮಾಡಿ ಕನ್ನಡವನ್ನು ಉದ್ಧಾರಮಾಡಿ ಎಂದು ನನ್ನ ಕಳಕಳಿಯ ಮನವಿ.

2 comments:

  1. ನಿಮ್ಮ ಬ್ಲಾ^ಗ್ ಬಗ್ಗೆ ಗೊತ್ತಿರಲಿಲ್ಲ. ಜಯಲಕ್ಷ್ಮಿ ಪಾಟೀಲರ ಬ್ಲಾ^ಗಿನಲ್ಲಿ ನೀವು ಬರೆದ ಪ್ರತಿಕ್ರಿಯೆಯನ್ನು ಓದಿ, ಅಲ್ಲಿರುವ ಕೊಂಡಿಯನ್ನು ಅನುಸರಿಸಿ ಇಲ್ಲಿಗೆ ಬಂದೆ. ನಿಮ್ಮ ಕನಸು ಅದ್ಭುತವಾಗಿದೆ. ಅದು ನೆನಸಾಗಲಿ ಎಂದು ಹಾರೈಸುತ್ತೇನೆ.

    ReplyDelete
    Replies
    1. Thanks for the comments. Sorry for the late reply. Odugara anisikegalu bahala sahakari.

      Delete