Sunday, March 22, 2020

ಮಕ್ಕಳೆ ನಡೆಸಿದ ಬೇಸಿಗೆ ಶಿಬಿರ

ಮಕ್ಕಳೆ ನಡೆಸಿದ ಬೇಸಿಗೆ ಶಿಬಿರ - ಬಿ ಎಸ್ ಜಗದೀಶ ಚಂದ್ರ 
ಘಟನೆ ಒಂದು
ಮಕ್ಕಳೇ ಸೇರಿಕೊಂಡು ನಡೆಸುತ್ತಿದ್ದ ಶಿಬಿರದಲ್ಲಿ ಸೀತ ಕಲ್ಯಾಣ ಎಂಬ ನಾಟಕವನ್ನು ಆರಿಸಿಕೊಂಡಿದ್ದರು. ಮಕ್ಕಳು ಎಲ್ಲಾ ತಯಾರಿ ನಡೆಸಿದ್ದರು. ಬಟ್ಟೆ, ಆಭರಣ, ಅಲಂಕಾರ, ಬಿಲ್ಲು, ಬಾಣ ಎಲ್ಲವೂ ಮಕ್ಕಳದೇ. ನಾಟಕ ಶುರುವಾಯಿತು. ಅದರಲ್ಲಿ ರಾವಣನ ಪಾತ್ರಧಾರಿ ಸ್ಟೇಜಿಗೆ ಬರಬೇಕಿತ್ತು. ಎಷ್ಟೊತ್ತು ಆದರೂ ಪತ್ತೆ ಇಲ್ಲ. ಒಳಗೆ ಹೋಗಿ ನೋಡಿದರೆ ರಾವಣನ ಹತ್ತು ತಲೆಯೊಂದಿಗೆ ರಾವಣನ ಪಾತ್ರಧಾರಿಯ ತಲೆಯೂ ಸೇರಿ ಹನ್ನೊಂದು ತಲೆಯಾಗಿದೆ. ಏನು ಮಾಡಲು ತೋಚದೆ ಮಕ್ಕಳು ಕಂಗಾಲಾಗಿದ್ದಾರೆ. ಆಗ ಅವರ ಮಾರ್ಗದರ್ಶಿ ಒಂದು ತಲೆಯನ್ನು ಕಿತ್ತು ಉಳಿದ ತಲೆಗಳನ್ನು ಹುಡುಗನಿಗೆ ಅಂಟಿಸಿ, ಹಾಗೆ ಹೋಗು ಪರವಾಗಿಲ್ಲ ಎಂದು ಹುರಿದುಂಬಿಸಿ ಕಳಿಸಿದರು. ಸಭೆಗೆ ಬಂದ ರಾವಣನ ತಲೆಗಳು (ನಾಲ್ಕು + ಐದು) ಅಸಮವಾಗಿ ಒಂದು ಪಕ್ಕಕ್ಕೆ ವಾಲಿಬಿಟ್ಟಿತ್ತು. ಅವನು ಹಾಗೆಯೆ ಸೊಟ್ಟ ತಲೆಗಳೊಂದಿಗೆ ನಟಿಸಿದ. ಜನರಿಗೋ ವಾಲಿದ ತಲೆಯ ರಾವಣನನ್ನು ನೋಡಿ ನಗುವೋ ನಗು. ಜನರು ಚಪ್ಪಾಳೆ ತಟ್ಟುತ್ತ ಹುರಿದುಂಬಿಸಿದ್ದನ್ನು ಕೇಳಿ ಇನ್ನೂ ಪ್ರೇರಿತನಾಗಿ ಅದೇ ಹುಮ್ಮಸ್ಸಿನಲ್ಲಿ ಸೀತೆಯ ಪರಿಣಯಕ್ಕೆ ಪಣವಾಗಿ ಇಟ್ಟಿದ್ದ ರೊಟ್ಟಿನಲ್ಲಿ ಮಾಡಿದ್ದ ಬಿಲ್ಲನ್ನು ಮುರಿದು ಬಿಟ್ಟ. ಜನರಿಗಂತೂ ಇನ್ನೂ ನಗು. ನಂತರ ಸ್ಟೇಜಿನ ಮೇಲೆಯೇ ಅದಕ್ಕೆ ತೇಪೆ ಹಾಕಿ ರಾಮನ ಪಾತ್ರಧಾರಿ ಬರುವವರೆಗೂ ಇಡಲಾಯಿತು. ಈ ನಾಟಕ ಸರಿಯಾಗಿ ನಡೆದಿದ್ದರೆ ನೋಡಿದವರ ಮನದಲ್ಲಿ ನಿಲ್ಲುತಿತ್ತೋ ಇಲ್ಲವೋ. ಆದರೆ ಈ ಆಕಸ್ಮಿಕಗಳಿಂದ ಅದು ಇಂದಿಗೂ ನೆನಪಿನಲ್ಲಿದೆ. ಇದರಿಂದ ಆ ಮಕ್ಕಳೂ ಮುಂದೆ ಅಂತಹ ತಪ್ಪನ್ನು ಮಾಡದಂತೆ ಪಾಠವನ್ನು ಕಲಿತರು ಎಂಬುದು ಮುಖ್ಯ. ತಾವೇ ತಯಾರಿಸಿದ ಬಟ್ಟೆಗಳು, ಅಲಂಕಾರಗಳು, ಇವುಗಳನ್ನು ಮಾಡುವಾಗ ಮಾಡಿದ ಉಪಾಯಗಳು, ಎದುರಿಸಿದ ಸಮಸ್ಯೆಗಳು, ಅದನ್ನು ಬಗೆಹರಿಸಿದ್ದು, ಸಂದರ್ಭಕ್ಕೆ ತಕ್ಕಂತೆ ತುರ್ತಾಗಿ ನಿರ್ಧಾರ ತೆಗೆದುಕೊಂಡಿದ್ದು, ಇವೆಲ್ಲವೂ ಅವರಿಗೆ ನಿಜವಾದ ಪಾಠವನ್ನು ಕಲಿಸಿದ್ದವು. ಇವೆಲ್ಲವನ್ನೂ ಹೇಳಿಕೊಟ್ಟರೆ ಖಂಡಿತಾ ಬರುವುದಿಲ್ಲ.
ಈ ರಾವಣನ ತಲೆಯ ಘಟನೆ ಆದಮೇಲೆ ನನಗೂ ಒಂದು ಸಂದೇಹ ಬಂದು ಬಿಟ್ಟಿದೆ, ಅದೇನೆಂದರೆ ರಾವಣನಿಗೆ ನಿಜಯಾಗಿಯೂ ೧೦ ತಲೆ (ಸಮ ಸಂಖ್ಯೆ) ಇದ್ದಿದ್ದರೆ ಆ ತಲೆಗಳು ಹೇಗೆ ಸಮವಾಗಿ ಇತ್ತು ಎಂದು. ನಿಮಗೇನಾದರೂ ಹೊಳೆದರೆ ತಿಳಿಸಿ.
ಘಟನೆ ಎರಡು 
ನನ್ನ  ಗೆಳೆಯನ ಮನೆಗೆ ಹೋಗಿದ್ದೆ. ಕುಚ್ಚುಮೊಟ್ಟೆ ಹಿಡಿದು ಧೂಳು ತೆಗೆಯುತ್ತಿದ್ದ. ಆ ಕುಚ್ಚುಮೊಟ್ಟೆಯನ್ನು ನೋಡಿದಾಗ ನನಗೆ ಆಶ್ಚರ್ಯವಾಯಿತು. ಇದೇನೋ, ನಿನ್ನ ಕುಚ್ಚುಮೊಟ್ಟೆ ಅಷ್ಟು ಅಲಂಕಾರ ಮಾಡಿಕೊಂಡಿದೆ, ಧೂಳು ತೆಗೆಯುವುದಕ್ಕೂ ಅಷ್ಟೊಂದು ಪಳ ಪಳ ಅಲಂಕಾರನಾ? ಎಂದು ಕೇಳಿದೆ. ಅದರ ಕಥೆ ಹೇಳುತ್ತೀನಿ ತಾಳು ಎಂದು ಧೂಳು ಹೊಡೆಯುತ್ತಲೇ ಹೇಳಿದ. ಬೇಸಿಗೆ ಶಿಬಿರದಲ್ಲಿ ಅವನ ಮಗನೂ ಭಾಗಿಯಾಗಿದ್ದ. ಅದರಲ್ಲಿ ರಾಜನಿಗೆ ಚಾಮರ ಬೀಸಲು ಚಾಮರ ಬೇಕಿತ್ತು. ಅದನ್ನೆಲ್ಲಾ ಕೊಂಡು ತರಲು ಯಾರೂ ದುಡ್ಡು ಕೊಡುತ್ತಿರಲಿಲ್ಲ. ಆಗ ನನ್ನ ಮಗನೇ ಈ ಉಪಾಯ ಸೂಚಿಸಿದಾಗ ಶಿಬಿರದಲ್ಲಿದ್ದ ಮಕ್ಕಳು ಮನೆಯಿಂದಲೇ ಅದನ್ನು ತಂದು ಅಲಂಕಾರ ಮಾಡಿದರು. ಶಿಬಿರ ಮುಗಿಯಿತು. ಈಗ ನನ್ನ ಮನೆಯ ಧೂಳಿಗೆ ಚಾಮರ ಬಿಸುತ್ತಿದ್ದೇನೆ ಎಂದು ನಕ್ಕ. ಮಕ್ಕಳು ಎಷ್ಟು ಚುರುಕಾಗಿ ಯೋಚಿಸುತ್ತಾರೆ, ನಮ್ಮ ಅವಶ್ಯಕತೆಗಳೇ ಹೊಸ ಶೋಧನೆಗಳಿಗೆ ಮೂಲ ಎಂಬುದು ನಿಜ ಅನ್ನಿಸಿತು. ನೀವೇನನ್ನುತ್ತೀರಿ?

No comments:

Post a Comment