Sunday, March 22, 2020

ಬೇಸಿಗೆ ರಜ

ಬೇಸಿಗೆ ರಜ - ಬಿ ಎಸ್ ಜಗದೀಶ ಚಂದ್ರ
ಬೇಸಿಗೆ ರಜಾ ಎಂದರೆ ಏನೋ ಒಂದು ಸವಿನೆನಪು. ಹಿಂದೆ ಆ ರಜೆಗಾಗಿ ನಾವು ಹೇಗೆ ಪರಿತಪಿಸುತ್ತಿದ್ದೆವು ಎಂದರೆ ವರ್ಣಿಸಲಾಗದು.
ಅಂತೂ ಇಂತೂ ಬೇಸಿಗೆ ಬಂದೇ ಬಿಟ್ಟಿತು. ಜೊತಗೇ ಭಯಂಕರವಾದ ಬಿಸಿಲನ್ನೂ ತಂದಿದೆ. ಆದರೂ ಮಕ್ಕಳಿಗೆ ಇದ್ಯಾವ ಚಿಂತೆಯೂ ಇಲ್ಲ. ಅವರಿಗೆ ಖುಷಿಯೋ ಖುಷಿ. ರಜೆಯಲ್ಲಿ ಮಜಾ ಮಾಡಬಹುದು ಎಂದು. ಆದರೆ ನಿಜವಾಗಿಯೂ ಇಂದಿನ ಮಕ್ಕಳು ಮಜ ಮಾಡುತ್ತಿದ್ದಾರೆಯೇ? ಅವರಿಗೆ ಶಾಲೆ ಇಲ್ಲ, ಮನೆ ಕೆಲಸಗಳಿಲ್ಲ, ಮನೆ ಪಾಠಗಳಿಲ್ಲ, ಪರಿಕ್ಷೆ ಎಂಬ ಭೂತದಿಂದ ಬಿಡುಗಡೆಯಾಯಿತಲ್ಲಾ ಎಂದು ಖುಷಿಯೇ ಹೊರತು ರಜೆಯಲ್ಲಿ ಏನು ಮಾಡುವುದು ಎಂಬುದು ಒಂದು ಸಮಸ್ಯೆಯೇ. ಅನೇಕ ಮಕ್ಕಳಿಗೆ ರಜೆ ಎಂದರೆ ಹರಟು, ಟೀವಿ ಮುಂದೆ ಕೂಡು, ಕಂಪ್ಯೂಟರ್ ಮುಂದೆ ಕುಕ್ಕರಿಸು, ಮೊಬೈಲ್ ಹಿಡಿದುಕೊ,  ಇದೇ ಆಗಿದೆ. ಹೊರಗೆ ಕೆಲಸ ಮಾಡುವ ದಂಪತಿಗಳಿದ್ದರಂತೂ ಅವರಿಗೆ ಮಕ್ಕಳ ರಜೆ ಎಂದರೆ ಒಂದು ದೊಡ್ಡ ಸಮಸ್ಯೆಯೇ. ಎದ್ದ ಕೂಡಲೇ ಬಾಲಬಿಚ್ಚಿಕೊಂಡು ಹೊರಗಿನ ಆಟಕ್ಕೆ ಹೋಗುವ  ಬದಲು ಟಿವಿ, ಮೊಬೈಲ್, ಕಂಪ್ಯೂಟರ್ ಗೇಮ್ ಮುಂದೆ ಕೂಡುವ ಇಂದಿನ ಈ ಬಾಲಕ/ಕಿ ಯರನ್ನು ಹೇಗೆ ದಿನ ಪೂರ್ತಿ ನಿಭಾಯಿಸುವುದು ಎಂದು ಅವರ ಸಂಕಟ.
ಹಿಂದಿನಂತೆ  ಇಂದು ಅವಿಭಕ್ತ ಕುಟುಂಬಗಳಿಲ್ಲ. ಮನೆಗೊಂದೇ ಮಗು. ನೋಡಿಕೊಳ್ಳಲು ಯಾರೂ ಇರುವುದಿಲ್ಲ. ಮಕ್ಕಳಿಗೂ ಯಾವುದೇ ಸಹಜವಾದ ಜೊತೆಗಾರರು ಇರುವುದಿಲ್ಲ. ಹಿಂದಾದರೆ ಅಕ್ಕ, ತಮ್ಮ, ಅಣ್ಣ, ತಂಗಿ, ಕಸಿನ್‌ಗಳು, ಪಕ್ಕದ ಮನೆಯ ಮಕ್ಕಳು ಹೀಗೆ ಒಂದು ದೊಡ್ಡ ದಂಡೇ ಇರುತ್ತಿತ್ತು. ಆಗ ಅವರು ಗುಂಪು ಗುಂಪಾಗಿ ಏನು ಮಾಡಿದರೂ ಒಂದು ಮನರಂಜನೆಯೇ. ಅವರಿಗಂತೂ ಆಟ, ಜಗಳ ಮೊದಲಾದುವುಗಳಲ್ಲಿ ಹೇಗೆ ಕಾಲ ಕಳೆಯುತ್ತಿದ್ದರೆಂದರೆ ಊಟ, ನಿದ್ದೆ, ಮನೆಯನ್ನೇ ಮರೆತುಬಿಡುತ್ತಿದ್ದರು. ಅಪ್ಪ ಅಮ್ಮ ಅವರನ್ನು ಮನೆಗೆ ಎಳೆದು ತರಬೇಕಿತ್ತು. ಆದರೆ ಇಂದು?! ಮನರಂಜನೆ ಎಂದರೆ ಟೀವಿ, ಕಂಪ್ಯೂಟರ್‌ಗಳೇ. ಮನೆಯಿಂದಾಚೆ ಮುಕ್ತವಾದ ವಾತಾವರಣದಲ್ಲಿಯ ಆಟದಲ್ಲಿನ ಜಗಳ, ಕದನ, ಕುತೂಹಲ, ಹುಮ್ಮಸ್ಸು ಇವೆಲ್ಲವನ್ನೂ ಇಂದಿನ ಮಕ್ಕಳು ಕಳೆದುಕೊಂಡು ಬಿಟ್ಟಿದ್ದಾರೆ. ಕ್ರಿಕೆಟ್ ಮೊದಲಾದ ಆಟಗಳು ನಮ್ಮ ದೇಸೀ ಆಟಗಳನ್ನು ನುಂಗಿಹಾಕಿವೆ. ಹೋಗಲಿ ಕ್ರಿಕೆಟ್ ಆಡಲೂ ಒಟ್ಟಿಗೆ ಹುಡುಗರು ಸಿಗದ ಅಥವಾ ಸಿಕ್ಕರೂ ಮಕ್ಕಳ ಸ್ವಾರ್ಥ ಮನೋಭಾವದಿಂದ ಆಟ ಮುಂದುವರಿಯುವುದೇ ಕಷ್ಟ ಎನ್ನುವ ಪರಿಸ್ಥಿತಿ ಉಂಟಾಗಿದೆ. ಇಂತಹ ಸ್ವಾರ್ಥತನಕ್ಕೆ ಮಕ್ಕಳನ್ನು ಮುದ್ದಿನಿಂದ ಬೆಳೆಸಿರುವುದೇ ಕಾರಣ ಎಂದರೆ ತಪ್ಪಾಗಲಾರದು.  ಇದನ್ನು ಹೋಗಲಾಡಿಸಲು ಕ್ರಿಕೆಟ್ ಕೊಚಿಂಗ್ ಬಂದಿದೆ. ಮಕ್ಕಳಿಗೆ ಹೇಳಿಕೊಡಲು ಕೋಚ್ ಇರುತ್ತಾರೆ. ಹಾಗೆಯೇ ಈ ಕೋಚ್ ಇರುವುದರಿಂದ 'ನಾನೇ ಎಲ್ಲಾ' ಎಂದು ಜಗಳವಾಗುವುದೂ ತಪ್ಪುತ್ತದೆ. ಅಂತೂ ಆಟವಾಡಿಸುವುದಕ್ಕೂ ಒಬ್ಬರು ಮೇಷ್ಟ್ರು ಹೇಗಿದೆ ನೋಡಿ ಕಾಲ.
ಹೀಗೆ ನಾನಾಕಾರಣಗಳಿಂದ ಇಂದು ಬೇಸಿಗೆ ಶಿಬಿರಗಳು ಬೇಕಾದಷ್ಟು ತಲೆ ಎತ್ತಿವೆ. ಕೆಲವು ಶಿಬಿರಗಳು ಕೇವಲ ದುಡ್ಡಿಗಾಗಿ ಮಾಡುವುದುಂಟು. ಇನ್ನು ಕೆಲವು ಕಡೆ ಪ್ರತಿಬಾರಿಯೂ ಒಂದೇ ಕತೆ. ಒಮ್ಮೆ ಹೋಗಿ ಬಂದರಾಯಿತು, ಇನ್ನೊಮ್ಮೆ ಹೋದರೆ ಬೇಸರ ಉಂಟಾಗುತ್ತದೆ. ಆದ್ದರಿಂದ ಬೇಸಿಗೆ ಶಿಬಿರಕ್ಕೆ ಸೇರಿಸುವ ಮುನ್ನ ಕೊಂಚ ಯೋಚಿಸುವುದು ಒಳ್ಳೆಯದು.
ಬೇಸಿಗೆ ಶಿಬಿರಗಳ ಅನುಕೂಲಗಳು
ಮನೆಯಲ್ಲಿಯೆ ಜೊತೆಗಾರರಿಲ್ಲದಿರುವುದರಿಂದ ಈ ಶಿಬಿರಗಳಲ್ಲಿ ಬರುವ ಇತರರೇ ಅವರಿಗೆ ಜೊತೆಗಾರರಾಗುತ್ತಾರೆ. ಅವರೇ ಅಣ್ಣ, ತಂಗಿ, ಅಕ್ಕ, ತಮ್ಮ, ಕಸಿನ್ ಎಲ್ಲರೂ ಆಗುತ್ತಾರೆ. ಶಿಬಿರವನ್ನು ನಡೆಸುವವರು ಅಮ್ಮ, ಅಜ್ಜಿ, ಮಾವ, ಅತ್ತೆ, ಚಿಕ್ಕಪ್ಪ, ಚಿಕ್ಕಮ್ಮ ಎಲ್ಲರೂ ಆಗಿರುತ್ತಾರೆ. ಅದು ನಡೆದಷ್ಟು ದಿನ ಅದು ಒಂದು ಅವಿಭಕ್ತ ಕುಟುಂಬದ ಮನೆಯಂತೆಯೇ ಆಗಿರುತ್ತದೆ.
ಶಾಲೆ, ಮನೆ ಕೆಲಸ, ಮನೆ ಪಾಠ ಇವುಗಳಿಂದ ಮಕ್ಕಳಿಗೆ ಮುಕ್ತಿದೊರೆಯುತ್ತದೆ. ತಮಗೆ ಇಷ್ಟವಾದುದನ್ನು ಮಾಡುವ ಭಾಗ್ಯ ಅವರದಾಗುತ್ತದೆ.
ಇಲ್ಲಿ ಇರುವಷ್ಟು ದಿನವಾದರೂ ಅವರಿಗೆ ಅಪ್ಪ ಅಮ್ಮಂದಿರ "ಅದು ಮಾಡಬೇಡ, ಇದು ಮಾಡಬೇಡ, ಹೀಗೇ ಮಾಡು, ಅಲ್ಲಿ ಹೋಗಬೇಡ' ಇತ್ಯಾದಿಗಳಿಂದ ಮುಕ್ತಿ ದೊರೆಯುತ್ತದೆ.
ಆಟ, ಪಾಠ, ಕೂಟ, ಮನರಂಜನೆ, ಸಹಬಾಳ್ವೆ, ಗುಂಪು ಚಟುವಟಿಕೆ ಇವೆಲ್ಲವೂ ಒಂದೇ ಜಾಗದಲ್ಲಿ ದೊರೆಯುತ್ತದೆ.
ಅದು ಮಕ್ಕಳ ಚಟುವಟಿಕೆಗಳನ್ನು ಚುರುಕುಗೊಳಿಸುತ್ತದೆ. ಅವರಿಗೆ ಹೊಸ ಹೊಸ ವಿಷಯವನ್ನು ತಿಳಿಸುವ, ಕಲಿಸುವ ಕೇಂದ್ರವಾಗಿರುತ್ತದೆ.
ಶಿಬಿರಕ್ಕೆ ಸೇರಿಸುವ ಮುನ್ನ
ನಿಮ್ಮ ಮಗುವಿಗೆ ಬೇಕಾದ ವಿಷಯಗಳು ಅಲ್ಲಿ ಸೇರಿವೆಯೋ ಇಲ್ಲವೋ ನೋಡಿಕೊಳ್ಳಿ. ನಿಮ್ಮ ಮಗುವಿಗೆ ಯಾವ ವಿಷಯಗಳಲ್ಲಿ ಆಸಕ್ತಿ ಎಂಬುದನ್ನು ತಿಳಿದುಕೊಳ್ಳಿ. ಹಾಗೆಯೇ ನಿಮ್ಮ ಮಗು ಯಾವ ವಿಷಯಗಳಲ್ಲಿ ಹಿಂದಿದೆ ಎಂಬುದನ್ನೂ ಗಮನದಲ್ಲಿಟ್ಟುಕೊಳ್ಳಿ. ಇದು ತುಂಬಾ ಮುಖ್ಯ. ಕೆಲವು ಮಕ್ಕಳು ಬುದ್ದಿವಂತರಾಗಿರಬಹದು ಆದರೆ ನಡವಳಿಕೆ ಗೊತ್ತಿಲ್ಲದಿರಬಹುದು. ಕೆಲವುಬಾರಿ ಸಂಕೊಚ ಪ್ರವೃತ್ತಿಯವರಾಗಿರಬಹುದು, ಕೆಲವರಿಗೆ ಸಭಾಕಂಪನವಿರಬಹುದು, ಹಿಂಜರಿತವಿರಬಹುದು, ಅತೀ ಆತ್ಮವಿಶ್ವಾಸವಿರಬಹುದು. ಕೆಲವೊಮ್ಮೆ ಅತೀ ಮುದ್ದಿನಿಂದಾಗಿ ತಮ್ಮ ಕೆಲಸಮಾಡಿಕೊಳ್ಳುವುದನ್ನೇ ಕಲಿಯದಿರಬಹುದು, ಮನೆಯಲ್ಲಿ ಇತರ ಜೊತೆಗಾರರು ಇಲ್ಲದಿರುವುದರಿಂದ ಜೊತೆಯವರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನೇ ತಿಳಿಯದಿರಬಹುದು. ಆದ್ದರಿಂದ ಕೇವಲ ಓದು ಬರಹದ ವಿಷಯಗಳಿಗೇ ಒತ್ತು ಕೊಡಬೇಡಿ. ಸಾಹಸ, ದೈಹಿಕ ಬೆಳವಣಿಗೆ, ಗುಂಪು ಚಟುವಟಿಕೆ, ಹವ್ಯಾಸ, ನಡವಳಿಕೆ, ಭಾಷಣಕಲೆ, ಮನೆಯಲ್ಲಿಯೇ ಮಾಡಬಹುದಾದ ಕೆಲಸಗಳು, ಹವ್ಯಾಸಗಳು ಮೊದಲಾದ ವಿಷಯಗಳೂ ಇದ್ದರೆ ಒಳ್ಳೆಯದು. ಇದರಿಂದ ಮಕ್ಕಳು ಮುಂದೆಬರಲು ಅನುಕೂಲವಾಗುವುದು.
ಒಂದೇ ಶಿಬಿರದಲ್ಲಿ ತುಂಬಾ ವಿಷಯಗಳನ್ನು ತುರುಕಿದ್ದರೆ ಯಾವುದನ್ನೂ ಸರಿಯಾಗಿ ಕಲಿಯಲಾಗುವುದಿಲ್ಲ. ಆದ್ದರಿಂದ ನಿಮ್ಮ ಮಕ್ಕಳಿಗೆ ಏನು ಬೇಕೋ ಅಂತಹ ವಿಷಯಗಳು ಇರುವ ಕಡೆ ಕಳಿಸಿದರೆ ಒಳ್ಳೆಯದು.
ಹೀಗೂ ಮಾಡಬಹುದು
ಅನುಕೂಲಗಳಿದ್ದರೆ ನೀವೇ ಒಂದು ಶಿಬಿರವನ್ನು ಏರ್ಪಡಿಸಬಹುದು. ಅದನ್ನು ಹುಡುಗರಿಗೇ ಬಿಟ್ಟರೆ ಅದೇ ಒಂದು ಚಟುವಟಿಕೆಯಾಗಬಹುದು. ಆಗ ನೀವು ಒಬ್ಬ ಉತ್ತಮ ಮಾರ್ಗದರ್ಶಿಯಾಗಿದ್ದರೆ ಸಾಕು. ದೊಡ್ಡ ಮಕ್ಕಳು ಚಿಕ್ಕವರಿಗೆ ಹಲವಾರು ವಿಷಯಗಳನ್ನು ಹೇಳಿಕೊಡಬಹುದು. ಹೀಗೆ ಹೇಳಿಕೊಡುವುದರಿಂದ ಕಲಿಸುವವರೂ ಸಹ ಇನ್ನೂ ಚೆನ್ನಾಗಿ ಕಲಿಯಬಹುದು. ಇಂತಹ ಶಿಬಿರಗಳಲ್ಲಿ ಮಕ್ಕಳೇ ನಾಟಕ, ನೃತ್ಯ, ಸಂಗೀತ ನಿರ್ದೇಶನ ಮೊದಲಾದುವನ್ನು ಮಾಡಬಹುದು. ಇದರಿಂದ ಮನಸ್ಸಿಗೆ ಸಿಗುವ ಆನಂದ, ತೃಪ್ತಿ ಅಪಾರ, ಗಳಿಸುವ ಆತ್ಮವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಇದನ್ನು ನಡೆಸುವ ಮಕ್ಕಳಲ್ಲಿರುವ ಕಲೆ ಆಸಕ್ತಿ ಇವುಗಳನ್ನು ಪಟ್ಟಿಮಾಡಿಕೊಳ್ಳಬೇಕು. ನಂತರ ಅಂತಹ ಮಕ್ಕಳು ಅದನ್ನು ಇತರರಿಗೆ ಹೇಳಿಕೊಡುವಂತೆ ಹೇಳಬೇಕು. ಇದರಿಂದ ಹಂಚಿಕೊಳ್ಳುವ, ಇತರರೊಂದಿಗೆ ಬೆರೆಯುವ ಮನೋಭಾವ ಬೆಳೆಯುತ್ತದೆ. ಉದಾಹರಣೆಗೆ ಕವನಬರೆಯುವವನು ಇತರರಿಗೆ ಅದರ ಹಿನ್ನೆಲೆಯನ್ನು ತಿಳಿಸಿಕೊಡಬಹುದು, ಹಾಗೆಯೇ ಚಿತ್ರಕಲೆ, ಸಂಗೀತ, ರಂಗೋಲಿ, ಕಥೆ ಹೇಳುವುದು, ಒಳ್ಳೆಯ ಜೋಕುಗಳು, ಕೇವಲ ಎರಡು ನಿಮಿಷದಲ್ಲಿಯೇ ತುಂಬಾ ಚುರುಕುತನದಿಂದ ಮಾಡುವ ಚಟುವಟಿಕೆಗಳು, ಹೊಸಭಾಷೆ ಕಲಿಯುವುದು, ಅಡಿಗೆ ಮಾಡುವುದು, ತೋಟಗಾರಿಕೆ, ಮನೆಯಲ್ಲಿಯೇ ಗೊಬ್ಬರ ಮಾಡುವುದು ಹೀಗೇ ಅನೇಕ. ಇನ್ನೊಬ್ಬರಿಗೆ ಹೇಳಿಕೊಡುವುದೂ ಒಂದು ಕಲೆ. ಚೆನ್ನಾಗಿ ವಿಷಯ ತಿಳಿದಿದ್ದರೂ ಒಮ್ಮೊಮ್ಮೆ ಹೇಳಿಕೊಡಲು ಬರುವುದಿಲ್ಲ. ಇದನ್ನು ಮಕ್ಕಳೇ ಸ್ವತಃ ಮಾಡಿದಾಗ ಆಗುವ ಅನುಭವ ತುಂಬಾ ಮುಖ್ಯ ಹಾಗೂ ಉಪಯೋಗಕರ.
ಮಕ್ಕಳೇ ಯೋಜಿಸಿದ ಕೆಲವು ಪ್ರಾಜೆಕ್ಟ್ಗಳನ್ನೂ ಕಾರ್ಯರೂಪಕ್ಕೆ ತರಬಹುದು. ಇದು ಅವರ ಬಡಾವಣೆಯ ಮರಗಳ ಸಂಖ್ಯೆಯನ್ನು ಎಣಿಸುವುದು, ಜನರ ಕುಂದು ಕೊರತೆಗಳ ಪಟ್ಟಿ, ಕಸ ಸಂಗ್ರಹಿಸಿ ಅದರಿಂದ ಗೊಬ್ಬರದ ಉತ್ಪಾದನೆ, ಅನಕ್ಷರಸ್ತರಿಗೆ ಅಕ್ಷರ ಕಲಿಸುವುದು, ಇತ್ಯಾದಿ ಇತ್ಯಾದಿಗಳೂ ಸೇರಬಹುದು. ಕಾಮರ್ಸ ಓದುತ್ತಿರುವ ವಿದ್ಯಾರ್ಥಿಗಳಿದ್ದರೆ ಇಂತಹ ಶಿಬಿರದ ಖರ್ಚು, ವೆಚ್ಛ, ಲಾಭ ಮೊದಲಾದುವನ್ನು ಲೆಕ್ಕಾಚಾರ ಮಾಡಬಹುದು. ಇದು ಅವರಿಗೆ ಒಂದು ಪ್ರತ್ಯಕ್ಷವಾದ ಅನುಭವವೂ ಆಗುವುದರಲ್ಲಿ ಸಂದೇಹವೇ ಇಲ್ಲ. ಒಟ್ಟಿನಲ್ಲಿ ಇಂತಹ ಚಟುವಟಿಕೆಗಳಂತೂ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ತುಂಬಾ ಸಹಕಾರಿ. ಇಂತಹ ಮಕ್ಕಳೇ ನಾಳೆಯ ಉತ್ತಮ ಪ್ರಜೆಗಳಾಗಲು ಅರ್ಹರು.
ಎಲ್ಲಕ್ಕಿಂತಾ ಮಕ್ಕಳೇ ನಡೆಸಿದ ಶಿಬಿರ ಚೆನ್ನಾಗಿ ನಡೆದು ಯಶಸ್ವಿಯಾಯಿತೆಂದರೆ ಆಗುವ ತೃಪ್ತಿಯೇ ಬೇರೆ. ಇದು ಇನ್ನೂ ಹೆಚ್ಚು ಇಂತಹ ಶಿಬಿರಗಳನ್ನು ನಡೆಸಲು, ಕಳೆದ ಶಿಬಿರದಲ್ಲಿ ನಡೆದ ತಪ್ಪುಗಳನ್ನು ತಿದ್ದಿಕೊಳ್ಳಲು ಸಹಕಾರಿಯಾಗುತ್ತದೆ. ಮಕ್ಕಳೊಂದಿಗೆ ಹಿರಿಯರೂ, ಗೃಹಿಣಿಯರೂ, ನಿರುದ್ಯೋಗಿಗಳೂ ಬೇಕಾದರೆ ಸೇರಿಕೊಳ್ಳಬಹುದು. ಇದೇ ಅವರಿಗೆ ಒಂದು ಹವ್ಯಾಸವಾಗಬಹುದು. ಆದರೆ ಒಂದು ಮಾತು. ಇಂತಹ ಶಿಬಿರವನ್ನು ಹಣಗಳಿಕೆಗಾಗಿ ಮಾಡದೇ ಮಕ್ಕಳನ್ನು ಒಂದುಗೂಡಿಸುವ, ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತೆಗೆಯುವ ಒಂದು ಒಳ್ಳೆಯ ಕಾರ್ಯವೆಂದು ಮಾಡಿದರೆ ನಿಮ್ಮ ಬಡಾವಣೆಗೇ ಏಕೆ, ನಾಡಿಗೂ ದೇಶಕ್ಕೂ ನಿಮ್ಮಿಂದ ಒಂದು ಅಳಿಲು ಸೇವೆಯಾಗುವುದು.
ನಿಮ್ಮ ಶಿಬಿರದಲ್ಲಿ ನಡೆದ ಕಾರ್ಯಕ್ರಮಗಳು ಚೆನ್ನಾಗಿ ಬಂತೋ ಇಲ್ಲವೋ ಅದು ಮುಖ್ಯವಲ್ಲ. ಪರಿಪೂರ್ಣತೆ (ಪರ್ಫೆಕ್ಷನ್)ಗೆ ಒತ್ತು ಕೊಡಬೇಡಿ. ಮಕ್ಕಳು ಮಾಡಿದ್ದೂ ಹೇಗೆ ಬಂದರೂ ಚೆನ್ನ.  ಅದರಲ್ಲಿ ಭಾಗಿಯಾದ ಮಕ್ಕಳು ತಮ್ಮ ಚಟುವಟಿಕೆಗಳಿಂದ ಕಲಿತ ಪಾಠ ಮುಖ್ಯ.
ಹೀಗೆ ನೀವೂ ಈ ಬಾರಿ ಒಂದು ಬೇಸಿಗೆ ಶಿಬಿರ ನಡೆಸಿ ಅದಕ್ಕೆ ನಿಮ್ಮದೇ ಆದ ಒಂದು ಛಾಪು ಕೊಡಿ. ಎಲ್ಲರಿಂದ ಭಲೇ ಎನ್ನಿಸಿಕೊಳ್ಳಿ. ಇಷ್ಟೇ ಸಾಲದು, ನಿಮ್ಮ ಅನುಭವಗಳನ್ನು, ಅನಿಸಿಕೆಗಳನ್ನು ಬರೆದು ಇತರರೊಂದಿಗೆ ಹಂಚಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಈ ಬಾರಿಯ ಬೇಸಿಗೆ ಸುಡು ಬೇಸಿಗೆಯಾಗದೇ ತಂಪು ಬೇಸಿಗೆಯಾಗಲೀ ಎಂಬುದೇ ನನ್ನ ಅಸೆ. ಈ ಗುಂಪಿನಲ್ಲಿಯೇ ಯಾರಾದರೂ ಇದರಿಂದ ಪ್ರೇರಿತರಾಗಿ ಮಕ್ಕಳ ಮೂಲಕವೇ ಶಿಬಿರ ನಡೆಸಿದಿರೆಂದರೆ ಇದನ್ನು ಬರೆದದ್ದು ಸಾರ್ಥಕ ಎಂದು ಭಾವಿಸುತ್ತೇನೆ.
ಜಗದೀಶ ಚಂದ್ರ




No comments:

Post a Comment