Sunday, May 23, 2021

ಅಮ್ಮನ ತರ್ಕ

ಅಮ್ಮನ ತರ್ಕ  

ವಾಸು ಮನೆಯೊಂದನ್ನು ಕಟ್ಟಿಸುತ್ತಿದ್ದ. ಅದಕ್ಕಂತೂ ಒಬ್ಬರದು ಒಂದೊಂದು ಸಲಹೆಗಳು. ಮಗ ಆಗಲೇ ನನ್ನ ಕೋಣೆ ಹೀಗಿರಬೇಕು ಹಾಗಿರಬೇಕು ಎಂದು ಕನಸು ಕಟ್ಟಿದ್ದ. ಮಗಳಂತೂ ತನ್ನ ಕೋಣೆಗೆ ಬಣ್ಣ, ಅಲಂಕಾರ ಎಲ್ಲದರ ಕನಸು ಕಾಣುತ್ತಿದ್ದಳು. ಹೆಂಡತಿಯದು ಇನ್ನೇನೋ ಕನಸುಗಳು. ಅವನ ಅಮ್ಮ ಜಾನಕಮ್ಮ ಮಾತ್ರ "ಒಂದು ಒಳ್ಳೆಯ ಮನೆಯಾದರೆ ಸಾಕು" ಎನ್ನುತ್ತಿದ್ದರು. ವಾಸು, "ತನ್ನ ಮನೆಯವರ ಕನಸುಗಳು, ಮಿತ್ರರ ಸಲಹೆಗಳು ಇವುಗಳ ನಡುವೆ ಸಿಲುಕಿ, ಮನೆ ಅಂತ ಮುಗಿಸಿದರೆ ಸಾಕು" ಎಂದು ಕೊಳ್ಳುತ್ತಿದ್ದ. 

ಹೀಗೆ ಮನೆಯ ಕೆಲಸಗಳು ಸಾಗುತ್ತಿದ್ದವು. ಎಲ್ಲರಿಗೂ ಅವರವರ ಕನಸುಗಳನ್ನು ಸಾಕಾರ ಗೊಳಿಸುವ ಯೋಚನೆಯೇ. ದೇವರ ಮನೆಯನ್ನು ಒಂದು ಕಡೆ ಗೊತ್ತು ಮಾಡಲಾಗಿತ್ತು. ಅದಕ್ಕೆ ಯಾರೂ ವಾರಸುದಾರರಿರಲಿಲ್ಲ, ವಾಸುವೇ ನೋಡಿಕೊಳ್ಳಬೇಕಿತ್ತು, ಜಾನಕಮ್ಮ, ನೀನು ಎಲ್ಲಿ ಮಾಡಿಕೊಟ್ಟರೆ ನಾನು ಅಲ್ಲಿ ಕುಳಿತು ದೇವರ ಧ್ಯಾನ ಮಾಡುವೆ ಎಂದುಬಿಟ್ಟಿದ್ದರು. ವಾಸು ಅವರಿವರ ಸಲಹೆಗಳನ್ನು ಕೇಳುತ್ತ ಅದನ್ನು ಮಾಡಲೋ ಬೇಡವೋ ಎಂದು ಒದ್ದಾಡುವುದನ್ನು ಕಂಡು ಜಾನಕಮ್ಮ "ಸುಮ್ಮನೆ ನಿನಗೆ ಹೇಗೆ ಬೇಕೋ ಹಾಗೆ ಕಟ್ಟಿಸು, ಹತ್ತು ಜನರನ್ನು ಕೇಳಿದರೆ ಹತ್ತು ತರಹ ಹೇಳುತ್ತಾರೆ, ಯಾರದನ್ನು ಒಪ್ಪುವೆ?" ಎಂದು ಬೈಯುತ್ತಿದ್ದರು. ಆದರೂ ವಾಸು ಅದನ್ನು ಬಿಟ್ಟಿರಲಿಲ್ಲ. 

ಹೀಗೆ ಒಂದು ದಿನ ವಾಸು ಅದ್ಯಾರನ್ನೋ ಮನೆಗೆ ಕರೆದುಕೊಂಡು ಬಂದಿದ್ದ. ಅವರು ತೆಲುಗು ಮಾತನಾಡುವವರು. ವಾಸ್ತು ಪಂಡಿತರು ಎಂದು ಹೇಳಿಕೊಂಡರು. ಅವರಂತೂ ಈ ಮನೆಗೆ ಬಂದ ಕೂಡಲೇ ಅವರು ಈಗಿರುವ ಮನೆಯ ಬಗ್ಗೆ ಏನೇನೋ ಹೇಳತೊಡಗಿದರು. ಇದ್ಯಾರು ಈ ಮನೆಗೆ ಬಾಗಿಲನ್ನು ಇಲ್ಲಿಡಲು ಹೇಳಿದ್ದು? ಅಯ್ಯೋ ನಿಮ್ಮ ಮನೆಯ ಭಾವಿ ಇಲ್ಲೇಕೆ ತೊಡಿಸಿದ್ದೀರಿ? ಅಡುಗೆ ಮನೆಯ ಜಾಗವೇ ಸರಿಯಾಗಿಲ್ಲ, ಮಲಗುವ ಮನೆಯಂತೂ ದೇವರಿಗೇ ಪ್ರೀತಿ" ಎಂದೆಲ್ಲ ಬಡಬಡಿಸತೊಡಗಿದರು. ಇದು ಜಾನಕಮ್ಮನವರ ಮನೆ. ಅದನ್ನು ಅವರ ಗಂಡ ಸೀತಾಪತಿ ಕಟ್ಟಿಸಿದ್ದರು. ಆಗ ಅವರು ಪಟ್ಟ ಕಷ್ಟ,ನಷ್ಟ ಎಲ್ಲವೂ ಜಾನಕಮ್ಮನಿಗೆ ಗೊತ್ತಿತ್ತು. ಈ ಪಂಡಿತ ಹೀಗೆ ಬಂದಕೂಡಲೇ ಈಗಿರುವ ಮನೆಯ ಬಗ್ಗೆ ಮಾತನಾಡಿದ್ದು ಅವರನ್ನು ಕೆರಳಿಸಿತ್ತು. ಆದರೆ ಅದನ್ನು ತೋರಿಸದೆ ಮಗನಿಗೆ "ನಿಮ್ಮ ಹೊಸ ಮನೆಯ ಬಗ್ಗೆ ಅದೇನು ಹೇಳುತ್ತಾನೋ ಅಷ್ಟನ್ನು ಕೇಳಿ ಮೊದಲು ಹೊರಗೆ ಕಳಿಸು" ಎಂದಿದ್ದರು. "ಇಲ್ಲವಾದರೆ ನಾನೆ ಬಂದು ಹೇಳಬೇಕಾಗುತ್ತೆ" ಎಂದೂ ಹೇಳಿದರು.

ಆತ ಹೋದಮೇಲೆ ಜಾನಕಮ್ಮ ಯೋಚಿಸಿದರು. ಅಲ್ಲ, ನಾವು ಈ ಮನೆಯಲ್ಲಿ ಇಷ್ಟು ವರ್ಷ ಬದುಕಿ ಬಾಳಿದೆವು, ಈಗ ಚೆನ್ನಾಗಿಯೇ ಇದ್ದೀವಲ್ಲ, ಸೀತಾಪತಿ ಅವರು ಹೋಗಲು ಅವರ ಅರೋಗ್ಯ ಕಾರಣವೆ ಹೊರತು ಮನೆ ವಾಸ್ತುವಲ್ಲ. ಅದೆಷ್ಟು ಸುಲಭವಾಗಿ ಮನೆಯ ಬಗ್ಗೆ ಏನೇನೊ ಬಡಬಡಿಸಿ ಮಾನಸಿಕವಾಗಿ ಹೆದರಿಸಿಬಿಡುತ್ತಾರೆ, ಹೆದರುವವರಿಗೆ ಇನ್ನೂ ಹೆದರಿಸಿ ತಾವು ಹೇಳಿದ್ದೆ ಸರಿ ಎಂದು ನಂಬಿಸುತ್ತಾರೆ ಎಂದು ಮನಸಿನಲ್ಲೇ ಅಂದುಕೊಂಡರು. ಮೊದಲು ಮಗನಿಗೆ ಸರಿಯಾಗಿ ಬುದ್ದಿ ಹೇಳಿ, ಧೈರ್ಯವಾಗಿ ಮನೆಯನ್ನು ಹೇಗೆ ಬೇಕೋ ಹಾಗೆ ಕಟ್ಟಿಸಿಕೊ ಎಂದು ಹೇಳಬೇಕು ಅಂದುಕೊಂಡರು. 

ಆ ಮನುಷ್ಯ ಹೋದಮೇಲೆ ವಾಸು ತಲೆಯ ಮೇಲೆ ಕೈಹೊತ್ತು ಕುಳಿತಿದ್ದ. ಅವನು ಕಟ್ಟಿಸಲು ಪ್ರಾರಂಭಿಸಿದ್ದ ಮನೆಯ ನಕ್ಷೆಯೇ ಬದಲು ಮಾಡುವಂತೆ ಆ ಪಂಡಿತ ಹೇಳಿ ಇವನ ತಲೆ ಕೆಡಿಸಿದ್ದ. ದೇವರ ಮನೆಯ ಜಾಗ ಸಂಪೂರ್ಣವಾಗಿ ಬದಲಾಯಿಸಬೇಕು ಎಂದಿದ್ದ. ಆಗ ಜಾನಕಮ್ಮ, ವಾಸುವಿಗೆ, "ದೇವರ ಮನೆ ಈಶಾನ್ಯಕ್ಕೆ ಯಾಕಿರಬೇಕು ಎಂದರೆ ದೇವರನ್ನು ಪೂಜೆ ಮಾಡುವವರು ಉತ್ತರಕ್ಕೆ ಅಥವಾ ಪೂರ್ವಕ್ಕೆ ತಿರುಗಿ ಕುಳಿತುಕೊಳ್ಳಲಿ ಎಂದು. ಇವೆಲ್ಲ ಹಿಂದೆ ದೊಡ್ಡ ಜಾಗಗಳಿದ್ದಾಗ ಮಾಡುತ್ತಿದ್ದರು. ಈಗ ನಿನ್ನ ಮನೆಯೇನು ತೋಟದ ಮನೆಯೇ, ಇವೆಲ್ಲ ನೋಡಲಿಕ್ಕೆ" ಎಂದು ಬುದ್ಧಿ ಹೇಳಿ ಧೈರ್ಯ ತುಂಬಿದರು. "ದೇವರ ಕೊಣೆಯಲ್ಲಿ ನಾವು ಪೂರ್ವ ದಿಕ್ಕಿಗೆ ಕುಳಿತು ಪೂಜೆ ಮಾಡಬಹುದು, ಅಷ್ಟು ಸಾಕು, ಸುಮ್ಮನೆ ಏನೇನೋ ಯೋಚಿಸಬೇಡ" ಎಂದಿದ್ದರು.

 ಆ ಪಂಡಿತ ಇನ್ನೊಮ್ಮೆ ಮನೆಗೆ ಬಂದಾಗ, ಜಾನಕಮ್ಮ ತಾವೇ ಮುಂದೆ ಬಂದು ಆತನನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡು, "ನಾವು ಈ ಮನೆಯನ್ನು ಬೆವರು ಹರಿಸಿ ಕಟ್ಟಿಸಿದೆವು, ನೀನು ಬಂದು ಒಂದು ನಿಮಿಷಕ್ಕೆ ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ಹೇಳಿ ಹೆದರಿಸಿಬಿಟ್ಟೆಯಲ್ಲಾ" ಎಂದೆಲ್ಲ ಹೇಳಿ ಬೈದು "ಇನ್ನೊಮ್ಮೆ ಇಲ್ಲಿ ಬಂದರೆ ನಾವು ಸುಮ್ಮನಿರುವುದಿಲ್ಲ" ಎಂದು ಒಳಗೆ ಹುಡುಗಿಟ್ಟುಕೊಂಡಿದ್ದ ಸಿಟ್ಟನ್ನು ಕಕ್ಕಿ, ಬೈದು ಕಳಿಸಿದರು. ವಾಸು, ಅಮ್ಮನಿಗೆ ಬುದ್ಧಿ ಹೇಳಲು ಬಂದಾಗ, ಅವರು ಸಾಕ್ಷಾತ್ ದುರ್ಗೆಯೇ ಆಗಿ ಮಗನಿಗೆ, "ನಿನಗೆ ಹೇಗೆ ಬೇಕೋ ಹಾಗೆ ಕಟ್ಟಿಸಿದರೆ ಸರಿ, ಇಲ್ಲವಾದರೆ ಮನೆ ಕಟ್ಟಿಸಲೇ ಬೇಡ, ಈ ಮನೆಯೇ ಸಾಕು" ಎಂದಾಗ ವಾಸು ಹೆದರಿ ತೆಪ್ಪಗಾಗಿದ್ದ. ಆಗ ಜಾನಕಮ್ಮ "ನನಗೆ ಗೊತ್ತಿರುವವರು ಒಬ್ಬರು ಇದ್ದಾರೆ, ಅವರು ಹೇಳಿದಂತೆ ಮಾಡು, ಎಲ್ಲವೂ ಸರಿಯಾಗುತ್ತದೆ" ಎಂದು ಸಮಾಧಾನವನ್ನೂ ಹೇಳಿದ್ದರು. 

ಒಂದು ದಿನ ಜಾನಕಮ್ಮನವರು ಯಾರೋ ಒಬ್ಬರನ್ನು ಕರೆಸಿದ್ದರು. ಜಾನಕಮ್ಮನವರೆ ಮುಂದೆ ನಿಂತು ಹೊಸ ಮನೆಯ ವಿವರಗಳನ್ನು ನೀಡಿ ಅವರ ಸಲಹೆ ಕೇಳಿದರು. ಅವರು ಬಹಳ ನಿಧಾನಸ್ಥರು, ನಿಧಾನವಾಗಿ, ನಾಟಕದವರಂತೆ ಮಾತನಾಡುತ್ತಿದ್ದರು. ಅವರು ಸಾವಕಾಶವಾಗಿ ಹೇಳಿದ್ದುದನ್ನೆಲ್ಲಾ ಕೇಳಿ ಸಮಾಧಾನವಾಗಿ, "ನೀವು ಮಾಡುತ್ತಿರುವುದೆಲ್ಲ ಸರಿಯಾಗಿದೆ, ಮನೆಯ ಗೇಟು, ಬಾಗಿಲನ್ನು ಸ್ವಲ್ಪ ನಾನು ಹೇಳುವಂತೆ ಬದಲಾಯಿಸಿದರೆ ಸಾಕು" ಎಂದರು. ಇದು ವಾಸುವಿನ ಮನಸ್ಸಿಗೆ ಒಂದು ರೀತಿಯ ಸಮಾಧಾನ ತಂದಿತು. ಆಗ ಅವರು " ನೀವು ಇನ್ನು ಯಾರನ್ನೂ ಕೇಳದೆ ಬೇಗ ಮುಗಿಸಿ, ಇನ್ನೊಂದೆರಡು  ತಿಂಗಳಿನಲ್ಲಿ ಗೃಹಪ್ರವೇಶ ಮಾಡಿಸಿದರೆ ನಿಮಗೆ ತುಂಬಾ ಒಳ್ಳೆಯದಾಗುತ್ತೆ, ನಾನು ಜಾನಕಮ್ಮನವರೊಡನೆ ಸಮಾಲೋಚಿಸಿ ದಿನ ಹೇಳುತ್ತೇನೆ" ಎಂದಾಗ ವಾಸುವಿಗೆ ನಿರಾಳ. ಅವರ ಸಂಭಾವನೆ ಮೊದಲಾದುವನ್ನು ಕೇಳಿದಾಗ, "ಜಾನಕಮ್ಮ ನವರ ಬಳಿ ದುಡ್ಡು ತೆಗೆದುಕೊಳ್ಳುವುದೇ? ಎಂಥ ಮಾತನಾಡುತ್ತೀರಿ" ಎಂದು ಬಾಯಿ ಮುಚ್ಚಿಸಿದ್ದರು. 

ಅಂತೂ ಜಾನಕಮ್ಮನವರು ಗೃಹಪ್ರವೇಶದ ಮುಹೂರ್ತವನ್ನು ಮಗನಿಗೆ ತಿಳಿಸಿದರು. ಈಗ ಮನೆಯ ಕೆಲಸಗಳು ಬೇಗ ಬೇಗ ಚುರುಕಾಗಿ ಸಾಗತೊಡಗಿದವು. ವಾಸುವಿಗೆ ಯಾರನ್ನು ಸಲಹೆ ಕೇಳಲು ಪುರುಸೊತ್ತು ಇರಲಿಲ್ಲ, ಕೇಳಬೇಡ ಎಂದು ಸಲಹೆ ಬಂದುದ್ದರಿಂದ, ಅಮ್ಮನ ಹೆದರಿಕೆಯೂ ಇದ್ದುದರಿಂದ ತೆಪ್ಪಗೆ ಮನೆ ಮುಗಿಸುವುದರಲ್ಲಿ ತೊಡಗಿಸಿಕೊಂಡ. ಮನೆ ಮುಗಿಯಿತು. ಗೃಹಪ್ರವೇಶವೂ ಆಯಿತು. ಎಲ್ಲರಿಗೂ ಖುಷಿಯೋ ಖುಷಿ. ಮನೆಯ ಬಗ್ಗೆ ಯಾರಾದರೂ ತಕರಾರು ಎತ್ತಿದರೆ ಜಾನಕಮ್ಮನ ರೌದ್ರಾವತಾರವನ್ನು ನೋಡಬೇಕಿತ್ತು. ಅವರು, "ತಾವು ಹೇಗೆ ರೌದ್ರಾವತಾರ ತಾಳಿದ್ದೆ" ಎಂದು  ಆ ಹಳೆಯ ವಾಸ್ತು ಪಂಡಿತನನ್ನು ಓಡಿಸಿದ್ದನ್ನು ಎಲ್ಲರಿಗೂ ಹೇಳುತ್ತಿದ್ದರು. ಇಂಡೈರೆಕ್ಟ್ ಆಗಿ ಅದು ಮನೆಯಬಗ್ಗೆ ಕೊಂಕು ತೆಗೆಯುವವರಿಗೆ ತೆಪ್ಪಗಿರುವಂತೆ ಹೇಳುವ ಸೂಚನೆಯೇ ಆಗಿತ್ತು. ಅದು ಎಲ್ಲರಿಗೂ ನಾಟಿತ್ತು. ಮಾತನಾಡಿದರೆ ತಮಗೂ ಅದೇ ಗತಿ ಎಂದು ತೆಪ್ಪಗಿದ್ದರು. ಜಾನಕಮ್ಮನವರಿಗೂ ಅದೇ ಬೇಕಿತ್ತು. ನಮ್ಮ ಮನೆ, ನಮಗೆ ಬೇಕಾದಂತೆ ಕಟ್ಟಿಸುತ್ತೇವೆ, ನಮ್ಮ ಕಷ್ಟ ನಮಗೆ, ಹೀಗೆ ಎಲ್ಲಾ ಆದಮೇಲೆ ಸಲಹೆ ನೀಡಲು ಇವರುಗಳ್ಯಾರು ಎಂಬುದು ಜಾನಕಮ್ಮನ ತರ್ಕವಾಗಿತ್ತು.

ಆ ಮನೆಗೆ ಜಾನಕಮ್ಮನ ದಾಯಾದಿಯೊಬ್ಬರ ಮಗ ನಾರಾಯಣ, ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ, ತುಂಬಾ ಚುರುಕಾಗಿ, ಮನೆಯವರಂತೆಯೇ ಅನೇಕ ಸಹಾಯ ಮಾಡಿಕೊಂಡು ಓಡಾಡುತ್ತಿದ್ದ. ಜಾನಕಮ್ಮ ಅವರೂ ಅವನಿಗೆ ವಿಶೇಷ ಉಪಚಾರ ಮಾಡುತ್ತಿದ್ದರು. ಎಲ್ಲರೂ, "ಇದೇನು ಅಷ್ಟೇನೂ ನಮ್ಮೊಂದಿಗೆ ಆಪ್ತವಾಗಿರದಿದ್ದ, ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ ಇವನಿಗೆ ಇಷ್ಟೊಂದು ಉಪಚಾರ", ಎಂದು ಮಾತನಾಡಿ ಕೊಳ್ಳುತ್ತಿದ್ದರು. ಅವರ ಮನೆಗೆ ಸಲಹೆ ನೀಡಿದ "ಆ ಹೊಸ ಪಂಡಿತ ಎಲ್ಲಿ? ಬಂದೇ ಇಲ್ಲ" ಎಂದು ಎಲ್ಲರೂ ವಿಚಾರಿಸಿದಾಗ, ಜಾನಕಮ್ಮ, "ಅವನೊಬ್ಬ, ಹಾಗೆಯೇ, ಸ್ವಲ್ಪ ಜಂಬ ಮಾಡುತ್ತಾನೆ, ಗೋಗರೆದರೂ ಬರಲೇ ಇಲ್ಲ" ಎಂದು ನಾರಾಯಣನನ್ನು ನೋಡಿ ಕಣ್ಣು ಮಿಟುಕಿಸಿದ್ದರು. ಆದರೆ ಅದು ಬೇರೆ ಯಾರಿಗೂ ಕಂಡಿರಲಿಲ್ಲ. 

- ಬಿ ಎಸ್ ಜಗದೀಶ ಚಂದ್ರ -



No comments:

Post a Comment