Sunday, November 29, 2020

ಗಟ್ಟಿ ನಿರ್ಧಾರ - ಕಥೆ

 ಗಟ್ಟಿ ನಿರ್ಧಾರ 

ಉಂಡಾಡಿ ಗುಂಡನಾಗಿ ದುಶ್ಚಟಗಳಿಗೆ ದಾಸನಾಗಿದ್ದ ಗಂಡನೊಂದಿಗೆ ರಾಧಾ ಮನಸಲ್ಲದ ಮನಸಿನಿಂದ ಬಾಳುತ್ತಿದ್ದಳು. ನಾಕು ವರ್ಷದ ಕಂದನಿಗಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದಳು. ಮದುವೆಯು ಅವಳಿಗೆ ನಿಜವಾಗಿಯೂ ಒಂದು ಬಂಧನವಾಗಿತ್ತು. ವಿಛೇಧನ ಇತ್ಯಾದಿಗಳು ಅವಳ ನಿಘಂಟಿನಲ್ಲಿರಲಿಲ್ಲ. ಒಳಗೇ ಕೊರಗುತ್ತ ಸಹಿಸಿಕೊಂಡಿರುವುದೊಂದೇ ದಾರಿ ಎಂದುಕೊಂಡು ಜೀವನ ಸವೆಸುತ್ತಿದ್ದಳು. 

ಹಳ್ಳಿಯಲ್ಲಿರುವ ಪುಟ್ಟ ಸ್ವಂತ ಮನೆಯೊಂದೇ ಅವಳಿಗೆ ಆಸರೆಯಾಗಿತ್ತು. ಹೊಲಗದ್ದೆಗಳಲ್ಲಿ ದುಡಿದು ಸಂಪಾದಿಸಿದ ಹಣವನ್ನು ಗಂಡನಿಗೆ ತಿಳಿಯದ ಜಾಗದಲ್ಲಿ ಮುಚ್ಚಿಟ್ಟುಕೊಂಡು ಮನೆಯನ್ನು ನಡೆಸಿಕೊಂಡು ಹೋಗುತ್ತಿದ್ದಳು. ಇದರ ಮಧ್ಯೆ ಗಂಡ ಮಾಡಿದ ಸಾಲವನ್ನು ಹಿಂದುರುಗಿಸಿ ಎಂದು ಸಾಲಕೊಟ್ಟವರ ವರಾತ. ಗಂಡ ಅವರಿಂದ ಬೈಸಿಕೊಂಡು, ಹೊಡೆಸಿಕೊಂಡು ಎಮ್ಮೆ ಚರ್ಮದವನಾಗಿ ಬಿಟ್ಟಿದ್ದ. ಗಂಡನಿದ್ದುದಷ್ಟು ದಿನ ರಾಧಾಳಿಗೆ ಅವರ ಕಾಟವಿರಲಿಲ್ಲ. ಈ ಗಂಡನಿಗೆ ಏನಾದರೂ ಹೆಚ್ಚು ಕಮ್ಮಿಯಾದರೆ ತನ್ನ ಗತಿಯೇನು ಎಂದು ಒಮ್ಮೊಮ್ಮೆ ಯೋಚಿಸಿ ಬೆದರುತ್ತಿದ್ದಳು. 

ಅಂತೂ ಆ ದಿನ ಬಂದೇ ಬಿಟ್ಟಿತು. ಪೊಲೀಸರು ಬಂದು ಸಾರಿಗೆ ಬಸ್ಸೊಂದು ಅವನಿಗೆ ಡಿಕ್ಕಿ ಹೊಡೆದುದರಿಂದ ಅವನು ಸತ್ತಿದ್ದಾನೆ, ನೀವು ಬಂದು ದೇಹವನ್ನು ಗುರುತಿಸಿ ಎಂದರು. ಅವಳಿಗೆ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಅವಳಿಗೆ ಗಂಡ ನ ಮರಣಕ್ಕಿಂತ ಮುಂದಿನ ಘಟನೆಗಳನ್ನು ನೆನೆದು ಅಳು ಬಂದಿತ್ತು. ದೇಹವನ್ನು ನೋಡಿ ಅವಳಿಗೆ ಅಳು  ಬರಲಿಲ್ಲ, ಬದಲಾಗಿ ಸಿಟ್ಟು ಬಂದಿತ್ತು. ಈ ಸಾಮ್ರಾಜ್ಯಕ್ಕೆ ತಾನು ಇಷ್ಟು ದಿನ ಇಂತಹ ಜೀವನ ನಡೆಸಬೇಕಿತ್ತೇ, ಬದುಕಿದ್ದಾಗಲೂ ಕಷ್ಟ, ಸತ್ತಾಗಲೂ ತೊಂದರೆ ಕೊಡುತ್ತಿರುವ ಇವನನ್ನು ಗಂಡನನ್ನಾಗಿ ಪಡೆದ ತಾನು ಇಂತಹ ನತದೃಷ್ಟೆ ಎಂದುಕೊಂಡು ಮರುಗಿದಳು. 

ಮನೆಗೆ ಬರುತ್ತಿದ್ದಹಾಗೆಯೇ, ಸಾಲ ಹಿಂಪಡೆಯಲು ರಾಜಣ್ಣ, ಜಯಣ್ಣ, ಕೆಂಪಯ್ಯ ಎಲ್ಲರೂ ನಿಂತಿದ್ದರು. ಅವರೆಲ್ಲರೂ ಅವಳಿಗೆ ರಾವಣ, ಕುಂಭಕರ್ಣ, ಹಿರಣ್ಯಕಶಿಪು ಗಳಂತೆ ಕಂಡರು.  ರಾಧಾಳನ್ನು ಕುರಿತು, ನೋಡಮ್ಮ, ಈ ಮನೆಯನ್ನು ಮಾರಿಬಿಡು, ಹಾಗೆಯೆ ಹೆಣವನ್ನು ಪಡೆಯಬೇಡ, ಅದನ್ನು ಮುಂದಿಟ್ಟುಕೊಂಡು ಪರಿಹಾರ ಕೊಡುವವರೆಗೂ ಅಂತ್ಯಕ್ರಿಯೆ ಮಾಡುವುದಿಲ್ಲ ಎಂದು ಹೇಳು, ನಾವೆಲ್ಲರೂ ನಿನಗೆ ಆಸರೆ ಯಾಗುತ್ತೇವೆ. ಆ ಹಣವೂ ನಿನಗೆ ಉಪಯೋಗಕ್ಕೆ ಬರುತ್ತದೆ, ನಮ್ಮ ಸಾಲ ತೀರಿಸಲೂ ಅನುಕೂಲವಾಗುತ್ತದೆ ಎಂದರು. ಸಾಲ ಕೇಳಲು ಇವರಿಗೇನು ಹೊತ್ತು, ಗೊತ್ತು ಇಲ್ಲವೇ ಎಂದು ಮನದಲ್ಲೇ ಗೊಣಗಿಕೊಂಡಳು. 

ಮರುದಿನ ಸಾಲ ಹಿಂತಿರುಗಿಸಲು ಎಲ್ಲ ಲೆಕ್ಕ ಪತ್ರಗಳಿಗೂ ಸಹಿ ಹಾಕಿದಳು. ಜಯಣ್ಣನಿಗೆ ಒಂದು ಪತ್ರ ಬರೆದುಕೊಟ್ಟು, ನನಗೆ ಹೆಣ ಇವೆಲ್ಲವನ್ನೂ ಇಟ್ಟುಕೊಂಡು ಗಲಾಟೆ ಮಾಡಲು ಸಾಧ್ಯವಿಲ್ಲ, ನೀವೇ ನನ್ನ ಪರವಾಗಿ ಮಾಡಿ, ಆ ಹಣವನ್ನು ನೀವೇ ಇಟ್ಟುಕೊಂಡು ಉಳಿದ್ದನ್ನು ನನಗೆ ಕೊಡಿ ಎಂದಳು. ಜಯಣ್ಣ ಇವೆಲ್ಲಾ ಏಕಮ್ಮಾ, ಬೇಕೆಂದರೆ ನನ್ನ ಮನೆಗೆ ಬಂದು ಇದ್ದುಬಿಡು ಎಂದ. ಬರುತ್ತಿದ್ದ ಸಿಟ್ಟನ್ನು ನುಂಗಿಕೊಂಡು, ಪರವಾಗಿಲ್ಲ, ನೀವೆಲ್ಲ ಇದ್ದಿರಲ್ಲ, ಅದೇ ನನಗೊಂದು ಸಮಾಧಾನ ಎಂದು ಹೇಳಿದಳು. 

ಅಂದೇ ಅವಳು ಒಂದು ಹಳೆಯ ಬುಟ್ಟಿಯಲ್ಲಿ ತನ್ನ ಪದವಿ ಪತ್ರ, ಒಂದಷ್ಟು ಬಟ್ಟೆ, ಮಗುವಿನ ಸಾಮಾನುಗಳು ಇವೆಲ್ಲವನ್ನೂ ಜೋಡಿಸಿಕೊಂಡು ಸೋದರಿಗಿಂತಾ ಪ್ರಿಯಳಾಗಿದ್ದ ಬಾಲ್ಯದ ಗೆಳತಿ ಅಕ್ಷತಾಳಿಗೆ ಫೋನ್ ಮಾಡಲು ಹೊರಟಳು. ಪಬ್ಲಿಕ್ ಬೂತಿನಲ್ಲಿ ಅವಳೊಂದಿಗೆ ಮಾತನಾಡಿ ಇಲ್ಲಿ ಇನ್ನು ನನಗೇನೂ ಕೆಲಸವಿಲ್ಲ, ನನ್ನವರಾಗಿಯೂ ಯಾರೂ ಇಲ್ಲ, ನನ್ನದೆಂದೂ ಇದ್ದರೂ ಅವು ಈಗ ನನ್ನವಾಗುತ್ತಿಲ್ಲ, ನಾನು ನಿನ್ನ ಬಳಿ ಬರುತ್ತೇನೆ, ನನಗೊಂದು ಕೆಲಸ ಕೊಡಿಸು, ಮನೆಗೆಲಸವಾದರೂ ಸರಿಯೇ, ನನ್ನ ಕಾಲಮೇಲೆ ನಿಂತು ನಾನು ನನ್ನ ಮಗುವನ್ನು ಸಾಕುತ್ತೇನೆ ಎಂದು ಹೇಳಿದಳು. 

ಅಂತೂ ಯಾರಿಗೂ ಹೇಳದೆ, ತನ್ನ ಬುಟ್ಟಿಯನ್ನು, ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡು ಊರು ಬಿಡುವ ಗಟ್ಟಿ ನಿರ್ಧಾರ ತೆಗೆದುಕೊಂಡಳು. ಇಂತಹ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ತನಗೆ ಮೊದಲೇ ಬಂದಿದ್ದರೆ ನಾನು ಈಗ ಎಲ್ಲಿರುತ್ತಿದ್ದನೋ ಎಂದುಕೊಂಡಳು. ಅಂತಹ ದಿನ ಪರಿಸ್ಥಿತಿಯಲ್ಲಿಯೂ ಅವಳ ಮುಖದಲ್ಲಿ ಸಮಾಧಾನವಾಗಿ ಮಂದಹಾಸ ಮೂಡಿತು. 

ಜಗದೀಶ ಚಂದ್ರ 



No comments:

Post a Comment