Sunday, April 26, 2020

ಗುಲಾಬಿ ಹೂ, ನೋಡಿದ್ದು ಸುಳ್ಳಾಗಬಹುದು, ಆತುರದ ತೀರ್ಮಾನ

ಗುಲಾಬಿ ಹೂ  

ಮನೆಯಲ್ಲಿ ಎಲ್ಲರೂ ಹೊರಟ ನಂತರ ಉಸ್ಸಪ್ಪ ಎಂದು ಶಾರದಾ ಸೋಫಾ ಮೇಲೆ ಉರುಳಿದರು. ಅಷ್ಟರಲ್ಲೇ ಶಾರದಾ ಎಂದು ಪಕ್ಕದ ಮನೆಯ ಪಂಕಜ ಕರೆದರೂ. ಶಾರದಾ, ಅಯ್ಯೋ ರಾಮ ಇನ್ನು ಇವರು ಹರಟೆ ಶುರುಮಾಡುತ್ತಾರೆ ಎಂದು ಗೊಣಗುತ್ತಾ ಬಾಗಿಲು ತೆರೆದರು. ಪಂಕಜ ಬಂದವರೇ ಎದುರು ಮನೆಗೆ ಹೊಸದಾಗಿ ಬಂದ ಸೊಸೆ ಕಮಲಾಳ ಮೇಲೆ ದೂರು ಹೇಳಿದರು. ನೋಡ್ರಿ ಪ್ರತಿದಿನ ನಮ್ಮ ಮನೆಯ ಗುಲಾಬಿ ಹೂವನ್ನು ಕಿತ್ತುಕೊಂಡು ಕಾಲೇಜಿಗೆ ಹೋಗುತ್ತಲೇ. ಅದ್ಯಾರಿಗೆ ಕೊಡುತ್ತಾಳೋ, ಈ ಮದುವೆಯಾಗಿರುವ ಹುಡುಗಿ ಎಂದು ವಿಷ ಕಾರಿದರು. ಅಂತೂ ವಿಷವನ್ನು ಕಕ್ಕಿ ಇನ್ನೂ ಏನನ್ನೋ ಹೇಳಲು ಹೊರಟಿದ್ದರು, ಆ ಸಮಯಕ್ಕೆ ಸರಿಯಾಗಿ ಶಾರದಾಳ ಅಣ್ಣ ಬಂದುದರಿಂದ ಅಲ್ಲಿಂದ ಜಾಗ ಖಾಲಿ ಮಾಡಿದರು. 
ಮರುದಿನ ಶಾರದಾ ಕಮಲಾಳನ್ನು ಗಮನಿಸಿದರು. ಅವಳು ಪಂಕಜ ಅವರ ಮನೆಯ ಹೂವನ್ನು ಕಿತ್ತುಕೊಂಡುದನ್ನು ಕಣ್ಣಾರೆ ಕಂಡರು. ಮೂರು ನಾಲ್ಕು ದಿನವೂ ಇದನ್ನು ಗಮನಿಸಿದರು. ಯಾಕೋ ಅವರಿಗೆ ಪಂಕಜ ಹೇಳಿದ್ದು ನಿಜ ಅನ್ನಿಸಲಾರಂಭಿಸಿತು. ಇದು ಕಮಲಾಳ ಪ್ರತಿದಿನದ ದಿನಚರಿ ಎಂದು ಗೊತ್ತಾದಮೇಲೆ ಅವರಿಗೆ ಕಮಲಾಳ ಮೇಲೆ ಅನುಮಾನ, ಸಿಟ್ಟು ಎಲ್ಲವೂ ಬಂತು. ಕಮಲಾ ಒಮ್ಮೆ ಅವರ ಮನೆಗೆ ಬಂದು ಹಬ್ಬದ ಪೂಜೆಗೆ ಕರೆದಾಗ, ಶಾರದಾ ಮೇಲೆ ಉಪಚಾರಕ್ಕೆ ಮಾತನಾಡಿಸಿದರೂ ಅವರ ಧಾಟಿಯಲ್ಲಿ ಕಮಲಾಳ ಮೇಲಿನ ಸಿಟ್ಟು ಇಣುಕುತ್ತಿತ್ತು. ಇದ್ಯಾವುದರ ಪರಿವೆಯೇ ಇಲ್ಲದೆ ಕಮಲಾ ನಗುನಗುತ್ತಲೇ ಮಾತನಾಡುತ್ತಿದ್ದಳು. ಅವಳು ಹೋದಮೇಲೆ ಶಾರದಾ. ಅದೇನು ಹುಡುಗಿಯೋ, ಹೊರಗೆ ಮಾಡುವುದು ಅಂತಹ ಕೆಲಸ, ಮನೆಯಲ್ಲಿ ಪೂಜೆಯಂತೆ ಎಂದು ಗೊಣಗಿದರು. 
ಶಾರದಾ, ಕಮಲಾಳ ಮನೆಗೆ ಪೂಜೆಗೆ ಹೋಗಿದ್ದಾಗ ಅಲ್ಲಿಗೆ ಬಂದಿದ್ದ ಕಮಲಾಳ ಹಿರಿಯ ಸಹೋದ್ಯೋಗಿ ಗೆಳತಿ ವಿಮಲಾ ತಮ್ಮ ಜೊತೆಗೆ ಇನ್ನೊಬ್ಬಾಕೆ ಸಂಗೀತಾ ಅವರನ್ನು ಕರೆದು ತಂದಿದ್ದರು. ಸಂಗೀತಾ, ಕಮಲಳಿಗೆ ಒಂದು ದೊಡ್ಡ ಸಿಹಿ ಪೆಟ್ಟಿಗೆ ನೀಡುತ್ತಾ, ಕಮಲಾ, ನಿಮ್ಮ ಮನಸ್ಸು ಎಷ್ಟು ದೊಡ್ಡದು, ನಿಮ್ಮಿಂದಾಗೆ ನಮ್ಮ ನಿಮ್ಮಿ ಇಂದು ಖುಷಿಯಾಗಿದ್ದಾಳೆ, ಅವಳ ಖಾಯಿಲೆ ಈಗ ಪೂರ್ತಿ ವಾಸಿಯಾಗಿದೆ ಎಂದರು. ಆಗ ಕಮಲಾ, ಅಯ್ಯೋ, ನಾನೇನು ಅಂತ ದೊಡ್ಡ ಕೆಲಸ ಮಾಡಿದೆ ಎಂದಾಗ, ನೀನು ಪ್ರತಿದಿನವೂ ಹೂವನ್ನು ಕೊಟ್ಟು ಅವಳ ಕೈಲಿ ದೇವರಿಗೆ ಹಾಕಿಸುತ್ತಿದ್ದುದು ನಿಮ್ಮಿಯ ಮೇಲೆ ಬಹಳ ಪರಿಣಾಮ ಬೀರಿತು. ಮಾನಸಿಕ ಧೈರ್ಯ ತಂದಿತು. ಒಟ್ಟಿನಲ್ಲಿ ಗಂಡಾಂತರದಿಂದ ಪಾರಾದಳು. ಅವಳು ಇಂದಿಗೂ ಅದು ಸಾಧ್ಯವಾದದ್ದು ನಿಮ್ಮಿಂದಲೇ ಅಂತ ಹೇಳುತ್ತಾಳೆ, ಎಂದರು. ಅದಕ್ಕೆ ಕಮಲಾ, ಹಾಗಾದರೆ ಅದಕ್ಕೆ ಸಲ್ಲಬೇಕಾದ ಕ್ರೆಡಿಟ್ ನಮ್ಮ ಎದುರು ಮನೆಯ ಪಂಕಜಾ ಅವರಿಗೆ ಸಲ್ಲಬೇಕು. ನಾನು ಅವರ ಮನೆಯ ಗಿಡದಲ್ಲಿ ಸೊಂಪಾಗಿ ಬಿಡುತ್ತಿದ್ದ ಗುಲಾಬಿ ಗಿಡದಲ್ಲಿ ಒಂದು ಹೂವನ್ನು ದಿನವೂ ಬಿಡಿಸಿಕೊಳ್ಳಲೇ ಎಂದು ಕೇಳಿದ್ದಾಗ ಆಕೆ ಧಾರಾಳವಾಗಿ ತೊಗೊಳ್ಳಿ ಎಂದು ಅನುಮತಿ ನೀಡಿದ್ದರು. ಆ ಗಿಡವೂ ಇಲ್ಲಿಯ ತನಕ ನಿತ್ಯ ಹೂವು ಕೊಟ್ಟಿತು ಎಂದಾಗ, ಶಾರದಾ ಅವರ ಎದೆ ಝಲ್ಲೆಂದಿತು. ಪಂಕಜಾ ಏಕೆ ತಮಗೆ ಅರ್ಧ ವಿಷಯ ತಿಳಿಸಿ ಇಂಥ ಹುಳಿಹಿಂಡುವ ಕೆಲಸ ಮಾಡಿದರು ಎಂದು ಮನದಲ್ಲೇ ಅಂದುಕೊಂಡರು. ನಾನೂ ಹಿಂದು ಮುಂದು ಯೋಚಿಸದೆ ಹೀಗೆ ನಂಬಿ ಬಿಟ್ಟೆನಲ್ಲಾ ಎಂದು ಪೇಚಾಡಿಕೊಂಡರು. ಕೂಡಲೇ ಹೃತ್ಪೂರ್ವಕವಾಗಿ ಕಮಲಳಿಗೆ ಅಭಿನಂದನೆ ಸಲ್ಲಿಸಿದರು. ಕಮಲಾ ಅವರಿಗೂ ಸ್ವಲ್ಪ ಸಿಹಿ ಕೊಟ್ಟು, ಇದನ್ನು ಮುಖ್ಯವಾಗಿ ಪಂಕಜಾ ಅವರಿಗೆ ಕೊಡಬೇಕು ಎಂದು ಹೇಳಿದಾಗ ಶಾರದಾ ಅವರ ಹೃದಯ ತುಂಬಿ ಬಂತು. ಇಂತಹ ಸ್ವಭಾವದಿಂದಲೇ ಇರಬೇಕು, ಪಂಕಜ ಅವರು ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ, ನಿಂತ ನೀರಿನಂತೆ ರಾಡಿಯಾಗಿದ್ದಾರೆ ಎಂದು ಅನ್ನಿಸಿತು. 


ನೋಡಿದ್ದು ಸುಳ್ಳಾಗಬಹುದು 
ಚಿನ್ನೂರಿನ ರಾಧಾ, ಕೇಶವ ದಂಪತಿಗೆ ಮಾಧವ, ಹಾಗು ಮೋಹನ ಇಬ್ಬರು ಮಕ್ಕಳು. ಒಳ್ಳೆ ಸುಸಂಸ್ಕೃತ ಮನೆತನ. ಮಗ ಚೆನ್ನಾಗಿ ಓದಿದ. ಆದರೆ ಒಂದು ದಿನ ಇದ್ದಕ್ಕಿದ್ದಂತೆ ನಾಪತ್ತೆಯಾದ. ಎಲ್ಲಿ ಹುಡುಕಿದರೂ ಸಿಗಲಿಲ್ಲ. ಪೊಲೀಸ್ ಗೆ ದೂರೂ ಹೋಯಿತು. ಏನೂ ಆಗಲಿಲ್ಲ. ಹೀಗೆ ಒಂದು ವರ್ಷ ಕಳೆಯಿತು. ಆಗ ಇದ್ದಕ್ಕಿದ್ದಂತೆ ಒಂದು ದಿನ ಮನೆಗೆ ಒಂದು ಪತ್ರ ಬಂತು. ಅದು ಮಾಧವನದ್ದು. ಅಪ್ಪಅಮ್ಮಂದಿರ ಕ್ಷಮೆ ಕೇಳಿ ತಾನು ಈಗ ಹಿಮಾಲಯದ ಬಳಿ ಒಂದು ಆಶ್ರಮದಲ್ಲಿ ಸನ್ಯಾಸಿಯಾಗಿದ್ದೇನೆ ಎಂದು ಬರೆದಿದ್ದ. ತನ್ನ ಬಗ್ಗೆ ಯೋಚನೆ ಮಾಡಬೇಡಿ, ನಾನು ಚೆನ್ನಾಗಿ ಇದ್ದೇನೆ, ಮೋಹನ ಈಗ ಚೆನ್ನಾಗಿ ಓದುತ್ತಿರಬಹುದು, ಅವನಾದರೂ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಿ, ನನ್ನನ್ನು ಕ್ಷಮಿಸಿ ಎಂದು ಬರೆದಿದ್ದ. ಸಾಧ್ಯವಾದರೆ ಒಮ್ಮೆ ಬಂದು ನೋಡುತ್ತೇನೆ, ಆದರೆ ನಿರೀಕ್ಷೆ ಇಟ್ಟುಕೊಳ್ಳಬೇಡಿ ಎಂದು ಬರೆದಿದ್ದ. 
ಈ ಘಟನೆ ಆಗಿ ಹಲವಾರು ವರ್ಷಗಳು ಕಳೆದಿವೆ. ರಾಧಾ, ಕೇಶವ ದಂಪತಿಗಳು ಮೋಹನನೊಂದಿಗೆ ಸುಖವಾಗಿ ಬದುಕಿದ್ದಾರೆ. ಮೋಹನನಿಗೂ ಮದುವೆಯಾಗಿ ಈಗ ಎರಡು ಮಕ್ಕಳಾಗಿವೆ. ಇವರೆಲ್ಲರ ಒಡನಾಟದಿಂದ ರಾಧಾ, ಕೇಶವ ದಂಪತಿಗೆ ಈಗ ಮಾಧವನ ವಿಷಯ ಮರೆತೇ ಹೋದಂತಾಗಿದೆ. 
ಈಗ ಊರಿನಲ್ಲಿ ಇದ್ದಕ್ಕಿದ್ದಹಾಗೆ ಯಾವುದೊ ಮಗು ನಾಪತ್ತೆಯಾಯಿತು. ಇದು ಮಕ್ಕಳ ಕಳ್ಳರ ಕಾಟ. ಅವರು ಹೀಗೆ ಮಕ್ಕಳನ್ನು ಮೋಡಿಮಾಡಿ ಕದ್ದುಕೊಂಡು ಹೋಗುತ್ತಾರೆ ಎಂದು ಊರೆಲ್ಲಾ ಗುಲ್ಲಾಯಿತು. ರಾಧಾ ಮಾಧವ ಅವರಿಗೆ ಈಗ ಮಾಧವನ ನೆನಪಾಗಿ, ಮೋಹನನಿಗೆ ಮಕ್ಕಳ ಬಗ್ಗೆ ಹುಷಾರಾಗಿರು, ಎಲ್ಲಿಯೂ ಒಬ್ಬೊಬ್ಬರನ್ನೇ ಕಳಿಸಬೇಡ ಎಂದು ಹಿತವಚನ ನೀಡಿದರು. ಇದಾದ ಕೆಲವು ದಿನಗಳ ನಂತರ ಒಂದು ದಿನ ಮೋಹನ ಬಂದು ಅಕ್ಕ ಪಕ್ಕದ ಮನೆಯವರಿಗೆ ತಾನು ಇಂದು ಬರುತ್ತಿದ್ದಾಗ ಪಕ್ಕದ ಊರಿನಲ್ಲಿ ಯಾರೋ ಒಬ್ಬ ಕಾವಿಧಾರಿ ಒಂದಿಬ್ಬರು ಮಕ್ಕಳನ್ನು ಮಾತನಾಡಿಸುತ್ತಾ ಏನೇನನ್ನೋ ಕೇಳುತ್ತಿದ್ದ, ನನಗೇಕೋ ಅನುಮಾನ ಬಂತು ಎಂದ. ಆಗ ಅವರೆಲ್ಲರೂ ಹೌದು, ಈಗ ಯಾರನ್ನೂ ನಂಬಲು ಆಗುವುದಿಲ್ಲ, ಯಾವ ಹುತ್ತದಲ್ಲಿ ಯಾವ ಹಾವೊ ಎಂದು ಮಾತನಾಡಿಕೊಂಡರು. ಇದು ಹೀಗೆ ಊರಿಗೂ ಹಬ್ಬಿತು. 
ಇದಾದ ಒಂದೆರೆಡು ದಿನದಲ್ಲಿ ಊರಿನಲ್ಲಿ ಮತ್ತೆ ಸುದ್ದಿ. ಯಾರೋ ಮಕ್ಕಳನ್ನು ಕದ್ದುಕೊಂಡು ಹೋಗುವ ಕಳ್ಳ ಸ್ವಾಮಿಯನ್ನು ಊರಿನ ಜನರೇ ಹೊಡೆದು ಸಾಯಿಸಿದ್ದಾರೆ ಎಂದು. ಆಗ ಮೋಹನ, ರಾಧಾ, ಮಾಧವ ಸಧ್ಯ ಆ ಕಳ್ಳ ಸಿಕ್ಕಿದನಲ್ಲ ಎಂದು ಸಂತೋಷ ಪಟ್ಟರು. ಅಷ್ಟರಲ್ಲೇ ಯಾರೋ ಪೋಲಿಸಿನವರು ಬಂದು ಕೇಶವ, ರಾಧಾ ಅನ್ನುವರ ಮನೆ ಇದೆಯೇ ಎಂದು ಕೇಳಿದ. ಬೆಚ್ಚಿದ ಕೇಶವ ಅವರು, ಹೌದು ಇದೇನೇ, ನಾನೆ ಕೇಶವ ಎಂದರು. ಈಗಲೇ ನಮ್ಮೊಂದಿಗೆ ಬನ್ನಿ, ಯಾರೋ ಕೊಲೆಯಾದವರ ಬಳಿ ನಿಮ್ಮ ಹೆಸರಿನ ಒಂದು ಕವರ್ ಇದೆ ಎಂದರು. ಕೇಶವ ಅವರ ಎಧೆ ಝಲ್ ಎಂದಿತು. ಅವರು ಮೋಹನನೊಂದಿಗೆ ಹೊರಟರು. ಅವರು ತಲುಪಿದ್ದು ಕೊಲೆಯಾದ ಸ್ವಾಮೀಜಿಯ ಕಾರಿನ ಬಳಿಗೆ. ಕೇಶವ ಅವರ ಎದೆ ಢವ ಢವ ಎನ್ನುತ್ತಿತ್ತು. ದೇವರೇ ಇದೆಂಥ ಗಂಡಾಂತರ ತಂದೆಯಪ್ಪಾ ಎಂದುಕೊಂಡರು. ಹತ್ತಿರ ಹೋದಾಗ ಹೆಣದ ಮುಖ ಮುಚ್ಚಿದ್ದರು. ಆ ಕವರನ್ನು ನೋಡಿದಾಗ ಅದರ ಮೇಲೆ ರಾಧಾ, ಕೇಶವ ಅವರಿಗೆ ನಮಸ್ಕಾರಪೂರ್ವಕವಾಗಿ ಎಂದು ಬರೆದಿತ್ತು. ಅದರೊಂದಿಗೆ ಒಂದು ಪ್ಯಾಕೆಟ್ನಲ್ಲಿ ಒಂದು ರೇಷ್ಮೆ ಸೀರೆ, ಪಂಚೆ, ಶಲ್ಯ ಇತ್ತು. ಇದೇನು ಎಂದು ಆಶರ್ಯವಾಗಿ ಹೆಣದ ಮುಖಕ್ಕೆ ಮುಚ್ಚಿದ ಬಟ್ಟೆಯನ್ನು ಸರಿಸಿದಾಗ ಮಾಧವಾ ಎನ್ನುತ್ತಾ ಕೇಶವ ಅವರು ಮೂರ್ಛೆ ಹೋದರು. 




ಆತುರದ ತೀರ್ಮಾನ 
ಗುಲಾಬಿಯನ್ನು ಬಿಡಿಸಿಕೊಂಡ ಆಕೆಯನ್ನು ಕದಿಯುತ್ತಾಳೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದು. ನಿಜವೇನೆಂದರೆ ಆಕೆ ಅದನ್ನು ರೋಗಿ ಮಗುವೊಂದರ ಕೈಲಿ ದೇವರ ಪೂಜೆಗೆ ತೆಗೆದುಕೊಂಡು ಹೋಗುತ್ತಿರುತ್ತಾಳೆ. 
ಕಳೆದು ಕೊಂಡ ಮಗ ಸನ್ಯಾಸಿ ಆಗಿರುತ್ತಾನೆ. ಅವನು ಬಹಳ ವರ್ಷಗಳ ನಂತರ ತಂದೆ ತಾಯಿಯನ್ನು ನೋಡಲು ಬಂದಾಗ, ಮಗುವೊಂದನ್ನು ಮಾತನಾಡಿಸುತ್ತಿದ್ದುದನ್ನು ಕಂಡು ಮಕ್ಕಳ ಕಳ್ಳ ಎಂದು ಆತುರದ ತೀರ್ಮಾನ ತೆಗೆದುಕೊಂಡು ಜನ ಹೊಡೆದು ಕೊಂದೇಬಿಡುತ್ತಾರೆ. 
ಮೇಲಿನ ಎರಡು ಘಟನೆಯನ್ನು ಕೇಳಿದರಲ್ಲ, ಇದರಿಂದ ನಿಮಗೇನು ತಿಳಿದು ಬಂದು ಎಂದು ಶ್ರೀಗುರೂಜಿ ಅವರು ನೆರೆದಿದ್ದ ಸಭಿಕರನ್ನು ಕೇಳಿದರು. ಎಲ್ಲರೂ ತಮಗೆ ತೋಚಿದಂತೆ ಹೇಲಾರಂಭಿಸಿದರು. ಕಡೆಗೆ ಶ್ರೀಗುರೂಜಿ ಅವರೇ ಹೀಗೆ ಅರ್ಥೈಸಿದರು. 
ಜೀವನದಲ್ಲಿ  ವಿಧ ವಿಧವಾದ ಸಂಧರ್ಭಗಳು, ಘಟನೆಗಳು ಬರುತ್ತವೆ. ನಮ್ಮ ಗ್ರಹಿಕೆಗೆ ತಕ್ಕಂತೆ ಅವನ್ನು ನಾವು ವ್ಯಾಖ್ಯಾನಿಸುತ್ತೇವೆ. ಇದಕ್ಕೆ ನಮ್ಮ ಆಕಾಂಕ್ಷೆ ಹಾಗೂ ನಮ್ಮ ಹಿಂದಿನ ಅನುಭವವೇ ಪ್ರೇರಕವಾಗಿರುತ್ತದೆ. ಹೀಗಾಗಿ ಘಟನೆ ಒಂದೇ ಆದರೂ ವ್ಯಾಖ್ಯಾನಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಯಾವುದೇ ಘಟನೆಗೆ ಆತುರದಿಂದ ತೀರ್ಮಾನಕ್ಕೆ ಬರ ಬಾರದು  ನಮ್ಮ ಅನುಭವ ಹಾಗೂ  ಇತರರ ವ್ಯಾಖ್ಯಾನದ ತುಲನೆ ಇವನ್ನು ಸಮಾಧಾನದಿಂದ. ಸಾವಕಾಶವಾಗಿ ನೋಡಿ ತೀರ್ಮಾನಕ್ಕೆ ಬರಬೇಕು. ಇದರ ಕೊರತೆಯಿಂದಲೇ ಅನೇಕರು ಸರಿಯಾದ ತೀರ್ಮಾನಕ್ಕೆ ಬರದೇ ಸುಖದಿಂದ ವಂಚಿತರಾಗುತ್ತಿದ್ದಾರೆ. 
ಇಂದು ನಡೆಯುವ ಹಲವಾರು ಘಟನೆಗಳಿಗೆ ಸಮಯಸಾಧಕರು ಜನರ ಮುಗ್ಧತೆಯನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ.  ಅಚಾತುರ್ಯದ ಘಟನೆ ನಡೆಯುತ್ತದೆ ಆದರೆ ಅದಕ್ಕೆ ನಾವೇ ಕಾರಣರೇ, ಇತರರು ಕಾರಣರೇ ಎಂದು ಯೋಚಿಸಿ ತಪ್ಪು ನಮ್ಮದೇ ಆದರೆ ಒಪ್ಪಿಕೊಂಡು ಬಿಡುವುದು ಒಳ್ಳೆಯದು. ತಪ್ಪು ಮಾಡಿದವರಿಗೆ ಜಾತಿ, ಧರ್ಮ ಎಂಬ ಹಣೆಪಟ್ಟಿ ನೀಡಬಾರದು. ತಪ್ಪು ಮಾಡಿದವನ ಧರ್ಮದ ಅಥವಾ ಜಾತಿಯವರು, ಅದನ್ನು ಎಲ್ಲರೆದುರು ಖಂಡಿಸಬೇಕು. ಮುಚ್ಚಿಟ್ಟುಕೊಳ್ಳುವುದಾಗಲಿ, ಸುಮ್ಮನಿದ್ದುಬಿಡುವುದಾಗಲಿ ಮಾಡಬಾರದು. ಇದು ಸಮಾಜಕ್ಕೂ ಒಳ್ಳೆಯದು. 
ಹಾಗೆಯೆ ತಿಳಿದು ತಿಳಿದೂ ತಪ್ಪು ಮಾಡಬಾರದು. ಉದಾಹರಣೆಗೆ ಲಂಚ, ಅಸೆ ಆಮಿಷಗಳಿಗೆ ಬಲಿಯಾಗುವುದು ಇತ್ಯಾದಿ.  ಇಷ್ಟನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಿರಾಳರಾಗಿರಬಹುದು, ಸಮಾಜವೂ ಸ್ವಾಸ್ಥ್ಯದಿಂದಿರುತ್ತದೆ. ಘಟನೆಗಳಿಗೆ ನ್ಯಾಯಯುತವಾದ ತೀರ್ಮಾನ ಮುಖ್ಯ, ಇದಕ್ಕೆ ಅನುಭವ, ಉತ್ತಮ ಮಾರ್ಗದರ್ಶನ ಮುಖ್ಯ ಎಂದು ಮಾತು ಮುಗಿಸಿದರು. - ಜಗದೀಶ ಚಂದ್ರ 


No comments:

Post a Comment