Monday, November 30, 2020

ಪಶ್ಚಾತ್ತಾಪ - ಘಟನೆ

ಪಶ್ಚಾತ್ತಾಪ 

ನಾನು ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಅದರಲ್ಲಿ ಅನೇಕ ಮಕ್ಕಳು, ಅವರ ತಂದೆ ತಾಯಿಗಳು ಭಾಗವಹಿಸಿದ್ದರು. ಅಲ್ಲಿ ಒಂದು ಭಾಗಕ್ಕೆ ಹೋಗಲು ಎಲ್ಲರೂ ಸರತಿಯ ಸಾಲಲ್ಲಿ ನಿಂತಿದ್ದರು. ಜನ ನುಗ್ಗದಂತೆ ಎರಡು ಉಕ್ಕಿನ ಕಂಬಗಳಿಗೆ ಒಂದು ಪಟ್ಟಿಯನ್ನು ಕಟ್ಟಿದ್ದರು. ನಾನು ಆ ಸಾಲಿನಲ್ಲಿ ನಿಂತಿದ್ದೆ. ಆಗ ಆ ಕಾರ್ಯಕ್ರಮದ ನಿರ್ವಾಹಕರು ನನಗೆ ಬಹಳ ಪರಿಚಯಸ್ತರು. ಅವರು ನನ್ನನ್ನು ಕಂಡು ಇಲ್ಲೇಕೆ ನಿಂತಿದ್ದೀರಿ, ಇಲ್ಲಿ ಬನ್ನಿ ನೀವು ವಿಶೇಷ ಆಹ್ವಾನಿತರು ಎಂದು ಕರೆದರು. ನಾನು ಅವರ ಬಳಿ ಹೋಗುವ ಆತುರದಲ್ಲಿ ಅಲ್ಲಿ ಕಟ್ಟಿದ್ದ ಪಟ್ಟಿಯನ್ನು ಎತ್ತಿ ಕೆಳಗೆ ತೂರಿ ಹೋದೆ. ಆಗ ಬಿಗಿಯಾಗಿ ಕಟ್ಟಿದ್ದ ಆ ಪಟ್ಟಿ ಕಿತ್ತುಕೊಂಡು ಒಂದು ಮಗುವಿನ ಮೊಣಕೈಗೆ ಪಟ್ ಎಂದು ಹೊಡೆದು ಬಿಟ್ಟಿತು. ಹೀಗಾಗುವುದೆಂದು ನನಗೆ ಕಲ್ಪನೆಯೂ ಇರಲಿಲ್ಲ. ಮಗುವಿಗೆ ಹೆಚ್ಚೇನು ಪೆಟ್ಟಾಗಿರಲಿಲ್ಲ. ಅದಕ್ಕೆ ಸಮಾಧಾನ ಮಾಡಲು ಹೋದೆ. ಆದರೆ ಆ ಮಗುವಿನ ತಂದೆ ತಾಯಿಗಳು ನನ್ನನ್ನು ಹಿಗ್ಗಾ ಮುಗ್ಗ ಬೈದರು. ತಪ್ಪು ನನ್ನದಾಗಿತ್ತು. ಆದರೆ ನಾನು ಬೇಕೆಂದು ಮಾಡಿರಲಿಲ್ಲ. ಹೀಗಾಗಿ ನಾನು ಆ ಮಗುವಿಗೆ ಕ್ಷಮೆ ಕೇಳಿ ಅಲ್ಲಿಂದ ಬಂದು ಬಿಟ್ಟೆ. 

ನಂತರ ಅದೇ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆಗಾಗಿ ನನ್ನನ್ನು ಕರೆದರು. ವಿಶೇಷವೆಂದರೆ ನನ್ನಿಂದ ಪೆಟ್ಟಾಗಿದ್ದ ಮಗುವೂ ನನ್ನ ಬಳಿ ಬಹುಮಾನ ಪಡೆದುಕೊಂಡಿತು. ಅದಕ್ಕೆ ಬಹುಮಾನ ಕೊಡುವಾಗ ನನ್ನ ಬಳಿ ಇದ್ದ ಒಂದು ಹೊಚ್ಚ ಹೊಸ ಪೆನ್ ಒಂದನ್ನು ಆ ಮಗುವಿಗೆ ಪಶ್ಚಾತ್ತಾಪದ ಕಾಣಿಕೆ ಎಂದು ಕೊಟ್ಟೆ. 

ಆದರೂ ನನಗೆ ಆ ಮಗುವಿಗೆ ಏಟು ಬಿತ್ತೋ ಏನೋ ಎಂದು ಆ ಘಟನೆ ನೆನಪಿಗೆ ಬರುತ್ತಲೇ ಇತ್ತು. ಆಗ ಆ ಮಗುವಿನ ಅಪ್ಪ ಅಮ್ಮ ಬಂದು ಕ್ಷಮೆ ಕೇಳಿದರು. ನಾನು, ನೀವು ಕ್ಷಮೆ ಕೇಳುವ ಅಗತ್ಯ ಇಲ್ಲ, ತಪ್ಪು ಮಾಡಿದ್ದು ನಾನು, ತಿಳಿಯದೇ ಆದರೂ ಅದು ತಪ್ಪೇ, ನನ್ನನ್ನು ಕ್ಷಮಿಸಿ ಎಂದೆ. ಅಂತೂ ಒಂದು ಸಮಾಧಾನವಾಯಿತು. ಆದರೂ ಆ ಘಟನೆಯು ನನಗೆ ಆಗಾಗ್ಗೆ ನೆನಪಿಗೆ ಬರುತ್ತಲೇ ಇರುತ್ತದೆ. ಬಹುಷಃ ಆ ಮಗುವಿನ ಅಪ್ಪ ಅಮ್ಮಂದಿರಿಗೂ ನನ್ನನ್ನು ಬೈದುದಕ್ಕೆ ಪಶ್ಚಾತ್ತಾಪ ವಾಗಿರಬೇಕು, ಅದಕ್ಕೆ ನನ್ನ ಬಳಿ ಬಂದು ಕ್ಷಮೆ ಕೇಳಿದರು ಎಂದು ಕೊಂಡು ನಾನು ಸಮಾಧಾನ ಮಾಡಿಕೊಂಡೆ. 

ಜಗದೀಶ ಚಂದ್ರ 

No comments:

Post a Comment