Tuesday, December 1, 2020

ಕಥೆ - ಬೇಲಿ ಮೇಯ್ದ ಹೊಲ

ಬೇಲಿ ಮೇಯ್ದ ಹೊಲ

ವಾಣಿ ನೋವಿನಿಂದ ನರಳುತ್ತಿದ್ದಳು. ಜೊತೆಗೆ ಮಾತನಾಡಲೂ ಆಗುತ್ತಿಲ್ಲ. ಗಂಟಲಿಗೆ ಚುಚ್ಚಿದ ಮರದ ರೆಂಬೆ ಅವಳ ವಾಣಿಯನ್ನೇ ನಾಶ ಮಾಡಿಬಿಟ್ಟಿತ್ತು. ಅವಳಿಗೆ ಮುಖವಾಣಿ ಎಂದು ಎಲ್ಲರೂ ಕರೆಯುತ್ತಿದ್ದರು. ಅವಳ ಮಾತು ಎಷ್ಟು ಮೊನಚು ಎಂದರೆ ಮಾತಿನಲ್ಲೇ ಅವಳು ಕೊಂದುಬಿಡುತ್ತಿದ್ದಳು. ಇಂದು ಮೂಲಕ್ಕೆ ಕೊಡಲಿ ಪೆಟ್ಟು ಬಿದ್ದು ಅವಳಿಗೆ ಮುಂದೇನೋ ಎಂದು ಯೋಚನೆಯಾಗಿತ್ತು. ಇದುವರೆಗೂ ಅವಳ ಹಿಂದೆ ಸುತ್ತುತ್ತಿದ್ದ ಅವಳ ಗುಂಪಿನ ಸದಸ್ಯರಾರೂ ಇವಳನ್ನು ವಿಚಾರಿಸಿರಲಿಲ್ಲ. ಅವಳ ಗುರುಗಳ ಮಗ, ವಿಶ್ವ ಅರ್ಥಾತ್ ಅವಳ ಪ್ರಿಯತಮ ಪತ್ತೆಯೇ ಇರಲಿಲ್ಲ. 

ವಾಣಿ ತನ್ನ ಮಾತಿನ ಮೊನಚಿನಿಂದ ಗಮನ ಸೆಳೆದು ಗುರುಗಳ ಗಮನಕ್ಕೆ ಬಂದಿದ್ದಳು. ಅವರು ಅವಳನ್ನು ಕರೆದುಕೊಂಡು ಹೊಗಳಿ ಉಬ್ಬಿಸಿ ಅವಳಿಗೆ ಕ್ರಾಂತಿಕಾರಿ ತತ್ವಗಳನ್ನು ತುಂಬಿ ಬಿಟ್ಟಿದ್ದರು. ವಾಣಿ  ನಂಬಿದ್ದಳೋ ಇಲ್ಲವೋ, ಆದರೆ ಎಲ್ಲರ ಹೊಗಳಿಕೆಯಿಂದ ಉಬ್ಬಿ ಹೋಗಿ ಅವರು ಹೇಳಿದಂತೆ ಕುಣಿಯುತ್ತ ಅವರ ಮುಖವಾಣಿಯಾಗಿ ಬಿಟ್ಟಿದ್ದಳು. ಅವರು ಯಾರನ್ನಾದರೂ ಕೊಲೆ ಮಾಡು ಎಂದರು ಅದನ್ನೂ ಮಾಡುವಷ್ಟು ಪ್ರಭಾವಿತಳಾಗಿದ್ದಳು. ಇದಕ್ಕೆ ಸರಿಯಾಗಿ ಗುರುಗಳ ಮಗ ವಿಶ್ವ ನ ಮೋಹಕ್ಕೂ ಬಲಿಯಾಗಿದ್ದಳು. 

ಇಂದು ಪೋಲೀಸಿನವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಾಡಿನಲ್ಲಿ ರೆಂಬೆಯೊಂದರಿಂದ ಚುಚ್ಚಿಸಿಕೊಂಡು ಅಪಘಾತಕ್ಕೀಡಾಗಿದ್ದಳು. ಮಾತು ನಿಂತುಹೋಗಿದೆ ಎಂದು ತಿಳಿದಮೇಲೆ ಅವಳಿಗೆ ಮೊದಲಿನ ಉಪಚಾರ ಎಲ್ಲವೂ ನಿಂತುಹೋದವು. ವಿಶ್ವನಂತೂ ಇವಳನ್ನು ಅಪರಿಚಿತಳಂತೆ ನೋಡುತ್ತಿದ್ದ. ವಾಣಿಗೆ ಈಗ ಜ್ಞಾನೋದಯವಾಗತೊಡಗಿತು. ಇವರೆಲ್ಲರಿಗೂ ತಾನು ಬೇಕಿರಲಿಲ್ಲ, ತನ್ನ ಮೊನಚಾದ ವಾಣಿ ಬೇಕಿತ್ತು, ಇವರನ್ನು ನಾನು ನಂಬಿ ಮೋಸಹೋದೆನಲ್ಲ ಎಂದು ಮರುಗತೊಡಗಿದಳು. ಗುರುಗಳ ಬಳಿ ಹೋಗಿ ಮಾತನಾಡಬೇಕು ಎಂದುಕೊಂಡಳು. ಆದರೆ ಮಾತೇ ಇಲ್ಲ, ಬರೆದು ಹೇಳಬೇಕು ಎಂದು ತಾನು ಹೇಳಬೇಕೆಂದು ಕೊಂಡಿದ್ದುದನ್ನೆಲ್ಲ ಬರೆದು ಗೆಳತಿಯ ಸಹಾಯದಿಂದ ಗುರುಗಳ ಬಳಿಗೆ ಬಂದಳು. 

ಗುರುಗಳು ನಿರ್ಲಿಪ್ತರಾಗಿ ಅಲ್ಲಮ್ಮ, ಮಾತೇ ಆಡಲು ಆಗದ, ಕುಂಟಿಕೊಂಡು ಓಡಾಡುವ ನಿನ್ನಂತಹ ಹೆಂಗಸನ್ನು ಈ ಕಾಡಿನಲ್ಲಿ ಹೇಗಮ್ಮಾ ಕಾಪಾಡುವುದು? ಯಾರಾದರೂ ಪರಿಚಿತರ ಮನೆಗೆ ಹೋಗಿಬಿಡು ಎಂದರು. ಮಾತನಾಡದಿದ್ದರೇನಂತೆ, ಇತರರಂತೆ ನಾನೂ ಸಹ ಪಿಸ್ತೂಲನ್ನು ಉಪಯೋಗಿಸುತ್ತೇನೆ ಎಂದು ಬರೆದು ಕೇಳಿದಳು ವಾಣಿ. ಅದೇ ವೇಳೆಗೆ ಅಲ್ಲಿಗೆ ಬಂದ ವಿಶ್ವ ಅವಳ ಪ್ರತಿಕ್ರಿಯೆಗೆ ನಕ್ಕ. ವಾಣಿಗೆ ಮೈಯೆಲ್ಲಾ ಉರಿದು ಹೋಯಿತು. ನಿಮ್ಮನ್ನು ನಂಬಿ ಮನೆ, ಮಠ ಎಲ್ಲವನ್ನೂ ಬಿಟ್ಟು ಬಂದಿದ್ದೆ.  ಇದೊಳ್ಳೆ ಬೇಲಿಯೇ ಹೊಲ ಮೆಯ್ದ ಕತೆಯಂತೆ ಆಯಿತು. ನಾನು ಬರಿಯ ಮಾತಲ್ಲ, ಮಾಡಿಯೇ ತೋರಿಸುತ್ತೇನೆ ಎಂದಳು. ತಂದೆ ಮಗ ಇಬ್ಬರೂ ನಕ್ಕು ಅವಳನ್ನು ಹೀಯಾಳಿಸಿದರು. 

ಮರುಕ್ಷಣದಲ್ಲೇ ಮೂರು ಗುಂಡಿನ  ಶಬ್ದ ಕೇಳಿಸಿತು. ಎಲ್ಲರೂ ಓಡೋಡಿ ಬಂದರು. 

ಮರುದಿನ ಪತ್ರಿಕೆಯಲ್ಲಿ ಕ್ರಾಂತಿಕಾರಿ ಗುರು, ಅವರ ಪುತ್ರ ಮತ್ತು ಅವರ ಮುಖವಾಣಿಯಾಗಿದ್ದ ಹೆಣ್ಣೊಬ್ಬಳ ಆತ್ಮಹತ್ಯೆ ಎಂದು ಪ್ರಕಟವಾಗಿತ್ತು. ಹೊಲವನ್ನೇ ಮೇಯ್ದ ಬೇಲಿಗೆ ತಕ್ಕ ಶಿಕ್ಷೆಯಾಗಿತ್ತು. ಹೊಲವೂ ಹಾಳಾಗಿ ಹೋಗಿತ್ತು. 

ಜಗದೀಶ ಚಂದ್ರ 

No comments:

Post a Comment