Monday, June 7, 2021

ಸಹನಾಮಯಿ

ಸೀಮಾ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಡಿ ನಂತರ ಡಾಕ್ಟರೇಟ್ ಪದವಿಯನ್ನು ಗಳಿಸಿದ್ದಾಳೆ. ತನ್ನ ಸ್ವಂತ ಪರಿಶ್ರಮದಿಂದ ಮೇಲೇರಿ ಈಗ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾಳೆ. ಅವಳು ಕಾಲೇಜಿನಲ್ಲಿ ಈಗಾಗಲೇ ಮುಖ್ಯಸ್ಥೆ ಆಗಬೇಕಿತ್ತು, ಆದರೆ ಅವಳಿಗಿಂತಲೂ ಅನುಭವದಲ್ಲಿ ಕಿರಿಯರಾಗಿದ್ದ, ಆದರೆ ವಯಸ್ಸಿನಲ್ಲಿ ಹಿರಿಯರಾಗಿದ್ದ "ಕವಿಪ" ಅವರನ್ನು ಕಾಲೇಜು ಮುಖ್ಯಸ್ಥರನ್ನಾಗಿ ಮಾಡಿತು. ಸೀಮಾ ಏನೂ ಮಾತನಾಡುವಂತಿರಲಿಲ್ಲ, ಏಕೆಂದರೆ ಅದು ಪ್ರೈವೇಟ್ ಕಾಲೇಜು. ಆಡಳಿತ ಮಂಡಳಿ ತಮಗೆ ಇಷ್ಟಬಂದಂತೆ ಅನುಷ್ಠಾನ ಗೊಳಿಸಬಹುದು. ಕವಿಪ, ಹಿರಿಯರು, ಅವರಿಗೆ ಇನ್ನು ಕೆಲವೇ ವರ್ಷಗಳಲ್ಲಿ ನಿವೃತ್ತಿ ಆಗುತ್ತದೆ, ಸೀಮಾ ಚಿಕ್ಕವಳು ಮುಂದೆ ಅವಳಿಗೆ ಅವಕಾಶವಿದೆ ಎಂಬ ಕಾರಣ ಹೇಳಿ, ಕವಿಪ ಅವರನ್ನೆ ಮುಖ್ಯಸ್ಥರನ್ನಾಗಿ ಮಾಡಿದ್ದರು. ಅದು ಒಂದು ರೀತಿಯಲ್ಲಿ ಸರಿಯೇ ಎಂದು ಸರಳ ವ್ಯಕ್ತಿಯಾದ ಸೀಮಾ, ಇದಕ್ಕೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ.
ಆದರೆ ತನ್ನ ವ್ಯಕ್ತಿತ್ವದಿಂದ, ತಾಳ್ಮೆ, ಸಂಯಮದ ಸ್ವಭಾವದಿಂದ ಸಹೋದ್ಯೋಗಿ ಗಳೊಂದಿಗೆ, ವಿದ್ಯಾರ್ಥಿಗಳೊಂದಿಗೆ ಒಳ್ಳೆಯ ಹೆಸರನ್ನು ಗಳಿಸಿ ಗೌರವಾನ್ವಿತಳಾಗಿದ್ದಳು. ತಾವಾಗಿಯೇ ಮುಖ್ಯಸ್ಥ ಹುದ್ದೆ ಕೊಟ್ಟರೆ ಅಲಂಕರಿಸುತ್ತೇನೆ, ಇಲ್ಲವಾದರೆ ನಾನು ಪಾಠ ಮಾಡಿಕೊಂಡಿರುತ್ತೇನೆ ಎಂಬುದು ಅವಳ ವಾದ.
ಕವಿಪ ಹಿರಿಯರಾದರೂ, ಮುಂಗೋಪ, ತನಗೇ ಎಲ್ಲಾ ಗೊತ್ತು ಎಂಬ ವ್ಯಕ್ತಿತ್ವದವರು. ಸೀಮಾ ಎಲ್ಲಿ ತಮ್ಮನ್ನು ಕೆಳಗಿಳಿಸಿಬಿಡುತ್ತಾಳೋ ಎಂಬ ಭಯದಲ್ಲೇ ಕೆಲಸ ಮಾಡುತ್ತಿದ್ದರು. ಸಮಯ ಸಿಕ್ಕಾಗಲೆಲ್ಲ ಸೀಮಾಳನ್ನು ಹೀಯಾಳಿಸುವುದು, ಕಡೆಗಣಿಸುವುದು ಇತ್ಯಾದಿಗಳನ್ನು ಮಾಡುತ್ತಿದ್ದರು. ಅವಳಿಗೆ ಮುಂದೆ ಮುಖ್ಯಸ್ಥೆ ಆಗದಂತೆ ಇಬ್ಬರನ್ನು ಪ್ರಾದ್ಯಾಪಕರನ್ನಾಗಿ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಅವರಿಬ್ಬರಂತೂ ಕವಿಪ ಅವರ ಚಮಚಗಳು. ಹಿರಿಯರಾದರೂ ಮುಖ್ಯಸ್ಥರನ್ನು, ಆಡಳಿತ ಮಂಡಳಿಯ ಕೆಲವು ಸದಸ್ಯರನ್ನು ಹೊಗಳುತ್ತಾ ಇರುವುದೇ ಅವರ ಪ್ರವೃತ್ತಿ. ಅವರಿಗೆ ಅನುಭವವಿದ್ದುದು ಕೇವಲ ವಯಸ್ಸಿನಿಂದ. ವಿಭಾಗದ ವಿಷಯದಲ್ಲಿ ಸಾಧಿಸಿದ್ದುದು ಅಷ್ಟಕ್ಕಷ್ಟೇ. ಅವರನ್ನು ಕರಟಕ, ದಮನಕ ಎಂದು ಎಲ್ಲರೂ ಕರೆಯುತ್ತಿದ್ದರು.
ಈಗ ಕವಿಪ ಅವರ ನಿವೃತ್ತಿ ಆಯಿತು. ಸೀಮಾಳನ್ನು ಈಗ ಮುಖ್ಯಸ್ಥೆಯನ್ನಾಗಿ ಮಾಡಲಾಯಿತು. ಅವಳಿಗೆ ಸ್ಪರ್ಧಿಗಳಾಗಿದ್ದ ಕರಟಕ, ದಮನಕ ಅವರುಗಳಿಗೆ ಈ ಕಾಲೇಜಿನಲ್ಲಿ ಅನುಭವ ಕಡಿಮೆ, ಜೊತೆಗೆ ಸೀಮಾ ಈ ಹಿಂದೆಯೇ ಮುಖ್ಯಸ್ಥೆ ಆಗಬೇಕಿತ್ತು, ಈಗಲಾದರೂ ಅವಳಿಗೆ ಅವಕಾಶ ಕೊಡಬಹುದು, ಎಂಬುದು ಆಡಳಿತ ಮಂಡಳಿಯ ಕೆಲವರ ವಾದವಾಗಿತ್ತು. ಕಡೆಗೆ ಆಡಳಿತ ಮಂಡಳಿ ಈ ವಾದಕ್ಕೆ ಒಪ್ಪಿ. ಸೀಮಾಳನ್ನೇ ಮುಖ್ಯಸ್ಥೆಯನ್ನಾಗಿ ನೇಮಿಸಿತು. ಎಲ್ಲರೂ, "ಅಯ್ಯೋ ಈ ಮೆದು ಸ್ವಭಾವದ ಹೆಂಗಸು ಆ ಕರಟಕ ದಮನಕರ ಕಾಟವನ್ನು ಹೇಗೆ ನಿಭಾಯಿಸುತ್ತಾಳೋ" ಎಂದು ಹೇಳುತ್ತಿದ್ದರು. ಸೀಮಾ ಮೆದು ಸ್ವಭಾವದವಳಾಗಿದ್ದರೂ ಸಂದರ್ಭ ಬಂದಾಗ ಬಹಳ ಅಚಲ ನಿರ್ಧಾರ ತೆಗೆದುಕೊಳ್ಳುತ್ತಿದ್ದಳು. ಉಳಿದ ಸಹೋದ್ಯೋಗಿಗಳಿಗೆ ಇದು ಸಮ್ಮತವಾದರೂ, ಕರಟಕ, ದಮನಕ ಅವರುಗಳಿಗೆ ನುಂಗಲಾರದ ತುತ್ತು.
ಸೌಮ್ಯ ಸ್ವಭಾವದ ಸೀಮಾ, ಒಮ್ಮೆ ಆಡಳಿತ ಮಂಡಳಿಗೆ ಎಲ್ಲಾ ವಿಷಯಗಳನ್ನು ವಿವರವಾಗಿ ತಿಳಿಸಿದ್ದಳು. ತಾನು ಸೌಮ್ಯ ಸ್ವಭಾವದವಳಾದರೂ, ಸಂದರ್ಭ ಬಂದರೆ ಗಟ್ಟಿ ನಿರ್ಧಾರದಿಂದ ನಿಭಾಯಿಸಬಲ್ಲೆ, ಆದರೆ ಇದಕ್ಕೆ ಕೆಲವರು, ಮುಖ್ಯವಾಗಿ ಕರಟಕ, ದಮನಕ ಅವರುಗಳು ತೊಡರುಗಾಲು ಹಾಕಿದರೆ ನೀವು ನನಗೆ ಸಪೋರ್ಟ್ ಕೊಡಬೇಕು. ಇಲ್ಲವಾದಲ್ಲಿ ನಾನು ಕೆಳಗಿಳಿಯುತ್ತೇನೆ, ಅವರಿಬ್ಬರಲ್ಲೇ ಯಾರನ್ನಾದರೂ ಮುಖ್ಯಸ್ಥರನ್ನಾಗಿ ಮಾಡಿ ಎಂದು ಖಡಾ ಖಂಡಿತವಾಗಿ ಹೇಳಿಬಿಟ್ಟಿದ್ದಳು. ಆಡಳಿತ ಮಂಡಳಿಯವರಿಗೂ ಈ ಕರಟಕ, ದಮನಕ ಅವರ ಸ್ವಭಾವ ಗೊತ್ತಿತ್ತು. ಅವರ ಮುಖ್ಯ ಕ್ವಾಲಿಫಿಕೇಷನ್ ಎಂದರೆ ಹೊಗಳು ಭಟರ ಕೆಲಸ ಎಂದೂ ಗೊತ್ತಿತ್ತು. ಹೀಗಾಗಿ ಕರಟಕ, ದಮನಕ ಅವರುಗಳಿಗೆ ಹೆಚ್ಚು ಮಹತ್ವ ನೀಡುತ್ತಿರಲಿಲ್ಲ. ಈ ಹಿನ್ನೆಲೆ ಕರಟಕ, ದಮನಕ ಅವರುಗಳಿಗೆ ಗೊತ್ತಿರಲಿಲ್ಲ. ಸಂದರ್ಭ ಸಿಕ್ಕಾಗಲೆಲ್ಲಾ ಸೀಮಾಳ ಮೇಲೆ ದೂರು ನೀಡುವುದು, ಚಾಡಿ ಹೇಳುವುದು, ಆಡಳಿತ ಮಂಡಳಿಯವರನ್ನು ಹೊಗಳುವುದು, ವಿದ್ಯಾರ್ಥಿಗಳನ್ನು ಎತ್ತಿ ಕಟ್ಟುವುದು, ಇವುಗಳನ್ನೇ ಮಾಡುತ್ತಿದ್ದರು.
ಯಾವುದೊ ಒಂದು ಸಂದರ್ಭದಲ್ಲಿ ಕರಟಕ ಅವರ ಮೇಲೆ ವಿದ್ಯಾರ್ಥಿಗಳ ದೂರು ಬಂತು. ಪಾಠ ಸರಿಯಾಗಿ ಮಾಡುವುದಿಲ್ಲ, ವಿದ್ಯಾರ್ಥಿಗಳೊಂದಿಗೆ ಸರಿಯಾಗಿ ನಡೆದುಕೊಳ್ಳುವುದಿಲ್ಲ ಎಂದಾಗಿತ್ತು. ಕರಟಕ ಅವರು "ಇದನ್ನು ಸೀಮಾ ಅವರು ಮಾಡಿಸುತ್ತಿದ್ದಾರೆ" ಎಂದು ದೂರಲು ಆರಂಭಿಸಿದರು. ಸೀಮಾ ಈಗ ಸುಮ್ಮನಿರಲಾಗಲಿಲ್ಲ. "ನಿಮ್ಮ ಮೇಲೆ ಗೂಬೆ ಕೂಡಿಸಿ ನನಗೆ ಆಗಬೇಕಾದ್ದು ಏನೂ ಇಲ್ಲ, ಇದನ್ನು ಆಡಳಿತ ಮಂಡಳಿಯವರೇ ಪರಿಶೀಲಿಸಿ ನಿರ್ಧಾರ ತೆಗೆದು ಕೊಳ್ಳಲಿ" ಎಂದು ಹೇಳಿಬಿಟ್ಟರು. ಆಡಳಿತ ಮಂಡಳಿಯವರು ಇದನ್ನು ಪರಿಶೀಲಿಸಿದಾಗ, ಕರಟಕ ಅವರ ಮೇಲೆ ಹಲವಾರು ದೂರುಗಳು ಕೇಳಿ ಬಂದವು, ಎಷ್ಟೋ ಗೊತ್ತಿಲ್ಲದ ವಿಷಯಗಳು ಹೊರಬಂದವು. ಇದರೊಂದಿಗೆ ದಮನಕ ಅವರ ಮೇಲೂ ಅನೇಕ ದೂರುಗಳು ವಿದ್ಯಾರ್ಥಿಗಳಿಂದ, ಇತರ ಸಹೋದ್ಯೋಗಿಗಳಿಂದ ಬಂದವು. ಸೀಮಾ ಅವರ ಬಗ್ಗೆ ಯಾವುದೇ ನಕಾರಾತ್ಮಕ ದೂರುಗಳು ಬರದೇ, ಬಂದಿದ್ದೆಲ್ಲ ಸಕಾರಾತ್ಮಕವಾಗಿದ್ದವು. ಒಳಗೇ ಹುದುಗಿದ್ದ ಜ್ವಾಲೆ ಈಗ ಭುಗಿಲೇಳಲು ಸಿದ್ಧವಾಗಿತ್ತು. ಇದನ್ನು ಅವಲೋಕಿಸಿದ ಆಡಳಿತ ಮಂಡಳಿ ಈ ದೂರನ್ನೇ ನೆಪ ಮಾಡಿಕೊಂಡು ಕರಟಕ ಅವರನ್ನು ಕೆಲಸದಿಂದ ವಜಾ ಮಾಡಲು ನಿರ್ಧರಿಸಿತು. "ಸೀಮಾ ಅವರಿಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ" ಎಂದು ಕರಟಕ ಅವರಿಗೆ ಹೇಳಿ, "ನೀವಾಗಿಯೇ ಕೆಲಸ ಬಿಟ್ಟು ಹೋದರೆ ಸರಿ, ಇಲ್ಲವಾದರೆ ದೂರನ್ನು ನಾವು ಸ್ವೀಕರಿಸಿ, ಅದು ಸಾಬೀತಾದರೆ ಅದೇ ನೆಪದಿಂದ ವಜಾ ಮಾಡ ಬೇಕಾಗುತ್ತದೆ" ಎಂದು ಕರಟಕ ಅವರಿಗೆ ಮುನ್ಸೂಚನೆ ನೀಡಿದರು. ಒಳಗಿನ ನಿಜ ತಿಳಿದಿದ್ದ ಕರಟಕ ಅವರು ತಾವೇ ರಾಜೀನಾಮೆ ಸಲ್ಲಿಸಿ ಕೆಲಸ ಬಿಟ್ಟು ಹೋದರು. ಈಗ ಆಡಳಿತ ಮಂಡಳಿ ದಮನಕ ಅವರಿಗೆ ಎಚ್ಚರಿಕೆ ನೀಡಿ, "ನೀವು ಹೊಂದಿಕೊಂಡು ಹೋದರೆ ಸರಿ, ಇಲ್ಲವಾದರೆ ನಿಮ್ಮ ಮೇಲೂ ಆಕ್ಷನ್ ತೆಗೆದುಕೊಳ್ಳಬೇಕಾಗುತ್ತದೆ" ಎಂದರು. ಹಲ್ಲು ಕಿತ್ತ ಹಾವಾಗಿದ್ದ ದಮನಕ ಈಗ ತೆಪ್ಪಗೆ ಸುಮ್ಮನಾದರು. ಅವರಿಗೆ ಕರಟಕ ಅವರ ಸಹಾಯ ಹಸ್ತವೂ ಇರಲಿಲ್ಲ.
ಸೀಮಾ ಈಗ ವಿಭಾಗವನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ವಿಭಾಗವೂ ಒಳ್ಳೆ ಹೆಸರು ಮಾಡಿ ಅನೇಕ ಮೆಚ್ಚುಗೆಯ ಪುಕ್ಕಗಳನ್ನು ಕಿರೀಟಕ್ಕೇರಿಸಿಕೊಂಡಿದೆ. ದಮನಕ ಅವರು ಈಗ ಗುಳ್ಳೆ ನರಿಯ ಬುದ್ಧಿಯಿಂದ ಹೊರಬಂದಿದ್ದಾರೆ. ಸೀಮಾ ಅವರ ನಂತರ ತಾವೇ ಮುಖ್ಯಸ್ಥರಾಗುವ ಕನಸಿನಿಂದ, ಸೀಮಾ ಅವರಿಗೆ ಪೂರ್ಣ ಸಹಕಾರ ನೀಡುತ್ತಾ ತಮ್ಮನ್ನು ತಾವು ತಿದ್ದಿಕೊಂಡಿದ್ದಾರೆ.
ಒಟ್ಟಿನಲ್ಲಿ ಸೀಮಾ ಅವರು ಕೆಲಸ ಮಾಡುವವರಿಗೆ ಒಬ್ಬ ಆದರ್ಶ ಮಹಿಳೆಯಾಗಿ ಕಾಣಿಸುತ್ತಿದ್ದಾರೆ. ತಮ್ಮ ಸೌಮ್ಯ ಸ್ವಭಾವದಿಂದಲೇ ಜನಮನವನ್ನು ಗೆದ್ದು ದಿಟ್ಟ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ವಿದ್ಯಾರ್ಥಿಗಳಿಗಂತೂ, ಬಹಳ ಒಳ್ಳೆಯ, ತಾಳ್ಮೆಯಿಂದ ತಮ್ಮ ಮಾತುಗಳನ್ನು ಆಲಿಸುವ ಮುಖ್ಯಸ್ಥೆ ಎಂದು ಹೆಮ್ಮೆ. ಸಹೋದ್ಯೋಗಿಗಳೂ ಸೀಮಾ ಅವರ ಸರಳತೆ, ಸೌಮ್ಯತೆ, ಸಂಯಮ, ಮೃದು ಮಾತು ಇವೆಲ್ಲವನ್ನೂ ಮೆಚ್ಚುತ್ತಾರೆ. ಅವರು ತಮಗೆ ನೀಡುವ ಪ್ರೋತ್ಸಾಹವನ್ನು ನೆನೆಯುತ್ತಾರೆ. ಮುಖ್ಯಸ್ಥರು ಎಂದರೆ ಈ ರೀತಿ ಇರಬೇಕು ಎಂದು ತಮ್ಮ ಮನದಾಳದ ಮೆಚ್ಚುಗೆಗಳನ್ನು ಸೂಚಿಸುತ್ತಾರೆ. ಅವರಿಗೆ ಸಹನಾಮಯಿ ಎಂದು ಬಿರುದನ್ನೂ ನೀಡಿದ್ದಾರೆ.
- ಜಗದೀಶ ಚಂದ್ರ ಬಿ ಎಸ್ -

No comments:

Post a Comment