Tuesday, May 31, 2016

ಮಾದರಿ ಕನ್ನಡ ಶಾಲೆಗಳು - ಬಿ ಎಸ್ ಜಗದೀಶ ಚಂದ್ರ


ಮಾದರಿ ಕನ್ನಡ ಶಾಲೆಗಳು - ಬಿ ಎಸ್ ಜಗದೀಶ ಚಂದ್ರ

ನಗರಪಾಲಿಕೆಯ ಶಾಲೆಗಳಲ್ಲಿ ಕೇಂದ್ರೀಯ ಪಠ್ಯವನ್ನು ಅಳವಡಿಸಬಾರದು,  ಮಕ್ಕಳಿಗೆ ಕನ್ನಡ ಭಾಷೆಯಲ್ಲಿಯೇ ನಾಲ್ಕನೆಯ ತರಗತಿಯವರೆಗೂ ಶಿಕ್ಷಣ ಮೊದಲಾದ ಠರಾವುಗಳನ್ನು ದಿನ ನಿತ್ಯವೂ ಕೇಳುತ್ತಲೇ ಇರುತ್ತೇವೆ. ಇಂತಹ ಒಂದು ಹೋರಾಟ ಇಂದು ಅಗತ್ಯವಾಗಿದೆ ಎನ್ನಿಸುತ್ತೆ. ಇದರಲ್ಲಿ ತಪ್ಪೇನೂ ಇಲ್ಲ ಅನ್ನಿಸುತ್ತದೆ. ಕನ್ನಡ ನಾಡಿನ ರಾಜಧಾನಿಯಲ್ಲಿಯೇ ಕನ್ನಡಕ್ಕಾಗಿರುವ ಗತಿಯನ್ನು ನೆನೆದರೆ ಬೇಸರವಾಗುತ್ತದೆ. ಇನ್ನು ಉಳಿದ ಕಡೆ? 
ನಮಗೆ ಇಂದು ಕನ್ನಡದ ಶಾಲೆಗಳು ಅತಿ ಅಗತ್ಯವಾಗಿದೆ. ಮಕ್ಕಳಿಗೆ ಮಾತೃಭಾಷೆಯಲ್ಲಿನ ಶಿಕ್ಷಣವೂ ಅತ್ಯಗತ್ಯವಾಗಿದೆ. ಹೀಗೆಂದು ಕನ್ನಡಶಾಲೆಗಳು ಇಂದು ಇರುವಂತೆಯೆ ಇರಬೇಕಿಂದಿಲ್ಲ. ಅದನ್ನು ಇಂದಿನ ಸ್ಥಿತಿ, ಗತಿಗಳಿಗನುಗುಣವಾಗಿ ಮಾರ್ಪಡಿಸಬಹುದು. ಉದಹರಣೆಗೆ, ಕನ್ನಡಶಾಲೆಗಳಲ್ಲಿ ಕನ್ನಡದಲ್ಲಿಯೆ ಪಾಠಮಾಡಿದರೂ ಅಲ್ಲಿ ಉತ್ತಮವಾದ ಇಂಗ್ಲಿಷನ್ನೂ ಕಲಿಸಿ, ಅದರಲ್ಲಿ ಸಂಭಾಷಣೆ, ಅರ್ಥ ಮೊದಲಾದುವನ್ನೂ ಕಲಿಸಿದರೆ ಮಕ್ಕಳಿಗೆ ಯಾವುದೇ ರೀತಿಯ ಕೀಳರಿಮೆ ಇರುವುದಿಲ್ಲ. ನಾವುಗಳು ಕನ್ನಡ ಮಾಧ್ಯಮದಲ್ಲಿ ಓದಿ ನಂತರ ಇಂಗ್ಲಿಷ್ ಕಲಿತೆವು ಆದರೆ ಈಗ ಹಾಗೇನೂ ಮಾಡಬೇಕಿಲ್ಲ. ಎರಡೂ ಭಾಷೆಗಳನ್ನು ಒಟ್ಟೊಟ್ಟಿಗೆ ಕಲಿಯ ಬಹುದು. ಇದರಿಂದ ಕನ್ನಡವೂ ಉದ್ಧಾರವಾಗುವುದು, ಇಂಗ್ಲಿಷ್ ಭಾಷೆಯ ಕಲಿಕೆಯೂ ಆಗುವುದು. ಮಕ್ಕಳಿಗೂ ಕನ್ನಡದಲ್ಲಿಯೇ ಕಲಿಯುವುದರಿಂದ ಅರ್ಥಮಾಡಿಕೊಳ್ಳಲು, ಸಂವಹಿಸಲು ಸರಾಗ.
ಇಂತಹ ಶಾಲೆಗಳಿಗೆ ಕನ್ನಡಮಾಧ್ಯಮದಲ್ಲಿ ಓದಿ ಇಂದು ಹೆಸರುಗಳಿಸಿರುವ ಹಿರಿಯರ, ಶ್ರೀಮಂತರ ಮಾರ್ಗದರ್ಶನವನ್ನೂ ಪಡೆಯಬಹುದು. ಅಂತಹವರಿಂದ ಆಗಾಗ್ಗೆ ಭಾಷಣಗಳು, ಕಮ್ಮಟಗಳು ಮೊದಲಾದುವನ್ನು ಏರ್ಪಡಿಸಿದರೆ ಶಾಲೆಯ ಘನತೆಯೂ ಹೆಚ್ಚುತ್ತದೆ. ಕನ್ನಡದ ಬಗ್ಗೆ ಒಲವುಳ್ಲ ಶ್ರೀಮಂತರಿಗೂ ಇಂತಹ ಕನ್ನಡ ಶಾಲೆಗಳನ್ನು ತೆರೆಯಲು ಅನುಮತಿಯನನು ಕೊಟ್ಟರೆ ಆಗ ಒಂದು ಆರೋಗ್ಯಪೂರ್ಣ ಸ್ಪರ್ಧೆಏರ್ಪಟ್ಟು ಶಾಲೆಗಳ ಹಿರಿಮೆಯೂ ಹೆಚ್ಚುತ್ತದೆ. ಜನರೂ ಅಂತಹ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಮುಂದೆ ಬರುತ್ತಾರೆ. 
ಈ ಶಾಲೆಗಳಲ್ಲಿ ಕನ್ನಡದ ಪ್ರಾಬಲ್ಯ ಎಲ್ಲರೀತಿಯಲ್ಲೂ ಮೆರೆಯುವಂತಿರಬೇಕು. ಯಾವುದೆ ಅತ್ಯುತ್ತಮವಾದ ಇಂಗ್ಲಿಷ್ ಶಿಕ್ಷಣ ಪಡೆದ ಮಕ್ಕಳಿಗೆ ಸರಿಸಾಟಿಯಾಗಿರುವಂತೆ ಇಂಗ್ಲಿಷನ್ನೂ ಹೇಳಿಕೊಡಬೇಕು. ಇದರಿಂದ ಇಂದು ಅನೇಕ ಜನರಿಗೆ ಇಂಗ್ಲಿಷ್ ಬರುವುದಿಲ್ಲ ಎಂಬ ಕೀಳರಿಮೆ ಹೋಗಲಾಡಿಸಬಹುದು. ಇಂಗ್ಲಿಷ್ ಭಾಷೆಯನ್ನು ಸರಿಯಾಗಿ ಕಲಿತರೆ, ಇಂಗ್ಲಿಷ್‍ನಲ್ಲಿ ಸಂವಹಿಸುವುದನ್ನು ಸರಾಗವಾಗಿ ಕರಗತ ಮಾಡಿಕೊಂಡರೆ ಇಂತಹ ಜನ ಕನ್ನಡವನ್ನೂ ಬೆಳೆಸುತ್ತಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಮನೆಯ ಭಾಷೆಯಲ್ಲಿಯೇ ಕಲಿಕೆಯಾಗುವುದರಿಂದ ಮಕ್ಕಳಿಗೆ ಮನೆಪಾಠದ ಹೊರೆ ಆರ್ಧ ಕಡಿಮೆಯಾಗುತ್ತದೆ. ಮಾತೃಭಾಷೆಯಲ್ಲಿ ಅರ್ಥಮಾಡಿಕೊಂಡು ಅದನ್ನು ನಂತರ ಇಂಗ್ಲಿಷ್‍ಗೆ ಪರಿವರ್ತಿಸುವ ದುಪ್ಪಟ್ಟು ಕೆಲಸ ಕಡಿಮೆಯಾಗುತ್ತದೆ. ಹೆಚ್ಚು ಓದಿಲ್ಲದ ಅದರಲ್ಲೂ ಇಂಗ್ಲಿಷ್ ಬಾರದ ತಂದೆತಾಯಿಗಳಿಗಂತೂ ಇದೊಂದು ವರದಾನ. ಮಕ್ಕಳಿಗೆ ಹೇಳಿಕೊಡುವ ನೆಪದಲ್ಲಿ ಅವರೂ ಓದು ಕಲಿತಂತಾಗುತ್ತದೆ ಅಥವಾ ಅವರೂ ಹೊಸ ವಿಷಯಗಳನ್ನು ತಿಳಿದುಕೊಂಡಂತಾಗುತ್ತದೆ. ಮಕ್ಕಳಿಗೆ ಓರಲ್ ಅಥವಾ ಮೌಖಿಕ ಪರಿಕ್ಷೆಯು ನೀರುಕುಡಿದಷ್ಟು ಸುಲಭವಾಗುತ್ತದೆ. ಮಾತುಕತೆಗಳು ಆಡುಭಾಷೆ ಕನ್ನಡದಲ್ಲಿಯೆ ನಡೆಯುವುದರಿಂದ ಕನ್ನಡಭಾಷೆಯ ವೃದ್ಧಿ ತಾನಾಗಿಯೇ ಆಗುತ್ತದೆ. ಇಂಗ್ಲಿಷ್‍ಭಾಷೆಯನ್ನು ಕಲಿಯುವ ಸಮಯದಲ್ಲಿ ಇಂಗ್ಲಿಷ್‍ನಲ್ಲಿಯೇ ಮಾತನಾಡಬೇಕು ಎಂದು ಕಟ್ಟಪ್ಪಣೆ ಮಾಡಿದರೆ ಆಗ ಯಾರಿಂದಲೂ ತಕರಾರು ಬರುವ ಸಂಭವ ಇರುವುದಿಲ್ಲ. ಅಲ್ಲದೆ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಯನ್ನು ಸರಿಯಾಗಿ ಕಲಿತರೆ ಈಗಿರುವಂತೆ ಅತ್ತ ಕನ್ನಡವೂ ಇಲ್ಲಿ ಇತ್ತ ಇಂಗ್ಲಿಷ್ಷೂ ಇಲ್ಲ ಎನ್ನುವ ಸಮಸ್ಯ ಪರಿಹಾರವಾಗುತ್ತದೆ. ಮಾತನಾಡಿದರೆ ಕನ್ನಡದಲ್ಲಿ ಮಾತನಾಡು ಆಥವಾ ಇಂಗ್ಲಿಷ್‍ನಲ್ಲಿ ಮಾತನಾಡು ಎಂದು ಧೈರ್ಯವಾಗಿ ಮಕ್ಕಳಿಗೆ ತಾಕೀತು ಮಾಡಬಹುದು, ಅವರೂ ಧೈರ್ಯವಾಗಿ ಸರಾಗವಾಗಿ, ಸುಲಲಿತವಾಗಿ ಎರಡೂ ಭಾಷೆಯಲ್ಲಿ ಮಾತನಾಡುತ್ತಾರೆ. ಕನ್ನಡದ ಪದಗಳು, ಅವುಗಳ ಇಂಗ್ಲಿಷ್ ಅರ್ಥ ಹಾಗೆಯೇ ಇಂಗ್ಲಿಷ್ ಪದಗಳು ಅವುಗಳ ಕನ್ನಡದ ಅರ್ಥ ಇವುಗಳಿಗೆ ಪ್ರಾಶಸ್ತ್ಯ ನೀಡಿದರೆ ಕಂಗ್ಲಿಷ್ ಅಥವಾ ಇಂಗ್ಲಡ ಅಥವಾ ಕೈಲಾಸಂ ಕನ್ನಡಕ್ಕೆ ಕಡಿವಾಣ ಹಾಕಬಹುದು. 
ಮಕ್ಕಳಿಗೆ ನಮ್ಮ ಮಾತೃಭಾಷೆಯ ಮೇಲೆ ಅಭಿಮಾನ, ಅದರಲ್ಲಿ ಮಾತನಾಡಿದರೆ ಅವಮಾನ ಎಂಬ ಕೀಳರಿಮೆ ಹೋಗಲಾಡಿಸಬೇಕು. ಕನ್ನಡದಲ್ಲಿಯೆ ಮಾತನಾಡಿ ನಂತರ ಯಾರಾದರೂ ಇಂಗ್ಲಿಷ್ ಬರುವುದಿಲ್ಲ ಎಂಬಂತೆ ಅವಮಾನ ಮಾಡಿದರೆ ಅವರಿಗೆ ಇಂಗ್ಲಿಷ್‍ನಲ್ಲಿಯೇ ದಬಾಯಿಸುವುಂತಹ ಇಂಗ್ಲಿಷ್ ಸಂವಹನ ಕಲೆಯನ್ನು ಕರಗತ ಮಾಡಿಕೊಂಡರೆ ಕೀಳರಿಮೆ ಯಾಕುಂಟಾಗುತ್ತದೆ? ಇದನ್ನು ಹಳ್ಳಿಗಳಲ್ಲಿ, ದಲಿತರಲ್ಲಿ ಅಳವಡಿಸಿದರೆ ಪಟ್ಟಣದವರು, ಹಳ್ಳಿಗರು ಎಂಬ ಭೇದ ಭಾವವೂ ದೂರತೊಲಗುತ್ತದೆ.
ಇಂದು ನಮಗೆ ಬೇಕಾಗಿರುವುದು ಇದೇ ಅಲ್ಲವೆ? ಇಂತಹ ಕನ್ನಡ ಶಾಲೆಗಳಿಗೆ ಕನ್ನಡಾಸಕ್ತರಿಂದ ದತ್ತು ತೆಗೆದುಕೊಳ್ಳುವ ಅನುಕೂಲ ಕಲ್ಪಿಸಬಹುದು. ಕನ್ನಡಾಸಕ್ತ ಶ್ರೀಮಂತರಿಂದ ಹೊಸ ಕನ್ನಡ ಶಾಲೆಗಳನ್ನು ತರೆಯಲು ಅನುವು ಮಾಡಿಕೊಡಬಹುದು. ಇಂತಹ ಶಾಲೆಗಳಲ್ಲಿ ಕನ್ನಡದ ಅಭಿಮಾನ, ಕಲಿಸುವ ಆಸಕ್ತಿ, ಕನ್ನಡದ ಭಾಷೆಯಲ್ಲಿಯ ಪಾಂಡಿತ್ಯ ಮೊದಲಾದುವು ಮುಖ್ಯವೆ ಹೊರತು ಸಂಬಳದ ಆಸೆಯಲ್ಲ. ಶಿಕ್ಷಕರನ್ನು ನೇಮಿಸಿಕೊಳ್ಳುವಾಗ ಇದು ಬಹುಮುಖ್ಯ, ಇಲ್ಲವಾದಲ್ಲಿ ಮೂಲ ತತ್ವಕ್ಕೇ ಸಂಚಕಾರ ಬರುವ ಸಂಭವವುಂಟು.
ಕನ್ನಡ ಭಾಷೆಯಲ್ಲಿ ಆಸಕ್ತಿ ಇರುವ ಅಭಿಮಾನಿಗಳು ತಮ್ಮ ಕ್ಷೇತ್ರದಲ್ಲಿನ ಅನುಭವವನ್ನು ಹಂಚಿಕೊಳ್ಳಲು ಬಯಸಿದರೆ ಅಂತಹವರಿಗೆ ಆಸ್ಪದ ನೀಡಬಹುದು. ಅನೇಕರು ಇಂತಹ ಕೆಲಸಗಳಿಗೆ ತಾವಾಗಿಯೇ ಮುಂದುಬರುವ ಸಂಭವವೇ ಹೆಚ್ಚು. ಅವರಿಗೆ ಹಣಕ್ಕಿಂತಾ ಕನ್ನಡದ ಅಭಿಮಾನ, ಋಣ ಹೆಚ್ಚಿರುತ್ತದೆ. ಇಂತಹವರಿಂದಲೇ ಶಾಲೆಯ ಹಿರಿಮೆ, ಘನತೆ ಹೆಚ್ಚುತ್ತದೆ ಎಂಬುದರಲ್ಲಿ ಅನುಮಾನವೇ ಇರುವುದಿಲ್ಲ. ಇದೇ ರೀತಿಯಲ್ಲಿ ಇಂಗ್ಲಿಷ್ ಭಾಷೆಯ ಕಲಿಕೆಗೂ ಉತ್ತಮ ಸೌಲಭ್ಯಗಳನ್ನು ಕಲ್ಪಿಸಬೇಕು. ಇಂಗ್ಲಿಷ್ ಕಲಿಸುವ ಶಿಕ್ಷಕರನ್ನು ನೇಮಿಸಿಕೊಳ್ಳುವಾಗ ಅತ್ಯುತ್ತಮವಾದವರನ್ನು ನೇಮಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮಕ್ಕಳಿಗೆ ಸರಿಯಾದ ಅಡಿಪಾಯ ಸಿಗದೆ ಇಂಗ್ಲಿಷ್‍ನಲ್ಲಿ ಸಂವಹಿಸುವಾಗ ನಗೆಪಾಟಲಿಗೀಡಾಗುವ ಸಂಭವವುಂಟು. ಅಂದರೆ ಇಂಗ್ಲಿಷ್ ಭಾಷೆಯಲ್ಲಿನ ಪಾಂಡಿತ್ಯ, ಸಂವಹಿಸುವ ಕಲೆ, ಉಚ್ಛಾರಣೆ ಮೊದಲಾದುವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಇಲ್ಲೂ ಸಹ ಸಲ್ಲದವರಿಗೆ ಕೆಲಸ ನೀಡಬೇಕೆಂಬ ಕುಮ್ಮಕ್ಕು, ಇಂತಹವರಿಗೇ ಕೆಲಸ ನೀಡಬೇಕೆಂಬ ಕಠಿಣ ನಿಯಮ ಮೊದಲಾದುವನ್ನು ಮಾಡಿದರೆ ಅಧೋಗತಿಯಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಹಳ್ಳಿಗಳಲ್ಲಿನ ಇಂತಹ ಶಾಲೆಗಳಿಗೆ ಇದು ಬಹಳವೇ ಅನ್ವಯವಾಗುತ್ತದೆ.
ಕನ್ನಡಶಾಲೆಗಳಿಗೆ ಜನ ತಾವಾಗಿಯೇ ಬಂದು ಸೇರಿಸಿಕೊಳ್ಳಿ ಎಂದು ಮುಗಿಬೀಳುವಂತಹ ವಾತಾವರಣವನ್ನು ನಿರ್ಮಿಸಿಬೇಕು. ಕನ್ನಡಶಾಲೆಗಳು ಇಂದಿನ ಪ್ರತಿಷ್ಠಿತಶಾಲೆಗಳಿಗೆ ಸಡ್ಡು ಹೊಡೆಯುವಂತಿರಬೇಕು. ಇದಕ್ಕೆ ಕನ್ನಡ ಮಾಧ್ಯಮದಲ್ಲಿ ಓದಿದ, ಕನ್ನಡ ಅಭಿಮಾನಿಗಳ ಸಲಹೆಗಳು ಮುಖ್ಯ. ಇಂತಹ ಜನ ಮುಂದೆ ಬಂದು ತಾವೇ ಕೆಲವು ಕನ್ನಡ ಮಾದರಿ ಶಾಲೆಗಳನ್ನು ತೆಗೆದು ಇದೆಲ್ಲವೂ ಸಾಧ್ಯ ಎಂದು ಸಾಧಿಸಿತೋರಿಸಬೇಕು. ಎಲ್ಲಕ್ಕೂ ಕೇಂದ್ರೀಯ ಪಠ್ಯ ಅಥವಾ ಐಸಿಎಸ್ ಪಠ್ಯವೇ ಮಾದರಿಯಲ್ಲ ಎಂಬ ದುರಭಿಪ್ರಾಯವನ್ನು ತೊಲಗಿಸಬೇಕು. ಹಾಗೆಯೇ, ಅದನ್ನೇ ಬಂಡವಾಳವಾಗಿಸಿಕೊಳ್ಳುವ  ಹಣದಾಹಿ ದುರುಳ ಇಂಗ್ಲಿಷ್ ಶಾಲೆಗಳಿಗೆ ತಕ್ಕ ಪಾಠ ಕಲಿಸಬೇಕು. ಕನ್ನಡಶಾಲೆಗಳಿಗೂ ತನ್ನತನವಿದೆ, ಅದರಿಂದ ಮಕ್ಕಳಿಗೆ ಅನುಕೂಲಗಳು ಹೆಚ್ಚು ಎಂಬ ಸತ್ಯವನ್ನು ಶ್ರೀಸಾಮಾನ್ಯರಿಗೆ ಮನವರಿಕೆ ಮಾಡಿಕೊಟ್ಟು ಎಲ್ಲವರ್ಗದವರನ್ನೂ ತನ್ನೆಡೆಗೆ ಸೆಳೆದುಕೊಳ್ಳಬೇಕು. ನಮ್ಮ ನಾಡಿಗೆ ಇನ್ನಾದರೂ ಇಂತಹ ಮಾದರಿ ಶಾಲೆಗಳು ದೊರೆಯುವಂತೆ ಸಂಬಂಧ ಪಟ್ಟವರು ಅನಕೂಲಗಳನ್ನು ಕಲ್ಪಿಸಲಿ ಎಂಬ ಈ ಕನಸು ಎಂದು ಈಡೇರುವುದೋ ನೋಡಬೇಕು.
ಕಡೆಯ ಮಾತು - ನಿರ್ಮಲ ಶೌಚಾಲಯ, ಒಂದು ಕಾಲದಲ್ಲಿ ಬೆಂಗಳೂರು ಸೋರಿಗೆ ಸಂಸ್ಥೆ ಎಂದು ಪ್ರಸಿದ್ಧವಾಗಿದ್ದ ಇಂದಿನ ಬಿ ಎಂ ಟಿ ಸಿ ಇಂದು ನಿರಿಕ್ಷೆಗೂ ಮೀರಿ ಬೆಳೆದು, ಜನಪ್ರಿಯವಾಗಿರುವಾಗ ಕನ್ನಡ ಶಾಲೆಗಳು ಜನಪ್ರಿಯವಾಗದೇ? ಸಹೃದಯರು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ. 

No comments:

Post a Comment