Tuesday, May 24, 2016

ದುರಾಸೆ ಪದ್ಯ



ದುರಾಸೆ
ನಿದಿಗಳ ಆಸೆಗೆ ಭೂಮಿಯ ಅಗೆದು ದ್ರೋಹವ ಮಾಡಾಯ್ತು
ಅದಿರಿನ ಆಸೆಗೆ ಘಟ್ಟವ ಕಡಿದು ಬೆಟ್ಟವ ಬಗೆದಾಯ್ತು
ನರನ ದುರಾಸೆಗೆ ಮಿತಿಯೇ ಇಲ್ಲದೆ ಜಗವೇ ಹಾಳಾಯ್ತು
ಹಾಳಾಗಿಹ ಜಗವು ಮಾನವ ಸ್ವಾರ್ಥದ ಸ್ಮಾರಕವಾಗಾಯ್ತು

ರತ್ನದ ಆಸೆಗೆ ಸಾಗರ ಸುತ್ತಿ ಆಳಕೆ ಇಳಿದಾಯ್ತು
ಜಲಚರ ಭೇಧಿಸಿ ಸಾಗರವನ್ನು ಕಲುಶಿತ ಮಾಡಾಯ್ತು
ಭೂಮಿಯ ಆಸೆಗೆ ಅತಿಕ್ರಮದಿಂದ ಕೆರೆಗಳ ಮುಚ್ಚಾಯ್ತು
ಜಲನೆಲವಿಲ್ಲದೆ ರೈತರ ಕೃಶಿಕರ ಜೀವನ ಹಾಳಾಯ್ತು

ಮಿಲಿಯನ್ ಮುಂದೆ ಲಕ್ಷಕೆ ಕಿಂಚಿತ್ ಬೆಲೆಯೇ ಇಲ್ಲದಾಯ್ತು
ಬಯಕೆಯ ಬೆಟ್ಟ ಎತ್ತರ ಬೆಳೆದು ಕೊನೆಯೇ ಕಾಣದಾಯ್ತು
ಧನದ ಪಿಶಾಚಿಯ ದಾಹದ ನಾಲಿಗೆ ಎಲ್ಲವ ನುಂಗಾಯ್ತು
ಬುದ್ಧನ ಮಂತ್ರ  ಆಸೆಯೆ ದುಃಖ ಎಂದೋ ಮರೆತಾಯ್ತು

ಸಮುದ್ರದ ಮುಂದೆ ಬೆಟ್ಟವು ಯಾಕೋ ತುಂಬಾ ಕುಳ್ಳಾಯ್ತು
ಗಗನದ ಮುಂದೆ ಸಾಗರವಂತೂ ಬಹಳವೆ ಕಿರಿದಾಯ್ತು
ಬ್ರಹ್ಮಾಂಡಕೆ ಬೆದರಿ ಗಗನವು ಎಲ್ಲೊ ನಾಚುತ ಮರೆಯಾಯ್ತು
ದುರಾಸೆಯ ಮುಂದೆ ಬ್ರಹ್ಮಾಂಡದ ಮಾನ ಕಾಸಿಗೆ ಹರಜಾಯ್ತು

No comments:

Post a Comment