Wednesday, December 16, 2020

ಕಾಣಿಕೆ - ಕವನ

 

ಕಾಣಿಕೆ

 

ಇಂದಿನ ನಮ್ಮ ಈ ಸ್ಥಿತಿಗೆ                     ಹಿಂದಿನ ಜನಗಳೆ ಕಾರಣರು 

ಮುಂದಿನ ಜನಗಳ ದುಸ್ಥಿತಿಗೆ              ಇಂದಿನ ನಾವೇ ಕಾರಣರು 

 

ಅಂಗಳ ಸ್ವಚ್ಛ ಮಾಡುವರು                ರಸ್ತೆಗೆ ಕಸವನ್ನು ಎಸೆಯುವರು

ಮನೆಗಳ ಗೋಡೆಯ ಬೆಳಗುವರು          ರಸ್ತೆಯ ಗೋಡೆಯ ಕೆಡಿಸುವರು  

 

ನೋಟನು ದೇವರು ಎನ್ನುವರು        ಮುದಿರಿಸಿ ಮಸಿಯಲಿ ಬರೆದಿಹರು

ಗಿಡ ಮರ ದೇವರು ಎನ್ನುವರು            ಕಾಡನು ನಾಶ ಮಾಡಿಹರು 

 

ನೀರಿಗೆ ಬಾಗಿನ ನೀಡುವರು                  ಕಲುಷಿತ ಕಲ್ಮಶ ಮಾಡುವರು

ಮಳೆ ಬರಲೆಂದು ಬೇಡುವರು              ಕಾಡನು ನಾಶ ಮಾಡುವರು

 

ಮಕ್ಕಳೇ ದೇವರು ಎನ್ನುವರು               ಬೇಧಧ ಭಾವವ ಬೆಳೆಸುವರು

ಹಸುವಿನ ಹಾಲನು ಕುಡಿಯುವರು     ಹಸುವನೆ ಕಡಿದು ತಿನ್ನುವರು

 

ಇಂದಿನ ಮಕ್ಕಳು ಬೆಳೆಯುವರು       ನಾಳಿನ ಪ್ರಜೆಗಳು ಆಗುವರು

ಒಳ್ಳೆಯ ಕೆಲಸವ ಮೆಚ್ಚುವರು        ತಪ್ಪಿನ ಕೆಲಸಕೆ ಚುಚ್ಚುವರು 

 

 


Monday, December 14, 2020

ಆಂತರ್ಯದಕಾಂತಿ

 

ಆಂತರ್ಯದಕಾಂತಿ

 

ರತ್ನಹಾರ ಕೊರಳಿಗೇರಿ ಚೆಲುವ ತಂದಿದೆ 

ಕೊರಳಿನಿಂದ ಮಧುರ ವಾಣಿ ಇಂಪ ತಂದಿದೆ 

ಕೊರಳಿನಿಂದ ಮಧುರ ವಾಣಿ ಇಂಪ ತಂದಿದೆ //ರತ್ನ//


ಬಳೆಯು ಚಿನ್ನವಾಗಿ ಕೈಗೆ ಸೊಬಗ ನೀಡಿದೆ 

ಕೈಯ ಮುದ್ದು ಬರೆಹ ಪುಟವ ಚಿನ್ನಮಾಡಿದೆ 

ಸಹಾಯ ಹಸ್ತ ಕರಗಳಿಗೆ ಕಡಗ ತೊಡಿಸಿದೆ  

ಸಹಾಯ ಹಸ್ತ ಕರಗಳಿಗೆ ಕಡಗ ತೊಡಿಸಿದೆ  //ರತ್ನ//

 

ಮೈ ಸುಗಂಧ ಕಂಪ ಚೆಲ್ಲಿ ಹಿತವ ತಂದಿದೆ 

ವಿನಯವೇ ಸುಗಂಧವಾಗಿ ಮೇರೆ ಮೀರಿದೆ 

ವಿದ್ಯೆ ಶೃಂಗಾರವಾಗಿ ಶೋಭೆ ತಂದಿದೆ 

ವಿದ್ಯೆ ಶೃಂಗಾರವಾಗಿ ಶೋಭೆ ತಂದಿದೆ  //ರತ್ನ//


ಚಿನ್ನ ರತ್ನ ಹೂ ಸುಗಂಧ ಬಾಹ್ಯ ಬೆಳಗಿದೆ 

ಸುಜನ ಸಂಗ  ವಿದ್ಯೆ ವಿನಯ ಆಂತರ್ಯ ಬೆಳಗಿ 

ಮನಕೆ ಶಾಂತಿ ನೀಡಿ  ಸುಗುಣ ಕಾಂತಿ ಚಿಮ್ಮಿದೆ 

ಜಗದ ಒಡೆಯನಭಯ ಹಸ್ತ ಹಿಂದೆ ಅಡಗಿದೆ  //ರತ್ನ//

 


ಸಾಧನೆಯ ಕಥೆ - ಕರೋನ, ಆನ್ ಲೈನ್ ತರಗತಿಗಳು ಮತ್ತು ಹೊಸ ಶಾಲೆ

ಕರೋನ, ಆನ್ ಲೈನ್ ತರಗತಿಗಳು ಮತ್ತು ಹೊಸ ಶಾಲೆ 

ಕರುಣಾ ಈಗ ಮನೆಯಲ್ಲೇ ಕುಳಿತು ಕಚೇರಿಯ ಕೆಲಸ ಮಾಡುತ್ತಿದ್ದಳು. ಅವಳ ಗಂಡ ಹರೀಶ್ ಸಹಾ ಮನೆಯಿಂದಲೇ ಕೆಲಸ ಮಾಡುತ್ತಿದ್ದ. ಅವರ ಮಗಳು ಕರೀನಾ ಮತ್ತು ಮಗ ಹೃತಿಕ್  ಸಹಾ ಈಗ ಮನೆಯಲ್ಲೇ. ಮೊದಮೊದಲು ಎಲ್ಲರೂ ಸಂತೋಷವಾಗಿ ಕಾಲ ಕಳೆಯುತ್ತಿದ್ದರು. ಆದರೆ ಈಗ ಕರೀನಾಳಿಗೆ, ಹೃತಿಕ್ ಗೆ ಎಲ್ಲಾ ಪಾಠಗಳೂ ಮನೆಯಲ್ಲೇ ನಡೆಯುತ್ತಿರುವುದರಿಂದ ಕರುಣಾಳಿಗೆ ತನ್ನ ಕೆಲಸಗಳಿಗಿಂತ ಅವರಿಬ್ಬರನ್ನು ನೋಡಿಕೊಳ್ಳುವುದೇ ಒಂದು ಕೆಲಸವಾಗಿ ಬಿಟ್ಟಿದೆ. ಆನ್ಲೈನ್ ನೆಪದಲ್ಲಿ ಅವರು ಇನ್ನೆಲ್ಲಿ ಬೇರೆ ಏನನ್ನೋ ನೋಡಿಕೊಂಡು ಹಾಳಾಗಿ ಬಿಡುತ್ತಾರೋ ಎಂಬ ಭಯ ಬೇರೆ. ಹರೀಶನಿಗೆ ಕೆಲಸ ಹೆಚ್ಚು, ಜವಾಬ್ದಾರಿ ಹೆಚ್ಚು, ಹೀಗಾಗಿ ಮಕ್ಕಳ ಕಡೆ ಗಮನ ಕೊಡಲು ಆಗುತ್ತಿಲ್ಲ. ಕರುಣಾಳಿಗಂತೂ ಕಚೇರಿಯ ಕೆಲಸ, ಮನೆಯ ಕೆಲಸ, ಮಕ್ಕಳ ಜವಾಬ್ದಾರಿ ಎಲ್ಲವೂ ಸೇರಿ ಹುಚ್ಚು ಹಿಡಿಯುವುದೊಂದು ಬಾಕಿ. ವಿಪರೀತ ಒತ್ತಡದಿಂದಾಗಿ ಒಮ್ಮೊಮ್ಮೆ ಆರೋಗ್ಯವೂ ಹಾಳಾಗುತ್ತಿತ್ತು. ಕಡೆಗೆ ಕರುಣಾ ಗಂಡನಿಗೆ, ರೀ ಇನ್ನು ಮೇಲೆ ನಾನು ಕೆಲಸಕ್ಕೆ ಹೋಗುವುದಿಲ್ಲ, ಈ ಒತ್ತಡ ತಡೆಯಲು ನನಗೆ ಸಾಧ್ಯವಿಲ್ಲ. ನಾನು ಮಕ್ಕಳನ್ನು ನೋಡಿಕೊಳ್ಳುತ್ತ ಅಡುಗೆ ಕೆಲಸ ಮಾಡುತ್ತೇನೆ ಎಂದಳು. ಹರೀಶನೂ ಅವಳ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಒಪ್ಪಿಗೆ ಕೊಟ್ಟನು. 

ಕರುಣಾ ಅಕ್ಕಪಕ್ಕದವರ ಮನೆಯಲ್ಲಿ ಈ ಆನ್ಲೈನ್ ಪಾಠಗಳ ಬಗ್ಗೆ ವಿಚಾರಿಸಿದಾಗ ಎಲ್ಲರ ಮನೆಯಲ್ಲೂ ಇದೆ ಗೋಳಾಗಿತ್ತು. ಕರುಣಾ ಚುರುಕು ಬುದ್ದಿಯ ವಳು. ಇದಕ್ಕೆ ಏನಾದರೂ ಒಂದು ಉಪಾಯ ಮಾಡಬೇಕೆಂದು ಯೋಚಿಸಿದಳು. ಮಕ್ಕಳಿಗೆ ಪಾಠ ಆಗಬೇಕು, ಆದರೆ ಪರೀಕ್ಷೆಗೆ ತೊಂದರೆ ಆಗಬಾರದು, ಇದಕ್ಕೆ ಏನಾದರೂ ಮಾಡಲೇ ಬೇಕು ಎಂದು ನಿರ್ಧರಿಸಿದಳು. 

ಮೊದಲು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಗೆ ಹೋಗಿ ಅದರ ಸಿಲಬಸ್ ಎಲ್ಲವನ್ನು ನೋಡಿದಳು. ನಂತರ ತನ್ನ ಮಕ್ಕಳನ್ನು ಅದರ ಮೂಲಕ ಓದಿಸಬಹುದೇ ಎಂದು ವಿಚಾರಿಸಿದಳು. ಅದು ಭಾರತ ಸರ್ಕಾರದ ಎಚ್ ಆರ್ ಡಿಪಾರ್ಟ್ಮೆಂಟ್ ನಿಂದ ಅಂಗೀಕೃತವಾದ ಒಂದು ಆಟಾನಮಸ್ ಸಂಸ್ಥೆ ಎಂದು ಗೊತ್ತಾಯಿತು. ಅದರ ಮೂಲಕ ಪರೀಕ್ಷೆ ತೊಗೊಂಡವರು ಸಿ ಬಿ ಎಸ್ ಸಿ ಪರೀಕ್ಷೆ ತೆಗೆದುಕೊಂಡಷ್ಟೇ ಸಮ, ಮುಂದೆ ಓದಲು ಎಲ್ಲೂ ತೊಂದರೆ ಆಗುವುದಿಲ್ಲ ಎಂದು ಅವರು ಹೇಳಿದರು. ಈಗ ಕರುಣಾ ಮನೆಗೆ ಬಂದು ತನ್ನ ಮಕ್ಕಳ ಶಾಲೆಯನ್ನು ಬಿಡಿಸಿ ಇಬ್ಬರಿಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಮೂಲಕ ಓದಿಸಲು ಎಲ್ಲಾ ಏರ್ಪಾಟು ಮಾಡಿದಳು. 

ಅವಳೊಂದಿಗೆ, ಎಲ್ಲವನ್ನು ಅಳೆದು ಸುರಿದು ವಿಚಾರಿಸಿ ಹತ್ತಿರದಲ್ಲೇ ಇದ್ದ ಪಂಕಜ ಅವರೂ ತಮ್ಮ ಮಕ್ಕಳನ್ನು ಹಾಗೆಯೆ ಓದಿಸಲು ನಿರ್ಧರಿಸಿದರು. ಈಗ ಕರುಣಾ ತನ್ನ ಮನೆಯಲ್ಲಿಯೇ ಒಂದು ಬೇರೆ ಕೋಣೆಯಲ್ಲಿ ಮಕ್ಕಳಿಗೆ ಒಂದು ಪುಟ್ಟ ಶಾಲೆ ತೆರೆದಳು. ತನ್ನ ಎರಡು ಹಾಗೂ ಪಂಕಜಾ ಅವರ ಎರಡು ಮಕ್ಕಳು ಅವಳ ಶಿಷ್ಯರಾದರು. ಮನೆಯಲ್ಲೇ ಆಟ  ಊಟ, ಪಾಠ ಎಲ್ಲವೂ ನಡೆದು ಎಲ್ಲರಿಗೂ ಕರುಣಾಳ ಲ್ಲಿ ಹುದುಗಿದ್ದ ಅದ್ಯಾಪಕಿಯ ಮೇಲ್ವಿಚಾರಣೆ ಇತ್ತು. ಹೀಗಾಗಿ ಮಕ್ಕಳು ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಿದರು. ಇದನ್ನು ಕಂಡ ಇನ್ನೂ ಕೆಲವರೂ ತಮ್ಮ ಮಕ್ಕಳನ್ನು ಕರುಣಾಳ ಬಳಿ ತಂದು ಬಿಟ್ಟರು. 

ಈಗ ಕರುಣಾ ತನ್ನಂತೆ ಪಾಠ ಮಾಡಲು ಇಷ್ಟವಿರುವ ಇನ್ನೂ ನಾಲ್ಕು ಅದ್ಯಾಪಕಿಯರನ್ನು ಗೊತ್ತು ಮಾಡಿಕೊಂಡು ಒಂದು ಪುಟ್ಟ ಮನೆಯಲ್ಲಿ ಪಾಠ ಹೇಳಿಕೊಡಲು ಅನುವು ಮಾಡಿಕೊಂಡಿದ್ದಾಳೆ. ಒಬ್ಬೊಬ್ಬ ಅದ್ಯಾಪಕಿಗೂ ೧೦ ಮಕ್ಕಳಂತೆ ಈಗ ಅಲ್ಲಿ ೫೦ ಮಂದಿ ಹುಡುಗರಿದ್ದಾರೆ. ಇಲ್ಲಿ ಮನೆ ಪಾಠ ವಿಲ್ಲ, ಡೊನೇಷನ್ ಇಲ್ಲ, ಅದ್ಯಾಪಕಿಯರ ಪ್ರೀತಿಯ ಕಣ್ಗಾವಲಿನಲ್ಲಿ ಮಕ್ಕಳು ಆಟ ಪಾಠ ಎಲ್ಲವನ್ನು ಕಲಿಯುತ್ತಿದ್ದಾರೆ. ಇದನ್ನು ಕರ್ನಾಟಕದ ಮೂಲೆಮೂಲೆಗೂ ವಿಸ್ತರಿಸಬೇಕು ಎಂಬುದು ಕರುಣಾಳ ಕನಸು. ಕರೋನ ಬಂದದ್ದು ತನ್ನ ಮಟ್ಟಿಗೆ ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು ಎಂದು ಕರುಣಾ ಹೇಳುತ್ತಾಳೆ.  ಈ ಕರೋನದಿಂದಾಗಿ ಅನೇಕರು ಇಂತಹ ಪುಟ್ಟ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿ ಈಗ ನಿಶ್ಚಿಂತೆಯಿಂದ ಇದ್ದಾರೆ. ಅನೇಕ ಜನ ಅದ್ಯಾಪಕಿಯರು ಇಂತಹ ಕೆಲಸದಿಂದ ಮನೆಯ ಬಳಿಯಲ್ಲೇ ತಮಗೆ ಇಷ್ಟವಾದ ಪಾಠ ಹೇಳಿಕೊಡುವ ಕೆಲಸವನ್ನು ಮಾಡುತ್ತ 'ಇಂದಿನ ಉತ್ತಮ ಪ್ರಜೆಗಳೇ ಮುಂದಿನ ಭಾರತದ ಏಳಿಗೆಗೆ ಬುನಾದಿ' ಎಂಬುದನ್ನು ಸಾಕಾರಗೊಳಿಸಲು ಹೊರಟಿದ್ದಾರೆ. 

ಜಗದೀಶ ಚಂದ್ರ ಬಿ ಎಸ್ 



ನವ್ಯ ಲೋಕದ ಕನಸು

 ಕಲಾ ಚಾವಡಿಯ ಭಾವ  ಚಾವಡಿಗೆ ಇದೊಂದು ಕವನ 

ನವ್ಯ ಲೋಕದ ಕನಸು

 

ಹೊಸ ಜಗತ್ತ ಕನಸ ಕಂಡು       ನವ್ಯಲೋಕವ ಕಟ್ಟುವಾ

ದುಃಖ ದ್ವೇಶ  ದೂರ ಸರಿಸಿ      ಅಲ್ಲೆಎಲ್ಲ ನೆಲೆಸುವಾ

-

ಸೂರ್ಯಕಿರಣ ಬಿಸಿಯನಿತ್ತು         ಮನೆಗೆ ಹಿತವ ಕೊಡುವುದು 

ಚಂದ್ರಕಿರಣ ತಂಪ ನೀಡಿ        ಕಚುಕುಳಿಯನು ಕೊಡುವುದು

ಬೆಳಕು ನೆರಳು ಸಮದಿ ಬೆರೆತು        ಸರ್ವ ಸುಖವನೀವುದು

 -

ಬಣ್ಣ ಬಣ್ಣದ ಹಕ್ಕಿ ದನಿಯು       ಮನಕೆ ರಂಗನು ಹರಡಿದೆ

ಬಣ್ಣ ಬಣ್ಣದ ಹೂಗಳೆಲ್ಲವು       ಇಂಪು ಕಂಪನು ನೀಡಿದೆ

ಇಂದ್ರಛಾಪ ಜನರ  ನಡುವೆ         ಸೇತು ಬಂಧವಾಗಿದೆ

 -

ನವ್ಯಲೋಕದೆಲ್ಲ ಜನರ         ಕನಸು ನನಸು ಆಗಿದೆ 

ಜಾತಿಧರ್ಮ ಹಂಗಿಲ್ಲದೆ        ಪ್ರೀತಿ ಗೌರವ ಬೆರೆತಿದೆ 

ಜಗದೊಡೆಯನ ಮಮತೆ ಪ್ರೀತಿ     ಸದಾ ಕಾಲ ದೊರಕಿದೆ 

Tuesday, December 8, 2020

ನಗೆ ಬರಹ - ಸುಳ್ಳೇ ನಮ್ಮನೇ ದೇವರು

 ಸುಳ್ಳೇ ನಮ್ಮನೇ ದೇವರು 

ಇಂದು ಎಲ್ಲರೂ ಒಂದು ಮುಖ್ಯವಾದ ಡ್ರಾಯಿಂಗ್ ಕೊಡುವ ದಿನವಾಗಿತ್ತು. ಆದ್ದರಿಂದ ತರಗತಿಗೆ ಹೋದಕೂಡಲೇ, ಎಲ್ಲಿ ಇವತ್ತಿನ ಚಟುವಟಿಕೆ? ಇವತ್ತೇ ಕಡೇ ದಿನ ಅಂತ ಎರಡು ಮೂರೂ ಬಾರಿ ನಿಮಗೆಲ್ಲ ಸಂದೇಶ ಕಳಿಸಿದ್ದೆ, ಆದರೂ ಏಕೆ ತಂದಿಲ್ಲ? ಎಂದು ಕೇಳಿದೆ. ನಮ್ಮ ವಿದ್ಯಾರ್ಥಿಗಳೆಲ್ಲಾ ಸುಳ್ಳಪ್ಪನ ಪರಮ ಭಕ್ತರು. ಅವನನ್ನೇ ಮನೆ ದೇವರಾಗಿ ಮಾಡಿಕೊಂಡುಬಿಟ್ಟಿದ್ದಾರೆ. ಅವರ ಉತ್ತರಗಳನ್ನು ನೋಡಿ. 

ವಿಜು - ಸರ್ ನಿನ್ನೆ ನಮ್ಮ ಅಜ್ಜಿ ಹೋಗಿ ಬಿಟ್ಟರು, ಆದ್ದರಿಂದ ಮಾಡಲೇ ಆಗಲಿಲ್ಲ. (ಇವನ ಮನೆಯಂತೂ ಸಾವಿನ ಮನೆ )

ಸರು - ಸರ್, ನನಗೆ ತುಂಬಾ ಜ್ವರ ಬಂದು ಬಿಟ್ಟಿತ್ತು. ಸ್ವಲ್ಪ ಕೆಮ್ಮುತ್ತ, ಇನ್ನು ಇದೆ ಸರ್, ಆದರೂ ತಪ್ಪಿಸಿಕೊಳ್ಳಬಾರದು ಎಂದು ಬಂದೆ ಸರ್. ನಾಳೆ ಕೊಟ್ಟುಬಿಡುತ್ತೀನಿ. (ಇದಂತೂ ಖಾಯಿಲೆಯ ಹುಡುಗಿ)

ವೆಂಕಿ - ಸರ್, ನಮ್ಮನೆ ನಾಯಿ ಹಾಳೆಗಳ ಮೇಲೆಲ್ಲಾ ಗಲೀಜು ಮಾಡಿ ಬಿಟ್ಟಿತು. ಈಗ ಹೊಸದು ಪ್ರಾರಂಭಿಸಿದ್ದೇನೆ. ನಾಳೆ ಕೊಟ್ಟುಬಿಡುವೆ ಸರ್. (ಇವನು ನಾಯಿ ಸಾಕಿಕೊಂಡಿರುವುದೇ ಇಂತಹ ಕೆಲಸಕ್ಕೆ)

ಸೀನ - ನಮ್ಮನೆಗೆ ನೆಂಟರು ಬಂದು ಬಿಟ್ಟಿದ್ದರು ಸರ್, ಮಾಡಕ್ಕೆ ಆಗಲೇ ಇಲ್ಲ. (ಇವರ ಮನೆ ಒಂದು ಗೆಸ್ಟ್ ಹೌಸ್ ಇದ್ದಂತೆ)

ಸಿರಿ - ಸರ್, ನಾನು ಎಲ್ಲ ಮಾಡಿ ಇನ್ನೇನು ಕೊಡಬೇಕು ಎಂದು ಕೊಂಡಿದ್ದೆ, ನಮ್ಮ ಮನೆಯ ಪಾಪು  ಹರಿದು ಹಾಕಿಬಿಟ್ಟಿತು ಸರ್. ಸ್ವಲ್ಪ ಸಮಯ ಕೊಡಿ ಸರ್, ಮಾಡಿ ಬಿಡುತ್ತೇನೆ. (ಇವನ ಮನೆಯ ಪಾಪು ಮಾಡುವ ಚೇಷ್ಟೆಗಳು ಒಂದೊಂದಲ್ಲ)

ಹರಿ - ದ್ವಿಚಕ್ರ ವಾಹನದಲ್ಲಿ ತರುತ್ತಿದ್ದೆ, ಗಾಳಿಗೆ ಹಾರಿ ಹೋಗಿ ಬಿಟ್ಟಿತು ಸರ್. ಗಾಡಿ ನಿಲ್ಲಿಸಿ, ಟ್ರಾಫಿಕ್ ಜಾಮ್ ಆಗಿ, ಪೊಲೀಸರಿಂದ ಬೈಸಿಕೊಂಡು ಹಾಗೆ ಬಂದು ಬಿಟ್ಟೆ. ಅದನ್ನು ತರಲು ಆಗಲೇ ಇಲ್ಲ ಸರ್. ಕ್ಷಮಿಸಿ. (ಇವನ ಡ್ರಾಯಿಂಗ್ ಹಾಳೆ ಒಂದು ಗಾಳಿ ಪಟ ಇದ್ದಂತೆ)

ಮೀನಾ - ಸರ್, ಎಲ್ಲಾ ಆಗಿದೆ. ಆದರೆ ತರುವುದನ್ನೇ ಮರೆತು ಬಿಟ್ಟೆ. ನಾಳೆ ತಂದು ಕೊಡುತ್ತೀನಿ. (ಪಾಪ ಆಗಲೇ ಮರೆವಿನ ಖಾಯಿಲೆ )

ವಿನು - ಯಾವುದೊ ಮುದುರಿದ ಡ್ರಾಯಿಂಗ್ ಹಾಳೆ ತೋರಿಸುತ್ತಾ, ನೋಡಿ ಚಕ್ರಕ್ಕೆ ಸಿಕ್ಕಿ ಹೇಗೆ ಆಗಿಬಿಟ್ಟಿದೆ. (ಮುದುಡಿದ ಡ್ರಾಯಿಂಗ್ ಹಾಳೆ ಯಾವಾಗ ಅರಳುವುದೋ ಕಾಣೆ)

ಬೆಟ್ಟಿ - ಅಳುತ್ತಾ, ಎಲ್ಲಾ ಮುಗಿಯುವುದರಲ್ಲಿತ್ತು, ಆದರೆ ನನ್ನ ಟಿ ಸ್ಕ್ವೇರ್ ಮುರಿದು ಹೋಯಿತು, ಅದಕ್ಕೆ ಮುಂದುವರೆಸಲು ಆಗಲೇ ಇಲ್ಲ. (ಮೊಸಳೆ ಕಣ್ಣೀರಿಗೆ ಒಳ್ಳೆಯ ಉದಾಹರಣೆ)

ಆನಿ - ಸರ್, ನೋಡಿ ನನ್ನ ಕೈಗೆ ಬ್ಯಾಂಡೇಜ್. ನಿನ್ನೆ ನಾನು ಬಿದ್ದು ಕೈ ಫ್ರಾಕ್ಚರ್ ಆಗಿ ಬಿಟ್ಟಿದೆ. ಹೇಗೆ ಸರ್ ಡ್ರಾಯಿಂಗ್ ಮಾಡುವುದು? (ಒಂದು ದಿನ ಡಾಕ್ಟರ್ ನ ಕರೆಸಿ ಇವನ ಕೈ ಪರೀಕ್ಷಿಸಬೇಕು)

ಬಿನ್ನಿ - ಸರ್, ಡ್ರಾಯಿಂಗ್ ಮಾಡುವಾಗ ಯಾರು ತೊಂದರೆ ಕೊಡಬಾರದು ಎಂದು ಬಾಗಿಲು ಹಾಕಲು ಹೋದೆ. ಆಗ ಬಾಗಿಲ ಸಂದಿಯಲ್ಲಿ ನನ್ನ ಬೆರಳು ಸಿಕ್ಕಿಹಾಕಿಕೊಂಡು ಜಜ್ಜಿ ಹೋಯಿತು. ನೋಡಿ ಇಲ್ಲಿ ಬ್ಯಾಂಡೇಜ್. ಹೀಗಾಗಿ ಮಾಡಲು ಆಗಲೇ ಇಲ್ಲ ಸರ್. (ಇವನ ಮನೆಯ ಬಾಗಿಲು ಸರಿಯಾದ ಬೆರಳನ್ನೇ ಹಿಡಿದು ಜಜ್ಜುತ್ತದೆ)

ಮೇರಿ - ಸರ್, ನಾನು ಎಲ್ಲವನ್ನು ಮುಗಿಸಿ, ಶಾರೀಗೆ ಕೊಡಲು ಹೇಳಿದ್ದೆ. ನೋಡಿ ಸರ್ ಅವಳು ಬಂದೇ ಇಲ್ಲ. ನಾನು ಬರಬಾರದು ಎಂದುಕೊಂಡು ಬಂದೆ, ಬರುತ್ತೇನೆ ಎಂದು ಅವಳು ಚಕ್ಕರ್. (ಹಾಗಲ ಕಾಯಿ, ಬೇವಿನ ಕಾಯಿ ಜೋಡಿ) 

ಜಯ - ಸರ್, ಹಾಳಾದ ಕೆ ಈ ಬಿ ಅವರು. ನಿನ್ನೆ ರಾತ್ರಿ ಪೂರ್ತಿ ನಮ್ಮ ಮನೆಯಲ್ಲಿ ಕರೆಂಟೇ ಇರಲಿಲ್ಲ. (ಕೆ ಈ ಬಿ ಅವರು ಇವಳ ಮನೆಯ ಮೇಲೆ ಕಣ್ಣಿಟ್ಟಿದ್ದಾರೆ)

ನಾನು "ಅಯ್ಯೋ ಪಾಪ, ನಿಮಗೆಲ್ಲ ಎಷ್ಟು ಕಷ್ಟ ಅಲ್ಲವೇ. ಸುಳ್ಳಪ್ಪನ ಆಣೆ, ನಿಮಗೆ ತೊಂದರೆ ಕೊಡುವುದಿಲ್ಲ. ಈಗ  ಏನೂ ಯೋಚಿಸಬೇಡಿ. ಇದು ಮೂರು ಘಂಟೆಯ ಅವಧಿಯ ತರಗತಿ. ಇಲ್ಲೇ ಕುಳಿತು ನಾನು ಕೊಡುವ ಈ ಹೊಸ ಕೆಲಸವನ್ನು ಮಾಡಿಕೊಟ್ಟು ಬಿಡಿ" ಎಂದೆ. 

ಮತ್ತೆ ಸುಳ್ಳಪ್ಪನ ಪರಮ ಭಕ್ತರು ಕೈ ನೋವು, ಕಾಲು ಉಳುಕಿದೆ, ತಲೆ ನೋವು, ಮೈಕೈ ನೋವು, ಎಂದು ನೆಪ ಹೇಳಿ ಚಾಪೆ ಕೆಳಗೆ ತೂರಿದರು. ಬ್ಯಾಂಡೇಜ್ ಹಾಕಿದವರಂತೂ ಖುಷಿಯಾಗಿದ್ದರು. 

ನಾನು ಮತ್ತೆ "ಅಯ್ಯೋ ಪಾಪ, ನಿಮಗೆಲ್ಲ ಎಷ್ಟು ಕಷ್ಟ ಅಲ್ಲವೇ. ಸುಳ್ಳಪ್ಪನ ಆಣೆ, ನಿಮಗೆ ತೊಂದರೆ ಕೊಡುವುದಿಲ್ಲ. ಈಗ  ಏನೂ ಯೋಚಿಸಬೇಡಿ" ಎಂದು, "ಈಗ ನಿಮಗೆಲ್ಲ ಒಬ್ಬೊಬ್ಬರನ್ನಾಗಿ ಕರೆದು ಕೆಲವು ಪ್ರಶ್ನೆಗಳನ್ನು ಕೇಳುತ್ತೇನೆ, ಉತ್ತರ ಹೇಳಿಬಿಡಿ. ಅದಕ್ಕೆ ಅಂಕಗಳನ್ನು ಕೊಡುತ್ತೇನೆ" ಎಂದು ರಂಗೋಲಿ ಕೆಳಗೆ ತೂರಿದೆ. 


Wednesday, December 2, 2020

ಮೂರ್ತಿ ಚಿಕ್ಕದಾದರೂ - ಪದ್ಯ


ಮೂರ್ತಿ ಚಿಕ್ಕದಾದರೂ 

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂದು 

ಗೊತ್ತಿಲ್ಲವೇ ನಿಮಗೆ, ತೋರಿಸುವೆ ನಿಮಗೆ 

-

ಏ  ಸಣಕಲು ಕಡ್ಡಿ ನೀನೇನು ಸಾಧಿಸುವೆ 

ವ್ಯಂಗ್ಯದ ನುಡಿ ಕೇಳಿ ಸಾಧಿಸಿ ನಾ ತೋರಿಸುವೆ    /ಮೂರ್ತಿ/

-

ಬಾಳೆಂಬ ಕಡಿದಾದ ಬೆಟ್ಟವೇರಿ  ನಿಂತೆ 

ಸಂಕಟಗಳ ಭಾರವಾ ನಾ ಹೊತ್ತು ನಿಂತೆ    /ಮೂರ್ತಿ/

-

ಜಗದೊಡೆಯ ಸೂರ್ಯನ ನಾ ನಂಬಿ ನಿಂತೆ 

ಆ ವರವೇ ನನಗೆ  ಪ್ರಭಾವಳಿಯಂತೆ     /ಮೂರ್ತಿ/

- ಜಗದೀಶ ಚಂದ್ರ 

Tuesday, December 1, 2020

ಒಲವಿನ ಓಲೆ - ನಗೆ ಬರಹ

ಒಲವಿನ ಓಲೆ 

ನನ್ನ ದೊಡ್ಡಮ್ಮನ ಮಗಳು ಕುಸುಮ ಹೇಳಿದ ಕತೆ. ಅವಳು ನನಗಿಂತ ಸುಮಾರು ದೊಡ್ಡವಳು. ಇದನ್ನು ಹೇಳಿದಾಗ ಅವಳಿಗೆ ಸುಮಾರು ಹದಿನಾರು ವರ್ಷ ಇರಬಹುದು.  

ನಾನೊಂದು ಒಲವಿನ ಓಲೆ ಬರೆದಿದ್ದೆ. ಅದೆಷ್ಟು ಚೆನ್ನಾಗಿ ಬರೆದಿದ್ದೆ ಎಂದರೆ ಅವನೊಂದಿಗೆ ಈಗ ಮದುವೆಯಾಗಿ ನನಗೆ ಅದೆಷ್ಟು ಮಕ್ಕಳಿರುತ್ತಿದ್ದವೋ ಏನೋ ಎಂದಳು. ಏನೇ ಹಾಗಂದರೆ? ಎಂದೆ. ಅವನ ಮೇಲೆ ನನಗೆ ಅಷ್ಟೊಂದು ಪ್ರೀತಿ  ಇತ್ತು ಎಂದರ್ಥ, ಅಷ್ಟು ಗೊತ್ತಾಗಲ್ವಾ? ಎಂದು ಬೈದಳು. ನಾನು ಪೆದ್ದು ಪೆದ್ದಾಗಿ ಒಪ್ಪಿಕೊಂಡು ಸರಿ ಮುಂದೆ ಹೇಳು ಎಂದೆ. 

ನಾನು ಸಿನಿಮಾ ಹಾಡುಗಳ ಸಾಲುಗಳನ್ನೆಲ್ಲಾ ಸೇರಿಸಿ ಒಂದು ಮುದ್ದಾದ ಪತ್ರ ಬರೆದಿದ್ದೆ. ಹಾಡಲು ಬಂದಿದ್ದರೆ, ಅದನ್ನು ರೆಕಾರ್ಡ್ ಮಾಡುವ ಅನುಕೂಲ ಇದ್ದಿದ್ದರೆ ಆಹಾ ಅದೆಷ್ಟು ಚೆನ್ನಾಗಿರುತ್ತಿತ್ತೋ ಎಂದು ನಿಡುಸುಯ್ದಳು. ಯಾಕೇ ಏನಾಯ್ತು ? ಎಂದೆ. ನಿನ್ನ ಅಕ್ಕ ಇದ್ದಾಳಲ್ಲಾ ಸುಮತಿ, ಅವಳಿಂದ ಏನೇನೋ ಆಗಿ ಹೋಯಿತು ಎಂದಳು. ನಾನು ಯಾಕೆ ಅವಳು ಅವನಿಗೆ ಇನ್ನೂ ಚೆನ್ನಾಗಿರುವ ಪ್ರೇಮ ಪತ್ರ ಬರೆದಳಾ? ಎಂದೇ. ಕುಸುಮಾ ಗೆ ರೇಗಿ ಹೋಯಿತು. ಥು, ನಿನ್ನ ತಲೆ, ಅಲ್ಲವೋ ನಾನು ಒಲವಿನ ಓಲೆ ಬರೆದು ಅದಕ್ಕೆ ಅಂಚೆ ಕಚೇರಿಯ ಲಕೋಟೆ ತಂದು ಅದರಮೇಲೆ ವಿಳಾಸ ಬರೆಯಬೇಕಿತ್ತು. ನಿನ್ನ ಅಕ್ಕ ಸುಮತಿ ತುಂಬಾ ಮುದ್ದಾಗಿ ಬರೆಯುತ್ತಾಳೆ ಎಂದು ಅವಳಿಗೆ ವಿಳಾಸ ಬರೆ ಎಂದು ಕೊಟ್ಟೆ. ಎಲ್ಲಾ ಹಾಳು ಮಾಡಿ ಬಿಟ್ಟಳು. 

ಏನು ಮಾಡಿದಳು? ಎಂದು ಮುದ್ದು ಮುದ್ದಾಗಿ ಕೇಳಿದೆ. ಅಯ್ಯೋ ನಾನು ವಿಳಾಸ ಕೊಡುವುದನ್ನೇ ಮರೆತಿದ್ದೆ, ಅವಳು ನಮ್ಮ ಮನೆಯ ವಿಳಾಸವನ್ನೇ ಬರೆದು ಬಿಟ್ಟಿದ್ದಳು. ಅವಳಿಗೆ ಗೊತ್ತಿದ್ದುದು ಅದೊಂದೇ. ಅದು ನಮ್ಮ ಅಪ್ಪನ ಕೈಗೆ ಸೇರಿತು. ದೊಡ್ಡ ರಾದ್ಧಾಂತವೇ ಆಗುವುದರಲ್ಲಿತ್ತು. ಆಗ ನಾನು ಮೆಲ್ಲಗೆ 'ಶಾಲೆಯಲ್ಲಿ ಸಿನೆಮಾ ಹಾಡುಗಳನ್ನು ಸೇರಿಸಿ ಒಂದು ಪತ್ರ ಬರೆಯಿರಿ ಎಂದು ಹೇಳಿ ಅದರಲ್ಲಿ ವಿಳಾಸ, ಎಲ್ಲವನ್ನು ಬರೆಯಬೇಕು ಎಂದಿದ್ದರು. ನಾನು ಮನೆಯಲ್ಲಿದ್ದ ಅಂಚೆ ಕಚೇರಿಯ ಲಕೋಟೆಯಲ್ಲಿಟ್ಟು ಶಾಲೆಗೆ ಕೊಡಬೇಕಿಂದಿದ್ದೆ. ಈ ಕುಸುಮ ಕೈಯಲ್ಲಿ ಅದಕ್ಕೆ ವಿಳಾಸ ಬರೆಸಿದೆ. ಅವಳು ಅದಕ್ಕೆ ನಮ್ಮ ಮನೆಯ ವಿಳಾಸ ಬರೆದು ಅದನ್ನು ಪೋಸ್ಟ್ ಮಾಡಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಳು. ಅದೇ ಇದು ಎಂದು ಬೆದರುತ್ತಾ ಹೇಳಿದೆ. ಅದೇನನ್ನಿಸಿತೋ, ಮುಂಗೋಪಿ ಅಪ್ಪನಿಗೂ ನಗು ಬಂದು 'ಪರವಾಗಿಲ್ಲ ಚೆನ್ನಾಗಿದೆ ನಿನ್ನ ಕಲ್ಪನೆ" ಎಂದು ಹೊಗಳಿ ತಮ್ಮ ಬಳಿಯೇ ಇಟ್ಟುಕೊಂಡರು ಎಂದಳು. 

ಈಗ ಅವಳ ಒಲವಿನ ಓಲೆಯ ಕತೆಯನ್ನು ನೆನೆಸಿಕೊಂಡು ಬಿದ್ದು ಬಿದ್ದು ನಗುತ್ತೇವೆ. ನಾನು ನಿಮ್ಮ ಅಪ್ಪನ ಬಳಿ ಆ ಪತ್ರವನ್ನು ಹುಡುಕಿ ನಿನ್ನ ಗಂಡನಿಗೆ ಕೊಡುತ್ತೇನೆ ಎಂದರೆ, ಈ ಚಾಲಾಕಿ ಕುಸುಮ, ಕೊಡು, ಕೊಡು, ನಿಮಗೆಂದೇ ನಾನು ಆಗಲೇ ಈ ಪತ್ರ ಬರೆದಿದ್ದೆ ಎಂದು ಹೇಳಿ ಅವರಿಂದ ಕಿವಿಯ ಓಲೆಯನ್ನು ಗಿಟ್ಟಿಸುತ್ತೇನೆ ಎನ್ನುತ್ತಾಳೆ. 

ಒಲವಿನ ಓಲೆಯ ಕತೆ ಹೇಗಿದೆ?  -  ಜಗದೀಶ ಚಂದ್ರ 

 


ಕಥೆ - ಬೇಲಿ ಮೇಯ್ದ ಹೊಲ

ಬೇಲಿ ಮೇಯ್ದ ಹೊಲ

ವಾಣಿ ನೋವಿನಿಂದ ನರಳುತ್ತಿದ್ದಳು. ಜೊತೆಗೆ ಮಾತನಾಡಲೂ ಆಗುತ್ತಿಲ್ಲ. ಗಂಟಲಿಗೆ ಚುಚ್ಚಿದ ಮರದ ರೆಂಬೆ ಅವಳ ವಾಣಿಯನ್ನೇ ನಾಶ ಮಾಡಿಬಿಟ್ಟಿತ್ತು. ಅವಳಿಗೆ ಮುಖವಾಣಿ ಎಂದು ಎಲ್ಲರೂ ಕರೆಯುತ್ತಿದ್ದರು. ಅವಳ ಮಾತು ಎಷ್ಟು ಮೊನಚು ಎಂದರೆ ಮಾತಿನಲ್ಲೇ ಅವಳು ಕೊಂದುಬಿಡುತ್ತಿದ್ದಳು. ಇಂದು ಮೂಲಕ್ಕೆ ಕೊಡಲಿ ಪೆಟ್ಟು ಬಿದ್ದು ಅವಳಿಗೆ ಮುಂದೇನೋ ಎಂದು ಯೋಚನೆಯಾಗಿತ್ತು. ಇದುವರೆಗೂ ಅವಳ ಹಿಂದೆ ಸುತ್ತುತ್ತಿದ್ದ ಅವಳ ಗುಂಪಿನ ಸದಸ್ಯರಾರೂ ಇವಳನ್ನು ವಿಚಾರಿಸಿರಲಿಲ್ಲ. ಅವಳ ಗುರುಗಳ ಮಗ, ವಿಶ್ವ ಅರ್ಥಾತ್ ಅವಳ ಪ್ರಿಯತಮ ಪತ್ತೆಯೇ ಇರಲಿಲ್ಲ. 

ವಾಣಿ ತನ್ನ ಮಾತಿನ ಮೊನಚಿನಿಂದ ಗಮನ ಸೆಳೆದು ಗುರುಗಳ ಗಮನಕ್ಕೆ ಬಂದಿದ್ದಳು. ಅವರು ಅವಳನ್ನು ಕರೆದುಕೊಂಡು ಹೊಗಳಿ ಉಬ್ಬಿಸಿ ಅವಳಿಗೆ ಕ್ರಾಂತಿಕಾರಿ ತತ್ವಗಳನ್ನು ತುಂಬಿ ಬಿಟ್ಟಿದ್ದರು. ವಾಣಿ  ನಂಬಿದ್ದಳೋ ಇಲ್ಲವೋ, ಆದರೆ ಎಲ್ಲರ ಹೊಗಳಿಕೆಯಿಂದ ಉಬ್ಬಿ ಹೋಗಿ ಅವರು ಹೇಳಿದಂತೆ ಕುಣಿಯುತ್ತ ಅವರ ಮುಖವಾಣಿಯಾಗಿ ಬಿಟ್ಟಿದ್ದಳು. ಅವರು ಯಾರನ್ನಾದರೂ ಕೊಲೆ ಮಾಡು ಎಂದರು ಅದನ್ನೂ ಮಾಡುವಷ್ಟು ಪ್ರಭಾವಿತಳಾಗಿದ್ದಳು. ಇದಕ್ಕೆ ಸರಿಯಾಗಿ ಗುರುಗಳ ಮಗ ವಿಶ್ವ ನ ಮೋಹಕ್ಕೂ ಬಲಿಯಾಗಿದ್ದಳು. 

ಇಂದು ಪೋಲೀಸಿನವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಾಡಿನಲ್ಲಿ ರೆಂಬೆಯೊಂದರಿಂದ ಚುಚ್ಚಿಸಿಕೊಂಡು ಅಪಘಾತಕ್ಕೀಡಾಗಿದ್ದಳು. ಮಾತು ನಿಂತುಹೋಗಿದೆ ಎಂದು ತಿಳಿದಮೇಲೆ ಅವಳಿಗೆ ಮೊದಲಿನ ಉಪಚಾರ ಎಲ್ಲವೂ ನಿಂತುಹೋದವು. ವಿಶ್ವನಂತೂ ಇವಳನ್ನು ಅಪರಿಚಿತಳಂತೆ ನೋಡುತ್ತಿದ್ದ. ವಾಣಿಗೆ ಈಗ ಜ್ಞಾನೋದಯವಾಗತೊಡಗಿತು. ಇವರೆಲ್ಲರಿಗೂ ತಾನು ಬೇಕಿರಲಿಲ್ಲ, ತನ್ನ ಮೊನಚಾದ ವಾಣಿ ಬೇಕಿತ್ತು, ಇವರನ್ನು ನಾನು ನಂಬಿ ಮೋಸಹೋದೆನಲ್ಲ ಎಂದು ಮರುಗತೊಡಗಿದಳು. ಗುರುಗಳ ಬಳಿ ಹೋಗಿ ಮಾತನಾಡಬೇಕು ಎಂದುಕೊಂಡಳು. ಆದರೆ ಮಾತೇ ಇಲ್ಲ, ಬರೆದು ಹೇಳಬೇಕು ಎಂದು ತಾನು ಹೇಳಬೇಕೆಂದು ಕೊಂಡಿದ್ದುದನ್ನೆಲ್ಲ ಬರೆದು ಗೆಳತಿಯ ಸಹಾಯದಿಂದ ಗುರುಗಳ ಬಳಿಗೆ ಬಂದಳು. 

ಗುರುಗಳು ನಿರ್ಲಿಪ್ತರಾಗಿ ಅಲ್ಲಮ್ಮ, ಮಾತೇ ಆಡಲು ಆಗದ, ಕುಂಟಿಕೊಂಡು ಓಡಾಡುವ ನಿನ್ನಂತಹ ಹೆಂಗಸನ್ನು ಈ ಕಾಡಿನಲ್ಲಿ ಹೇಗಮ್ಮಾ ಕಾಪಾಡುವುದು? ಯಾರಾದರೂ ಪರಿಚಿತರ ಮನೆಗೆ ಹೋಗಿಬಿಡು ಎಂದರು. ಮಾತನಾಡದಿದ್ದರೇನಂತೆ, ಇತರರಂತೆ ನಾನೂ ಸಹ ಪಿಸ್ತೂಲನ್ನು ಉಪಯೋಗಿಸುತ್ತೇನೆ ಎಂದು ಬರೆದು ಕೇಳಿದಳು ವಾಣಿ. ಅದೇ ವೇಳೆಗೆ ಅಲ್ಲಿಗೆ ಬಂದ ವಿಶ್ವ ಅವಳ ಪ್ರತಿಕ್ರಿಯೆಗೆ ನಕ್ಕ. ವಾಣಿಗೆ ಮೈಯೆಲ್ಲಾ ಉರಿದು ಹೋಯಿತು. ನಿಮ್ಮನ್ನು ನಂಬಿ ಮನೆ, ಮಠ ಎಲ್ಲವನ್ನೂ ಬಿಟ್ಟು ಬಂದಿದ್ದೆ.  ಇದೊಳ್ಳೆ ಬೇಲಿಯೇ ಹೊಲ ಮೆಯ್ದ ಕತೆಯಂತೆ ಆಯಿತು. ನಾನು ಬರಿಯ ಮಾತಲ್ಲ, ಮಾಡಿಯೇ ತೋರಿಸುತ್ತೇನೆ ಎಂದಳು. ತಂದೆ ಮಗ ಇಬ್ಬರೂ ನಕ್ಕು ಅವಳನ್ನು ಹೀಯಾಳಿಸಿದರು. 

ಮರುಕ್ಷಣದಲ್ಲೇ ಮೂರು ಗುಂಡಿನ  ಶಬ್ದ ಕೇಳಿಸಿತು. ಎಲ್ಲರೂ ಓಡೋಡಿ ಬಂದರು. 

ಮರುದಿನ ಪತ್ರಿಕೆಯಲ್ಲಿ ಕ್ರಾಂತಿಕಾರಿ ಗುರು, ಅವರ ಪುತ್ರ ಮತ್ತು ಅವರ ಮುಖವಾಣಿಯಾಗಿದ್ದ ಹೆಣ್ಣೊಬ್ಬಳ ಆತ್ಮಹತ್ಯೆ ಎಂದು ಪ್ರಕಟವಾಗಿತ್ತು. ಹೊಲವನ್ನೇ ಮೇಯ್ದ ಬೇಲಿಗೆ ತಕ್ಕ ಶಿಕ್ಷೆಯಾಗಿತ್ತು. ಹೊಲವೂ ಹಾಳಾಗಿ ಹೋಗಿತ್ತು. 

ಜಗದೀಶ ಚಂದ್ರ