Monday, December 14, 2020

ಸಾಧನೆಯ ಕಥೆ - ಕರೋನ, ಆನ್ ಲೈನ್ ತರಗತಿಗಳು ಮತ್ತು ಹೊಸ ಶಾಲೆ

ಕರೋನ, ಆನ್ ಲೈನ್ ತರಗತಿಗಳು ಮತ್ತು ಹೊಸ ಶಾಲೆ 

ಕರುಣಾ ಈಗ ಮನೆಯಲ್ಲೇ ಕುಳಿತು ಕಚೇರಿಯ ಕೆಲಸ ಮಾಡುತ್ತಿದ್ದಳು. ಅವಳ ಗಂಡ ಹರೀಶ್ ಸಹಾ ಮನೆಯಿಂದಲೇ ಕೆಲಸ ಮಾಡುತ್ತಿದ್ದ. ಅವರ ಮಗಳು ಕರೀನಾ ಮತ್ತು ಮಗ ಹೃತಿಕ್  ಸಹಾ ಈಗ ಮನೆಯಲ್ಲೇ. ಮೊದಮೊದಲು ಎಲ್ಲರೂ ಸಂತೋಷವಾಗಿ ಕಾಲ ಕಳೆಯುತ್ತಿದ್ದರು. ಆದರೆ ಈಗ ಕರೀನಾಳಿಗೆ, ಹೃತಿಕ್ ಗೆ ಎಲ್ಲಾ ಪಾಠಗಳೂ ಮನೆಯಲ್ಲೇ ನಡೆಯುತ್ತಿರುವುದರಿಂದ ಕರುಣಾಳಿಗೆ ತನ್ನ ಕೆಲಸಗಳಿಗಿಂತ ಅವರಿಬ್ಬರನ್ನು ನೋಡಿಕೊಳ್ಳುವುದೇ ಒಂದು ಕೆಲಸವಾಗಿ ಬಿಟ್ಟಿದೆ. ಆನ್ಲೈನ್ ನೆಪದಲ್ಲಿ ಅವರು ಇನ್ನೆಲ್ಲಿ ಬೇರೆ ಏನನ್ನೋ ನೋಡಿಕೊಂಡು ಹಾಳಾಗಿ ಬಿಡುತ್ತಾರೋ ಎಂಬ ಭಯ ಬೇರೆ. ಹರೀಶನಿಗೆ ಕೆಲಸ ಹೆಚ್ಚು, ಜವಾಬ್ದಾರಿ ಹೆಚ್ಚು, ಹೀಗಾಗಿ ಮಕ್ಕಳ ಕಡೆ ಗಮನ ಕೊಡಲು ಆಗುತ್ತಿಲ್ಲ. ಕರುಣಾಳಿಗಂತೂ ಕಚೇರಿಯ ಕೆಲಸ, ಮನೆಯ ಕೆಲಸ, ಮಕ್ಕಳ ಜವಾಬ್ದಾರಿ ಎಲ್ಲವೂ ಸೇರಿ ಹುಚ್ಚು ಹಿಡಿಯುವುದೊಂದು ಬಾಕಿ. ವಿಪರೀತ ಒತ್ತಡದಿಂದಾಗಿ ಒಮ್ಮೊಮ್ಮೆ ಆರೋಗ್ಯವೂ ಹಾಳಾಗುತ್ತಿತ್ತು. ಕಡೆಗೆ ಕರುಣಾ ಗಂಡನಿಗೆ, ರೀ ಇನ್ನು ಮೇಲೆ ನಾನು ಕೆಲಸಕ್ಕೆ ಹೋಗುವುದಿಲ್ಲ, ಈ ಒತ್ತಡ ತಡೆಯಲು ನನಗೆ ಸಾಧ್ಯವಿಲ್ಲ. ನಾನು ಮಕ್ಕಳನ್ನು ನೋಡಿಕೊಳ್ಳುತ್ತ ಅಡುಗೆ ಕೆಲಸ ಮಾಡುತ್ತೇನೆ ಎಂದಳು. ಹರೀಶನೂ ಅವಳ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಒಪ್ಪಿಗೆ ಕೊಟ್ಟನು. 

ಕರುಣಾ ಅಕ್ಕಪಕ್ಕದವರ ಮನೆಯಲ್ಲಿ ಈ ಆನ್ಲೈನ್ ಪಾಠಗಳ ಬಗ್ಗೆ ವಿಚಾರಿಸಿದಾಗ ಎಲ್ಲರ ಮನೆಯಲ್ಲೂ ಇದೆ ಗೋಳಾಗಿತ್ತು. ಕರುಣಾ ಚುರುಕು ಬುದ್ದಿಯ ವಳು. ಇದಕ್ಕೆ ಏನಾದರೂ ಒಂದು ಉಪಾಯ ಮಾಡಬೇಕೆಂದು ಯೋಚಿಸಿದಳು. ಮಕ್ಕಳಿಗೆ ಪಾಠ ಆಗಬೇಕು, ಆದರೆ ಪರೀಕ್ಷೆಗೆ ತೊಂದರೆ ಆಗಬಾರದು, ಇದಕ್ಕೆ ಏನಾದರೂ ಮಾಡಲೇ ಬೇಕು ಎಂದು ನಿರ್ಧರಿಸಿದಳು. 

ಮೊದಲು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಗೆ ಹೋಗಿ ಅದರ ಸಿಲಬಸ್ ಎಲ್ಲವನ್ನು ನೋಡಿದಳು. ನಂತರ ತನ್ನ ಮಕ್ಕಳನ್ನು ಅದರ ಮೂಲಕ ಓದಿಸಬಹುದೇ ಎಂದು ವಿಚಾರಿಸಿದಳು. ಅದು ಭಾರತ ಸರ್ಕಾರದ ಎಚ್ ಆರ್ ಡಿಪಾರ್ಟ್ಮೆಂಟ್ ನಿಂದ ಅಂಗೀಕೃತವಾದ ಒಂದು ಆಟಾನಮಸ್ ಸಂಸ್ಥೆ ಎಂದು ಗೊತ್ತಾಯಿತು. ಅದರ ಮೂಲಕ ಪರೀಕ್ಷೆ ತೊಗೊಂಡವರು ಸಿ ಬಿ ಎಸ್ ಸಿ ಪರೀಕ್ಷೆ ತೆಗೆದುಕೊಂಡಷ್ಟೇ ಸಮ, ಮುಂದೆ ಓದಲು ಎಲ್ಲೂ ತೊಂದರೆ ಆಗುವುದಿಲ್ಲ ಎಂದು ಅವರು ಹೇಳಿದರು. ಈಗ ಕರುಣಾ ಮನೆಗೆ ಬಂದು ತನ್ನ ಮಕ್ಕಳ ಶಾಲೆಯನ್ನು ಬಿಡಿಸಿ ಇಬ್ಬರಿಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಮೂಲಕ ಓದಿಸಲು ಎಲ್ಲಾ ಏರ್ಪಾಟು ಮಾಡಿದಳು. 

ಅವಳೊಂದಿಗೆ, ಎಲ್ಲವನ್ನು ಅಳೆದು ಸುರಿದು ವಿಚಾರಿಸಿ ಹತ್ತಿರದಲ್ಲೇ ಇದ್ದ ಪಂಕಜ ಅವರೂ ತಮ್ಮ ಮಕ್ಕಳನ್ನು ಹಾಗೆಯೆ ಓದಿಸಲು ನಿರ್ಧರಿಸಿದರು. ಈಗ ಕರುಣಾ ತನ್ನ ಮನೆಯಲ್ಲಿಯೇ ಒಂದು ಬೇರೆ ಕೋಣೆಯಲ್ಲಿ ಮಕ್ಕಳಿಗೆ ಒಂದು ಪುಟ್ಟ ಶಾಲೆ ತೆರೆದಳು. ತನ್ನ ಎರಡು ಹಾಗೂ ಪಂಕಜಾ ಅವರ ಎರಡು ಮಕ್ಕಳು ಅವಳ ಶಿಷ್ಯರಾದರು. ಮನೆಯಲ್ಲೇ ಆಟ  ಊಟ, ಪಾಠ ಎಲ್ಲವೂ ನಡೆದು ಎಲ್ಲರಿಗೂ ಕರುಣಾಳ ಲ್ಲಿ ಹುದುಗಿದ್ದ ಅದ್ಯಾಪಕಿಯ ಮೇಲ್ವಿಚಾರಣೆ ಇತ್ತು. ಹೀಗಾಗಿ ಮಕ್ಕಳು ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಿದರು. ಇದನ್ನು ಕಂಡ ಇನ್ನೂ ಕೆಲವರೂ ತಮ್ಮ ಮಕ್ಕಳನ್ನು ಕರುಣಾಳ ಬಳಿ ತಂದು ಬಿಟ್ಟರು. 

ಈಗ ಕರುಣಾ ತನ್ನಂತೆ ಪಾಠ ಮಾಡಲು ಇಷ್ಟವಿರುವ ಇನ್ನೂ ನಾಲ್ಕು ಅದ್ಯಾಪಕಿಯರನ್ನು ಗೊತ್ತು ಮಾಡಿಕೊಂಡು ಒಂದು ಪುಟ್ಟ ಮನೆಯಲ್ಲಿ ಪಾಠ ಹೇಳಿಕೊಡಲು ಅನುವು ಮಾಡಿಕೊಂಡಿದ್ದಾಳೆ. ಒಬ್ಬೊಬ್ಬ ಅದ್ಯಾಪಕಿಗೂ ೧೦ ಮಕ್ಕಳಂತೆ ಈಗ ಅಲ್ಲಿ ೫೦ ಮಂದಿ ಹುಡುಗರಿದ್ದಾರೆ. ಇಲ್ಲಿ ಮನೆ ಪಾಠ ವಿಲ್ಲ, ಡೊನೇಷನ್ ಇಲ್ಲ, ಅದ್ಯಾಪಕಿಯರ ಪ್ರೀತಿಯ ಕಣ್ಗಾವಲಿನಲ್ಲಿ ಮಕ್ಕಳು ಆಟ ಪಾಠ ಎಲ್ಲವನ್ನು ಕಲಿಯುತ್ತಿದ್ದಾರೆ. ಇದನ್ನು ಕರ್ನಾಟಕದ ಮೂಲೆಮೂಲೆಗೂ ವಿಸ್ತರಿಸಬೇಕು ಎಂಬುದು ಕರುಣಾಳ ಕನಸು. ಕರೋನ ಬಂದದ್ದು ತನ್ನ ಮಟ್ಟಿಗೆ ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು ಎಂದು ಕರುಣಾ ಹೇಳುತ್ತಾಳೆ.  ಈ ಕರೋನದಿಂದಾಗಿ ಅನೇಕರು ಇಂತಹ ಪುಟ್ಟ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿ ಈಗ ನಿಶ್ಚಿಂತೆಯಿಂದ ಇದ್ದಾರೆ. ಅನೇಕ ಜನ ಅದ್ಯಾಪಕಿಯರು ಇಂತಹ ಕೆಲಸದಿಂದ ಮನೆಯ ಬಳಿಯಲ್ಲೇ ತಮಗೆ ಇಷ್ಟವಾದ ಪಾಠ ಹೇಳಿಕೊಡುವ ಕೆಲಸವನ್ನು ಮಾಡುತ್ತ 'ಇಂದಿನ ಉತ್ತಮ ಪ್ರಜೆಗಳೇ ಮುಂದಿನ ಭಾರತದ ಏಳಿಗೆಗೆ ಬುನಾದಿ' ಎಂಬುದನ್ನು ಸಾಕಾರಗೊಳಿಸಲು ಹೊರಟಿದ್ದಾರೆ. 

ಜಗದೀಶ ಚಂದ್ರ ಬಿ ಎಸ್ 



No comments:

Post a Comment