Tuesday, December 1, 2020

ಒಲವಿನ ಓಲೆ - ನಗೆ ಬರಹ

ಒಲವಿನ ಓಲೆ 

ನನ್ನ ದೊಡ್ಡಮ್ಮನ ಮಗಳು ಕುಸುಮ ಹೇಳಿದ ಕತೆ. ಅವಳು ನನಗಿಂತ ಸುಮಾರು ದೊಡ್ಡವಳು. ಇದನ್ನು ಹೇಳಿದಾಗ ಅವಳಿಗೆ ಸುಮಾರು ಹದಿನಾರು ವರ್ಷ ಇರಬಹುದು.  

ನಾನೊಂದು ಒಲವಿನ ಓಲೆ ಬರೆದಿದ್ದೆ. ಅದೆಷ್ಟು ಚೆನ್ನಾಗಿ ಬರೆದಿದ್ದೆ ಎಂದರೆ ಅವನೊಂದಿಗೆ ಈಗ ಮದುವೆಯಾಗಿ ನನಗೆ ಅದೆಷ್ಟು ಮಕ್ಕಳಿರುತ್ತಿದ್ದವೋ ಏನೋ ಎಂದಳು. ಏನೇ ಹಾಗಂದರೆ? ಎಂದೆ. ಅವನ ಮೇಲೆ ನನಗೆ ಅಷ್ಟೊಂದು ಪ್ರೀತಿ  ಇತ್ತು ಎಂದರ್ಥ, ಅಷ್ಟು ಗೊತ್ತಾಗಲ್ವಾ? ಎಂದು ಬೈದಳು. ನಾನು ಪೆದ್ದು ಪೆದ್ದಾಗಿ ಒಪ್ಪಿಕೊಂಡು ಸರಿ ಮುಂದೆ ಹೇಳು ಎಂದೆ. 

ನಾನು ಸಿನಿಮಾ ಹಾಡುಗಳ ಸಾಲುಗಳನ್ನೆಲ್ಲಾ ಸೇರಿಸಿ ಒಂದು ಮುದ್ದಾದ ಪತ್ರ ಬರೆದಿದ್ದೆ. ಹಾಡಲು ಬಂದಿದ್ದರೆ, ಅದನ್ನು ರೆಕಾರ್ಡ್ ಮಾಡುವ ಅನುಕೂಲ ಇದ್ದಿದ್ದರೆ ಆಹಾ ಅದೆಷ್ಟು ಚೆನ್ನಾಗಿರುತ್ತಿತ್ತೋ ಎಂದು ನಿಡುಸುಯ್ದಳು. ಯಾಕೇ ಏನಾಯ್ತು ? ಎಂದೆ. ನಿನ್ನ ಅಕ್ಕ ಇದ್ದಾಳಲ್ಲಾ ಸುಮತಿ, ಅವಳಿಂದ ಏನೇನೋ ಆಗಿ ಹೋಯಿತು ಎಂದಳು. ನಾನು ಯಾಕೆ ಅವಳು ಅವನಿಗೆ ಇನ್ನೂ ಚೆನ್ನಾಗಿರುವ ಪ್ರೇಮ ಪತ್ರ ಬರೆದಳಾ? ಎಂದೇ. ಕುಸುಮಾ ಗೆ ರೇಗಿ ಹೋಯಿತು. ಥು, ನಿನ್ನ ತಲೆ, ಅಲ್ಲವೋ ನಾನು ಒಲವಿನ ಓಲೆ ಬರೆದು ಅದಕ್ಕೆ ಅಂಚೆ ಕಚೇರಿಯ ಲಕೋಟೆ ತಂದು ಅದರಮೇಲೆ ವಿಳಾಸ ಬರೆಯಬೇಕಿತ್ತು. ನಿನ್ನ ಅಕ್ಕ ಸುಮತಿ ತುಂಬಾ ಮುದ್ದಾಗಿ ಬರೆಯುತ್ತಾಳೆ ಎಂದು ಅವಳಿಗೆ ವಿಳಾಸ ಬರೆ ಎಂದು ಕೊಟ್ಟೆ. ಎಲ್ಲಾ ಹಾಳು ಮಾಡಿ ಬಿಟ್ಟಳು. 

ಏನು ಮಾಡಿದಳು? ಎಂದು ಮುದ್ದು ಮುದ್ದಾಗಿ ಕೇಳಿದೆ. ಅಯ್ಯೋ ನಾನು ವಿಳಾಸ ಕೊಡುವುದನ್ನೇ ಮರೆತಿದ್ದೆ, ಅವಳು ನಮ್ಮ ಮನೆಯ ವಿಳಾಸವನ್ನೇ ಬರೆದು ಬಿಟ್ಟಿದ್ದಳು. ಅವಳಿಗೆ ಗೊತ್ತಿದ್ದುದು ಅದೊಂದೇ. ಅದು ನಮ್ಮ ಅಪ್ಪನ ಕೈಗೆ ಸೇರಿತು. ದೊಡ್ಡ ರಾದ್ಧಾಂತವೇ ಆಗುವುದರಲ್ಲಿತ್ತು. ಆಗ ನಾನು ಮೆಲ್ಲಗೆ 'ಶಾಲೆಯಲ್ಲಿ ಸಿನೆಮಾ ಹಾಡುಗಳನ್ನು ಸೇರಿಸಿ ಒಂದು ಪತ್ರ ಬರೆಯಿರಿ ಎಂದು ಹೇಳಿ ಅದರಲ್ಲಿ ವಿಳಾಸ, ಎಲ್ಲವನ್ನು ಬರೆಯಬೇಕು ಎಂದಿದ್ದರು. ನಾನು ಮನೆಯಲ್ಲಿದ್ದ ಅಂಚೆ ಕಚೇರಿಯ ಲಕೋಟೆಯಲ್ಲಿಟ್ಟು ಶಾಲೆಗೆ ಕೊಡಬೇಕಿಂದಿದ್ದೆ. ಈ ಕುಸುಮ ಕೈಯಲ್ಲಿ ಅದಕ್ಕೆ ವಿಳಾಸ ಬರೆಸಿದೆ. ಅವಳು ಅದಕ್ಕೆ ನಮ್ಮ ಮನೆಯ ವಿಳಾಸ ಬರೆದು ಅದನ್ನು ಪೋಸ್ಟ್ ಮಾಡಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಳು. ಅದೇ ಇದು ಎಂದು ಬೆದರುತ್ತಾ ಹೇಳಿದೆ. ಅದೇನನ್ನಿಸಿತೋ, ಮುಂಗೋಪಿ ಅಪ್ಪನಿಗೂ ನಗು ಬಂದು 'ಪರವಾಗಿಲ್ಲ ಚೆನ್ನಾಗಿದೆ ನಿನ್ನ ಕಲ್ಪನೆ" ಎಂದು ಹೊಗಳಿ ತಮ್ಮ ಬಳಿಯೇ ಇಟ್ಟುಕೊಂಡರು ಎಂದಳು. 

ಈಗ ಅವಳ ಒಲವಿನ ಓಲೆಯ ಕತೆಯನ್ನು ನೆನೆಸಿಕೊಂಡು ಬಿದ್ದು ಬಿದ್ದು ನಗುತ್ತೇವೆ. ನಾನು ನಿಮ್ಮ ಅಪ್ಪನ ಬಳಿ ಆ ಪತ್ರವನ್ನು ಹುಡುಕಿ ನಿನ್ನ ಗಂಡನಿಗೆ ಕೊಡುತ್ತೇನೆ ಎಂದರೆ, ಈ ಚಾಲಾಕಿ ಕುಸುಮ, ಕೊಡು, ಕೊಡು, ನಿಮಗೆಂದೇ ನಾನು ಆಗಲೇ ಈ ಪತ್ರ ಬರೆದಿದ್ದೆ ಎಂದು ಹೇಳಿ ಅವರಿಂದ ಕಿವಿಯ ಓಲೆಯನ್ನು ಗಿಟ್ಟಿಸುತ್ತೇನೆ ಎನ್ನುತ್ತಾಳೆ. 

ಒಲವಿನ ಓಲೆಯ ಕತೆ ಹೇಗಿದೆ?  -  ಜಗದೀಶ ಚಂದ್ರ 

 


No comments:

Post a Comment