Tuesday, December 8, 2020

ನಗೆ ಬರಹ - ಸುಳ್ಳೇ ನಮ್ಮನೇ ದೇವರು

 ಸುಳ್ಳೇ ನಮ್ಮನೇ ದೇವರು 

ಇಂದು ಎಲ್ಲರೂ ಒಂದು ಮುಖ್ಯವಾದ ಡ್ರಾಯಿಂಗ್ ಕೊಡುವ ದಿನವಾಗಿತ್ತು. ಆದ್ದರಿಂದ ತರಗತಿಗೆ ಹೋದಕೂಡಲೇ, ಎಲ್ಲಿ ಇವತ್ತಿನ ಚಟುವಟಿಕೆ? ಇವತ್ತೇ ಕಡೇ ದಿನ ಅಂತ ಎರಡು ಮೂರೂ ಬಾರಿ ನಿಮಗೆಲ್ಲ ಸಂದೇಶ ಕಳಿಸಿದ್ದೆ, ಆದರೂ ಏಕೆ ತಂದಿಲ್ಲ? ಎಂದು ಕೇಳಿದೆ. ನಮ್ಮ ವಿದ್ಯಾರ್ಥಿಗಳೆಲ್ಲಾ ಸುಳ್ಳಪ್ಪನ ಪರಮ ಭಕ್ತರು. ಅವನನ್ನೇ ಮನೆ ದೇವರಾಗಿ ಮಾಡಿಕೊಂಡುಬಿಟ್ಟಿದ್ದಾರೆ. ಅವರ ಉತ್ತರಗಳನ್ನು ನೋಡಿ. 

ವಿಜು - ಸರ್ ನಿನ್ನೆ ನಮ್ಮ ಅಜ್ಜಿ ಹೋಗಿ ಬಿಟ್ಟರು, ಆದ್ದರಿಂದ ಮಾಡಲೇ ಆಗಲಿಲ್ಲ. (ಇವನ ಮನೆಯಂತೂ ಸಾವಿನ ಮನೆ )

ಸರು - ಸರ್, ನನಗೆ ತುಂಬಾ ಜ್ವರ ಬಂದು ಬಿಟ್ಟಿತ್ತು. ಸ್ವಲ್ಪ ಕೆಮ್ಮುತ್ತ, ಇನ್ನು ಇದೆ ಸರ್, ಆದರೂ ತಪ್ಪಿಸಿಕೊಳ್ಳಬಾರದು ಎಂದು ಬಂದೆ ಸರ್. ನಾಳೆ ಕೊಟ್ಟುಬಿಡುತ್ತೀನಿ. (ಇದಂತೂ ಖಾಯಿಲೆಯ ಹುಡುಗಿ)

ವೆಂಕಿ - ಸರ್, ನಮ್ಮನೆ ನಾಯಿ ಹಾಳೆಗಳ ಮೇಲೆಲ್ಲಾ ಗಲೀಜು ಮಾಡಿ ಬಿಟ್ಟಿತು. ಈಗ ಹೊಸದು ಪ್ರಾರಂಭಿಸಿದ್ದೇನೆ. ನಾಳೆ ಕೊಟ್ಟುಬಿಡುವೆ ಸರ್. (ಇವನು ನಾಯಿ ಸಾಕಿಕೊಂಡಿರುವುದೇ ಇಂತಹ ಕೆಲಸಕ್ಕೆ)

ಸೀನ - ನಮ್ಮನೆಗೆ ನೆಂಟರು ಬಂದು ಬಿಟ್ಟಿದ್ದರು ಸರ್, ಮಾಡಕ್ಕೆ ಆಗಲೇ ಇಲ್ಲ. (ಇವರ ಮನೆ ಒಂದು ಗೆಸ್ಟ್ ಹೌಸ್ ಇದ್ದಂತೆ)

ಸಿರಿ - ಸರ್, ನಾನು ಎಲ್ಲ ಮಾಡಿ ಇನ್ನೇನು ಕೊಡಬೇಕು ಎಂದು ಕೊಂಡಿದ್ದೆ, ನಮ್ಮ ಮನೆಯ ಪಾಪು  ಹರಿದು ಹಾಕಿಬಿಟ್ಟಿತು ಸರ್. ಸ್ವಲ್ಪ ಸಮಯ ಕೊಡಿ ಸರ್, ಮಾಡಿ ಬಿಡುತ್ತೇನೆ. (ಇವನ ಮನೆಯ ಪಾಪು ಮಾಡುವ ಚೇಷ್ಟೆಗಳು ಒಂದೊಂದಲ್ಲ)

ಹರಿ - ದ್ವಿಚಕ್ರ ವಾಹನದಲ್ಲಿ ತರುತ್ತಿದ್ದೆ, ಗಾಳಿಗೆ ಹಾರಿ ಹೋಗಿ ಬಿಟ್ಟಿತು ಸರ್. ಗಾಡಿ ನಿಲ್ಲಿಸಿ, ಟ್ರಾಫಿಕ್ ಜಾಮ್ ಆಗಿ, ಪೊಲೀಸರಿಂದ ಬೈಸಿಕೊಂಡು ಹಾಗೆ ಬಂದು ಬಿಟ್ಟೆ. ಅದನ್ನು ತರಲು ಆಗಲೇ ಇಲ್ಲ ಸರ್. ಕ್ಷಮಿಸಿ. (ಇವನ ಡ್ರಾಯಿಂಗ್ ಹಾಳೆ ಒಂದು ಗಾಳಿ ಪಟ ಇದ್ದಂತೆ)

ಮೀನಾ - ಸರ್, ಎಲ್ಲಾ ಆಗಿದೆ. ಆದರೆ ತರುವುದನ್ನೇ ಮರೆತು ಬಿಟ್ಟೆ. ನಾಳೆ ತಂದು ಕೊಡುತ್ತೀನಿ. (ಪಾಪ ಆಗಲೇ ಮರೆವಿನ ಖಾಯಿಲೆ )

ವಿನು - ಯಾವುದೊ ಮುದುರಿದ ಡ್ರಾಯಿಂಗ್ ಹಾಳೆ ತೋರಿಸುತ್ತಾ, ನೋಡಿ ಚಕ್ರಕ್ಕೆ ಸಿಕ್ಕಿ ಹೇಗೆ ಆಗಿಬಿಟ್ಟಿದೆ. (ಮುದುಡಿದ ಡ್ರಾಯಿಂಗ್ ಹಾಳೆ ಯಾವಾಗ ಅರಳುವುದೋ ಕಾಣೆ)

ಬೆಟ್ಟಿ - ಅಳುತ್ತಾ, ಎಲ್ಲಾ ಮುಗಿಯುವುದರಲ್ಲಿತ್ತು, ಆದರೆ ನನ್ನ ಟಿ ಸ್ಕ್ವೇರ್ ಮುರಿದು ಹೋಯಿತು, ಅದಕ್ಕೆ ಮುಂದುವರೆಸಲು ಆಗಲೇ ಇಲ್ಲ. (ಮೊಸಳೆ ಕಣ್ಣೀರಿಗೆ ಒಳ್ಳೆಯ ಉದಾಹರಣೆ)

ಆನಿ - ಸರ್, ನೋಡಿ ನನ್ನ ಕೈಗೆ ಬ್ಯಾಂಡೇಜ್. ನಿನ್ನೆ ನಾನು ಬಿದ್ದು ಕೈ ಫ್ರಾಕ್ಚರ್ ಆಗಿ ಬಿಟ್ಟಿದೆ. ಹೇಗೆ ಸರ್ ಡ್ರಾಯಿಂಗ್ ಮಾಡುವುದು? (ಒಂದು ದಿನ ಡಾಕ್ಟರ್ ನ ಕರೆಸಿ ಇವನ ಕೈ ಪರೀಕ್ಷಿಸಬೇಕು)

ಬಿನ್ನಿ - ಸರ್, ಡ್ರಾಯಿಂಗ್ ಮಾಡುವಾಗ ಯಾರು ತೊಂದರೆ ಕೊಡಬಾರದು ಎಂದು ಬಾಗಿಲು ಹಾಕಲು ಹೋದೆ. ಆಗ ಬಾಗಿಲ ಸಂದಿಯಲ್ಲಿ ನನ್ನ ಬೆರಳು ಸಿಕ್ಕಿಹಾಕಿಕೊಂಡು ಜಜ್ಜಿ ಹೋಯಿತು. ನೋಡಿ ಇಲ್ಲಿ ಬ್ಯಾಂಡೇಜ್. ಹೀಗಾಗಿ ಮಾಡಲು ಆಗಲೇ ಇಲ್ಲ ಸರ್. (ಇವನ ಮನೆಯ ಬಾಗಿಲು ಸರಿಯಾದ ಬೆರಳನ್ನೇ ಹಿಡಿದು ಜಜ್ಜುತ್ತದೆ)

ಮೇರಿ - ಸರ್, ನಾನು ಎಲ್ಲವನ್ನು ಮುಗಿಸಿ, ಶಾರೀಗೆ ಕೊಡಲು ಹೇಳಿದ್ದೆ. ನೋಡಿ ಸರ್ ಅವಳು ಬಂದೇ ಇಲ್ಲ. ನಾನು ಬರಬಾರದು ಎಂದುಕೊಂಡು ಬಂದೆ, ಬರುತ್ತೇನೆ ಎಂದು ಅವಳು ಚಕ್ಕರ್. (ಹಾಗಲ ಕಾಯಿ, ಬೇವಿನ ಕಾಯಿ ಜೋಡಿ) 

ಜಯ - ಸರ್, ಹಾಳಾದ ಕೆ ಈ ಬಿ ಅವರು. ನಿನ್ನೆ ರಾತ್ರಿ ಪೂರ್ತಿ ನಮ್ಮ ಮನೆಯಲ್ಲಿ ಕರೆಂಟೇ ಇರಲಿಲ್ಲ. (ಕೆ ಈ ಬಿ ಅವರು ಇವಳ ಮನೆಯ ಮೇಲೆ ಕಣ್ಣಿಟ್ಟಿದ್ದಾರೆ)

ನಾನು "ಅಯ್ಯೋ ಪಾಪ, ನಿಮಗೆಲ್ಲ ಎಷ್ಟು ಕಷ್ಟ ಅಲ್ಲವೇ. ಸುಳ್ಳಪ್ಪನ ಆಣೆ, ನಿಮಗೆ ತೊಂದರೆ ಕೊಡುವುದಿಲ್ಲ. ಈಗ  ಏನೂ ಯೋಚಿಸಬೇಡಿ. ಇದು ಮೂರು ಘಂಟೆಯ ಅವಧಿಯ ತರಗತಿ. ಇಲ್ಲೇ ಕುಳಿತು ನಾನು ಕೊಡುವ ಈ ಹೊಸ ಕೆಲಸವನ್ನು ಮಾಡಿಕೊಟ್ಟು ಬಿಡಿ" ಎಂದೆ. 

ಮತ್ತೆ ಸುಳ್ಳಪ್ಪನ ಪರಮ ಭಕ್ತರು ಕೈ ನೋವು, ಕಾಲು ಉಳುಕಿದೆ, ತಲೆ ನೋವು, ಮೈಕೈ ನೋವು, ಎಂದು ನೆಪ ಹೇಳಿ ಚಾಪೆ ಕೆಳಗೆ ತೂರಿದರು. ಬ್ಯಾಂಡೇಜ್ ಹಾಕಿದವರಂತೂ ಖುಷಿಯಾಗಿದ್ದರು. 

ನಾನು ಮತ್ತೆ "ಅಯ್ಯೋ ಪಾಪ, ನಿಮಗೆಲ್ಲ ಎಷ್ಟು ಕಷ್ಟ ಅಲ್ಲವೇ. ಸುಳ್ಳಪ್ಪನ ಆಣೆ, ನಿಮಗೆ ತೊಂದರೆ ಕೊಡುವುದಿಲ್ಲ. ಈಗ  ಏನೂ ಯೋಚಿಸಬೇಡಿ" ಎಂದು, "ಈಗ ನಿಮಗೆಲ್ಲ ಒಬ್ಬೊಬ್ಬರನ್ನಾಗಿ ಕರೆದು ಕೆಲವು ಪ್ರಶ್ನೆಗಳನ್ನು ಕೇಳುತ್ತೇನೆ, ಉತ್ತರ ಹೇಳಿಬಿಡಿ. ಅದಕ್ಕೆ ಅಂಕಗಳನ್ನು ಕೊಡುತ್ತೇನೆ" ಎಂದು ರಂಗೋಲಿ ಕೆಳಗೆ ತೂರಿದೆ. 


No comments:

Post a Comment