Saturday, June 5, 2021

ಮಳೆಯ ನೆನಪು 

ನಾನು ಆಗಿನ್ನೂ ಹದಿ ಹರೆಯದ ಅಂಚಿನಲ್ಲಿದ್ದೆ. ತಂದೆಯವರ ಯಾವುದೋ ಕೆಲಸಕ್ಕೆ ಶೃಂಗೇರಿಗೆ ಹೋಗಬೇಕಿತ್ತು. ಖುಷಿಯಿಂದ ಊರುಗಳನ್ನು ಸುತ್ತಿಬರಬಹುದು ಎಂದು ಹೊರಟುಬಿಟ್ಟೆ. ನನಗೆ ಊರು ಸುತ್ತುವ ಹವ್ಯಾಸ, ಹೇಗಿದ್ದರೂ ಶೃಂಗೇರಿ ಗೆ ಬಂದಿರುವೆ, ಹೊರನಾಡನ್ನು ನೋಡಿಬಿಡೋಣ ಎಂದು ಹೊರಟು ಬಿಟ್ಟೆ. ಒಬ್ಬನೇ ಹೋಗಲು ನನಗೇನು ಬೇಸರವಿರಲಿಲ್ಲ. ಆಗೆಲ್ಲ ಕ್ಯಾಬ್ ಇತ್ಯಾದಿಗಳು ಇರಲಿಲ್ಲ, ಹೀಗಾಗಿ ಅಲ್ಲಿಯ ಪ್ರೈವೇಟ್ ಬಸ್ ಒಂದರಲ್ಲಿ ಕಳಸಕ್ಕೆ ಹೋಗಿ ಅಲ್ಲಿಂದ ಹೊರನಾಡಿಗೆ ಹೋಗೋಣ ಎಂದು ಹೊರಟೆ. ಕಳಸ ಬಂತು ಅಲ್ಲಿ ಇಳಿದು ಅಲ್ಲಿಯೇ ಯಾರನ್ನೋ ಹೊರನಾಡಿಗೆ ಹೇಗೆ ಹೋಗುವುದು ಎಂದು ಕೇಳಿ ಆ ದಾರಿಯಲ್ಲಿ ನಡೆಯುತ್ತಾ ಹೊರಟೆ. 

ಆಗ ಮಳೆ ಶುರುವಾಯಿತು. ನಾನು ಮಳೆ ಬೆಂಗಳೂರಿನಂತೆ, ಸ್ವಲ್ಪ ಹೊತ್ತಿಗೆ ನಿಂತು ಬಿಡುತ್ತದೆ ಎಂದು ಕೊಂಡಿದ್ದೆ. ಆದರೆ ಅದು ನಿಲ್ಲಲೇ ಇಲ್ಲ. ಹೊಲಗದ್ದೆಗಳ ನಡುವೆ ನಿರ್ಜನ ರಸ್ತೆಯಲ್ಲಿ ನಾನು ಹೋಗುತ್ತಿದ್ದೆ. ನಿಲ್ಲಲು ಮನೆಗಳೂ ಇಲ್ಲ. ಆಗ ಹೊರನಾಡಿಗೆ ಬಸ್ಸೂ ಇರಲಿಲ್ಲ. ನದಿಗೆ ಬ್ರಿಜ್ ಇರಲಿಲ್ಲ. ನದಿಯನ್ನು ತೆಪ್ಪದಲ್ಲಿ ದಾಟಬೇಕಿತ್ತು. ಮಳೆಯಲ್ಲಿ ಪೂರ್ತಿ ತೊಯ್ದಿದ್ದೆ. ತಂದಿದ್ದ ಬಟ್ಟೆಬರೆಗಳ  ಚೀಲ ಪ್ಲಾಸ್ಟಿಸಿನೊಳಗೆ ಇದ್ದಿದ್ದರಿಂದ ಅದು ಭದ್ರವಾಗಿತ್ತು. ಹೀಗೆ ನಡೆದು ಹೋಗುತ್ತಿದ್ದಾಗ ಯಾರೋ ಬೈಕಿನಲ್ಲಿ ಬಂದರು. ಅವರಾಗಿಯೇ ನಿಲ್ಲಿಸಿ "ಎಲ್ಲಿಗೆ" ಎಂದರು. ಹೊರನಾಡಿಗೆ ಎಂದೆ. ನಗುತ್ತ ತಲೆ ಚಚ್ಚಿಕೊಂಡು, ಹೀಗಲ್ಲ, ಇಲ್ಲಿ ಹೊಲಗದ್ದೆಗಳ ನಡುವೆ ಹೋಗಬೇಕು, ನೀವು ರಸ್ತೆಯಲ್ಲಿ ಹೊರಟರೆ ಊರೆಲ್ಲ ಸುತ್ತಿ ನಾಳೆ ಸೇರುತ್ತೀರಿ ಎಂದರು. ನನ್ನ ಸ್ಥಿತಿ ನೋಡಿ ಅವರಿಗೆ ಏನನ್ನಿಸಿತೋ, "ನನ್ನ ಜೊತೆ ಬಾ, ನಾನು ಕರೆದುಕೊಂಡು ಹೋಗುತ್ತೇನೆ" ಎಂದು ಕೂಡಿಸಿಕೊಂಡರು. ಅವರು ಅಲ್ಲಿಯೇ ಹತ್ತಿರ ಇದ್ದ ಒಂದು ಸಣ್ಣ ಮನೆಗೆ ಕರೆದುಕೊಂಡು ಹೋಗಿ, "ಮೊದಲು ಬಟ್ಟೆ ಬದಲಿಸು, ನಂತರ ಹೊರನಾಡಿಗೆ ಹೋಗುವಿಯಂತೆ" ಎಂದರು. ಅವರು ಮನೆಯವರೊಂದಿಗೆ ಅಲ್ಲಿನ ಕನ್ನಡದಲ್ಲಿ ನನ್ನ ವಿಷಯ ಹೇಳಿ ನಗುತ್ತಿದ್ದುದು, ಆ ಮನೆಯವರು, "ಯಾಕೆ ನಗುತ್ತಿ, ಇನ್ನೂ ಹುಡುಗ, ಹೋಗಲಿ ನೀನೇ ಅವನನ್ನು ಅಲ್ಲಿಗೆ ಕರೆದುಕೊಂಡು ಹೋಗು" ಎಂದು ಹೇಳುತ್ತಿದ್ದುದು ನನಗೆ ಗೊತ್ತಾಯಿತು. ಆಮೇಲೆ ಮಳೆ ಸ್ವಲ್ಪ ಕಡಿಮೆಯಾಯಿತು. ಅವರು ಹೊದ್ದುಕೊಳ್ಳಲು ಒಂದು ಗೋಣಿ, ಒಂದು ಛತ್ರಿ ಕೊಟ್ಟು, ನಡಿ ಹೋಗೋಣ, ನಾನೂ ಬರುತ್ತೇನೆ, ನಾನೂ ಅಲ್ಲಿಗೆ ಹೋಗಿ ಬಹಳ ದಿನವಾಯಿತು ಎಂದು ನನ್ನೊಂದಿಗೆ ಹೊರಟರು. ದಾರಿಯಲ್ಲಿ ನೀರು ತುಂಬಿದ ಗದ್ದೆಗಳ ಬದುಗಳ ಮೇಲೆ ನಡೆಸಿಕೊಂಡು ಹೊರಟರು. ದಾರಿಯಲ್ಲಿ ಕೆಲವು ಗದ್ದೆಗಳ ನಡುವೆ ಬೊಂಬಿನ ಗೇಟ್ ಇರುತ್ತಿತ್ತು, ಅವನ್ನು ತೆಗೆದು ನಂತರ ಮತ್ತೆ ಹಾಕಿ ನಡೆಯುತ್ತಿದ್ದರು. ದಾರಿಯಲ್ಲಿ ಸಿಕ್ಕಿದ ಮರಗಳ ಹೆಸರೆಲ್ಲವನ್ನು ಹೇಳುತ್ತಿದ್ದರು. ಅವರು ತೋರಿಸಿದ ಹೆಬ್ಬಲಸು ಎಂಬ ದೊಡ್ಡ ಮರದ ಹೆಸರು, ದೃಶ್ಯ ಇಂದೂ ನೆನಪಿದೆ. ಮಳೆ ಬಿಟ್ಟು ಬಿಟ್ಟು ಬರುತ್ತಿತ್ತು. ಆಗ ಭದ್ರಾ ನದಿ ಸಿಕ್ಕಿತು. ಮಳೆ ತೆಪ್ಪ ಇರುತ್ತದೋ ಇಲ್ಲವೋ ಎಂದರು. "ಆ ನದಿಯಲ್ಲಿ ಈಜು ಎಂದರೆ ಏನು ಮಾಡುವುದು" ಎಂದು ನನಗೆ ಭಯವಾಯಿತು. "ನನಗೆ ಈಜು ಬರುವುದಿಲ್ಲ" ಎಂದು ಮೊದಲೇ ಹೇಳಿಬಿಟ್ಟೆ. ಅದೃಷ್ಟಕ್ಕೆ ತೆಪ್ಪ ಇತ್ತು. ಅದರೊಳಗೆ ಕುಳಿತು ತುಂಬಿ ಹರಿಯಯುತ್ತಿದ್ದ ನದಿಯನ್ನು ಗಡಗಡ ನಡುಗುತ್ತಾ ದಾಟಿದೆವು. 

ಅಲ್ಲಿಂದ ಮುಂದೆ ನಾನು ನೋಡಿದ ಹೊರನಾಡು ಸ್ವರ್ಗದಂತಿತ್ತು.ಸಣ್ಣ ಊರು. ಬಸ್ ಇಲ್ಲದ್ದರಿಂದ ಗಲಾಟೆ ಇರಲಿಲ್ಲ. ಜನಜಂಗುಳಿಯೂ ಇರಲಿಲ್ಲ. ನಾನು ದೊಡ್ಡ ಊರು, ಹೋಟೆಲ್ಗಳು, ರೂಮುಗಳು ಇರುತ್ತದೆ  ಎಂದುಕೊಂಡುಬಿಟ್ಟಿದ್ದೆ.ನಾನೊಬ್ಬನೇ ಬಂದಿದ್ದರೆ ನಿಜವಾಗಿಯೂ ತಬ್ಬಿಬ್ಬಾಗಿ ಬಿಡುತ್ತಿದ್ದೆ.  ಅಲ್ಲಿಯೇ ಇದ್ದ ಸುಂದರವಾದ ದೇವಾಲಯಕ್ಕೆ ಕರೆದುಕೊಂಡು ಹೋಗಿ ಅಲ್ಲಿನ ಜನರೊಡನೆ ಮಾತನಾಡಿ ನನಗೆ, ಅವರಿಗೆ ಒಂದೊಂದು ರೂಮನ್ನು ಕೊಡಿಸಿದರು. ಅದು ದೇವಸ್ಥಾನಕ್ಕೆ ಅಂಟಿದಂತೆಯೇ ಇತ್ತು. ಆಮೇಲೆ ಮಳೆ ಜೋರಾಗಿ ಪ್ರಾರಂಭವಾಯಿತು. ರಾತ್ರಿ ಅಲ್ಲಿಯೇ ಊಟವಾಯಿತು. ದೇವಸ್ಥಾನದ ಭೋಜನ ಮೃಷ್ಟಾನ್ನದಂತಿತ್ತು. ಅನ್ನಪೂರ್ಣೇಶ್ವರಿಯ ದಯೆ ಎಂದುಕೊಂಡೆ. ಮಳೆ ರಾತ್ರಿಯೆಲ್ಲಾ ಬರುತ್ತಲೇ ಇತ್ತು. ನನಗೆ ಮಳೆ ಬಂದು ನದಿ ತುಂಬಿ ಪ್ರವಾಹ ಬಂದುಬಿಟ್ಟರೆ ಹಿಂತಿರುಗಿ ಹೇಗೆ ಹೋಗುವುದು ಎಂದು ಭಯವಾಗಿತ್ತು. ಒಬ್ಬನೇ ಬೇರೆ, ಅನ್ನಪೂರ್ಣೇಶ್ವರಿದೇವಿಯೇ ಕಾಪಾಡುತ್ತಾಳೆ ಎಂದು ಹಾಗೆಯೆ ನಿದ್ದೆಗೆ ಜಾರಿದ್ದೆ. ಬೆಳಿಗ್ಗೆ ಎದ್ದು ಸ್ನಾನ ಎಲ್ಲವನ್ನು ಮುಗಿಸಿ, ದೇವಿಯನ್ನು ಕಣ್ತುಂಬಾ ನೋಡಿ, ಬೆಳಕಿದ್ದಾಗಲೇ ಹೊರಟುಬಿಡುವುದು ಎಂದು ಕೊಂಡೆ. ನನ್ನ ಜೊತೆ ಬಂದಿದ್ದವರ ಹೆಸರು ಹೆಬ್ಬಾರ್ ಎಂದು. "ನನಗೆ ಸ್ವಲ್ಪ ಅರ್ಜೆಂಟ್ ಕೆಲಸ ಇದೆ, ಬೇಗನೆ ಹೋರಾಡಲು ಆಗುವುದೇ" ಎಂದು ಕೇಳಿದೆ. ಬೆಳಿಗ್ಗೆ ಊಟ ಆದಕೂಡಲೇ ಹೊರಟು ಬಿಡೋಣ, ಕಳಸದಲ್ಲಿ ಬೇಕಾದಷ್ಟು ಬಸ್ ಸಿಗುತ್ತದೆ ಎಂದರು. ಮತ್ತೆ ಮಳೆ. ದೇವಸ್ಥಾನದಲ್ಲೇ ಇದ್ದುದರಿಂದ ಅಲ್ಲಿ ಓಡಾಡಿದಾಗಲೆಲ್ಲ ಅನ್ನಪೂರ್ಣೇಶ್ವರಿಗೆ  ನಮಸ್ಕಾರ ಮಾಡಿ ಕಾಪಾಡು ಎಂದು ಬೇಡಿಕೊಳ್ಳುತ್ತಿದ್ದೆ. ಊಟ ಆಯಿತು. ನಂತರ ಕಡೆಯ ಬಾರಿ ದೇವಿಗೆ ನಮಸ್ಕರಿಸಿ ಹೊರಟೆವು. 

ನದಿಯು ಕಪ್ಪಾಗಿ ಹರಿಯುತ್ತಿತ್ತು. ಕುದುರೆಮುಖ ಕಬ್ಬಿಣದ ಅದುರಿನ ಮಣ್ಣಿನಿಂದ ಅದು ಹೀಗೆ ಕಪ್ಪಗೆ ಕಾಣುತ್ತದೆ ಎಂದರು. ಮಳೆಗೆ ಹೆದರಿದ್ದ ನನ್ನನ್ನು ಕಂಡು "ಈ ಮಳೆ ಏನೇನೂ ಅಲ್ಲ, ಭಾರಿ ಮಳೆ ಬರುವುದನ್ನು ನೋಡಬೇಕು" ಎಂದರು. "ಈ ಮಳೆಯೇ ಸಾಕಾಗಿದೆ, ಇನ್ನು ನಿಮ್ಮ ಭಾರಿ ಮಳೆ ಬಂದರೆ? ಬೇಡಪ್ಪ ಬೇಡ" ಎಂದು ಮನದಲ್ಲೇ ಅಂದುಕೊಂಡೆ.

ದೇವರ ದಯೆಯಿಂದ ದಾಟಲು ತೆಪ್ಪ ಇತ್ತು, ಕುಳಿತು ನದಿ ದಾಟಿದೆವು. ಹೊಲಗದ್ದೆಗಳ ನಡುವೆ ನಡೆಯುತ್ತಾ ಹೆಬ್ಬಾರ ಅವರ ಮಿತ್ರರ ಮನೆಗೆ ಬಂದೆವು. ಅಲ್ಲಿ ಸ್ವಲ್ಪ ಹೊತ್ತು ಇದ್ದು ನಂತರ ಹೆಬ್ಬಾರ್ ಅವರು ನನ್ನನ್ನು ಕಳಸಕ್ಕೆ ತಂದು ಬಿಟ್ಟರು. ನಾನು ಅದೇನು ಪುಣ್ಯ ಮಾಡಿದ್ದೇನೋ, ಅನ್ನಪೂರ್ಣೇಶ್ವರಿಯ ದಯೆಯಿಂದ, ಅವರು ನನ್ನೊಂದಿಗೆ ಬಂದು ನನಗೆ ಇಷ್ಟೆಲ್ಲಾ ಸಹಾಯಮಾಡಿದರು. ಆಗ ಫೋನ್ ಯಾವುವೂ ಇರಲಿಲ್ಲ. ನನಗೂ ಅಷ್ಟೊಂದು, ಅಂದರೆ ವಿಳಾಸ ಕೇಳಿ ಬರೆದುಕೊಳ್ಳುವಷ್ಟು, ಪರಿಪಕ್ವತೆ ಇರಲಿಲ್ಲ. ಸಧ್ಯ ಅವರಿಗೆ ಧನ್ಯವಾದಗಳನ್ನು ಮನಃಪೂರ್ವಕವಾಗಿ ಹೇಳಿ ನಮಸ್ಕಾರ ಮಾಡಿದೆ. 

ಅಂತೂ ಕಲಾಸದಿಂದ ಶೃಂಗೇರಿಗೆ ಬಂದೆ. ಮಲೆನಾಡಿನ ಮಳೆಯ ಅನುಭವವನ್ನು ಚೆನ್ನಾಗಿ ಅನುಭವಿಸಿದೆ. ನಾನು ನಂತರ ಹೊರನಾಡಿಗೆ ಹೋಗಿಲ್ಲ. ಈಗ ಅದಕ್ಕೆ ರಸ್ತೆ, ಬ್ರಿಜ್ ಎಲ್ಲಾ ಆಗಿ ತುಂಬಾ ಕಮರ್ಷಿಯಲ್ ಆಗಿ ಬಿಟ್ಟಿದೆ ಎಂದು ಯಾರೋ ಹೇಳಿದರು. ಆದರೆ ಇಂದಿಗೂ ಹೊರನಾಡು ಎಂದರೆ ಅಂದಿನ ಚಿಕ್ಕ ಚೊಕ್ಕ ಮುದ್ದಾದ ಹಳ್ಳಿ ಎಂದೇ ನನ್ನ ಭಾವನೆ.  

No comments:

Post a Comment