Saturday, June 5, 2021

ನನಗೆ ಪತಿ ಬೇಕು

 ನನಗೆ ಪತಿ ಬೇಕು 

ಮಿತ್ರನ ಮನೆಯಲ್ಲಿ ಮಕ್ಕಳ ಬಗ್ಗೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದೆವು. ಆಗ ಮಿತ್ರನ ಹೆಂಡತಿ ಕಾವ್ಯ ಒಂದು ಘಟನೆಯನ್ನು ಹೇಳಿದಳು. ನಕ್ಕು ನಕ್ಕು ಸುಸ್ತಾಯಿತು. ಅವಳು ಹೇಳಿದಂತೆ ನಿಮಗೂ ಹೇಳುತ್ತೇನೆ ಕೇಳಿ. 

 ನಾನು ಒಂದು ದಿನ ನನ್ನ ಗೆಳತಿ ಸುಹಾಸಿನಿಯ  ಮನೆಗೆ ಹೋಗಿದ್ದೆ. ಅವಳ ಚಿಕ್ಕ ಮಗಳು ಸುಧಾ ನನಗೆ ತುಂಬಾ ಇಷ್ಟ. ಅವಳೊಂದಿಗೆ ಕಾಲ ಕಳೆದರೆ ಹೊತ್ತೇ ಗೊತ್ತಾಗುತ್ತಿರಲಿಲ್ಲ. ಅಂದು ಸುಹಾಸಿನಿ, ಸುಧಾ ಇಬ್ಬರೂ ಮನೆಯಲ್ಲೇ ಇದ್ದರು. ಹೀಗೆ ಹರಟೆ, ಸುಧಾಳೊಂದಿಗೆ ಮಾತುಕತೆಗಳು ನಡೆಯುತ್ತಿದ್ದವು. ಇದ್ದಕ್ಕಿದ್ದಂತೆ ಸುಹಾಸಿನಿಗೆ ಒಂದು ಫೋನ್ ಬಂತು. ಅವಳು ಮಾತನಾಡುತ್ತಾ, "ಈಗ ಬಂದೆ" ಎಂದು ಹೇಳಿದಳು. ನಂತರ ನನ್ನ ಬಳಿ ಬಂದು "ಕಾವ್ಯಾ, ಇಲ್ಲೇ ಹತ್ತಿರದಲ್ಲಿ ಒಂದು ಮುಖ್ಯ ಕೆಲಸ ಇದೆ, ಹೋಗಿ ಬಂದು ಬಿಡುತ್ತೇನೆ, ನೀನು ಇಲ್ಲೇ ಇರು" ಎಂದಳು. "ನಾನೂ ಹೊರಟು ಬಿಡುತ್ತೇನೆ" ಎಂದರೂ ಬಿಡದೆ, "ಕೇವಲ ಅರ್ಧಗಂಟೆ ಕೆಲಸ, ಬೇಕಾದರೆ ಸುಧಾಳೊಂದಿಗೆ ಆಡಿಕೊಂಡಿರು" ಎಂದಳು. "ನೀನು ಆಂಟಿಯೊಂದಿಗೆ ಇರ್ತಿಯೇನೇ" ಎಂದರೆ "ಓ ನಾನು ಇರುತ್ತೇನೆ" ಎಂದು ಸುಧಾ ಖುಷಿಯಿಂದ ಹೇಳಿದಳು. ನಾನೂ ಒಪ್ಪಿಕೊಂಡೆ. ಹೀಗೆ ಸುಧಾಳೊಂದಿಗೆ ಮಾತು, ಆಟ, ಅವಳ ಮುದ್ದು ಮಾತುಗಳು ಖುಷಿಕೊಟ್ಟವು. 

ಇದ್ದಕ್ಕಿದ್ದಂತೆ ಸುಧಾ ಏನನ್ನೋ ನೆನಸಿಕೊಂಡು "ಪತಿ ಎಲ್ಲಿ ಬರಲೇ ಇಲ್ಲ" ಎಂದಳು. ನಾನು, "ಯಾರೇ ಅದು ಪತಿ" ಎಂದೆ. "ಅದೇ, ಪತಿ, ಈಗ ಬಂದು ಚಿಕ್ಕ ಕಾರನ್ನು ಕೊಡುತ್ತೇನೆ ಎಂದಿದ್ದರು, ಬಂದೆ ಇಲ್ಲ" ಎಂದಳು. "ಯಾರೇ ಅದು ನಿನ್ನ ಪತಿ" ಎಂದು ಮತ್ತೆ ಕೇಳಿದರೆ "ಅವರೇ ಪತಿ, ನಂಗೆ ಅವರನ್ನ ಕಂಡರೆ ಇಷ್ಟ" ಎಂದಳು ಮುದ್ದುಮುದ್ದಾಗಿ. ನನಗೆ ನಗು ಆಶ್ಚರ್ಯ ಎಲ್ಲಾ ಆಯಿತು. ಈಗ ಸುಧಾ ಅಳಲು ಶುರು ಮಾಡಿದಳು. "ಪತಿ ಇನ್ನೂ ಬಂದೇ ಇಲ್ಲಾ" ಎಂದು ಅಳುತ್ತಾ ಗಲಾಟೆ ಮಾಡತೊಡಗಿದಳು. ನಾನು "ನೀನಿನ್ನೂ ಚಿಕ್ಕವಳು, ಹಾಗೆಲ್ಲಾ ಪತಿ ಎಂದು ಹೇಳಬಾರದು" ಎಂದರೆ ಇನ್ನೂ ರಂಪ ಮಾಡತೊಡಗಿದಳು. ನನಗೆ ಏನೂ ತೋಚದೆ ಸುಹಾಸಿನಿಗೆ ಫೋನ್ ಮಾಡಿ ಎಲ್ಲಾ ವಿಷಯ ಹೇಳಿದೆ. ಅವಳು ನಗುತ್ತಾ "ಅಯ್ಯೋ ಪತಿ ಎಂದರೆ ಗಂಡ ಅಲ್ಲವೇ, ನನ್ನ ತಮ್ಮ, ವೆಂಕಟಾಚಲಪತಿ. ಅವನನ್ನು ನಾವು ಪತಿ ಎಂದು ಕರೆಯುತ್ತೇವೆ" ಎಂದಾಗ ನನಗೆ ನಗು ಬಂತು. ನಾನು ಕೂಡಲೇ ಸುಹಾಸಿನಿಗೆ "ಒಂದು ಪುಟ್ಟ ಕಾರನ್ನು ತಂದುಕೊಡು, ಪತಿ ಕೊಟ್ಟದ್ದು ಎಂದು ಹೇಳು" ಎಂದು ಫೋನ್ನಲ್ಲಿ ಹೇಳಿದೆ. ಈಗ ಸುಧಾಗೆ, "ಈಗ ತಾನೇ ನಾನು ಪತಿಗೆ ಫೋನ್ ಮಾಡಿದ್ದೆ, ಅವರಿಗೆ ತುಂಬಾ ಕೆಲಸವಿದೆಯಂತೆ, ನಿಮ್ಮ ಅಮ್ಮ ಬರುತ್ತಾಳಲ್ಲ ಅವಳ ಕೈಲಿ ಕಾರನ್ನು ಕಳಿಸುತ್ತೇನೆ ಎಂದು ಹೇಳಿದ್ದಾರೆ" ಎಂದಾಗ ಅಳು ನಿಲ್ಲಿಸಿದಳು. ಸುಹಾಸಿನಿ ಬರುವವರೆಗೂ ಸುಧಾಳ ನೆಚ್ಚಿನ ಪತಿಯ ಬಗ್ಗೆ ಮಾತನಾಡುತ್ತಾ ಕಾಲ ಕಳೆದೆ. 

"ಇದು ಪತಿಯ ಕತೆ" ಎಂದು ಹೇಳಿ ಕಾವ್ಯ ನಕ್ಕಳು. ನಾವು ಆ ಮಗುವನ್ನು ಅವಳ ಪತಿಯನ್ನು ಕಲ್ಪಿಸಿಕೊಂಡು ಮನಸಾರೆ ನಕ್ಕವು. 

- ಬಿ ಎಸ್ ಜಗದೀಶ ಚಂದ್ರ - 

No comments:

Post a Comment