Sunday, April 26, 2020

ಸದುದ್ದೇಶದ ವ್ಯಕ್ತಿತ್ವ

ಸದುದ್ದೇಶದ ವ್ಯಕ್ತಿತ್ವ

ಅಧಿಕಾರಿಯ ಕೊಠಡಿಯಿಂದ ಹೊರಬಂದ ರಾಮಣ್ಣ ಕುದಿಯುತ್ತಿದ್ದರು. ಯಥಾಪ್ರಕಾರ ಒಳಗೆ ರಾಮಣ್ಣನಿಗೆ ಬೈಗುಳಗಳಾಗಿದ್ದವು. ಕೆಲಸ ಸರಿಯಾಗಿ ಮಾಡುವುದಿಲ್ಲ ಎಂದು ಅಧಿಕಾರಿ ಬೈಯ್ಯುತ್ತಾರೋ, ಅಧಿಕಾರಿ ಸರಿ ಇಲ್ಲ ಎಂದು ರಾಮಣ್ಣ ಕೆಲಸ ಮಾಡುವುದಿಲ್ಲವೋ ಎಂದು ಒಂದು ಗೊಂದಲವೇ ಆಗಿತ್ತು. ಇದು ಯಾವ ಮಟ್ಟಕ್ಕೆ ಹೋಗಿತ್ತೆಂದರೆ ರಾಮಣ್ಣ ಈಗ ಯಾವ ಕೆಲಸವನ್ನೂ ಸರಿಯಾಗಿ ಮಾಡುತ್ತಿರಲಿಲ್ಲ. ಸದಾ ಕಚೇರಿ, ಅಧಿಕಾರಿಗಳನ್ನು ಬೈಯುವುದೇ ಅವರ ಕಾಯಕವಾಗಿತ್ತು.
ರಾಮಣ್ಣ ಒಳ್ಳೆಯವರೇ. ಯಾವುದೊ ಕೆಟ್ಟ ಘಳಿಗೆಯಲ್ಲಿ ಅವರು ಕೆಲಸ ಮಾಡಲಿಲ್ಲ ಎಂದು ಆಪಾದನೆ ಬಂದಾಗ ಅದನ್ನೇ ತಲೆಗೆ ಹಚ್ಚಿಕೊಂಡು ತಪ್ಪುಗಳನ್ನೇ ಮಾಡುತ್ತಿದ್ದರು. ಹೀಗೆಯೇ ಅದು ಹೆಮ್ಮರವಾಗಿ ರಾಮಣ್ಣನಿಗೆ ಈಗ ಭಡ್ತಿಯೂ ಇಲ್ಲ, ಇಂಕ್ರಿಮೆಂಟು ಇಲ್ಲ. ಇದು ಅವರನ್ನು ಇನ್ನೂ ಘಾಸಿಗೊಳಿಸಿ ಈಗ ಕೆಲಸಕ್ಕೆಬಾರದವನು ಎಂಬ ಮಟ್ಟಕ್ಕೆ ತಳ್ಳಿತ್ತು . ಜೊತೆಗೆ ರಾಮಣ್ಣನಿಗೆ ಮಾಡುತ್ತಿದ್ದ ಕೆಲಸದಲ್ಲಿ ನೆಮ್ಮದಿ ಸಿಗುತ್ತಿರಲಿಲ್ಲ. ಅವರಿಗೆ ಅಕೌಂಟ್ಸ್ ವಿಭಾಗದಲ್ಲಿ ಕೆಲಸ ಕೊಟ್ಟಿದ್ದರು. ಅವರಿಗೋ ಲೆಕ್ಕ ಪತ್ರಗಳು ಎಂದರೆ ಒಂದು ರೀತಿಯ ಅಲರ್ಜಿ. ಇವೆಲ್ಲವೂ ಸೇರಿ ಈಗ ರಾಮಣ್ಣನನ್ನು ಹುಚ್ಚನನ್ನಾಗಿ ಮಾಡಿಬಿಟ್ಟಿತ್ತು. ಅಲ್ಲಿದ್ದ ಅಧಿಕಾರಿಗಳಿಗೆ ರಾಮಣ್ಣನ ಹಿಂದಿನ ಆಗುಹೋಗುಗಳನ್ನು ತಿಳಿದುಕೊಂಡು ಅದಕ್ಕೆ ಸ್ಪಂದಿಸುವಷ್ಟು ಸಹನೆ ಇರಲಿಲ್ಲ.
ಈಗ ಕಚೇರಿಗೆ ನಾಗರಾಜ್ ಅವರು ಹೊಸದಾಗಿ ಮ್ಯಾನೇಜರ್ ಆಗಿ ಬಂದಿದ್ದರು. ಬಹಳ ಸಾಧು ಮನುಷ್ಯ. ಸಾಧು ಎಂದರೆ ಪುಕ್ಕಲು ಮನುಷ್ಯನಲ್ಲ, ಬಹಳ ಕಟ್ಟುನಿಟ್ಟಿನವರೇ. ಆದರೆ ಅಧಿಕಾರ ಚಲಾಯಿಸದೆ ಜವಾನನಿಂದ ಹಿಡಿದು ಅಸಿಸ್ಟಂಟ್ ಮ್ಯಾನೇಜರ್ ವರೆಗೆ  ಎಲ್ಲರನ್ನೂ  ಚೆನ್ನಾಗಿ ನೋಡಿಕೊಂಡು ಕೆಲಸತೆಗೆಸುವ ಕಲೆ ಅವರಿಗೆ ಚೆನ್ನಾಗಿ ಸಿದ್ಧಿಸಿತ್ತು.
ನಾಗರಾಜ್ ಅವರದು ಪರೋಪಕಾರದ ವ್ಯಕ್ತಿತ್ವ. ಸದಾ ಇತರರನ್ನು ತಾವೇ ಅವರ ಜಾಗದಲ್ಲಿದ್ದರೆ ಹೇಗೋ ಹಾಗೆ ಯೋಚಿಸಿ ಅವರಿಗೆ ಸಾಧ್ಯವಾದಷ್ಟೂ ಸಹಾಯ ಮಾಡುತ್ತಿದ್ದರು. ಹಾಗೆಂದು ಯಾರೂ ಅವರನ್ನು ಹಗುರವಾಗಿ ತೆಗೆದುಕೊಳ್ಳುವಂತಿರಲಿಲ್ಲ. ಕೆಲಸ ಎಂದಮೇಲೆ ಕೆಲಸ, ಸರಿಯಾಗಿ ಮಾಡಬೇಕು. ಆಗದಿದ್ದರೆ ಸರಿಯಾದ ಕಾರಣ ಕೊಡಬೇಕು. ಅವರದು ಒಂದು ರೀತಿಯ ಸದುದ್ದೇಶ ವ್ಯಕ್ತಿತ್ವ, ಅಂದರೆ ಎಲ್ಲರೂ ಸಂತೋಷದಿಂದ ಇರಬೇಕು, ಕೆಲಸವನ್ನು ತಮ್ಮ ಮನೆಯದೇ ಎಂಬಂತೆ ಮಾಡಬೇಕು ಇತ್ಯಾದಿ ಅವರ ಮನಸಿನಲ್ಲಿದ್ದವು. ಕೆಲಸ ಚೆನ್ನಾಗಿ ಮಾಡಿ, ನೀವೂ ಹೆಸರು, ಭಡ್ತಿ ತೆಗೆದುಕೊಳ್ಳಿ, ನಮಗೂ, ಕಚೇರಿಗೂ ಒಳ್ಳೆ ಹೆಸರು ತನ್ನಿ, ಇದು ಅವರ ಧ್ಯೇಯ ವಾಕ್ಯ. ಹೀಗಾಗಿ ಕಚೇರಿಯಲ್ಲಿ ಅವರು ಬಹಳ ಜನಪ್ರಿಯ ವ್ಯಕ್ತಿಯಾಗಿದ್ದರು. ಬಾಸ್ ಆದರೂ ಎಲ್ಲರಿಗೂ ಹಿರಿಯಣ್ಣನೂ ಆಗಿದ್ದರು. ಅವರ ಸದುದ್ದೇಶದ ವ್ಯಕ್ತಿತ್ವ, ಪರೋಪಕಾರ ಗುಣ ಅವರನ್ನು ಒಬ್ಬ ಶ್ರೇಷ್ಠ ವ್ಯಕ್ತಿಯನ್ನಾಗಿ ಮಾಡಿದ್ದವು.
ಈ ನಾಗರಾಜ್ ಅವರಿಗೆ ನಮ್ಮ ರಾಮಣ್ಣನ ಕೆಲಸದ ಮೇಲೆ ಕಣ್ಣುಬಿತ್ತು. ರಾಮಣ್ಣನ ಕಾರ್ಯವೈಖರಿಯನ್ನು ನೋಡಿ ಇತರರನ್ನು ಕರೆಸಿ ಎಲ್ಲ ವಿಷಯಗಳನ್ನು ಕಲೆಹಾಕಿದರು. ರಾಮಣ್ಣನನ್ನು ಒಂದು ದಿನ ಕರೆದರು. ರಾಮಣ್ಣ, ಈ ಯಪ್ಪನಕೈಲೂ ಬೈಸಿಕೊಳ್ಳಬೇಕು ಅಂತ ಅನ್ನಿಸುತ್ತೆ ಎನ್ನುತ್ತಾ ಎದ್ದು ಹೋದ. ನಾಗರಾಜ್ ಅವರು ರಾಮಣ್ಣನಿಗಿಂತ ಚಿಕ್ಕವರು. ಹೀಗಾಗಿ ಅವನಿಗೆ ಗೌರವಕೊಟ್ಟು ಚೆನ್ನಾಗಿ ಮಾತನಾಡಿಸಿದರು. ರಾಮಣ್ಣನಿಗೆ ಆಶರ್ಯವಾಯಿತು. ಇದುವರಿಗೂ ಬೈಸಿಕೊಂಡಿದ್ದೇ ಆಗಿತ್ತು, ಇದು ನಿಜವಾ ಕನಸಾ ಎಂದು ಮೈ ಚಿವುಟಿಕೊಂಡ. ನಿಜವೆಂದು ಗೊತ್ತಾದಮೇಲೆ ಅವನಿಗೆ ನಾಗರಾಜ್ ಅವರ ಮೇಲೆ ತುಂಬಾ ಒಳ್ಳೆಯ ಅಭಿಪ್ರಾಯ ಬಂದಿತು. ಅವರ ಬಳಿ ತನ್ನ ಇಲ್ಲಿಯವರೆಗಿನ ಕತೆಯನ್ನೆಲ್ಲ ಹೇಳಿಕೊಂಡು ಮನಸು ಹಗುರ ಮಾಡಿಕೊಂಡ. ಆಗ ನಾಗರಾಜ್ ಅವರು ನಿಮಗೆ ಇಷ್ಟವಾದ ವಿಭಾಗ ಯಾವುದು? ಅಲ್ಲಿ ನಿಮ್ಮನ್ನು ವರ್ಗಾವಣೆ ಮಾಡಲು ಸಾಧ್ಯವಾದರೆ ನೋಡುತ್ತೇನೆ, ಆಗದಿದ್ದರೆ ಬೇಜಾರು ಮಾಡಿಕೊಳ್ಳಬೇಡಿ ಎಂದರು. ನಾಗರಾಜ್ ಅವರ ಸವಿಮಾತುಗಳೇ ರಾಮಣ್ಣನಿಗೆ ಹಿತವಾಗಿದ್ದವು. ಪ್ರಯತ್ನಿಸಿ ನೋಡಿ ಎಂದು ಹೇಳಿ ಬಂದನು. ರಾಮಣ್ಣ ಹೀಗೆ ಖುಷಿಯಾಗಿದ್ದುದು ಅವನ ಸಹೋದ್ಯೋಗಿಗಳಿಗೆ ಮರೆತೇ ಹೋಗಿತ್ತು.
ರಾಮಣ್ಣನಿಗೆ ಸಮಾಜಸೇವೆ ಇಷ್ಟವಾದ ವಿಭಾಗವಾಗಿತ್ತು. ಅವನು ಅದನ್ನು ನಾಗರಾಜ್ ಅವರಿಗೆ ಹೇಳಿದ್ದ. ಈಗ ಮತ್ತೆ ನಾಗರಾಜ್ ಅವರು ರಾಮಣ್ಣನ್ನು ಕರೆದು, ನೋಡಿ ಸಮಾಜಸೇವೆ ವಿಭಾಗದಲ್ಲಿ ಒಂದು ಪೋಸ್ಟ್ ಗೆ ನಿಮ್ಮನ್ನು ಹಾಕುತ್ತೇನೆ, ನೀವು ಅಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡು ಕೆಲಸಮಾಡಿ ವರ್ಗಮಾಡಿದ ನನಗೆ, ನಿಮಗೂ ಒಳ್ಳೆಯ ಹೆಸರನ್ನು ತರಬೇಕು ಎಂದರು. ರಾಮಣ್ಣನಿಗೆ ಬಹಳ ಸಂತೋಷವಾಗಿತ್ತು. ಸಧ್ಯ ಜೀವನದ ಕೊನೆ ಘಳಿಗೆಯಲ್ಲಾದರೂ ಒಳ್ಳೆಯದಾಗುತ್ತಿದೆಯಲ್ಲ ಎಂದುಕೊಂಡು, ಖುಷಿಯಿಂದ, ಖಂಡಿತಾ ನನ್ನ ಕೈಲಾದ್ದನ್ನು ಮಾಡುತ್ತೇನೆ ಎಂದು ಹೇಳಿದ.
ಆಗ ನಾಗರಾಜ್ ಅವರು, ನಮ್ಮ ಜೀವನವನ್ನು ಒಂದು ಸದುದ್ದೇಶದಿಂದ ಅನುಭವಿಸಬೇಕು. ಆ ಸದುದ್ದೇಶವನ್ನು ನೆರವೇರಿಸಲು ನಾವು ಸಾಧ್ಯವಾದಷ್ಟೂ ಪ್ರಯತ್ನಿಸಬೇಕು. ನಮ್ಮೊಳಗಿನ ವ್ಯಕ್ತಿತ್ವವು ಈ ಸದುದ್ದೇಶಕ್ಕೆ ಪೂರಕವಾಗಿರಬೇಕು. ನಮ್ಮೊಳಗಿನ ವ್ಯಕ್ತಿತ್ವ ಯಾವುದು ಎಂಬುದನ್ನು ಅರಿತು ಅದಕ್ಕೆ ತಕ್ಕಂತೆ ಜೀವನ ನಡೆಸಿದರೆ ಅದರಿಂದ ಸಿಗುವ ಉಪಶಮನಕ್ಕೆ ಸಾಟಿಯೇ ಇಲ್ಲ. ಜಾತಿ, ಪಂಥ, ಧರ್ಮಗಳ ಸಂಕುಚಿತ ಮನೋಭಾವದಿಂದ ಹೊರಬಂದು ನಮ್ಮದೇ ವ್ಯಕ್ತಿತ್ವ ಬೆಳೆಸಿ ಅದನ್ನು ಸಾಧಿಸಲು ಪ್ರಯತ್ನಿಸಿದರೆ ಜೀವನ ಸಾರ್ಥಕವಾಗುತ್ತದೆ. ಪರೋಪಕಾರ, ಸಮಾಜ ಸೇವೆ ಇವು ನಿಮ್ಮಲ್ಲಿನ ವ್ಯಕ್ತಿತ್ವಗಳು. ಇಲ್ಲಿ ಜಾತಿ ಬೇಧವೆಣಿಸದೆ ಉದಾರ ಮನಸ್ಸಿಂದ ಸೇವೆ ಮಾಡಿದರೆ ಅದರಿಂದ ಸುಖವೇ ನಿಜವಾದ ಸುಖ. ನಿಮಗಿಂತ ನಾನು ಕಿರಿಯನಾಗಿರುವುದರಿಂದ ನಿಮಗೆ ಒಳ್ಳೆಯದಾಗಲಿ ಎಂದು ಆ ದೇವರನ್ನು ಬೇಡಿಕೊಳ್ಳುತ್ತೇನೆ ಎಂದರು. ರಾಮಣ್ಣನಿಗೆ ಕಂಠ ಬಿಗಿದು ಬಂತು. ಅವನು ನಾಗರಾಜ್ ಅವರಿಗೆ ನಿಮ್ಮನ್ನು ದೇವರು ಚೆನ್ನಾಗಿಟ್ಟಿರಲಿ ಎಂದು ಹರಸುತ್ತೇನೆ ಎಂದು ಹೇಳಿ ಹೊರಬಂದ.
ರಾಮಣ್ಣ ಸಂತೋಷದಿಂದ ಹೊಸ ವಿಭಾಗಕ್ಕೆ ಹೊರಟ.  ರಾಮಣ್ಣನ ಜಾಗಕ್ಕೆ ಮಾದಪ್ಪ ಬಂದರು. ಮಾದಪ್ಪ ಕೆಲಸದಲ್ಲಿ ನಿಷ್ಣಾತರು. ಆದರೆ ಪರೋಪಕಾರ, ಮೃದು ಮಾತುಗಳು, ಇತರರೊಂದಿಗೆ ಹೊಂದುಕೊಂಡು ಬಾಳುವುದು ಇವೆಲ್ಲವೂ ಮಾದಪ್ಪ ಕಂಡರಿಯದ ವಿಚಾರಗಳಾಗಿದ್ದವು. ಸದಾ ಸಿಡಿಮಿಡಿ, ಅವನಿಗೇನಾದರೂ ಕೆಲಸ ಒಪ್ಪಿಸಿದರೆ, ಯಾಕಾದರೂ ಕೊಟ್ಟೆವಪ್ಪಾ ಎಂದು ಅಂದುಕೊಳ್ಳುವಂತೆ ಮಾಡುತ್ತಿದ್ದ. ನಾಗರಾಜ್ ಅವರಿಗೆ ರಾಮಣ್ಣನೇ ಇವನಿಗಿಂತ ವಾಸಿಯೇನೋ ಅನ್ನಿಸಿತು. ಆದರೂ ಅವರ ಪರೋಪಕಾರ ಗುಣ, ಅನುಭೂತಿ (ಎಂಪತಿ), ಮಾದಪ್ಪನನ್ನು ಬದಲಾಯಿಸಬಹುದು ಎಂದು ಹೇಳಿತು.
ಅವರು ಮಾದಪ್ಪನಿಗೂ ಒಂದು ನೀತಿಪಾಠ ಹೇಳಿದರು. ಹೇಳುವ ಮೊದಲು ತಮ್ಮ ಮಾತಿನಿಂದ ಅವನನ್ನು ಮೋಡಿಮಾಡಿದರು.
ಅವರು, ಮಾದಪ್ಪ, ಎಲ್ಲರ ಮುಖದ ಸುತ್ತಲೂ ಒಂದು ಪ್ರಭಾವಳಿ ಇರುತ್ತದೆ. ನಾವು ಹೆಚ್ಚು ಸಂತೋಷದಿಂದ್ದರೆ, ಪರೋಪಕಾರ ಗುಣ ಹೊಂದಿದ್ದರೆ ಅದು ಜನರನ್ನು ಆಕರ್ಷಿಸುತ್ತದೆ. ಇಲ್ಲವಾದರೆ ಅದು ನೆಗೆಟಿವ್ ಆಗಿ ಯಾರನ್ನೂ ಹತ್ತಿರ ಸೇರಿಸುವುದಿಲ್ಲ. ನೀವು ಇಲ್ಲಿ ಕೆಲಸಮಾಡುವ ಕೆಲವೇ ಸಮಯವನ್ನು ಜನರ ಒಳಿತಿಗೆ ಮೀಸಲಿಟ್ಟು ನೋಡಿ, ನಿಮಗೆ ವ್ಯತ್ಯಾಸ ಗೊತ್ತಾಗುತ್ತದೆ ಎಂದರು. ಒಂದು ವಾರ ಮಾಡು, ನಂತರ ನಿನ್ನ ಅನಿಸಿಕೆಯನ್ನು ನನ್ನ ಬಳಿ ಹೇಳು ಎಂದರು.  ಮಾದಪ್ಪ ಒಂದು ವಾರದ ಮಟ್ಟಿಗೆ ಪೂರ್ತಿ ಪಾಸಿಟಿವ್ ಆಗಿದ್ದು ಎಲ್ಲರನ್ನೂ ನಗುನಗುತ್ತಾ ಮಾತನಾಡಿಸಿದ, ಬಂದವರ ಕಷ್ಟ ಸುಖ ವಿಚಾರಿಸಿ ಜಾತಿ ಬೇಧವಿಲ್ಲದೆ ಅವರಿಗೆ ಸಹಾಯ ಮಾಡಿದ. ಇದರಿಂದ ದೊರೆತಂತಹ ಸುಖ ಅವನಿಗೆ ಇದುವರೆಗೂ ಸಿಕ್ಕಿರಲಿಲ್ಲ. ಅವನಿಗೆ ಒಂದು ತರಹ ರೋಮಾಂಚನವಾಯಿತು. ಅಂದೇ ಅವನು ಬದಲಾಗಿ ಹೋದ. ಅವನು ಹಿಂದಿನ ಮಾದಪ್ಪ ಆಗಿರಲಿಲ್ಲ. ಮಾದಪ್ಪನಲ್ಲದ ಈ ಮಾರ್ಪಾಡು ಎಲ್ಲರಿಗೂ ಆಶರ್ಯ ತರಿಸಿತ್ತು. ನಾಗರಾಜ್ ಅವರಿಗಂತೂ ಬಹಳ ಖುಷಿಯಾಗಿತ್ತು.
ಇದೆ ಸಮಯದಲ್ಲೇ ಸಮಾಜ ಸೇವೆ ವಿಭಾಗದಿಂದ ರಾಮಣ್ಣ ಅವರ ಉತ್ತಮ ನಡವಳಿಕೆ, ಕೆಲಸಗಳಿಂದ ಅವರಿಗೆ ಭಡ್ತಿ ನೀಡಲಾಗಿದೆ ಎಂದು ಸಮಾಚಾರ ಬಂತು.
ಇದಾದ ಸ್ವಲ್ಪ ಹೊತ್ತಿನಲ್ಲೇ ರಾಮಣ್ಣ ಒಂದು ಸಿಹಿ ಪೊಟ್ಟಣ ಇಟ್ಟುಕೊಂಡು ನಾಗರಾಜ್ ಅವರ ಬಳಿ ಬಂದ. ನಮಸ್ಕರಿಸುತ್ತಾ, ನೀವು ನನಗಿಂತ ವಯಸಿನಲ್ಲಿ ಕಿರಿಯರಿರಬಹುದು ಆದರೆ ಗುಣದಲ್ಲಿ ಬಹಳ ಹಿರಿಯರು, ನಿಮ್ಮಿಂದ ನನ್ನ ಬಾಳಿಗೆ ನೆಮ್ಮದಿ ಸಿಕ್ಕಿತು. ಇಷ್ಟು ವರ್ಷ ಹೀಗೆ ಇದ್ದಿದ್ದರೆ ನಾನು ಅದೆಲ್ಲೋ ಇರುತ್ತಿದ್ದೆನಲ್ಲ ಎಂದು ಖೇದವಾಗುತ್ತಿದೆ ಎಂದ. ಅಲ್ಲಿಯೇ ಇದ್ದ ಮಾದಪ್ಪನೂ ಹೌದು ಎಂದು ತಲೆದೂಗಿದ. ಆಗ ನಾಗರಾಜ್, ಏನೇನೊ ಅಂದುಕೊಂಡು ಖೇದ ಪಡಬೇಡಿ, ನೋಡಿ ನೀವು ಹೊಗಳಲಿ ಎಂದು ನಾನು ಈ ಕೆಲಸ ಮಾಡಲಿಲ್ಲ. ಒಳ್ಳೆಯದು ಅನ್ನಿಸಿದ್ದನ್ನು ಮಾಡಿದೆ, ಅದೇ ನಿಜವಾದ ಧರ್ಮವಲ್ಲವೇ? ಇನ್ನುಮುಂದೆ ನೀವು ಇತರರಿಗೆ ಮಾದರಿಯಾಗಿ ಬಾಳಿ ಅಷ್ಟೇ ಸಾಕು, ನಾವು ಹೇಗಿದ್ದರೆ ಹಾಗೆ ಇತರರು ಅಲ್ಲವೇ? ಎಂದು ಹೇಳಿ, ಮಾದಪ್ಪನನ್ನು ನೋಡುತ್ತಾ ಇದು ನಿಮಗೂ ಈ ಸಂತಸದ ಬದುಕಿನ ಸೂತ್ರ ಅನ್ವಯಿಸುತ್ತದೆ ಎಂದು ನಕ್ಕರು.
ನಾಗರಾಜ್ ಅವರು ಇನ್ನಷ್ಟು ಸಿಹಿ, ಖಾರ, ಕಾಫಿ, ಆರ್ಡರ್ ಮಾಡಿ ಅದನ್ನು ಕಚೇರಿಗೆ ತರಿಸಿ ರಾಮಣ್ಣ ತಂದ ಸಿಹಿಯನ್ನು ಅದಕ್ಕೆ ಸೇರಿಸಿ ಕಚೇರಿಯ ಇತರರೊಂದಿಗೆ ಸಂತೋಷದಿಂದ ಸವಿದರು. ಇಡೀ ಕಚೇರಿಯೇ ಸಂತಸದಿಂದ ಉಲ್ಲಾಸಭರಿತವಾಗಿತ್ತು. ನಾಗರಾಜ್ ಅವರ ಮುಖದ ಸುತ್ತಲೂ ಪ್ರಭಾವಳಿ ಕಂಗೊಳಿಸುತ್ತಿತ್ತು. - ಜಗದೀಶ ಚಂದ್ರ 

No comments:

Post a Comment