Saturday, April 18, 2020

ವಿಶಾಲ ಮನೋಭಾವ

ವಿಶಾಲ ಮನೋಭಾವ 

ರಾಜಮ್ಮ ಸೊಸೆಯ ಜೊತೆ ಸ್ವಲ್ಪ ಮಾತನಾಡುತ್ತಿದ್ದಂತೆ ಅವರ ರಕ್ತದೊತ್ತಡ ಏರಿತು. ಸುಮ್ಮನೆ ನನ್ನನ್ನು ಕರೆಯ ಬೇಡ, ನಾನು ಎಲ್ಲಿಗೂ ಬರುವುದಿಲ್ಲ ಎಂದು ಫೋನ್ ಕುಕ್ಕಿದರು. ಇದನ್ನು ಗಮನಿಸಿದ ನಾಣಯ್ಯ 'ಶುರು ಆಯ್ತಾ ಅತ್ತೆ ಸೊಸೆ ಜಗಳ' ಎಂದರು. ಅದಕ್ಕೆ ಕೋಪದಿಂದ ಧುಮುಗುಡುತ್ತ ರಾಜಮ್ಮ, 'ನಿಮಗೇನು ಗೊತ್ತು ನಮ್ಮ ಕಷ್ಟ' ಎಂದು ಬುಸುಗುಡುತ್ತ ಅಡುಗೆ ಮನೆಗೆ ನಡೆದು ತಮ್ಮ ಸಿಟ್ಟನ್ನು ಅಲ್ಲಿದ್ದ ಪಾತ್ರೆಗಳ ಮೇಲೆ ತೋರಿಸಿಕೊಂಡರು. 
ರಾಜಮ್ಮನ ಸೊಸೆ ರಾಧಾ ಒಳ್ಳೆಯ ಹುಡುಗಿಯೇ. ರಾಜಮ್ಮನೂ ಒಳ್ಳೆಯವಳೇ. ಆದರೆ ಸೊಸೆ ತಾನು ಮಾಡಿದ್ದು ಸರಿ ಎಂದುಕೊಂಡರೆ ಅತ್ತೆ ತಾನು ಮಾಡಿದ್ದು ಸರಿ ಎಂದು ವಾದಿಸುತ್ತಾಳೆ. ಅವರವರ ಮೂಗಿನ ನೇರಕ್ಕೆ ಇಬ್ಬರೂ ಸರಿಯೇ, ಹೊಂದಾಣಿಕೆ ಇರಲಿಲ್ಲ ಅಷ್ಟೇ.
ಈ ಜಗಳವೇ ಬೇಡ ಎಂದು ಸೊಸೆ ಬೇರೆ ಮನೆ ಮಾಡಿ ಅಲ್ಲಿ ಸುಖವಾಗಿದ್ದು ಆಗಾಗ್ಗೆ ರಾಜಮ್ಮನಿಗೆ ಇಷ್ಟ ಇಲ್ಲದಿದ್ದರೂ ಮನೆಯಿಂದ ಏನಾದರು ತಂದು ಅವರಿಗೆ ಕೊಟ್ಟು ಸಮಾಧಾನದಿಂದ ಅತ್ತೆಯನ್ನು ಮಾತನಾಡಿಸುತ್ತಾಳೆ. ಆದರೆ ರಾಜಮ್ಮನಿಗೆ ಈ ಸೊಸೆ, ಮಗನಿಂದ ಬೇರ್ಪಡಿಸಿದ ರಾಕ್ಷಸಿಯಾಗಿ ಕಾಣುತ್ತಾಳೆ. ಆದರೂ ರಾಧಾ ನೇರವಾಗಿಯೇ ಅತ್ತೆ 'ನಿಮಗೆ ನಿಮ್ಮದೇ ಆದ ಕೆಲವು ಅನಿಸಿಕೆಗಳಿವೆ, ಹಾಗೆಯೆ ನನ್ನದೂ. ಸುಮ್ಮನೆ ಜಗಳವೇಕೆ ಹೊಂದುಕೊಂಡು ಇರೋಣ' ಎಂದರೂ ರಾಜಮ್ಮ ಒಪ್ಪುವುದಿಲ್ಲ. ಆಗ ರಾಧಾ, 'ನೀವು ತಾಯಿ ಇದ್ದ ಹಾಗೆ, ನಿಮ್ಮಿಂದ ಕಲಿಯುವುದು ಬೇಕಾದಷ್ಟಿದೆ, ಆದರೆ ನನಗೆ ನನ್ನದೇ ಆದ ಕೆಲವು ತೊಂದರೆಗಳಿವೆ, ಹೀಗಾಗಿ ನೀವು ಹೇಳಿದಂತೆ ಕೇಳಲಾಗುವುದಿಲ್ಲ. ಉದಾಹರಣೆಗೆ ಮನೆ ಮಂದಿ ಎಲ್ಲರೂ ಒಂದು ಬಾರಿ ಮಾಡಿದ  ಅಡಿಗೆ ತಿನ್ನಬೇಕೆದು ಎಂದು ನನ್ನ ಅನಿಸಿಕೆ, ನೀವು ಒಬ್ಬರಿಗೂ ಅವರು ಬಂದಾಗ ಬಿಸಿ ಬಿಸಿ ಅಡುಗೆ ಮಾಡು, ಫ್ರಿಜ್ ನಲ್ಲಿ ಅಡುಗೆ ಇಡಬಾರದು ಎಂದೆಲ್ಲ ಹೇಳಿದರೆ ಅದು ನನಗೆ ಸರಿಹೋಗುವುದಿಲ್ಲ. ನಿಮ್ಮನ್ನು ಕಂಡರೆ ನನಗೆ ಖಂಡಿತ ದ್ವೇಷ ಇಲ್ಲ, ಆದರೆ ಈ ಕೆಲವು ವಿಷಯಗಳಲ್ಲಿ ನೀವು ಹೇಳಿದ್ದನ್ನು ಒಪ್ಪಲಾಗುವುದಿಲ್ಲ, ಅದನ್ನೇ ದೊಡ್ಡದು ಮಾಡಬೇಡಿ', ಹೊಂದಿಕೊಂಡು ಹೋಗೋಣ ಎನ್ನುತ್ತಾಳೆ.
ಆಗ ನಾಣಯ್ಯ, ಹೌದು, ರಾಧಾ ಹೇಳುವುದೂ ಸರಿಯೇ, ಎಲ್ಲರೂ ಕುಳಿತು ನಾವು ಏನೆಲ್ಲಾ ಮಾಡಬಹುದು ಎಂದು ಲೆಕ್ಕ ಹಾಕೋಣ ಎಲ್ಲವೂ ಸರಿ ಹೋಗುತ್ತದೆ ಎನ್ನುತ್ತಾರೆ. ಅವರವರನ್ನು ಅವರವರ ಪಾಡಿಗೆ ಬಿಟ್ಟು ಬಿಟ್ಟರೆ ಎಲ್ಲವೂ ಸರಿಹೋಗುತ್ತದೆ, ವಿಶಾಲ ಮನೋಭಾವ ಇರಬೇಕು, ಸಂಕುಚಿತ ಬುದ್ಧಿಯೇ ಈ ಜಗಳಗಳಿಗೆ ಮೂಲ ಕಾರಣ ಎನ್ನುತ್ತಾರೆ. ರಾಜಮ್ಮ ಗಂಡನನ್ನು ನೀವು ಸೊಸೆಯ ಪರವಾಗಿ ವಹಿಸಿಕೊಂಡು ಬರಬೇಡಿ ಎಂದು ಮೂದಲಿಸುತ್ತಾರೆ. ಆಗ ನಾಣಯ್ಯ 'ನಿನ್ನ ಮಗಳು ಇಂತಹ ತಪ್ಪುಗಳನ್ನು ಮಾಡಿದಾಗ ಅವಳು ಮಾಡಿದ್ದೂ ಸರಿ, ಅದೇ ಕೆಲಸ ಸೊಸೆ ಮಾಡಿದರೆ ಅದೇಕೆ ಈ ಪರಿ ಸಿಟ್ಟು' ಎಂದರೆ ಕಲಹ ತಾರಕಕ್ಕೇರುತ್ತದೆ.
ಈಗ ನಾಣಯ್ಯನವರು ಒಬ್ಬರು ಹಿರಿಯ ಸಲಹೆಕಾರರನ್ನು ಹಿಡಿದು ಅವರಬಳಿ ಎಲ್ಲವನ್ನೂ ಹೇಳಿದ್ದಾರೆ. ಅದಕ್ಕೆ ಅವರು 'ನಿಮ್ಮ ಪತ್ನಿಯನ್ನು ನನ್ನ ಬಳಿ ಕಳಿಸಿ, ನಾನು ಅವರಿಗೆ ತಿಳಿ ಹೇಳುತ್ತೇನೆ' ಎಂದಿದ್ದಾರೆ. ರಾಜಮ್ಮ ಆ ಸಲಹೆಕಾರರ ಬಳಿ ಹೋದಾಗ 'ನೋಡಿ ಅಮ್ಮ ನೀವಂದುಕೊಂಡಂತೆ ನಿಮ್ಮ ಸೊಸೆ ಸರಿಹೋಗಬೇಕು ಎಂದರೆ ನಾನು ಹೇಳಿದಂತೆ ನೀವು ಅವಳನ್ನು ನಿಮ್ಮ ಮಗಳು ಎಂಬಂತೆ ಒಂದು ತಿಂಗಳು ನಾಟಕ ಮಾಡಿ, ಅವಳು ಏನು ಮಾಡಿದರೂ ಸಿಡುಕದೆ ಒಂದೆರೆಡು ಒಳ್ಳೆಯ ಮಾತುಗಳನ್ನು ಅಡಿ. ನಂತರ ಅವಳೇ ನಿಮ್ಮ ಅಡಿಯಾಳಾಗಿ ಬಿದ್ದಿರುತ್ತಾಳೆ' ಎಂದರು. ರಾಜಮ್ಮ 'ಒಂದು ತಿಂಗಳು ತಾನೇ, ಅದರ ಮೇಲೆ ಒಂದು ನಿಮಿಷವೂ ಹೆಚ್ಚಾಗಬಾರದು' ಎಂದು ಹೇಳಿ ಮನೆಗೆ ಬಂದಳು.
ಆ ಒಂದು ತಿಂಗಳು ಸೊಸೆಯನ್ನು ಮನೆಗೆ ಕರೆದದ್ದೇನು, ತಾನು ಅವಳ ಮನೆಗೆ ಹೋದದ್ದೇನು, ಅವಳ ನುಡಿ ನಡೆಗಳನ್ನು ಹೊಗಳಿದ್ದೇನು ಇದೆಲ್ಲವನ್ನೂ ಕಂಡ ರಾಧಾಗೆ ಈ ಅತ್ತೆಗೆ ಏನೋ ಆಗಿರಬೇಕು ಎಂದು ಅನುಮಾನ ಬಂತು. ಮಾವನನ್ನು ಕೇಳಿದಾಗ ಅವರು, ಸುಮ್ಮನೆ ಪ್ರಶ್ನಿಸಬೇಡ, ಅವಳು ನಿನ್ನನ್ನು ಮಗಳಂತೆ ನೋಡುತ್ತಿದ್ದಾಳೆ, ನೀನು ಅವಳನ್ನು ಈ ಒಂದು ತಿಂಗಳು ತಾಯಿಯಂತೆ ನೋಡಿಬಿಡು. ಎಲ್ಲವೂ ಸರಿಹೋಗುತ್ತದೆ ಎಂದರು. ರಾಧೆಯು ಸಕಾರಾತ್ಮಕವಾಗಿ ಸ್ಪಂದಿಸಿದಳು. ಅಂತೂ ಒಂದು ತಿಂಗಳು ಅತ್ತೆ ಸೊಸೆ ತಾಯಿ ಮಗಳಂತೆ ಬಾಳಿದರು. ಒಂದು ತಿಂಗಳು ಮುಗಿಯಿತು. ಅವರು ಮತ್ತೆ ಅತ್ತೆ ಸೊಸೆಯಾಗಿ ಬಾಳಲಿಲ್ಲ ತಾಯಿ ಮಗಳಾಗಿಯೇ ಶಾಶ್ವತವಾಗಿ ಬಾಳಿದರು.
ನಾಣಯ್ಯ ಆ ಸಲಹೆಕಾರರ ಬಳಿ ಹೋಗಿ 'ನನ್ನ ಪತ್ನಿ ನಿಮ್ಮ ಬಳಿ ಬರುವುದಿಲ್ಲ, ಈಗ ಅವರಿಬ್ಬರೂ ತಾಯಿ ಮಗಳೇ ಆಗಿಬಿಟ್ಟಿದ್ದಾರೆ, ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು' ಎಂದರು. ಅದಕ್ಕೆ ಅವರು ನಾವೆಲ್ಲರೂ ಜೀವನ ನಡೆಸುತ್ತೇವೆ. ಆದರೆ ಒಬ್ಬೊಬ್ಬರದು ಒಂದೊಂದು ರೀತಿ. ಅವರವರಿಗೆ ಉತ್ತಮ ಅನ್ನಿಸಿದ ನೀತಿಗಳನ್ನು, ತತ್ವಗಳನ್ನು ಅಳವಡಿಸಿಕೊಂಡು ಜೀವನ ನಡೆಸುತ್ತಿರುತ್ತೇವೆ. ನಾವು ಅಂದುಕೊಂಡದ್ದೇ ಉತ್ತಮ ಎನ್ನುವುದು ತಪ್ಪು. ಇದಕ್ಕೆ ನಾವು ವಿಶಾಲವಾದ ಮನೋಭಾವದಿಂದ ನಡೆದುಕೊಂಡರೆ ಅದು ಉತ್ತಮ ಬಾಳು ಎನ್ನಿಸಿಕೊಳ್ಳುತ್ತದೆ. ಬೇರೆಯವರು ಸಹ ಅವರಿಗೆ ತಿಳಿದ ಮಟ್ಟಿಗೆ ಉತ್ತಮ ಅನ್ನಿಸಿಕೊಂಡಂಥ ಬಾಳನ್ನು ನಡೆಸಲು ಬಿಡಬೇಕು. ನಾನು ನಡೆಸುತ್ತಿರುವ ಜೀವನವೇ ಉತ್ತಮ ಎಂಬ ಅಹಂಭಾವದಿಂದ ದೂರವಿರಬೇಕು. ನಮ್ಮದು ನಿಜವಾಗಿಯೂ ಉತ್ತಮ ಜೀವನವಾದರೆ ಇತರರೇ ನಮ್ಮನ್ನು ಅನುಕರಿಸುತ್ತಾರೆ ಎಂಬ ಮನೋಭಾವ ಹೊಂದಿರಬೇಕು. ನಾನು ನಿಮ್ಮ ಪತ್ನಿಯ ಕೈಲಿ ಮಾಡಿಸಿದ್ದು ಇಷ್ಟೇ ಎಂದರು. 
ಜಗದೀಶ ಚಂದ್ರ 

No comments:

Post a Comment