Sunday, April 19, 2020

ಮಕ್ಕಳ ಸಮಸ್ಯೆ

ಮಕ್ಕಳ ಸಮಸ್ಯೆ 

ಶಂಕರನ ತಂದೆಗೆ ಅಂದು ಕಾಲೇಜಿಗೆ ಬರಲು ಜಿ ಹಾ ಜಿ ಹೇಳಿದ್ದರು. ಅಂದು ಜಿ ಹಾ ಜಿ ಶಾಲೆಗೆ ಬರುತ್ತಿರುವಾಗೆ ಯಾರೋ ಒಬ್ಬರು ಕಾಲೇಜಿನ ಬಗ್ಗೆ ವಿಚಾರಿಸುತ್ತಿದ್ದರು. ಅದನ್ನು ಕೇಳಿಸಿಕೊಂಡ ಅವರು,  ಆ ಮನುಷ್ಯನ್ನು ಮಾತನಾಡಿಸಿದರು. ಅವರು ಸ್ವಲ್ಪ ಒರಟಾಗಿ ಮಾತನಾಡಿದಾಗ,ಯಾಕೋ ಜಿ ಹಾ ಜಿ ಅವರಿಗೆ, ಆ ಭಾಷೆ, ರೀತಿ ಹಿಡಿಸಲಿಲ್ಲ. ಆದರೂ ಏನೋ ಸಹಾಯ ಮಾಡೋಣ ಎಂದಷ್ಟೇ ಮಾತನಾಡಿಸಿದ್ದರು. ಅವರ ಮಾತಿನಿಂದ ನೊಂದು ಜಿ ಹಾ ಜಿ ಅವರೂ ಹೆಚ್ಚು ಮಾತನಾಡದೆ ಕಾಲೇಜಿಗೆ ಬಂದುಬಿಟ್ಟರು.
ಅಂದು ತರಗತಿಯಲ್ಲಿ ಶಂಕರ ಬಂದಿದ್ದ. ಜಿ ಹಾ ಜಿ ಅವನನ್ನು, 'ನಿಮ್ಮ ತಂದೆಯನ್ನು ಕರೆದುಕೊಂಡು ಬರದೇ ಇದ್ದಾರೆ ತರಗತಿಗೆ ಸೇರಿಸಲ್ಲ ಎಂದು ಹೇಳಿದ್ದರೂ ಮತ್ತೆ ಏಕೆ ಬಂದೆ?' ಎಂದು ಗದರಿದರು. ಅವರು ಇನ್ನು ಕೆಲವೇ ನಿಮಿಷಗಳಲ್ಲಿ ಬರುತ್ತಾರೆ, ಅದಕ್ಕೆ ಬಂದಿರುವುದು ಎಂದು ಕುಳಿತೇ ಉತ್ತರಿಸಿದ.
ಇಂದಿನ ಕಾಲದ ಹುಡುಗರು. ನಾವು ಹೆಚ್ಚು ಬೈಯುವ ಹಾಗೂ ಇಲ್ಲ, ಬುದ್ದಿ ಹೇಳುವ ಹಾಗೂ ಇಲ್ಲ. ಹೇಳಿದರೆ ಕೇಳುವುದೂ ಇಲ್ಲ ಎಂದು ಜಿ ಹಾ ಜಿ ಮನದಲ್ಲೇ ಗೊಣಗಿಕೊಂಡು ಸುಮ್ಮನಾದರು. ಇವನಂತೆಯೇ ಇನ್ನಷ್ಟು ಮೊಂಡು ಹುಡುಗರು ಕಾಲೇಜಿನಲ್ಲಿದ್ದರು. ಅವರೆಲ್ಲರ ಧೋರಣೆಯೇ ವಿಚಿತ್ರ. ನಾವೇನೂ ಕಾಲೇಜಿಗೆ ಬಿಟ್ಟಿ ಬಂದಿಲ್ಲ, ದುಡ್ಡು ಕೊಟ್ಟೆ ಬಂದಿರುವುದು, ಅವರ ಕೆಲಸ ಪಾಠ ಮಾಡುವುದು ಅಷ್ಟೇ, ನಾವೆಲ್ಲ ಕಾಲೇಜಿನ ಆಡಳಿತ ಮಂಡಳಿಗೆ ಅವರ ಬಗ್ಗೆ ದೂರು ನೀಡಿ ಅವರನ್ನು ಮನೆಗೆ ಕಳಿಸಬಹುದು ಎಂದು ಉಳಿದವರಿಗೂ ಹೇಳಿಕೊಡುತ್ತಿದ್ದರು.
ಇಂತಹ ಒಂದು ದಂಡೇ ಕಾಲೇಜಿನಲ್ಲಿತ್ತು. ಅವರು ಹಣತೆತ್ತು ಸೀಟನ್ನು ಗಿಟ್ಟಿಸಿದ್ದರಿಂದ, ಕಾಲೇಜಿನ ಆಡಳಿತ ಮಂಡಳಿಗೆ ಅವರ ಮೇಲೆ ಸ್ವಲ್ಪ ಮೃದು ದೋರಣೆ. ಅಧ್ಯಾಪಕರು ಹೆಚ್ಚು ಮಾತನಾಡಿದರೆ, ಅವರಿಂದಲೇ ನಿಮಗೆ ಸಂಬಳ ಬರುತ್ತಿರುವುದು, ಅಂಥವರು ಇಲ್ಲದ್ದಿದ್ದರೆ ನಾವು ಕಾಲೇಜು ಮುಚ್ಚಿ ಮನೆಗೆ ಹೋಗಬೇಕು ಎಂದು ಕಾರಣ ನೀಡುತ್ತಿದ್ದರು. ಇದನ್ನು ಈ ದಂಡು ದುರುಪಯೋಗ ಪಡಿಸಿಕೊಳ್ಳುತ್ತಿತ್ತು. ಅಧ್ಯಾಪಕರಿಗೆ ಅಗೌರವ, ತರಗತಿಯಲ್ಲಿ ತೊಂದರೆ ಕೊಡುವುದು, ಅಂಕ ಕಡಿಮೆ ಬಂದರೆ ಅಧ್ಯಾಪಕರೇ ಸರಿಯಾಗಿ ಪಾಠ ಮಾಡಲಿಲ್ಲ ಎಂದು ದೂರುವುದು ಇವೆಲ್ಲಾ ಸರ್ವೇ ಸಾಮಾನ್ಯವಾಗಿತ್ತು. ನಡತೆ ಎಂಬುದಂತೂ ಕಿಂಚಿತ್ತೂ ಇರಲಿಲ್ಲ.
ತರಗತಿ ಪ್ರಾರಂಭವಾದ ಸ್ವಲ್ಪ ಹೊತ್ತಿನಲ್ಲೇ ಜಿ ಹಾ ಜಿ ಅವರಿಗೆ ಪ್ರಾಂಶುಪಾಲರಿಂದ ಕರೆ ಬಂತು. ತರಗತಿಯನ್ನು ಮುಗಿಸಿ ಅವರ ಬಳಿಗೆ ಹೋದರು. ಆಗ ಅವರು ಅಲ್ಲಿಗೆ ಬಂದಿದ್ದ ಅತಿಥಿಗಳ ಸಂಗಡ ಮಾತನಾಡುತ್ತಿದ್ದರು. ಅವರು ಅಧ್ಯಾಪಕರ ಬಗ್ಗೆ ಏಕ ವಚನದಲ್ಲಿ 'ಯಾವನು ಆ ಮೇಷ್ಟ್ರು, ಸುಮ್ಮನೆ ಪಾಠ ಮಾಡಿ ಅಂಕ ಕೊಡಲು ಹೇಳಿ' ಎಂದು ಹೇಳುತ್ತಿದ್ದರು. ಜಿ ಹಾ ಜಿ ಅವರು ಹತ್ತಿರ ಹೋಗಿ ನೋಡಿದರೆ, ಅವರಿಗೆ ಬೆಳಿಗ್ಗೆ ಸಿಕ್ಕಿದ ಆಸಾಮಿ. ಆಹಾ, ತಂದೆಯಂತೆಯೇ ಮಗ, ಇಬ್ಬರೂ ಸರಿಯಾಗಿದ್ದಾರೆ, ಇಂತಹವರ ಬಗ್ಗೆ ದೂರು ಹೇಳಿದ್ದು ನನ್ನದೇ ತಪ್ಪು ಎಂದುಕೊಂಡರು. ಆ ಮನುಷ್ಯ ಜಿ ಹಾ ಜಿ ಅಲ್ಲಿಗೆ ಹೋದಾಗ, ಅವರನ್ನು  ಕಂಡು, 'ಇವನಾ, ಬೆಳಿಗ್ಗೆಯೇ ನಾನು ಭೇಟಿ ಮಾಡಿದ್ದೆ' ಎಂದು ಹೇಳಿ, 'ಏನಯ್ಯಾ ನಮ್ಮ ಹುಡುಗ ನಿನಗೆ ಅಷ್ಟೊಂದು ತೊಂದರೆ ಕೊಡುತ್ತಾನಾ? ನಿನಗೆ ಅಂತವರನ್ನು ನೋಡಿಕೊಳ್ಳಲು ಆಗದಿದ್ದರೆ ಮೇಷ್ಟ್ರು ಏಕಾದೆ? ನಿನ್ನ ಕೆಲಸನೇ ಅದಲ್ಲವಾ? ಎಂದು ಜಿ ಹಾ ಜಿ ಅವರಿಗೇ ಬುದ್ಧಿ ಹೇಳಿದ.
ಜಿ ಹಾ ಜಿ ಅವರು, 'ನೋಡಿ ಮಕ್ಕಳಿಗೆ ಸ್ವಲ್ಪ ನಡತೆ ಇರಬೇಕು, ತರಗತಿಗೆ ಸರಿಯಾಗಿ ಬರಬೇಕು, ಕೊಡುವ ಚಟುವಟಿಕೆಗಳನ್ನು ಸಮಯಕ್ಕೆ ಸರಿಯಾಗಿ ಕೊಡಬೇಕು' ಇವೆಲ್ಲವನ್ನೂ ಮಾಡದಿದ್ದರೆ, ನಾವೇನು ಮಾಡಲಾಗುತ್ತದೆ ಎಂದರು. 'ಸುಮ್ಮನಿರಯ್ಯ, ನನ್ನ ಮಗ ಎಲ್ಲಾ ಹೇಳಿದ್ದಾನೆ' ಎಂದು ಮಗನೇ ಸರಿ ಎಂದು ವಾದಿಸಿದ. ಒಂದಷ್ಟು ಮಾತುಕತೆ ನಡೆಯಿತು. ಆದರೆ ಅಲ್ಲಿ ಜಿ ಹಾ ಜಿ ಅವರಿಗೆ ಸ್ವಲ್ಪವೂ ಸಹಕಾರವಿರಲಿಲ್ಲ. ಸುಮ್ಮನೆ ಮಾತನಾಡದೆ ಎದ್ದು ಬಂದು ಬಿಟ್ಟರು.
ಹೀಗೆಯೇ ಇನ್ನೊಬ್ಬ ಹುಡುಗನ ತಂದೆಯೂ ಬಂದಿದ್ದರು. ಅವರಂತೂ 'ಸ್ವಾಮಿ, ನಾವು ಹುಡುಗನನ್ನು ಕಾಲೇಜಿಗೆ ಹಾಕಿದ್ದೇವೆ, ಅವನನ್ನು ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ, ಸರಿಯಾಗಿ ನಡೆದುಕೊಳ್ಳದಿದ್ದರೆ ಬೂಟು ಕಾಲಲ್ಲಿ ಒದ್ದು ಬಿಡಿ' ಎಂದು ಬುದ್ಧಿವಾದ ಹೇಳಿದರು
ಹೀಗೆಯೇ ಒಬ್ಬ ಹುಡುಗನ ತಾಯಿಯಂತೂ, ನನ್ನ ಮಗನಿಗೆ ನಾನು ಸಾಕಷ್ಟು ಹೇಳಿದ್ದೇನೆ, ನಾನು ಹೆಚ್ಚು ಮಾತನಾಡಿದರೆ 'ಹುಟ್ಟಿಸಿದ್ದು ನೀವು, ನೋಡಿಕೊಳ್ಳುವುದು ನಿಮ್ಮ ಕರ್ತವ್ಯ" ಎನ್ನುತ್ತಾನೆ. ನೀವೇ ಅವನನ್ನು ಸರಿದಾರಿಗೆ ತರಬೇಕು ಎಂದು ಅಳಲು ಶುರು ಮಾಡಿದರು.
ಇನ್ನೊಂದು ಹುಡುಗಿಯ ಬಗ್ಗೆ ದೂರಿದ್ದುದು ಅವಳ ಉಡುಗೆ ತೊಡುಗೆಯ ಬಗ್ಗೆ. ಸಿನಿಮಾ ನಟಿಯರನ್ನು ಮೀರಿಸುವಂತೆ ಬಟ್ಟೆ ಧರಿಸುತ್ತಾಳೆ, ಎಲ್ಲರ ಗಮನ ಸೆಳೆಯುವುದೇ ಅವಳ ಗುರಿ. ಇದನ್ನು ಅವಳ ತಂದೆ ತಾಯಿಯರಿಗೆ ಹೇಳಿದರೆ, ಅವಳ ತಾಯಿ 'ನಮಗಂತೂ ನಮಗೆ ಬೇಕಾದಂತೆ ಇರಲು ನಮ್ಮ ಅಪ್ಪ ಅಮ್ಮ ಬಿಡಲಿಲ್ಲ, ನಿಮಗೇಕೆ ಅವಳ ಬಗ್ಗೆ ಹೊಟ್ಟೆಕಿಚ್ಚು ' ಎಂದಳು. 'ಹೆಣ್ಣು ಮಕ್ಕಳು, ಬಟ್ಟೆ ಸರಿಯಾಗಿ ಧರಿಸಬೇಕಲ್ಲವೇ' ಎಂದರೆ 'ಬಟ್ಟೆ ಹೇಗೆ ಧರಿಸಬೇಕು ಎಂದು ಎಲ್ಲಿ ಹೇಳಿದೆ, ನನಗೆ ಆ ಪಟ್ಟಿ ಕೊಡಿ' ಎಂದಳು. ಆಗ ಅವಳ ತಂದೆ, 'ಮೊದಲು ಈ ನನ್ನ ಹೆಂಡತಿಗೆ ಬುದ್ಧಿ ಹೇಳಿ, ನಾನು ಎಷ್ಟು ಹೇಳಿದರೂ ಮಗಳಿಗೆ ಆ ರೀತಿಯ ಬಟ್ಟೆ ತೊದಲು ಇವಳೆ ಪ್ರಚೋದಿಸುತ್ತಾಳೆ' ಎಂದು ದೂರಿದರು. ಜಿ ಹಾ ಜಿ ಅವರ ಎದುರಿಗೆ ಗಂಡ ಹೆಂಡತಿಯ ಜಗಳ ಪ್ರಾರಂಭವಾಯಿತು.
ಅಂತೂ ಅಂದುಜಿ ಹಾ ಜಿ ಅವರಿಗೆ ಇಂತಹ ಮಕ್ಕಳ, ಅವರ ತಂದೆ ತಾಯಿಯರ ವಾದಗಳನ್ನು ಕೇಳುವುದರಲ್ಲೇ ಸಮಯ ಕಳೆದು ಹೋಯಿತು. ಅವರಿಗೆ ಮುಖ್ಯವಾಗಿ ಅನ್ನಿಸಿದ್ದು, ಮನೆಯಲ್ಲಿ ಒಂದೇ ಮಕ್ಕಳನ್ನು ಹೆತ್ತು ಅವರನ್ನು ಅತಿ ಮುದ್ದಿನಿಂದ ಬೆಳೆಸಿ ಹಾಳು ಮಾಡಿರುವುದು ಅವರ ತಂದೆ ತಾಯಿಗಳೇ  ಅನ್ನಿಸಿತು. ಅವರಿಗೆ ನಡತೆಯನ್ನೂ ಕಲಿಸದೇ, ಕೇಳಿದ್ದನ್ನೆಲ್ಲಾ ಕೊಡಿಸಿ ಹಾಳು ಮಾಡಿದ್ದರು. ಅವರನ್ನು ತಿದ್ದುವ ಕೆಲಸ ಅಧ್ಯಾಪಕರದೇ ಎನ್ನುವಂತೆ ಮಾತನಾಡುತ್ತಿದ್ದರು. ಇನ್ನು ಕೆಲವರು ತಮ್ಮ ಅಸಹಾಯಕತೆಯನ್ನು ತೋಡಿಕೊಂಡು ಅಧ್ಯಾಪಕರಿಗೇ ಜವಾಬ್ದಾರಿ ವಹಿಸಿಕೊಳ್ಳಲು ಹೇಳುತ್ತಿದ್ದರು.
ಇಂದಿನ ಈ ಮಕ್ಕಳು, ಅವರ ತಂದೆ ತಾಯಿಗಳು, ಅಧ್ಯಾಪಕರು ಅಬ್ಬಬ್ಬಾ ಒಬ್ಬರದು ಒಂದೊಂದು ರೀತಿ. ಒಟ್ಟಿನಲ್ಲಿ ನಡತೆ ಎಂಬುದು ಬರುಬರುತ್ತಾ ಕಾಣೆಯಾಗುತ್ತಿದೆ ಎಂದು ಜಿ ಹಾ ಜಿ ಅವರಿಗೆ ಅನ್ನಿಸಿತು. ಕೆಲವು ಬಾರಿ ಅಧ್ಯಾಪಕರದೂ ತಪ್ಪಿರುವ ಸಾಧ್ಯತೆ ಇರುತ್ತಿತ್ತು. ಏನೇ ಆಗಲಿ ಇದೊಂದು ಸೂಕ್ಷ್ಮವಾದ ಸಮಸ್ಯೆ, ಬಗೆಹರಿಸಲು ತಂದೆ, ತಾಯಿ, ಅಧ್ಯಾಪಕರೂ ಸೇರಿ ಮಾತನಾಡಿ ಒಮ್ಮತಕ್ಕೆ ಬರಬೇಕು ಇಲ್ಲದಿದ್ದಲ್ಲಿ ಇದು ಬಗೆಹರಿಯದ ಸಮಸ್ಯೆ ಆಗುತ್ತದೆ ಎಂದು ಜಿ ಹಾ ಜಿ ಅಂದುಕೊಂಡರು. ಮುಖ್ಯವಾಗಿ ಇದನ್ನು ಮನೆಯಲ್ಲಿಯೇ ಕಲಿಸಬೇಕು, ಮನೆಯೇ ಮೊದಲ ಪಾಠಶಾಲೆ, ದೊಡ್ಡವರಾದ ಮೇಲೆ ಹೇಳಿದರೆ ತೊಂದರೆಗಳು ಹೆಚ್ಚುತ್ತವೆಯೇ ಹೊರತು ಬಗೆಹರಿಯುವುದಿಲ್ಲ. ಜೊತೆಗೆ ಹದಿವಯಸ್ಸಿನ ಸಮಸ್ಯೆಗಳೂ ಸೇರಿ ಬಿಟ್ಟರೆ ಇನ್ನೂ ಗೋಜಲು ಗೋಜಲು ಆಗಿಬಿಡುತ್ತದೆ ಅಲ್ಲವೇ ಎಂದು ನೊಂದುಕೊಂಡರು.
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ಎಂಬ ಗಾದೆ ಜಿ ಹಾ ಜಿ ಅವರಿಗೆ  ನೆನಪಿಗೆ ಬಂದು, ಅಧ್ಯಾಪಕನಾಗಿ ನನ್ನ ಮೇಲೆ ಎಷ್ಟೊಂದು ಜವಾಬ್ದಾರಿಗಳು, ಏನಾದರೂ ನನ್ನಿಂದ ಸಾಧ್ಯವಾದಷ್ಟು ಕೆಲಸವನ್ನು ಮಾಡಬೇಕು ಎಂದುಕೊಂಡು ತಮ್ಮ ಕೋಣೆಯ ಕಡೆಗೆ ಚಿಂತಿಸುತ್ತಾ ಹೊರಟರು. - ಜಗದೀಶ ಚಂದ್ರ



No comments:

Post a Comment