Saturday, April 18, 2020

ಮದರ್ಟಂಗೋ, ತಾಯಿನುಡಿಯೊ - ಘಟನೆ

ಮದರ್ಟಂಗೋ, ತಾಯಿನುಡಿಯೊ 
ಗೆಳೆಯ ಹೇಳಿದ್ದು - ಪಕ್ಕದ ಮನೆಗೆ ಯಾರೋ ಹೊಸಬರು ಬಂದಿದ್ದರು. ಆ ಮನೆಯಲ್ಲಿ ಒಂದು ಪುಟ್ಟ ಹುಡುಗ ಓಡಾಡುತ್ತಿದ್ದ. ನಮ್ಮ ಪುಟ್ಟನಿಗೆ ಒಬ್ಬ ಗೆಳೆಯ ಸಿಗುತ್ತಾನೆ ಎಂದು ಸಂತೋಷ. ನನ್ನ ಅಮ್ಮ, 'ಯಾರೋ ಹೊಸಬರು ಬಂದಿರುವುದು, ಎಲ್ಲಿಯವರೋ' ಎಂದು ನನ್ನನ್ನು ಕೇಳಿದರು. ನನಗೇನು ಗೊತ್ತಿರಲಿಲ್ಲ. ಉತ್ತರ ಹೇಳುವ ಮೊದಲೇ ನಮ್ಮ ಪುಟ್ಟ, 'ಅವರು ಕನ್ನಡ ಮಾತನಾಡುತ್ತಾರೆ, ಅವರ ಮನೆಯಲ್ಲಿ ಒಬ್ಬ ಹುಡುಗ ಇದ್ದಾನೆ' ಎಂದ. 'ಅವರು ಕನ್ನಡ ಮಾತನಾಡುತ್ತಾರೆ ಎಂದು ನಿನಗೆ ಹೇಗೆ ಗೊತ್ತು' ಎಂದರೆ, 'ಅವರು ಮನೆಯಲ್ಲಿ ಇಂಗ್ಲಿಷ್ ಭಾಷೆಯನ್ನೇ ಮಾತನಾಡುತ್ತಾರೆ ಅದರಿಂದ ಅವರು ಕನ್ನಡಿಗರು' ಎಂದ. ಇಂಗ್ಲಿಷ್ ಮಾತನಾಡಿದರೆ ಕನ್ನಡಿಗರು ಹೇಗಾಗುತ್ತಾರೆ? ಎಂದೆ. 'ಕನ್ನಡ ಮದರ್ ಟಂಗ್ ಇರುವವರೇ ಹಾಗೆ ಇಂಗ್ಲಿಷ್ನಲ್ಲಿ ಮಾತನಾಡುವುವುದು, ನನ್ನ ಗೆಳೆಯರ ಅನೇಕ ಮನೆಯಲ್ಲಿ ಅವರೆಲ್ಲ ಕನ್ನಡ ಗೊತ್ತಿದ್ದರೂ ಮನೆಯಲ್ಲಿ ಇಂಗ್ಲಿಷ್ ಭಾಷೆಯನ್ನೇ ಮಾತನಾಡುವುದು' ಎಂದ. ನನಗೆ ನಾಚಿಕೆಯಿಂದ ತಲೆ ತಗ್ಗಿಸುವಂತಾಯಿತು. ನನ್ನ ಅಮ್ಮ ನನ್ನನ್ನು ನೋಡಿ ನಕ್ಕಳು, ಆ ನಗುವಿನಲ್ಲಿ ವ್ಯಂಗ್ಯ ಇಣುಕುತ್ತಿತ್ತು, ಮಾತೃಭಾಷೆಯನ್ನು ಮರೆತೆಯಾ ಎಂಬ ಪ್ರಶ್ನೆ ಆ ನಗುವಿನಲ್ಲಿತ್ತು. ನನ್ನ ಹೆಂಡತಿಯ ಇಂಗ್ಲಿಷ್ ಅಭಿಮಾನದಿಂದ ನಾನೂ ಸಹಾ ಮಗನೊಂದಿಗೆ ಇಂಗ್ಲಿಷ್ನಲ್ಲೇ ಸಂವಹಿಸುತ್ತಿದ್ದೆ. 'ಈಗ ಮಗನೊಂದಿಗೆ ನಾನು ಕನ್ನಡದಲ್ಲೇ, ನನ್ನ ಇಂಗ್ಲಿಷ್ ಅಭಿಮಾನಿ ಪತ್ನಿ ಇಂಗ್ಲಿಷ್ನಲ್ಲೇ ಸಂವಹಿಸುತ್ತಿದ್ದೇವೆ, ಪುಟ್ಟ ಈಗ ನನಗೆ ಹೆಚ್ಚು ಆತ್ಮೀಯನಾಗಿದ್ದಾನೆ' ಎಂದ ನನ್ನ ಗೆಳೆಯ.
ಜಗದೀಶ ಚಂದ್ರ 

No comments:

Post a Comment