Sunday, April 19, 2020

ಉದ್ಯಾನವನ


ಉದ್ಯಾನವನ
ಅದೊಂದು ಉದ್ಯಾನವನ, ದಿನಬೆಳಗಾದರೆ ಎಲ್ಲರೂ ಅದರೊಳಗೆ ಬಂದು, ನಡೆದೂನಡೆದೂ, ಅದಕ್ಕೆ ಹಾಸಿದ ನೆಲಹಾಸನ್ನು ಸವೆಸುತ್ತಾರೆ, ಹಾಗೆಯೆ ತಮ್ಮ ಚಪ್ಪಲಿಯನ್ನೂ ಸವೆಸಿಕೊಳ್ಳುತ್ತಾರೆ. ಅದರಲ್ಲಿ ಓಡಾಡಿದಮೇಲೆ ಸ್ವಲ್ಪ ಸುಸ್ತಾದರೆ ಕೂಡಲು ಬೆಂಚುಬೇಡವೇ? ಅಲ್ಲಿ ಒಂದೂ ಬೆಂಚು ಇರಲಿಲ್ಲ. ರೆಡ್ಡಿ ಅವರು ಅದರ ಬಗ್ಗೆಯೇ ಮಾತನಾಡುತ್ತಿದ್ದಾಗ ಅಲ್ಲಿಯೇ ನಡೆಯುತ್ತಿದ್ದ ಜುಬ್ಬಾಧಾರಿ ವ್ಯಕ್ತಿಯೊಬ್ಬ, “ನೀವು ಹೇಳುತ್ತಿರುವುದು ನಿಜ, ಕೂಡಲು ಒಂದೂ ಬೆಂಚು ಇಲ್ಲದಿದ್ದರೆ ಇದೆಂಥ ಉದ್ಯಾನವನ, ನೀವೆಲ್ಲರೂ ಸೇರಿ ಒಂದು ಪತ್ರ ಬರೆದುಕೊಡಿ, ನಾನು ಅದನ್ನು ನನಗೆ ಗೊತ್ತಿರುವವರಿಗೆ ಕೊಟ್ಟು ಅವರಿಂದ ಕೆಲಸಮಾಡಿಸುತ್ತೇನೆಎಂದ. ರೆಡ್ಡಿ ಅವರುಸರಿಯಪ್ಪಾ, ಧನ್ಯವಾದಗಳುಎಂದರು. “ನಾನು ನಾಡಿದ್ದು ಇದೇ ವೇಳೆಗೆ ನಿಮ್ಮನ್ನು ಇಲ್ಲೇ ಕಾಣುತ್ತೇನೆ, ಆಗ ಪತ್ರವನ್ನು ಕೊಡಿಎಂದು ಹೇಳಿ ಮುಂದೆ ನಡೆದ. ರೆಡ್ಡಿ ಅವರು ಅದನ್ನು ಇತರರಿಗೆ ಹೇಳಿ, “ನೋಡಿ ಎಂಥ ಪುಣ್ಯಾತ್ಮಎಂದು ಹೊಗಳಿ ಪತ್ರಕ್ಕೆ ಎಲ್ಲರಕೈಲೂ ಸಹಿಹಾಕಿಸಿ ಆತನಿಗೆ ಕೊಟ್ಟರು. ಇದಾದ ಒಂದೆರೆಡುತಿಂಗಳಲ್ಲೇ ಅಲ್ಲಿ ಚಪ್ಪಡಿ ಕಲ್ಲುಗಳು ಬಂದವು, ನಂತರ ಒಂದಷ್ಟು ಬೆಂಚುಗಳೂ ಸಿದ್ದವಾದವು. ಎಲ್ಲರೂ ರೆಡ್ಡಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಇದಾದ ಕೆಲವೇ ದಿನಗಳಲ್ಲಿ ಅಲ್ಲಿದ್ದ ನೆಲಹಾಸಿನ ಮೇಲೆ ಯಾರೋ ಜಾರಿಬಿದ್ದರು. ಕೂಡಲೇ ಎಲ್ಲರೂ ಬೇರೆ ನೆಲಹಾಸನ್ನು ಹಾಕಿಸಬೇಕೆಂದು ಕೋರಿ, ತಾವೇ ಒಂದು ಪತ್ರಬರೆದು, ಅದಕ್ಕೆ ಸಹಿಹಾಕಿಸಿ ರೆಡ್ಡಿ ಅವರಿಗೆ ಕೊಟ್ಟರು. ರೆಡ್ಡಿ ಅವರು ಅದನ್ನು ಜುಬ್ಬಾಧಾರಿ ವ್ಯಕ್ತಿಗೆ ಕೊಟ್ಟರು. ಇದಾದ ಕೆಲವೇ ತಿಂಗಳಲ್ಲಿ ಒಂದಷ್ಟು ನೆಲಹಾಸಿನ ಕಲ್ಲುಗಳು ಅಲ್ಲಿ ಬಂದುಬಿದ್ದವು. ಅದನ್ನು ಹಾಕುವಾಗ ಕೂಡಲು ಹಾಕಿಸಿದ್ದ ಕೆಲವು ಬೆಂಚುಗಳು ಸೊಟ್ಟಗಾದವು. ಕೆಲವಂತೂ ಕೂತರೆ ಅಲ್ಲಾಡತೊಡಗಿದವು. ಅಂತೂ ನೆಲಹಾಸು ಸಿದ್ಧವಾಯಿತು, ಆದರೆ ಬೆಂಚು ಶಿಥಿಲವಾಯಿತು.
ಈಗ ಜುಬ್ಬಾಧಾರಿ ವ್ಯಕ್ತಿ, ಬೆಂಚುಗಳನ್ನು ಬೇಗನೆ ಸರಿಪಡಿಸಬೇಕೆಂದು ತಾನೇ ಒಂದು ಪತ್ರಬರೆದು ಎಲ್ಲರಕೈಲಿ ಸಹಿಹಾಕಿಸಿಕೊಂಡನು. ಸ್ವಲ್ಪ ದಿನಗಳಲ್ಲೇ ಹಳೆಯಬೆಂಚಿನಕಲ್ಲುಗಳು ಚೆನ್ನಾಗಿದ್ದರೂ ಎಲ್ಲಿಯೋ ಮಾಯವಾದವು, ಹೊಸದಾಗಿ ಪಾಲಿಶ್ ಮಾಡಿದ ಗ್ರಾನೈಟ್ ಕಲ್ಲುಗಳು ಬಂದುಬಿದ್ದವು. ಎಲ್ಲರೂ, "ವಾಹ್, ಎಂಥಚೆಂದಎಂದು ಹೊಗಳಿದರು. ಅದರ ಮುಂದೆ ಈಹಿಂದೆ ಹಾಕಿದ್ದ ನೆಲಹಾಸು ಬಲುಸಪ್ಪೆ ಎನ್ನಿಸಿತು. ಜೊತೆಗೆ ಕೆಲವು ನೆಲಹಾಸುಗಳು ಈ ಹೊಸಬೆಂಚುಗಳನ್ನು ಹಾಕುವಾಗ ಕಿತ್ತುಬಂದವು. ಆಗ ಮತ್ತೆ ಆ ಜುಬ್ಬಾಧಾರಿವ್ಯಕ್ತಿ ಬಂದು, ಎಲ್ಲರಿಗೂ, “ಈ ನೆಲಹಾಸುಗಳು ಹೊಸಗ್ರಾನೈಟ್ಬೆಂಚಿಗೆ ಸ್ವಲ್ಪವೂ ಹೊಂದುವುದಿಲ್ಲ, ಬೇರೆ ಹಾಕಿಸಿಬಿಡೋಣಎಂದು ಎಲ್ಲರಿಗೂ ಮನವರಿಕೆ ಮಾಡಿದ. ಸರಿ ಮತ್ತೆ ಪತ್ರ, ಸಹಿ, ಮೊದಲು ನಡೆದಾಡುವ ಜಾಗಕ್ಕೆಹಾಕಿದ್ದ ನೆಲಹಾಸುಗಳು ಮಾಯ.  
ಈಗ ನೆಲಹಾಸಿನ ಜೊತೆಗೆ ಅದರಪಕ್ಕದಲ್ಲಿ ಕ್ಲೇಬ್ಲಾಕಿನ ಎರಡು ಮೋಟುಗೋಡೆಗಳನ್ನು ಹಾಕಿಸಿ, ಜೊತೆಗೆ ಹೊಸ ನೆಲಹಾಸು ಹಾಕಿಸಲಾಯಿತು. ಜೊತೆಗೆ ಉದ್ಯಾನದಬೇಲಿಯಾಗಿದ್ದ ಕರವೀರಪುಷ್ಪಗಿಡದ ಹೆಡ್ಜನ್ನು ಕಿತ್ತು ಅದಕ್ಕೆ ಕಲ್ಲಿನಗೋಡೆಯನ್ನು ಕಟ್ಟಲಾಯಿತು. ಜನ ಈಗ ಮೋರಿಯಂತೆ ಕಾಣುವ ಎರಡು ಮೋಟುಗೋಡೆಗಳ ನಡುವೆ ಸರದಿಯಸಾಲಿನಲ್ಲಿ ನಡೆದವರಂತೆ ನಡೆಯುತ್ತಾರೆ. ಮಳೆ ಬಂದರೆ ಪಕ್ಕಕ್ಕೆ ನೀರುಹರಿಯಲಾಗದೆ ನೀರು ಅಲ್ಲಲ್ಲೇ ನಿಂತುಬಿಡುತ್ತದೆ. ಯಾರಾದರೂ ಬೇಗಹೋಗಬೇಕೆಂದರೆ ಪಕ್ಕಕ್ಕೆಸರಿದು ದಾಟಲಾಗುವುದಿಲ್ಲ, ಏಕೆಂದರೆ ಮೋಟುಗೋಡೆಗಳು ಅಡ್ಡ. ಮುಂದೆ ಏನಾಗುತ್ತದೆ ಎಂದು ಈಗ ನಿಮಗೆ ಅರ್ಥವಾಗಿರಬೇಕು. 
ಈಗ ಜುಬ್ಬಾಧಾರಿ ವ್ಯಕ್ತಿ ಉದ್ಯಾನವನವೆಂಬ ಅಕ್ಷಯಪಾತ್ರೆಯಿಂದ ದ್ವಿಚಕ್ರವಾಹನದಿಂದ ದೊಡ್ಡಕಾರಿಗೆ ಬಡ್ತಿಹೊಂದಿ, ತನ್ನ ಕಚೇರಿಯಲ್ಲಿ ಕುಳಿತು "ಯಾರದೋ ದುಡ್ಡು, ಎಲ್ಲಮ್ಮನ ಜಾತ್ರೆ" ಎಂದು ಪಡ್ಡೆ ಹುಡುಗರು ಪಾಪ್ ಶೈಲಿಯಲ್ಲಿ ಕಿರುಚುತ್ತಿದ್ದ ಹಾಡೊಂದಕ್ಕೆ ಗುನುಗುನಿಸುತ್ತಾ  ಜನರಿಂದ ಬರಬೇಕಾಗಿರುವ ಇನ್ನೊಂದು ಪತ್ರಕ್ಕೆ ಕಾಯುತ್ತಿದ್ದಾನೆ. - ಜಗದೀಶ ಚಂದ್ರ 

No comments:

Post a Comment