Saturday, April 18, 2020

ಸುಖಜೀವನಕ್ಕೆ ದುಃಖವೂ ಇರಬೇಕು

ಸುಖಜೀವನಕ್ಕೆ ದುಃಖವೂ ಇರಬೇಕು 

ರಾಜಲಕ್ಷ್ಮಿಗೆ ಅಂದು ಆಘಾತವಾಗಿತ್ತು. ಅಮೆರಿಕದಲ್ಲಿದ್ದ ಮಗಳು ಸಂದೇಶ ಕಳಿಸಿದ್ದಳು. ಅಳಿಯ ಆಸ್ಪತ್ರೆಯಲ್ಲಿ ದಿನ ಎಣಿಸುತ್ತಿದ್ದಾರೆ, ಮಗುವನ್ನೂ ಬೇರೆ ಇಟ್ಟುಬಿಟ್ಟಿದ್ದಾರೆ, ತಾನು ಕರೋನ ಪರೀಕ್ಷೆಯಲ್ಲಿ ಗೆದ್ದು ಈಗ ಸೋತುಬಿಟ್ಟಿದ್ದೇನೆ, ಏನೂ ಮಾಡಲು ತೋಚುತ್ತಿಲ್ಲ ಎಂದು ಬರೆದಿದ್ದಳು. ರಾಜಲಕ್ಷ್ಮಿ ಅದನ್ನು ಓದಿ ಮಗಳಿಗೆ ಧೈರ್ಯವಾಗಿರು, ಎಲ್ಲಾ ಸರಿ ಹೋಗುತ್ತದೆ ಎಂದು ಸಮಾಧಾನ ಹೇಳಿದ್ದರು.
ರಾಜಲಕ್ಷ್ಮಿಯ ಮಗಳು ಅಂಬಿಕಾ ಅಶೋಕನನ್ನು ಮದುವೆಯಾಗಿ ಅಮೇರಿಕಾದಲ್ಲಿ ನೆಲೆಸಿದ್ದಳು. ಅಶೋಕ ದೊಡ್ಡ ಕೆಲಸದಲ್ಲಿದ್ದನು. ಆಗಾಗ್ಗೆ ಹೊರಗಡೆ ಹೋಗಿಬರಬೇಕಾಗಿತ್ತು. ಹಾಗೆಯೇ ಈ ಬಾರಿ ಹಾಂಕಾಂಗಿಗೆ ಹೋಗಿ ಬಂದದ್ದೇ ಒಂದು ಪ್ರಮಾದವಾಯಿತು. ಅವನಿಗೆ ಕರೋನ ಸೋಂಕು ತಗುಲಿಬಿಟ್ಟಿತ್ತು. ಅದು ಮಗುವಿಗೂ ಅಂಟಿತ್ತು. ಅಂಬಿಕಾ ಹೇಗೋ ಬಚಾವಾಗಿದ್ದಳು. ಆದರೆ ಗಂಡ, ಪುಟ್ಟ ಮಗು ಇಬ್ಬರಿಗೂ ಅದು ತಗುಲಿದ್ದುದು ಅವಳನ್ನು ಅಧೀರಳನ್ನಾಗಿ ಮಾಡಿತ್ತು. ಸುಖದ ಸುಪ್ಪತ್ತಿಗೆಯಲ್ಲಿಯೇ ಬೆಳೆದ ಅವಳಿಗೆ ಇದು ನಿಜವಾದ ಆಘಾತವೇ ಆಗಿತ್ತು. 
ಅಂಬಿಕಾ ಇಂಜಿನೀರಿಂಗ್ ಓದಿ ಮುಂದೆ ಓದಬೇಕೆಂದಿದ್ದಳು. ಅಷ್ಟರಲ್ಲಿ ಮದುವೆ ಗೊತ್ತಾಗಿ ಅಶೋಕನನ್ನು ಮದುವೆಯಾಗಿ ಅಮೆರಿಕಕ್ಕೆ ಬಂದು ಬಿಟ್ಟಿದ್ದಳು. ನಂತರ ಮಗುವಾಗಿ ಸಂಸಾರ ಬಂಧನದಲ್ಲಿ ಸಿಲುಕಿದ್ದಳು. ಗಂಡನ ಸಂಪಾದನೆ ಚೆನ್ನಾಗಿದ್ದುದರಿಂದ ಅವಳಿಗೆ ಎಲ್ಲೂ ಹೋಗುವ ಪ್ರಮೇಯ ಬರಲಿಲ್ಲ. ಈಗ ಕರೋನ ಅವಳನ್ನು ನಿಜವಾಗಿ ಮಾರಿಯಾಗಿ ಕಾಡಲಾರಂಭಿಸಿತ್ತು. ಹತ್ತಿರದವರು ಯಾರೂ ಇಲ್ಲದುದರಿಂದ ಏನು ಮಾಡಲೂ ತೋಚದಾಗಿತ್ತು. ಅಪ್ಪ ಬೇರೆ ಇಲ್ಲ, ಅಮ್ಮನ ಬಳಿ ತನ್ನ ದುಃಖವನ್ನು ತೋಡಿಕೊಂಡಿದ್ದಳು. ಅಮ್ಮ ರಾಜಲಕ್ಷ್ಮಿಗೆ ಧೈರ್ಯವಾಗಿರು ಎಂದು ಹೇಳುವುದಷ್ಟೇ ಇದ್ದ ದಾರಿ. ಅವರು ತಮ್ಮ ಕತೆಯನ್ನೇ ಅವಳಿಗೆ ಹೇಳಿ ಈಗ ನೋಡು ನಾನು ಧೈರ್ಯವಾಗಿ ಬದುಕಿ ಬಾಳುತ್ತಿಲ್ಲವೇ ಎಂದು ಅವಳಿಗೆ ಮಾನಸಿಕ ಧೈರ್ಯ ತುಂಬಿದ್ದರು. 
ಅಂಬಿಕಾಗೆ ಎರಡು ವರ್ಷ ಆಗಿದ್ದಾಗ ತನ್ನ ತಂದೆಯನ್ನು ಕಳೆದುಕೊಂಡ ನತದೃಷ್ಠೆಯಾದಳು. ಅವಳಿಗೆ ಅಪ್ಪನ ನೆನಪೇ ಇಲ್ಲ. ಅಮ್ಮನೇ ಅಪ್ಪನೂ ಆಗಿದ್ದಳು. ಅವಳನ್ನು ಬೆಳೆಸಿ ದೊಡ್ಡವಳನ್ನಾಗಿ ಮಾಡಲು ಪಟ್ಟ ಕಷ್ಟ ರಾಜಲಕ್ಷ್ಮಿಗೆ ಮಾತ್ರ ಗೊತ್ತು. ಇದ್ದಕ್ಕಿದ್ದ ಹಾಗೆ ಅಪಘಾತದಲ್ಲಿ ಮೃತರಾದರು ಹರೀಶ್. ಅವರು ಏನು ಸಂಪಾದಿಸಿದ್ದರು, ಏನು ಕೂಡಿಟ್ಟಿದ್ದರು ಒಂದು ರಾಜಲಕ್ಷ್ಮಿಗೆ ಗೊತ್ತಿರಲಿಲ್ಲ. ಅವಳಿಗೆ ಮೋಸಮಾಡಿ, ಅಪ್ತರೆನಿಸಿಕೊಂಡವರು ಶ್ರೀಮಂತರಾದರು. ಬಿಡುಗಾಸಿಲ್ಲದ ಪರಿಸ್ಥಿತಿಯಿಂದ ಈ ಮಟ್ಟಕ್ಕೆ  ಬೆಳೆದರು ಎಂದರೆ, ಊಹೆ ಮಾಡಿ ಅವರೆಷ್ಟು ಕಷ್ಟ ಪಟ್ಟರೆಂಬುದನ್ನು. 
ಅಂಬಿಕಾ ಒಂದು ಸಮಯದಲ್ಲಿ, ಗಂಡ ಮಗುವಿಗೆ ಏನಾದರೂ ಹೆಚ್ಚು ಕಮ್ಮಿಯಾದರೆ ತಾನು ಜೀವ ಸಹಿತ ಇರುವುದಿಲ್ಲ ಎಂದಿದ್ದಾಗ, ರಾಜಲಕ್ಷ್ಮಿ, ನಾನು ಇದಕ್ಕಾಗಿಯೇ ನಿನ್ನನ್ನು ಇಷ್ಟು ದೊಡ್ಡವಳಾಗಿ ಮಾಡಿದ್ದು ಎಂದು ಕೇಳಿ ತಮ್ಮ ಕತೆಯೆಲ್ಲವನ್ನು ವಿಸ್ತಾರವಾಗಿ ಹೇಳಿಕೊಂಡಿದ್ದರು. ಆಗಲೇ ಅಂಬಿಕಾಗೆ ತನ್ನ ಅಮ್ಮನ ನಿಜವಾದ ಕಥೆ ಗೊತ್ತಾದದ್ದು. 
ನಂತರ ರಾಜಲಕ್ಷ್ಮಿ, ಸುಖ ಸಂತೋಷವನ್ನು ದುಃಖಗಳನ್ನು ಅಳೆಯುವುದು ಕಷ್ಟ. ಅದು ಅವರವರ ಮನೋಸ್ಥಿತಿಯ ಮೇಲೆ ಅವಲಂಬಿಸಿರುತ್ತದೆ. ಸುಖ, ದುಃಖ ವೆಂಬುದು ಒಂದೇ ನಾಣ್ಯದ ಎರಡು ಮುಖದಂತೆ ಅಥವಾ ಹಗಲು ರಾತ್ರಿಯಂತೆ. ಕೇವಲ ಸುಖವೊಂದೇ ಇರಲು ಸಾಧ್ಯವೇ ಇಲ್ಲ. ಜೀವನದಲ್ಲಿ ದುಃಖವಿರಬೇಕು, ಅದರಿಂದ ಕಲಿಯುವುದು ಬಹಳ. ಈ ದುಃಖದಿಂದ ಹೊರಬಂದರೆ ಆಗ ಅದರಿಂದಲೇ ಸುಖದ ಅನುಭವವಾಗುವುದು. ಅತೀ ಸುಖವಿದ್ದರೆ ಸ್ವಲ್ಪ ದುಃಖವಾದರೂ ಸಹಿಸಲು ಅಸಾಧ್ಯ ಎನ್ನಿಸುವುದು. ಹೀಗಾಗಿಯೇ ಇಂದು ಆತ್ಮಹತ್ಯೆಗಳು ಹೆಚ್ಚುತ್ತಿರುವುದು. ದುಃಖವಿದ್ದವರು ಗೋಳಾಡಿದರೂ ಸ್ವಲ್ಪ ಸುಖ ಸಿಕ್ಕರೂ ಅದನ್ನು ಸಂತೋಷದಿಂದ ಅನುಭವಿಸುತ್ತಾರೆ ಎಂದು ವೇದಾಂತಿಯಂತೆ ನುಡಿದು ಮಗಳಿಗೆ ಸಾಂತ್ವನ ಹೇಳಿದ್ದರು. 
ಅಂಬಿಕಾ ತನ್ನ ಗಂಡ, ಮಗು ಇಬ್ಬರನ್ನೂ ಕಳೆದುಕೊಂಡಳು. ಈಗ ಅಮ್ಮನ ಮನೆಗೆ ಹಿಂತಿರುಗಿ ಬಂದಿದ್ದಾಳೆ. ಆ ದುಃಖದಿಂದ ಪಾರಾಗಿ ಅದನ್ನು ಕೆಟ್ಟ ಕನಸಿನಂತೆ ಮರೆತು ಈ ಹೊಸಜೀವನದಲ್ಲಿ ಸುಖವನ್ನು ಅನುಭವಿಸುತ್ತಿದ್ದಾಳೆ. ಗಂಡು ಮಗನಂತೆ ಅಮ್ಮನನ್ನು ನೋಡಿಕೊಳ್ಳುತ್ತಿದ್ದಾಳೆ. ಅಮ್ಮ ಮರುಮದುವೆ ಆಗು ಎಂದು ಹೇಳುತ್ತಿದ್ದಾಳೆ. ಅಂಬಿಕಾ, ನೋಡೋಣ, ನನ್ನ ಹಣೆಯಲ್ಲಿ  ಇನ್ನೊಂದು ಮದುವೆ ಎಂದು ಬರೆದಿದ್ದರೆ ಆಗುತ್ತದೆ, ಇಲ್ಲವಾದಲ್ಲಿ ನನ್ನದೇ ಆದ ಜೀವನವಿದೆ, ಅದರಲ್ಲಿಯೇ ಸುಖ, ದುಃಖ ಎಲ್ಲವನ್ನೂ ಅನುಭವಿಸಿ ಆರಾಮವಾಗಿರುತ್ತೇನೆ ಎಂದು ಅಮ್ಮನಿಗೆ ಸಮಾಧಾನ ಮಾಡುತ್ತಾಳೆ. 
ಈಗ ಸಧ್ಯಕ್ಕಂತೂ ದುಃಖ, ಸುಖಗಳನ್ನು ಅನುಭವಿಸಿ ಅದಕ್ಕೆ ಹೆಚ್ಚು ಬೆಲೆಕೊಡದೆ, ಇಬ್ಬರೂ ತಮಗೆ ಬೇಕಾದಂತೆ ಜೀವನ ನಡೆಸಿ ಆರಾಮವಾಗಿ ಇದ್ದಾರೆ. ದುಃಖದಿಂದ ಕುಗ್ಗಿಲ್ಲ, ಸುಖದಿಂದ ಹಿಗ್ಗಿಲ್ಲ. - ಜಗದೀಶ ಚಂದ್ರ 

No comments:

Post a Comment