Saturday, June 12, 2021

ತುಂಟ ಕೃಷ್ಣ ತರಕಾರಿ ಮಾರಿದ್ದು

 ತುಂಟ ಕೃಷ್ಣ ತರಕಾರಿ ಮಾರಿದ್ದು 

ಇದು ಶಾಲೆಯಲ್ಲಿ ನಡೆದ ಘಟನೆ. ನನ್ನ ಬಂಧುಗಳೊಬ್ಬರು ಇದನ್ನು ಹೇಳಿದರು. ನಕ್ಕು ನಕ್ಕೂ ಸುಸ್ತಾಯಿತು. ನಿಮ್ಮೊಂದಿಗೂ ಹಂಚಿಕೊಳ್ಳುತ್ತಿದ್ದೇನೆ. 
ಶಾಲಾ ವಾರ್ಷಿಕೋತ್ಸವಕ್ಕೆ ಮಕ್ಕಳಿಗೆ ಹಾಡು, ನೃತ್ಯ, ನಾಟಕ ಎಲ್ಲವನ್ನು ಮಾಡಿಸಲು ತಯಾರಿ ಮಾಡಿಕೊಂಡಿದ್ದರು. ರಶ್ಮಿ, ಅಭಿ ಇಬ್ಬರೂ ಒಂದೇ ತರಗತಿಯ ಮಕ್ಕಳು. ಅಕ್ಕ ಪಕ್ಕದ ಮನೆಯವರೂ ಸಹ. ಆತ್ಮೀಯ ಗೆಳೆಯರೂ ಆಗಿದ್ದರು. 
ಶಾಲೆಯಲ್ಲಿ ರಶ್ಮಿಗೆ ಕೃಷ್ಣನ ವೇಷದ ಹಾಡು ಹಾಗೂ ಅಭಿಗೆ ತರಕಾರಿ ಮಾರುವ ಹಾಡಿಗೆ ನಾಟ್ಯ ನಿಗದಿ ಮಾಡಿದ್ದರು. ರಶ್ಮಿಗೆ ಅದೇಕೋ ಕೃಷ್ಣನಂತೆ ಹುಡುಗನಾಗಿ ನೃತ್ಯ ಮಾಡಲು ತಕರಾರು, ಮಾಡಲ್ಲಾ ಎಂದು ಗಲಾಟೆ. ಮೇಡಂಗೆ ಹೇಳಿದರೆ ಬೈದು ಬಾಯಿ ಮುಚ್ಚಿಸಿದ್ದರು. ಮನೆಯಲ್ಲೂ ಎಲ್ಲರೂ ಅವಳಿಗೆ ಬುದ್ಧಿ ಹೇಳಿ, ಪುಸಲಾಯಿಸಿ, ನೃತ್ಯಕ್ಕೆ ಒಪ್ಪಿಸಿದ್ದರು. ಅವಳಿಗೆ ಅಭಿ, ಬೇಕೇ ಬೇಕೇ ತರಕಾರಿ ಎಂಬ ಹಾಡನ್ನು ಹೇಳಿ ನೃತ್ಯ ಮಾಡುತ್ತಿದ್ದರೆ, ತನಗೂ ಅದನ್ನು ಮಾಡಬೇಕು ಎಂದು ಅಸೆ. ಮನೆಯಲ್ಲಿ ಅಭಿ ಅದನ್ನು ಪ್ರಾಕ್ಟೀಸ್ ಮಾಡುತ್ತಿದ್ದರೆ, ತಾನೂ ಬಂದು ಅವನೊಂದಿಗೆ ಕುಣಿಯುತ್ತಿದ್ದಳು. ಶಾಲೆಯಲ್ಲೂ ಅವಳು ಕೃಷ್ಣನ ಹಾಡಿಗಿಂತ ತರಕಾರಿ ಹಾಡಿಗೆ ಕುಣಿದದ್ದೇ ಹೆಚ್ಚು. 
ಅಂತೂ ವಾರ್ಷಿಕೋತ್ಸವದ ದಿನ ಬಂತು. ಶಾಲೆಯ ಒಂದು ದೊಡ್ಡ ಹಾಲ್ ನಲ್ಲಿ ಸಮಾರಂಭ ಇತ್ತು. ಎಲ್ಲರೂ ನೆರೆದಿದ್ದರು. ಅಭಿಯ ಸರದಿ ಬಂತು ತುಂಬಾ ಚೆನ್ನಾಗಿ ಹಾಡುತ್ತಾ ತರಕಾರಿಯ ಹಾಡನ್ನು ಹೇಳುತ್ತಾ ನೃತ್ಯ ಮಾಡಿದ. ಎಲ್ಲರಿಂದಲೂ ಭಾರಿ ಕರತಾಡನ ಬಂತು. ಸ್ವಲ್ಪ ಸಮಯದ ನಂತರ ರಶ್ಮಿಯ ಸರದಿ ಬಂತು. ಕಿರೀಟ, ನವಿಲುಗರಿ, ಕೊಳಲು ಎಲ್ಲವನ್ನು ಧರಿಸಿದ ರಶ್ಮಿ ನಿಜವಾಗಿ ಕೃಷ್ಣನಂತೆಯೇ ಕಾಣುತ್ತಿದ್ದಳು. ಸ್ಟೇಜಿಗೆ ಹೋಗಿ ಸುಮ್ಮನೆ ನಿಂತು ಬಿಟ್ಟಳು. ಎಲ್ಲರೂ, ಹಾಡು ಹಾಡು, ಎಂದು ಹುರಿದುಂಬಿಸಿದರು. ಆಗ ರಶ್ಮಿ ಬೇಕೇ ಬೇಕೇ ತರಕಾರಿ ಎಂದು ಹಾಡುತ್ತ ಕುಣಿಯಲು ಆರಂಭಿಸಿದಳು. ಅವಳ ಮೇಡಂಗೆ ಅಸಾಧ್ಯ ಸಿಟ್ಟು ಬಂತು. ಬೈಯಲು ಎದ್ದು ನಿಂತರು. ಆದರೆ ಪ್ರಿನ್ಸಿಪಾಲ್ ಮೇಡಂ ಎದ್ದು ನಿಂತು, ಎಲ್ಲರಿಗೂ, "ಮಕ್ಕಳು ಹೇಗೆ ಮಾಡುತ್ತಾರೋ ಮಾಡಲಿ, ಸುಮ್ಮನಿರಿ, ಅವರು ಏನು ಮಾಡಿದರೂ ಚೆನ್ನ" ಎಂದರು. ಎಲ್ಲರೂ ನಗುತ್ತಾ ಕೃಷ್ಣನ ತರಕಾರಿ ಹಾಡಿನ ಅಭಿನಯ ನೋಡಿ ಸಂತಸ ಪಟ್ಟರು. ನಕ್ಕು ನಕ್ಕು ಸುಸ್ತಾದರು. ನಂತರ ಅವಳ ಮೇಡಂ ಸ್ಟೇಜ್ ಬಳಿ ಹೋಗಿ, "ಚೆನ್ನಾಗಿ ಮಾಡಿದಿ, ತುಂಬಾ ಜಾಣೆ. ಈಗ ಕೃಷ್ಣನ ಹಾಡನ್ನು ಹಾಡಿ ನೃತ್ಯ ಮಾಡು" ಎಂದರು. ರಶ್ಮಿ ಅದನ್ನೂ ಚೆನ್ನಾಗಿ ಮಾಡಿದಳು. ಆದರೆ ನೆರೆದಿದ್ದ ಜನ, ಕೃಷ್ಣನ ತರಕಾರಿ ಹಾಡನ್ನೇ ಹೆಚ್ಚು ಇಷ್ಟ ಪಟ್ಟು ನಕ್ಕು ನಲಿದಾಡಿದರು. 
- ಜಗದೀಶ ಚಂದ್ರ ಬಿ ಎಸ್ - 

Friday, June 11, 2021

ದೇವರಿದ್ದಾನೆ 

ಗುಡಿಸಲಲ್ಲಿ ರಾಮು ಅಮ್ಮನನ್ನು "ಹಸಿವು, ತಿನ್ನಲು ಏನಾದರೂ ಕೊಡಮ್ಮಾ" ಎಂದು ಪೀಡಿಸುತ್ತಿದ್ದ. ಅವಳು ದುಃಖದಿಂದ ಮಗು ಬಾಗಿಲ ಬಳಿ ನೀನು ಇಟ್ಟಿರುವ ಕೃಷ್ಣನ ವಿಗ್ರಹ ಇದೆಯಲ್ಲ, ಅದರ ಮುಂದೆ ಕುಳಿತು ದೇವರನ್ನು ಬೇಡಿಕೋ" ಎಂದು ಬೀಸುವ ದೊಣ್ಣೆಯನ್ನು ತಪ್ಪಿಸಿ, ಅಲ್ಲೇ ಹಿತ್ತಲಲ್ಲಿ ಬೆಳೆದಿದ್ದ ಮುಳ್ಳು ಹರವೆ ಸೊಪ್ಪನ್ನು ಬಿಡಿಸತೊಡಗಿದಳು. "ಏನೂ ಇಲ್ಲ ಎಂದರೆ ಈ ಸೊಪ್ಪಿನ ಸಾರೇ ಗತಿ" ಎಂದು ಮನದಲ್ಲಿ ದೇವರನ್ನು ಪ್ರಾರ್ಥಿಸಿದಳು. ಅದೇ ವೇಳೆಗೆ ರಾಮು ಸಾಕಿದ ನಾಯಿ ಓಡಿ ಬಂದು ಗುಡಿಸಲೊಳಗೆ ಸೇರಿಕೊಂಡಿತು. ಅದನ್ನು ಅಟ್ಟಿಸಿಕೊಂಡು ಬಂದ ಒಂದು ದೊಡ್ಡ ನಾಯಿ ಬಾಗಿಲ ಬಳಿ ಬೌ ಬೌ ಎಂದು ಬೊಗಳತೊಡಗಿತು. ಅದರ ಹಿಂದೆಯೇ ಅದರ ಒಡೆಯ, ಜೊತೆಗೆ ಅವನ ಪುಟ್ಟ ಮಗ ಓಡಿ ಬಂದು ತಮ್ಮ ನಾಯಿಗೆ ಬೆಲ್ಟ್ ಹಾಕಿ, "ಸುಮ್ಮನೆ ಬಾ, ಎಷ್ಟು ಗಲಾಟೆ ಎಂದು ಬೈದರು". ಆಗ ಆ ಹುಡುಗ ರಾಮುವನ್ನು ನೋಡಿ ನೀನು ಅಲ್ಲಿ ಏನು ಮಾಡುತ್ತಿದ್ದಿ? ಎಂದು ಕೇಳಿದ. ಆಗ ರಾಮು "ಇದು ನನ್ನ ದೇವರು, ಇವತ್ತು ಮನೆಯಲ್ಲಿ ಏನೂ ಇಲ್ಲ, ಏನಾದರೂ ತಿನ್ನಲು ಕೊಡು, ಎಂದು ಕೇಳಿಕೊಳ್ಳುತ್ತಿದ್ದೀನಿ" ಎಂದ. ಆಗ ಆ ಹುಡುಗನ ಅಪ್ಪ " ಆ ದೇವರು ನಿನಗೆ ಏನಾದರೂ ಕೊಡುತ್ತಾನೇನೋ?" ಎಂದರು. ರಾಮು, "ನನ್ನ ದೇವರು, ನಾನು ಕೇಳಿದ್ದನ್ನು ಕೊಟ್ಟೆ ಕೊಡುತ್ತಾನೆ" ಎಂದು ವಿಶ್ವಾಸದಿಂದ ಹೇಳಿದ. ಆಗ ಆ ಒಡೆಯ ರಾಮುವಿಗೆ ಕಣ್ಣು ಮುಚ್ಚಿಕೋ ಎಂದು ಹೇಳಿ ಮೆಲ್ಲಗೆ ಆ ವಿಗ್ರಹದ ಹಿಂದೆ ಒಂದು ಬಿಸ್ಕತ್ ಪ್ಯಾಕೆಟ್ ಮತ್ತು ನೂರು ರೂಪಾಯಿ ನೋಟು ಇಟ್ಟು ಸುಮ್ಮನೆ ಹೊರಟು ಹೋದರು. ಕಣ್ಣು ಬಿಟ್ಟ ರಾಮನಿಗೆ ಆ ನಾಯಿ, ಅದರ ಒಡೆಯ, ಆ ಹುಡುಗ ಯಾರೂ ಕಾಣಿಸಲಿಲ್ಲ. ಆದರೆ ದೇವರ ಹಿಂದೆ ಇದ್ದ ಬಿಸ್ಕತ್ ಪ್ಯಾಕೆಟ್, ೧೦೦ ರೂ  ಕಂಡಿತು. ಅಮ್ಮನನ್ನು ಕರೆದು " ಅಮ್ಮ, ಇಲ್ಲಿ ನೋಡು ದೇವರು ನಾನು ಹೇಳಿದ್ದನ್ನು ಕೇಳಿಸಿಕೊಂಡು ಇದನ್ನು ಕೊಟ್ಟಿದ್ದಾನೆ" ಎಂದು ಸಂತೋಷದಿಂದ ಕಿರುಚಿದ. ಅಮ್ಮ ಬಂದು "ಹೌದು ಕಂದ, ದೇವರು ಖಂಡಿತ ಇದ್ದಾನೆ" ಎಂದು ದೇವರಿಗೆ ಕೈ ಮುಗಿದಳು. 

ದೇವರು ಯಾವ ರೂಪದಲ್ಲಿ ಬರುತ್ತಾನೋ ಯಾರಿಗೆ ಗೊತ್ತು. ನಮ್ಮೆಲ್ಲರಲ್ಲೂ ದೇವರಿದ್ದಾನೆ ಅಲ್ಲವೇ? 

- ಜಗದೀಶ ಚಂದ್ರ ಬಿ ಎಸ್ -

Wednesday, June 9, 2021

ಬೇಡದ ವಸ್ತುಗಳು

 ಬೇಡದ ವಸ್ತುಗಳು

"ತನಗಿಲ್ಲದಾ ವಸ್ತು ಎಲ್ಲಿದ್ದರೇನು" ಎಂಬ ಪುರಂದರ ದಾಸರ ದೇವರನಾಮದಲ್ಲಿನ ಕೆಲವು ಸಂಗತಿಗಳು ಇಂದಿಗೂ ಪ್ರಸ್ತುತ. ಅವರ ಎಲ್ಲ ಚಿಂತನೆಗಳು ಕಡೆಗೆ ದೈವ ಭಕ್ತಿಗೆ ತಿರುಗಿಬಿಡುತ್ತವೆ. ಆದರೆ ಇಂದಿನ ಕಾಲದಲ್ಲಿ ಜನರು ವೇದಾಂತ, ದೈವಭಕ್ತಿಯ ಕಡೆ ತಿರುಗುವುದು ಕಡಿಮೆ. ಅವರು ಹೇಳಿರುವುದನ್ನು ಇಂದಿಗೆ ನಾವು ಹೇಗೆ ಮಾರ್ಪಟುಮಾಡಿ ಕೊಳ್ಳಬಹುದು ಎಂಬುದು ಮುಖ್ಯ.
ನಮಗೆ ಬೇಡದ ವಸ್ತುಗಳು, ಆಗದ ವಸ್ತುಗಳೂ ಇದ್ದರೆಷ್ಟು, ಬಿಟ್ಟರೆಷ್ಟು ಅಲ್ಲವೇ. ಇಲ್ಲಿ ವಸ್ತುಗಳು ಎಂದರೆ ಅವು ನಮ್ಮ ಸಂಬಂಧಗಳೂ ಆಗಬಹುದು. ಸಂಬಂಧಗಳನ್ನು ಸುಲಭವಾಗಿ ಕಡಿದುಕೊಳ್ಳಲು ಆಗುವುದಿಲ್ಲ. ಆದರೆ ಅವನ್ನು ಅರ್ಥ ಮಾಡಿಕೊಂಡು ನಾವು ಹೊಂದಿ ಬಾಳುವುದನ್ನು ಕಲಿಯಬೇಕು.
ನಮ್ಮನ್ನು ನೋಡಿಕೊಳ್ಳಲು ಆಗದ ಮಕ್ಕಳು ಇದ್ದರೆಷ್ಟು ಬಿಟ್ಟರೆಷ್ಟು. ಜೊತೆಗಿರಲು ಇಷ್ಟ ಪಡದ ಹೆಂಡತಿ ಇದ್ದರೆಷ್ಟು ಬಿಟ್ಟರೆಷ್ಟು. ಹಾಗೆಂದು ಅವರನ್ನು ಬಿಟ್ಟು ಬಿಡಲು ಆಗುವುದೇ? ಹೀಗೇಕೆ ಆಗುತ್ತಿದೆ ಎಂದು ಮನನ ಮಾಡಿಕೊಂಡು ಅದನ್ನು ಸರಿ ಪಡಿಸಿಕೊಳ್ಳಬೇಕು.
ಆದರವಿಲ್ಲದೆ ಹಾಕಿದ ಊಟದಿಂದ ತೃಪ್ತಿ ಸಿಗುವುದಿಲ್ಲ. ಕರೆಯದೇ ಹೋದ ಮನೆಯಲ್ಲಿ ಆಗುವ ಮುಜುಗರ ನಮಗೆ ಬೇಕೇ? ಮನೆ ತುಂಬಾ ಬೇಕಿಲ್ಲದ ಔಷಧಗಳಿದ್ದರೇನು ಪ್ರಯೋಜನ? ಕೈಗೆ ಎಟುಕದ ಜಾಗದಲ್ಲಿ ಎಷ್ಟು ಹಣವಿದ್ದರೇನು ಫಲ? ಆರೋಗ್ಯವೇ ಇಲ್ಲದೆ ನರಳುತ್ತಾ ಜೀವಿಸಿದ್ದು ಏನು ಫಲ? ಅರ್ಥ ತಿಳಿಯದೆ ಓದಿ ಓದಿ ಏನು ಫಲ? ಈ ಎಲ್ಲ ಅನುಭವಗಳು ಒಂದಲ್ಲ ಒಂದು ರೀತಿಯಲ್ಲಿ ನಮಗೆ ಆಗಿರುತ್ತದೆ. ನಾವು ಅದರಿಂದ ಪಾಠ ಕಲಿತು ಜೀವನ ಸಾಗಿಸಬೇಕು.
ಇವುಗಳಲ್ಲಿ ಅನೇಕ ಸಂಗತಿಗಳನ್ನು ಸರಿದೂಗಿಸಿಕೊಳ್ಳುವುದು ನಮ್ಮ ಕೈಲೇ ಇದೆ. ಅಂದರೆ ಹೆಂಡತಿ ಮಕ್ಕಳೊಂದಿಗೆ ಹೊಂದಿಕೊಂಡು ಬಾಳುವುದನ್ನು ಕಲಿಯಬೇಕು, ಆದರವಿಲ್ಲದ ಕಡೆ ಸುಳಿಯಲೇ ಬಾರದು. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ತತ್ವ ವನ್ನು ಅಳವಡಿಸಿಕೊಳ್ಳಬೇಕು. ಏನು ಓದಿದರೂ ಅರ್ಥ ಮಾಡಿಕೊಳ್ಳಬೇಕು. ವಯಸ್ಸಾಗುತ್ತಾ ಹೋದಂತೆ ಬೇಡದ ವಸ್ತುಗಳನ್ನು ತ್ಯಜಿಸಬೇಕು. ಆಡಂಬರದ, ಐಷಾರಾಮದ ವಸ್ತುಗಳನ್ನು ದೂರ ತಳ್ಳಿದಷ್ಟೂ ಒಳ್ಳೆಯದು. ಇದರೊಂದಿಗೆ ದೇವರು ಎಂಬ ಒಂದು ಶಕ್ತಿಯು ನಮ್ಮನ್ನು ಕಾಯುತ್ತದೆ ಎಂಬ ನಂಬಿಕೆ ಇರಿಸಿಕೊಂಡು ಬಾಳಿದರೆ ನಮ್ಮ ಜೀವನ ಸುಖಮಯವಾಗುತ್ತದೆ.
- ಜಗದೀಶ ಚಂದ್ರ ಬಿ ಎಸ್ - 

ಋಣದ ಸೂತಕ

 ಋಣದ ಸೂತಕ

ಋಣವನ್ನು ಎಂದಿಗೂ ಇಟ್ಟುಕೊಳ್ಳಬಾರದು. ಅದು ಜೀವನ ಪರ್ಯಂತ ನಮ್ಮನ್ನು ಕಾಡುತ್ತಲೇ ಇರುತ್ತದೆ. ಯಾರಿಂದಲಾದರೂ ಏನಾದರೂ ಪಡೆದರೆ, ಅದರಲ್ಲೂ ಸಾಲವನ್ನು ಪಡೆಯಬಾರದು. ಪಡೆದರೆ ಅದನ್ನು ತೀರಿಸದೇ ಇರಬಾರದು. ಅದನ್ನು ತೀರಿಸಲು ಆಗದಿದ್ದರೆ ಅದರಿಂದ ಸಿಗುವ ಬೈಗುಳ, ನಿಂದೆ, ಇವುಗಳನ್ನು ಸಹಿಸಿಕೊಳ್ಳಲು ಅಸಾಧ್ಯ.
ನಮ್ಮ ಕೆಲಸದೊಡೆಯನ ನಿಂದೆಯ ಮಾತನ್ನು ಸಹಿಸಿಕೊಳ್ಳಬಹುದು, ಯಾರಾದರೊಡನೆ ಜಗಳವಾಡಿ ನಂತರ ಶಾಂತವಾಗಬಹುದು ಆದರೆ ಋಣವಿದ್ದರೆ ಜೀವನವೇ ಕಷ್ಟವಾಗುತ್ತದೆ.
ಮಗುವೊಂದು ಹುಟ್ಟಿದರೆ ಹತ್ತು ದಿನದಲ್ಲಿ ಸೂತಕ ಕಳೆಯುತ್ತದೆ, ಮರಣ ಹೊಂದಿದರೆ ಹನ್ನೊಂದು ದಿನದಲ್ಲಿ ಸೂತಕ ಕಳೆಯುತ್ತದೆ ಆದರೆ ಋಣ ಎಂಬ ಸೂತಕ ಬಂದರೆ ಜೀವಮಾನ ಪರ್ಯಂತ, ಕೆಲವೊಮ್ಮೆ ಜನ್ಮ ಜನ್ಮಾಂತರದಲ್ಲೂ ತೀರಿಸಲು ಬವಣೆ ಪಡಬೇಕು.
ನಮಗೆ ಯಾರಾದರೂ ತುಂಬಾ ಕಾಟ ಕೊಡುತ್ತಿದ್ದರೆ ಅವರನ್ನು ಋಣಪಾತಕಗಳು ಎನ್ನುವುದನ್ನು ಕೇಳಿರಬಹುದು. ಅಂದರೆ, ನಾವು ಹಿಂದೆ ಯಾವುದೊ ಜನ್ಮದಲ್ಲಿ ಅವರ ಋಣ ಉಳಿಸಿಕೊಂಡಿದ್ದೇವೋ ಏನೋ, ಅದನ್ನು ತೀರಿಸಿಕೊಳ್ಳಲು ಅವರು ನಮಗೆ ಹೀಗೆ ಈ ಜನ್ಮದಲ್ಲಿ ತೊಂದರೆ ಕೊಡುತ್ತಿದ್ದಾರೆ ಎಂದು ಅರ್ಥ. ಮಕ್ಕಳು ಹಠ ಮಾಡುವುದು, ರಚ್ಚೆ ಹಿಡಿಯುವುದು, ಜಗಳ ಮಾಡುವುದು ಮಾಡಿದರೆ, ಆಗ ಅವನ್ನು "ಋಣಪಾತಕಗಳು" ಎಂದು ಬೈಯುತ್ತಾರೆ. ಎಲ್ಲರಿಗೂ ಪಿತೃ ಋಣ, ದೇವ ಋಣ, ಋಷಿ ಋಣ ಎಂದಿರುತ್ತದೆಯೆಂತೆ. ಅದನ್ನು ತೀರಿಸಲು ಪಿತೃಪಕ್ಷದಲ್ಲಿ ಶ್ರಾದ್ಧ ಮಾಡಬೇಕು ಎನ್ನುತ್ತಾರೆ. ಅದೇನೇ ಇರಲಿ, ತಾಯಿ, ತಂದೆ, ಗುರುಗಳು ಇವರಿಗೆ ನಾವು ಸದಾ ಗೌರವ ಕೊಡಲೇ ಬೇಕು. ಇದ್ದಾಗ ಸರಿಯಾಗಿ ನೋಡಿಕೊಂಡರೆ ಋಣ ತೀರಿಸಿದಂತಾಗುತ್ತದೆ. ಅವರೇ ಇಲ್ಲದಾಗ ಎಷ್ಟು ಮಾಡಿದರೆಷ್ಟು ಬಿಟ್ಟರೆಷ್ಟು? ಆದರೆ ಅವರನ್ನು ನೆನೆದು, ಅವರು ಹೇಳಿಕೊಟ್ಟ ದಾರಿಯಲ್ಲಿ ನಡೆದರೂ ಋಣ ಮುಕ್ತರಾಗಬಹುದು.
ಆದ್ದರಿಂದಲೇ ಈ ಜನ್ಮದಲ್ಲಿ ಯಾವುದೇ ರೀತಿಯ ಋಣ ಉಳಿಸಿಕೊಳ್ಳಬೇಡಿ. ಅಲ್ಲಿಗೆ ಅಲ್ಲೇ ತೀರಿಸಿಬಿಡಿ. ಇದಕ್ಕಾಗಿಯೋ ಏನೋ, "ಋಣವೆಂಬ ಸೂತಕವು ಬಹು ಭಾದೆ ಪಡಿಸುತಿದೆ, ಗುಣ ನಿಧಿಯೇ ನೀ ಎನ್ನ ಋಣವ ಪರಿಹರಿಸೋ" ಎಂದು ಪುರಂದರ ದಾಸರು ಬರೆದು, ಅದನ್ನು ಕಳೆಯಲು ದೇವರನ್ನು ಮೊರೆ ಹೋಗುವುದೊಂದೇ ಮಾರ್ಗ ಎಂದು ಹೇಳಿದ್ದಾರೆ.
- ಜಗದೀಶ ಚಂದ್ರ ಬಿ ಎಸ್ - 

Monday, June 7, 2021

ಸಹನಾಮಯಿ

ಸೀಮಾ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಡಿ ನಂತರ ಡಾಕ್ಟರೇಟ್ ಪದವಿಯನ್ನು ಗಳಿಸಿದ್ದಾಳೆ. ತನ್ನ ಸ್ವಂತ ಪರಿಶ್ರಮದಿಂದ ಮೇಲೇರಿ ಈಗ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾಳೆ. ಅವಳು ಕಾಲೇಜಿನಲ್ಲಿ ಈಗಾಗಲೇ ಮುಖ್ಯಸ್ಥೆ ಆಗಬೇಕಿತ್ತು, ಆದರೆ ಅವಳಿಗಿಂತಲೂ ಅನುಭವದಲ್ಲಿ ಕಿರಿಯರಾಗಿದ್ದ, ಆದರೆ ವಯಸ್ಸಿನಲ್ಲಿ ಹಿರಿಯರಾಗಿದ್ದ "ಕವಿಪ" ಅವರನ್ನು ಕಾಲೇಜು ಮುಖ್ಯಸ್ಥರನ್ನಾಗಿ ಮಾಡಿತು. ಸೀಮಾ ಏನೂ ಮಾತನಾಡುವಂತಿರಲಿಲ್ಲ, ಏಕೆಂದರೆ ಅದು ಪ್ರೈವೇಟ್ ಕಾಲೇಜು. ಆಡಳಿತ ಮಂಡಳಿ ತಮಗೆ ಇಷ್ಟಬಂದಂತೆ ಅನುಷ್ಠಾನ ಗೊಳಿಸಬಹುದು. ಕವಿಪ, ಹಿರಿಯರು, ಅವರಿಗೆ ಇನ್ನು ಕೆಲವೇ ವರ್ಷಗಳಲ್ಲಿ ನಿವೃತ್ತಿ ಆಗುತ್ತದೆ, ಸೀಮಾ ಚಿಕ್ಕವಳು ಮುಂದೆ ಅವಳಿಗೆ ಅವಕಾಶವಿದೆ ಎಂಬ ಕಾರಣ ಹೇಳಿ, ಕವಿಪ ಅವರನ್ನೆ ಮುಖ್ಯಸ್ಥರನ್ನಾಗಿ ಮಾಡಿದ್ದರು. ಅದು ಒಂದು ರೀತಿಯಲ್ಲಿ ಸರಿಯೇ ಎಂದು ಸರಳ ವ್ಯಕ್ತಿಯಾದ ಸೀಮಾ, ಇದಕ್ಕೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ.
ಆದರೆ ತನ್ನ ವ್ಯಕ್ತಿತ್ವದಿಂದ, ತಾಳ್ಮೆ, ಸಂಯಮದ ಸ್ವಭಾವದಿಂದ ಸಹೋದ್ಯೋಗಿ ಗಳೊಂದಿಗೆ, ವಿದ್ಯಾರ್ಥಿಗಳೊಂದಿಗೆ ಒಳ್ಳೆಯ ಹೆಸರನ್ನು ಗಳಿಸಿ ಗೌರವಾನ್ವಿತಳಾಗಿದ್ದಳು. ತಾವಾಗಿಯೇ ಮುಖ್ಯಸ್ಥ ಹುದ್ದೆ ಕೊಟ್ಟರೆ ಅಲಂಕರಿಸುತ್ತೇನೆ, ಇಲ್ಲವಾದರೆ ನಾನು ಪಾಠ ಮಾಡಿಕೊಂಡಿರುತ್ತೇನೆ ಎಂಬುದು ಅವಳ ವಾದ.
ಕವಿಪ ಹಿರಿಯರಾದರೂ, ಮುಂಗೋಪ, ತನಗೇ ಎಲ್ಲಾ ಗೊತ್ತು ಎಂಬ ವ್ಯಕ್ತಿತ್ವದವರು. ಸೀಮಾ ಎಲ್ಲಿ ತಮ್ಮನ್ನು ಕೆಳಗಿಳಿಸಿಬಿಡುತ್ತಾಳೋ ಎಂಬ ಭಯದಲ್ಲೇ ಕೆಲಸ ಮಾಡುತ್ತಿದ್ದರು. ಸಮಯ ಸಿಕ್ಕಾಗಲೆಲ್ಲ ಸೀಮಾಳನ್ನು ಹೀಯಾಳಿಸುವುದು, ಕಡೆಗಣಿಸುವುದು ಇತ್ಯಾದಿಗಳನ್ನು ಮಾಡುತ್ತಿದ್ದರು. ಅವಳಿಗೆ ಮುಂದೆ ಮುಖ್ಯಸ್ಥೆ ಆಗದಂತೆ ಇಬ್ಬರನ್ನು ಪ್ರಾದ್ಯಾಪಕರನ್ನಾಗಿ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಅವರಿಬ್ಬರಂತೂ ಕವಿಪ ಅವರ ಚಮಚಗಳು. ಹಿರಿಯರಾದರೂ ಮುಖ್ಯಸ್ಥರನ್ನು, ಆಡಳಿತ ಮಂಡಳಿಯ ಕೆಲವು ಸದಸ್ಯರನ್ನು ಹೊಗಳುತ್ತಾ ಇರುವುದೇ ಅವರ ಪ್ರವೃತ್ತಿ. ಅವರಿಗೆ ಅನುಭವವಿದ್ದುದು ಕೇವಲ ವಯಸ್ಸಿನಿಂದ. ವಿಭಾಗದ ವಿಷಯದಲ್ಲಿ ಸಾಧಿಸಿದ್ದುದು ಅಷ್ಟಕ್ಕಷ್ಟೇ. ಅವರನ್ನು ಕರಟಕ, ದಮನಕ ಎಂದು ಎಲ್ಲರೂ ಕರೆಯುತ್ತಿದ್ದರು.
ಈಗ ಕವಿಪ ಅವರ ನಿವೃತ್ತಿ ಆಯಿತು. ಸೀಮಾಳನ್ನು ಈಗ ಮುಖ್ಯಸ್ಥೆಯನ್ನಾಗಿ ಮಾಡಲಾಯಿತು. ಅವಳಿಗೆ ಸ್ಪರ್ಧಿಗಳಾಗಿದ್ದ ಕರಟಕ, ದಮನಕ ಅವರುಗಳಿಗೆ ಈ ಕಾಲೇಜಿನಲ್ಲಿ ಅನುಭವ ಕಡಿಮೆ, ಜೊತೆಗೆ ಸೀಮಾ ಈ ಹಿಂದೆಯೇ ಮುಖ್ಯಸ್ಥೆ ಆಗಬೇಕಿತ್ತು, ಈಗಲಾದರೂ ಅವಳಿಗೆ ಅವಕಾಶ ಕೊಡಬಹುದು, ಎಂಬುದು ಆಡಳಿತ ಮಂಡಳಿಯ ಕೆಲವರ ವಾದವಾಗಿತ್ತು. ಕಡೆಗೆ ಆಡಳಿತ ಮಂಡಳಿ ಈ ವಾದಕ್ಕೆ ಒಪ್ಪಿ. ಸೀಮಾಳನ್ನೇ ಮುಖ್ಯಸ್ಥೆಯನ್ನಾಗಿ ನೇಮಿಸಿತು. ಎಲ್ಲರೂ, "ಅಯ್ಯೋ ಈ ಮೆದು ಸ್ವಭಾವದ ಹೆಂಗಸು ಆ ಕರಟಕ ದಮನಕರ ಕಾಟವನ್ನು ಹೇಗೆ ನಿಭಾಯಿಸುತ್ತಾಳೋ" ಎಂದು ಹೇಳುತ್ತಿದ್ದರು. ಸೀಮಾ ಮೆದು ಸ್ವಭಾವದವಳಾಗಿದ್ದರೂ ಸಂದರ್ಭ ಬಂದಾಗ ಬಹಳ ಅಚಲ ನಿರ್ಧಾರ ತೆಗೆದುಕೊಳ್ಳುತ್ತಿದ್ದಳು. ಉಳಿದ ಸಹೋದ್ಯೋಗಿಗಳಿಗೆ ಇದು ಸಮ್ಮತವಾದರೂ, ಕರಟಕ, ದಮನಕ ಅವರುಗಳಿಗೆ ನುಂಗಲಾರದ ತುತ್ತು.
ಸೌಮ್ಯ ಸ್ವಭಾವದ ಸೀಮಾ, ಒಮ್ಮೆ ಆಡಳಿತ ಮಂಡಳಿಗೆ ಎಲ್ಲಾ ವಿಷಯಗಳನ್ನು ವಿವರವಾಗಿ ತಿಳಿಸಿದ್ದಳು. ತಾನು ಸೌಮ್ಯ ಸ್ವಭಾವದವಳಾದರೂ, ಸಂದರ್ಭ ಬಂದರೆ ಗಟ್ಟಿ ನಿರ್ಧಾರದಿಂದ ನಿಭಾಯಿಸಬಲ್ಲೆ, ಆದರೆ ಇದಕ್ಕೆ ಕೆಲವರು, ಮುಖ್ಯವಾಗಿ ಕರಟಕ, ದಮನಕ ಅವರುಗಳು ತೊಡರುಗಾಲು ಹಾಕಿದರೆ ನೀವು ನನಗೆ ಸಪೋರ್ಟ್ ಕೊಡಬೇಕು. ಇಲ್ಲವಾದಲ್ಲಿ ನಾನು ಕೆಳಗಿಳಿಯುತ್ತೇನೆ, ಅವರಿಬ್ಬರಲ್ಲೇ ಯಾರನ್ನಾದರೂ ಮುಖ್ಯಸ್ಥರನ್ನಾಗಿ ಮಾಡಿ ಎಂದು ಖಡಾ ಖಂಡಿತವಾಗಿ ಹೇಳಿಬಿಟ್ಟಿದ್ದಳು. ಆಡಳಿತ ಮಂಡಳಿಯವರಿಗೂ ಈ ಕರಟಕ, ದಮನಕ ಅವರ ಸ್ವಭಾವ ಗೊತ್ತಿತ್ತು. ಅವರ ಮುಖ್ಯ ಕ್ವಾಲಿಫಿಕೇಷನ್ ಎಂದರೆ ಹೊಗಳು ಭಟರ ಕೆಲಸ ಎಂದೂ ಗೊತ್ತಿತ್ತು. ಹೀಗಾಗಿ ಕರಟಕ, ದಮನಕ ಅವರುಗಳಿಗೆ ಹೆಚ್ಚು ಮಹತ್ವ ನೀಡುತ್ತಿರಲಿಲ್ಲ. ಈ ಹಿನ್ನೆಲೆ ಕರಟಕ, ದಮನಕ ಅವರುಗಳಿಗೆ ಗೊತ್ತಿರಲಿಲ್ಲ. ಸಂದರ್ಭ ಸಿಕ್ಕಾಗಲೆಲ್ಲಾ ಸೀಮಾಳ ಮೇಲೆ ದೂರು ನೀಡುವುದು, ಚಾಡಿ ಹೇಳುವುದು, ಆಡಳಿತ ಮಂಡಳಿಯವರನ್ನು ಹೊಗಳುವುದು, ವಿದ್ಯಾರ್ಥಿಗಳನ್ನು ಎತ್ತಿ ಕಟ್ಟುವುದು, ಇವುಗಳನ್ನೇ ಮಾಡುತ್ತಿದ್ದರು.
ಯಾವುದೊ ಒಂದು ಸಂದರ್ಭದಲ್ಲಿ ಕರಟಕ ಅವರ ಮೇಲೆ ವಿದ್ಯಾರ್ಥಿಗಳ ದೂರು ಬಂತು. ಪಾಠ ಸರಿಯಾಗಿ ಮಾಡುವುದಿಲ್ಲ, ವಿದ್ಯಾರ್ಥಿಗಳೊಂದಿಗೆ ಸರಿಯಾಗಿ ನಡೆದುಕೊಳ್ಳುವುದಿಲ್ಲ ಎಂದಾಗಿತ್ತು. ಕರಟಕ ಅವರು "ಇದನ್ನು ಸೀಮಾ ಅವರು ಮಾಡಿಸುತ್ತಿದ್ದಾರೆ" ಎಂದು ದೂರಲು ಆರಂಭಿಸಿದರು. ಸೀಮಾ ಈಗ ಸುಮ್ಮನಿರಲಾಗಲಿಲ್ಲ. "ನಿಮ್ಮ ಮೇಲೆ ಗೂಬೆ ಕೂಡಿಸಿ ನನಗೆ ಆಗಬೇಕಾದ್ದು ಏನೂ ಇಲ್ಲ, ಇದನ್ನು ಆಡಳಿತ ಮಂಡಳಿಯವರೇ ಪರಿಶೀಲಿಸಿ ನಿರ್ಧಾರ ತೆಗೆದು ಕೊಳ್ಳಲಿ" ಎಂದು ಹೇಳಿಬಿಟ್ಟರು. ಆಡಳಿತ ಮಂಡಳಿಯವರು ಇದನ್ನು ಪರಿಶೀಲಿಸಿದಾಗ, ಕರಟಕ ಅವರ ಮೇಲೆ ಹಲವಾರು ದೂರುಗಳು ಕೇಳಿ ಬಂದವು, ಎಷ್ಟೋ ಗೊತ್ತಿಲ್ಲದ ವಿಷಯಗಳು ಹೊರಬಂದವು. ಇದರೊಂದಿಗೆ ದಮನಕ ಅವರ ಮೇಲೂ ಅನೇಕ ದೂರುಗಳು ವಿದ್ಯಾರ್ಥಿಗಳಿಂದ, ಇತರ ಸಹೋದ್ಯೋಗಿಗಳಿಂದ ಬಂದವು. ಸೀಮಾ ಅವರ ಬಗ್ಗೆ ಯಾವುದೇ ನಕಾರಾತ್ಮಕ ದೂರುಗಳು ಬರದೇ, ಬಂದಿದ್ದೆಲ್ಲ ಸಕಾರಾತ್ಮಕವಾಗಿದ್ದವು. ಒಳಗೇ ಹುದುಗಿದ್ದ ಜ್ವಾಲೆ ಈಗ ಭುಗಿಲೇಳಲು ಸಿದ್ಧವಾಗಿತ್ತು. ಇದನ್ನು ಅವಲೋಕಿಸಿದ ಆಡಳಿತ ಮಂಡಳಿ ಈ ದೂರನ್ನೇ ನೆಪ ಮಾಡಿಕೊಂಡು ಕರಟಕ ಅವರನ್ನು ಕೆಲಸದಿಂದ ವಜಾ ಮಾಡಲು ನಿರ್ಧರಿಸಿತು. "ಸೀಮಾ ಅವರಿಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ" ಎಂದು ಕರಟಕ ಅವರಿಗೆ ಹೇಳಿ, "ನೀವಾಗಿಯೇ ಕೆಲಸ ಬಿಟ್ಟು ಹೋದರೆ ಸರಿ, ಇಲ್ಲವಾದರೆ ದೂರನ್ನು ನಾವು ಸ್ವೀಕರಿಸಿ, ಅದು ಸಾಬೀತಾದರೆ ಅದೇ ನೆಪದಿಂದ ವಜಾ ಮಾಡ ಬೇಕಾಗುತ್ತದೆ" ಎಂದು ಕರಟಕ ಅವರಿಗೆ ಮುನ್ಸೂಚನೆ ನೀಡಿದರು. ಒಳಗಿನ ನಿಜ ತಿಳಿದಿದ್ದ ಕರಟಕ ಅವರು ತಾವೇ ರಾಜೀನಾಮೆ ಸಲ್ಲಿಸಿ ಕೆಲಸ ಬಿಟ್ಟು ಹೋದರು. ಈಗ ಆಡಳಿತ ಮಂಡಳಿ ದಮನಕ ಅವರಿಗೆ ಎಚ್ಚರಿಕೆ ನೀಡಿ, "ನೀವು ಹೊಂದಿಕೊಂಡು ಹೋದರೆ ಸರಿ, ಇಲ್ಲವಾದರೆ ನಿಮ್ಮ ಮೇಲೂ ಆಕ್ಷನ್ ತೆಗೆದುಕೊಳ್ಳಬೇಕಾಗುತ್ತದೆ" ಎಂದರು. ಹಲ್ಲು ಕಿತ್ತ ಹಾವಾಗಿದ್ದ ದಮನಕ ಈಗ ತೆಪ್ಪಗೆ ಸುಮ್ಮನಾದರು. ಅವರಿಗೆ ಕರಟಕ ಅವರ ಸಹಾಯ ಹಸ್ತವೂ ಇರಲಿಲ್ಲ.
ಸೀಮಾ ಈಗ ವಿಭಾಗವನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ವಿಭಾಗವೂ ಒಳ್ಳೆ ಹೆಸರು ಮಾಡಿ ಅನೇಕ ಮೆಚ್ಚುಗೆಯ ಪುಕ್ಕಗಳನ್ನು ಕಿರೀಟಕ್ಕೇರಿಸಿಕೊಂಡಿದೆ. ದಮನಕ ಅವರು ಈಗ ಗುಳ್ಳೆ ನರಿಯ ಬುದ್ಧಿಯಿಂದ ಹೊರಬಂದಿದ್ದಾರೆ. ಸೀಮಾ ಅವರ ನಂತರ ತಾವೇ ಮುಖ್ಯಸ್ಥರಾಗುವ ಕನಸಿನಿಂದ, ಸೀಮಾ ಅವರಿಗೆ ಪೂರ್ಣ ಸಹಕಾರ ನೀಡುತ್ತಾ ತಮ್ಮನ್ನು ತಾವು ತಿದ್ದಿಕೊಂಡಿದ್ದಾರೆ.
ಒಟ್ಟಿನಲ್ಲಿ ಸೀಮಾ ಅವರು ಕೆಲಸ ಮಾಡುವವರಿಗೆ ಒಬ್ಬ ಆದರ್ಶ ಮಹಿಳೆಯಾಗಿ ಕಾಣಿಸುತ್ತಿದ್ದಾರೆ. ತಮ್ಮ ಸೌಮ್ಯ ಸ್ವಭಾವದಿಂದಲೇ ಜನಮನವನ್ನು ಗೆದ್ದು ದಿಟ್ಟ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ವಿದ್ಯಾರ್ಥಿಗಳಿಗಂತೂ, ಬಹಳ ಒಳ್ಳೆಯ, ತಾಳ್ಮೆಯಿಂದ ತಮ್ಮ ಮಾತುಗಳನ್ನು ಆಲಿಸುವ ಮುಖ್ಯಸ್ಥೆ ಎಂದು ಹೆಮ್ಮೆ. ಸಹೋದ್ಯೋಗಿಗಳೂ ಸೀಮಾ ಅವರ ಸರಳತೆ, ಸೌಮ್ಯತೆ, ಸಂಯಮ, ಮೃದು ಮಾತು ಇವೆಲ್ಲವನ್ನೂ ಮೆಚ್ಚುತ್ತಾರೆ. ಅವರು ತಮಗೆ ನೀಡುವ ಪ್ರೋತ್ಸಾಹವನ್ನು ನೆನೆಯುತ್ತಾರೆ. ಮುಖ್ಯಸ್ಥರು ಎಂದರೆ ಈ ರೀತಿ ಇರಬೇಕು ಎಂದು ತಮ್ಮ ಮನದಾಳದ ಮೆಚ್ಚುಗೆಗಳನ್ನು ಸೂಚಿಸುತ್ತಾರೆ. ಅವರಿಗೆ ಸಹನಾಮಯಿ ಎಂದು ಬಿರುದನ್ನೂ ನೀಡಿದ್ದಾರೆ.
- ಜಗದೀಶ ಚಂದ್ರ ಬಿ ಎಸ್ -

Saturday, June 5, 2021

ನನಗೆ ಪತಿ ಬೇಕು

 ನನಗೆ ಪತಿ ಬೇಕು 

ಮಿತ್ರನ ಮನೆಯಲ್ಲಿ ಮಕ್ಕಳ ಬಗ್ಗೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದೆವು. ಆಗ ಮಿತ್ರನ ಹೆಂಡತಿ ಕಾವ್ಯ ಒಂದು ಘಟನೆಯನ್ನು ಹೇಳಿದಳು. ನಕ್ಕು ನಕ್ಕು ಸುಸ್ತಾಯಿತು. ಅವಳು ಹೇಳಿದಂತೆ ನಿಮಗೂ ಹೇಳುತ್ತೇನೆ ಕೇಳಿ. 

 ನಾನು ಒಂದು ದಿನ ನನ್ನ ಗೆಳತಿ ಸುಹಾಸಿನಿಯ  ಮನೆಗೆ ಹೋಗಿದ್ದೆ. ಅವಳ ಚಿಕ್ಕ ಮಗಳು ಸುಧಾ ನನಗೆ ತುಂಬಾ ಇಷ್ಟ. ಅವಳೊಂದಿಗೆ ಕಾಲ ಕಳೆದರೆ ಹೊತ್ತೇ ಗೊತ್ತಾಗುತ್ತಿರಲಿಲ್ಲ. ಅಂದು ಸುಹಾಸಿನಿ, ಸುಧಾ ಇಬ್ಬರೂ ಮನೆಯಲ್ಲೇ ಇದ್ದರು. ಹೀಗೆ ಹರಟೆ, ಸುಧಾಳೊಂದಿಗೆ ಮಾತುಕತೆಗಳು ನಡೆಯುತ್ತಿದ್ದವು. ಇದ್ದಕ್ಕಿದ್ದಂತೆ ಸುಹಾಸಿನಿಗೆ ಒಂದು ಫೋನ್ ಬಂತು. ಅವಳು ಮಾತನಾಡುತ್ತಾ, "ಈಗ ಬಂದೆ" ಎಂದು ಹೇಳಿದಳು. ನಂತರ ನನ್ನ ಬಳಿ ಬಂದು "ಕಾವ್ಯಾ, ಇಲ್ಲೇ ಹತ್ತಿರದಲ್ಲಿ ಒಂದು ಮುಖ್ಯ ಕೆಲಸ ಇದೆ, ಹೋಗಿ ಬಂದು ಬಿಡುತ್ತೇನೆ, ನೀನು ಇಲ್ಲೇ ಇರು" ಎಂದಳು. "ನಾನೂ ಹೊರಟು ಬಿಡುತ್ತೇನೆ" ಎಂದರೂ ಬಿಡದೆ, "ಕೇವಲ ಅರ್ಧಗಂಟೆ ಕೆಲಸ, ಬೇಕಾದರೆ ಸುಧಾಳೊಂದಿಗೆ ಆಡಿಕೊಂಡಿರು" ಎಂದಳು. "ನೀನು ಆಂಟಿಯೊಂದಿಗೆ ಇರ್ತಿಯೇನೇ" ಎಂದರೆ "ಓ ನಾನು ಇರುತ್ತೇನೆ" ಎಂದು ಸುಧಾ ಖುಷಿಯಿಂದ ಹೇಳಿದಳು. ನಾನೂ ಒಪ್ಪಿಕೊಂಡೆ. ಹೀಗೆ ಸುಧಾಳೊಂದಿಗೆ ಮಾತು, ಆಟ, ಅವಳ ಮುದ್ದು ಮಾತುಗಳು ಖುಷಿಕೊಟ್ಟವು. 

ಇದ್ದಕ್ಕಿದ್ದಂತೆ ಸುಧಾ ಏನನ್ನೋ ನೆನಸಿಕೊಂಡು "ಪತಿ ಎಲ್ಲಿ ಬರಲೇ ಇಲ್ಲ" ಎಂದಳು. ನಾನು, "ಯಾರೇ ಅದು ಪತಿ" ಎಂದೆ. "ಅದೇ, ಪತಿ, ಈಗ ಬಂದು ಚಿಕ್ಕ ಕಾರನ್ನು ಕೊಡುತ್ತೇನೆ ಎಂದಿದ್ದರು, ಬಂದೆ ಇಲ್ಲ" ಎಂದಳು. "ಯಾರೇ ಅದು ನಿನ್ನ ಪತಿ" ಎಂದು ಮತ್ತೆ ಕೇಳಿದರೆ "ಅವರೇ ಪತಿ, ನಂಗೆ ಅವರನ್ನ ಕಂಡರೆ ಇಷ್ಟ" ಎಂದಳು ಮುದ್ದುಮುದ್ದಾಗಿ. ನನಗೆ ನಗು ಆಶ್ಚರ್ಯ ಎಲ್ಲಾ ಆಯಿತು. ಈಗ ಸುಧಾ ಅಳಲು ಶುರು ಮಾಡಿದಳು. "ಪತಿ ಇನ್ನೂ ಬಂದೇ ಇಲ್ಲಾ" ಎಂದು ಅಳುತ್ತಾ ಗಲಾಟೆ ಮಾಡತೊಡಗಿದಳು. ನಾನು "ನೀನಿನ್ನೂ ಚಿಕ್ಕವಳು, ಹಾಗೆಲ್ಲಾ ಪತಿ ಎಂದು ಹೇಳಬಾರದು" ಎಂದರೆ ಇನ್ನೂ ರಂಪ ಮಾಡತೊಡಗಿದಳು. ನನಗೆ ಏನೂ ತೋಚದೆ ಸುಹಾಸಿನಿಗೆ ಫೋನ್ ಮಾಡಿ ಎಲ್ಲಾ ವಿಷಯ ಹೇಳಿದೆ. ಅವಳು ನಗುತ್ತಾ "ಅಯ್ಯೋ ಪತಿ ಎಂದರೆ ಗಂಡ ಅಲ್ಲವೇ, ನನ್ನ ತಮ್ಮ, ವೆಂಕಟಾಚಲಪತಿ. ಅವನನ್ನು ನಾವು ಪತಿ ಎಂದು ಕರೆಯುತ್ತೇವೆ" ಎಂದಾಗ ನನಗೆ ನಗು ಬಂತು. ನಾನು ಕೂಡಲೇ ಸುಹಾಸಿನಿಗೆ "ಒಂದು ಪುಟ್ಟ ಕಾರನ್ನು ತಂದುಕೊಡು, ಪತಿ ಕೊಟ್ಟದ್ದು ಎಂದು ಹೇಳು" ಎಂದು ಫೋನ್ನಲ್ಲಿ ಹೇಳಿದೆ. ಈಗ ಸುಧಾಗೆ, "ಈಗ ತಾನೇ ನಾನು ಪತಿಗೆ ಫೋನ್ ಮಾಡಿದ್ದೆ, ಅವರಿಗೆ ತುಂಬಾ ಕೆಲಸವಿದೆಯಂತೆ, ನಿಮ್ಮ ಅಮ್ಮ ಬರುತ್ತಾಳಲ್ಲ ಅವಳ ಕೈಲಿ ಕಾರನ್ನು ಕಳಿಸುತ್ತೇನೆ ಎಂದು ಹೇಳಿದ್ದಾರೆ" ಎಂದಾಗ ಅಳು ನಿಲ್ಲಿಸಿದಳು. ಸುಹಾಸಿನಿ ಬರುವವರೆಗೂ ಸುಧಾಳ ನೆಚ್ಚಿನ ಪತಿಯ ಬಗ್ಗೆ ಮಾತನಾಡುತ್ತಾ ಕಾಲ ಕಳೆದೆ. 

"ಇದು ಪತಿಯ ಕತೆ" ಎಂದು ಹೇಳಿ ಕಾವ್ಯ ನಕ್ಕಳು. ನಾವು ಆ ಮಗುವನ್ನು ಅವಳ ಪತಿಯನ್ನು ಕಲ್ಪಿಸಿಕೊಂಡು ಮನಸಾರೆ ನಕ್ಕವು. 

- ಬಿ ಎಸ್ ಜಗದೀಶ ಚಂದ್ರ - 

ಮಳೆಯ ನೆನಪು 

ನಾನು ಆಗಿನ್ನೂ ಹದಿ ಹರೆಯದ ಅಂಚಿನಲ್ಲಿದ್ದೆ. ತಂದೆಯವರ ಯಾವುದೋ ಕೆಲಸಕ್ಕೆ ಶೃಂಗೇರಿಗೆ ಹೋಗಬೇಕಿತ್ತು. ಖುಷಿಯಿಂದ ಊರುಗಳನ್ನು ಸುತ್ತಿಬರಬಹುದು ಎಂದು ಹೊರಟುಬಿಟ್ಟೆ. ನನಗೆ ಊರು ಸುತ್ತುವ ಹವ್ಯಾಸ, ಹೇಗಿದ್ದರೂ ಶೃಂಗೇರಿ ಗೆ ಬಂದಿರುವೆ, ಹೊರನಾಡನ್ನು ನೋಡಿಬಿಡೋಣ ಎಂದು ಹೊರಟು ಬಿಟ್ಟೆ. ಒಬ್ಬನೇ ಹೋಗಲು ನನಗೇನು ಬೇಸರವಿರಲಿಲ್ಲ. ಆಗೆಲ್ಲ ಕ್ಯಾಬ್ ಇತ್ಯಾದಿಗಳು ಇರಲಿಲ್ಲ, ಹೀಗಾಗಿ ಅಲ್ಲಿಯ ಪ್ರೈವೇಟ್ ಬಸ್ ಒಂದರಲ್ಲಿ ಕಳಸಕ್ಕೆ ಹೋಗಿ ಅಲ್ಲಿಂದ ಹೊರನಾಡಿಗೆ ಹೋಗೋಣ ಎಂದು ಹೊರಟೆ. ಕಳಸ ಬಂತು ಅಲ್ಲಿ ಇಳಿದು ಅಲ್ಲಿಯೇ ಯಾರನ್ನೋ ಹೊರನಾಡಿಗೆ ಹೇಗೆ ಹೋಗುವುದು ಎಂದು ಕೇಳಿ ಆ ದಾರಿಯಲ್ಲಿ ನಡೆಯುತ್ತಾ ಹೊರಟೆ. 

ಆಗ ಮಳೆ ಶುರುವಾಯಿತು. ನಾನು ಮಳೆ ಬೆಂಗಳೂರಿನಂತೆ, ಸ್ವಲ್ಪ ಹೊತ್ತಿಗೆ ನಿಂತು ಬಿಡುತ್ತದೆ ಎಂದು ಕೊಂಡಿದ್ದೆ. ಆದರೆ ಅದು ನಿಲ್ಲಲೇ ಇಲ್ಲ. ಹೊಲಗದ್ದೆಗಳ ನಡುವೆ ನಿರ್ಜನ ರಸ್ತೆಯಲ್ಲಿ ನಾನು ಹೋಗುತ್ತಿದ್ದೆ. ನಿಲ್ಲಲು ಮನೆಗಳೂ ಇಲ್ಲ. ಆಗ ಹೊರನಾಡಿಗೆ ಬಸ್ಸೂ ಇರಲಿಲ್ಲ. ನದಿಗೆ ಬ್ರಿಜ್ ಇರಲಿಲ್ಲ. ನದಿಯನ್ನು ತೆಪ್ಪದಲ್ಲಿ ದಾಟಬೇಕಿತ್ತು. ಮಳೆಯಲ್ಲಿ ಪೂರ್ತಿ ತೊಯ್ದಿದ್ದೆ. ತಂದಿದ್ದ ಬಟ್ಟೆಬರೆಗಳ  ಚೀಲ ಪ್ಲಾಸ್ಟಿಸಿನೊಳಗೆ ಇದ್ದಿದ್ದರಿಂದ ಅದು ಭದ್ರವಾಗಿತ್ತು. ಹೀಗೆ ನಡೆದು ಹೋಗುತ್ತಿದ್ದಾಗ ಯಾರೋ ಬೈಕಿನಲ್ಲಿ ಬಂದರು. ಅವರಾಗಿಯೇ ನಿಲ್ಲಿಸಿ "ಎಲ್ಲಿಗೆ" ಎಂದರು. ಹೊರನಾಡಿಗೆ ಎಂದೆ. ನಗುತ್ತ ತಲೆ ಚಚ್ಚಿಕೊಂಡು, ಹೀಗಲ್ಲ, ಇಲ್ಲಿ ಹೊಲಗದ್ದೆಗಳ ನಡುವೆ ಹೋಗಬೇಕು, ನೀವು ರಸ್ತೆಯಲ್ಲಿ ಹೊರಟರೆ ಊರೆಲ್ಲ ಸುತ್ತಿ ನಾಳೆ ಸೇರುತ್ತೀರಿ ಎಂದರು. ನನ್ನ ಸ್ಥಿತಿ ನೋಡಿ ಅವರಿಗೆ ಏನನ್ನಿಸಿತೋ, "ನನ್ನ ಜೊತೆ ಬಾ, ನಾನು ಕರೆದುಕೊಂಡು ಹೋಗುತ್ತೇನೆ" ಎಂದು ಕೂಡಿಸಿಕೊಂಡರು. ಅವರು ಅಲ್ಲಿಯೇ ಹತ್ತಿರ ಇದ್ದ ಒಂದು ಸಣ್ಣ ಮನೆಗೆ ಕರೆದುಕೊಂಡು ಹೋಗಿ, "ಮೊದಲು ಬಟ್ಟೆ ಬದಲಿಸು, ನಂತರ ಹೊರನಾಡಿಗೆ ಹೋಗುವಿಯಂತೆ" ಎಂದರು. ಅವರು ಮನೆಯವರೊಂದಿಗೆ ಅಲ್ಲಿನ ಕನ್ನಡದಲ್ಲಿ ನನ್ನ ವಿಷಯ ಹೇಳಿ ನಗುತ್ತಿದ್ದುದು, ಆ ಮನೆಯವರು, "ಯಾಕೆ ನಗುತ್ತಿ, ಇನ್ನೂ ಹುಡುಗ, ಹೋಗಲಿ ನೀನೇ ಅವನನ್ನು ಅಲ್ಲಿಗೆ ಕರೆದುಕೊಂಡು ಹೋಗು" ಎಂದು ಹೇಳುತ್ತಿದ್ದುದು ನನಗೆ ಗೊತ್ತಾಯಿತು. ಆಮೇಲೆ ಮಳೆ ಸ್ವಲ್ಪ ಕಡಿಮೆಯಾಯಿತು. ಅವರು ಹೊದ್ದುಕೊಳ್ಳಲು ಒಂದು ಗೋಣಿ, ಒಂದು ಛತ್ರಿ ಕೊಟ್ಟು, ನಡಿ ಹೋಗೋಣ, ನಾನೂ ಬರುತ್ತೇನೆ, ನಾನೂ ಅಲ್ಲಿಗೆ ಹೋಗಿ ಬಹಳ ದಿನವಾಯಿತು ಎಂದು ನನ್ನೊಂದಿಗೆ ಹೊರಟರು. ದಾರಿಯಲ್ಲಿ ನೀರು ತುಂಬಿದ ಗದ್ದೆಗಳ ಬದುಗಳ ಮೇಲೆ ನಡೆಸಿಕೊಂಡು ಹೊರಟರು. ದಾರಿಯಲ್ಲಿ ಕೆಲವು ಗದ್ದೆಗಳ ನಡುವೆ ಬೊಂಬಿನ ಗೇಟ್ ಇರುತ್ತಿತ್ತು, ಅವನ್ನು ತೆಗೆದು ನಂತರ ಮತ್ತೆ ಹಾಕಿ ನಡೆಯುತ್ತಿದ್ದರು. ದಾರಿಯಲ್ಲಿ ಸಿಕ್ಕಿದ ಮರಗಳ ಹೆಸರೆಲ್ಲವನ್ನು ಹೇಳುತ್ತಿದ್ದರು. ಅವರು ತೋರಿಸಿದ ಹೆಬ್ಬಲಸು ಎಂಬ ದೊಡ್ಡ ಮರದ ಹೆಸರು, ದೃಶ್ಯ ಇಂದೂ ನೆನಪಿದೆ. ಮಳೆ ಬಿಟ್ಟು ಬಿಟ್ಟು ಬರುತ್ತಿತ್ತು. ಆಗ ಭದ್ರಾ ನದಿ ಸಿಕ್ಕಿತು. ಮಳೆ ತೆಪ್ಪ ಇರುತ್ತದೋ ಇಲ್ಲವೋ ಎಂದರು. "ಆ ನದಿಯಲ್ಲಿ ಈಜು ಎಂದರೆ ಏನು ಮಾಡುವುದು" ಎಂದು ನನಗೆ ಭಯವಾಯಿತು. "ನನಗೆ ಈಜು ಬರುವುದಿಲ್ಲ" ಎಂದು ಮೊದಲೇ ಹೇಳಿಬಿಟ್ಟೆ. ಅದೃಷ್ಟಕ್ಕೆ ತೆಪ್ಪ ಇತ್ತು. ಅದರೊಳಗೆ ಕುಳಿತು ತುಂಬಿ ಹರಿಯಯುತ್ತಿದ್ದ ನದಿಯನ್ನು ಗಡಗಡ ನಡುಗುತ್ತಾ ದಾಟಿದೆವು. 

ಅಲ್ಲಿಂದ ಮುಂದೆ ನಾನು ನೋಡಿದ ಹೊರನಾಡು ಸ್ವರ್ಗದಂತಿತ್ತು.ಸಣ್ಣ ಊರು. ಬಸ್ ಇಲ್ಲದ್ದರಿಂದ ಗಲಾಟೆ ಇರಲಿಲ್ಲ. ಜನಜಂಗುಳಿಯೂ ಇರಲಿಲ್ಲ. ನಾನು ದೊಡ್ಡ ಊರು, ಹೋಟೆಲ್ಗಳು, ರೂಮುಗಳು ಇರುತ್ತದೆ  ಎಂದುಕೊಂಡುಬಿಟ್ಟಿದ್ದೆ.ನಾನೊಬ್ಬನೇ ಬಂದಿದ್ದರೆ ನಿಜವಾಗಿಯೂ ತಬ್ಬಿಬ್ಬಾಗಿ ಬಿಡುತ್ತಿದ್ದೆ.  ಅಲ್ಲಿಯೇ ಇದ್ದ ಸುಂದರವಾದ ದೇವಾಲಯಕ್ಕೆ ಕರೆದುಕೊಂಡು ಹೋಗಿ ಅಲ್ಲಿನ ಜನರೊಡನೆ ಮಾತನಾಡಿ ನನಗೆ, ಅವರಿಗೆ ಒಂದೊಂದು ರೂಮನ್ನು ಕೊಡಿಸಿದರು. ಅದು ದೇವಸ್ಥಾನಕ್ಕೆ ಅಂಟಿದಂತೆಯೇ ಇತ್ತು. ಆಮೇಲೆ ಮಳೆ ಜೋರಾಗಿ ಪ್ರಾರಂಭವಾಯಿತು. ರಾತ್ರಿ ಅಲ್ಲಿಯೇ ಊಟವಾಯಿತು. ದೇವಸ್ಥಾನದ ಭೋಜನ ಮೃಷ್ಟಾನ್ನದಂತಿತ್ತು. ಅನ್ನಪೂರ್ಣೇಶ್ವರಿಯ ದಯೆ ಎಂದುಕೊಂಡೆ. ಮಳೆ ರಾತ್ರಿಯೆಲ್ಲಾ ಬರುತ್ತಲೇ ಇತ್ತು. ನನಗೆ ಮಳೆ ಬಂದು ನದಿ ತುಂಬಿ ಪ್ರವಾಹ ಬಂದುಬಿಟ್ಟರೆ ಹಿಂತಿರುಗಿ ಹೇಗೆ ಹೋಗುವುದು ಎಂದು ಭಯವಾಗಿತ್ತು. ಒಬ್ಬನೇ ಬೇರೆ, ಅನ್ನಪೂರ್ಣೇಶ್ವರಿದೇವಿಯೇ ಕಾಪಾಡುತ್ತಾಳೆ ಎಂದು ಹಾಗೆಯೆ ನಿದ್ದೆಗೆ ಜಾರಿದ್ದೆ. ಬೆಳಿಗ್ಗೆ ಎದ್ದು ಸ್ನಾನ ಎಲ್ಲವನ್ನು ಮುಗಿಸಿ, ದೇವಿಯನ್ನು ಕಣ್ತುಂಬಾ ನೋಡಿ, ಬೆಳಕಿದ್ದಾಗಲೇ ಹೊರಟುಬಿಡುವುದು ಎಂದು ಕೊಂಡೆ. ನನ್ನ ಜೊತೆ ಬಂದಿದ್ದವರ ಹೆಸರು ಹೆಬ್ಬಾರ್ ಎಂದು. "ನನಗೆ ಸ್ವಲ್ಪ ಅರ್ಜೆಂಟ್ ಕೆಲಸ ಇದೆ, ಬೇಗನೆ ಹೋರಾಡಲು ಆಗುವುದೇ" ಎಂದು ಕೇಳಿದೆ. ಬೆಳಿಗ್ಗೆ ಊಟ ಆದಕೂಡಲೇ ಹೊರಟು ಬಿಡೋಣ, ಕಳಸದಲ್ಲಿ ಬೇಕಾದಷ್ಟು ಬಸ್ ಸಿಗುತ್ತದೆ ಎಂದರು. ಮತ್ತೆ ಮಳೆ. ದೇವಸ್ಥಾನದಲ್ಲೇ ಇದ್ದುದರಿಂದ ಅಲ್ಲಿ ಓಡಾಡಿದಾಗಲೆಲ್ಲ ಅನ್ನಪೂರ್ಣೇಶ್ವರಿಗೆ  ನಮಸ್ಕಾರ ಮಾಡಿ ಕಾಪಾಡು ಎಂದು ಬೇಡಿಕೊಳ್ಳುತ್ತಿದ್ದೆ. ಊಟ ಆಯಿತು. ನಂತರ ಕಡೆಯ ಬಾರಿ ದೇವಿಗೆ ನಮಸ್ಕರಿಸಿ ಹೊರಟೆವು. 

ನದಿಯು ಕಪ್ಪಾಗಿ ಹರಿಯುತ್ತಿತ್ತು. ಕುದುರೆಮುಖ ಕಬ್ಬಿಣದ ಅದುರಿನ ಮಣ್ಣಿನಿಂದ ಅದು ಹೀಗೆ ಕಪ್ಪಗೆ ಕಾಣುತ್ತದೆ ಎಂದರು. ಮಳೆಗೆ ಹೆದರಿದ್ದ ನನ್ನನ್ನು ಕಂಡು "ಈ ಮಳೆ ಏನೇನೂ ಅಲ್ಲ, ಭಾರಿ ಮಳೆ ಬರುವುದನ್ನು ನೋಡಬೇಕು" ಎಂದರು. "ಈ ಮಳೆಯೇ ಸಾಕಾಗಿದೆ, ಇನ್ನು ನಿಮ್ಮ ಭಾರಿ ಮಳೆ ಬಂದರೆ? ಬೇಡಪ್ಪ ಬೇಡ" ಎಂದು ಮನದಲ್ಲೇ ಅಂದುಕೊಂಡೆ.

ದೇವರ ದಯೆಯಿಂದ ದಾಟಲು ತೆಪ್ಪ ಇತ್ತು, ಕುಳಿತು ನದಿ ದಾಟಿದೆವು. ಹೊಲಗದ್ದೆಗಳ ನಡುವೆ ನಡೆಯುತ್ತಾ ಹೆಬ್ಬಾರ ಅವರ ಮಿತ್ರರ ಮನೆಗೆ ಬಂದೆವು. ಅಲ್ಲಿ ಸ್ವಲ್ಪ ಹೊತ್ತು ಇದ್ದು ನಂತರ ಹೆಬ್ಬಾರ್ ಅವರು ನನ್ನನ್ನು ಕಳಸಕ್ಕೆ ತಂದು ಬಿಟ್ಟರು. ನಾನು ಅದೇನು ಪುಣ್ಯ ಮಾಡಿದ್ದೇನೋ, ಅನ್ನಪೂರ್ಣೇಶ್ವರಿಯ ದಯೆಯಿಂದ, ಅವರು ನನ್ನೊಂದಿಗೆ ಬಂದು ನನಗೆ ಇಷ್ಟೆಲ್ಲಾ ಸಹಾಯಮಾಡಿದರು. ಆಗ ಫೋನ್ ಯಾವುವೂ ಇರಲಿಲ್ಲ. ನನಗೂ ಅಷ್ಟೊಂದು, ಅಂದರೆ ವಿಳಾಸ ಕೇಳಿ ಬರೆದುಕೊಳ್ಳುವಷ್ಟು, ಪರಿಪಕ್ವತೆ ಇರಲಿಲ್ಲ. ಸಧ್ಯ ಅವರಿಗೆ ಧನ್ಯವಾದಗಳನ್ನು ಮನಃಪೂರ್ವಕವಾಗಿ ಹೇಳಿ ನಮಸ್ಕಾರ ಮಾಡಿದೆ. 

ಅಂತೂ ಕಲಾಸದಿಂದ ಶೃಂಗೇರಿಗೆ ಬಂದೆ. ಮಲೆನಾಡಿನ ಮಳೆಯ ಅನುಭವವನ್ನು ಚೆನ್ನಾಗಿ ಅನುಭವಿಸಿದೆ. ನಾನು ನಂತರ ಹೊರನಾಡಿಗೆ ಹೋಗಿಲ್ಲ. ಈಗ ಅದಕ್ಕೆ ರಸ್ತೆ, ಬ್ರಿಜ್ ಎಲ್ಲಾ ಆಗಿ ತುಂಬಾ ಕಮರ್ಷಿಯಲ್ ಆಗಿ ಬಿಟ್ಟಿದೆ ಎಂದು ಯಾರೋ ಹೇಳಿದರು. ಆದರೆ ಇಂದಿಗೂ ಹೊರನಾಡು ಎಂದರೆ ಅಂದಿನ ಚಿಕ್ಕ ಚೊಕ್ಕ ಮುದ್ದಾದ ಹಳ್ಳಿ ಎಂದೇ ನನ್ನ ಭಾವನೆ.  

Friday, June 4, 2021

Ramswamy kala malige

 "ರಾಂ ಸ್ವಾಮಿ ಕಲಾ ಮಳಿಗೆ"

ನಾನು ಆ ದಿನ ಅಂಗಡಿ ಮಳಿಗೆಯ ಬಳಿ ಹೋಗಿದ್ದೆ. ಆಗ ಅಲ್ಲಿದ್ದ ವಯಸ್ಸಾದ ವ್ಯಕ್ತಿಯೊಬ್ಬರು "ಜಾತಿ ಹುಟ್ಟಿನಿಂದ ಬಂದದ್ದು ಅಲ್ಲ, ವೈದ್ಯನ ಮಗ ವೈದ್ಯನಾಗಲು ಸಾಧ್ಯವೇ, ಚಮ್ಮಾರನ ಮಗ ತಂದೆಯ ವೃತ್ತಿಯನ್ನು ಮುಂದುವರೆಸದಿದ್ದರೆ, ಚಮ್ಮಾರ ಹೇಗಾಗುತ್ತಾನೆ, ನಮಗೆ ಯಾಕೆ ಮೋಸ ಮಾಡುತ್ತೀರಿ" ಎಂದೆಲ್ಲ ಬಡಬಡಿಸುತ್ತಿದ್ದರು. ಆದರೆ ಅದನ್ನು ಯಾರೂ ಲೆಕ್ಕಿಸದೆ ತಮ್ಮ ಪಾಡಿಗೆ ತಾವು ಓಡಾಡಿಕೊಂಡಿದ್ದರು. ಆ ಮನುಷ್ಯನನ್ನು ನೋಡಿದಾಗ ನನಗೆ ಅಯ್ಯೋ ಪಾಪ ಎನ್ನಿಸಿತು. ಅವರು ಯಾರೋ ಏನೋ, ನೋಡಿಕೊಳ್ಳಲು ಜನ ಇದ್ದರೋ ಇಲ್ಲವೋ, ನೋಡಲು ಸಂಭಾವಿತರಂತೆ ಕಾಣುತ್ತಾರೆ ಎಂದು ಮರುಕವಾಯಿತು. ಇನ್ನೊಮ್ಮೆ ಅದೇ ಮಳಿಗೆಗೆ ಹೋದಾಗ ಅವರು ಅಲ್ಲಿಯೇ ತಮ್ಮ ಪಾಡಿಗೆ ತಾವು ಕುಳಿತಿದ್ದರು. ತಮ್ಮಲ್ಲಿಯೇ ಏನೋ ಮಾತನಾಡಿಕೊಳ್ಳುತ್ತಿದ್ದರು. ಅಂಗಡಿಗಳು ಮುಚ್ಚುವ ವೇಳೆ ಆಗುತ್ತಾ ಬಂದಿತ್ತು. ಇವರು ಎಲ್ಲಿ ಹೋಗುತ್ತಾರೋ ನೋಡಬೇಕು ಎಂದು ಕುತೂಹಲದಿಂದ ಅಂಗಡಿ ಮುಚ್ಚುವವರೆಗೂ ಅಲ್ಲಿಯೇ ವ್ಯಾಪಾರ ಮಾಡುವನಂತೆ ನಟಿಸುತ್ತಾ ಕಾಯುತ್ತಿದ್ದೆ. ಆಗ ಸ್ಕೂಟರಿನಲ್ಲಿ ಒಬ್ಬರು ಬಂದರು. ಬಂದವರೇ "ಅಪ್ಪಾ, ನಡಿ, ಮನೆಗೆ ಹೋಗೋಣಾ" ಎಂದು ಅವರನ್ನು ಕರೆದರು. ಆ ಮನುಷ್ಯನನ್ನು ನಾನು ಎಲ್ಲೋ ನೋಡಿದ್ದೇನೆ ಎನ್ನಿಸಿತು. ಅವರು ಇನ್ನೇನು ಹೊರಟು ಬಿಡುತ್ತಾರೆ ಎನ್ನುವಾಗ, ಅವನು ನನ್ನ ಶಾಲಾದಿನದ ಸಹಪಾಠಿ ರಮೇಶ್ ಎಂದು ಅನ್ನಿಸಿತು. ಕೇಳಲೋ ಬೇಡವೋ ಎಂದು ಅನುಮಾನಿಸುತ್ತಲೇ, "ನೀವು ವಾಗ್ದೇವಿ ಶಾಲೆಯಲ್ಲಿ ಓದಿದ ರಮೇಶ್ ಅಲ್ಲವೇ" ಎಂದು ಕೇಳಿಯೇ ಬಿಟ್ಟೆ. ಆತ, "ಹೌದು, ನೀವು ಯಾರು" ಎಂದ. ನಾನು "ಗೊತ್ತಾಗಲಿಲ್ಲವೇನೋ, ನಿನ್ನ ಅಂದಿನ ಸಹಪಾಠಿ, ರಾಜೇಶ್" ಎಂದೆ.  "ಅಯ್ಯೋ, ನೀನೇನೋ, ನನಗೆ ಗುರುತೇ ಸಿಗಲಿಲ್ಲ" ಎಂದು ತಂದೆ ರಾಮಸ್ವಾಮಿಯನ್ನು ಪರಿಚಯ ಮಾಡಿಸಿದ. ಅವರು ಚೆನ್ನಾಗಿಯೇ ಮಾತನಾಡಿದರು. ಅಷ್ಟರಲ್ಲಿಯೇ ಅವನ ವಿಳಾಸ, ಫೋನ್ ಎಲ್ಲವನ್ನೂ ಪಡೆದು "ಇನ್ನೊಮ್ಮೆ ಮಾತನಾಡೋಣ" ಎಂದು ಹೊರಟೆ. 
ನನಗೆ ಇದೇನೋ ವಿಚಿತ್ರ ಎನ್ನಿಸಿತು. ಅವನ ತಂದೆ, ಅಂದು ಹುಚ್ಚರಂತೆ ಮಾತನಾಡುತ್ತದ್ದರು, ಒಮ್ಮೆ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದರು, ಈಗ ನೋಡಿದರೆ ಮಗನ ಜೊತೆ ಏನೂ ನಡೆದೇ ಇಲ್ಲ ಎಂಬಂತೆ ಹೊರಟಿದ್ದಾರೆ, ಏನೋ ಕುತೂಹಲಕರವಾಗಿದೆ, ಇದನ್ನು ಭೇದಿಸಬೇಕು ಎಂದುಕೊಂಡೆ. ಇದಾದ ಕೆಲವು ದಿನದಲ್ಲಿಯೇ ನನಗೆ ಹೊರಗಿನ ಓಡಾಟಗಳು ಬಂದು, ಊರಿಂದೂರಿಗೆ ತಿರುಗುತ್ತ ಎಲ್ಲವನ್ನೂ ಮರೆತೇ ಬಿಟ್ಟಿದ್ದೆ. ಆಮೇಲೆ ಒಂದು ದಿನ ಆ ಅಂಗಡಿ ಮಳಿಗೆಗೆ ಹೋದಾಗ ರಮೇಶನ ತಂದೆಯ ನೆನಪಾಯಿತು. ಆದರೆ ಅವರು ಅಲ್ಲೆಲ್ಲು ಕಾಣಿಸಲಿಲ್ಲ. 
ನಂತರ ರಾತ್ರಿ ರಮೇಶನಿಗೆ ಫೋನ್ ಮಾಡಿದೆ. ಕೇಳಲೋ ಬೇಡವೋ ಎಂದುಕೊಂಡು, ಅವನ ತಂದೆಯ ಬಗ್ಗೆ ಕೇಳಿದೆ. ಆಗ ಅವನೇ "ನೀನು ಕೇಳಿದ್ದರಲ್ಲಿ ತಪ್ಪೇನಿಲ್ಲ, ನಾಳೆ ಸಂಜೆ ಮನೆಗೆ ಬಾ, ಎಲ್ಲವನ್ನೂ ಹೇಳುತ್ತೇನೆ" ಎಂದ. ಹಳೆಯ ಮಿತ್ರನನ್ನು ನೋಡಬಹುದು, ಕುತೂಹಲಕರವಾದ ಘಟನೆಯನ್ನು ಭೇದಿಸಬಹುದು ಎಂದುಕೊಂಡು, ಮರುದಿನ ರಮೇಶನ ಮನೆಗೆ ಹೋದೆ. 
ರಮೇಶನ ತಂದೆ ರಾಮಸ್ವಾಮಿ ವೃತ್ತಿಯಿಂದ ಕಲಾವಿದರು. ಬಹಳ ಸುಂದರವಾದ ಚಿತ್ರಗಳನ್ನು ಬಿಡಿಸುತ್ತಿದ್ದರು. ಒಮ್ಮೆ ಅವರು ಬಿಡಿಸಿದ್ದ ಒಂದು ಸುಂದರ ಚಿತ್ರವನ್ನು ನೋಡಿದ ಹಿರಿಯ ಅಧಿಕಾರಿಯೊಬ್ಬರು, ಇದು "ಕಲಾ ರತ್ನ"  ಪ್ರಶಸ್ತಿಗೆ ಅರ್ಹ, ನಾನೆ ಅದನ್ನು ಶಿಫಾರಸು ಮಾಡುತ್ತೇನೆ ಎಂದು ಹೇಳಿ, ರಮೇಶನಿಗೆ ಆ ಕಲಾಕೃತಿಯನ್ನು ತಮ್ಮ ಕಚೇರಿಗೆ ತಂದು ಕೊಡಲು ಹೇಳಿದರು. ಅದು ನಿಜವಾಗಿಯೂ ಪ್ರಶಸ್ತಿಗೆ ಅರ್ಹವಾಗಿತ್ತು. ಆ ಪ್ರಶಸ್ತಿಗೆ ಇತರೆ ಚಿತ್ರಗಳೂ ಬಂದಿದ್ದವು. ಆಯ್ಕೆಯ ಸಮಯ ಬಂದಾಗ  ರಾಮಸ್ವಾಮಿಯವರನ್ನು ನೀವು ಎಲ್ಲಿಯವರು, ನಿಮ್ಮ ಜಾತಿ ಇತ್ಯಾದಿಗಳನ್ನು ಕೇಳಿದಾಗ, ಅವರು ಕಲಾವಿದರಿಗೆ ಯಾವ ಜಾತಿ, ನಾನು ಕಲಾವಿದನ ಜಾತಿ, ನನ್ನ ಜಾತಿ ಕಟ್ಟಿಕೊಂಡು ನಿಮಗೇನು ಎಂದು ಹರಿಹಾಯ್ದರು. ಮಾತಿಗೆ ಮಾತು ಬೆಳೆದು, ರಾಮಸ್ವಾಮಿಯವರ ಚಿತ್ರ ಎಲ್ಲ ರೀತಿಯಿಂದ ಅರ್ಹವಾಗಿದ್ದರೂ, ಬೇರೆ ಏನೇನೋ ಕಾರಣಗಳಿಂದ, ರಾಮಸ್ವಾಮಿಯವರಿಗೆ, ಕೊಬ್ಬು, ತಲೆ ಭಾರ ಎಂದು ಬಿಂಬಿಸಿ ಪ್ರಶಸ್ತಿಯನ್ನು ತಪ್ಪಿಸಿದರು. ಇದು ರಾಮಸ್ವಾಮಿಯವರನ್ನು ಕೆರಳಿಸಿತು. ಅಂದಿನಿಂದ ಅವರು ಮೊದಲಿನ ರಾಮಸ್ವಾಮಿ ಆಗಿರಲಿಲ್ಲ. ಆಗಾಗ್ಗೆ ಕೆರಳಿ ಹೀಗೆ ಏನೇನೋ ಬಡಬಡಿಸುತ್ತಿದ್ದರು. ಇದು ಮನೆಯಲ್ಲಿಯೂ ಹಿಂಸೆಯಾಗುತ್ತಿತ್ತು. ಹೆಂಡತಿ ಇದ್ದಿದ್ದರೆ ಅವರು ಸಮಾಧಾನ ಮಾಡುತ್ತಿದ್ದರೋ ಏನೋ, ಸೊಸೆ ಕೆಲಸಮಾಡುತ್ತಿದ್ದರಿಂದ ಅವರನ್ನು ಮೊದಲಿನಂತೆ ಮನೆಯಲ್ಲಿ ಬಿಡಲಾಗುತ್ತಿರಲಿಲ್ಲ. ಎಂದಿನಂತೆ ಮನೆಯಲ್ಲಿ ಬಿಟ್ಟು ಹೋಗಿದ್ದಾಗ, ಒಂದೆರೆಡು ಬಾರಿ ಯಾರಿಗೂ ಹೇಳದೆ ಮನೆಯನ್ನು ಹಾರು ಹೊಡೆದು ಎಲ್ಲಿಗೋ ಹೋದದ್ದೂ ಉಂಟು. ಇದರಿಂದಾಗಿ ರಮೇಶ, ತನ್ನ ಅತಿ ಹತ್ತಿರದ ಮಿತ್ರ, ಅಂಗಡಿ ಮಳಿಗೆಯ ಸಂಪತ್ ಬಳಿ ಬಿಟ್ಟು ಹೋಗುತ್ತಿದ್ದ. ಸಂಪತ್ ಅವರನ್ನು ಎಲ್ಲೂ ದೂರ ಹೋಗದಂತೆ ಕಣ್ಣಿಟ್ಟಿರುತ್ತಿದ್ದ. ರಮೇಶ್ ಕೊಟ್ಟ ಊಟ ತಿಂಡಿಗಳನ್ನು ಸಕಾಲಕ್ಕೆ ಒದಗಿಸುತ್ತಿದ್ದ. 
"ಅದು ಸರಿ, ಈಗೆಲ್ಲಿ ಅವರು ಕಾಣುವುದೇ ಇಲ್ಲ" ಎಂದೆ. ಆಗ ರಮೇಶ್ ಅದು ಇನ್ನೊಂದು ಕತೆ ಎಂದ. 
ಒಂದು ದಿನ ಸಂಪತ್ ಅವರ ಮಿತ್ರನ ಮಗುವೊಂದು ಅವರ ಅಂಗಡಿ ಮಳಿಗೆಯಲ್ಲಿ ಒಂದು ಸ್ಕೆಚ್ ಪ್ಯಾಡ್ ಹಾಗೂ ಬಣ್ಣದ ಪೆನ್ಸಿಲ್ಗಳನ್ನು ಕೊಂಡು ಹೋಗುತ್ತಿತ್ತು. ಏನೋ ಕಾರಣಕ್ಕೆ ಎಡವಿ ರಾಮಸ್ವಾಮಿಯವರ ಬಳಿ ಬಿದ್ದು ಬಿಟ್ಟಿತು. ಅವರು ಕೂಡಲೇ ಆ ಮಗುವನ್ನು ಸಮಾಧಾನಿಸಿ ಎತ್ತಿ ಕೂಡಿಸಿದರು. ಅದನ್ನು ಸಮಾಧಾನಿಸಲು, ಇವೆಲ್ಲ ಏನು, ಯಾಕೆ ಕೊಂಡು ಹೋಗುತ್ತಿದ್ದಿ? ಎಂದು ಕೇಳಿದರು. ಆ ಮಗು "ನಾನು ನಾಳೆ ಶಾಲೆಗೆ ಚಿತ್ರ ಬರೆದುಕೊಂಡು ಹೋಗಬೇಕು, ಈಗ ಕೈಗೆ ಗಾಯವಾಗಿದೆ, ಬರೆಯಲು ಆಗುವುದೇ ಇಲ್ಲ, ನಾನು ಏನು ಮಾಡಲಿ" ಎಂದು ಅಳತೊಡಗಿತು. ಆಗ ರಾಮಸ್ವಾಮಿ ಅವರು ನೀನು ಏನೂ ಯೋಚಿಸಬೇಡ, ನಾನು ಸಹಾಯ ಮಾಡುತ್ತೇನೆ, ಇಲ್ಲೇ ಕುಳಿತುಕೋ, ಚಿತ್ರವನ್ನು ಬಿಡಿಸಿಕೊಡುತ್ತೇನೆ" ಎಂದು ಅದರೆದುರೇ, ಅದಕ್ಕೆ ಬೇಕಾದ ಒಂದು ಸುಂದರವಾದ ಚಿತ್ರ ಬಿಡಿಸ ತೊಡಗಿದರು. ಆ ವೇಳೆಗೆ ಸಂಪತ್ ಇದನ್ನು ಗಮನಿಸಿ ಆ ಮಗುವಿನ ಮನೆಗೆ ವಿಷಯ ತಿಳಿಸಿದ. ಮಗುವಿನ ಅಪ್ಪ ಅಮ್ಮ, ಸಂಪತ್ ಎಲ್ಲರೂ ರಾಮಸ್ವಾಮಿಯವರ ಕೈಚಳಕವನ್ನು ಗಮನಿಸಿದರು. ಮಗು ತನಗಾದ ಗಾಯವನ್ನು ಮರೆತು, ರಾಮಸ್ವಾಮಿಯವರಿಗೆ "ತಾತ ನೀವೆಷ್ಟು ಒಳ್ಳೆಯವರು, ಇದು ನನಗೆ ಇಷ್ಟ, ನಾನು ಇದನ್ನು ಶಾಲೆಗೆ ಕೊಡುವುದಿಲ್ಲ, ನಾನೇ ಇಟ್ಟುಕೊಳ್ಳುತ್ತೇನೆ, ಬೈದರೂ ಪರವಾಗಿಲ್ಲ" ಎಂದು ಪ್ರಶಸ್ತಿ ಪತ್ರ ಕೊಟ್ಟು ಹೊರಟಿತು. ರಾಮಸ್ವಾಮಿಯವರ ಕಣ್ಣು ಮಂಜಾಯಿತು. 
ಆಗ ಸಂಪತ್, "ಮಗುವಿನ ತಂದೆ ತಾಯಿಯರಿಗೆ ನೀವೇನೂ ಮಾತನಾಡಬೇಡಿ ನಾನು ಅವರೊಂದಿಗೆ ಮಾತನಾಡುತ್ತೇನೆ" ಎಂದು ಸೂಕ್ಷ್ಮ ಮನಸಿನ ರಾಮಸ್ವಾಮಿಯವರ ವಿಷಯವನ್ನು ಕೂಲಂಕಷವಾಗಿ ಅವರಿಗೆ ತಿಳಿ ಹೇಳಿ ಬಿಳ್ಕೊಟ್ಟರು. 
ಇದಾದ ಮೇಲೆ ಆ ಮಗು, ಕಲಾ "ತಾತ, ತಾತ" ಎಂದು ರಾಮಸ್ವಾಮಿಯವರನ್ನು ಹಚ್ಚಿಕೊಂಡು ಅವರಿಂದ ಆಗಾಗ್ಗೆ ಚಿತ್ರಗಳನ್ನು ಬರೆಸಿಕೊಂಡು ಹೋಗುತ್ತಿತ್ತು. ಆಗ ಸಂಪತ್, ರಾಮಸ್ವಾಮಿಯವರಿಗೆ ಅಂಗಡಿಯೊಳಗೆ ಒಂದು ಕೋಣೆಯೊಳಗೆ ಕುಳಿತು ಚಿತ್ರ ಬಿಡಿಸಲು ಅನುವು ಮಾಡಿಕೊಟ್ಟರು. ಇದು ಹಲವಾರು ದಿನ ನಡೆಯಿತು. ಒಂದು ದಿನ ಆ ಮಗುವಿನ ತಂದೆ ಸುಂದರೇಶ್, "ರಾಮಸ್ವಾಮಿಯವರು ಬರೆದ ಎಲ್ಲಾ ಚಿತ್ರಗಳಿಗೂ ಚೌಕಟ್ಟು ಹಾಕಿಸಿದ್ದೇನೆ, ಅವುಗಳನ್ನು ಒಂದು ಕಲಾ ಮಳಿಗೆಯಲ್ಲಿ ಇಟ್ಟು ಅದರಿಂದ ಬಂದ ಹಣವನ್ನು ರಾಮಸ್ವಾಮಿಯವರಿಗೆ ಕೊಡುವೆ" ಎಂದರು. ಆಗ ಸಂಪತ್ "ಆ ಮಳಿಗೆ ನಮ್ಮ ಅಂಗಡಿ ಮಳಿಗೆಯಲ್ಲೇ ಆಗಲಿ, ನಾನು ಜಾಗ ಮಾಡಿಕೊಡುತ್ತೇನೆ" ಎಂದರು.
ಹೀಗೆ "ರಾಂ ಸ್ವಾಮಿ ಕಲಾ ಮಳಿಗೆ"ತಲೆ ಎತ್ತಿ ನನ್ನ ತಂದೆ ರಾಮಸ್ವಾಮಿಯವರನ್ನು ಮೊದಲಿನಂತೆ ಮಾಡಿದೆ ಎಂದ ರಮೇಶ್.
"ರಾಂ ಸ್ವಾಮಿ ಕಲಾ ಮಳಿಗೆ"ಯ ರಾಮಸ್ವಾಮಿಯವರು ಜಾತಿಯ ಬಗ್ಗೆ ಮೊದಲಿನಂತೆ ಈಗ  ಬಡಬಡಿಸುವುದಿಲ್ಲ. ನಾನು ಹೇಳುವುದಿಷ್ಟೇ ಎನ್ನುತ್ತಾ " ಜಾತಿ ಎಂಬುದು ಹುಟ್ಟಿನಿಂದ ಬರುವುದಿಲ್ಲ, ಅವರು ಮಾಡುವ ಕೆಲಸದಿಂದ ಬರುತ್ತದೆ, ತಂದೆ ಡಾಕ್ಟರಾದ ಮಾತ್ರಕ್ಕೆ ಮಗ ವೈದ್ಯನಾಗಲು ಸಾಧ್ಯವೇ, ಲಾಯರ್ ಮಗ ಡಾಕ್ಟರ್ ಆಗಬಹುದಲ್ಲ, ರೈತನ ಮಗ ಉಪಾಧ್ಯಾಯ ಆಗಬಲ್ಲ, ಡಾಕ್ಟರ ಮಗ ಕಲಾವಿದ ಆಗಬಹುದಲ್ಲವೇ" ಎಂದು ಸಮಾಧಾನವಾಗಿ ಹೇಳುತ್ತಾರೆ. "ಜಾತಿ ಬೇಕಿರುವುದು ನಮಗಲ್ಲ, ವೋಟು ಕೇಳುವ ರಾಜಕಾರಣಿಗಳಿಗೆ, ಅವರು ಜಾತಿಗಳು ನಿರ್ಮೂಲನ ಆಗದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳುತ್ತಾರೆ" ಎಂದು ಹೇಳುತ್ತಾರೆ. "ಇನ್ನುಮುಂದಾದರೂ ಈ ಜಾತಿ ಪದ್ಧತಿ ನಿಧಾನವಾಗಿ ನಿರ್ಮೂಲನವಾದರೆ ಎಲ್ಲರಿಗೂ ಒಳಿತು,  ಹುಟ್ಟಿನಿಂದ ಜಾತಿ ಎಂಬುದನ್ನು ಮೊದಲು ತೆಗೆಯಬೇಕು" ಎನ್ನುತ್ತಾರೆ. ಯಾರೋ ನಿಮ್ಮ ಜಾತಿ ಯಾವುದು ಎಂದಾಗ "ನನ್ನದು ಕಲಾವಿದನ ಜಾತಿ, ನನ್ನ ಮಗ ಇಂಜಿನೀರ್ ಜಾತಿ, ಸೊಸೆ ಕಾರ್ಮಿಕ ಜಾತಿ, ಮೊಮ್ಮಗುವಿನ ಜಾತಿ ನಿರ್ಧಾರ ಆಗಿಲ್ಲ ಎನ್ನುತ್ತಾರೆ. 
ತಾತ ಮತ್ತು ಕಲಾ ಜೋಡಿಯ ಸಂಬಂಧ ದಿನೇದಿನೇ ಬೆಳೆದು ಬಿಡಿಸಲಾಗದ ನಂಟಾಗಿದೆ.
ಬಿ ಎಸ್ ಜಗದೀಶ ಚಂದ್ರ 

Wednesday, June 2, 2021

 


ಕೇದಾರದ ಪಯಣ  

ಗಡಗಡ ನಡುಗುತ್ತ, ಹೊರೆಯನ್ನು ಹೊತ್ಕೊಂಡು 
ಕಡಿದಾದ ಬೆಟ್ಟವನು ಹತ್ತುತ್ತ ತೆವಳುತ್ತಾ  
ಅಯ್ಯಪ್ಪ ಅಯ್ಯಮ್ಮ ಎನ್ನುತ್ತಾ ನಡುಗುತ್ತ  
ಮಾದೇವನ ನೋಡಲು ಹೊರಟೀವಿ, ಕೇದಾರನಾಥಕ್ಕೆ ಹೊರಟೇವಿ  

ಡೇರೆಯಲಿ ತಂಗುತ್ತ  ಗುಡಿಸಲಲಿ ತಿನ್ನುತ್ತಾ 
ಮಂಜೊಳಗೆ ನುಗ್ಗುತ್ತಾ, ಹಿಮ ಬೆಟ್ಟ ನೋಡುತ್ತಾ 
ಕಣಿವೇಲಿ ಹರಿಯುವ ನದಿಯನ್ನು ನೋಡುತ್ತಾ 
ಮಾದೇವನ ನೋಡಲು ಹೊರಟೀವಿ, ಕೇದಾರನಾಥಕ್ಕೆ ಹೊರಟೇವಿ  

ಇಳಿಜಾರು  ಬೆಟ್ಟದಲ್ಲಿ, ಕಲ್ಬಂಡೆ ಹಾದಿಯಲಿ 
ಬೆಟ್ಟಾದ ಕೊರಕಲಲಿ ಇಕ್ಕಟ್ಟು ದಾರಿಯಲಿ 
ಮಳೆಯಲ್ಲಿ ನೆನಕೊಂಡು, ಏದುಸಿರು ಬಿಟ್ಕೊಂಡು 
ಮಾದೇವನ ನೋಡಲು ಹೊರಟೀವಿ, ಕೇದಾರನಾಥಕ್ಕೆ ಹೊರಟೇವಿ  

ಬೆಟ್ಟದಿ ದುಮುಕುತ್ತ, ಡೊಂಕಾಗಿ ಹರಿಯುತ್ತ 
ಬಂಡೆಯ ಸಂದಿಯಲ್ಲಿ ನುಸುಳುತ್ತಾ ತೆವಳುತ್ತ 
ನೊರೆ ನೀರ ನೋಡುತ್ತಾ ಆಯಾಸ ಮರೆಯುತ್ತಾ 
ಮಾದೇವನ ನೋಡಲು ಹೊರಟೀವಿ, ಕೇದಾರನಾಥಕ್ಕೆ ಹೊರಟೇವಿ   

ಕೇದಾರ ಬಂತೆಂದು ಗುಡಿಯನ್ನು ಕಾಣುತ್ತ, 
ದಣಿವನ್ನು ಮರೆಯುತ್ತ ಹರಹರ ಎನ್ನುತ್ತಾ 
ಜಗದೊಡೆಯ ಕಾಪಾಡು ಕಾಪಾಡು ಎನ್ನುತ್ತಾ 
ಕಣ್ತುಂಬಾ ದೇವನ್ನ ನೋಡೀವಿ, ಜೀವನವು ಪಾವನ ಅಂದೀವಿ 

- ಜಗದೀಶ ಚಂದ್ರ ಬಿ ಎಸ್ -

ಹಾಡುವವರು ಪ್ರಾಸಕ್ಕೆ / ರಾಗಕ್ಕೆ ತಕ್ಕಂತೆ  ಸಣ್ಣ ಪುಟ್ಟ ಬದಲಾವಣೆಯನ್ನು ಮಾಡಿಕೊಳ್ಳಬಹುದು.

Sunday, May 23, 2021

 

ಅಂಡು ಸುಟ್ಟ ಬೆಕ್ಕು

ನನ್ನ ಗೆಳೆಯ ಅಂದು ನನ್ನ ಮನೆಗೆ ಬಂದಿದ್ದ. ಜೊತೆಗೆ ಅವನ ಚಿಕ್ಕ ಮಗನೂ ಬಂದಿದ್ದ. ಅವನ ಹೆಸರು ವಿಜಿ ಎಂದು. ಅವನಂತೂ ಗೆಳೆಯನ ಮೋಟರ್ ಬೈಕಿನ ಮೇಲೆಲ್ಲಾ ಕೋತಿಯಂತೆ ಆಡಿಕೊಂಡಿದ್ದ. ಇವನ ಕಾಟವನ್ನು ತಡೆಯುವುದೇ ಕಷ್ಟ ಎಂದು ಗೆಳೆಯ ತನ್ನ ಮಗನ ಚೇಷ್ಟೆಯನ್ನು ಬಣ್ಣಿಸಿದ್ದ. ಶಕ್ತಿಯಿದ್ದಿದ್ದರೆ ಅವನು ಮೋಟಾರ್ ಬೈಕನ್ನೇ ಬಿಟ್ಟುಬಿಡುತ್ತಿದ್ದನೇನೋ ಎಂದು ನನಗೂ ಅನ್ನಿಸಿತು.

ನಂತರ ನನ್ನ ಗೆಳೆಯನು ಮನೆಗೆ ಹೊರಟ. ಜೊತೆಗೆ ಅವನ ಮಗನೂ ಅವನೊಂದಿಗೆ ಹಿಂದುಗಡೆ ಕುಳಿತ. ಹಿಂದೆ ಯಾಕೋ? ಮುಂದೆ ಕೂಡುವುದಿಲ್ಲವೇನೋ? ಎಂದೆ. ಅದಕ್ಕೆ ನನ್ನ ಗೆಳೆಯನು ಜೋರಾಗಿ ನಗುತ್ತಾಅಯ್ಯೋ ಅದೊಂದು ಕತೆಎಂದು ಕತೆಯನ್ನು ಹೇಳಿದ.

ಹಿಂದೆ ಹೀಗೆಯೇ ನಾನು ಮಗನನ್ನು ಹೊರಗೆ ಸುತ್ತಾಡಿಸಲು ಕರೆದುಕೊಂಡು ಹೋಗಿದ್ದೆ. ಆಗೆಲ್ಲಾ ಅವನನ್ನು  ಮುಂದುಗಡೆಯೇ ಕೂಡಿಸಿಕೊಂಡು ತಿರುಗಾಡುತ್ತಿದ್ದೆ. ಅಂದು ತುಂಬಾ ಬಿಸಿಲಿತ್ತು. ಮಗನನ್ನು ವಾಪಸ್ಸು ಕರೆದುಕೊಂಡು ಬರುವಾಗ ಬೈಕಿನ ಮೇಲೆ ಕೂಡಿಸಿದೆ. ಆದರೆ ಮಗ ಕಿಟಾರನೆ ಕಿರುಚಿ ಅಳಲು ಪ್ರಾರಂಬಿಸಿದ. ನಾನು ಯಾಕೋ? ಎಂದು ಮತ್ತೆ ಅಲ್ಲೇ ಸರಿಯಾಗಿ ಕೂಡಿಸಿದರೆ ಮತ್ತೆ ಕಿರುಚಿ ಗಲಾಟೆ ಮಾಡಿದ. ನಂತರ ಅವನು ಅಲ್ಲಿಂದ ಎಗರಿಬಿಟ್ಟು ನೆಲದ ಮೇಲೆ ಅಳುತ್ತಾ ಕುಳಿತ. ಆಗ ಯಾಕಿರಬಹುದು? ಎಂದು ಅವನು ಕುಳಿತ ಜಾಗದಲ್ಲಿ ಕೈ ಇಟ್ಟು ನೋಡಿದರೆ ಅದು ಬಿಸಿಲಿಗೆ ಕಾದು ಕಾವಲಿಯಂತಾಗಿತ್ತು. ನನಗೆ ಆಗ ನನ್ನ ಕೈಗೇ ಹೀಗೆ ಸುಟ್ಟರೆ ಪಾಪ ಪುಟ್ಟ ಮಗುವಿಗೆ ಎಷ್ಟುನೋವಾಗಿರಬಹುದು? ಎಂದು ದುಃSವಾಯಿತು. ನಂತರ ಜಾಗಕ್ಕೆ ಒದ್ದೆ ಬಟ್ಟೆಯನ್ನು ಹಾಕಿ ಕೂಡಿಸಿದರೂ ಅವನು ಅದರ ಮೇಲೆ ಕುಳಿತುಕೊಳ್ಳಲೇ ಇಲ್ಲ. ನಂತರ ಹೇಗೋ ಅವನನ್ನು ಸಮಾಧಾನ ಮಾಡಿ ನನ್ನ ಹಿಂದೆ ಕೂಡಿಸಿಕೊಂಡು ಬಂದೆ. ಅಂದಿನಿಂದ ಅವನು ಜಾಗದಲ್ಲಿ ಏನು ಮಾಡಿದರೂ ಕೂಡುವುದಿಲ್ಲ. ಒಬ್ಬನೇ ಇದ್ದರೆ ಅಲ್ಲಿ ಕುಳಿತು ಆಡಿಕೊಳ್ಳುತ್ತಾನೆ, ನನ್ನ ಜೊತೆಗಾದರೆ ಜಪ್ಪಯ್ಯ ಅಂದರೂ ಕೂಡುವುದಿಲ್ಲ. ಒಳ್ಳೆ ತೆನಾಲಿರಾಮನ ಬೆಕ್ಕಿನಂತಾಗಿದೆ ಅವನ ಕತೆ ಎಂದು ನಕ್ಕ. ಈಗ ಘಟನೆಯನ್ನು ನೆನೆಸಿಕೊಂಡರೆ ನಗು ಬರುವುದು, ಆದರೆ ಅಂದಿನ ದಿನ ಮಾತ್ರ ನಾನೂ ಮರೆಯುವುದಿಲ್ಲ, ನನ್ನ ಮಗನೂ ಮರೆತಿಲ್ಲ ಎಂದು ಹೇಳಿದ.

ಕುದಿಯುವ ಹಾಲನ್ನು ಕುಡಿಸಿ ನಂತರ ಹಾಲು ಎಂದರೆ ಓಡಿಹೋಗುವಂತೆ ಮಾಡಿದ್ದ ತೆನಾಲಿರಾಮನ ಬೆಕ್ಕಿನ ಕತೆಯನ್ನು ಜ್ಞಾಪಿಸಿಕೊಂಡು ಇಬ್ಬರೂ ಮನಸಾರೆ ನಕ್ಕೆವು. ‘ಅಂಡು ಸುಟ್ಟ ಬೆಕ್ಕು ಅನ್ನುತ್ತಾರಲ್ಲೋ ಹಾಗೆ ಮಾಡಿಬಿಟ್ಟೆಯಲ್ಲೋ ನಿನ್ನ ಮಗನಿಗೆಎಂದು ನಾನೂ ರೇಗಿಸಿದೆ. ನಾನು ಮೆಲ್ಲಗೆ ವಿಜಿಯನ್ನು ಮತ್ತೆ ಮುಂದಿನ ಸೀಟಿನ ಮೇಲೆ ಕೂಡಿಸಲು ನೋಡಿದೆ, ಆದರೆ ಅವನು ಕೊಸರಿಕೊಂಡು, ಎಗರಿ ಮತ್ತೆ ಹಿಂದಿನ ಸೀಟಿನ ಮೇಲೆ ಅಪ್ಪನನ್ನು ತಬ್ಬಿಕೊಂಡು ಕುಳಿತ. ಮುಗ್ಧ ಮಗುವನ್ನು ನೋಡಿ ಪಾಪ ಅಂದು ಅದೆಷ್ಟು ಕಷ್ಟ ಅನುಭವಿಸಿತೋ ಏನೋ ಎಂದು ಕನಿಕರವಾಯಿತು, ನಗಬಾರದೂ ಎಂದರೂ ನಗು ಬಂತು. ವಿಜಿ ಮಾತ್ರ ನನ್ನನ್ನೇ ಪಿಳಿಪಿಳಿ ಎಂದು ನೋಡುತ್ತಿದ್ದ. ಟಾಟಾ ಎಂದು ಅವನಿಗೆ ವಿದಾಯ ಹೇಳಿದೆ.

- ಜಗದೀಶ ಚಂದ್ರ ಬಿ ಎಸ್,

ಅಮ್ಮನ ತರ್ಕ

ಅಮ್ಮನ ತರ್ಕ  

ವಾಸು ಮನೆಯೊಂದನ್ನು ಕಟ್ಟಿಸುತ್ತಿದ್ದ. ಅದಕ್ಕಂತೂ ಒಬ್ಬರದು ಒಂದೊಂದು ಸಲಹೆಗಳು. ಮಗ ಆಗಲೇ ನನ್ನ ಕೋಣೆ ಹೀಗಿರಬೇಕು ಹಾಗಿರಬೇಕು ಎಂದು ಕನಸು ಕಟ್ಟಿದ್ದ. ಮಗಳಂತೂ ತನ್ನ ಕೋಣೆಗೆ ಬಣ್ಣ, ಅಲಂಕಾರ ಎಲ್ಲದರ ಕನಸು ಕಾಣುತ್ತಿದ್ದಳು. ಹೆಂಡತಿಯದು ಇನ್ನೇನೋ ಕನಸುಗಳು. ಅವನ ಅಮ್ಮ ಜಾನಕಮ್ಮ ಮಾತ್ರ "ಒಂದು ಒಳ್ಳೆಯ ಮನೆಯಾದರೆ ಸಾಕು" ಎನ್ನುತ್ತಿದ್ದರು. ವಾಸು, "ತನ್ನ ಮನೆಯವರ ಕನಸುಗಳು, ಮಿತ್ರರ ಸಲಹೆಗಳು ಇವುಗಳ ನಡುವೆ ಸಿಲುಕಿ, ಮನೆ ಅಂತ ಮುಗಿಸಿದರೆ ಸಾಕು" ಎಂದು ಕೊಳ್ಳುತ್ತಿದ್ದ. 

ಹೀಗೆ ಮನೆಯ ಕೆಲಸಗಳು ಸಾಗುತ್ತಿದ್ದವು. ಎಲ್ಲರಿಗೂ ಅವರವರ ಕನಸುಗಳನ್ನು ಸಾಕಾರ ಗೊಳಿಸುವ ಯೋಚನೆಯೇ. ದೇವರ ಮನೆಯನ್ನು ಒಂದು ಕಡೆ ಗೊತ್ತು ಮಾಡಲಾಗಿತ್ತು. ಅದಕ್ಕೆ ಯಾರೂ ವಾರಸುದಾರರಿರಲಿಲ್ಲ, ವಾಸುವೇ ನೋಡಿಕೊಳ್ಳಬೇಕಿತ್ತು, ಜಾನಕಮ್ಮ, ನೀನು ಎಲ್ಲಿ ಮಾಡಿಕೊಟ್ಟರೆ ನಾನು ಅಲ್ಲಿ ಕುಳಿತು ದೇವರ ಧ್ಯಾನ ಮಾಡುವೆ ಎಂದುಬಿಟ್ಟಿದ್ದರು. ವಾಸು ಅವರಿವರ ಸಲಹೆಗಳನ್ನು ಕೇಳುತ್ತ ಅದನ್ನು ಮಾಡಲೋ ಬೇಡವೋ ಎಂದು ಒದ್ದಾಡುವುದನ್ನು ಕಂಡು ಜಾನಕಮ್ಮ "ಸುಮ್ಮನೆ ನಿನಗೆ ಹೇಗೆ ಬೇಕೋ ಹಾಗೆ ಕಟ್ಟಿಸು, ಹತ್ತು ಜನರನ್ನು ಕೇಳಿದರೆ ಹತ್ತು ತರಹ ಹೇಳುತ್ತಾರೆ, ಯಾರದನ್ನು ಒಪ್ಪುವೆ?" ಎಂದು ಬೈಯುತ್ತಿದ್ದರು. ಆದರೂ ವಾಸು ಅದನ್ನು ಬಿಟ್ಟಿರಲಿಲ್ಲ. 

ಹೀಗೆ ಒಂದು ದಿನ ವಾಸು ಅದ್ಯಾರನ್ನೋ ಮನೆಗೆ ಕರೆದುಕೊಂಡು ಬಂದಿದ್ದ. ಅವರು ತೆಲುಗು ಮಾತನಾಡುವವರು. ವಾಸ್ತು ಪಂಡಿತರು ಎಂದು ಹೇಳಿಕೊಂಡರು. ಅವರಂತೂ ಈ ಮನೆಗೆ ಬಂದ ಕೂಡಲೇ ಅವರು ಈಗಿರುವ ಮನೆಯ ಬಗ್ಗೆ ಏನೇನೋ ಹೇಳತೊಡಗಿದರು. ಇದ್ಯಾರು ಈ ಮನೆಗೆ ಬಾಗಿಲನ್ನು ಇಲ್ಲಿಡಲು ಹೇಳಿದ್ದು? ಅಯ್ಯೋ ನಿಮ್ಮ ಮನೆಯ ಭಾವಿ ಇಲ್ಲೇಕೆ ತೊಡಿಸಿದ್ದೀರಿ? ಅಡುಗೆ ಮನೆಯ ಜಾಗವೇ ಸರಿಯಾಗಿಲ್ಲ, ಮಲಗುವ ಮನೆಯಂತೂ ದೇವರಿಗೇ ಪ್ರೀತಿ" ಎಂದೆಲ್ಲ ಬಡಬಡಿಸತೊಡಗಿದರು. ಇದು ಜಾನಕಮ್ಮನವರ ಮನೆ. ಅದನ್ನು ಅವರ ಗಂಡ ಸೀತಾಪತಿ ಕಟ್ಟಿಸಿದ್ದರು. ಆಗ ಅವರು ಪಟ್ಟ ಕಷ್ಟ,ನಷ್ಟ ಎಲ್ಲವೂ ಜಾನಕಮ್ಮನಿಗೆ ಗೊತ್ತಿತ್ತು. ಈ ಪಂಡಿತ ಹೀಗೆ ಬಂದಕೂಡಲೇ ಈಗಿರುವ ಮನೆಯ ಬಗ್ಗೆ ಮಾತನಾಡಿದ್ದು ಅವರನ್ನು ಕೆರಳಿಸಿತ್ತು. ಆದರೆ ಅದನ್ನು ತೋರಿಸದೆ ಮಗನಿಗೆ "ನಿಮ್ಮ ಹೊಸ ಮನೆಯ ಬಗ್ಗೆ ಅದೇನು ಹೇಳುತ್ತಾನೋ ಅಷ್ಟನ್ನು ಕೇಳಿ ಮೊದಲು ಹೊರಗೆ ಕಳಿಸು" ಎಂದಿದ್ದರು. "ಇಲ್ಲವಾದರೆ ನಾನೆ ಬಂದು ಹೇಳಬೇಕಾಗುತ್ತೆ" ಎಂದೂ ಹೇಳಿದರು.

ಆತ ಹೋದಮೇಲೆ ಜಾನಕಮ್ಮ ಯೋಚಿಸಿದರು. ಅಲ್ಲ, ನಾವು ಈ ಮನೆಯಲ್ಲಿ ಇಷ್ಟು ವರ್ಷ ಬದುಕಿ ಬಾಳಿದೆವು, ಈಗ ಚೆನ್ನಾಗಿಯೇ ಇದ್ದೀವಲ್ಲ, ಸೀತಾಪತಿ ಅವರು ಹೋಗಲು ಅವರ ಅರೋಗ್ಯ ಕಾರಣವೆ ಹೊರತು ಮನೆ ವಾಸ್ತುವಲ್ಲ. ಅದೆಷ್ಟು ಸುಲಭವಾಗಿ ಮನೆಯ ಬಗ್ಗೆ ಏನೇನೊ ಬಡಬಡಿಸಿ ಮಾನಸಿಕವಾಗಿ ಹೆದರಿಸಿಬಿಡುತ್ತಾರೆ, ಹೆದರುವವರಿಗೆ ಇನ್ನೂ ಹೆದರಿಸಿ ತಾವು ಹೇಳಿದ್ದೆ ಸರಿ ಎಂದು ನಂಬಿಸುತ್ತಾರೆ ಎಂದು ಮನಸಿನಲ್ಲೇ ಅಂದುಕೊಂಡರು. ಮೊದಲು ಮಗನಿಗೆ ಸರಿಯಾಗಿ ಬುದ್ದಿ ಹೇಳಿ, ಧೈರ್ಯವಾಗಿ ಮನೆಯನ್ನು ಹೇಗೆ ಬೇಕೋ ಹಾಗೆ ಕಟ್ಟಿಸಿಕೊ ಎಂದು ಹೇಳಬೇಕು ಅಂದುಕೊಂಡರು. 

ಆ ಮನುಷ್ಯ ಹೋದಮೇಲೆ ವಾಸು ತಲೆಯ ಮೇಲೆ ಕೈಹೊತ್ತು ಕುಳಿತಿದ್ದ. ಅವನು ಕಟ್ಟಿಸಲು ಪ್ರಾರಂಭಿಸಿದ್ದ ಮನೆಯ ನಕ್ಷೆಯೇ ಬದಲು ಮಾಡುವಂತೆ ಆ ಪಂಡಿತ ಹೇಳಿ ಇವನ ತಲೆ ಕೆಡಿಸಿದ್ದ. ದೇವರ ಮನೆಯ ಜಾಗ ಸಂಪೂರ್ಣವಾಗಿ ಬದಲಾಯಿಸಬೇಕು ಎಂದಿದ್ದ. ಆಗ ಜಾನಕಮ್ಮ, ವಾಸುವಿಗೆ, "ದೇವರ ಮನೆ ಈಶಾನ್ಯಕ್ಕೆ ಯಾಕಿರಬೇಕು ಎಂದರೆ ದೇವರನ್ನು ಪೂಜೆ ಮಾಡುವವರು ಉತ್ತರಕ್ಕೆ ಅಥವಾ ಪೂರ್ವಕ್ಕೆ ತಿರುಗಿ ಕುಳಿತುಕೊಳ್ಳಲಿ ಎಂದು. ಇವೆಲ್ಲ ಹಿಂದೆ ದೊಡ್ಡ ಜಾಗಗಳಿದ್ದಾಗ ಮಾಡುತ್ತಿದ್ದರು. ಈಗ ನಿನ್ನ ಮನೆಯೇನು ತೋಟದ ಮನೆಯೇ, ಇವೆಲ್ಲ ನೋಡಲಿಕ್ಕೆ" ಎಂದು ಬುದ್ಧಿ ಹೇಳಿ ಧೈರ್ಯ ತುಂಬಿದರು. "ದೇವರ ಕೊಣೆಯಲ್ಲಿ ನಾವು ಪೂರ್ವ ದಿಕ್ಕಿಗೆ ಕುಳಿತು ಪೂಜೆ ಮಾಡಬಹುದು, ಅಷ್ಟು ಸಾಕು, ಸುಮ್ಮನೆ ಏನೇನೋ ಯೋಚಿಸಬೇಡ" ಎಂದಿದ್ದರು.

 ಆ ಪಂಡಿತ ಇನ್ನೊಮ್ಮೆ ಮನೆಗೆ ಬಂದಾಗ, ಜಾನಕಮ್ಮ ತಾವೇ ಮುಂದೆ ಬಂದು ಆತನನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡು, "ನಾವು ಈ ಮನೆಯನ್ನು ಬೆವರು ಹರಿಸಿ ಕಟ್ಟಿಸಿದೆವು, ನೀನು ಬಂದು ಒಂದು ನಿಮಿಷಕ್ಕೆ ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ಹೇಳಿ ಹೆದರಿಸಿಬಿಟ್ಟೆಯಲ್ಲಾ" ಎಂದೆಲ್ಲ ಹೇಳಿ ಬೈದು "ಇನ್ನೊಮ್ಮೆ ಇಲ್ಲಿ ಬಂದರೆ ನಾವು ಸುಮ್ಮನಿರುವುದಿಲ್ಲ" ಎಂದು ಒಳಗೆ ಹುಡುಗಿಟ್ಟುಕೊಂಡಿದ್ದ ಸಿಟ್ಟನ್ನು ಕಕ್ಕಿ, ಬೈದು ಕಳಿಸಿದರು. ವಾಸು, ಅಮ್ಮನಿಗೆ ಬುದ್ಧಿ ಹೇಳಲು ಬಂದಾಗ, ಅವರು ಸಾಕ್ಷಾತ್ ದುರ್ಗೆಯೇ ಆಗಿ ಮಗನಿಗೆ, "ನಿನಗೆ ಹೇಗೆ ಬೇಕೋ ಹಾಗೆ ಕಟ್ಟಿಸಿದರೆ ಸರಿ, ಇಲ್ಲವಾದರೆ ಮನೆ ಕಟ್ಟಿಸಲೇ ಬೇಡ, ಈ ಮನೆಯೇ ಸಾಕು" ಎಂದಾಗ ವಾಸು ಹೆದರಿ ತೆಪ್ಪಗಾಗಿದ್ದ. ಆಗ ಜಾನಕಮ್ಮ "ನನಗೆ ಗೊತ್ತಿರುವವರು ಒಬ್ಬರು ಇದ್ದಾರೆ, ಅವರು ಹೇಳಿದಂತೆ ಮಾಡು, ಎಲ್ಲವೂ ಸರಿಯಾಗುತ್ತದೆ" ಎಂದು ಸಮಾಧಾನವನ್ನೂ ಹೇಳಿದ್ದರು. 

ಒಂದು ದಿನ ಜಾನಕಮ್ಮನವರು ಯಾರೋ ಒಬ್ಬರನ್ನು ಕರೆಸಿದ್ದರು. ಜಾನಕಮ್ಮನವರೆ ಮುಂದೆ ನಿಂತು ಹೊಸ ಮನೆಯ ವಿವರಗಳನ್ನು ನೀಡಿ ಅವರ ಸಲಹೆ ಕೇಳಿದರು. ಅವರು ಬಹಳ ನಿಧಾನಸ್ಥರು, ನಿಧಾನವಾಗಿ, ನಾಟಕದವರಂತೆ ಮಾತನಾಡುತ್ತಿದ್ದರು. ಅವರು ಸಾವಕಾಶವಾಗಿ ಹೇಳಿದ್ದುದನ್ನೆಲ್ಲಾ ಕೇಳಿ ಸಮಾಧಾನವಾಗಿ, "ನೀವು ಮಾಡುತ್ತಿರುವುದೆಲ್ಲ ಸರಿಯಾಗಿದೆ, ಮನೆಯ ಗೇಟು, ಬಾಗಿಲನ್ನು ಸ್ವಲ್ಪ ನಾನು ಹೇಳುವಂತೆ ಬದಲಾಯಿಸಿದರೆ ಸಾಕು" ಎಂದರು. ಇದು ವಾಸುವಿನ ಮನಸ್ಸಿಗೆ ಒಂದು ರೀತಿಯ ಸಮಾಧಾನ ತಂದಿತು. ಆಗ ಅವರು " ನೀವು ಇನ್ನು ಯಾರನ್ನೂ ಕೇಳದೆ ಬೇಗ ಮುಗಿಸಿ, ಇನ್ನೊಂದೆರಡು  ತಿಂಗಳಿನಲ್ಲಿ ಗೃಹಪ್ರವೇಶ ಮಾಡಿಸಿದರೆ ನಿಮಗೆ ತುಂಬಾ ಒಳ್ಳೆಯದಾಗುತ್ತೆ, ನಾನು ಜಾನಕಮ್ಮನವರೊಡನೆ ಸಮಾಲೋಚಿಸಿ ದಿನ ಹೇಳುತ್ತೇನೆ" ಎಂದಾಗ ವಾಸುವಿಗೆ ನಿರಾಳ. ಅವರ ಸಂಭಾವನೆ ಮೊದಲಾದುವನ್ನು ಕೇಳಿದಾಗ, "ಜಾನಕಮ್ಮ ನವರ ಬಳಿ ದುಡ್ಡು ತೆಗೆದುಕೊಳ್ಳುವುದೇ? ಎಂಥ ಮಾತನಾಡುತ್ತೀರಿ" ಎಂದು ಬಾಯಿ ಮುಚ್ಚಿಸಿದ್ದರು. 

ಅಂತೂ ಜಾನಕಮ್ಮನವರು ಗೃಹಪ್ರವೇಶದ ಮುಹೂರ್ತವನ್ನು ಮಗನಿಗೆ ತಿಳಿಸಿದರು. ಈಗ ಮನೆಯ ಕೆಲಸಗಳು ಬೇಗ ಬೇಗ ಚುರುಕಾಗಿ ಸಾಗತೊಡಗಿದವು. ವಾಸುವಿಗೆ ಯಾರನ್ನು ಸಲಹೆ ಕೇಳಲು ಪುರುಸೊತ್ತು ಇರಲಿಲ್ಲ, ಕೇಳಬೇಡ ಎಂದು ಸಲಹೆ ಬಂದುದ್ದರಿಂದ, ಅಮ್ಮನ ಹೆದರಿಕೆಯೂ ಇದ್ದುದರಿಂದ ತೆಪ್ಪಗೆ ಮನೆ ಮುಗಿಸುವುದರಲ್ಲಿ ತೊಡಗಿಸಿಕೊಂಡ. ಮನೆ ಮುಗಿಯಿತು. ಗೃಹಪ್ರವೇಶವೂ ಆಯಿತು. ಎಲ್ಲರಿಗೂ ಖುಷಿಯೋ ಖುಷಿ. ಮನೆಯ ಬಗ್ಗೆ ಯಾರಾದರೂ ತಕರಾರು ಎತ್ತಿದರೆ ಜಾನಕಮ್ಮನ ರೌದ್ರಾವತಾರವನ್ನು ನೋಡಬೇಕಿತ್ತು. ಅವರು, "ತಾವು ಹೇಗೆ ರೌದ್ರಾವತಾರ ತಾಳಿದ್ದೆ" ಎಂದು  ಆ ಹಳೆಯ ವಾಸ್ತು ಪಂಡಿತನನ್ನು ಓಡಿಸಿದ್ದನ್ನು ಎಲ್ಲರಿಗೂ ಹೇಳುತ್ತಿದ್ದರು. ಇಂಡೈರೆಕ್ಟ್ ಆಗಿ ಅದು ಮನೆಯಬಗ್ಗೆ ಕೊಂಕು ತೆಗೆಯುವವರಿಗೆ ತೆಪ್ಪಗಿರುವಂತೆ ಹೇಳುವ ಸೂಚನೆಯೇ ಆಗಿತ್ತು. ಅದು ಎಲ್ಲರಿಗೂ ನಾಟಿತ್ತು. ಮಾತನಾಡಿದರೆ ತಮಗೂ ಅದೇ ಗತಿ ಎಂದು ತೆಪ್ಪಗಿದ್ದರು. ಜಾನಕಮ್ಮನವರಿಗೂ ಅದೇ ಬೇಕಿತ್ತು. ನಮ್ಮ ಮನೆ, ನಮಗೆ ಬೇಕಾದಂತೆ ಕಟ್ಟಿಸುತ್ತೇವೆ, ನಮ್ಮ ಕಷ್ಟ ನಮಗೆ, ಹೀಗೆ ಎಲ್ಲಾ ಆದಮೇಲೆ ಸಲಹೆ ನೀಡಲು ಇವರುಗಳ್ಯಾರು ಎಂಬುದು ಜಾನಕಮ್ಮನ ತರ್ಕವಾಗಿತ್ತು.

ಆ ಮನೆಗೆ ಜಾನಕಮ್ಮನ ದಾಯಾದಿಯೊಬ್ಬರ ಮಗ ನಾರಾಯಣ, ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ, ತುಂಬಾ ಚುರುಕಾಗಿ, ಮನೆಯವರಂತೆಯೇ ಅನೇಕ ಸಹಾಯ ಮಾಡಿಕೊಂಡು ಓಡಾಡುತ್ತಿದ್ದ. ಜಾನಕಮ್ಮ ಅವರೂ ಅವನಿಗೆ ವಿಶೇಷ ಉಪಚಾರ ಮಾಡುತ್ತಿದ್ದರು. ಎಲ್ಲರೂ, "ಇದೇನು ಅಷ್ಟೇನೂ ನಮ್ಮೊಂದಿಗೆ ಆಪ್ತವಾಗಿರದಿದ್ದ, ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ ಇವನಿಗೆ ಇಷ್ಟೊಂದು ಉಪಚಾರ", ಎಂದು ಮಾತನಾಡಿ ಕೊಳ್ಳುತ್ತಿದ್ದರು. ಅವರ ಮನೆಗೆ ಸಲಹೆ ನೀಡಿದ "ಆ ಹೊಸ ಪಂಡಿತ ಎಲ್ಲಿ? ಬಂದೇ ಇಲ್ಲ" ಎಂದು ಎಲ್ಲರೂ ವಿಚಾರಿಸಿದಾಗ, ಜಾನಕಮ್ಮ, "ಅವನೊಬ್ಬ, ಹಾಗೆಯೇ, ಸ್ವಲ್ಪ ಜಂಬ ಮಾಡುತ್ತಾನೆ, ಗೋಗರೆದರೂ ಬರಲೇ ಇಲ್ಲ" ಎಂದು ನಾರಾಯಣನನ್ನು ನೋಡಿ ಕಣ್ಣು ಮಿಟುಕಿಸಿದ್ದರು. ಆದರೆ ಅದು ಬೇರೆ ಯಾರಿಗೂ ಕಂಡಿರಲಿಲ್ಲ. 

- ಬಿ ಎಸ್ ಜಗದೀಶ ಚಂದ್ರ -



Wednesday, April 28, 2021

Navella Yachakare - jc kavana

 ನಾವೆಲ್ಲಾ ಯಾಚಕರೆ

ಭೂಮಿಯಲ್ಲಿ ಧನಿಕ ಬಡವ
ಇರುವರೆಂಬುದು ನಿಜದ ಮಾತು
ಹಣವು ಒಂದೇ ಎಲ್ಲ ಅಲ್ಲ
ಎಂಬ ಮಾತು ಸತ್ಯವು
-
ನಾನು ಬಡವ ಎಂಬ ಚಿಂತೆ
ನಿನಗೆ ಏಕೆ ಬಂತೊ ಮರುಳೆ
ಕೊರಗಿ ಕೊರಗಿ ಮರುಗ ಬೇಡ
ನಡೆಸು ಒಳ್ಳೆಯ ಜೀವನ
ಎಲ್ಲ ನಿನ್ನ ಕೈಲೆ ಉಂಟು
ತಿಳಿದುಕೋ ಓ ಮನುಜನೇ
-
ಧನಿಕನೆಂಬ ಜಂಬವೇಕೆ
ಎಲ್ಲ ನಾನೆ ಅಹಂ ಏಕೆ
ಕ್ಷಣಿಕ ಮಾತ್ರ ಈ ಭ್ರಮೆ
ಅರಿತು ನಡೆಯೋ ಮಂಕನೇ
ಜಗದ ಒಡೆಯನ ಮುಂದೆ ನಾವು
ಅಲ್ಪ ಭಿಕ್ಷುಕರಲ್ಲವೇ
-
-ಜಗದೀಶ ಚಂದ್ರ -